ತನ್ನಿಮಿತ್ತ
ಲಕ್ಷ್ಮೀಕಾಂತ್ ಎಲ್
ಭಾರತ ಹೇಳಿಕೇಳಿ ಸಂಸ್ಕೃತಿಗಳ ತವರು. ಕಲೆ ಸಾಹಿತ್ಯದಲ್ಲಿ ಭಾರತ ತನ್ನದೇ ಆದ ವೈಭವವನ್ನು ಪಡೆದಿದೆ.
ಅದರಲ್ಲಿ ನಾಟ್ಯ ಕಲೆಗಳಿಗೆ ಸುಮಾರು 4000 ವರ್ಷಗಳ ದೀರ್ಘ ಪರಂಪರೆಯಿದೆ. ಪಾಣಿನಿಯ ಅಷ್ಟಾ ಧ್ಯಾಯೀ ಮತ್ತು ಪತಂಜಲಿಯ ಮಹಾಭಾಷ್ಯ ಗ್ರಂಥಗಳಲ್ಲಿ ನಾಟ್ಯದ ಪ್ರಸ್ತಾಪವಿದೆ.
ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳಲ್ಲಿ ನರ್ತನದ ವಿವರಗಳಿವೆ. ಕಾಳಿದಾಸನಿಂದ
ಹಿಡಿದು ಅನೇಕ ನಾಟಕಕಾರರ ಕೃತಿಗಳಲ್ಲಿ ನೃತ್ಯಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ವಿವರಗಳನ್ನು ದಾಖಲಿಸ ಲಾಗಿದೆ. ಭಾರತದಲ್ಲಿ ನಾಟ್ಯದ ವಿವರಣೆಯನ್ನೇ ಪ್ರಧಾನ ವಿಷಯವಾಗಿಸಿಕೊಂಡ ಅನೇಕ ಗ್ರಂಥಗಳು
ರಚನೆಗೊಂಡಿವೆ. ಅವುಗಳ ಪೈಕಿ ಭರತನ ನಾಟ್ಯಶಾಸ್ತ್ರ ಒಂದು ವಿಶಿಷ್ಟ ಕೃತಿ. ನಂದಿಕೇಶ್ವರನ ಅಭಿನಯ ದರ್ಪಣ ಇಂಥದೇ ಇನ್ನೊಂದು ಗ್ರಂಥ.
ವಿಷ್ಣುಧರ್ಮೋತ್ತರ ಪುರಾಣ, ಮಾನಸೋಲ್ಲಾಸ, ಶಿವತತ್ತ್ವ ರತ್ನಾಕರ ಮೊದಲಾದ ವಿಶ್ವಕೋಶ ರೂಪದ ಗ್ರಂಥಗಳಲ್ಲಿ ನಾಟ್ಯದ ವಿವರಗಳಿವೆ. ಈ ಎಲ್ಲ ಕೃತಿಗಳು ಭರತಖಂಡದಲ್ಲಿ ಪ್ರಚಲಿತವಿದ್ದ ನೃತ್ಯಕಲೆಯ ವೈಶಿಷ್ಟ್ಯ ಹಾಗೂ ಅದರ ರೂಪರೇಷೆಗಳನ್ನು ಸಮಗ್ರವಾಗಿ ವಿವರಿಸುವ ಆಕರ ಗ್ರಂಥಗಳಾಗಿವೆ. ಭಾವ ತಾಳ ಲಯಯುಕ್ತವಾದ ಅಭಿನಯವೇ ನೃತ್ಯ. ನೃತ್ಯದಲ್ಲಿ ಲಾಸ್ಯ, ತಾಂಡವ ಎಂದು ಎರಡು ಬಗೆ.
ಉದ್ಧತ ನೃತ್ಯವೇ ತಾಂಡವ; ಸುಕುಮಾರ ನೃತ್ಯವೇ ಲಾಸ್ಯ. ಪುರುಷ ಕರ್ತೃಕವಾದ ಉದ್ದತ ನೃತ್ಯವನ್ನು ತಾಂಡವವೆಂದೂ ಸ್ತ್ರೀ ಕರ್ತೃಕವಾದ ಲಾವಣ್ಯಯುಕ್ತ ನೃತ್ಯವನ್ನು ಲಾಸ್ಯವೆಂದೂ ಕರೆಯಲಾಗುತ್ತದೆ. ನೃತ್ಯದಲ್ಲಿ ಮಾರ್ಗ-ದೇಸಿ ಎಂಬ ಎರಡು ಪ್ರಭೇದಗಳಿವೆ. ಪರಂಪರೆಯಿಂದ ಕಾಲದೇಶ ಬದ್ಧವಾಗಿ ಉಳಿದು ಬಂದದ್ದು ದೇಸಿ ಅಥವಾ ಜನಪದವಾದರೆ ಸಂಪ್ರದಾಯಬದ್ಧ ಮತ್ತು ಶಾಸಪ್ರಣೀತವಾದದ್ದು ಮಾರ್ಗ. ಭಾರತದಲ್ಲಿ ಈ ಎರಡೂ ವರ್ಗದ ಅನೇಕ ನೃತ್ಯಗಳು ಪ್ರಚಲಿತವೆ.
ನಾಟ್ಯ ನರ್ತನದ ಬಗ್ಗೆ ವಿವರಣೆ ಇಂದಿನ ದಿನಕ್ಕೆ ಸೂಕ್ತ. ಏಕೆಂದರೆ ಏಪ್ರಿಲ್ 29 ಅಂತಾರಾಷ್ಟ್ರೀಯ ನೃತ್ಯ
ದಿನ. ಯುನೆಸ್ಕೋದ ಅಂಗವಾದ ಇಂಟರ್ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಥಿಯೇಟರ್ಸ್ ನೃತ್ಯ ಸಮಿತಿಯು 1982ರಲ್ಲಿ ಅಂತಾರಾಷ್ಟ್ರೀಯ ನೃತ್ಯ ದಿನ ಆಚರಣೆಯನ್ನು ಜಾರಿಗೆ ತರಲು ನಿರ್ಧರಿಸಿತು.
ಫ್ರಾನ್ಸಿನ ಪ್ರಸಿದ್ಧ ನೃತ್ಯ ಕಲಾವಿದ ಜೀನ್ ಜಾರ್ಜ್ ನೊವೇರೆ ಅವರು 1727ರ ಏಪ್ರಿಲ್ 29 ರಂದು ಜನಿಸಿದ ಹಿನ್ನೆಲೆಯಲ್ಲಿ ವಿಶ್ವ ನೃತ್ಯ ಕಲೆಗೆ ಗೌರವಪೂರ್ವಕವಾಗಿ ಈ ದಿನದ ಸಂಭ್ರಮಾಚರಣೆ ಜಾರಿಗೆ ಬಂತು.
ಯಾರೀತ ಜೀನ್ ಜಾರ್ಜ್?: ಜೀನ್ ಜಾರ್ಜ್ ನೊವೇರೆ ಬ್ಯಾಲೆಗೆ ಹೊಸ ಅಯಾಮ ನೀಡಿದವರು. ಇವರು ಸಾಂಪ್ರದಾಯಿಕವಾಗಿ ಪ್ರದರ್ಶಿತವಾಗುತ್ತಿದ್ದ ಬ್ಯಾಲೆ ಪದ್ಧತಿಯನ್ನು ಶಾಸೀಯವಾಗಿ ವಿಮರ್ಶೆಗೆ ಒಳಪಡಿಸಿ ದರು. ಅಲ್ಲಿಂದ ಮುಂದೆ, ಶರೀರದ ಅಂಗಾಗಗಳು ಮತ್ತು ಮುಖ ಭಾವಗಳ ಮೂಲಕ ರಸಭಾವಗಳನ್ನು ಪ್ರದರ್ಶಿಸುವ ಪದ್ಧತಿ ಹೆಚ್ಚಾಗಿ ಬಳಕೆಗೆ ಬಂದು, ಕೌಶಲದ ಕಡೆಗೆ ಹೆಚ್ಚಿನ ಕೃಷಿ ನಡೆಯ ತೊಡಗಿತು.
ನೊವೇರೆ ಅವರಿಂದ ನೃತ್ಯಾಭಿನಯಗಳ ಮೂಲಕ ಕಥೆಯನ್ನು ಮುನ್ನಡೆಸುವಲ್ಲಿಯೂ ಹೊಸತನ ರೂಢಿಗೆ ಬಂತು. 18ನೇ ಶತಮಾನದ ಕೊನೆಯಲ್ಲಿ, ಅವರು ನೃತ್ಯ ಸಂಯೋಜನೆ ಕ್ಷೇತ್ರದಲ್ಲಿ ಎಲ್ಲಾ ಕೌಶಲ್ಯ ಮತ್ತು ಅನುಭವಗಳನ್ನು ಸಂಕ್ಷಿಪ್ತಗೊಳಿಸಿದರು ಮತ್ತು ತಜ್ಞರಲ್ಲಿ ಜನಪ್ರಿಯವಾದ ‘ಲೆಟರ್ಸ್ ಆನ್ ಡ್ಯಾನ್ಸಿಂಗ್ ಅಂಡ್ ಬ್ಯಾಲೆಟ್’ ಕೃತಿಯಲ್ಲಿ ಅದರ ಪ್ರಮುಖ ಲಕ್ಷಣಗಳನ್ನು ಗಮನಿಸಿದರು.
ಹೀಗಾಗಿ ಅವರ ಜನ್ಮ ದಿನವನ್ನು ವಿಶ್ವ ನೃತ್ಯ ಕಲೆಗೆ ಗೌರವಪೂರ್ವಕವಾಗಿ ಅಂತಾರಾಷ್ಟ್ರೀಯ ನೃತ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತದಲ್ಲಿ ಪ್ರಖ್ಯಾತಿ ಪಡೆದ ನೃತ್ಯ ಪ್ರಕಾರಗಳೆಂದರೆ ಕಥಕ್, ಕಥಕಳಿ, ಕೂಚಿಪುಡಿ, ಭರತನಾಟ್ಯ, ಮಣಿಪುರಿ, ಒಡಿಸಿ ಮುಂತಾದವು.
ಭರತನಾಟ್ಯ ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಪ್ರಚಲಿತ ವಿರುವ ನೃತ್ಯ ಪದ್ಧತಿ. ಇದರಲ್ಲಿ ನೃತ್ತ, ನೃತ್ಯ, ನಾಟ್ಯ ಎಂದು ಮೂರು ಭಾಗಗಳಿವೆ. ಕಥಕ್ ನೃತ್ಯ ಪ್ರಕಾರ ರಾಜಸ್ಥಾನ, ಉತ್ತರಪ್ರದೇಶ ಮೊದಲಾದ ಕಡೆಗಳಲ್ಲಿ ಪ್ರಚಲಿತವಿದೆ. ಇದು ಲಾಸ್ಯಪ್ರಧಾನ ನೃತ್ಯ. ಪೌರಾಣಿಕ ಕಥೆಗಳನ್ನು ಅದರಲ್ಲಿಯೂ ವಿಶೇಷವಾಗಿ ಕೃಷ್ಣಕಥೆಗಳನ್ನು ಅಭಿನಯಿಸುತ್ತಿದ್ದುದರಿಂದ ನೃತ್ಯಕ್ಕೆ ಈ ಹೆಸರು
ಬಂತೆಂಬ ಅಭಿಪ್ರಾಯವಿದೆ. ನೃತ್ಯಕಲಿಸುವ ಉಪಾಧ್ಯಾಯರನ್ನು ಕಥಕ ಅಥವಾ ಕಥಿಕ ಎನ್ನುತ್ತಾರೆ.
ಮುಸ್ಲಿಂ ಸಂಸ್ಕೃತಿಯ ಪ್ರಭಾವ ಒತ್ತಡಗಳಿಂದಾಗಿ ಈ ನೃತ್ಯದಲ್ಲಿ ಅನೇಕ ಮಾರ್ಪಾಡುಗಳುಂಟಾದುವು.
ಕಥಕಳಿ ಕೇರಳದಲ್ಲಿ ಪ್ರಚಲಿತರುವ ಪ್ರಸಿದ್ಧ ನೃತ್ಯ ಪ್ರಕಾರ. ಕೇರಳದಲ್ಲಿ ಮಧ್ಯಯುಗದಲ್ಲಿ ಪ್ರಚಲಿತದ್ದ
ಕೃಷ್ಣನಾಟ್ಟಂ ಅನಂತರ ಸುಮಾರು 17ನೆಯ ಶತಮಾನದಲ್ಲಿ ಹುಟ್ಟಿಕೊಂಡ ರಾಮನಾಟ್ಟಂ ನಾಟ್ಯ
ಸಂಪ್ರದಾಯಗಳು ಕಾಲ ಕ್ರಮೇಣ ಅಟ್ಟಕಥಾ ಎಂದಾಗಿ ಕಳೆದ ಮೂರು ಶತಮಾನಗಳಿಂದ ಕಥಕಳಿ ಎಂಬ
ಹೆಸರಿನಿಂದ ಖ್ಯಾತವಾಯಿತೆಂದು ಪ್ರತೀತಿ.
ಕಥಕಳಿ ಸಾಂಕ ನೃತ್ಯ; ವೀರರಸ ಪ್ರಧಾನವಾದುದು. ಆಡುವ ಪ್ರಸಂಗಗಳು ಹೆಚ್ಚಾಗಿ ರಾಮಾಯಣ ಮಹಾ ಭಾರತ ಪುರಾಣಾದಿ ಪುಣ್ಯಕಥೆಗಳಾಗಿರುತ್ತವೆ. ನೃತ್ಯದಂತೆಯೇ ಸಂಗೀತಕ್ಕೂ ಇಲ್ಲಿ ಹೆಚ್ಚಿನ ಪ್ರಾಶಸ್ತ್ಯ ಕಂಡುಬರುತ್ತದೆ. ಕೂಚಿಪುಡಿ ಆಂಧ್ರ ರಾಜ್ಯದ ತೆಲುಗು ಸೀಮೆಯಲ್ಲಿ ಪ್ರಚಲಿತರುವ ನೃತ್ಯ ಪ್ರಕಾರ. ಕೃಷ್ಣ ಜಿಲ್ಲೆಯ ದಿವಿ ತಾಲೂಕಿನ ಕೂಚಿಪುಡಿ (ಕುಚೇಲಪುರ) ಇದರ ನೆಲೆ.
ಇಲ್ಲಿ ಹುಟ್ಟಿ ಬೆಳೆದದ್ದರಿಂದ ನೃತ್ಯಕ್ಕೆ ಕೂಚಿಪುಡಿ ಎಂಬ ಹೆಸರು ಬಂತು. ಇದು ಏಕವ್ಯಕ್ತಿಯಿಂದಲೂ
ಸಾಂಕವಾಗಿಯೂ ಪ್ರದರ್ಶಿಸಿಕೊಳ್ಳುವ ನೃತ್ಯಕಲೆ. ಸಂವಾದ ರೂಪದ ಕಥಾನಿರೂಪಣೆ ಇರುವುದರಿಂದ
ನಾಟಕೀಯ ರಂಜನೆ ಈ ನೃತ್ಯಕ್ಕೆ ಒದಗಿದೆ. ಹಾಗಾಗಿ ಇದು ಜನಸಾಮಾನ್ಯರನ್ನು ತನ್ನತ್ತ ಆಕರ್ಷಿಸುವ ಗುಣ
ಪಡೆದಿದೆ.
ಮಣಿಪುರ ರಾಜ್ಯದಲ್ಲಿ ಪ್ರಚಲಿತರುವ ನೃತ್ಯ ಪದ್ಧತಿಯೇ ಮಣಿಪುರಿ. ಇದರಲ್ಲಿ ಲಾಯ್ ಹರೋಬಾ, ರಾಸಲೀಲಾ ಎಂಬ ಎರಡು ಪ್ರಭೇದಗಳುಂಟು. ಲಾಯ್ ಹರೋಬಾ ವಿಶೇಷವಾಗಿ ಶಿವ-ಪಾರ್ವತಿಯರ ಲೀಲಾ ವಿನೋದವನ್ನೂ ಜಗತ್ತಿನ ಸೃಷ್ಟಿಯನ್ನೂ ವಸ್ತುವಾಗುಳ್ಳ ನೃತ್ಯ. ರಾಸಲೀಲಾ ಕೃಷ್ಣ ಗೋಪಿಕೆಯರ ರಸಮಯ ಲಾಸವನ್ನು ನಿರೂಪಿಸುವ ನೃತ್ಯ.
ಋತುಮಾನಕ್ಕೆ ಅನುಗುಣವಾದ ವಸಂತರಾಸ್, ಕುಂಜರಾಸ್, ಝಾಲನ್ ಯಾತ್ರಾ ನೃತ್ಯಗಳು ರಂಜನೀಯ ವಾಗಿರುತ್ತವೆ. ಲಾಸ್ಯ ಹಾಗೂ ತಾಂಡವ ನೃತ್ಯಗಳ ಲಾಸವನ್ನು ಮಣಿಪುರಿಯಲ್ಲಿ ಕಾಣಬಹುದಾಗಿದೆ.
ಒಡಿಸಿ ಒರಿಸ್ಸ ರಾಜ್ಯದಲ್ಲಿ ಪ್ರಚಲಿತರುವ ನೃತ್ಯಪ್ರಕಾರ. ಇದೊಂದು ಸ್ವತಂತ್ರ ನೃತ್ಯಪ್ರಕಾರ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಹಸ್ತಮುದ್ರೆಗಳು, ಭಂಗಿಗಳು, ಸ್ಥಾನಕಗಳು, ಭ್ರಮರಿಗಳು, ಚಾಲನಿಕಗಳಲ್ಲಿ ಕೆಲವು ವೈಶಿಷ್ಟ್ಯಗಳನ್ನು ಈ ನೃತ್ಯದಲ್ಲಿ ಕಾಣಬಹುದಾಗಿದೆ.
ಇದೇ ರೀತಿ ಜನಪದ ನೃತ್ಯಗಳು ಕೂಡಾ ಮಹತ್ವದ್ದು. ಮನುಷ್ಯನ ಬದುಕನ್ನು ತೀವ್ರ ಸಂವೇದನೆಗೊಳ ಗಾಗಿಸುವ ಹುಟ್ಟು, ಸಾವು ಮತ್ತು ಇವುಗಳ ನಡುವೆ ಅವನಿಗೆ ಉಂಟಾಗುವ ನಾನಾ ತರಹದ ಅನುಭವಗಳಿಗೆ ಒಂದು ಜನಾಂಗ ಚಲನೆಯ ಮೂಲಕ ವ್ಯಕ್ತಪಡಿಸುವ ಒಂದು ಪ್ರತಿಕ್ರಿಯೆಯಾಗಿ ನೃತ್ಯ ಹುಟ್ಟಿತೆನ್ನಬಹುದು. ಮೂಲಭೂತವಾಗಿ ಅದು ಅತೀವ ಆನಂದದ, ತೃಪ್ತಿಯ ಸರಳ ಅಭಿವ್ಯಕ್ತಿ.
ಜನಾಂಗದ ಆಚರಣೆ, ಸಂಪ್ರದಾಯ, ನಂಬಿಕೆ, ಮೂಢನಂಬಿಕೆ, ವೃತ್ತಿ ಮುಂತಾದವನ್ನೂ ಅದು ಪ್ರತಿ
ಬಿಂಬಿಸುತ್ತದೆ. ಇಷ್ಟಲ್ಲದೆ ಧಾರ್ಮಿಕ ನೃತ್ಯಗಳಿಗೆ ಭಾರತ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಬಂಗಾಳದ ಕಾಠೀ, ಮಾಚಲದ ಸಾಂಗಲ, ಕರ್ನಾಟಕದ ವೀರಗಾಸೆ ಕುಣಿತ, ಗೊರವರ (ಕಡಬಡ್ಡರ) ಕುಣಿತ, ಬೀಸುಕಂಸಾಳೆ ನೃತ್ಯ ಶೈವ ಸಂಬಂಧಿಯಾದದ್ದು. ಭಾರತದ ಸೌರಾಷ್ಟ್ರದಲ್ಲಿ ಟಿಪ್ಪನಿ ಎಂಬುದು ವೃತ್ತಿ ನೃತ್ಯಸಂಪ್ರದಾಯಕ್ಕೆ
ಸೇರಿದುದಾಗಿದೆ. ಭಾರತದಲ್ಲಿ ಮಯೂರ ನೃತ್ಯ, ಸರ್ಪ ನೃತ್ಯ ಮುಂತಾದ ಪ್ರಕಾರಗಳೂ ಇವೆ.
ಸೌರಾಷ್ಟ್ರಲ್ಲಿರುವ ಸಿದ್ಧಿ ಎಂಬ ಜನಾಂಗ ಧಮಾಲ್ ಎಂಬ ಪಕ್ಷಿಪ್ರಾಣಿಗಳಿಗೆ ಸಂಬಂಧಿಸಿದ ನೃತ್ಯವನ್ನು
ಅಭಿನಯಿಸುತ್ತಾರೆ. ಭಾರತದಲ್ಲಿ ಪೊರೋಜ ಎಂಬ ಆದಿವಾಸಿಗಳು ಒಂದು ದೊಡ್ಡ ಸಾಲಿನಲ್ಲಿ ನಿಂತು
ಒಂದು ದೊಡ್ಡ ಹಾವಿನಂತೆ ಚಲಿಸುತ್ತಾರೆ. ಹಾಗೆಯೇ ಬೇಟೆಗಾರರ ಮತ್ತು ಬೆಸ್ತರ ನೃತ್ಯಗಳು ಪ್ರಾಣಿಗಳು
ನಡೆಯುವುದು, ಬೇಟೆಗಾಗಿ ನಿರೀಕ್ಷಿಸುವುದು, ವೇಗವಾಗಿ ಬಂದು ಹಾರಿ ಪ್ರಾಣಿಗಳನ್ನು ಕೊಲ್ಲುವುದು
ಈ ಕ್ರಿಯೆಗಳನ್ನು ಈ ನೃತ್ಯಗಳು ಒಳಗೊಳ್ಳುತ್ತವೆ.
ಕಚ್ವಿಘೋಡಿ ಎಂಬುದು ರಾಜಸ್ಥಾನದ ಗಂಡಸರು ಅಭಿನಯಿಸುವ ಒಂದು ನೃತ್ಯ. ಕೇರಳದ ನಾಯರ್
ಜನಾಂಗ ಅಭಿನಯಿಸುವ ವೆಳಕ್ಕಳಿ ಎಂಬ ನೃತ್ಯದಲ್ಲಿ ನೃತ್ಯಗಾರರು ಕತ್ತಿ ಮತ್ತು ಗುರಾಣಿಗಳನ್ನು ಬಳಸು ತ್ತಾರೆ. ರಾಜಸ್ಥಾನದಲ್ಲಿ ತೇರತಾಲಿ ಎಂಬ ಹೆಂಗಸರ ನೃತ್ಯದಲ್ಲಿ ಕತ್ತಿಯ ಬಳಕೆ ಇದೆ. ಅವರು ಚಿಕ್ಕದಾದ ಒಂದು ಕತ್ತಿಯನ್ನು ಹಲ್ಲಿನಿಂದ ಕಚ್ಚಿಕೊಂಡು ಕುಣಿಯುತ್ತಾರೆ.
ಇದೇ ರೀತಿ ಕರ್ನಾಟಕದ ಜನಪದ ನೃತ್ಯಗಳನ್ನು ಪ್ರಾದೇಶಿಕವಾಗಿ ಹೀಗೆ ವರ್ಗೀಕರಿಸಬಹುದು. ಉತ್ತರ
ಕರ್ನಾಟಕದಲ್ಲಿ ಕರಡಿ ಮಜಲು, ಡೊಳ್ಳು ಕುಣಿತ, ಗೊಂದಲಿಗರ ಮೇಳ, ಕೋಲಾಟ. ಜೋಗಿತೀರ ಕುಣಿತ, ವಾಘೇ ಮುರುಳಿ, ಭೂತೇರು ಕುಣಿತ, ದಟ್ಟಿ ಕುಣಿತ, ಕೀಲು ಕುದುರೆ ನೃತ್ಯ. ದಕ್ಷಿಣ ಕರ್ನಾಟಕದಲ್ಲಿ ವೀರಗಾಸೆ ಕುಣಿತ, ಸೋಮನ ಕುಣಿತ, ಲಿಂಗದ ಬೀರರ ಕುಣಿತ, ಗುಡ್ಡರ ಕುಣಿತ, ರಂಗದ ಕುಣಿತ, ಗಾರುಡಿ ಕುಣಿತ, ಬೀಸು ಕಂಸಾಳೆ ಕುಣಿತ, ಭಾಗವಂತಿಗೆ ಮೇಳ, ಕರಪಾಲ ಮೇಳ, ಚೌಡಿಕೆ ಮೇಳ, ಪಟಕುಣಿತ, ಪೂಜಾಕುಣಿತ, ಚಿಟ್ಮೇಳ, ಗೊರವರ ಕುಣಿತ, ನಂದಿಕೋಲು ಕುಣಿತ, ಕೋಲಾಟ, ಈರಮಕ್ಕಳ ಕುಣಿತ, ಫಲಕದ ಕುಣಿತ, ಕಾಡೆಮ್ಮೆ ದೊಡ್ಡಿ ಕುಣಿತ, ಸೋಲಿಗ ಕುಣಿತ.
ಕೊಡಗಿನಲ್ಲಿ ಹುತ್ತರಿ ಕುಣಿತ, ಬಳುಕಾಟ, ಉಮ್ಮತ್ತಾಟ, ಕೋಲಾಟ. ದಕ್ಷಿಣ ಕನ್ನಡದಲ್ಲಿ ದುಡಿ ಕುಣಿತ, ಡೋಲಿನ ಕುಣಿತ, ವೈದ್ಯನೃತ್ಯ, ಭೂತನೃತ್ಯ, ಹೋಲಿನೃತ್ಯ, ಆಟಿಕೊಡೆಂಜ, ಕೋರತನಿಯ, ಕೋಲಾಟ. ಉತ್ತರ ಕನ್ನಡದಲ್ಲಿ ಹಾಲಕ್ಕಿ ಗೌಡರ ಸುಗ್ಗಿ ಕುಣಿತ, ಕೋಲಾಟ, ಕರಡಿ ಕುಣಿತ, ಸಿಂಹ ನೃತ್ಯ, ಹೂನ ಮಕ್ಕಳ ಕುಣಿತ, ಗುಮ್ಮಟೆ ವಾದ್ಯದೊಡನೆ ಕುಡುಬಿಗಳ ನೃತ್ಯ, ಸಿದ್ಧಿಯರ ನೃತ್ಯ.
ಸಾಹಿತ್ಯ ಪ್ರಧಾನವಾದ ಯಕ್ಷಗಾನ ಬಯಲಾಟಗಳಲ್ಲೂ ಕರಪಾಲಮೇಳ, ಚೌಡಿಕೆ ಮೇಳ, ಜೋಗಿಗಳ ಮೇಳ ಮುಂತಾದುವುಗಳಲ್ಲೂ ನೃತ್ಯ ಪ್ರಮುಖವಾಗಿಯೇ ಬರುತ್ತದೆ. ಉತ್ತರ ಕರ್ನಾಟಕದ ಗೊಂದಲಿಗರ ಮೇಳ ಕಥಾಪ್ರಧಾನವಾದುದು.
ಕರಪಾಲ ಚೌಡಿಕೆಮೇಳಗಳಂತೆ ಸಾಹಿತ್ಯ, ಸಂಗೀತ, ಕುಣಿತಗಳು ಇಲ್ಲಿ ಮುಪ್ಪುರಿಗೊಂಡಿರುತ್ತವೆ. ಕಥಾನಿರೂ ಪಣೆ, ನಡುವೆ ಹಾಡು, ಕುಣಿತ, ಸಮಗ್ರರಾತ್ರಿ ಜನರ ಆಸಕ್ತಿಯನ್ನು ಹಿಡಿದಿಡಬೇಕಾದ ಹೊಣೆಗಾರಿಕೆ ಈ ಕಲೆಗಳದು. ಆದುದರಿಂದಲೇ ಕಥಾಮಾಧ್ಯಮ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಇವಲ್ಲದೆ ಪಾಶ್ಚಾತ್ಯ ಪ್ರಭಾವದಿಂದಾಗಿ ಅನೇಕ ನೃತ್ಯಗಳು ಭಾರತದಲ್ಲಿ ಇಂದು ಸಮುದಾಯದ ಗಮನ ಸೆಳೆದಿವೆ. ಅಂಥವುಗಳ ಪೈಕಿ ಬ್ಯಾಲೆ, ಡಿಸ್ಕೊ, ರಾಕ್-ಎನ್-ರೋಲ್ ನೃತ್ಯಗಳನ್ನು ಹೆಸರಿಸಬಹುದು. ಒಟ್ಟಿನಲ್ಲಿ ಭಾರತ ನೃತ್ಯ ಕಲೆಯಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು ಇಂತಹ ಕಲೆಯನ್ನು ಉಳಿಸಿ, ಬೆಳೆಸುವ
ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರದ್ದು. ಮನಸ್ಸುಗಳನ್ನು ಬೆಸಯುವ, ಹಗುರಾಗಿಸುವ ನೃತ್ಯಕಲೆಯನ್ನು ವಿಶ್ವವೇ ಒಂದು ಆಚರಣೆಯಾಗಿ ಸಂಭ್ರಮಿಸುವುದು ಸಂತಸದ ವಿಚಾರ.
ಇದೇ ಸಂದರ್ಭದಲ್ಲಿ ಆಚರಣೆ ನಮ್ಮ ಪಾರಂಪರಿಕ ಕಲಾ ಇತಿಹಾಸವನ್ನು ಸ್ಮರಿಸುವ ಸುಸಂದರ್ಭವೂ ಆಗಬೇಕು ಎಂಬುದು ಎಲ್ಲಾ ಕಲಾ ಆರಾಧರಕರ ಆಂಬೋಣ.