Friday, 13th December 2024

ಅಧ್ಯಕ್ಷೀಯ ಚರ್ಚೆಯಲ್ಲಿ ಟ್ರಂಪ್-ಬಿಡೆನ್ ಕೆಸರೆರಚಾಟ!

ಬೆಂಕಿ ಬಸಣ್ಣ, ನ್ಯೂಯಾರ್ಕ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯ ಟ್ರಂಪ್ ಕೊರೋನಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು ವಿಶ್ವದಾದ್ಯಂತ ಬಹು ದೊಡ್ಡ ಸುದ್ದಿಯಾಗಿದೆ.

ಕೇವಲ ಮೂರು ದಿವಸಗಳ ಹಿಂದೆ ಟ್ರಂಪ್ ಅವರು ಮೊದಲ ಅಧ್ಯಕ್ಷೀಯ ಚರ್ಚಾಸ್ಪರ್ಧೆಯಲ್ಲಿ ತಮ್ಮ ಎದುರಾಳಿ ಜೋ ಬಿಡನ್ ಒಬ್ಬ ಪುಕ್ಕಲು ಮನುಷ್ಯ ಮತ್ತು ಯಾವಾಗಲೂ ಮಾಸ್ಕ ಹಾಕಿಕೊಳ್ಳುತ್ತಾನೆ ಎಂದು ಗೇಲಿ ಮಾಡಿದ್ದರು. ಕೋವಿಡ್-19 ಪಾಸಿಟಿವ್ ಬಂದಿರುವುದರಿಂದ, ಟ್ರಂಪ್ ಸ್ಥಿತಿ ಈಗ ಇಂಗು ತಿಂದ ಮಂಗನಂತಾಗಿದೆ. ಟ್ರಂಪ್ ಮತ್ತು ಬಿಡನ್ ಮದ್ಯ ನಡೆದ ಮೊದಲ ಚರ್ಚಾ ಸ್ಪರ್ಧೆ ಅಮೆರಿಕದ ಇತಿಹಾಸದಲ್ಲಿ ಹಿಂದೆಂದೂ ಕಂಡಿರದಷ್ಟು ವೈಯಕ್ತಿಕ ನಿಂದನೆ, ಆರೋಪ, ಪ್ರತ್ಯಾರೋಪ, ಅಶ್ಲೀಲ ಪದಗಳ ಬಳಕೆಯಿಂದ ಕೆಟ್ಟ ದಾಖಲೆ ನಿರ್ಮಿಸಿತು.

ಅಮೆರಿಕದಲ್ಲಿ ಮೊಟ್ಟಮೊದಲ ಬಾರಿಗೆ, 162 ವರ್ಷಗಳ ಹಿಂದೆ, ಅಂದರೆ , 1858 ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳಾದ ಅಬ್ರಹಾಂ ಲಿಂಕನ್ ಮತ್ತು ಸ್ಟೀಫನ್ ಡಗ್ಲಾಸ್ ಮಧ್ಯೆ ಏಳು ಸುತ್ತುಗಳ ಮುಖಾಮುಖಿ ಚರ್ಚಾ ಸ್ಪರ್ಧೆ ನಡೆಯಿತು. ಆದರೆ ರಾಷ್ಟ್ರೀಯ ಟಿವಿ ಮಾಧ್ಯಮದಲ್ಲಿ ಮೊಟ್ಟಮೊದಲ ಬಾರಿಗೆ ಸೆಪ್ಟೆಂಬರ್‌ 26, 19060ರಲ್ಲಿ ಜಾನ್. ಎಫ್. ಕೆನಡಿ ಮತ್ತು ರಿಚರ್ಡ್ ನಿಕ್ಸನ್ ಮಧ್ಯೆ ಚರ್ಚಾ ಸ್ಪರ್ಧೆ ನಡೆಯಿತು.

ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಅಮೆರಿಕದ ಉಪಾಧ್ಯಕ್ಷ ರಿಚರ್ಡ್ ನಿಕ್ಸನ್ ಸುಲಭವಾಗಿ ಗೆಲ್ಲುವ ನೆಚ್ಚಿನ ಅಭ್ಯರ್ಥಿಯಾಗಿದ್ದರು.
ಆದರೆ ಅವರು ಟಿವಿಯ ಸ್ಪರ್ಧೆಗೆ ಸರಿಯಾಗಿ ಡ್ರೆಸ್ ಹಾಕಿಕೊಂಡಿರಲಿಲ್ಲ, ಸರಿಯಾಗಿ ಮೇಕಪ್ ಮಾಡಿಕೊಂಡಿರಲಿಲ್ಲ, ಅವರು ದಿನವಿಡೀ ಬೇರೆ ಕಡೆ ಕ್ಯಾಂಪೇನ್‌ ಮಾಡಿ ತುಂಬಾ ಸುಸ್ತಾಗಿ ರಾತ್ರಿ ಟಿವಿ ಸ್ಟುಡಿಯೋಗೆ ಬಂದಿದ್ದರು. ಆದರೆ ಯಾರಿಗೂ ಹೆಚ್ಚಿಗೆ ಪರಿಚಯವಿಲ್ಲದ ಡೆಮಾಕ್ರೆಟಿಕ್ ಪಕ್ಷದ ಯುವ ಅಭ್ಯರ್ಥಿ ಜಾನ್. ಎಫ್. ಕೆನೆಡಿ ದಿನ ಪೂರ್ಣ ಸಂಪೂರ್ಣ ವಿಶ್ರಾಂತಿ ತೆಗೆದು ಕೊಂಡು, ಟಿವಿ ಚರ್ಚಾಸ್ಪರ್ಧೆಯಲ್ಲಿ ಏನು ಮಾತನಾಡಬೇಕೆಂದು ಸಂಪೂರ್ಣ ತಯಾರಿ ಮಾಡಿಕೊಂಡು, ಅಭ್ಯಾಸ ಮಾಡಿ, ತುಂಬಾ ಚೆನ್ನಾಗಿ ಡ್ರೆಸ್ ಮಾಡಿ ಕೊಂಡು, ಪಾಸಿಟಿವ್ ಆಟಿಟ್ಯೂಡ್ ಇಟ್ಟುಕೊಂಡು ಬಂದಿದ್ದರು. ಈ ಮೊಟ್ಟಮೊದಲ ಟಿವಿ ಯಲ್ಲಿ ನಡೆದ ಚರ್ಚೆಯನ್ನು 66 ಮಿಲಿಯನ್ ಅಮೆರಿಕನ್ನರು ವೀಕ್ಷಿಸಿದರು. ಈ ಚರ್ಚೆಯಲ್ಲಿ ಕೆನೆಡಿ ತುಂಬಾ ಚೆನ್ನಾಗಿ
ಆತ್ಮ ವಿಶ್ವಾಸದಿಂದ ಮಾತನಾಡಿ, ಒಂದೇ ದಿನದಲ್ಲಿ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡರು.

ಅಲ್ಲಿವರೆಗೂ ಮುಂಚೂಣಿಯಲ್ಲಿದ್ದ ನಿಕ್ಸನ್ ಈ ಟಿವಿ ಡಿಬೇಟ ನಂತರ ಹಿಂದೆ ಬಿದ್ದು ಚುನಾವಣೆಯಲ್ಲಿ ಸೋತು ಹೋದರು. ಇದು ಟಿವಿ ಮಾಧ್ಯಮದ ಪ್ರಭಾವವನ್ನು ಚುನಾವಣೆಯ ಪಲಿತಾಂಶದ ಮೇಲೆ ತೋರಿಸುತ್ತದೆ. ಈ ಘಟನೆ ನಂತರ ಮುಂದೆ ಬಂದ
ಎಲ್ಲಾ ಅಭ್ಯರ್ಥಿಗಳು ಟಿವಿ ಡಿಬೇಟ್ ನ್ನು ತುಂಬಾ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಿದ್ದಾರೆ. ಏಕೆಂದರೆ, ಭಾರತ ದೇಶದಲ್ಲಿರುವಂತೆ  ಇಲ್ಲಿನ ಚುನಾವಣೆಯಲ್ಲಿ ಹಣ, ಹೆಂಡ, ಸೀರೆ ಹಂಚುವ ಸಂಸ್ಕೃತಿಯಿಲ್ಲ.

2020 ಚುನಾವಣೆಯ ಮೊದಲ ಅಧ್ಯಕ್ಷೀಯ ಚರ್ಚಾಸ್ಪರ್ಧೆ: ಅಮೆರಿಕದಲ್ಲಿ ಇದೀಗ ಅಧ್ಯಕ್ಷೀಯ ಚುನಾವಣೆಯ ಕಾವು ದಿನದಿನಕ್ಕೆ ಗಗನಕ್ಕೆ ಏರುತ್ತಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮತ್ತು ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಗೆಲ್ಲಲು ಹವಣಿಸುತ್ತಿದ್ದರೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಮಾಜಿ ಉಪಾಧ್ಯಕ್ಷ ಜೋ ಬಿಡನ್ ಹೇಗಾದರೂ ಮಾಡಿ ಈ ಬಾರಿ ಗೆಲ್ಲಲೇಬೇಕೆಂದು ಭಾರಿ ಪ್ರಚಾರ ನಡೆಸಿದ್ದಾರೆ.

ಅಮೆರಿಕದಲ್ಲಿ ರಾಷ್ಟ್ರೀಯ ಟಿವಿ ಚಾನೆಲ್ ಗಳಲ್ಲಿ ಇಬ್ಬರೂ ಅಧ್ಯಕ್ಷೀಯ ಸ್ಪರ್ಧಿಗಳ ಮಧ್ಯೆ ಮೂರು ಬಾರಿ ಮುಖಾಮುಖಿ ಚರ್ಚೆ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಈ ಸರಣಿಯ ಮೊದಲ ಸ್ಪರ್ಧೆ ಇತ್ತೀಚೆಗೆ ಸೆಪ್ಟೆೆಂಬರ್ 29 ರಂದು ಕ್ಲೀವ್‌ ಲ್ಯಾಂಡ್’ನಲ್ಲಿ ನಡೆಯಿತು. ಎರಡನೇ ಸ್ಪರ್ಧೆ ಅಕ್ಟೋಬರ್ 15ರಂದು ಮಿಯಾಮಿ, ಫ್ರೋರಿಡಾದಲ್ಲಿ ಮತ್ತು ಮೂರನೇ ಮತ್ತು ಕೊನೆಯ ಸ್ಪರ್ಧೆ ಅಕ್ಟೋಬರ್ 22ರಂದು ನ್ಯಾಶ್ವಿಲ್ಲ , ಟೆನೆಸ್ಸಿಯಲ್ಲಿ ನಡೆಯಲಿದೆ.

ಮೊದಲ ಚರ್ಚಾಸ್ಪರ್ಧೆಯ ಮಾಡರೇಟರ್ ಕ್ರಿಸ್ ವ್ಯಾಲೇಸ್ ಈ ಇಬ್ಬರು ಅಭ್ಯರ್ಥಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ತುಂಬಾ ಹೆಣಗಾಡಿದರು. ಜೋ ಬಿಡನ್‌ರು ಟ್ರಂಪ್‌ರನ್ನು ಕುರಿತು ನೀನೊಬ್ಬ ಸುಳ್ಳುಗಾರ, ಕಪಟಿ, ವಂಚಕ, ಹೇಡಿ, ಮೂರ್ಖ.
ನಿನ್ನಂತಹ ಕೆಟ್ಟ, ಅಸಮರ್ಥ ಅಧ್ಯಕ್ಷ ಅಮೆರಿಕದ ಇತಿಹಾಸದಲ್ಲಿಯೇ ಹಿಂದೆಂದೂ ಇಲ್ಲ. ನಿನ್ನ ಮೂರ್ಖತನದಿಂದಾಗಿ ಕರೋನ ವೈರಸ್‌ನಿಂದ ಅಮೆರಿಕದಲ್ಲಿ 75 ಲಕ್ಷ ಜನಕ್ಕೆ ಸೋಂಕು ತಗಲಿದ್ದು, ಸುಮಾರು ಎರಡು ಲಕ್ಷ ಜನ ಸತ್ತಿದ್ದಾರೆ. ನಿನ್ನ ವಿಭಜನೆ ನೀತಿಯಿಂದಾಗಿ ಕರಿಯ ಮತ್ತು ಅಲ್ಪಸಂಖ್ಯಾತ ಜನರ ಮೇಲಿನ ದಾಳಿಗಳು ಹೆಚ್ಚಾಗುತ್ತಲಿವೆ ಎಂದು ಹಿಗ್ಗಾ-ಮುಗ್ಗಾ ಬೈದರು.

ಇದಕ್ಕಾಗಿ ಪ್ರತಿಯಾಗಿ ಡೊನಾಲ್ಡ್ ಟ್ರಂಪು ಬೈಡನ್ ಕುರಿತು ನೀನು ನಿನ್ನ 47 ವರ್ಷದ ರಾಜಕೀಯ ಜೀವನದಲ್ಲಿ ಮಾಡದ ಕೆಲಸ ಕಾರ್ಯವನ್ನು ನಾನು ಕೇವಲ 47 ತಿಂಗಳಲ್ಲಿ ಮಾಡಿದ್ದೇನೆ. ನೀನು ಎಲ್ಲ ಕ್ಷೇತ್ರಗಳಲ್ಲಿಯೂ ವಿಫಲನಾಗಿದ್ದೀಯಾ. ನೀನು
ಶಾಲಾ ಕಾಲೇಜು ದಿನಗಳಲ್ಲಿ ಯಾವಾಗಲೂ ಕೊನೆಯ ವಿದ್ಯಾರ್ಥಿ. ನೀನು ಚೈನಾ ದೇಶದ ಕೈಗೊಂಬೆ. ಹೀಗೆ ಅನೇಕ ರೀತಿಯಲ್ಲಿ ಗೇಲಿ ಮಾಡಿದರು. ಟ್ರಂಪ್ ಮುಂದುವರೆದು ಡೆಮಾಕ್ರಟಿಕ್ ಪಕ್ಷದವರು ಲಾಕ್‌ಡೌನ್ ಶಾಶ್ವತವಾಗಿ ಮುಂದುವರಿಸುವಂತೆ
ಮಾಡುವ ಹೇಡಿ ಜನರು. ಲಾಕ್ ಡೌನ್ ನಿಂದ ಆಲ್ಕೋಹಾಲ್, ಡೈವರ್ಸ, ಡ್ರಗ್ಸ್ ಮುಂತಾದ ಸಮಸ್ಯೆಗಳು ಬಹಳಷ್ಟು ಏರಿಕೆ ಯಾಗಿವೆ.

ನಾನು ಅತ್ಯಂತ ಸಮರ್ಥ ನಾಯಕನಾಗಿದ್ದು, ಲಾಕ್ ಡೌನ್ ತೆಗೆದು ಶಾಲೆ-ಕಾಲೇಜುಗಳನ್ನು ಪ್ರಾರಂಭ ಮಾಡಿದ್ದೇನೆ. ಅಮೇರಿಕಾದ ಮಿಲಿಟರಿ ವ್ಯವಸ್ಥೆಯನ್ನು ತುಂಬಾ ಆಧುನೀಕರಣಗೊಳಿಸಿದ್ದೇನೆ ಎಂದು ತಮ್ಮ ನಾಲ್ಕು ವರ್ಷಗಳ ಸಾಧನೆ ಗಳನ್ನು ಕೊಚ್ಚಿಕೊಂಡರು ಜೋ ಬಿಡನ್ ಗೆ ಮಾತನಾಡಲು ಅವಕಾಶ ಕೊಡದೇ, ಒಂದೂವರೆ ಗಂಟೆಯ ಚರ್ಚೆಯಲ್ಲಿ, ಟ್ರಂಪ್ ಬರೋಬ್ಬರಿ ಎಪ್ಪತ್ತು ಮೂರು ಬಾರಿ ಮಧ್ಯಪ್ರವೇಶ ಮಾಡಿದರು. ಇದರಿಂದ ಕುಪಿತಗೊಂಡ, ತಾಳ್ಮೆ ಕಳೆದುಕೊಂಡ ಜೋ ಬಿಡನ್ ಟ್ರಂಪ್’ಗೆ Will you shut up, man? ಎಂದು ಖಾರವಾಗಿ ಹೇಳಿದರು. ಇಂತಹ ಅಸಭ್ಯವರ್ತನೆ ನೋಡುಗರನ್ನು ದಿಗ್ಭ್ರಮೆಗೊಳಿ ಸಿತು.

ಮೋದಿ ಬೆಂಬಲಿಗರಿಗೆ ಆಘಾತ : ಅಮೆರಿಕ ಅಧ್ಯಕ್ಷ ಟ್ರಂಪ್ ಕಳೆದ ಮೂರು ವರ್ಷಗಳಲ್ಲಿ ಚೀನಾ ದೇಶದಿಂದ ದೂರವಾಗಿ ಭಾರತದೊಂದಿಗೆ ತಮ್ಮ ಸಂಬಂಧವನ್ನು ಹೆಚ್ಚಿಸಿಕೊಂಡಿರುವುದು ಎಲ್ಲರಿಗೂ ತಿಳಿದ ವಿಷಯ. ಹೋದ ವರ್ಷ ಸೆಪ್ಟೆಂಬರ್‌ 22ರಂದು ಅಮೇರಿಕಾದ ಟೆಕ್ಸಾಸ್’ನಲ್ಲಿ 50 ಸಾವಿರಕ್ಕೂ ಹೆಚ್ಚು ಭಾರತೀಯ ಮೂಲದ ಜನರು ಸೇರಿ ಹೌಡಿ ಮೋದಿ *(Howdy Modi) ಕಾರ್ಯಕ್ರಮವನ್ನು ಏರ್ಪಡಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತವನ್ನು ಕೊಟ್ಟಿದ್ದರು. ಈ ಸಮಾರಂಭಕ್ಕೆ ಮೋದಿಯವರು ಟ್ರಂಪ್‌ರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದರು.

ಅಷ್ಟೇ ಅಲ್ಲದೆ, ಇದೇ ವರ್ಷ ಫೆಬ್ರವರಿ 24ರಂದು ಗುಜರಾತಿನ ಅಹಮ್ಮದಾಬಾದ್ ನಗರದಲ್ಲಿ ನಮಸ್ತೆ ಟ್ರಂಪ್ ಎಂಬ ಭರ್ಜರಿ ಕಾರ್ಯಕ್ರಮವನ್ನು ಏರ್ಪಡಿಸಿ, ಲಕ್ಷಾಂತರ ಜನರನ್ನು ಸೇರಿಸಿ ಟ್ರಂಪ್‌ಗೆ ಅತ್ಯದ್ಭುತ ಸ್ವಾಗತವನ್ನು ನೀಡಿದ್ದರು. ಟ್ರಂಪ್
ಅವರು ಮೋದಿಯವರು ನನ್ನ ಒಳ್ಳೆಯ ಸ್ನೇಹಿತ ಎಂದು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಆದರೆ ಈ ಚರ್ಚಾಸ್ಪರ್ಧೆಯಲ್ಲಿ ಮಾತನಾಡುವಾಗ ಟ್ರಂಪ್, ಚೀನಾ, ಭಾರತ ಮತ್ತು ರಷ್ಯಾದವರು ಕೋವಿಡ್ – 19 ವೈರಸ್‌ನಿಂದ ಸಂಭವಿಸಿದ ನಿಖರವಾದ ಸಾವಿನ ಸಂಖ್ಯೆಯನ್ನು ಬಹಿರಂಗಪಡಿಸುತ್ತಿಲ್ಲ ಎಂಬ ಗಂಭೀರ ಆರೋಪವನ್ನು ಮಾಡಿದರು. ಕಂತ್ರಿ ಕಮ್ಯುನಿಸ್ಟ್ ಚೈನಾ ದೇಶವು ಕರೋನಾದ ನಿಜವಾದ ಸಾವಿನ ಸಂಖ್ಯೆೆಯನ್ನು ಹೇಳುತ್ತಿಲ್ಲವೆಂದರೆ ನಂಬಬಹುದು. ಆದರೆ ಈ ಪಟ್ಟಿಯಲ್ಲಿ ಟ್ರಂಪ್ ಅವರು ಭಾರತದ ಹೆಸರನ್ನು ಸೇರಿಸಿರುವುದು, ಅಮೆರಿಕದಲ್ಲಿರುವ ಮೋದಿ ಬೆಂಬಲಿಗರನ್ನು ಕೆರಳಿಸಿದೆ. ಈ ಟ್ರಂಪ್ ಯಾವಾಗ ಏನು ಮಾಡುತ್ತಾರೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ!. ಈ ಹೇಳಿಕೆಯಿಂದ ಕುಪಿತಗೊಂಡಿರುವ ಅಮೆರಿಕದಲ್ಲಿ ರುವ ಭಾರತೀಯರು ಟ್ರಂಪ್‌ಗೆ ವೋಟ್ ಹಾಕುವ ಸಾಧ್ಯತೆ ಕಡಿಮೆಯಾಗಿದೆ.