Sunday, 15th December 2024

ಅರುಣ್‌ ಶೌರಿ- ದಿ ಕಮಿಷನರ್‌ ಫಾರ್‌ ಲಾಸ್ಟ್ ಕಾಸಸ್‌

ಅಭಿವ್ಯಕ್ತಿ

ಮಂಜುನಾಥ್ ಅಜ್ಜಂಪುರ

1981ರಲ್ಲಿ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿದ್ದ ಅಬ್ದುಲ್ ರೆಹಮಾನ್ ಅಂತುಳೆ, ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಹೆಸರಿನಲ್ಲಿ ಖಾಸಗಿ ಟ್ರಸ್ಟ್ ಒಂದನ್ನು ಸ್ಥಾಪಿಸಿ ಭ್ರಷ್ಟ ಹಣ ಸಂಗ್ರಹಿಸುತ್ತಿದ್ದರು. ಶೌರಿ ಅವರ ತನಿಖಾ ವರದಿಗಳು ನೀಡಿದ ಮಾಹಿತಿಯಿಂದ ಮತ್ತು ದಾಖಲೆಗಳಿಂದ ಅಂತುಳೆ ಅವರು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತರಾಗಬೇಕಾಯಿತು.

ಚಂದ್ರಾಸ್ವಾಮಿ ಎಂಬ ತಾಂತ್ರಿಕನೊಬ್ಬನಿದ್ದ. ಅವನಿಗೆ ಜ್ಯೋತಿಷಿ ಎಂಬ ಖ್ಯಾತಿಯೂ ಇತ್ತು. ಇಂದಿರಾ ಗಾಂಧಿ, ಪಿ.ವಿ.ನರಸಿಂಹರಾವ್, ಬ್ರುನೇಯಿಯ ಸುಲ್ತಾನ, ಬಹರೇನಿನ ಷೇಕ್ ಇಸಾಬಿನ್ ಸಲ್ಮಾನ್, ಹಾಲಿವುಡ್‌ನ ಖ್ಯಾತನಟಿ
ಎಲಿಜಬೆತ್ ಟೇಲರ್, ಅಷ್ಟೇಕೆ, ಅಂತಾರಾಷ್ಟ್ರೀಯ ಕುಖ್ಯಾತಿಯ ಶಸಾಸ ವ್ಯಾಪಾರಿ ಅಡ್ನಾನ್ ಖಶೋಗಿ ಮತ್ತು ಬ್ರಿಟಿಷ್ ಪ್ರಧಾನಮಂತ್ರಿಯಾಗಿದ್ದ ಮಾರ್ಗರೆಟ್ ಥ್ಯಾಚರ್, ದೇಶದ್ರೋಹಿ ದಾವೂದ್ ಇಬ್ರಾಹಿಂ ಮುಂತಾದ ಪ್ರಖ್ಯಾತರಿಗೆ- ಕುಖ್ಯಾತರಿಗೆ ಈತ ಸಮೀಪವರ್ತಿ, ಜ್ಯೋತಿಷಿ, ಅಧ್ಯಾತ್ಮಿಕ ಸಲಹೆಗಾರ ಆಗಿದ್ದ ಎಂಬ ಅಂತೆಕಂತೆಗಳು ಆಗ ಹಬ್ಬಿಕೊಂಡಿದ್ದವು.

ಪಿ.ವಿ.ನರಸಿಂಹ ರಾವ್ ಅವರು ಪ್ರಧಾನಮಂತ್ರಿಯಾಗಿದ್ದಾಗಲಂತೂ ಅವರ ಆಪ್ತ ಎಂಬ ಕಾರಣಕ್ಕೆ ಇವನು ಆಕಾಶದಲ್ಲಿಯೇ ಹಾರಾಡುತ್ತಿದ್ದ. ಈ ಮೊದಲು ಮಾರ್ಗರೆಟ್ ಥ್ಯಾಚರ್ ಚಂದ್ರಾಸ್ವಾಮಿಯನ್ನು ೧೯೭೫ ರಲ್ಲಿ ರಹಸ್ಯವಾಗಿ ಭೇಟಿ ಮಾಡಿದಳು, ಅವನ ಸಲಹೆಯಂತೆ ಅವಳು ಕೆಂಪು ದಿರಿಸು ತೊಟ್ಟಳು, ಅವನ ಸಲಹೆ ಪಾಲಿಸಿದ್ದಕ್ಕೆ ಅವಳು ತದನಂತರ ಹತ್ತು ವರ್ಷ ಬ್ರಿಟಿನ್ ಪ್ರಧಾನಮಂತ್ರಿಯಾದಳಂತೆ, ಎಂಬ ಅಂತೆಕಂತೆಗಳು ಸಹ ರೆಕ್ಕೆಪುಕ್ಕ ಸಿಕ್ಕಿಸಿಕೊಂಡು ಹಾರಾಡುತ್ತಿದ್ದವು.

ಬೊಫೋರ್ಸ್ ಶಸ್ತ್ರಾಸ್ತ್ರ ಖರೀದಿಯಲ್ಲಿ ಆಗ ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿ ಮತ್ತು ಸೋನಿಯಾ ಲಂಚ ತೆಗೆದು ಕೊಂಡಿದ್ದಾರೆ, ಆ ಹಣ ಸ್ವಿಸ್ ಬ್ಯಾಂಕುಗಳಲ್ಲಿದೆ, ಎಂದೆ ಆಗ ಸುದ್ದಿ ಹಬ್ಬಿತ್ತು. ಪತ್ರಕರ್ತ ಅರುಣ್ ಶೌರಿ ಅವರಂತೂ ಭ್ರಷ್ಟ ಪ್ರಧಾನಿಯ ವಿರುದ್ಧ ಸಮರವನ್ನೇ ಸಾರಿಬಿಟ್ಟಿದ್ದರು. ಪ್ರತಿದಿನ ವಿಶೇಷವಾದ ಪತ್ರವನ್ನು ರಾಷ್ಟ್ರಪತಿಗಳಿಗೆ ಬರೆಯುತ್ತಾ, ರಾಜೀವ್ ರಾಜೀನಾಮೆ ಕೊಡುವವರೆಗೆ ಈ ಹೋರಾಟ ಮುಂದುವರಿಯುತ್ತದೆ, ಎಂದಿದ್ದರು. ಒಮ್ಮೆ ಅರುಣ್ ಶೌರಿ ಅವರಿಗೆ ಚಂದ್ರಾಸ್ವಾಮಿಯಿಂದ ಫೋನ್ ಬಂತು.

ಯೂರೋಪಿನಲ್ಲಿದ್ದೇನೆ, ಮದ್ರಾಸಿಗೆ ಬರುತ್ತಿದ್ದೇನೆ, ನನ್ನನ್ನು ಬಂಧಿಸಿ ಸೆರೆಮನೆಗೆ ತಳ್ಳಲು ಸರಕಾರ ಕಾಯುತ್ತಿದೆ, ನನ್ನ ಬಳಿ ಬೊಫೋರ್ಸ್ ಕುರಿತ ಸ್ಫೊಟಕ ಮಾಹಿತಿಯಿದೆ ಕೊಡುತ್ತೇನೆ, ನನ್ನನ್ನು ಕಾಪಾಡಿ, ನನ್ನ ಜಾಮೀನಿಗೆ ವ್ಯವಸ್ಥೆ ಮಾಡಿ, ಎಂದೆ ಗಳಹಿದ. ಖ್ಯಾತ ನ್ಯಾಯವಾದಿ ರಾಮ್ ಜೇಠಮಲಾನಿ ಅವರನ್ನು ಹಿಡಿದು ಜಾಮೀನಿಗಾಗಿ ಸರ್ವಪ್ರಯತ್ನವನ್ನೂ ಮಾಡಲಾ ಯಿತು.

ಶೌರಿ ಅವರ ಸಹಪತ್ರಕರ್ತರು, ಎಸ್.ಗುರುಮೂರ್ತಿ ಎಲ್ಲರೂ ಜೊತೆಯಾಗಿ ರಹಸ್ಯ ಮಾಹಿತಿಯನ್ನು ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಚಂದ್ರಾಸ್ವಾಮಿ ಬುದ್ಧಿವಂತ. ಏನೂ ಮಾಹಿತಿ ಕೊಡದೆಯೇ ತನ್ನ ಕಾರ್ಯ ಸಾಧಿಸಿಕೊ ಳ್ಳುತ್ತಿದ್ದ.
ಮದ್ರಾಸಿನಿಂದ ದೆಹಲಿಗೆ ಹೋದ. ಅಲ್ಲಿಯೂ, ತನ್ನ ಆಶ್ರಮದಲ್ಲಿ ಜನರಿದ್ದಾರೆ, ಕುರುಕ್ಷೇತ್ರಕ್ಕೆ ಬನ್ನಿ ಎಂದ. ಹಿಂಬಾಲಿಸುತ್ತಿದ್ದ ಶೌರಿ ಅವರಿಗೆ ಸಾಕಾಗಿಹೋಯಿತು. ಕೊನೆಗೆ ಚಂದ್ರಾಸ್ವಾಮಿ ಕಾಗದದ ಒಂದು ಹಾಳೆ ತೋರಿಸಿದ. ಅದರಲ್ಲಿ ಎರಡು ಸಂಖ್ಯೆ ಗಳಿದ್ದವು.

ಇವೆರಡೂ ಸ್ವಿಸ್ ಬ್ಯಾಂಕುಗಳಲ್ಲಿರುವ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಅಕೌಂಟ್ ನಂಬರ್ಸ್ ಎಂದ.
ಒಂದು ಕಾಲದಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಮಂತ್ರಿಗಳು ಸಾಲಾಗಿ ನಿಂತು ಚಂದ್ರಾಸ್ವಾಮಿಯ ಪಾದಾಭಿವಂದನೆ ಮಾಡುತ್ತಿದ್ದರು. ಅಂಥ ಚಂದ್ರಾಸ್ವಾಮಿ ಇದೀಗ ಪ್ರಾಣಭಯದಿಂದ ಅಕ್ಷರಶಃ ನಡುಗುತ್ತಿದ್ದ. ಇವನ ಅಂತಃಶಕ್ತಿ ಇಷ್ಟೇನೇ ಎಂದು ಯಾರಿಗಾದರೂ ಅನ್ನಿಸುವಂತಿತ್ತು. ಅವನ ತಾಂತ್ರಿಕ ಶಕ್ತಿ ನಗೆಪಾಟಲಿಗೆ ಈಡಾಗಿತ್ತು. ನ್ಯಾಯವಾದಿ ರಾಮ್ ಜೇಠಮಲಾನಿ ಅವರು ತಮಗೆ ಆಪ್ತರಾದ ಮತ್ತು ಲಂಡನ್ನಿನಲ್ಲಿರುವ ಹಿಂದೂಜಾ ಕುಟುಂಬದವರಿಗೆ ಬೋಫೋರ್ಸ್ ಹಗರಣದ ಮುಖ್ಯವ್ಯಕ್ತಿ
ಮಾರ್ಟಿನ್ ಆರ್ಡಬೋ ಪರಿಚಯವಿದೆ. ಅವರಿಂದ ಖಚಿತ ಮಾಹಿತಿ ಸಿಕ್ಕುತ್ತದೆ, ಎಂದರು.

ಜೇಠಮಲಾನಿ ಅವರ ಪ್ರತಿಷ್ಠೆಗೆ ತಕ್ಕಂತೆ ವೈಭವದ ವಿಮಾನ ವ್ಯವಸ್ಥೆ, ಲಂಡನ್ನಿನಲ್ಲಿ ಉಳಿಯುವ ವ್ಯವಸ್ಥೆ ಆಯಿತು. ಇಂಡಿ ಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಧಣಿ ರಾಮನಾಥ್ ಗೋಯೆಂಕಾ ಬಹಳ ನಿಷ್ಠುರ ವ್ಯಕ್ತಿ, ಪತ್ರಿಕೆಯ ಯಾವೊಬ್ಬ ಪತ್ರಕರ್ತನೂ ಯಾರಿಂದಲೂ ಯಾವುದೇ ಸೌಲಭ್ಯ ಪಡೆಯುವಂತಿರಲಿಲ್ಲ. ಬೇರೆಯವರು ನಿನಗೆ ಹೋಟೆಲ್ ಬುಕ್ ಮಾಡಿದ್ದರೆ, ಬೇರೆಯವರ ಕಾರು ನೀನು ಹತ್ತಿದ್ದು ಗೊತ್ತಾದರೆ, ನಾನು ನಿನ್ನನ್ನು ಎತ್ತಿ ಬಿಸಾಕಿಬಿಡುತ್ತೇನೆ ಎಂದು ಗೋಯೆಂಕಾ ಅವರು ಶೌರಿ ಅವರಿಗೆ ಧಮಕಿ ಹಾಕಿದ್ದರು.

ಹಾಗಾಗಿ ಶೌರಿ ಅವರು ಲಂಡನ್‌ಗೆ ಹೋಗಿ ಬರಲು ಮತ್ತು ಅಲ್ಲಿ ಲಂಡನ್ನಿನಲ್ಲಿಯೂ ಬಹಳ ಪಾಡು ಪಡಬೇಕಾಯಿತು. ಸಂಕ್ಷೇಪಿಸಿ ಹೇಳುವುದಾದರೆ, ಶೌರಿ ಅಲ್ಲಿಂದ ಸ್ವೀಡನ್‌ನ ರಾಜಧಾನಿ ಸ್ಟಾಕ್ ಹೋಮ್‌ಗೆ ಸಹ ಹೋಗಬೇಕಾಯಿತು. ಅಲ್ಲಿ ಸ್ವೀಡನ್‌ನ ಪ್ರಖ್ಯಾತ ಪತ್ರಕರ್ತ ಪೆರ್ ವೆಂಡೆಲ್‌ನನ್ನು ಭೇಟಿ ಮಾಡಿದರು. ಶೌರಿ ಅವರ ಬಳಿ, ಚಂದ್ರಾಸ್ವಾಮಿಯು ಒಂದು ಕಾಗದದ ಹಾಳೆಯ ಮೇಲೆ ಬರೆದಿದ್ದ ಎರಡು ಸಂಖ್ಯೆಗಳಿದ್ದವು.

ಶೌರಿ ಅವರು ವೆಂಡೆಲ್‌ಗೆ ಆ ಹಾಳೆ ತೋರಿಸಿದರು. ಆತ ಒಂದು ನಿಮಿಷ ಗಮನಿಸಿ ಇವೆರಡೂ ಸ್ವಿಸ್ ಬ್ಯಾಂಕ್ ಅಕೌಂಟ್
ನಂಬರ್‌ ಗಳಲ್ಲ. ಇವು ಮಾರ್ಟಿನ್ ಆರ್ಡಬೋನ ಟೆಲಿಫೋನ್ ನಂಬರ್‌ಗಳು. ಒಂದು ಸ್ಟಾಕ್ ಹೋಮ್ ನಂಬರ್‌, ಮತ್ತೊಂದು ಕಾಲ್ಸ ಕೋಗ ಎಂಬ ಊರಿನದು ಎಂದ. ಅರುಣ್ ಶೌರಿ ಅವರಿಗೆ ಹೇಗಾಗಿರಬೇಡ. ವೃತ್ತಿನಿಷ್ಠ ಪತ್ರಕರ್ತರ ಕೆಲಸ ಕಠಿಣಾತಿಕಠಿಣ.
ಇಂತಹ ಹತ್ತಾರು ರೋಚಕ ಪ್ರಕರಣಗಳನ್ನು ಕುರಿತು ಶೌರಿ ಅವರು ತಮ್ಮ ಹೊಸ ಕೃತಿ ‘ದಿ ಕಮಿಷನರ್ ಫಾರ್ ಲಾಸ್ಟ್ ಕಾಸಸ್’ ಬರೆದಿzರೆ. ಆರು ನೂರು ಪುಟಗಳ ಈ ಪುಸ್ತಕ ನಿಜಕ್ಕೂ ಅದ್ಭುತ. ಕಳೆದ ನಾಲ್ಕೈದು ದಶಕಗಳ ಭಾರತದ ರಾಜಕಾರಣದ ಮಹತ್ತ್ವದ ಅಧ್ಯಾಯಗಳ ಅನಾವರಣ ಇಲ್ಲಿದೆ. ಅರುಣ್ ಶೌರಿ ಅವರ ಹರಿತವಾದ ಭಾಷೆ, ಚಾಟಿಯೇಟಿನಂತಹ ವಾಕ್ಯಗಳು, ವಿಷಯ ಸಾಮಗ್ರಿ, ಪುಸ್ತಕ ಕೆಳಗಿಡಲಾಗದಂತೆ ಬಿಡದೇ ಓದಿಸಿಕೊಂಡು ಹೋಗುವಂತಹ ನಿರೂಪಣೆ, ಅವರದ್ದೇ ಆದ ವಿಶಿಷ್ಟ
ಶೈಲಿಯೊಂದನ್ನು ಹುಟ್ಟಿ ಹಾಕಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಅಂಕಣಕಾರರಾಗಿ, ಕಾರ್ಯನಿರ್ವಾಹಕ ಸಂಪಾದಕರಾಗಿ, ಮುಖ್ಯ ಸಂಪಾದಕರಾಗಿ ಶೌರಿ ಅವರು ಭಾರತದ ಮನೆಮಾತಾದರು. ೭೦,೮೦ರ ದಶಕಗಳ ಭಾರತೀಯ ಪತ್ರಿಕೋದ್ಯಮದಲ್ಲಿ ಕ್ರಾಂತಿಯಾಯಿತು. ಎಡೆ ಹೊಸ ಹವೆ ಬೀಸಿತು. ಅವರು ಪ್ರಚಲಿತ ವಿದ್ಯಮಾನಗಳ ಬಗೆಗೆ ತಮ್ಮ ಮೌಲಿಕವಾದ ಅಂಕಣಗಳನ್ನು ಬರೆದರು. ನ್ಯಾಯಾಲಯಗಳ ತೀರ್ಪುಗಳು, ಆಯೋಗಗಳ ವರದಿಗಳು, ಮೂಲ ಕಡತಗಳು, ರಾಷ್ಟ್ರೀಯ ಪತ್ರಾಗಾರ, ಅಭಿಲೇಖಾಗಾರ, ಐತಿಹಾಸಿಕ ಕಾಗದ ಪತ್ರಗಳು, ಅರುಣ್ ಶೌರಿ ಅವರ ಬರೆಹಗಳ ಹಿಂದಿನ ಶಕ್ತಿಯಾಗಿವೆ. ವಸ್ತುನಿಷ್ಠವಾದ ಆಧಾರ ಪೂರ್ಣವಾದ ಅವರ ಬರಹಗಳನ್ನು ವಿಚಾರಗಳನ್ನು ಅವರ ವಿರೋಧಿಗಳು ಬರಿದೇ ಕಟಕಿಗಳಿಂದ ಟೀಕೆಗಳಿಂದ ವೈಷಮ್ಯದಿಂದ ಎದುರಿಸಿದ್ದಾರೆಯೇ ಹೊರತು
ಸಾಕ್ಷ್ಯಾಧಾರಗಳಿಂದಲ್ಲ.

೧೯೮೦ರ ದಶಕದಲ್ಲಿ ಅರುಣ್ ಶೌರಿ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನೇ ನಡೆಸಿದರು. ಅನೇಕ ಹಗರಣಗಳನ್ನು ಬಯಲಿಗೆಳೆದರು. ೧೯೮೧ರಲ್ಲಿ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿದ್ದ ಅಬ್ದುಲ್ ರಹಮಾನ್ ಅಂತುಳೆ, ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಹೆಸರಿನಲ್ಲಿ ಖಾಸಗಿ ಟ್ರಸ್ಟ್ ಒಂದನ್ನು ಸ್ಥಾಪಿಸಿ ಭ್ರಷ್ಟ ಹಣ ಸಂಗ್ರಹಿಸುತ್ತಿದ್ದರು. ಶೌರಿ ಅವರ ತನಿಖಾ ವರದಿಗಳು ನೀಡಿದ ಮಾಹಿತಿಯಿಂದ, ದಾಖಲೆಗಳಿಂದ ಅಂತುಳೆ ಅವರು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತ ರಾಗಬೇಕಾಯಿತು.

ಪತ್ರಿಕಾ ವರದಿಯಿಂದ ಮುಖ್ಯಮಂತ್ರಿಯೊಬ್ಬ ತನ್ನ ಅಽಕಾರ ಕಳೆದುಕೊಂಡ ದೊಡ್ಡ ಪ್ರಕರಣ ಇದಾಯಿತು. ಪ್ರಧಾನಮಂತ್ರಿ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ನಾಚಿಕೆಯಿಂದ ತಲೆ ತಗ್ಗಿಸ ಬೇಕಾಯಿತು. ಬಿಹಾರದ ಪೊಲೀಸರು ೩೧ ಜನ ವಿಚಾರಣಾ ಧೀನ ಕೈದಿಗಳ ಕಣ್ಣುಗಳಿಗೆ ಆಸಿಡ್ ಸುರಿದು ಅವರ ಕಣ್ಣುಗಳನ್ನು ಕುರುಡಾಗಿಸಿದ್ದರು. ಬಿಹಾರ ಜೈಲುಗಳಲ್ಲಿನ ಈ ಭಾಗಲ್ಪುರ ಬ್ಲೈಡಿಂಗ್ಸ್ ಬಗೆಗಿನ ವರದಿ, ಛಾಯಾಚಿತ್ರಗಳು ಪತ್ರಿಕೆಯ ಮುಖಪುಟದಲ್ಲಿ ಅಚ್ಚಾದ ಬಗೆ ಮತ್ತು ಪ್ರಸ್ತುತಿಗಳನ್ನು ದೆಹಲಿಯ ನನ್ನ ಗೆಳೆಯರು ಬಣ್ಣಿಸುತ್ತಿದ್ದರು. ಅಂತಹ ವರದಿಗಳು ಭಾರತೀಯ ಪತ್ರಿಕೋದ್ಯಮದಲ್ಲಿಯೇ ನ ಭೂತೋ ಎನ್ನುವಂತಿದ್ದವು.

ಬಿಹಾರದ ಕಾಂಗ್ರೆಸ್ ಸರಕಾರವಿರಲಿ, ದೆಹಲಿಯಲ್ಲಿದ್ದ ಕೇಂದ್ರ ಸರಕಾರವೇ ನಡುಗಿಹೋಗಿತ್ತು. ಮುಂದೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ಅನೇಕ ವರ್ಷಗಳಿಂದ ಜೈಲುಗಳಲ್ಲಿ ಕೊಳೆಯುತ್ತಿದ್ದ ನಲವತ್ತು ಸಾವಿರ ವಿಚಾರಣಾಧೀನ ಕೈದಿಗಳು ಬಿಡುಗಡೆಯಾದರು. ಅದರಲ್ಲಿ ಬಿಹಾರದ ಕೈದಿಗಳ ಸಂಖ್ಯೆಯೇ 27 ಸಾವಿರ ಇತ್ತು, ಎಂದರೆ ಅಂದಿನ ಬಿಹಾರದ ಒಂದು ಚಿತ್ರ ನಮಗೆ ಗೊತ್ತಾಗಬಹುದು. ಈ ಮಾನವೀಯ ಕಾರ್ಯದ ಶ್ರೇಯಸ್ಸು ಶೌರಿ ಅವರಿಗೇ ಸಲ್ಲುತ್ತದೆ. ಅರುಣ್ ಶೌರಿ ಅವರ
ಅನುಪಮ ಸಾಧನೆಗಳಲ್ಲಿ ಇದೂ ಒಂದು. ಅಂದಿನ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ ಬೋಫೋರ್ಸ್ ಹಗರಣದ ವಿವರಗಳನ್ನು ಶೌರಿ ಅವರು ಬೆಳಕಿಗೆ ತಂದಾಗ, ತೆಕ್ಕೆ ತೆಕ್ಕೆ ಮಾಹಿತಿ, ದಾಖಲೆಗಳು ಪತ್ರಿಕೆಗಳಲ್ಲಿ ಅಚ್ಚಾದಾಗ ಭಾರತದ ಜನ ಸ್ತೋಮ ಅಚ್ಚರಿಪಟ್ಟಿತು.

ಪತ್ರಿಕಾ ವರದಿಗಾರಿಕೆ ಹೀಗೂ ಸಾಧ್ಯವೇ, ಎನ್ನುವಂತಹ ವಿಶಿಷ್ಟ ಪತ್ರಿಕಾ ವಿನ್ಯಾಸವನ್ನು ಆರಂಭಿಸಿದವರು ಶೌರಿ ಅವರೇ.
ಅನಂತರದ ವರ್ಷಗಳಲ್ಲಿ ಶೌರಿ ಅವರು ತಮ್ಮ ಸೃಜನಶೀಲತೆಯನ್ನು ಗ್ರಂಥರಚನೆಯತ್ತ ತಿರುಗಿಸಿದರು. ಇಸ್ಲಾಂ, ಕ್ರೈಸ್ತ ಮತಗಳ ಸಾಮ್ರಾಜ್ಯಶಾಹಿ ಆಕ್ರಮಣ ಮತ್ತು ಇತಿಹಾಸ ಕುರಿತಂತೆ ಮತ್ತು ಕಮ್ಯುನಿಸ್ಟರನ್ನು ಕುರಿತಂತೆ ಅಪಾರವಾದ ಮಾಹಿತಿ, ಪುರಾವೆ ಗಳನ್ನು ಆಧರಿಸಿದ ಬಹುಮೂಲ್ಯ ಗ್ರಂಥಗಳನ್ನು ಪ್ರಕಟಿಸಿದರು.

ಸಂಸದೀಯ ಪ್ರಜಾಪ್ರಭುತ್ವ, ಚೀನಾ ನೀತಿ, ವಿದೇಶಾಂಗ ನೀತಿಗಳ ಬಗೆಗೂ ಬರೆದಿದ್ದಾರೆ. ಅವರ ಕೃತಿಗಳ ವೈವಿಧ್ಯ, ಮಹತ್ವ , ವಿಸ್ತಾರಗಳು ಅಚ್ಚರಿಯ ಮಹಾಪೂರಕ್ಕೇ ಕಾರಣವಾಗುತ್ತವೆ. ಈ ಸಾಧನೆಯ ಪರಿಪ್ರೇಕ್ಷ್ಯದಲ್ಲಿ ಅವರು ಭಾರತದ ಲೇಖಕರಲ್ಲಿಯೇ ಅತ್ಯುನ್ನತ ಸ್ಥಾನ ಪಡೆಯುತ್ತಾರೆ. ೨೦೧೪ರಲ್ಲಿ ಅರುಣ್ ಶೌರಿ ಅವರು ರಾಷ್ಟೀಯ ಮಹತ್ತ್ವದ ನಮ್ಮ ವಾಯ್ಸ ಆಫ್ ಇಂಡಿಯಾ ಸಾಹಿತ್ಯ ಸರಣಿಯ ಕಚೇರಿಗೆ ಬಂದಿದ್ದರು ಮತ್ತು ಲೇಖಕರ, ಪತ್ರಕರ್ತರ, ಗಣ್ಯರ ಆಪ್ತ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿ ದರು.

ಅಲ್ಲಿಗೆ ಸ್ವತಃ ಶತಾವಧಾನಿ ಗಣೇಶರೂ ಬಂದಿದ್ದರು. ಶೌರಿ ಅವರ ಗ್ರಂಥನಿರ್ಮಿತಿಯ ಅತ್ಯದ್ಭುತ ಸಾಧನೆಗೆ ಗಣೇಶರಂತಹ
ಗಣೇಶರೇ ವಿಸ್ಮಿತರಾಗಿದ್ದರು. ಇಷ್ಟೆ ಹೇಗೆ ಬರೆಯಲು ಸಾಧ್ಯ, ಎಂಬ ಗಣೇಶರ ಪ್ರಶ್ನೆಗೆ ಶೌರಿ ಅವರು ಮುಗುಳ್ನಕ್ಕು ‘ಓನ್ಲಿ ಹಾರ್ಡ್ ವರ್ಕ್’ ಎಂದು ಹೇಳಿದುದು ಕಠಿಣ ಪರಿಶ್ರಮದ ಮಹತ್ತ್ವವೇನು ಎಂಬುದನ್ನು ಸಾರುತ್ತಿತ್ತು. ಅರುಣ್ ಶೌರಿ ಅವರ ಈ ‘ದಿ ಕಮಿಷ ನರ್ ಫಾರ್ ಲಾಸ್ಟ್ ಕಾಸಸ್’ ಕೃತಿಯೂ ಈ ಮಾತನ್ನು ನಿಜ ಮಾಡಿದೆ.