Sunday, 15th December 2024

ಸಿನಿಮಾ ನಟರೇನು ಬಿಟ್ಟಿ ಬಿದ್ದಿದ್ದಾರಾ ?

ತುಂಟರಗಾಳಿ

ಹರಿ ಪರಾಕ್‌

ಸಿನಿಗನ್ನಡ
ನಮ್ ಸಿನಿಮಾ ನಟರು ಏನ್ ಮಾಡ್ತಾ ಇದ್ದಾರೆ?
ರಾಜ್ಯದಲ್ಲಿ ಏನಾದರೂ ತೊಂದರೆ ಆದ ಕೂಡಲೇ ಇಂಥದೊಂದು ಪ್ರಶ್ನೆ ನಮ್ಮ ಜನಗಳ ಬಾಯಲ್ಲಿ ಬರೋದು ತೀರಾ ಕಾಮನ್. ಸಿನಿಮಾ ನಟರು ನಮಗಾಗಿ ಏನು ಮಾಡಿದ್ದಾರೆ, ಅಂತ ಕೇಳೋ ಈ ಕಾಯಿಲೆ , ಈ ಕರೋನಾ ಕಾಯಿಲೆಯ ಕಾಲದಲ್ಲೂ ಮತ್ತೆ ಬಂದಿದೆ. ಇದೇನೂ ಹೊಸದಲ್ಲ ಬಿಡಿ, ಮೇರು ನಟ ಡಾ. ರಾಜ್ ಕುಮಾರ್ ಅವರಿಂದ ಹಿಡಿದು ಇಂದಿನ ಯುವಪೀಳಿಗೆಯ ನಟರನ್ನೂ ಈ ಗೀಳು ಬಿಟ್ಟಿಲ್ಲ.

ಈಗ ಮತ್ತೆ ನಮ್ಮ ಕನ್ನಡದ ನಟರು ಕರೋನಾ ಪೀಡಿತರಿಗೆ ಸಹಾಯ ಮಾಡಬೇಕು, ಕೋವಿಡ್ ಸೆಂಟರ್ ಓಪನ್ ಮಾಡಬೇಕು, ಒಂದೇ ಸಲ ಕರೋನಾವನ್ನು ತಮ್ಮ ಸಿನಿಮಾಗಳಲ್ಲಿ ವಿಲನ್‌ಗಳನ್ನು ಹೊಡೆದೋಡಿಸಿದಂತೆ ಓಡಿಸಬೇಕು ಎಂಬೆಲ್ಲ ಪ್ರಲಾಪ ಗಳು ಶುರುವಾಗಿವೆ. ಅಂದಹಾಗೆ ನಮ್ಮ ಜನಗಳಿಗೆ ಪಾಪ, ಈ ಸಿನಿಮಾ ನಟರು ತುಂಬಾ ಸುಲಭಕ್ಕೆ ಸಿಗುವ ಮಿಕಗಳಾಗಿಬಿಡುತ್ತಾರೆ.

ಈ ಸಿನಿಮಾ ನಟರು ನಮಗೇನೂ ಮಾಡಿಲ್ಲ ಎಂದು ಮುಲುಗುವ ಈ ಜನ, ತಾವು ಅವರನ್ನು ಉದ್ಧಾರ ಮಾಡಿದ್ದೇವೆ, ಅವರ ಸಿನಿಮಾಗಳನ್ನು ಹಣ ಕೊಟ್ಟು ನೋಡಿದ್ದೇವೆ, ಹಾಗಾಗಿ ಅವರು ನಮಗೆ ಸಹಾಯ ಮಾಡಬೇಕು ಎಂಬ ಮನೋಭಾವದಿಂದ ಮಾತನಾಡುತ್ತಾರೆ. ಆದರೆ ಒಂದು ವರ್ಷದಲ್ಲಿ ಒಬ್ಬ ಸ್ಟಾರ್ ನಟನ ಒಂದು ಚಿತ್ರಕ್ಕೆ ಹೆಚ್ಚೆಂದರೆ 200 ರುಪಾಯಿ ಕೊಟ್ಟು ಸಿನಿಮಾ ನೋಡುವ ಇವರು ತಮ್ಮ ಮಕ್ಕಳನ್ನು ಮಿನಿಮಮ್ ಎಂದರೂ ವರ್ಷಕ್ಕೆ 50 ಸಾವಿರ ಕೊಟ್ಟು ಓದಿಸುವ ಸ್ಕೂಲ್ ಮ್ಯಾನೆಜ್ ಮೆಂಟ್ ನವರನ್ನು ಈ ರೀತಿ ಕೇಳುವುದಿಲ್ಲ, ಇವರಿಂದಲೇ ಲಕ್ಷಾಂತರ ಹಣ ಪೀಕುವ ಆಸ್ಪತ್ರೆ ಕಟ್ಟಿಸಿದವನನ್ನಾಗಲೀ ಅಥವಾ ನಮ್ಮ ಸಮಾಜದ ಇನ್ಯಾವುದೇ ಉದ್ಯಮಿಗಳನ್ನಾಗಲೀ ಇವರು ಕೇಳುವುದಿಲ್ಲ.

ತಮ್ಮ ಮನೆಯ ಬಳಿಯ ಇರುವ ಕಿರಾಣಿ ಅಂಗಡಿಗೂ ಇವರು ಸಾವಿರಾರು ರುಪಾಯಿ ಬ್ಯುಸಿನೆಸ್ ಕೊಟ್ಟರೂ ಅವನನ್ನೂ ಕೇಳುವುದಿಲ್ಲ. ಅವರೆಲ್ಲರೂ ಜನಗಳಿಂದಲೇ ಅಷ್ಟು ಶ್ರೀಮಂತರಾಗಿದ್ದರೂ ಅವರ ಗಳಿಕೆಯಲ್ಲಿ ನಮ್ಮ ಪಾಲಿದೆ ಎಂದು ಜನಗಳಿಗೆ
ಅನ್ನಿಸೋದಿಲ್ಲ. ಅವರನ್ನು ಬಿಡಿ, ಸಿನಿಮಾ ಮಾಡಿ ನೂರಾರು ಕೋಟಿಗಟ್ಟಲೆ ಹಣ ಮಾಡುವ ನಿರ್ಮಾಪಕರನ್ನೂ ಇವರು ಕೇಳೋದಿಲ್ಲ. ಬದಲಾಗಿ ಅದರಲ್ಲಿ ಒಂದು ಪಾಲು ತೆಗೆದುಕೊಳ್ಳುವ ನಟರು ಇವರಿಗೆ ಬಲಿ ಕಾ ಬಕ್ರಾ ಆಗುತ್ತಾರೆ.

ವಿಚಿತ್ರ ಅಂದ್ರೆ, ಈ ಜನಗಳು ನಮಗೆ ಯಾಕೆ ಏನೂ ಮಾಡಿಲ್ಲ ಅಂತ ಕೇಳಬೇಕಾದ ಸರಕಾರಗಳನ್ನೇ ಕೇಳೋದಿಲ್ಲ. ಇವರಿಗೆ ಕೇಳಬೇಕಾದ ಒಂದೇ ಪ್ರಶ್ನೆ ಅಂದ್ರೆ, ಸಿನಿಮಾ ನಟರೇನು ಬಿಟ್ಟಿ ಬಿದ್ದಿದ್ದಾರಾ?

ನೆಟ್ ಪಿಕ್ಸ್
ಒಂದು ನಾಟಕದ ಕಂಪನಿ ಹೊಸದಾಗಿ ಊರಿಗೆ ಬಂದಿತ್ತು. ಆ ಕಂಪನಿ ಮಾಡುತ್ತಿದ್ದ ನಾಟಕ, ಆ ಊರಲ್ಲಿ ಹೌಸ್ ಫುಲ್ ಆಗಿ ಓಡುತ್ತಿತ್ತು. ಆ ನಾಟಕದಲ್ಲಿ ಅಂಥಾದ್ದೇನಿದೆ ಅಂತ ಊರ ಹೆಂಗಸರು ತುಂಬಾನೇ ಯೋಚನೆ ಮಾಡ್ತಾ ಇದ್ರು. ಯಾಕಂದ್ರೆ ಅವರ ಗಂಡಂದಿರು ಸಂಜೆ ಆಯ್ತು ಅಂದ್ರೆ ಸಾಕು, ನಾಟಕದ ಕಂಪನಿ ಕಡೆಗೆ ಹೊರಟುಬಿಡುತ್ತಿದ್ದರು. ಇದೇನು ವಿಷ್ಯ, ಕಂಡು
ಹಿಡಿಯಲೇಬೇಕು ಅಂತ ಒಂದು ದಿನ ಎಲ್ಲ ಹೆಂಗಸರೂ ಮಾತಾಡಿಕೊಂಡು ಕಂಪನಿಗೆ ಹೋದರು.

ಅಲ್ಲಿ ಅವರು ತಮ್ಮ ಮನೆಯ ಗಂಡಸರು ಮಾತಾಡಿಕೊಳ್ಳುತ್ತಾ ಇದ್ದುದನ್ನ ನೋಡಿದ್ರು. ಅದರಿಂದ ಅವರಿಗೆ ಗೊತ್ತಾದ ವಿಷಯ ಅಂದ್ರೆ ಆ ನಾಟಕದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದ ಹುಡುಗಿಯೊಬ್ಬಳ ತುಟಿ ತುಂಬಾ ದಪ್ಪ ಇದ್ದು, ಅದು ಎಲ್ಲ ಗಂಡಸರಿಗೂ ಇಷ್ಟ ಆಗಿ, ಅದನ್ನು ನೋಡೋಕಂತನೇ ಎ ಗಂಡಸರೂ ಬರ್ತಾ ಇದ್ರು ಅನ್ನೋದು. ಸರಿ, ಹೆಂಗಸರೆ ಪ್ಲ್ಯಾನ್ ಮಾಡಿ ಒಂದು ದಿನ ಆ ಹುಡುಗಿಯನ್ನು ಭೇಟಿ ಮಾಡಿ, ನೋಡಮ್ಮಾ , ನಿನ್ನಿಂದ ನಮ್ಮ ಸಂಸಾರ ಹಾಳಾಗ್ತಿದೆ ಅಂತ ಹೇಳಿದ್ರು. ಅದಕ್ಕೆ ಆ ಹುಡುಗಿ ನಾನೇನ್ಮಾಡೋಕಾಗುತ್ತೆ ಅಂದ್ಳು.

ಅದಕ್ಕೆ ಹೆಂಗಸರು ಒಂದು ಗಿಡಮೂಲಿಕೆ ಔಷಧ ಕೊಟ್ಟು, ಒಂದ್ ಕೆಲ್ಸ ಮಾಡು, ಇದನ್ನ ನಿನ್ನ ತುಟಿಗೆ ಹಚ್ಕೋ, ನಿನ್ನ ತುಟಿಗಳು ಸಣ್ಣ ಆಗ್ತವೆ. ಆದ್ರೆ ಅಪ್ಪಿ ತಪ್ಪಿ ಇದನ್ನ ನುಂಗಬೇಡ, ಮಾತೇ ಬಿದ್ದು ಹೋಗುವ ಸಾಧ್ಯತೆ ಇರುತ್ತೆ, ಹುಷಾರು ಅಂತ ಹೇಳಿ ಹೋದರು. ಮರುದಿನ ನಾಟಕ ಶುರು ಆಗೋ ಟೈಮಿಗೆ ಎಲ್ಲಾ ಗಂಡಸರೂ ಬಂದು ಕೂತರು. ಆಗ ನಾಟಕ ಕಂಪನಿಯವನೊಬ್ಬ ಬಂದು ಹೇಳಿದ, ನಮ್ಮ ಕಂಪನಿ ಯಜಮಾನರಿಗೆ ಮಾತು ಬಿದ್ದು ಹೋಗಿರುವುದರಿಂದ ನಾಟಕ ಕ್ಯಾನ್ಸಲ್ ಮಾಡಲಾಗಿದೆ.

ಲೂಸ್ ಟಾಕ್
ವಿರಾಟ್ ಕೊಹ್ಲಿ (ಕಾಲ್ಪನಿಕ ಸಂದರ್ಶನ) 
ಏನು ಕೊಹ್ಲಿ ಅವ್ರೇ, ಮೊನ್ನೆ ಒಂದೂ ವಿಕೆಟ್ ಕಳಕೊಳ್ಳದೆ 179 ರನ್ ಚೇಸ್ ಮಾಡಿಬಿಟ್ರ, ಆರ್‌ಸಿಬಿ ಹವಾ ಜೋರಾ ಗಿದೆ..

ಹೌದು, ನಮ್ಗೆ, ಬಾಯಿಗ್ ಬರ್ಸಿ ಗೆಕೂ ಗೊತ್ತು, ನೋ ಲಾಸ್‌ಗೆ ಬಾರ್ಸಿ ಬಿಸಾಕೋದೂ ಗೊತ್ತು ಅಂತ ಪ್ರೂವ್ ಮಾಡಿದ್ವಿ.

ಅದ್ಸರಿ, ಇಷ್ಟ್ ವರ್ಷ ಹಿಂದೆನೇ ಉಳಿತಿದ್ದ ನಮ್ಮ ಆರ್‌ಸಿಬಿ ಈ ಸಲ ಕಮ್ ಬ್ಯಾಕ್ ಮಾಡಿರೋದ್ ನೋಡಿ ಹಲವರಿಗೆ ಉರಿ ಶುರುವಾಗಿದೆಯ

ಹೌದು, ಅವರೆ ಅರ್ಜೆಂಟಾಗಿ ಬ್ಯಾಕ್ ಇನ್ಶ್ಯೂರೆನ್ಸ್ ಮಾಡಿಸಿಕೊಳ್ಳೋ ಹಾಗೆ ಮಾಡಿದ್ದೀವಿ.

ದೇವದತ್ ಪಡಿಕ್ಕಲ್ ಏನು, ಮೊನ್ನೆ ರಾಜಸ್ಥಾನ್ ಮೇಲೆ ಅಪರೂಪಕ್ಕೆ ಅಷ್ಟ್ ಫಾಸ್ಟ್ ಆಗಿ ಆಡಿಬಿಟ್ಟ?

ದೇವದತ್ ಪಡಿಕ್ಕಲ್ ಆರ್‌ಸಿಬಿ ಪಾಲಿಗೆ ದೈವದತ್ತ ಪ್ರತಿಭೆ. ನಮ್ ಜನ ಈಗಾಗ್ಲೇ ಅವ್ನ್ ಹೆಸರಲ್ಲಿ ಒಂದ್ ಆಸ್ಪತ್ರೆ ಕಟ್ಟಿಸಿ ಅಂತಿ ದ್ದಾರೆ. ಸದ್ಯಕ್ಕೆ ಕರೋನಾ ಟೈಮಲ್ಲಿ ರೋಡಿಗೆ ಹೆಸರು, ಸ್ಟ್ಯಾಚ್ಯೂಗಿಂತ ಅದೇ ಅಲ್ವಾ ಬೇಕಾಗಿರೋದು.

ಶಿವಂ ದುಬೆ ಆರ್‌ಸಿಬಿ ಬಿಟ್ಟು ಹೋದ ಮೇಲೆ, ನಮ್ಮ ಮೇಲೆನೇ ಚೆನ್ನಾಗಿ ಆಡಿಬಿಟ್ಟನ?

rcb ಲಿದ್ದಾಗ ನಮ್ ಬೋಲರ್ಸ್‌ಗೆ ನೆಟ್ ಅಲ್ಲಿ ಚೆನ್ನಾಗಿ ಆಡ್ತಿದ್ದ. ಆದ್ರೆ ಆಪೋಸಿಟ್ ಟೀಮ್ ಮೇಲೆ ಆಡ್ತಾ ಇರಲಿಲ್ಲ.

ಅವನಿಗೇನಿದ್ರೂ rcb ಬೋಲರ್ಸ್‌ಗೆ ಮಾತ್ರ ಹೊಡೆಯೋಕೆ ಬರೋದು. ಅದಕ್ಕೆ ಈಗ ಹೊಡಿತಾ ಇದ್ದಾನೆ ಸರಿ, ಈ ಸಲನಾದ್ರೂ ನಾವು ಕಪ್ ಗೆದ್ರೆ ಅದನ್ನ ಹೆಂಗ್ ಸೆಲೆಬ್ರೇಟ್ ಮಾಡ್ತೀರಾ?

ಕಪ್ ಕೇಕ್ ಕಟ್ ಮಾಡಿ.

ಲೈನ್ ಮ್ಯಾನ್
ಸೋಮು – ಈ ಬಿಜೆಪಿ ಸರಕಾರ ಸರಿ ಇಲ್ಲ ಗುರೂ
ಖೇಮು – ಯಾಕೆ ಏನಾಯ್ತು?
ಸೋಮು- ಅವ್ರ್ ಕೊಡ್ತಾ ಇರೋ ವ್ಯಾಕ್ಸಿನ್ ಕೆಲಸ ಮಾಡ್ತಾ ಇಲ್ಲ
ಖೇಮು – ಯಾಕಪ್ಪಾ ಏನಾಯ್ತು?
ಸೋಮು- ವ್ಯಾಕ್ಸಿನ್ ಹಾಕಿಸಿದ್ರೆ ಸಾಯಲ್ಲ ಅಂತ ಹೇಳಿದ್ರು. ನನ್ ಫ್ರೆಂಡ್, ಒಂದ್ ತಿಂಗಳು ಮುಂಚೆನೇ ವ್ಯಾಕ್ಸಿನ್ ಹಾಕಿಸಿದ್ದ. ಈಗ ನೋಡಿದ್ರೆ ನಿನ್ನೆ ರೋಡ್ ಆಕ್ಸಿಡೆಂಟ್ ನಲ್ಲಿ ತೀರಿಕೊಂಡುಬಿಟ್ಟ. ಅದಕ್ಕೇ ಹೇಳಿದ್ದು, ವ್ಯಾಕ್ಸಿನ್ ವರ್ಕ್ ಆಗ್ತಿಲ್ಲ ಗುರೂ
ಖೇಮುಗೆ ನಾನು ಮುಖ್ಯಮಂತ್ರಿ ಆಗಬೇಕು ಅಂತ ಆಸೆ ಆಯ್ತು. ಸೀದಾ ವಿಧಾನಸೌಧಕ್ಕೆ ಫೋನ್ ಮಾಡಿದ. ಆ ಕಡೆಯಿಂದ ಯಾರೋ ಕಾಲ್ ರಿಸೀವ್ ಮಾಡಿದ್ರು.

ಸಾರ್, ನಾನು ಮುಖ್ಯಮಂತ್ರಿ ಆಗೋಣ ಅಂತಿದ್ದೀನಿ, ಅದಕ್ಕೆ ಏನ್ ಕ್ವಾಲಿಫಿಕೇಶನ್ ಇರ್ಬೇಕು?
ರೀ, ಯಾರ್ರೀ ನೀವು, ನಿಮಗೇನ್ ತಲೆ ಕೆಟ್ಟಿದೆಯಾ?
ಓಹ್, ಕೆಟ್ಟಿರ್ಲೇಬೇಕಾ, ಸಾರಿ, ಬೈ.
ಮೊದಲ ಬಾರಿಗೆ ಕರೋನಾ ಬಂದಾಗ ಅದು ಮಹಾಮಾರಿ.
ಹೊಸ ಅಲೆಯಾಗಿ ಬಂದಾಗ ಅದು
ಅಲೆ-ಮಾರಿ.

ಕರೋನಾ ಟೈಮಲ್ಲಿ ಫೇಸ್ ಬುಕ್ ಬಳಕೆದಾರರಿಗೆ ಒಂದು ಎಚ್ಚರಿಕೆ 
ಈ ಟೈಮಲ್ಲಿ ತುಂಬಾ ಹುಷಾರಾಗಿರಿ. ಇಂದ್ರೆ, ಜನ ಎಫ್ಬಿ ಪ್ರೊಫೈಲ್ ಪಿಕ್ ಚೇಂಜ್ ಮಾಡಿದ್ರ್ಕೂ RIP ಅಂತ ಕಾಮೆಂಟ್ ಹಾಕ್ಬಿಡ್ತಾರೆ.

ಆರ್‌ಸಿಬಿ ಪರ ಕಳೆದ ಎರಡು ಮ್ಯಾಚಲ್ಲಿ ಶಾಬಾಜ್ ಅಹ್ಮದ್ ಬೋಲಿಂಗೂ ಮಾಡಿಲ್ಲ, ಬ್ಯಾಟಿಂಗೂ ಮಾಡಿಲ್ಲ.

ಮೋಸ್ಟ್ ಲೀ ಅವನು ಪೆಯ್ಡ ಲೀವ್‌ನಲ್ಲಿ ಇರ್ಬೇಕು ಟ್ರೋಲ್ ಮಾಡೋರಿಗೆ ಆರ್‌ಸಿಬಿ ಹೇಗೆ ಉತ್ತರ ಕೊಡಬೇಕು?

ಟ್ರೋಫಿ ಗೆಲ್ಲುವುದರ ಮೂಲಕ ಆರ್‌ಸಿಬಿ ಅಭಿಮಾನಿಗಳು ವರ್ಣ ಭೇದ ನೀತಿ ಮಾಡಲ್ಲ. ಯಾಕೆ?
ಯಾಕಂದ್ರೆ ಅವರಿಗೆ ಕಪ್ಪು ಬೇಕು.