Saturday, 14th December 2024

ಹೆಸರಷ್ಟೇ ’ಗೋ’ಸ್ವಾಮಿ, ಪತ್ರಕರ್ತರಾಗಿ ಸಿಂಹಸ್ವಾಮಿ

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

ಸ್ವತಂತ್ರಪೂರ್ವ ಭಾರತದಲ್ಲಿ ಪತ್ರಿಕೋದ್ಯಮವೆಂಬುದು ದೇಶದ ಗುಲಾಮಗಿರಿಯನ್ನು ಕಳೆಯಲೋಸಗವೇ ಹುಟ್ಟಿಕೊಂಡಿತ್ತು. ಲೋಕಮಾನ್ಯ ಬಾಲಗಂಗಾಧರ ತಿಲಕರಂಥವರು ಇಡೀ ದೇಶವನ್ನು ಒಗ್ಗೂಡಿಸಿ ಆಂಗ್ಲರ ವಿರುದ್ಧ ದಂಗೆ ಏಳುವ ಸಲುವಾಗಿಯೇ
ಪತ್ರಿಕೋದ್ಯಮವನ್ನು ಒಂದು ಅಸವಾಗಿ ಹುಟ್ಟು ಹಾಕಿದ್ದರು.

ಅಂದು ಸ್ವಾಭಿಮಾನ ದೇಶಾಭಿಮಾನ ಜನಜಾಗೃತಿಗಳ ವಿಚಾರಧಾರೆಯೇ ಪತ್ರಿಕೋದ್ಯಮವಾಗಿತ್ತು. ಕನ್ನಡ ಪತ್ರಿಕೋದ್ಯಮಕ್ಕೆ ಬಂದರೆ ಪಾಟೀಲ್ ಪುಟ್ಟಪ್ಪನವರು, ಶಾಮರಾಯರು, ವೈ.ಎನ್. ಕೃಷ್ಣಮೂರ್ತಿರಂಥ ಪತ್ರಕರ್ತರು ಪತ್ರಿಕೋದ್ಯಮಿಗಳು ಸ್ವಾರ್ಥ ಫಲಾಪೇಕ್ಷೆಗಳಿಲ್ಲದೆಯೇ ರಾಜಕಾರಣಿಗಳ ನಿದ್ದೆಗೆಡಿಸುವ ಪತ್ರಿಕೋದ್ಯಮದ ಖಡಕ್ ಹೀರೋಗಳಾಗಿದ್ದರು.

ಒಂದೆಡೆ ರಾಜಕಾರಣಿಗಳು ನಟರುಗಳ ಅಬ್ಬರವಿದ್ದರೆ, ಅವರಿಗೆ ಸಮನಾಗಿ ಸೆಟೆದು ನಿಲ್ಲುವ ಪತ್ರಕರ್ತರು ಸಮಾಜದಲ್ಲಿ
ವಿಶ್ವಾಸಾರ್ಹತೆಗಳಿಸಿದ್ದರು. ಇಂಥವರ ಜಮಾನ ಮುಗಿದು ಬರಬರುತ್ತಾ ಪತ್ರಿಕೋದ್ಯಮದ ದಿನಪತ್ರಿಕೆಗಳ ಸಂಪಾದಕರು ಯಾವ ಮಟ್ಟಕ್ಕೆ ಕಳೆಗುಂದಿದರೆಂದರೆ ಪತ್ರಿಕೆಗಳ ಸಂಪಾದಕರು ಡಾ.ರಾಜ್ ಅವರ ಹಳೆಯ ಬಾಂಡ್ ಸಿನಿಮಾದ ‘ಬಾಸ್’ ಗಳಂತೆ ನಿಗೂಢವಾಗಿ ಉಳಿದುಹೋದರು. ನಾವು ಓದುತ್ತಿರುವ ಪತ್ರಿಕೆಯ ಸಂಪಾದಕರ ಹೆಸರನ್ನು ತಿಳಿದುಕೊಳ್ಳಬೇಕಾದರೆ ಪತ್ರಿಕೆಯ ಪುಟಗಳನ್ನು ತಿರುಗಿಸಿ ಶೋಧಿಸಿ ತಳಭಾಗದಲ್ಲಿ ಓದಿ ಕಂಡುಕೊಳ್ಳಬೇಕಾಗಿತ್ತು.

ಇಂಥ ಕಾಲಘಟ್ಟದಲ್ಲಿ ಬೆಳಗಿನಜಾವ ಗಂಟೆಗೇ ಎದ್ದು ಮಧ್ಯಾಹ್ನ ೧೨ಕ್ಕೇ ದಿನದ ಪೂರ್ತಿ ಕೆಲಸ ಮುಗಿಸುವ ಶ್ರಮಜೀವಿ ಉದ್ಯಮಿಯಾಗಿದ್ದ ವಿಜಯ ಸಂಕೇಶ್ವರ ಅವರ ಉತ್ತಮ ಅಭಿರುಚಿಯಿಂದಾಗಿ ವಿಜಯಕರ್ನಾಟಕ ದಿನಪತ್ರಿಕೆ ಹುಟ್ಟಿಕೊಂಡಿತು. ಅದಕ್ಕೆ ಸಂಪಾದಕರಾಗಿ ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಸಂಪಾದಕರಾಗಿ ಕುಳಿತ ಘಳಿಗೆಯಿಂದಲೇ ವಿಜಯ ಕರ್ನಾಟಕ ಎಂಥ ಮೋಡಿ ಮಾಡಿತೆಂದರೆ ಕನ್ನಡ ಪತ್ರಿಕೋದ್ಯಮದಲ್ಲಿ ‘ವಿಜಯನಗರ ಸಾಮ್ರಾಜ್ಯ’ ವನ್ನೇ ಸೃಷ್ಟಿಸಿತು. ಅದುವರೆಗೂ ಒಂದು ನಿರ್ದಿಷ್ಟ ನಿಯಮ ಅಲಿಖಿತ ಸಿದ್ಧಾಂತಗಳಿಂದ ಕುಂಟುತ್ತಿದ್ದ ಕನ್ನಡ ಪತ್ರಿಕೋದ್ಯಮವು ತೀಕ್ಷ್ಣತೆ ಪಡೆದು ಓಡಲಾರಂಭಿಸಿತು.

ಭಿನ್ನತೆ, ವಿಶಿಷ್ಟತೆ, ನೂತನ ಪ್ರಯೋಗಗಳಿಂದ ಪತ್ರಿಕೋದ್ಯಮದ ದಿಕ್ಕನ್ನೇ ಬದಲಿಸಿ ಸಂಪಾದಕರೆಂಬುದು ತಲೆಮರೆಸಿ ಕೊಳ್ಳವು ದಲ್ಲ, ಶ್ರೀಕೃಷ್ಣದೇವರಾಯನಂತೆ ವಿಜಯ ಸಾಧಿಸಿ ವಿಜೃಂಭಿಸುವುದು ಎಂಬುದನ್ನು ಅಕ್ಷರಸಹ ನಿರೂಪಿಸಿದವರು ವಿಶ್ವೇಶ್ವರ ಭಟ್ ಮತ್ತು ಅವರ ಸಿಬ್ಬಂದಿ. ಅಂದು ಮುಖ್ಯವರದಿಗಾರರಾಗಿದ್ದ ಪಿ.ತ್ಯಾಗರಾಜ್ ಅವರು ಕನ್ನಡದ ಐ.ಎ.ಎಸ್ ಶಿವರಾಮ್ ಅವರನ್ನು ಎದುರಾಕಿಕೊಂಡು ಪತ್ರಿಕೆ ಕಾರ್ಯಾಂಗದ ವಿರುದ್ಧವೇ ಹೋರಾಡಿತ್ತು. ಶಾಸಕ ಹರತಾಳು ಹಾಲಪ್ಪರ ‘ತುಂಟ’ ಹಗರಣವನ್ನು ಬಯಲುಮಾಡಿ ಇಡೀ ಬಿಜೆಪಿ ಸರಕಾರವನ್ನು ಬೆಚ್ಚಿಬೀಳಿಸಿತ್ತು. ಒಂದು ಪತ್ರಿಕೆಯ ಪತ್ರಿಕಾಧರ್ಮ ಮತ್ತು
ವ್ಯಕಿತ್ವವನ್ನು ನಿರ್ಣಯಿಸುವ ಸಂಪಾದಕೀಯ ಮತ್ತು ಒಪೆಡ್ ಪೇಜ್ ಪುಟಗಳಿಗೆ ನೀಡಿದ ಮಹತ್ವ ಮಾತ್ರ ದೇಶ ಮತ್ತು ಸಮಾಜವನ್ನು ಕಟ್ಟುವ ವೈಚಾರಿಕತೆಯಿಂದ ಕೂಡಿತ್ತು.

ಇಂಥ ಪುಟಗಳನ್ನು ನಿರ್ವಹಿಸುವುದು ಮಾತ್ರ ಪತ್ರಿಕೋದ್ಯಮದಲ್ಲಿ ಮೂರ‍್ನಾಲ್ಕು ದಶಕಗಳನ್ನು ಕಳೆದಿರುವ ಅರವತ್ತರ ಆಸುಪಾಸಿನ ಸಹಸಂಪಾದಕರೇ ಆಗಿರುಬೇಕೆಂಬ ‘ಮೂಢನಂಬಿಕೆ’ ಇತ್ತು. ಆದರೆ ವಿಶ್ವೇಶ್ವರ ಭಟ್ ಅವರು ಯುವ ಪತ್ರಕರ್ತರಿಗೆ ಹೆಚ್ಚಿನ ಅವಕಾಶ ನೀಡಿ ಬೆಳೆಸಿದರು. ಈ ವೇಳೆ ವಿಜಯಕರ್ನಾಟಕದ ಕಥೆ ಮುಗಿಯಿತು ಎಂದೇ ಭಾವಿಸಿದ್ದರು. ಆದರೆ ಅವರ ಆ ಪುಟಗಳ ನಿರ್ವಹಣೆಯೇ ವಿಜಯಕರ್ನಾಟಕದ ಯಶಸ್ವಿನ ಮಹತ್ವದ ಪಾಲನ್ನು ಪಡೆದಿತ್ತು. ಹಾಗೆ ಬೆಳೆದವರ ಸಾಲಿನಲ್ಲಿ ಎರಡನೇ ಬಾರಿಗೆ ಸಂಸದರಾಗಿರುವ ಬೆತ್ತಲೆಜಗತ್ತಿನ ಅಂಕಣಕಾರರಾದ ಪ್ರತಾಪಸಿಂಹ ಸಹ ಒಬ್ಬರು. ಅಂದು ವಿಶ್ವೇಶ್ವರಭಟ್ಟರ
ಗರಡಿಯಲ್ಲಿ ಪಳಗಿದ ಪತ್ರಕರ್ತರು ಇಂದು ಅನೇಕ ಪತ್ರಿಕೆಗಳಲ್ಲಿ ಟಿವಿ ಮಾಧ್ಯಮಗಳಲ್ಲಿ ಸಂಪಾದಕರಾಗಿ, ಪತ್ರಕರ್ತರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಹೀಗೆ ಕನ್ನಡದ ಪತ್ರಿಕೋದ್ಯಮಕ್ಕೆ ಒಂದು ತೀಕ್ಷ್ಣತೆ ಮೊನಚು ತಂದ ಕೀರ್ತಿ ವಿಶ್ವೇಶ್ವರ ಭಟ್ಟರದ್ದು.

ಈಗಲೂ ಪತ್ರಿಕೋದ್ಯಮದಲ್ಲೇ ಅನೇಕ ಅಸೂಯೆ ಆಕೃತಿಗಳನ್ನು ಹೊಂದಿರುವ ಏಕೈಕ ಸಂಪಾದಕರೆಂದರೆ ಅವರೇ ಎಂಬು ದನ್ನು ಅವರ ವೈರಿಗಳೂ ಒಪ್ಪುತ್ತಾರೆ. ಇಷ್ಟೆಲ್ಲಾ ಹೇಳಲು ಕಾರಣ, ಪತ್ರಿಕೋದ್ಯಮದಲ್ಲಿ ಪತ್ರಕರ್ತರಾದವರು ಹೇಗೆಲ್ಲಾ ಸಮಾಜದೊಂದಿಗೆ ಸ್ಪಂದಿಸಬಹುದು ಮತ್ತು ಓದುಗರನ್ನು ಚಿಂತಕರನ್ನಾಗಿ ವಿಚಾರವಂತರನ್ನಾಗಿ ಮಾಡಬಹುದೆಂದು. ಜತೆಗೆ ಪತ್ರಕರ್ತರ ಲೇಖನಿಗಿರುವ ಸಾಮರ್ಥ್ಯ ಎಂಥದೆಂದು. ಮುದ್ರಣ ಮಾಧ್ಯಮದಲ್ಲಿ ಲೇಖನಿಯ ಹರಿತವನ್ನು ಪದಬಳಕೆಯ ಮೂಲಕ ಕಿಚ್ಚು ಹಚ್ಚಬಹುದಾದರೆ ಅದೇ ನೇರಾನೇರ ಚರ್ಚೆಯಲ್ಲಿ ತೊಡಗುವ ಪತ್ರಕರ್ತ ಹೇಗಿರಬಹುದೆಂಬುದಕ್ಕೆ ಇದೇ ಫೈರ್
ಬ್ರಾಂಡ್ ಪತ್ರಿಕೋದ್ಯಮದಲ್ಲಿ ಅರ್ನಾಬ್ ಗೋಸ್ವಾಮಿಯವರು ನಮಗೆ ದೃಷ್ಟಾಂತವಾಗಿದ್ದಾರೆ.

ಪತ್ರಿಕೆಯನ್ನು ಓದಿ ‘ಸಕತ್ತಾಗಿ ಬರೆದಿದ್ದಾರೆ, ಚೆನ್ನಾಗಿ ಉಗಿದ್ದಿದ್ದಾರೆ, ಚೆನ್ನಾಗಿ ಹೊಡೆದಿದ್ದಾರೆ’ ಎಂದು ಮುದ್ರಣ ಮಾಧ್ಯಮ ದಲ್ಲಿನ ದನಿಯನ್ನೇ ಬಳಸಿಕೊಂಡು ನೇರವಾಗಿ ದೃಶ್ಯ ಮಾಧ್ಯಮದಲ್ಲಿ ಖಂಡನಾರ್ಹ ಚರ್ಚೆಗಳನ್ನು ನಡೆಸಿ ಬಹುಬೇಗನೆ
ಜನಪ್ರಿಯತೆ ಗಳಿಸಿದ ಹೆಗ್ಗಳಿಕೆ ಅರ್ನಬ್ ಅವರದ್ದು. ಸರಕಾರದ ದೂರದರ್ಶನ ವಾಹಿನಿಯಲ್ಲಿ ಕಣ್ಣು ಮಿಟುಕಿಸದೆ ಬೆವರಿದರೂ ಒರೆಸಿಕೊಳ್ಳದೆ ಗಾಬರಿಯಲ್ಲಿ ಪರದೆ ನೋಡಿಕೊಂಡು ಸುದ್ದಿ ವಾಚಿಸುವುದು ಒಂದು ನಿಯಮವಾಗಿತ್ತು. ಆದರೆ ದೃಶ್ಯ ಮಾಧ್ಯಮದಲ್ಲಿ ಹಾಗೆ ಬೆದರುಬೊಂಬೆಯಂತೆ ಕುಳಿತು ಸುದ್ದಿ ಓದುವುದು ಅಸಹಜವಾದದ್ದು, ಅದೇನಿದ್ದರು ಹವಾಮಾನ ವರದಿಗಷ್ಟೇ ಲಾಯಕ್ಕು ಎಂದು ಅರಿತ ಗೋಸ್ವಾಮಿಯವರು ಒಂದು ವರದಿಯಲ್ಲಿನ ವಿಚಾರಗಳು ಸತ್ಯತೆ ನ್ಯಾಯ ಅನ್ಯಾಯ
ಮೋಸ ಅನೈತಿಕತೆ ಇವುಗಳನ್ನೆಲ್ಲಾ ನೇರವಾಗಿ ದೊಡ್ಡ ದನಿಯಲ್ಲಿ ಖಂಡಿಸುವುದರ ಮೂಲಕ ದೃಶ್ಯ ಮಾಧ್ಯಮದಲ್ಲಿನ ಅವಕಾಶವನ್ನು ಸಮರ್ಥ ವಾಗಿ ಬಳಸಿಕೊಂಡು ನಿರ್ದಾಕ್ಷಿಣ್ಯವಾಗಿ ಅನ್ಯಾಯ ವನ್ನು ಖಂಡಿಸಿ ಸರಕಾರಗಳನ್ನೇ ಎದುರಾಕಿ ಕೊಂಡಿದ್ದರು.

ಅವರು ಇಂದು ಎದುರಿಸುತ್ತಿರುವ ಮಹಾರಾಷ್ಟ್ರ ಸರಕಾರದ ಸವಾಲುಗಳು ಒಬ್ಬ ಪತ್ರಕರ್ತನ ನಿಜವಾದ ಶಕ್ತಿ, ಅಸ್ತಿತ್ವ ಮತ್ತು ಪರಿಪೂರ್ಣತೆಯನ್ನು ಅನಾವರಣಗೊಳಿಸುತ್ತಿದೆ. ಇಂದು ಅವರನ್ನು ಬಂಧಿಸಲಾಗಿರುವ ಕೇಸಿನಲ್ಲೇ ಅವರ ಸಾಮಥ್ಯವೇ ನೆಂಬುದು ತಿಳಿಯುತ್ತದೆ. ತನ್ನ ವಯಸ್ಸನ್ನು ಮೀರಿ ಕಾಲಿಗೆ ಬೀಳುವ ಪಕ್ಷದ ಮುಖಂಡರನ್ನು ಹೊಂದಿರು ಸೋನಿಯಾ ಅವರ ಅಸಲಿ ಹೆಸರು ಅಂತೋಣಿ ಮೈನೋ ಅಂದಿದ್ದು, ಬಾಲಿವುಡ್ ಡ್ರಗ್ಸ್ ಮಾಫಿಯ ಕೆದಕಿದ್ದು, ಪಾಲ್ಗಾರ್ ಹತ್ಯೆಯಾದ ಸಾಧುಗಳ
ಪರ ದನಿಯೆತ್ತಿದ್ದು, ನಟ ಸುಶಾಂತ್‌ಸಿಂಗ್, ದಿಶಾರ ನಿಗೂಢ ಸಾವಿನ ಬಗ್ಗೆ ವರದಿ ಮಾಡಿದ್ದು, ನೆಪೋಟಿಸಮ್ (ವಂಶ
ಪಾರಂಪರಿಕ ಅಧಿಕಾರ) ವಿರುದ್ಧ ಸಿಡಿದದ್ದು, ಪಾಕಿಸ್ತಾನದ ಏಜೆಂಟುಗಳಂತಿದ್ದವರನ್ನು ಎಚ್ಚರಿದ್ದು, ಹತ್ರಾಸ್ ಅತ್ಯಾಚಾರ
ಕೇಸಿನಲ್ಲಿನಲ್ಲಿ ರಾಜಕೀಯವನ್ನು ಬೆತ್ತಲೆಗೊಳಿಸಿದ ವಿಚಾರಗಳು, ಕಂಗನಾ ರಾವತ್ ಪರವಹಿಸಿದ್ದು.

ಹೀಗೆ ದೇಶದಲ್ಲಿನ ಆಗುಹೋಗುಗಳ ಕುರಿತು ದಿಟ್ಟ ವರದಿಗಳನ್ನು ಮಾಡಿದರೂ ಇಂಥ ವಿಷಯಗಳಲ್ಲಿ ಅವರನ್ನು ಏನೂ
ಮಾಡಲಾಗಲಿಲ್ಲ. ಹೀಗಾಗಿಯೇ ಎರಡು ವರ್ಷಗಳ ಹಿಂದಿನ ಕೇಸೊಂದನ್ನು ಹಿಡಿದುಕೊಂಡು ಬಂಧಿಸುವಂತಾಯಿತು. ಇದೇ ಹೇಳುತ್ತದೆ. ಅವರಿಂದ ಮಹಾರಾಷ್ಟ್ರ ಸರಕಾರ ಹೇಗೆಲ್ಲಾ ಮುಖಭಂಗ ಅನುಭವಿಸಿದೆ ಎಂದು. ಅರ್ನಬ್ ಅವರೇನು ಯಾವುದೇ ಸಮ್ಮೋಹನ ಅತಿರೇಖಕ್ಕೆ ಒಳಗಾದ ಪತ್ರಕರ್ತರಲ್ಲ. ಅವರ ತಂದೆ ಮನೋರಂಜನ್ ಗೋಸ್ವಾಮಿಯವರು ಬರೋಬ್ಬರಿ ೩೦
ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಿ ಕರ್ನಲ್ ಆಗಿ ನಿವೃತ್ತಿಯಾದವರು.

ದೇಶ ಎಂದರೇನು, ಭಾರತದ ಘನತೆ ಎಂಬುದೇನೆಂಬುದು ಅವರ ತಂದೆಯಿಂದಲೇ ಅನುಭೂತಿ ಪಡೆದವರು. ಹೀಗಾಗಿ ಒಬ್ಬ
ದೇಶಭಕ್ತ ಸೈನ್ಯಾಧಿಕಾರಿಯ ಮಗ ಪತ್ರಕರ್ತನಾದರೆ ಆತನ ಶಕ್ತಿ ಏನೆಂಬುದು ಅರ್ನಾಬ್ ಗೋಸ್ವಾಮಿಯವರಿಂದ ದೇಶವಾಸಿ ಗಳಿಗೆ ಅನುಭವ ವಾಗಿದೆ. ಯುದ್ಧ ಭೂಮಿಯಲ್ಲಿ ಕೆರಳಿದ ಒಬ್ಬ ಕಮಾಂಡರ್‌ನಂತೆ ಪ್ರಶ್ನಿಸುತ್ತಿದ್ದ ಅರ್ನಾಬ್ ಅವರು ಪ್ರತಿನಿತ್ಯ ಹೊಸ ಶತ್ರುಗಳನ್ನು ದ್ವೇಷಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೋಗುತ್ತಿದ್ದರು. ಒಂದು ಕಡೆ ಭಾರತದ ಮಾನ ಕಳೆದು ದೇಶಿ ಮುಖಗಳ ಕಾಲು ನೆಕ್ಕುವ ಪರದೇಶಿ ಏಜೆಂಟುಗಳಂತೆ ವರ್ತಿಸುವ ಅನೇಕ ಹಿಂದಿ ಮತ್ತು ಆಂಗ್ಲ ಸುದ್ದಿವಾಹಿನಿಗಳ ಮಧ್ಯೆ ಅರ್ನಾಬ್ ಅವರ ರಿಪಬ್ಲಿಕ್ ಟಿವಿ ಆರಂಭವಾದಾಗಲೇ ಅನೇಕ ದೇಶದ್ರೋಗಳಿಗೆ ಗುಲಾಮರಿಗೆ ಮತ್ತು ಬಕೇಟು ಮಾಧ್ಯಮಗಳಿಗೆ ನಡುಕ ಹುಟ್ಟಿಕೊಂಡಿತ್ತು.

ಅರ್ನಾಬ್ ಪ್ರಭಾವ ಎಷ್ಟಿತ್ತೆಂದರೆ ದೇಶದ ಅನೇಕ ಸುದ್ದಿವಾಹಿನಿಗಳಲ್ಲಿನ ನಿರೂಪಕರು ಪತ್ರಕರ್ತರು ಗೋಸ್ವಾಮಿಯವರಂತೆ ಇಡೀ ದೇಹವನ್ನು ಅಲ್ಲಾಡಿಸುತ್ತಾ ಉನ್ಮಾದಿತ ರಾಗಿ ಕೂಗಾಡುತ್ತಾ ಅರಚಿ ಕೊಳ್ಳುತ್ತಾ ಚರ್ಚೆಗಳನ್ನು ನಡೆಸುತ್ತಿದ್ದಾರೆ. ನಮ್ಮ ಕನ್ನಡದ ವಾಹಿನಿಗಳಲ್ಲೇ ಹಲವರು ಗೋಸ್ವಾಮಿಯವರ ಆತ್ಮ ದೇಹದ ಮೇಲೆ ಬಂದಂತೆ ವರ್ತಿಸುವುದನ್ನು ನೋಡುತ್ತಿದ್ದೇವೆ. ಆದರೆ ಇಂದು ಗೋಸ್ವಾಮಿಯವರನ್ನು ಸರಕಾರ ಸೇಡಿನ ಕ್ರಮವಾಗಿ ಅಪ್ರಸ್ತುತ ಕೇಸಿನ ಮೇಲೆ ಬಂಧಿಸಿ ದೌರ್ಜನ್ಯ ಮೆರೆದಾಗ
ಅದನ್ನು ಖಂಡಿಸಿ ನಮ್ಮ ಸುದ್ದಿವಾಹಿನಿಗಳು ಏಕದನಿಯಲ್ಲಿ ಬೆಂಬಲಿಸದೇ ಇರುವುದು ದುರದೃಷ್ಟಕರ. ಏಕೆಂದರೆ ಇಂದು
ಒಂದೊಂದು ವಾಹಿನಿಗಳು ಒಬ್ಬೊಬ್ಬ ರಾಜಕೀಯದ ಉದ್ಯಮಿಗಳ ಮುಲಾಜಿ ನಲ್ಲಿ ನಡೆಯುತ್ತಿದೆ.

ಒಬ್ಬೊಬ್ಬ ರಾಜಕಾರಣಿಯೂ ನಂದೊಂದು ಇರಲಿ ಎಂದು ಸುದ್ದಿ ವಾಹಿನಿಗಳನ್ನು ತಮ್ಮ ಪರವಾಗಿ ‘ಸದ್ದು’ ವಾಹಿನಿಗಳನ್ನಾಗಿ
ರಚಿಸಿ ಕೊಂಡಿದ್ದಾರೆ. ಪತ್ರಿಕೋದ್ಯಮದ ಕಸ್ತೂರಿ ಸುವಾಸನೆ ಗೊತ್ತಿಲ್ಲದ ಕತ್ತೆಗಳೆಲ್ಲಾ ನ್ಯೂಸ್ ಚಾನಲ್ ಇಟ್ಟುಕೊಂಡು ತಿರುಪತಿ ಚಾನಲ್‌ನಲ್ಲಿ ಇಪ್ಪತ್ನಾಲ್ಕು ಗಂಟೆಗಳ ಕಾಲ ದೇವರನ್ನು ತೋರಿಸುವಂತೆ ತಮ್ಮ ದರಿದ್ರ ಮುಖಗಳನ್ನು ನಿರಂತರ ಪ್ರಸಾರ ಮಾಡಿಕೊಳ್ಳುತ್ತಿದ್ದಾರೆ. ಒಂದು ರಾಜಕೀಯ ವಿಷಯ ವನ್ನು ಹೇಗೆಲ್ಲಾ ತಮ್ಮ ಬೆಳವಣಿಗೆಗಳಿಗೆ ಅನುಕೂಲಕ್ಕೆ ತಕ್ಕಂತೆ ಬಳಸಿ ಕೊಳ್ಳುತ್ತಿವೆ. ಹೀಗಾಗಿ ತಮ್ಮ ಸಹೋದ್ಯೋಗಿಯ ಪರ ನಿಲ್ಲುವುದಕ್ಕೂ ಹಿಂದೇಟು ಹಾಕುತ್ತಿರುವುದು ಪತ್ರಿಕೋದ್ಯಮದ ದೌರ್ಬಲ್ಯಕ್ಕೆ ಕಾರಣ ವಾಗುತ್ತಿದೆ.

ಆದರೆ ಕನ್ನಡದ ವಿಚಾರವಂತ ಸಂಪಾದಕರ ‘ಎಡಿಟರ‍್ಸ್ ಗಿಲ್ಡ್’ ಮಾತ್ರ ಅರ್ನಾಬ್ ಅವರನ್ನು ಬೆಂಬಲಿಸಿ ಪತ್ರಿಕಾ ಹೇಳಿಕೆ ನೀಡಿರುವುದು ಸಮಾಧಾನಕರ ವಿಷಯ. ಇಂಥ ಅನುಕೂಲಸಿಂಧು ಪತ್ರಿಕೋದ್ಯಮದಲ್ಲಿ ಅರ್ನಾಬ್ ಗೋಸ್ವಾಮಿಯಂಥ ಪತ್ರಕರ್ತರು ರಿಪಬ್ಲಿಕ್‌ನಂಥ ವಾಹಿನಿಗಳು ವಿರೋಧ ಪಕ್ಷಗಳಂತೆ ಕಾರ್ಯನಿರ್ವಹಿಸುತ್ತಿವೆ. ಅದರಲ್ಲೂ ಯಾವ ಮುಲಾಜಿಲ್ಲದೆ ರಾಷ್ಟ್ರೀಯತೆಯ ಪರ ನಿಲ್ಲುವ ಅರ್ನಾಬ್ ಅವರು ಗುಲಾಮಗಿರಿಯ ಮನಸ್ಥಿತಿಯ ರಾಜಕೀಯ ಪಕ್ಷಗಳಿಗೆ ದೊಡ್ಡ ತಲೆನೋವಾ ಗಿರುವುದು ದೇಶಾಭಿಮಾನಿಗಳಿಗೆ ಹೆಮ್ಮೆಯ ವಿಷಯ. ಸೇಡಿನಲ್ಲಿ ಅವರನ್ನು ಬಂಧಿಸಿದಾಗ ಸಾಮಾಜಿಕ ಜಾಲತಾಣಗಳಲ್ಲಿ
ಅವರನ್ನು ಬೆಂಬಲಿಸಿದ್ದು ಅಭೂತ ಪೂರ್ವವಾಗಿತ್ತು. ಹ್ಯಾಷ್ ಟ್ಯಾಗ್‌ಗಳು, ವಿಮ್‌ಗಳು ಜಾಲತಾಣಗಳಲ್ಲಿ ಹರಿದಾಡಿ ಅರ್ನಾಬ್ ಅವರಷ್ಟೇ ದೊಡ್ಡದನಿಯಲ್ಲಿ ಖಂಡಿಸಿ ಅವರ ಬೆಂಬಲಕ್ಕೆ ನಿಂತಿದ್ದವು.

ಅಷ್ಟೇ ಏಕೆ ಅವರನ್ನು ಬಂಧಿಸಿದ ರೀತಿ ಅದಕ್ಕೆ ಬಳಸಿದ್ದ ಅಪ್ರಸ್ತುತವಾದ ಕೇಸು, ಆ ನಂತರ ಮಧ್ಯಂತರ ಜಾಮೀನಿಗೆ ಬಾಂಬೆ ಹೈಕೋರ್ಟ್ ನಿರಾಕರಿಸಿದ ರೀತಿ ಎಲ್ಲವನ್ನೂ ಗಮನಿಸಿದ್ದ ದೇಶದ ಸರ್ವೋಚ್ಚ ನ್ಯಾಯಾಲಯವು ಕೂಡಲೇ ಮಧ್ಯ ಪ್ರವೇಶಿಸಿ ಗೋಸ್ವಾಮಿ ಯವರಿಗೆ ಜಾಮೀನು ನೀಡಿರುವುದು ವ್ಯವಸ್ಥೆಯ ದೋಷಗಳನ್ನು ಎತ್ತಿಹಿಡಿದಿದೆ. ತ್ವರಿತ ವಿಚಾರಣೆ ನಡೆಸಿದ
ಸರ್ವೋಚ್ಚ ನ್ಯಾಯಾಲಯ, ಬಾಂಬೆಯ ಹೈಕೋರ್ಟ್ ನಿಲುವಿಗೆ ಬೇಸರ ವ್ಯಕ್ತಪಡಿಸಿ ವೈಯಕ್ತಿಕ ಸ್ವಾತಂತ್ರ್ಯವನ್ನು
ಕಾಪಾಡುವುದರಲ್ಲಿ ಹೈಕೋರ್ಟ್ ಸೋತಿದೆ, ಇಂಥ ಅಕ್ರಮ ಬಂಧನಗಳ ಪರಿಸ್ಥಿತಿಗಳಲ್ಲಿ ನ್ಯಾಯಾಲಯಳು ಮಧ್ಯಪ್ರವೇಶ ಮಾಡದಿದ್ದರೆ ಹೇಗೆ? ಎಂದು ತರಾಟೆಗೆ ತೆಗೆದುಕೊಂಡಿದೆ.

ಗೋಸ್ವಾಮಿಯವರ ಸೈದ್ಧಾಂತಿಕ ನಿಲುವು ನಿಮಗೆ ಇಷ್ಟಲ್ಲದಿದ್ದರೆ ಏನಂತೆ, ಕಾನೂನನ್ನು ಸರಿಯಾಗಿ ಪಾಲಿಸಬೇಕು, ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಯನ್ನು ಎತ್ತಿ ಹಿಡಿಯಬೇಕು ಎಂದು ಹೈಕೋಟ್ ನ್ಯಾಯಮೂರ್ತಿಗಳಿಗೆ ಸವೋಚ್ಚ ನ್ಯಾಯಾಲಯದ ಜಸ್ಟೀಸ್ ಚಂದ್ರಚೂಡ ಅವರು ತಾಕೀತು ಮಾಡಿ ಸಮಾಜಕ್ಕೆ ನ್ಯಾಯಯುತ ಸಂದೇಶ ನೀಡಿದೆ. ಆ ಮೂಲಕ ಬಾಂಬೆ ಉಚ್ಚ ನ್ಯಾಯಾಲಯ ಮತ್ತು ಸರಕಾರದ ವೈಫಲ್ಯಗಳನ್ನು ಗುರುತಿಸಿದೆ.

ಹಾಗೆ ನೋಡಿದರೆ ದೇಶದಲ್ಲಿನ ಗುಲಾಮರು ದೇಶದ್ರೋಹಿಗಳು ಕಳವಳಗೊಂಡು ಪ್ರಧಾನಿ ಮೋದಿಯವರಿಗಿಂತ ಹೆಚ್ಚಾಗಿ ಹೆದರಿದ್ದು ಅರ್ನಾಬ್ ಗೋ ಸ್ವಾಮಿಯವರಿಗೇ ಎಂದರೆ ಖಂಡಿತಾ ಅತಿಶಯೋಕ್ತಿ ಯಲ್ಲ. ತಮಾಷೆಯೆಂದರೆ ಹುಟ್ಟು ಹಿಂದುತ್ವ ವಾದಿಯಾಗಿ ಬೆಳೆದು ಬಾಳಾಠಾಕ್ರೆ ಯವರೊಂದಿಗೇ ಸತ್ತುಹೋದ ಸಿದ್ಧಾಂತ ಶಿವಸೇನೆಯ ಪಳೆಯುಳಿಕೆಯಾಗಿರುವ ಇಂದಿನ ಉದ್ಧವ ಠಾಕ್ರೆಯ ಸರಕಾರ ಥೇಟು ಲವ್ ಜಿಹಾದಿಗೆ ಒಳಗಾಗಿ ಮತಾಂತರವಾದಂತೆ ಕಾಂಗ್ರೆಸ್ ಜತೆಗೂಡಿ ಸರಕಾರ ರಚಿಸಿಕೊಂಡು ಪಕ್ಕಾ ಹಿಂದೂ ವಿರೋಧಿ ಧೋರಣೆಗೆ ಒಳಗಾಗಿರುವುದು. ಇದರ ಭಾಗವಾಗಿ ಇಂದು ಅರ್ನಾಬ್ ಅವರ ಹೊಡೆತಕ್ಕೆ ಪತ್ರಿಕಾ
ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ನೀಚತನದ ಅನಾವರಣ.

ಇದರಿಂದ ಇಂದು ಆಗಿರುವುದೇನೆಂದರೆ ಅರ್ನಾಬ್ ಅವರ ಹೆಸರಿನಲಷ್ಟೇ ಗೋಸ್ವಾಮಿ ಇರಬಹುದು. ಆದರೆ ಅವರು ಹೊಡೆತ ತಿಂದ ಸಿಂಹದಂತೆ ಹಿಂದಿಗಿಂತಲೂ ಹೆಚ್ಚು ಬಲಿಷ್ಠವಾಗುತ್ತಾರೆ. ಮೊದಲಿಗಿದ್ದ ಮುಲಾಜು ಈಗ ಇಲ್ಲವಾಗಿ ಇನ್ನೂ ಹೆಚ್ಚಾಗಿ
ತನಗಿರುವ ಪತ್ರಿಕೋದ್ಯಮದ ಸ್ವಾತಂತ್ರವನ್ನು ಅಸ್ತ್ರವಾಗಿ ಬಳಸಿಕೊಂಡು ಅನ್ಯಾಯ ಅನೈತಿಕತೆಗಳ ವಿರುದ್ಧ ದನಿಯೆತ್ತುವ ಉತ್ಸಾಹ ಹುರುಪು ಉತ್ತೇಜನ ದೊರಕಿಬಿಟ್ಟಿದೆ.

ಒಂದೊಮ್ಮೆ ಸವೋಚ್ಚ ನ್ಯಾಯಾಲಯವು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸದೇ ಹೋಗಿದ್ದರೆ ತಿಂಗಳುಗಟ್ಟಲೆ ಅವರನ್ನು
ಜೈಲಿನಲ್ಲಿಟ್ಟು ಸ್ವಾದ್ವಿ ಪ್ರಜ್ಞಾಸಿಂಗ್ ಅವರಿಗೆ ನೀಡಲಾದ ಹಿಂಸೆಗಳನ್ನು ನೀಡಿ ಮಾನಸಿಕವಾಗಿ ದೈಹಿಕವಾಗಿ ಪ್ರಹಾರ ನಡೆಸುವ ಸಾಧ್ಯತೆ ಇತ್ತು. ಅವರನ್ನು ಒಬ್ಬ ಯುದ್ಧಖೈದಿಯಂತೆ ನಡೆಸಿಕೊಂಡು ಇನ್ನುಳಿದ ಪತ್ರಕರ್ತರಿಗೆ ಎಚ್ಚರಿಕೆಯ ಸಂದೇಶ ನೀಡುವ ಹುನ್ನಾರವೂ ಇತ್ತು ಎಂದರೆ ಸುಳ್ಳಲ್ಲ. ಆದರೆ ನಮ್ಮ ದೇಶದಲ್ಲಿ ನ್ಯಾಯಾಲಯ ಇನ್ನೂ ಬಲಿಷ್ಠವಾಗಿದೆ.

ಈಗಲಾದರೂ ಎಲ್ಲಾ ಪತ್ರಕರ್ತರು ಅರ್ನಾಬ್‌ರಂಥ ಪತ್ರಕರ್ತರನ್ನು ಬೆಂಬಲಿಸಿ ಈ ದೇಶದ ಸಂವಿಧಾನ ನೀಡಿರುವ ಪತ್ರಿಕೋ ದ್ಯಮ ಶಕ್ತಿಯನ್ನು ಬಳಸಿಕೊಂಡು ಇದೇ ದೇಶದ ಘನತೆ ಪರಂಪರೆ ಸಾರ್ವಭೌಮತೆಯನ್ನು ಉಳಿಸಿಕೊಳ್ಳುವ ನೈಜವಾದ ಕರ್ತವ್ಯ ವನ್ನು ಮೆರೆಯುವಂತಾಗಲಿ. ಇಂಥ ಪ್ರಕರಣಗಳನ್ನು ಉದಯೋನ್ಮುಖ ಪತ್ರ ರ್ತರು, ಪತ್ರಿಕೋದ್ಯಮ ಓದುತ್ತಿರುವ ವಿದ್ಯಾರ್ಥಿ ಗಳು ಒಂದು ಪಾಠವಾಗಿ ಕಲಿಯಬೇಕಿದೆ. ಒಬ್ಬ ಸುಸಂಸ್ಕೃತ ವಿದ್ಯಾರ್ಥಿ ತನ್ನ ಹದಿನೈದು ವರ್ಷಗಳಷ್ಟು ಕಾಲದ ಓದನ್ನು ಪೂರೈಸಿ ಹೊರ ಬಂದರೆ ಆತನ ಮುಂದಿನ ಬದುಕು ಸಾರ್ಥಕಗೊಳ್ಳಬೇಕಾದರೆ ಈ ಪತ್ರಿಕಾರಂಗ ಹೆಚ್ಚು ಪರಿಣಾಮ ಬೀರುತ್ತದೆ.

ಒಬ್ಬ ತಂದೆಯಾಗಲಿ ಗುರುವಾಗಲಿ ಇಂತಿಷ್ಟು ಮಕ್ಕಳನ್ನು ರೂಪಿಸಬಹುದು. ಆದರೆ ಪತ್ರಿಕೋದ್ಯಮದ ಉತ್ತಮ ವೈಚಾರಿಕತೆ
ಅಸಂಖ್ಯಾತ ಯುವಕರನ್ನು ಮಾದರಿಯಾಗಿಸುವಲ್ಲಿ ಯಶಸ್ವಿಯಾಗುದತ್ತದೆಂಬುದು ಸತ್ಯ. ಅದೇ ನೋಡಿ ದೇಶದ ನಾಲ್ಕನೇ ಸ್ತಂಭ.