Sunday, 15th December 2024

ಕೃತಕ ಅಂಗಗಳ ಅಭಿವೃದ್ದಿಯ ರೋಚಕಕಥೆ

ಹಿಂತಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಶತ್ರುಗಳ ದಾಳಿಗೆ ತುತ್ತಾಗಿ ಕಾಲು ಕಳೆದುಕೊಳ್ಳುವ ಖೇಲ ರಾಜನ ಪತ್ನಿ ವಿಷ್ಪಲಳಿಗೆ ಅಶ್ವಿನಿ ದೇವತೆಗಳು ಕಬ್ಬಿಣ  ದ ಮಾಡಿದ ಕೃತಕ ಕಾಲನ್ನು ಅಳವಡಿಸುತ್ತಾರೆ. ಆ ಕೃತಕ ಕಾಲನ್ನು ಧರಿಸಿ, ಆಕೆಯು ತನ್ನ ಸಹಜ ಬದುಕನ್ನು ನಡೆಸು ತ್ತಾಳೆ ಎನ್ನುವುದು ಮೊದಲ ಉಲ್ಲೇಖ.

ನಾವು ನಮ್ಮ ಪೂರ್ವ ಸೂರಿಗಳ ಹೆಗಲೇರಿ ಒಮ್ಮೆಂದಿರುಗಿ ನೋಡಿದಾಗ, ನಮ್ಮ ಪೂರ್ವಜರು ಎಂತೆಂತಹ ಸಾಹಸಗಳನ್ನು ಯಶಸ್ವಿಯಾಗಿ ಮಾಡಿದರು ಎನ್ನುವ ಸತ್ಯವು ನಮಗೆ ಮನದಟ್ಟಾಗುತ್ತದೆ. ಯುದ್ಧ, ಅಪಘಾತ ಹಾಗೂ ರೋಗಗಳ ಕಾರಣ, ನಮ್ಮ
ಯಾವುದಾದರೊಂದು ಅಂಗ ನಷ್ಟವಾಗುವುದು ಅಪರೂಪವೇನಲ್ಲ.

ಕಣ್ಣು ಹೋಗಬಹುದು, ಕೈ ಹೋಗಬಹುದು, ಕೈಬೆರಳುಗಳು ಹೋಗಬಹುದು, ಕಾಲು ಹೋಗಬಹುದು, ಕಾಲಿನ ಬೆರಳುಗಳು ಹೋಗಬಹುದು… ಹಾಗೆ ಹೋದ ಅಂಗಗಳು ಮತ್ತೆ ಬೆಳೆಯಲಾರವು. ಅಂಗಹೀನನು ಸಮಾಜದ ಅವಹೇಳನಕ್ಕೆ ತುತ್ತಾಗುವುದು ಅಪರೂಪವೇ ನಲ್ಲ. ಹಾಗಾಗಿ ನಷ್ಟವಾದ ಅಂಗಗಳ ಸ್ಥಳದಲ್ಲಿ ಕೃತಕ ಅಂಗವನ್ನು ಅಳವಡಿಸುವ ಪ್ರಯತ್ನವನ್ನು ನಾವು ಅನಾದಿ ಕಾಲದಿಂದಲೂ ಮಾಡುತ್ತ ಬಂದಿದ್ದೇವೆ.

ಕ್ರಿ.ಪೂ.2900-ಕ್ರಿ.ಪೂ.2800ಕಾಲಕ್ಕೆ ಸೇರಿದ ಇರಾನಿನ ಶಹ್ರ್-ಎ-ಸುಕ್ತ ಎನ್ನುವ ಸ್ಥಳದಲ್ಲಿ ದೊರೆತ, ‘6’ಎತ್ತರದ ಅಭಿಚಾರಿಣಿಗೆ ಒಂದು ಕಣ್ಣಿರಲಿಲ್ಲ. ಆ ಕಣ್ಣಿದ ಸ್ಥಳದಲ್ಲಿ ಒಂದು ಕೃತಕ ಕಣ್ಣನ್ನು ಅಳವಡಿಸಿದ್ದರು. ಆದರೆಆ ಕೃತಕ ಕಣ್ಣು ಕೇವಲ ಕುರೂಪ ವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಅಂಗವಾಗಿತ್ತೇ ಹೊರತು, ತನ್ನ ಸಹಜ ಕೆಲಸವನ್ನು ಮಾಡು ವಂತಹ ಕೃತಕ ಅಂಗ ವಾಗಿರಲಿಲ್ಲ. ಹಾಗಾಗಿ ಕಾಲಕ್ರಮೇಣ ನೈಜ ಅಂಗದಂತೆ ಕೆಲಸ ಮಾಡುವ ಕೃತಕ ಅಂಗವನ್ನು ಅಳವಡಿಸುವ ಪ್ರಯತ್ನವನ್ನು ನಮ್ಮ ಪೂರ್ವಜರು ಮಾಡಿ ದರು.

ಇಂತಹ ದಿಟ್ಟ ಪ್ರಯತ್ನಗಳ ಮೊದಲ ಉದಾಹರಣೆಯನ್ನು ಋಗ್ವೇದದ ಕಾಲದಲ್ಲಿ ಹಾಗೂ ಈಜಿಪ್ಟಿನ ಮಮ್ಮಿಗಳಲ್ಲಿ ನೋಡ ಬಹುದು. ಋಗ್ವೇದವು (ಕ್ರಿ.ಪೂ.1500-ಕ್ರಿ.ಪೂ.1000) ಸಮಕಾಲೀನ ಸಮಾಜದ ಮಾತಿಯ ಅದ್ಭುತ ಕಣಜ. ಋಗ್ವೇದದ 1:116:15 ಮಂತ್ರವು ಕೃತಕ ಕಾಲಿನ ಬಗ್ಗೆ ಮಾಹಿತಿ ನೀಡುತ್ತದೆ. ಖೇಲ ಎಂಬ ರಾಜ. ಈತನಿಗೆ ವಿಷ್ಪಲ ಎನ್ನುವ ಮಡದಿ. ಇವರ ಪುರೋಹಿತ ಅಗಸ್ತ್ಯ ಮಹರ್ಷಿ. ವಿಷ್ಪಲ ಕುದುರೆಯನ್ನು ಏರಿ ಯುದ್ಧ ಮಾಡುವಾಗ, ಶತ್ರುಗಳು ಆಕೆಯ ಒಂದು ಕಾಲನ್ನು ಕತ್ತರಿಸಿ ಬಿಡು ತ್ತಾರೆ.

ಆಗ ಅಶ್ವಿನಿ ದೇವತೆಗಳು ಕಬ್ಬಿಣದಿಂದ ಮಾಡಿದ ಕೃತಕ ಕಾಲನ್ನು ಆಕೆಗೆ ಅಳವಡಿಸುತ್ತಾರೆ. ಆ ಕೃತಕ ಕಾಲನ್ನು ಧರಿಸಿ, ಆಕೆಯು ತನ್ನ ಸಹಜ ಬದುಕನ್ನು ನಡೆಸುತ್ತಾಳೆ ಎನ್ನುವ ವಿವರ ಭಾರತೀಯ ಸಾಹಿತ್ಯದಲ್ಲಿ ಕೃತಕ ಅಂಗದ ಬಗ್ಗೆ ದೊರೆಯುವ ಮೊದಲ ಉಲ್ಲೇಖ. ಪ್ರಾಚೀನ ಈಜಿಪ್ಟಿನಲ್ಲಿ ಕಾರ್ಯನಿರತ ಕೃತಕ ಉದಾಹರಣೆಯು ದೊರೆಯುತ್ತದೆ. ಕ್ರಿ.ಪೂ.1295ರಿಂದ ಕ್ರಿ.ಪೂ.664ರ ನಡುವೆ ಬದುಕಿದ್ದಿರಬಹುದಾದ, 50-60 ವರ್ಷ ವಯಸ್ಸಿನ ಒಬ್ಬ ಮಳೆಯ ಮಮ್ಮಿ; ಆಕೆಗೆ ಬಲಗಾಲಿನ ಹೆಬ್ಬೆರಳು ಇರಲಿಲ್ಲ. ಆ ಹೆಬ್ಬೆರಳನ್ನು ಛೇದಿಸಿದ್ದರು. ಛೇದನಕ್ಕೆ ಕಾರಣ, ಬಹುಶಃ ಅನಿಯಂತ್ರಿತ ಮಧುಮೇಹ ಇದ್ದಿರಬಹುದು.

ಗಾಯವು ಪೂರ್ಣವಾಗಿ ಗುಣವಾಗಿತ್ತು. ಆ ಹೆಬ್ಬೆರಳ ಸ್ಥಳದಲ್ಲಿ ಒಂದು ಕೃತಕ ಹೆಬ್ಬೆರಳನ್ನು ಅಳವಡಿಸಿದ್ದರು. ಈ ಕೃತಕ ಹೆಬ್ಬೆರಳನ್ನು ಚರ್ಮ, ಮರ ಮತ್ತು ಕಾರ್ಟೋನೇಜ್ ಗಳನ್ನು (ನಾರು, ಪ್ಲಾಸ್ಟರ್ ಮತ್ತು ಅಂಟು) ಬಳಸಿ ಮಾಡಿದ್ದರು. ಬಹುಶಃ ಈಕೆ ಶ್ರೀಮಂತಳಾ ಗಿದ್ದಿರಬಹುದು. ಹಾಗಾಗಿ ಈ ವಿಶೇಷ ಹೆಬ್ಬೆರಳನ್ನು ಮಾಡಿಸಿ ಧರಿಸಿಕೊಂಡಿದ್ದಳು. ಈ ಕೃತಕ ಹೆಬ್ಬೆರಳು ಸ್ವಲ್ಪಮಟ್ಟಿಗಾದರೂ ನೈಜ ಹೆಬ್ಬೆರಳನ್ನು ಹೋಲುತ್ತಿತ್ತೆಂದು ಕಾಣುತ್ತದೆ. ಏಕೆಂದರೆ ಅದು ಸವೆದಿದ್ದರಿಂದ ಸುದೀರ್ಘ ಕಾಲ ಕೃತಕ ಹೆಬ್ಬೆರನ್ನು ಧರಿಸಿ ನಡೆದಿದ್ದಳೆಂಬುದು ಗೊತ್ತಾಗುತ್ತದೆ. ಈ ಕೃತಕ ಹೆಬ್ಬೆರಳನ್ನು ಬ್ರಿಟಿಷ್ ಮ್ಯೂಸಿಯಮ್ಮಿ ಗಾಗಿ ಸಂಗ್ರಸಿದವನು ರೆವರೆಂಡ್ ಗ್ರಿಲ್ಲೆಜಾನ್‌ಚೆಸ್ಟರ್ (1830-1892) ಎಂಬ ಪಾದ್ರಿ.

ಹಾಗಾಗಿ ಈ ಕೃತಕ ಹೆಬ್ಬೆರಳು ‘ಗ್ರೀಲ್ಲೆಚೆಸ್ಟರ್ ಗ್ರೇಟರ್ ಟೋ’ಎಂದು ಪ್ರಸಿದ್ಧವಾಗಿದೆ. ‘ಕೈರೋ ಹೆಬ್ಬೆರಳು’ ಎಂಬ ಮತ್ತೊಂದು
ಹೆಸರೂ ಇದಕ್ಕೆ ಉಂಟು. ಈಜಿಪ್ಷಿಯನ್ ಧರ್ಮಶಾಸ್ತ್ರದ ಅನ್ವಯ, ಒಸೈರಿಸ್ ಮೃತ್ಯುದೇವತೆ. ಸತ್ತ ನಂತರ ಪುನರ್ಜನ್ಮ ಎತ್ತ ಬೇಕಾದರೆ, ವ್ಯಕ್ತಿಯ ಇಡೀ ದೇಹವು ಸಮಗ್ರವಾಗಿರ ಬೇಕು. ಮೃತನ ಶರೀರದಲ್ಲಿ ಯಾವುದಾದರೂ ಅಂಗವು ನಷ್ಟವಾಗಿದ್ದರೆ, ಅದರ ಸ್ಥಳದಲ್ಲಿ ಒಂದು ಕೃತಕ ಅಂಗವನ್ನು ಅಳವಡಿಸುತ್ತಿದ್ದರು.

ಹಾಗಾಗಿ ಈಜಿಪ್ಟಿನ ಪಿರಮಿಡ್ಡುಗಳಲ್ಲಿ ದೊರೆತ ಮಮ್ಮಿ ಗಳಲ್ಲಿ ಕೃತಕ ಪಾದ, ಕೃತಕ ಕಾಲು, ಕೃತಕ ಮೂಗು, ಕೃತಕ ಕಿವಿ, ಕೊನೆಗೆ ಕೃತಕ ಶಿಶ್ನವೂ ದೊರೆತಿದೆ. ಪುನರ್ಜನ್ಮವೆತ್ತಿದ ಮೇಲೆ ಸಂತಾನ ವರ್ಧನೆಯನ್ನು ನಡೆಸಲು ಶಿಶ್ನವು ಅಗತ್ಯ ಎಂದು ಮನ ಗಂಡಿದ್ದರಿಂದ ಕೃತಕ ಶಿಶ್ನವನ್ನು ಅಳವಡಿಸಿದ್ದರು.

ಕೈರೋ ಹೆಬ್ಬೆರಳು ದೊರೆಯುವವರಿಗೂ,ಕ್ರಿ.ಶ.೫೦೦ ಕಾಲದ ಗ್ರೀಕ್ ಕಾಲದಲ್ಲಿ ಕೃತಕ ಅಂಗಗಳನ್ನು ಬಳಸುವ ಕಲೆಯು ಕರಗತ ವಾಗಿತ್ತು. ಹೆಜಿಸಿಸ್ಟ್ರಾಸಸ್ ಒಬ್ಬ ದೈವಜ್ಞ (ಡಿವೈನರ್)ಆಗಿ ಮರ್ಡೋನಿಯಸ್ ಎಂಬ ಪರ್ಷಿಯನ್ ಸೈನ್ಯಾಧಿಪತಿಯ ಜತೆ ಯಲ್ಲಿದ್ದ. ಗ್ರೀಕೋ-ಪರ್ಷಿಯನ್ ಸ್ಪಾರ್ಟನ್ನರಿಗೆ ಸೆರೆಸಿಕ್ಕಿದ. ಯುದ್ಧ ಖೈದಿಯ ಕಾಲಿಗೆ ಸರಪಳಿಯನ್ನು ಬಿಗಿದು ಸೆರೆಮನೆಯಲ್ಲಿ ಇಟ್ಟಿದ್ದರು. ಹೆಜಿಸಿಸ್ಟ್ರಾಸಸ್ ರಾತೋ ರಾತ್ರಿ ತನ್ನ ಕಾಲನ್ನೇ ತುಂಡರಿಸಿಕೊಳ್ಳುತ್ತಾನೆ.

ಕುಂಟುಗಾಲಿನಲ್ಲಿಯೇ ಸೆರೆಮನೆಯಿದ ತಪ್ಪಿಸಿಕೊಂಡು ಹೋಗುತ್ತಾನೆ. ಮುಂದಿನ ದಿನಗಳಲ್ಲಿ ಕೃತಕ ಮರಗಾಲನ್ನು ಹಾಕಿ ಕೊಂಡು ಹೊಸ ಬದುಕನ್ನು ಆರಂಬಿಸಿದ ಎಂದು ಹೆರಡೋಟಸ್ (ಕ್ರಿ.ಪೂ.484-ಕ್ರಿ.ಪೂ.425) ದಾಖಲಿಸಿದ್ದಾನೆ. ಕ್ರಿ.ಪೂ.300 ವರ್ಷಗಳ ರೋಮನ್ ಕಾಲಮಾನಕ್ಕೆ ಸೇರಿದ ‘ಕುಪುವ ಕಾಲು’ ಪ್ರಖ್ಯಾತವಾದದ್ದು. ಇದೊಂದು ಕೃತಕ ಕಾಲು. ಇದನ್ನು ತಾಮ್ರದಿಂದ ಮಾಡಿದ್ದರು. ಕಾಲಿಲ್ಲದ ವರು ಇದನ್ನು ಹಾಕಿಕೊಂಡು ನಡೆಯಬಹುದಾಗಿತ್ತು. ಇಟಲಿಯಲ್ಲಿ ದೊರೆತ ಈ ಕಾಲನ್ನು ಲಂಡನ್ನಿನ ‘ರಾಯಲ್ ಕಾಲೇಜ್ ಆಫ್ ಸರ್ಜನ್ಸ್’ನಲ್ಲಿ ಇಟ್ಟಿದ್ದರು.

ವಿಶ್ವದ ಎರಡನೆಯ ಮಹಾಯುದ್ಧದಲ್ಲಿ ಜರ್ಮನ್ನರು ಬಾಂಬ್ ಹಾಕಿದಾಗ, ಕಟ್ಟಡದೊಡನೆ ಈ ಪ್ರಾಚೀನ ಕಾಲೂ ನಾಶವಾ ಯಿತು. ಪ್ಲೀನಿ ತನ್ನ ‘ನ್ಯಾಚುರಾ ಲಿಸ್ ಸ್ಟೋರಿಯ‘ಕೃತಿಯಲ್ಲಿ ಮಾರ್ಕಸ್ ಸೆರ್ಜಿಯಸ್ ಬಗ್ಗೆ ಪ್ರಸ್ತಾಪಿಸಿದ್ದಾನೆ. ಯುದ್ಧ ವೊಂದರಲ್ಲಿ ಈತನ ಬಲಗೈ ತುಂಡರಿಸಿಹೋಗುತ್ತದೆ. ಆಗ ಅವನು ಗುರಾಣಿಯನ್ನು ಹಿಡಿದುಕೊಳ್ಳಲು ಅನುಕೂಲವಾಗುವಂತೆ ಒಂದು ಕೃತಕ ಕೈಯನ್ನು ಅಳವಡಿಸಿಕೊಂಡು ಎರಡನೆಯ ಪ್ಯೂನಿಕ್ ಯುದ್ಧದಲ್ಲಿ (ಕ್ರಿ.ಪೂ.218- ಕ್ರಿ.ಪೂ.201) ಹೋರಾಡಿದ ಎನ್ನುವುದು ಆತನ ಬರಹದ ಸಾರಾಂಶವಾಗಿದೆ.

ಆಂಬ್ರೋಸ್ ಪಾರೆ (1510-11590) ಒಬ್ಬ ಸೇನಾ ಫ್ರೆಂಚ್ ಸರ್ಜನ್. ಇವನು ಅಂಗಚ್ಛೇದನವನ್ನು (ಆಂಪ್ಯುಟೇಶನ್) ವೈಜ್ಞಾನಿಕ ಜಾರಿಗೆ ತಂದನು. ಸೈನ್ಯದಲ್ಲಿ ಗಾಯಗೊಂಡವರ ಕೈ/ಕಾಲನ್ನು ಸಕಾಲದಲ್ಲಿ ಛೇದಿಸಿ, ಅವರ ಜೀವವನ್ನು ಉಳಿಸಿದನು. ಹಾಗೆಯೇ ನಷ್ಟವಾದ ಅವಯವದ ಸ್ಥಾನದಲ್ಲಿ ಕೃತಕ ಅವಯವವನ್ನು ರೂಪಿಸಿ ಅಳವಡಿಸುತ್ತಾನೆ. ಕೃತಕ ಕಾಲಿನಲ್ಲಿ ಕೃತಕ ಮಂಡಿಕೀಲು ಇದ್ದ ಕಾರಣ, ಕೃತಕ ಕಾಲನ್ನು ಮಡಚಿ ಕುಳಿತುಕೊಳ್ಳಲು ಸಾಧ್ಯವಾ ಗುತ್ತದೆ. ಹಾಗೆಯೇ‘ಲಿ ಪೆಟಿಟ್ ಲೋರೇನ್’ಎಂದು ಹೆಸರಾದ ಕೃತಕ ಕೈಯನ್ನು ರೂಪಿಸುತ್ತಾನೆ.

ಇದು ನಾನಾ ಸುರುಳಿ (ಸ್ಪ್ರಿಂಗ್) ಮತ್ತು ಕೊಂಡಿ (ಕ್ಯಾಚ್)ಗಳಿದ್ದ ಕೃತಕ ಕೈಯಾಗಿದ್ದು, ನೈಜ ಕೈಯಿಯ ಹಾಗೆ ಸೀಮಿತ ಪ್ರಮಾಣ ದಲ್ಲಿ ಕೆಲಸ ಮಾಡುತ್ತಿತ್ತು. ಹೀಗೆ ಮಧ್ಯಯುಗದಲ್ಲಿ ನಾನಾ ರೀತಿಯ ಕೃತಕ ಅಂಗಗಳನ್ನು ನಿರ್ಮಿಸುವ ಪ್ರಯತ್ನಗಳು ನಡೆದವು. 21ನೆಯ ಶತಮಾನದಲ್ಲಿ ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಾಗದಂತಹ ಸಂಶೋಧನೆ ಮತ್ತು ಅಭಿವೃದ್ಧಿ ನಡೆದು
ಅಪಾರ ಪ್ರಮಾಣದ ಕೃತಕ ಅಂಗಗಳನ್ನು ಸಿದ್ಧಪಡಿಸಲಾಗಿದೆ.

ಅವುಗಳಲ್ಲಿ ಅತ್ಯಂತ ಸರಳವಾದದ್ದು ಕನ್ನಡಕ. ದೂರದೃಷ್ಟಿ ಹಾಗೂ ಸಮೀಪ ದೃಷ್ಟಿಯನ್ನು ಸರಿಪಡಿಸಬಲ್ಲ ಕನ್ನಡಕಗಳು
ನಮ್ಮ ಬದುಕನ್ನೇ ಬದಲಿಸಿವೆ. ಕಣ್ಣು ಪೊರೆಯನ್ನು ತೆಗೆದು, ಅದರ ಸ್ಥಳದಲ್ಲಿ ಕೃತಕ ಮಸೂರವನ್ನು ಅಳವಡಿಸಿ ಸಹಜ ದೃಷ್ಟಿ ಯನ್ನು ನೀಡಲು ಇಂದು ಸಾಧ್ಯವಾಗಿದೆ. ಇಷ್ಟು ದಿನ ಜನ್ಮದತ್ತ ಕಿವುಡರಿಗೆ ಆಲಿಸುವ ಸೌಭಾಗ್ಯವೂ ಇರಲಿಲ್ಲ. ಈಗ ‘ಕಾಕ್ಲಿಯಾರ್ ಇಂಪ್ಲಾಂಟ್’ಗಳು ಎಲ್ಲೆಡೆ ದೊರೆಯುತ್ತಿವೆ.

ಇದನ್ನು ಮಗುವಿಗೆ ಅಳವಡಿಸಿದರೆ, ಮಗುವು ಎಲ್ಲರಂತೆ ಕೇಳಬಲ್ಲುದು ಹಾಗೂ ಮಾತನಾಡಬಲ್ಲುದು. ಇಷ್ಟು ದಿನ ಹುಳುಕು ಬಿದ್ದ ಹಲ್ಲನ್ನು ತೆಗೆದು ಎಸೆಯಬೇಕಾಗಿತ್ತು. ಈಗ ಅವುಗಳ ಸ್ಥಳದಲ್ಲಿ, ಹೊಸಹಲ್ಲುಗಳನ್ನು ಕಟ್ಟುವುದು ಸುಲಭ. ಕೃತಕ ಹಲ್ಲಿನ ಸೆಟ್ಟನ್ನೇ ಧರಿಸಬಹುದು. ಹೃದಯದ ಗತಿನಿಯಂತ್ರಕವು (ಪೇಸ್ ಮೇಕರ್) ನಿಯುತವಾಗಿ ಹೃದಯದ ಕೆಲಸ ಕಾರ್ಯಗಳಿಗೆ ಅಗತ್ಯವಾದ ಹಿತ-ಮಿತ ವಿದ್ಯುತ್ತನ್ನು ಪೂರೈಸುತ್ತಾ ಜೀವವನ್ನು ಉಳಿಸುತ್ತಿದೆ. ಹೃದಯ-ಶ್ವಾಸಕೋಶ ಯಂತ್ರವು ಬದಲಿ ಹೃದಯ ಹಾಗೂ ಶ್ವಾಸಕೋಶಗಳನ್ನು ಜೋಡಿಸುವ ನಮ್ಮ ಕನಸನ್ನು ನನಸಾಗಿಸಿದೆ. ಇನ್ನು ಮೂತ್ರಪಿಂಡಗಳ ಅಂತಿಮ ವೈಫಲ್ಯಕ್ಕೆ ತುತ್ತಾದವರ ಜೀವ ವನ್ನು ಹಿಡಿದಿಡಲು ‘ಡಯಾಲಿಸಿಸ್’ ಯಂತ್ರವು ನೆರವಾಗುತ್ತಿದೆ.

ಮಕುಟ ಧಮನಿಯಲ್ಲಿ ಅಡಚಿಕೊಂಡಿರುವ ಹೆಪ್ಪಳಿಕೆಯನ್ನು ತೆರೆದು, ಅದರ ಸ್ಥಳದಲ್ಲಿ ಅಳವಡಿಸುವ ‘ಸ್ಟೆಂಟ್ ’ಗಳು ಹೃದ್ರೋಗಿU ಳಿಗೆ ಹೊಸ ಬದುಕನ್ನು ನೀಡಿವೆ. ಮುರಿದ ಮೂಳೆಗಳನ್ನು ಜೋಡಿಸಲು ನಟ್-ಬೋಲ್ಟ್‌ಗಳು ನೆರವಾಗುತ್ತಿವೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ರೋಗಗ್ರಸ್ತ ದವಡೆ ಮೂಳೆಯನ್ನು ಛೇದಿಸುವುದು ಅನಿವಾರ್ಯವಾಗುತ್ತದೆ. ಆಗ ಎಂಆರ್‌ಐ ಮುಖಾಂತರ ಛೇದಿತ ದವಡೆಯ ವಿವರಗಳನ್ನು ಪಡೆದು, ೩-ಡಿ ತಂತ್ರಜ್ಞಾನವನ್ನು ಬಳಸಿ, ಕೃತಕ ಟೈಟೇನಿಯಂ ದವಡೆಯನ್ನು ನಿರ್ಮಿಸಲು ಸಾಧ್ಯವಾಗಿದೆ.

ವ್ಯಕ್ತಿಗತ ನಿಖರ ಕೃತಕ ಮೂಳೆಗಳನ್ನು ಸಿದ್ಧಪಡಿಸುವುದು ಇಂದು ಸರ್ವಸಾಮಾನ್ಯವಾಗಿದೆ. ಕೃತಕ ಸ್ತನ, ಕೃತಕ ಶಿಶ್ನಗಳೂ ಇಂದು ದೊರೆಯುತ್ತಿವೆ. ಕೃತಕ ಅವಯವಗಳ ಜಗತ್ತು, ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ರೀತಿಯಲ್ಲಿ ಸುಧಾರಣೆಯಾಗಿವೆ. ಪೋಲಿಯೊ ಪೀಡಿತ ಮಕ್ಕಳ ಕ್ಯಾಲಿಪರ್ಸ್ ತಯಾರಿಸಲು ಹಗುರ ಲೋಹ ಬಳಸಲು ಸೂಚಿಸಿದ ಕಲಾಮ್ ಅವರನ್ನು ಇಲ್ಲಿ
ಸ್ಮರಿಸಿಕೊಳ್ಳಬಹುದು. ಜಯಪುರ್ ಕಾಲುಗಳು, ಸುಧಾ ಚಂದ್ರನ್ ಅವರಂತಹವರಿಗೆ ಹೊಸ ಬದುಕನ್ನು ನೀಡಿದೆ. ಆಸ್ಕರ್ ಪಿಸ್ಟೋರಿಯಸ್ ಕೃತಕ ಕಾಲನ್ನು ಧರಿಸಿ ಜಾಗತಿಕ ಓಟಗಾರನಾದದ್ದು, ಕ್ಯಾನ್ಸರ್ ಪೀಡಿತ ಟೆರ್ರಿ ಫಾಕ್ಸ್ ಒಂಟಿ ಕಾಲಿನಲ್ಲಿ ಓಡಿ ಕ್ಯಾನ್ಸರ್ ಜಾಗೃತಿಯನ್ನುಂಟು ಮಾಡಿದ್ದು, ಇಂದು ಒಂದು ಕನಸಿನಂತಿದೆ. ಮುಂದಿನ ದಿನಗಳಲ್ಲಿ ‘ಸೈಬೋರ್ಗ್’ಗಳು, ಅಂದರೆ ಅರೆಯಂತ್ರಗಳನ್ನು ಒಳಗೊಂಡ ಮನುಷ್ಯರು ಇಲ್ಲವೇ ಪೂರ್ಣ ಯಂತ್ರಗಳಿಂದಾದ ಯಂತ್ರಮಾನವರು ನಮ್ಮ ನಡುವೆ ಓಡಾಡಲು ಸಾಧ್ಯವಿದೆ ಎಂದು ಭವಿಷ್ಯವನ್ನು ನುಡಿಯಬಹುದು.