Sunday, 15th December 2024

ಮನೆಗಳ ಸುತ್ತಲೂ ಮರಗಳ ಪರಿಷೆ

ಶಶಾಂಕಣ

ಶಶಿಧರ ಹಾಲಾಡಿ

ಪರಿಸರ ಪ್ರೇಮಿಗಳಲ್ಲಿ, ಮರಗಿಡಗಳನ್ನು ಪ್ರೀತಿಸುವವರಲ್ಲಿ ಈ ವಾರ ಒಂದು ಬಹುದೊಡ್ಡ ಗೊಂದಲ ಮತ್ತು ಆತಂಕ
ಮೂಡಿದೆ. ನಾಡನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತೇನೆ ಎಂದು ಹೇಳುವ ನಮ್ಮನ್ನು ಆಳುವವರು ತೆಗೆದುಕೊಳ್ಳು ತ್ತಿರುವ ಕೆಲವು ನಿರ್ಣಯಗಳು ನಿಜಕ್ಕೂ ಅಭಿವೃದ್ಧಿಯನ್ನು ತರುತ್ತವೆಯೇ ಅಥವಾ ಮುಂದೊಂದು ದಿನ ಅವನತಿಯನ್ನು ತರುತ್ತವೆಯೇ ಎಂದು

ಗೊಂದಲ. ಪಶ್ಚಿಮ ಘಟ್ಟಗಳ ಸೆರಗಿನ ಪ್ರದೇಶದ ಕಾಡುಗಳಲ್ಲಿ ಅಕೇಶಿಯಾ ಎಂಬ ಪರಿಸರ ವಿರೋಧಿ ಮರವನ್ನು ಬೆಳೆಸಲು 40 ವರ್ಷಗಳ ಕಾಲ ಖಾಸಗಿಯವರಿಗೆ ಅವಕಾಶ ನೀಡಿದ್ದನ್ನು ಕಂಡು ಈ ಆತಂಕ. ಮಳೆ ತರುವ ಸಹಜ ಕಾಡನ್ನು ರಕ್ಷಿಸಿಟ್ಟುಕೊಳ್ಳ ಬೇಕಾದ ಸರಕಾರವು, ಅಕೇಶಿಯಾದಂತಹ ಏಕಪ್ರಭೇದ ಪ್ಲಾಂಟೇಶನ್‌ಗಳನ್ನು ದಶಕಗಳ ಕಾಲ ಬೆಳೆಸಲು ಅನುಮತಿ ನೀಡಿದರೆ, ಆ ಪ್ರದೇಶ ಸಂಪೂರ್ಣ ಮರುಭೂಮಿ ಯಂತಾಗುವುದಿಲ್ಲವೆ? ಕಳೆದ ಕೆಲವು ದಶಕಗಳಿಂದ ಅಕೇಶಿಯಾ ಬೆಳೆದು ಅದಾಗಲೇ ಸಾಕಷ್ಟು ಪರಿಸರ ಹಾನಿ ಆಗಿರುವುದು ತಿಳಿದಿದ್ದರೂ, ಅದಕ್ಕೆಂದೇ ಅಕೇಶಿಯಾ ಬೆಳೆಯುವುದಕ್ಕೆ ನಿಷೇಧ ಹೇರಲಾಗಿದ್ದರೂ, ಆ ನಿಷೇಧವನ್ನು ತೆರವುಗೊಳಿಸಿ, ಮತ್ತೆ ನಾಲ್ಕು ದಶಕಗಳ ಕಾಲ ಅರಣ್ಯ ಭೂಮಿಯನ್ನು ಖಾಸಗಿಯವರ ವಶಕ್ಕೆ ಒಪ್ಪಿಸಿ, ಅಕೇಶಿಯಾ ಬೆಳೆಸಲು ಅವಕಾಶ ಮಾಡಿಕೊಡ್ಡ ಸರಕಾರದ ನಡೆಯು ಗೊಂದಲ, ಆತಂಕ, ಬೇಗುದಿ, ಹತಾಶೆ, ದುಃಖ, ಆಕ್ರೋಶ ಎಲ್ಲವನ್ನೂ ಪರಿಸರ ಪ್ರೇಮಿಗಳಲ್ಲಿ ಮೂಡಿಸಿದೆ.

ಶಿವಮೊಗ್ಗ ಸರಹದ್ದಿನ ದಟ್ಟ ಅರಣ್ಯಗಳಿಂದಾಗಿ, ಶಿವಮೊಗ್ಗ ಮಾತ್ರವಲ್ಲ ಅಲ್ಲಿಂದ ಮುಂದಿರುವ ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲೂ ಕಾಲದಿಂದ ಕಾಲಕ್ಕೆ ಮಳೆಯಾಗುತ್ತಿದೆ, ಮಲೆನಾಡಿನಿಂದ ಬರುವ ತುಂಗೆಯಲ್ಲಿ ನೀರು ಹರಿದು ಜನರ ದಾಹ ತಣಿಸುತ್ತಿದೆ. ಅಲ್ಲಿನ ಅಮೂಲ್ಯ ಕಾಡುಪ್ರದೇಶದಲ್ಲಿ ಅಕೇಶಿಯಾ ಬೆಳೆದರೆ, ಈಗಾಗಲೇ ಸೂಕ್ಷ್ಮ ಸ್ಥಿತಿಯನ್ನು ತಲುಪಿರುವ ಅಲ್ಲಿನ
ಪರಿಸರ, ಇನ್ನಷ್ಟು ಅಧೋಗತಿಗೆ ಹೋಗುವುದಿಲ್ಲವೆ? ಈ ಕುರಿತು ನಮ್ಮನ್ನು ಆಳುವವರಿಗೆ ಕಾಳಜಿ ಇಲ್ಲವೆ? ಇಂತಹ ಆತಂಕವು ಗಿಡಮರಗಳನ್ನು ಪ್ರೀತಿಸುವವರಿಗೆ, ಆ ಕಾಡಂಚಿನಲ್ಲಿ ವಾಸಿಸುವವರಿಗೆ ಮೂಡಿದೆ.

ಏಕಪ್ರಭೇದ ಬೆಳೆ ಎನಿಸಿರುವ ಅಕೇಶಿಯಾ ಬೆಳೆಯಲು ಅವಕಾಶ ನೀಡಬಾರದು ಎಂಬ ಆಂದೋಲನವೂ ಈಗ ಆರಂಭ ಗೊಂಡಿದ್ದು, ನೈಸರ್ಗಿಕ ಕಾಡನ್ನು ಉಳಿಸಬೇಕೆಂಬ ಕೂಗು ಎದ್ದಿದೆ. ನೈಸರ್ಗಿಕವಾಗಿ ಬೆಳೆಯುವ ಗಿಡ, ಮರಗಳು
ನಿಜವಾದ ಸೌಂದರ್ಯ ದೇವತೆಗಳಿದ್ದಂತೆ. ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವ ಮರಗಳು, ನಮ್ಮ ದಿನಚರಿಗೆ, ಬದುಕಿಗೆ ನೀಡುತ್ತಿರುವ ಕೊಡುಗೆ ಅಪೂರ್ವ. ವಿವಿಧ ಸ್ವರೂಪದ ಮರಗಿಡಗಳು ತುಂಬಿದ ಕಾಡನ್ನು, ಹಕ್ಕಲನ್ನು ನೋಡುವುದೇ ಒಂದು ಆನಂದದ ಅನುಭೂತಿ.

ಅಲ್ಲಿ ಬೆಳೆವ ಬಳ್ಳಿ, ಗಿಡ, ಮರ, ಪೊದೆ, ಅಣಬೆ, ಹಾವಸೆ, ಹಾರುವ ವಿವಿಧ ಹಕ್ಕಿಗಳು, ವಾಸಿಸುವ ಚಿಕ್ಕಪುಟ್ಟ ಪ್ರಾಣಿಗಳು, ಕೀಟ ಗಳು ಎಲ್ಲವೂ ವೈವಿಧ್ಯತೆಯನ್ನು ಕಟ್ಟಿಕೊಡುವುದರಿಂದಲೇ, ಅಂತಹ ಕಾಡು ಪ್ರಾಕೃತಿಕ ಸಮತೋಲನಕ್ಕೂ ಕೊಡುಗೆ ನೀಡುತ್ತದೆ. ಮರ, ಗಿಡ ಎಂದಾಗ ನೆನಪಾಗುವುದು ನಮ್ಮೂರಿನ ಹಳ್ಳಿಯ ಮನೆ ಪ್ರಾಕೃತಿಕ ವಾತಾವರಣ. ಆ ದಿನಗಳಲ್ಲಿ ನಮ್ಮ ಮನೆಯ ಸುತ್ತಲೂ ಮರಗಿಡಗಳಿದ್ದವು. ಮನೆಯಿಂದ ಕೆಲವು ಹೆಜ್ಜೆ ನಡೆದರೆ ಸಣ್ಣದಾದ ಕಾಡು

ಹಳ್ಳಿಯ ಅಂಚಿನ ಕಾಡೆಂದರೆ ಗೊಂಡಾರಣ್ಯವಲ್ಲ, ಬದಲಿಗೆ ಜನರ ಮಿತ ಬಳಕೆಯಿಂದ ತುಸು ಬೆಳಾರವಾಗಿರುವ ಹಕ್ಕಲಿನಂತಹ ಕಾಡು. ಆ ಕಾಡಂಚಿನಲ್ಲಿದ್ದ ನಮ್ಮ ಮನೆಯ ಬಹುಪಾಲು ಅಗತ್ಯಗಳಿಗೆ ಆ ಕಾಡೇ ಆಸರೆ! ನಗರದ ಜನರಿಗೆ ಅಚ್ಚರಿ ಎನಿಸ ಬಹುದು, ಮನೆ ಸುತ್ತಲಿನ ಮರ, ಗಿಡ, ಬಳ್ಳಿಗಳು ನಮ್ಮ ದೈನಂದಿನ ದಿನಚರಿಯ ಮೇಲೂ ದಟ್ಟ ಪ್ರಭಾವ ಬೀರುತ್ತಿದ್ದವು!
ನಮ್ಮ ಹಳ್ಳಿಮನೆಯ ಎದುರಿನಲ್ಲಿದ್ದ ಗಂಟಿ ಕಟ್ಟುವ ಹಟ್ಟಿಯ ಹಿಂಭಾಗದಲ್ಲಿ ಒಂದು ಭಾರೀ ಗಾತ್ರದ ಅಮಟೆ ಮರವಿತ್ತು. ಪ್ರತಿ ಬೇಸಗೆಯ ಕೊನೆಯಲ್ಲಿ ಆ ಮರದ ತುಂಬಾ ಜೊಂಪೆ ಜೊಂಪೆ ಅಮಟೆ ಮಿಡಿಗಳ ರಾಶಿ!

ಈ ಅಮಟೆಕಾಯಿಗಳ ವಿಶೇಷತೆ ಎಂದರೆ, ‘ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ’ ಎಂಬ ಸ್ವರೂಪದ್ದು. ಎಳೆಯ ಅಮಟೆ ಕಾಯಿಯನ್ನು ಬಳಸಿ ಚಟ್ನಿ, ಗೊಜ್ಜು ಮಾಡುತ್ತಿದ್ದರು. ಅಮಟೆ ಕಾಯಿ ತುಸು ಬಲಿತಂತೆ, ಅದರೊಳಗೆ ಗೊರಟು ಬೆಳೆಯ
ತೊಡಗುತ್ತದೆ. ಹದವಾಗಿ ಬೆಳೆದ, ಗೊರಟು ಇನ್ನೂ ಬಲಿಯದ ಅಮಟೆಕಾಯಿಯನ್ನು ಉಪ್ಪಿನಕಾಯಿ ತಯಾರಿಸಲು ಉಪಯೋಗ ಸುತ್ತಿದ್ದರು. ಇಡೀ ಕಾಯಿಯನ್ನು ಉಪ್ಪಿನಲ್ಲಿ ನೆನೆ ಹಾಕಿ ತಯಾರಿಸುವ ಆ ಉಪ್ಪಿನ ಕಾಯಿಗೆ ವಿಶಿಷ್ಟ ರುಚಿ.

ಕೆಲವು ವಾರಗಳು ಕಳೆದರೆ, ಅಮೆಟೆಕಾಯಿಯ ಒಳಗಿನ ಓಟೆಯು ಗಟ್ಟಿಯಾಗುತ್ತದೆ. ಈ ಹದದಲ್ಲಿರುವ ಕಾಯಿಯನ್ನು ಕೊಯ್ದು, ಗೊರಟನ್ನು ಹೆಚ್ಚಿ ತೆಗೆದು, ಕಾಯಿಯ ಭಾಗದಿಂದ ಉಪ್ಪಿನ ಕಾಯಿ ತಯಾರಿಸಿದರೆ, ಅದಕ್ಕೆ ಬೇರೆಯದೇ ರುಚಿ. ಸಾಂಬಾರು ತಯಾರಿಸುವಲ್ಲೂ ಅಮಟೆಕಾಯಿಯ ಉಪಯೋಗವುಂಟು. ಬೆಂಡೆ ಕಾಯಿ, ಸೌತೆ ಕಾಯಿ ಮೊದಲಾದ ತರಕಾರಿಗಳ ಸಾಂಬಾರಿಗೆ ಅಮಟೆಕಾಯಿಯನ್ನು ಜಜ್ಜಿ ಹಾಕಿದರೆ, ಅದರ ಹುಳಿಯಿಂದ ಆ ಪದಾರ್ಥದ ರುಚಿಯೇ ಮೇಲಿನ ಮಜಲನ್ನು ತಲುಪುತ್ತದೆ!

ಮಳೆಗಾಲದಲ್ಲಿ ನಮ್ಮ ಮನೆಗಳಲ್ಲಿ ವಾರಗಟ್ಟಲೆ ಮಾಡುತ್ತಿದ್ದ ಹುರುಳಿ ಸಾರಿಗೆ ಅಮಟೆ ಕಾಯಿಯನ್ನು ಜಜ್ಜಿ ಹಾಕಿದರಂತೂ, ಅದ್ಭುತ ರುಚಿ.  ಎರಡೆರಡು ದಿನ ಕುದಿಸಿಡುವ ಹುರುಳಿ ಸಾರಿನಲ್ಲಿರುವ ಅಮಟೆಕಾಯಿಯ ಗೊರಟಿನ ರುಚಿಯೇ ವಿಶಿಷ್ಟ. ನಮ್ಮ ಮನೆ ಎದುರಿನಲ್ಲೇ ಇದ್ದ ಆ ಭಾರೀ ಅಮಟೆ ಮರದಲ್ಲಿ ಕಾಯಿಗಳಾದವೆಂದರೆ, ನಮಗೆ ಮಾತ್ರವಲ್ಲ, ಸುತ್ತಮುತ್ತಲಿನ ಎಲ್ಲರಿಗೂ ಮೂರು ತಿಂಗಳುಗಳ ಕಾಲ ಹುಣಿಸೆಹಣ್ಣಿನ ವೆಚ್ಚದ ಯೋಚನೆಯೇ ಇಲ್ಲ ಎಂದೇ ಅರ್ಥ.

ನಮ್ಮ ಮನೆ ಎದುರಿನಲ್ಲಿ ಭಾರೀ ಗಾತ್ರದಲ್ಲಿ ಬೆಳೆದಿದ್ದ ಇನ್ನೊಂದು ಮರವೆಂದರೆ ಬಾಗಾಳು ಮರ. (ಬಕುಳ, ರಂಜ). ಇದರ ಮತ್ತು ನಮ್ಮ ಬಾಂಧವ್ಯವೇ ಬೇರೆ ರೀತಿಯದು. ಹಿಂದಿನ ತಲೆಮಾರಿನವರಿಗೆ ಆ ರೀತಿಯ ಮರಗಳೆಂದರೆ ಬಹು ಪ್ರೀತಿ; ದಟ್ಟವಾಗಿ
ಹರಡಿಕೊಂಡು, ಮನೆಯ ಮೇಲೆ ತೂಗು ವಂತಿದ್ದರೂ, ಅಂತಹ ಮರದ ಜತೆಯಲ್ಲೇ ತಮ್ಮ ಜೀವನವನ್ನು ಕಟ್ಟಿಕೊಳ್ಳುವ ನಮ್ಮೂರಿನವರ ಮನಸ್ಥಿತಿಯೇ ಒಂದು ವಿಸ್ಮಯ. ಹಸಿರು ಎಲೆಗಳ, ದಟ್ಟ ಪರ್ಣರಾಶಿಯ ಆ ಬಾಗಾಳು ಮರದ ವಿಶೇಷತೆ
ಎಂದರೆ, ಬೇಸಗೆಯಲ್ಲಿ ಆ ಮರದಲ್ಲಿ ಅರಳುತ್ತಿದ್ದ ನಕ್ಷತ್ರಾಕಾರದ ಸುಂದರ ಬಿಳಿ ಪುಟಾಣಿ ಹೂವುಗಳು.

ಎತ್ತರವಾಗಿ ಬೆಳೆದಿದ್ದ ಆ ಮರದ ಟೊಂಗೆಯಿಂದ ಕಳಚಿಕೊಂಡು, ಮಧುರವಾಗಿ ತೇಲುತ್ತಾ ಬೀಳುವ ಬಾಗಾಳು ಹೂವುಗಳೆಂದರೆ ನಮ್ಮೂರಿನವರಿಗೆ ಬಲು ಇಷ್ಟ. ಆ ಹೂವುಗಳನ್ನು ಆರಿಸಲು ಸುತ್ತಲಿನ ನಾಲ್ಕೆಂಟು ಮನೆಗಳ ಮಕ್ಕಳು ಪ್ರತಿಸಂಜೆ ಬರುತ್ತಿದ್ದರು.
ಮರದ ಕೆಳಗಿದ್ದ ಅಗೇಡಿಯಲ್ಲಿ ಕಾಯುತ್ತಾ ಕೂರುತ್ತಿದ್ದ ಮಕ್ಕಳಿಗೆ ಆ ಬೃಹತ್ ಮರ ನಿರಾಸೆ ಮಾಡುತ್ತಿರಲಿಲ್ಲ. ಸಂಜೆ ಐದೂವರೆ ಯಿಂದ ಬೀಳಲು ಆರಂಭಿಸುವ ಹೂವುಗಳು ಏಳು ಗಂಟೆಯ ತನಕವೂ ಮುಂದುವರಿದು, ಎಲ್ಲರ ಬುಟ್ಟಿಯಲ್ಲೂ ಅರ್ಧ ತುಂಬು
ವಷ್ಟು ಬಿಳಿ ಪುಷ್ಪಗಳು!

ಅಗೇಡಿಯಲ್ಲಿ ಬಿದ್ದ ಆ ಹೂವು ಳನ್ನು ಆರಿಸಿ, ತೊಳೆದು, ಬಾಳೆ ನಾರಿನಿಂದ ಪೋಣಿಸಿ, ಮಾಲೆ ಮಾಡಿ, ತಲೆಯ ತುರುಬಿಗೆ ಮುಡಿ
ದುಕೊಳ್ಳುತ್ತಿದ್ದ ಅಂದಿನ ಮಹಿಳೆಯರ ಅಭಿರುಚಿಗೆ ಸಾಟಿಯುಂಟೆ! ತಲೆಗೆ ಮುಡಿದು, ದೇವರಿಗೆ ಅರ್ಪಿಸಿದ ನಂತರ, ಇನ್ನೂ ಉಳಿದಿರುವ ಬಾಗಾಳು ಹೂವಿನ ಮಾಲೆಯನ್ನು ಒಣಗಿಸಿಯೂ ಇಡುತ್ತಿದ್ದರು.

ಒಣಗಿದರೂ ಅದರಲ್ಲಿ ಸುಗಂಧ! ನಮ್ಮೂರಿನ ಮದುವೆಗಳಲ್ಲಿ ಮದುಮಕ್ಕಳು ಬಾಗಾಳು ಹೂವಿನ ಮಾಲೆಗಳನ್ನು ಬದಲಾಯಿಸಿ ಕೊಳ್ಳಲೇಬೇಕು. ಒಣಗಿದರೂ ಸುಗಂಧ ಬೀರುವ ಬಾಗಾಳು ಹೂವಿನ ರೀತಿಯೇ, ಜೀವನದಲ್ಲಿ ಕಷ್ಟಗಳು ಎದುರಾದರೂ ಆ ದಾಂಪತ್ಯ ನೆಮ್ಮದಿಯಿಂದ ಇರಲಿ ಎಂಬ ಆಶಯ. ನಮ್ಮ ಮನೆಯ ಎದುರಿನಲ್ಲೇ ಇದ್ದ ಒಂದೆರಡು ಮಾವಿನ ಮರಗಳಂತೂ ಮನೆಯವರಿಗೆಲ್ಲಾ ಅಚ್ಚುಮೆಚ್ಚು. ಆ ಮರಗಳ ಪೈಕಿ ಒಂದು ಮರವು ಕಾಟು ಮಾವಿನ ಮರ.

ಎರಡು ವರ್ಷಕ್ಕೊಮ್ಮೆ ಆ ಭಾರೀ ಮರದಲ್ಲಿ ಅಕ್ಷರಶಃ ಸಾವಿರಾರು ಮಾವಿನ ಮಿಡಿಗಳು ಆಗುತ್ತಿದ್ದವು. ಆ ಹುಳಿ ಮಾವಿನ ಮಿಡಿಗಳು ಹದವಾಗಿ ಬಲಿತಾಗ, ಕೊಯ್ದು, ಚೊಕ್ಕಟಮಾಡಿ, ಅದರಿಂದ ಮಿಡಿ ಉಪ್ಪಿನ ಕಾಯಿ ತಯಾರಿಸುವ ಪರಿ ಅದೆಂತಹ
ಸಂಭ್ರಮದ್ದು! ಮಾವಿನ ಮಿಡಿ ಶ್ರಾಯ ಬಂತೆಂದರೆ, ಉಪ್ಪಿನ ಕಾಯಿ ಮಾಡುವ ಕಂಬಳ! ಎಲ್ಲರ ಮನೆಯಲ್ಲೂ ಉಪ್ಪಿನಕಾಯಿ ಮಾಡುವ ತರಾತುರಿ.

ನಮ್ಮ ಮನೆಯ ಎದುರಿದ್ದ ಆ ಎತ್ತರವಾದ ಕಾಟುಮಾವಿನ ಮಿಡಿಗೆ ವಿಶೇಷವಾದ ಪರಿಮಳ ಇಲ್ಲ, ಹುಳಿ ಜಾಸ್ತಿ. ಆದ್ದರಿಂದ, ಅಬ್ಲಿಕಟ್ಟೆಯಿಂದ ಒಂದಷ್ಟು ಸುವಾಸನೆ ಇರುವ ಮಿಡಿ ತಂದು ಇದಕ್ಕೆ ಬೆರೆಸುತ್ತಿದ್ದರು. ಎರಡು ವರ್ಷಗಳಾದರೂ ಕೆಡದ ಆ ರುಚಿಕರ ಮಿಡಿ ಉಪ್ಪಿನ ಕಾಯಿಯು, ಊಟಕ್ಕೆ ಮಾತ್ರವಲ್ಲ, ಜ್ವರ ಮೊದಲಾದ ಥಂಡಿ ಕಾಯಿಲೆಗಳನ್ನು ಓಡಿಸುವ ಔಷಧ ವಾಗಿಯೂ ಉಪಯೋಗವಾಗುತ್ತಿತ್ತು!

ದನಕರುಗಳು ಮಳೆಯಲ್ಲಿ ನೆನದು ಥಂಡಿ ಹಿಡಿದು ಕಾಯಿಲೆ ಬಿದ್ದಾಗ, ಅರ್ಧ ಲೋಟ ಉಪ್ಪಿನಕಾಯಿ ರಸ ಕುಡಿಸುತ್ತಿದ್ದರು. ಆರು
ತಿಂಗಳಿಗೂ ಹಳೆಯದಾದ ಉಪ್ಪಿನಕಾಯಿಯಲ್ಲಿ ಪ್ರೊ ಬಯೊಟಿಕ್ ಅಂಶವಿದ್ದು, ಜೀರ್ಣಕ್ರಿಯೆ ಹೆಚ್ಚಿಸಲು ಸಹಕಾರಿ ಎಂದು ಈಚಿನ ವಿಜ್ಞಾನ ತಿಳಿಸಿದೆ; ಉಪ್ಪಿನ ಕಾಯಿ ಸೇವನೆಯಿಂದ ಅಂತಹದೊಂದು ಆರೋಗ್ಯ ಲಾಭವಿದೆಯೆಂದು ನಮ್ಮ ಹಿಂದಿನ ತಲೆಮಾರಿಗೆ ಅರಿವಿತ್ತು ಎಂಬುದು ಅಚ್ಚರಿಯ ವಿಚಾರ.

ನಮ್ಮ ಹಳ್ಳಿ ಮನೆಗೆ ತಾಗಿಕೊಂಡು ಇನ್ನೊಂದು ಮಾವಿನ ಮರವಿತ್ತು. ಅದಕ್ಕೆ ‘ಭಟ್ಕಳ ಮಾವು’ ಎಂಬ ಹೆಸರು. ‘ಗೊರಟು ಕಸೆ’ ಎಂದೂ ಕರೆಯುವುದುಂಟು. ರುಚಿಕರ ಹಣ್ಣುಗಳನ್ನು ನೀಡುತ್ತಿದ್ದ ಆ ಭಟ್ಕಳ ಮಾವಿನ ಹಣ್ಣಿನ ಗೊರಟಿನ ವಿಶೇಷತೆ ಎಂದರೆ, ಅಂಗಳದ ಮೂಲೆಯಲ್ಲಿ ಅದನ್ನು ಇಟ್ಟರೆ, ಕೆಲವೇ ದಿನಗಳಲ್ಲಿ ಒಂದು ಗೊರಟಿನಿಂದ ಐದು ಮೊಳೆಗಳು ಒಡೆದು, ಹಸಿರು ಗಿಡಗಳು ಬೆಳೆಯುತ್ತಿದ್ದವು!

ಕಸಿ ಮಾವಿನ ಹಣ್ಣಿ ನಷ್ಟೇ ಗಾತ್ರದ ಹಣ್ಣು ಬಿಡುತ್ತಿದ್ದ ಆ ಮಾವಿನ ಮರ ದಲ್ಲಿ, ಒಂದೊಂದು ವರ್ಷ ನೂರಾರು ಕಾಯಿಗಳ ಪರಿಶೆ! ನಾವೂ ತಿಂದು, ಆಚೀಚಿನ ಮನೆಗಳವರಿಗೆ ಕೊಟ್ಟರೂ, ಮಿಕ್ಕು ಉಳಿಯುವಷ್ಟು ಕಾಯಿ ಬಿಡುತ್ತಿತ್ತು ಆ ‘ಭಟ್ಕಳ’ ಮಾವಿನ ಮರ. ಆ ಮಾವಿನ ಕಾಯಿಯಿಂದ ಚಟ್ನಿ, ಗೊಜ್ಜು, ಕಾಯಿರಸ, ಕೆತ್ತೆ ಉಪ್ಪಿನ ಕಾಯಿ, ಹೋಳು ಉಪ್ಪಿನ ಕಾಯಿ, ಹಿಂಡಿ ಗೊಜ್ಜು, ಸಾಸಿವೆ, ರಸಾಯನ, ಪಾಯಸ ತಯಾರಿಸುತ್ತಿದ್ದರು! ಜತೆಗೆ, ಒಂದೊಂದು ವರ್ಷ ಬೇಸಿಗೆಯಲ್ಲಿ ಹಣ್‌ಚೆಟ್ ಸಹ ತಯಾರಿಸಿ, ಮಳೆಗಾಲದಲ್ಲಿ ಗೊಜ್ಜು ಮಾಡುತ್ತಿದ್ದರು.

ಮಾವಿನ ಹಣ್ಣಿನ ರಸವನ್ನು ಬಿಸಿಲಿನಲ್ಲಿ ಒಣಗಿಸಿ, ಹಾಳೆ ಯ ಸ್ವರೂಪಕ್ಕೆ ತಂದು, ದೂಪದ ಎಲೆಯಲ್ಲಿ ಮಡಚಿ, ಮಳೆಗಾಲದ ತನಕ ಕಾಪಿಡುವ ವಿಧಾನವಾಗಿದ್ದ ಹಣ್‌ಚೆಟ್ ಮಾಡುವ ಕಲೆ ಈಗ ಬಹುತೇಕ ಮರೆತೇ ಹೋಗಿದೆ. ಈ ಮರದ ಮಾವಿನ ಕಾಯಿ ಗಳನ್ನು ದೊಡ್ಡ ಭರಣಿಯಲ್ಲಿ ಉಪ್ಪುನೀರಿನಲ್ಲಿ ನೆನೆಸಿಟ್ಟು, ಮಳೆಗಾಲದಲ್ಲಿ ಚಟ್ನಿ ಮಾಡುವ ಪರಿ ಒಂದು ಸೋಜಿಗ. ಮಾವಿನ ಕಾಯಿಯನ್ನು ಹೋಳುಗಳಾಗಿ ಹೆಚ್ಚಿ, ಚೆನ್ನಾಗಿ ಒಣಗಿಸಿಟ್ಟುಕೊಂಡು, ಮಳೆಗಾಲದಲ್ಲಿ ಹುಣಿಸೆಹಣ್ಣಿನ ಬದಲಿಗೆ ಉಪಯೋಗಿ ಸುವ ಪದ್ಧತಿಯೂ ಇದೆ.

ಮನೆ ಸುತ್ತಲೂ ಹರಡಿದ್ದ ಮರಗಳಲ್ಲಿ ಹಲಸಿನಮರವೊಂದರ ವಿಶೇಷತೆಯನ್ನು ಹೇಳಲೇಬೇಕು. ಆ ಮರದ ಬುಡ ಪಕ್ಕದವರ ಜಾಗದಲ್ಲಿ, ಆದರೆ ಅದರ ಹತ್ತಾರು ರೆಂಬೆಕೊಂಬೆಗಳು ವಿಶಾಲವಾಗಿ ಹರಡಿಕೊಂಡು, ನಮ್ಮ ಮನೆಯ ಮಾಡನ್ನು ಕವಚಿ ಕೊಂಡಿತ್ತು. ಆ ರೆಂಬೆಕೊಂಬೆಗಳನ್ನು ಏರಿ ಬರುವ ನಾಗರ ಹಾವುಗಳು, ನಮ್ಮ ಮನೆಯ ಮಾಡಿನಲ್ಲಿ ಸದಾಕಾಲ ಬಿಡಾರ ಹೂಡಿದ್ದ ಇಲಿಗಳನ್ನು ಹಿಡಿಯಲು ನಮ್ಮ ಮನೆಯೊಳಗೂ ಬರುತ್ತಿದ್ದವು. ಆದರೂ ಆ ಭಾರೀ ಹಲಸಿನ ಮರವು ನಮಗೆ
ತೊಂದರೆ ಕೊಡುತ್ತಿದೆ ಎಂದು ನಮ್ಮ ಹಿರಿಯರು ಎದೂ ದೂರು ನೀಡಿದವರೇ ಅಲ್ಲ. ಆ ಮರದಲ್ಲಿ ಜಾಸ್ತಿ ಕಾಯಿಗಳಾದಾಗ, ನಮಗೂ ನಾಲ್ಕಾರು ಕಾಯಿಗಳು ಸಿಗುತ್ತಿದ್ದವು. ಅದರಿಂದ ಹಲಸಿನ ಹಪ್ಪಳವನ್ನು ಮಾಡುತ್ತಿದ್ದರು.

ಹಲಸಿನ ಮರವು ಕಲ್ಪವೃಕ್ಷ ಸ್ವರೂಪಿ. ಹಲಸಿನ ಕಾಯಿಯ ಪಲ್ಯ, ಸಾಂಬಾರು, ದೋಸೆ, ಹಪ್ಪಳ, ಕಡುಬು, ಹಣ್ಣಿನ ಪಾಯಸ, ಕಡುಬು, ಮುಳುಕ, ಚಿಪ್ಸ್, ಹಲಸಿನ ಮಗಡದ ಪಲ್ಯ, ಹಲಸಿನ ಬೀಜದ ರೊಟ್ಟಿ, ಸಿಹಿ ಎಲ್ಲವನ್ನೂ ತಯಾರಿಸುವ ಪದ್ಧತಿ ಇದೆ. ನಮ್ಮ ಮನೆಯ ಸುತ್ತಲೂ ಇದ್ದ ಇತರ ಮರಗಳೆಂದರೆ, ಹುಳಿ ಕಾಯಿ ಬಿಡುವ ಬಿಂಬಲ, ಕರಿಬೇವು, ಪೇರಳೆ, ಹೆಬ್ಬಲಸು ಇನ್ನೂ
ಅದೆಷ್ಟೋ. ಆದರೆ, ಈಗಿನ ನಮ್ಮೂರಿನ ಈಗಿನ ತಲೆಮಾರಿನ ಜನರು ಮರಗಳನ್ನು ಮನೆಯಿಂದ ತುಸು ದೂರ ಇಟ್ಟಿದ್ದಾರೆ!

ನಮ್ಮ ಹಳ್ಳಿಮನೆಯ ಸುತ್ತ ಇದ್ದ ಮರಗಳು ನಮಗೆ ನೆರಳನ್ನು ಕೊಡುವ ಜತೆಯಲ್ಲೇ, ತರಕಾರಿ, ಹೂವು, ಹಣ್ಣುಗಳನ್ನು ಸರಬರಾಜು ಮಾಡುತ್ತಿದ್ದ ಆ ವಿಸ್ಮಯಕ್ಕೆ ಪ್ರಮುಖ ಕಾರಣವೆಂದರೆ ಜೀವ ವೈವಿಧ್ಯತೆ. ಮನೆ ಸುತ್ತ ಬೆಳೆದು ನಿಂತ ಮರಗಳು ಮತ್ತು ಸನಿಹದ ಕಾಡಿನಲ್ಲಿರುವ ಜೀವವೈವಿಧ್ಯವು ಇಡೀ ಹಳ್ಳಿಯ ಜನರ ಜೀವನಕ್ಕೆ ಅದೆಂತಹ ಮೌಲಿಕ ಕೊಡುಗೆಯನ್ನು ನೀಡುತ್ತಿದ್ದವು ಎಂದು ಗುರುತಿಸಿದರೆ ಅಚ್ಚರಿ ಮೂಡುತ್ತದೆ. ಕಾಡಿನ, ನಿಸರ್ಗದ ಆರೋಗ್ಯ ಕಾಪಾಡಲು ಸಹ ವಿವಿಧ ಜಾತಿಯ ಗಿಡ, ಮರ, ಬಳ್ಳಿಗಳು ಅಗತ್ಯ ಬೇಕು.

ಅಂತಹ ಸಸ್ಯರಾಶಿ, ಪ್ರಾಣಿ ಸಂಕುಲ ಇರುವ ಕಾಡನ್ನು ನಾಶ ಮಾಡಿ, ದಶಕಗಳ ಕಾಲ ಅಕೇಶಿಯಾ ಎಂಬ ಬಕಾಸುರ ಸ್ವರೂಪಿ
ಏಕಪ್ರಭೇದದ ಮರಗಳನ್ನು ಬೆಳೆಸುವುದೆಂದರೆ, ನಮ್ಮ ಮುಂದಿನ ತಲೆಮಾರಿನ ಭವಿತವ್ಯಕ್ಕೆ ನಾವೇ ಕೊಳ್ಳಿಯಿಟ್ಟಂತೆ.