Thursday, 12th December 2024

ಮದುವೆಯಲ್ಲಿ ಅರುಂಧತಿ ನಕ್ಷತ್ರ ದರ್ಶನ ಏಕೆ, ಹೇಗೆ?

ತಿಳಿರು ತೋರಣ
ಶ್ರೀವತ್ಸ ಜೋಶಿ

ಅರುಂಧತಿಯ ಪಾತಿವ್ರತ್ಯ, ಪರಿಶುದ್ಧತೆ, ಮತ್ತು ಮಿತಭೋಗಿತ್ವ; ಪತಿ ವಸಿಷ್ಠರಂತೆಯೇ ಪ್ರಖರ ವರ್ಚಸ್ಸಿನ ವ್ಯಕ್ತಿತ್ವ; ಈ ಗುಣ ಶ್ರೇಷ್ಠತೆಯಿಂದಲೇ ಭಾರತೀಯ ಪುರಾಣಗಳಲ್ಲಿ ಅತ್ಯಂತ ವಂದನೀಯ ಸ್ತ್ರೀ ಎಂಬ ಮಹತ್ತ್ವ- ಇದೆಲ್ಲವನ್ನೂ ಕಳೆದ ವಾರದ ಅಂಕಣದಲ್ಲಿ ತಿಳಿದುಕೊಂಡೆವು. ಹಿಂದೂ ವಿವಾಹ ಪದ್ಧತಿಯಲ್ಲಿ ಅರುಂಧತಿ ನಕ್ಷತ್ರದರ್ಶನ ಎಂಬ ಒಂದು ಸ್ವಾರಸ್ಯಕರ ಸಂಪ್ರದಾಯದ ಬಗ್ಗೆ ಈ ವಾರ ಅರಿತುಕೊಳ್ಳೋಣ ಎಂದಿದ್ದೆನಷ್ಟೆ? ಈ ಸಂಪ್ರದಾಯದ ಧಾರ್ಮಿಕ ಹಿನ್ನೆಲೆ, ವೈಜ್ಞಾನಿಕ ಪುರಾವೆ, ಮತ್ತು ಈಗ ಹೇಗೆ ಅದೊಂದು ತೋರ್ಪಡಿಕೆಯ ಪ್ರಹಸನದಂತೆ, ಕಾಟಾಚಾರದ ಕ್ರಮದಂತೆ ಆಗಿಹೋಗಿದೆ ಎಂಬುದರ ಬಗ್ಗೆಯೂ ಉಲ್ಲೇಖಿಸಬೇಕು ಎಂದುಕೊಂಡಿದ್ದೆ.

ಬಹುಶಃ ಅದನ್ನು ಆಗಲೇ ಊಸಿ ಒಂದಿಬ್ಬರು ಓದುಗರು ಪ್ರತಿಕ್ರಿಯೆಯಲ್ಲಿ ಬರೆದಿದ್ದಾರೆ. ಮೊದಲು ಆ ಕಿರುಟಿಪ್ಪಣಿಗಳನ್ನೇ ಓದೋಣ. ಈ ವಾರದ ವ್ಯಾಖ್ಯಾನಕ್ಕೊೊಂದು ಲಘು ಪೀಠಿಕೆ ಆದಂತಾಗುತ್ತದೆ. ಶಿರಸಿಯಿಂದ ವೀಣಾ ಹೆಗಡೆ: ‘ಇಂದಿನ ಮದುವೆಗಳೆಲ್ಲ ಆಗುವುದು ಹಗಲಿನಲ್ಲೇ. ಸಪ್ತಪದಿ ಇತ್ಯಾದಿ ವಿಧಿಧಾನಗಳು ಮುಗಿದ ತತ್‌ಕ್ಷಣ ಅರುಂಧತಿ ನಕ್ಷತ್ರ ತೋರಿಸುವ ಬಹಳ ಸುಂದರವಾದ ಪೋಸು. ಪ್ರತಿ ಮದುವೆಯ ಆಲ್ಬಂನಲ್ಲೂ ಇರಲೇಬೇಕಾದ ಒಂದು ಕಂಪಲ್ಸರಿ ಫೋಟೊ ಆಗಿಬಿಟ್ಟಿದೆ.
ಚಂದವಾಗಿ ರೆಡಿ ಆಗಿರುವ ವಧೂವರರು. ವರನ ಕೈ ವಧುನ ಕೈಯನ್ನು ಮೇಲೆತ್ತಿ, ಇಬ್ಬರೂ ಆಗಸದೆಡೆಗೆ ನೋಡುತ್ತ ನಗು
ಬೀರುತ್ತಿರುವ ಪೋಸ್ ಅದು. ಮೇಲಿರುವುದು ಎಂಥದೂ ಇಲ್ಲ, ಶಾಮಿಯಾನ!

ಹಗಲಿನಲ್ಲಿ ಶಾಮಿಯಾನದಿಂದ ಹೊರಗೆ ಹೋದರೂ ನೀಲಿ ಆಕಾಶದ ದರ್ಶನ ಅಷ್ಟೆ. ಒಂದು ಫೋಟೊಗೋಸ್ಕರ ಈ ರೀತಿ ನಾಟಕದಂತೆ ಆಡುವ ಬದಲು ಅದೇ ವೇಳೆಯಲ್ಲಿ ವಸಿಷ್ಠ – ಅರುಂಧತಿಯರ ಕಥೆಯನ್ನು ಹೇಳಬಹುದು. ವರನಿಗೆ ತನ್ನ ಹೆಂಡತಿಯನ್ನು ಯಾವ ರೀತಿ ಗೌರವದಿಂದ ನೋಡಿಕೊಳ್ಳಬೇಕೆಂಬ ಅಂದಾಜಾದೀತು. ವಧುವಿಗೆ ತನ್ನ ಪಾತ್ರ, ಜವಾಬ್ದಾರಿ, ಮಹತ್ತ್ವ ಇನ್ನುಮುಂದೆ ಏನು ಎನ್ನುವುದೂ ಅರಿವಾದೀತು.’ ಮೈಸೂರಿನಿಂದ ರಾಘವೇಂದ್ರ ಭಟ್ಟರೂ ಇಂಥದ್ದೇ ಇನ್ನೊೊಂದು ಚಿತ್ರಣ ಕೊಟ್ಟಿದ್ದಾರೆ: ‘ಮದುವೆ ಕಲಾಪಗಳೆಲ್ಲ ಮುಗಿದಿವೆ; ಪುರೋಹಿತರು ಗಂಟುಮೂಟೆ ಎತ್ಕೊೊಂಡು ವಧೂವರರನ್ನು ಛತ್ರದ ಬಾಗಿಲಿನ ಬಳಿ ಸೋಫಾದಲ್ಲಿ ಕೂರಿಸಿ ಮಟಮಟ ಮಧ್ಯಾಹ್ನದ ಹೊತ್ತಿನಲ್ಲಿ ಪೂರ್ವ ದಿಕ್ಕಿನತ್ತ ಬೆಟ್ಟುಮಾಡಿ ತೋರಿಸಿ ‘ಅಗೋ ಅಲ್ಲಿ ಸಣ್ಣ ಚುಕ್ಕಿ ಇದ್ಯಲ್ಲಾ ಅದು ವಸಿಷ್ಠರದು, ಅದರ ಮಗ್ಗುಲೇ ಅರುಂಧತೀದು! ನೀಬ್ರೂ ಒಟ್ಟಿಗೇ ನೋಡಿ ಕೈಮುಗಿದು ಕಾಲ್ತೊಳೆದು ಒಳಕ್ಕೆ ಹೋಗಿ ಊಟ ಮಾಡಿ’ ಎನ್ನುತ್ತ ಹೊರಟೇಹೋದ್ರಂತೆ!

ಈ ಹೊಸ ಜೋಡಿಯೇನೋ ಪಳಗಿದ ಕುಳ(!) ಆದ್ರಿಿಂದ ‘ಕಾಣ್ತು ಕಾಣ್ತು!’ ಅಂತ ಕೂಗ್ತಾ0ನೇ ಛತ್ರದ ಊಟದ ಹಾಲ್‌ಗೆ ನುಗ್ಗಿ ದ್ರಂತೆ!’ ನಿಜ. ಇದರಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಈಗ ಇದೇ ಪರಿಸ್ಥಿತಿ. ಎಲ್ಲದರಲ್ಲೂ ಶೋಆಫ್ ಮುಖ್ಯ. ಪಟಗಳು ಅತ್ಯಾ ಕರ್ಷಕ ಆಗಿ ಬರಬೇಕಾದ್ದರಿಂದ ಮದುವೆಯ ವಿಧಿವಿಧಾನಗಳ ನಿರ್ದೇಶನದಲ್ಲಿ ಫೋಟೊಗ್ರಾಫರ ಮತ್ತು ವಿಡಿಯೋಗ್ರಾಫರರೇ ಪುರೋತರಿಗಿಂತಲೂ ಒಂದು ಕೈ ಮೇಲು. ಮಾಲೆಗಳನ್ನು ಎರಡೆರಡು ಬಾರಿ ಹಾಕಿಸಿಯಾರು. ತಾಳಿಯನ್ನು ಮತ್ತೆಮತ್ತೆ ಕಟ್ಟಿಸಿ ಯಾರು.

ನಿಜವಾದ ಅರುಂಧತಿ ನಕ್ಷತ್ರದರ್ಶನ, ಆಗ ಹೇಳಬೇಕಾದ ಮಂತ್ರ ಉಚ್ಚಾರ ಇವೆಲ್ಲ ಯಾರಿಗೆ ಬೇಕಾಗಿದೆ? ವರನು ವಧುವಿನ
ಮುಂದೆ ನಿಂತು ಆಲಿಂಗಿಸಿ ತನ್ನ ಎಡಗೈಯಿಂದ ವಧುವಿನ ಗಲ್ಲ ಹಿಡಿದು ಮುಖ ಮೇಲಕ್ಕೇರಿಸಿ ಇಬ್ಬರೂ ಬಲಗೈಗಳನ್ನು ಜೋಡಿಸಿ ಆಗಸದತ್ತ ಬೆರಳುತೋರಿಸುವ ‘ರೊಮ್ಯಾಾಂಟಿಕ್’ ಪೋಸು ಬಹುಮುಖ್ಯ. ಫೇಸ್‌ಬುಕ್‌ನಲ್ಲಿ ಆ ಫೋಟೊಗೆ ಮಿಕ್ಕೆಲ್ಲ ಕ್ಕಿಿಂತ ನಾಲ್ಕು ಹೆಚ್ಚೇ ಲೈಕುಗಳು ಬೀಳಬಹುದು. ಪುರೋಹಿತರ ವಿಷಯವಾದರೂ ಅಷ್ಟೇ. ಅವರಿಗೆ ಆವತ್ತೇ ಸಂಜೆ ಇನ್ನೊೊಂದು ಛತ್ರದಲ್ಲಿ ಮತ್ತೊೊಂದು ಮದುವೆಯ ವರಪೂಜೆ ಮಾಡ್ಸೋದಿರುತ್ತೆ, ಹಾಗಾಗಿ ಅರ್ಜೆಂಟು. ಅಲ್ಲದೇ ಗಿಜಿ ಗುಡುವ ಮದುವೆ ಹಾಲ್ ನಲ್ಲಿ ಮೊದಲೇ ಸೆಕೆ, ಸಾಲದೆಂಬಂತೆ ಲಾಜಾಹೋಮದ ಹೊಗೆ, ಧಗೆ… ಒಮ್ಮೆ ಹೊರಬಂದರೆ ಉಸ್ಸಪ್ಪಾ ಎಂದು ನಿಟ್ಟುಸಿರು.

ಅರುಂಧತಿನಕ್ಷತ್ರ ನೀವೇ ನೋಡ್ಕೊಳ್ಳಿ ಎಂದು ವಧೂವರರಿಗೆ ಹೇಳಿ ಮೊಬೈಲ್‌ನಲ್ಲಿ ಮೆಸೇಜು ಚೆಕ್ ಮಾಡತೊಡಗಿಯಾರು!
ಹಿಂದೆಲ್ಲ ಐದು ದಿನಗಳ ಕಾಲ ನಡೆಯುತ್ತಿದ್ದ ವಿವಾಹಮಹೋತ್ಸವವು ಈಗ ಹೆಚ್ಚೆೆಂದರೆ ಐದು ಗಂಟೆ ಅವಧಿಯೊಳಗೆ
ಮುಗಿಯಬೇಕು. ಕ್ರಿಕೆಟ್‌ನಲ್ಲಿ ಟೆಸ್‌ಟ್‌ ಮ್ಯಾಚುಗಳ ಆಕರ್ಷಣೆ ಕಮ್ಮಿಯಾಗಿ ಇಪ್ಪತ್ತು ಓವರ್‌ಗಳ ಟಿ-ಟ್ವೆೆಂಟಿ ಅಥವಾ ಐಪಿಎಲ್
ನಂಥವು ಹೇಗೆ ಆಕರ್ಷಣೆ ಪಡೆದಿವೆಯೋ ಥೇಟ್ ಅದೇರೀತಿ.

‘ಶೋ’ಬಾಜಿಯದೇ ಪ್ರಧಾನ ಭೂಮಿಕೆ. ಇದರ ಮ್ಯಾಕ್ಸಿಮಮ್ ಬೆನಿಫಿಟ್ ಪಡೆಯುವವರಾರು? ಡೈವೋರ್ಸ್ ಕೇಸುಗಳನ್ನೆತ್ತಿ
ಕೊಳ್ಳುವ ಲಾಯರ್‌ಗಳು! ಆದರೆ ನಮ್ಮ ಪೂರ್ವಿಕರು ತೋರ್ಪಡಿಕೆಗಾಗಿ ಈ ಸಂಪ್ರದಾಯವನ್ನು ಪಾಲಿಸುತ್ತಿದ್ದದ್ದಲ್ಲ. ಅದರ ಹಿಂದಿನ ಅರ್ಥ ಮತ್ತು ಆಶಯಗಳಿಗೆ ತುಂಬ ಮಹತ್ತ್ವ ಇತ್ತು. ಅರುಂಧತಿ ನಕ್ಷತ್ರದರ್ಶನವನ್ನು ಮದುವೆಯಂದು ರಾತ್ರಿ ಸಮಯದಲ್ಲೇ ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಿರುವುದು. ಮದುವೆ ಸಮಾರಂಭ ಐದು ದಿನಗಳವರೆಗೆ ವ್ಯಾಪಿಸಿದ್ದಾಗ ಬಹುಶಃ ಒಂದು ರಾತ್ರಿ ಈ ಅರುಂಧತಿ ನಕ್ಷತ್ರದರ್ಶನದ್ದೇ ಸಂಭ್ರಮ ಇದ್ದಿರಬಹುದು.

ಅಲ್ಲದೇ ಆಗೆಲ್ಲ ಜನನಿಬಿಡ ಪಟ್ಟಣಪ್ರದೇಶಗಳಲ್ಲೂ ಈಗಿನಂತೆ ದ್ಯುತಿಮಾಲಿನ್ಯ ಇರಲಿಲ್ಲವಾಗಿ ರಾತ್ರಿ ಹೊತ್ತು ಆಕಾಶದಲ್ಲಿ
ನಕ್ಷತ್ರಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ಆದ್ದರಿಂದ ವಧೂವರರು ವಿವಾಹದ ಸಂಜೆ ಔಪಾಸನ(ಗೃಹಸ್ಥಾಶ್ರಮ ಆರಂಭಿಸಿದ ಮೇಲೆ
ಹೋಮ) ಮಾಡುವ ಕಾಲದಲ್ಲಿ ಧ್ರುವ ನಕ್ಷತ್ರವನ್ನೂ, ಸಪ್ತರ್ಷಿಮಂಡಲವನ್ನೂ, ಕೊನೆಯಲ್ಲಿ ಅರುಂತಿ ನಕ್ಷತ್ರವನ್ನೂ ದರ್ಶಿಸುವುದು ಪದ್ಧತಿ. ಅರುಂಧತಿ ನಕ್ಷತ್ರದರ್ಶನದ ವೇಳೆ ಹೇಳಲಿಕ್ಕೆೆಂದೇ ಒಂದು ಮಂತ್ರವೂ ಇದೆ. ಅದು ಮಂತ್ರಪ್ರಶ್ನಃ ಎಂಬ
ಮಹಾಗ್ರಂಥದಲ್ಲಿ ಬರುತ್ತದೆ, ಮತ್ತು ಹೀಗೆ ಇದೆ: ‘ಸಪ್ತರ್ಷಯಃ ಪ್ರಥಮಾಂ ಕೃತ್ತಿಕಾನಾಮರುಂಧತೀಂ ಯದ್ಧ್ರುವತಾಂ ಹ
ನಿನ್ಯುಃ ಷಟ್ ಕೃತ್ತಿಕಾ ಮುಖ್ಯಯೋಗಂ ವಹಂತೀಯಂ ಅಸ್ಮಾಕಂ ಏಧತು ಅಷ್ಟು॥’ ಏನಿದರ ಅರ್ಥ? ವರನು ವಧುವಿಗೆ ಹೇಳು ತ್ತಾನೆ: ‘ಸಪ್ತ ಋಷಿಗಳ ಪತ್ನಿಯರ ಪೈಕಿ ಅಗ್ರಗಣ್ಯಳಾದ, ಧ್ರುವತಾರೆಯಂತೆ ಮಾನ್ಯಳಾದ ಅರುಂಧತಿಗೆ ನಮಿಸೋಣ.

ಉಳಿದ ಆರು ಕೃತ್ತಿಕೆಗಳಿಗಿಂತ ಮುಖ್ಯಳೆನಿಸುವ ಅರುಂಧತಿಯ ಬಳಿಕ ನೀನು ಎಂಟನೆಯವಳಾಗಿ ನಿಲ್ಲು. ನಾನೂ ಸಪ್ತರ್ಷಿಗಳ
ಸಾಲಿನಲ್ಲಿ ಎಂಟನೆಯವನಾಗಿ ಇರುತ್ತೇನೆ. ಅಂದರೆ, ಅರುಂಧತಿ – ವಸಿಷ್ಠರನ್ನು ಆದರ್ಶವಾಗಿಟ್ಟುಕೊಂಡು ನಾಬ್ಬರೂ
ಅವರಂತೆಯೇ ಬಾಳೋಣ.’ ಎಂಥ ಆದರ್ಶ ಎಂಥ ಆಶಯ! ಸಪ್ತರ್ಷಿಗಳ ಪತ್ನಿಯರ ಪೈಕಿ ಆರು ಜನರನ್ನು ‘ಕೃತ್ತಿಕೆಯರು’
ಎಂದು ಕರೆಯುವುದೇಕೆ? ಅದಕ್ಕೊೊಂದು ಉಪಕಥೆಯಿದೆ. ಅಗ್ನಿಗೆ ಸಪ್ತರ್ಷಿಗಳ ಪತ್ನಿಯರ ಮೇಲೆ ಮೋಹ ಇತ್ತು, ಮತ್ತು ಅರುಂಧತಿ ಒಬ್ಬಳನ್ನು ಬಿಟ್ಟು ಉಳಿದ ಆರು ಮಂದಿಗೆ ಅದು ಸಮ್ಮತಿಯೂ ಇತ್ತು ಎಂದು ಕಳೆದ ವಾರದ ಅಂಕಣದಲ್ಲೂ ಉಲ್ಲೇಖ ಬಂದಿತ್ತಷ್ಟೆ? ಅಗ್ನಿಯ ಆ ಮೋಹವನ್ನು ಕೆಲವು ಕವಿಗಳು ತಮ್ಮದೇ ರಸಿಕ ಕಲ್ಪನೆಯ ರಂಗೇರಿಸಿ ಬಣ್ಣಿಸುವುದುಂಟು.

ಋಷಿ ಪತ್ನಿಯರು ಯಾಗ ಕುಂಡದ ಸುತ್ತ ಸುತ್ತುವಾಗ ಅಗ್ನಿ ತನ್ನ ಜ್ವಾಲೆಗಳನ್ನು ಮೇಲೆತ್ತರಿಸಿ ಅವರ ಶರೀರವನ್ನು ಮುಟ್ಟಿ ಪುಳಕಗೊಳ್ಳುತ್ತಿದ್ದನು. ಈಗಿನ ಭಾಷೆಯಲ್ಲಿ ಹೇಳುವುದಾದರೆ ‘ಫ್ಲರ್ಟ್’ ಮಾಡುತ್ತಿದ್ದನು. ಅರುಂಧತಿಗೆ ಮಾತ್ರ ಈ ಕೀಟಲೆ ಗೊತ್ತಾಗಿ ಅಗ್ನಿಯನ್ನು ಶಪಿಸಿದಳು… ಅಂತೆಲ್ಲ ಬಣ್ಣನೆ. ಈ ವಿದ್ಯಮಾನದಿಂದಾಗಿ ವಸಿಷ್ಠರನ್ನು ಹೊರತುಪಡಿಸಿ ಉಳಿದ ಆರು ಋಷಿಗಳು ತಮ್ಮತಮ್ಮ ಪತ್ನಿಯನ್ನು ವ್ಯಭಿಚಾರಿಣಿ ಆಗಿರಲೂಬಹುದು ಎಂದು ಶಂಕೆಯಿಂದ ತ್ಯಜಿಸಿದರು. ದಿಕ್ಕೆಟ್ಟ ಆ ಆರು ಸ್ತ್ರೀಯರು ಕುಮಾರಸ್ವಾಮಿಯನ್ನು ಪ್ರಾರ್ಥಿಸಿದರು.

ಆತನು ಅವರನ್ನು ತಾಯಿಯಂತೆ ಗೌರವಿಸಿದನು. ಅವರನ್ನು ಕೃತ್ತಿಕೆಯರು ಎಂದು ಕರೆದು ಅದಾಗಲೇ ಇದ್ದ ಕೃತ್ತಿಕಾ ನಕ್ಷತ್ರಕ್ಕೆ ಸರಿಸಮವಾಗಿ ಅವರಿಗೆ ನಕ್ಷತ್ರಮಂಡಲದಲ್ಲಿ ಸ್ಥಾನದ ಭರವಸೆಯಿತ್ತನು. ಅದು ಎಲ್ಲರಿಗೂ ಗೊತ್ತಾಗಬೇಕು ಎಂದು ಬೇಕಂತಲೇ ಆತ ಶಿಶುರೂಪ ಧರಿಸಿ ಆ ಆರು ಜನ ಕೃತ್ತಿಕೆಯರು ಅವನಿಗೆ ಎದೆಹಾಲು ಉಣಿಸಿದರು. ಹಾಗೆ ಕೃತ್ತಿಕೆಯರಿಂದ ಪೋಷಿಸಲ್ಪಟ್ಟವನು ಕಾರ್ತಿಕೇಯ ಆದನು. ಅರುಂಧತಿ ಮಾತ್ರ ಪಾತಿವ್ರತ್ಯ ನಿಶ್ಚಲತ್ವಗಳಿಂದ ಋಷಿಪತ್ನಿಯರಲ್ಲೇ ಪ್ರಧಾನಳೆಂದೂ, ಸಪ್ತರ್ಷಿಗಳಿಗೆ ಸರಿಸಮಳೆಂದೂ ಪರಿಗಣಿಸಲ್ಪಟ್ಟಳು. ಉಳಿದ ಆರು ಋಷಿಪತ್ನಿಯರು ನಕ್ಷತ್ರಗಳಾಗಿ ಆಕಾಶದಲ್ಲಿ ಎಲ್ಲೋ ಇರಬಹುದು; ಅವುಗಳನ್ನು ಯಾರೂ ನೋಡುವುದೂ ಇಲ್ಲ ಗೌರವಿಸುವುದೂ ಇಲ್ಲ. ಅರುಂಧತಿಗೆ ಮಾತ್ರ ವಿಶೇಷ ಗೌರವ.

ನವವಿವಾಹಿತರಿಗೆ ಆಕೆಯೇ ಆದರ್ಶ. ಸಪ್ತರ್ಷಿಗಳೆಂದು ಕರೆಯಲ್ಪಡುವ ಏಳು ಋಷಿಗಳು ಯಾರು? ಇದಕ್ಕೆ ಒಂದೇ ನಿರ್ದಿಷ್ಟ ಉತ್ತರವಿಲ್ಲ. ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದಲ್ಲಿ ಸಪ್ತರ್ಷಿಗಳೆಂದರೆ: ವಿಶ್ವಾಮಿತ್ರ, ಜಮದಗ್ನಿ, ಭರದ್ವಾಜ, ಗೌತಮ, ಅತ್ರಿ, ವಸಿಷ್ಠ, ಮತ್ತು ಕಶ್ಯಪ. ಆದರೆ ಇದಕ್ಕಿಿಂತ ಹಿಂದಿನ ಸ್ವಾಯಂಭುವ ಮನ್ವಂತರದಲ್ಲಿ ಸಪ್ತರ್ಷಿಗಳೆಂಬ ಗೌರವ ಪಡೆದವರು: ಮರೀಚಿ, ವಸಿಷ್ಠ, ಅಂಗಿರಸ, ಅತ್ರಿ, ಪುಲಸ್ತ್ಯ, ಪುಲಹ, ಮತ್ತು ಕ್ರತು. ಇದೊಂಥರ ನಮ್ಮ ಭಾರತದ ರಾಜ್ಯಸಭೆಯಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಮೂರನೆಯ ಒಂದರಷ್ಟು ಸದಸ್ಯರು ನವೀಕರಣಗೊಳ್ಳುವ ರೀತಿಯಂತೆಯೇ ಇರುವ ವ್ಯವಸ್ಥೆ.

ಎರಡೂ ಮನ್ವಂತರಗಳ ಪಟ್ಟಿ ಗಮನಿಸಿದರೆ ಎರಡರಲ್ಲೂ ಇರುವವರು ಅತ್ರಿ ಮತ್ತು ವಸಿಷ್ಠ ಮಾತ್ರ. ಆಕಾಶದಲ್ಲಿ ಸಪ್ತರ್ಷಿಮಂಡಲ ಎಂದು ಕರೆಯಲ್ಪಡುವ ನಕ್ಷತ್ರಮಂಡಲದಲ್ಲಿ ಇರುವವರು ಸ್ವಾಯಂಭುವ ಮನ್ವಂತರದ ಪಟ್ಟಿಯಲ್ಲಿರುವವರು. ನಿಮಗೆ ನಕ್ಷತ್ರ ವೀಕ್ಷಣೆಯ ಹವ್ಯಾಸ ಇದೆಯಾದರೆ, ಸಪ್ತರ್ಷಿಮಂಡಲವನ್ನು ಗುರುತಿಸಬಲ್ಲಿರಾದರೆ, ಭೂಮಿಯ ಉತ್ತರ ಗೋಲಾರ್ಧದವರಿಗೆ ಸಾಮಾನ್ಯವಾಗಿ ರಾತ್ರಿ ಹೊತ್ತು ಆಕಾಶದಲ್ಲಿ ಈಶಾನ್ಯ ದಿಕ್ಕಿನತ್ತ ನೋಡಿದರೆ ಏಳು ನಕ್ಷತ್ರಗಳಿಂದ ಒಂದಕ್ಕೊೊಂದು ಗೆರೆ ಎಳೆದರೆ ಗಾಳಿಪಟದಂತೆ ಅಥವಾ ಕವುಚಿಟ್ಟ ಕೈಬಟ್ಟಲಿನಂತೆ ಕಾಣುತ್ತದೆಂದು ಗೊತ್ತು. ಅದರಲ್ಲಿ ಯಾವ ನಕ್ಷತ್ರಕ್ಕೆ ಯಾವ ಋಯ ಹೆಸರು? ಕ್ರಿ.ಶ ಆರನೆಯ ಶತಮಾನದಲ್ಲಿ ಉಜ್ಜಯನಿ ನಗರದಲ್ಲಿ ಬಾಳಿದ್ದ ವರಾಹುರ ಎಂಬ ಖಗೋಳ ಶಾಸ್ತ್ರಜ್ಞನು ಬರೆದ ಬೃಹತ್ ಸಂತಾ ಎಂಬ ಎನ್‌ಸೈಕ್ಲೊಪಿಡಿಯಾ ರೀತಿಯ ಗ್ರಂಥದಲ್ಲಿ ಇದರ ಬಗ್ಗೆ ಶ್ಲೋಕ ರೂಪದಲ್ಲಿ ಬರೆದದ್ದಿದೆ: ‘ಪೂರ್ವೇ ಭಾಗೇ ಭಗವಾನ್ಮರೀಚಿರಪರೇ ಸ್ಥಿತೋ ವಸಿಷ್ಠೋಸ್ಯಾತ್‌ ತಸ್ಯಾಾಂಗಿರಾಸ್ತತೋ ತ್ರಿಸ್ತಸ್ಯಾಸನ್ನಃ ಪುಲಸ್ತ್ಯಚ॥ ಪುಲಹಃ ಕ್ರತುರಿತಿ ಭಗವಾನಾಸನ್ನಾ ಅನುಕ್ರಮೇಣ ಪೂರ್ವಾದ್ಯಾತ್‌ ತತ್ರ ವಸಿಷ್ಠಂ ಮುನಿವರಮುಪಾಶ್ರಿತಾ ರುಂಧತೀ ಸಾದ್ವೀ॥’ ಇದರ ಅರ್ಥ: ‘ಪೂರ್ವದಿಂದ ಅಂದರೆ ಬಲಭಾಗದಿಂದ ಆರಂಭಿಸಿದರೆ ಮೊದಲಿಗೆ ಮರೀಚಿ. ಬಳಿಕ ಸ್ವಲ್ಪ ಎಡಗಡೆಗೆ ಬಂದರೆ ವಸಿಷ್ಠ.

ಮತ್ತೂ ಪಶ್ಚಿಮಕ್ಕೆ ಬಂದರೆ ಅಂಗಿರಸ, ಮತ್ತಷ್ಟು ಪಶ್ಚಿಮಕ್ಕೆ ಬಂದರೆ ಅತ್ರಿ. ಅಲ್ಲೇ ಸ್ವಲ್ಪ ದೂರದಲ್ಲಿ ಪುಲಸ್ತ್ಯನನ್ನು ಕಾಣ ಬಹುದು. ಅವನಾದ ಬಳಿಕ ಅನುಕ್ರಮವಾಗಿ ಪುಲಹ ಮತ್ತು ಕ್ರತು. ಸಾಧ್ವಿಯಾದ ಅರುಂಧತಿಯು ವಸಿಷ್ಠ ಮುನಿಯನ್ನು
ಆಶ್ರಯಿಸಿಕೊಂಡು ಇದ್ದಾಳೆ.’ ರಾತ್ರಿ ಹೊತ್ತು ಆಕಾಶದಲ್ಲಿ ಕಾಣುವ ನಕ್ಷತ್ರಗಳ ಪೈಕಿ ಎದ್ದು ಕಾಣುವಂತೆ ಸ್ಪಷ್ಟವಾಗಿ ಗೋಚರಿ ಸುವ ಸಪ್ತರ್ಷಿಮಂಡಲ ಮತ್ತು ಜೊತೆಗಿನ ಅರುಂಧತಿ ನಕ್ಷತ್ರ ಭಾರತೀಯರನ್ನು ಬಿಟ್ಟು ಪ್ರಪಂಚದಲ್ಲಿ ಬೇರೆಯವರಿಗೆ ಕಾಣಿಸ ಲಿಲ್ಲವೇ? ಖಂಡಿತ ಕಾಣಿಸಿದೆ, ಆದರೆ ಅವರು ಸಪ್ತರ್ಷಿಮಂಡಲ ಮತ್ತು ಅರುಂಧತಿ ಎಂದು ಗುರುತಿಸಿಲ್ಲ ಬೇರೆ ಹೆಸರುಗಳಿಂದ ಗುರುತಿಸಿದ್ದಾರೆ.

ನಾವು ವಸಿಷ್ಠ – ಅರುಂಧತಿ ಎಂದು ಗುರುತಿಸುವ ನಕ್ಷತ್ರ ಜೋಡಿಯನ್ನು ಪಾಶ್ಚಾತ್ಯ ಖಗೋಳಜ್ಞರು ಕ್ರಮವಾಗಿ ಮಿಝಾರ್ *(ಜ್ಢಿ್ಟಿ) ಮತ್ತು ಆಲ್ಕರ್ *(ಅ್ಝ್ಚಟ್ಟ)ಎಂದು ಗುರುತಿಸುತ್ತಾರೆ. ಇವೆರಡೂ ಅರೇಬಿಯನ್ ಭಾಷೆಯಿಂದ ವ್ಯುತ್ಪತ್ತಿಯಾದ ಹೆಸರುಗಳು. ಈ ಜೋಡಿ ನಕ್ಷತ್ರಗಳು ಯಾವಾಗಲೂ ಒಟ್ಟಿಗೇ ಇರುತ್ತವೆ, ಒಂದನ್ನೊೊಂದು ಪರಿಭ್ರಮಿಸುತ್ತಿರುತ್ತವೆ ಮತ್ತು ಇಡೀ ಆಕಾಶದಲ್ಲಿ ಇಂಥ ಜೋಡಿ ಬೇರಾವುದೂ ಇಲ್ಲ ಎಂಬುದನ್ನು ಆಧುನಿಕ ಖಗೋಳಜ್ಞಾನವೂ ಒಪ್ಪಿದೆ. ಪಾಶ್ಚಾತ್ಯರಲ್ಲಿ ಈ ಮಿಝಾರ್ – ಆಲ್ಕರ್ ತಾರಾಜೋಡಿಯು ವಿವಾಹ ಸಂಪ್ರದಾಯದಲ್ಲಿ ಅಲ್ಲದಿದ್ದರೂ ದೃಷ್ಟಿ ಪರೀಕ್ಷೆಗೆ ಬಳಕೆಯಾಗು ತ್ತಿತ್ತಾದ್ದರಿಂದ ವಿಶೇಷ ಸ್ಥಾನವುಳ್ಳದ್ದು.

ಪ್ರಾಚೀನ ರೋಮನ್ನರಲ್ಲಿ ಸೈನ್ಯಕ್ಕೆ ನೇಮಕಾತಿ ಮಾಡುವಾಗ ಆಲ್ಕರ್ ನಕ್ಷತ್ರವನ್ನು ಬರಿಗಣ್ಣಿಿಂದ ಗುರುತಿಸುವುದು ಒಂದು ಪ್ರವೇಶಪರೀಕ್ಷೆ. ಅದರಲ್ಲಿ ಉತ್ತೀರ್ಣನಾದರಷ್ಟೇ ಆ ವ್ಯಕ್ತಿ ಸೈನ್ಯದಲ್ಲಿ ಬಿಲ್ಲುಗಾರನಾಗಿ ಸೇರಿಕೊಳ್ಳಬಹುದು. ಅರಬ್ ಸುಲ್ತಾ
ನರೂ ತಮ್ಮ ಸೈನಿಕರ ದೃಷ್ಟಿಪರೀಕ್ಷೆಯನ್ನು ಆಲ್ಕರ್ ನಕ್ಷತ್ರ ವೀಕ್ಷಣಾ ರೀತಿಯಿಂದ ಮಾಡುತ್ತಿದ್ದರಂತೆ. ಪುರಾತನ ಭಾರತೀಯ
ವೈದ್ಯಪದ್ಧತಿಯಲ್ಲೂ ಅರುಂಧತಿ ನಕ್ಷತ್ರವನ್ನು ಬರಿಗಣ್ಣಿಿಂದ ನೋಡುವ ಸಾಮರ್ಥ್ಯವಿಲ್ಲವೆಂದಾದರೆ ಆ ವ್ಯಕ್ತಿಯ ದೃಷ್ಟಿ ಕ್ಷೀಣ
ವಾಗಿದೆ ಮತ್ತು ಮರಣಕ್ಕೆ ಸನ್ನಿತರಾಗಿದ್ದಾರೆ ಎಂದೇ ಪರಿಗಣಿಸಲಾಗುತ್ತಿತ್ತು. ಹಾಗೆ ನೋಡಿದರೆ, ವಿವಾಹ ಮಹೋತ್ಸವದಲ್ಲಿ
ಅರುಂಧತಿ ನಕ್ಷತ್ರದರ್ಶನವು ಸೊಸೆಯ ದಷ್ಟಿಸಾಮರ್ಥ್ಯ ಹೇಗಿದೆಯೆಂದು ಗಂಡಿನ ಕಡೆಯವರೂ, ಅಳಿಯನ ದೃಷ್ಟಿ ಸಾಮರ್ಥ್ಯ
ಹೇಗಿದೆಯೆಂದು ಕನ್ಯಾಪಿತೃಗಳೂ ತಿಳಿದುಕೊಳ್ಳುವ ಒಂದು ಉಪಾಯ!

ನಮ್ಮ ಪೂರ್ವಿಕರ ಸ್ಮಾರ್ಟ್‌ನೆಸ್ ನಮಗಿಂತ ಹತ್ತು ಪಟ್ಟು ಹೆಚ್ಚು ಇತ್ತೆೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅರುಂಧತಿ ನಕ್ಷತ್ರದರ್ಶನಕ್ಕೆ ಸಂಬಂಧಿಸಿದಂತೆ ನಮ್ಮ ಪೂರ್ವಿಕರ ಇನ್ನೂ ಒಂದು ಜಾಣ್ಮೆಯನ್ನು ಉಲ್ಲೇಖಿಸಿ ಮುಗಿಸುತ್ತೇನೆ. ಅದೇನೆಂದರೆ ಅರುಂಧತೀಪ್ರದರ್ಶನ ನ್ಯಾಯ. ಸಂಸ್ಕ ೃತ ವಾಙ್ಮಯದಲ್ಲಿ ಗಾದೆ ಅಥವಾ ನುಡಿಗಟ್ಟುಗಳಿದ್ದಂತೆ ‘ನ್ಯಾಯ’ಗಳು. ಉದಾಹರಣೆಗೆ ಹಂಸಕ್ಷೀರ ನ್ಯಾಯ, ಬೀಜವೃಕ್ಷ ನ್ಯಾಯ, ಸ್ಥಾಲೀಪುಲಾಕ ನ್ಯಾಯ, ಅಂಧಗಜ ನ್ಯಾಯ, ತುಷಕಂಡನ ನ್ಯಾಯ, ಮಂಡೂಕ ತೋಲನ ನ್ಯಾಯ ಇತ್ಯಾದಿ. ಅಂಥದೇ ಒಂದು- ಅರುಂಧತೀಪ್ರದರ್ಶನ ನ್ಯಾಯ. ಅದರ ವಿವರಣೆ ಹೀಗಿದೆ: ವಿವಾಹದಲ್ಲಿ ವಧು ವಿಗೆ ಅರುಂಧತಿ ನಕ್ಷತ್ರವನ್ನು ತೋರಿಸುವುದು ಹೇಗೆ? ರಾತ್ರಿಯಾಕಾಶದಲ್ಲಿ ಒಂದು ವೇಳೆ ಸಪ್ತರ್ಷಿಮಂಡಲ ಅನ್ನುವುದು ಇಲ್ಲದಿರುತ್ತಿದ್ದರೆ ಏಕಾಏಕಿಯಾಗಿ ಸೀದಾ ಅರುಂಧತಿ ನಕ್ಷತ್ರವನ್ನೇ ಹುಡುಕಿ ತೋರಿಸುವುದು ಯಾರಿಂದಲೂ ಆಗದು. ಆದ್ದರಿಂದ ‘ಅರುಂಧತಿ ನಕ್ಷತ್ರವನ್ನು ತೋರಿಸುತ್ತೇನೆ’ ಎಂದು ಹೇಳಿದರೂ, ಮೊದಲಿಗೆ ತೋರಿಸುವುದು ಸಪ್ತರ್ಷಿಮಂಡಲ; ಆಮೇಲೆ ಆ ಗಾಳಿಪಟ ಆಕೃತಿಯಲ್ಲಿ ಬಾಲಂಗೋಚಿಯ ತುದಿಯಿಂದ ಎರಡನೆಯದಾದ ವಸಿಷ್ಠ ನಕ್ಷತ್ರವನ್ನು ತೋರಿಸುವುದು. ಆಮೇಲಷ್ಟೇ ವಸಿಷ್ಠನ ಪಕ್ಕದಲ್ಲಿರುವುದನ್ನು ಅರುಂಧತಿ ನಕ್ಷತ್ರ ಎಂದು ತೋರಿಸುವುದು.

ಇದು ಶಿಕ್ಷಣಪದ್ಧತಿಯ ಸರಿಯಾದ ಕ್ರಮ. ಅತಿ ಸೂಕ್ಷ್ಮವಾದ ವಸ್ತುವನ್ನು ಪರಿಚಯ ಮಾಡಿಸುವಾಗ ಅದಕ್ಕೆ ನಿಕಟವಾಗಿ ಸ್ಥೂಲವೂ ಸುಲಭಗ್ರಾಹ್ಯವೂ ಆದ ವಸ್ತುವನ್ನು ಪರಿಚಯ ಮಾಡಿ ಅದು ಅರ್ಥವಾದ ಮೇಲೆ ಸೂಕ್ಷ್ಮವಾದ ವಸ್ತುವನ್ನು
ಬೋಧಿಸುವುದು. ಕಠಿಣವಾದ ವಿಷಯವನ್ನು ಸುಲಭವಾಗಿ ಗ್ರಹಿಸುವುದು ಆಗ ಶಿಷ್ಯನಿಗೆ ಸಾಧ್ಯವಾಗುತ್ತದೆ. ಸಿನಿಮಾದಲ್ಲಿ ಬೆಂಗಳೂರನ್ನು ತೋರಿಸಬೇಕಿದ್ದರೆ ವಿಧಾನಸೌಧವನ್ನೂ, ದಿಲ್ಲಿಯನ್ನು ತೋರಿಸಬೇಕಿದ್ದರೆ  ಇಂಡಿಯಾ ಗೇಟ್‌ಅನ್ನೂ, ಹೈದರಾಬಾದ್‌ಗೆ ಚಾರ್‌ಮಿನಾರ್, ಪ್ಯಾರಿಸ್‌ಗೆ ಐಫೆಲ್ ಟವರ್, ಅಮೆರಿಕ ತೋರಿಸಬೇಕಿದ್ದರೆ ವಾಂಗ್ಟನ್‌ನ ಕ್ಯಾಪಿಟೊಲ್ ಬಿಲ್ಡಿಿಂಗ್ ತೋರಿಸುವುದಿಲ್ಲವೇ, ಹಾಗೆ. ‘ನಿಮ್ದು ಯಾವೂರು?’ ಪ್ರಶ್ನೆಗೆ ಸಾಮಾನ್ಯವಾಗಿ ನಮ್ಮೂರ ಹತ್ತಿರದ ದೊಡ್ಡ ನಗರ/ಜಿಲ್ಲೆಯ ಹೆಸರು ಹೇಳಿ ಆಮೇಲೆ ಅಲ್ಲಿನ ಒಂದು ಚಿಕ್ಕ ಪಟ್ಟಣ/ಹಳ್ಳಿ ಎಂದು ಹೇಳುವುದಿಲ್ಲವೇ, ಹಾಗೆ.

ಪ್ರಾಥಮಿಕ ಶಾಲೆಯ ಗಣಿತದಲ್ಲಾದರೆ ಚಿಕ್ಕ ಸಂಖ್ಯೆಯಿಂದ ದೊಡ್ಡ ಸಂಖ್ಯೆ ಕಳೆಯಲಿಕ್ಕಾಗುವುದಿಲ್ಲ ಎಂದು ಕಲಿಸಿ ಆಮೇಲಿನ ತರಗತಿಗಳಲ್ಲಿ ಋಣಾತ್ಮಕ ಸಂಖ್ಯೆಗಳೂ ಇವೆಯೆಂದು ಕಲಿಸುವುದಿಲ್ಲವೇ, ಹಾಗೆ. ಭೃಗುವಿಗೆ ಅವನ ತಂದೆ ವರುಣನು ವಿದ್ಯೆ ಕಲಿಸಿದ್ದು ಅದೇ ರೀತಿಯಲ್ಲಿ. ಆತ್ಮತತ್ತ್ವವನ್ನು ಬೋಧಿಸಲಿಕ್ಕಾಗಿ ಮೊದಲು ಅನ್ನಮಯ ಕೋಶ, ಪ್ರಾಣಮಯ ಕೋಶ
ಮುಂತಾದ ಪಂಚಕೋಶಗಳೇ ಆತ್ಮವೆಂದು ವರುಣನು ಭೃಗುವಿಗೆ ಉಪದೇಶಿಸುತ್ತಾನೆ. ಭೃಗುವು ಒಂದೊಂದು ಕೋಶದ ಸ್ವರೂಪ ವನ್ನೂ ತಪಸ್ಸಿನಿಂದ ಅರಿತ ಮೇಲೆ ಕೊನೆಯಲ್ಲಿ ಆತ್ಮನು ಪಂಚಕೋಶಾತೀತನೆಂಬ ತತ್ತ್ವವನ್ನು ಅರಿಯುತ್ತಾನೆ.

ಅನ್ನಮಯಾದಿ ಕೋಶಗಳು ಆತ್ಮವಲ್ಲ ಎಂಬ ತಿಳಿವೂ ಮನಸ್ಸಿನಲ್ಲಿ ದೃಢವಾಗಿ ನಿಲ್ಲುತ್ತದೆ. ಅರುಂಧತಿಯ ಬಗ್ಗೆ ಈ ಎರಡು ಅಂಕಣಬರಹಗಳ ಮೂಲಕ ನಮ್ಮೆಲ್ಲರಲ್ಲಿ ತಿಳಿವು ದೃಢವಾಗಿ ನಿಂತದ್ದೂ ಬಹುಶಃ ಅರುಂಧ ತೀಪ್ರದರ್ಶನ ನ್ಯಾಯ ಅನುಸರಿಸಿ ದ್ದರಿಂದಲೇ. ಪುರಾಣಕಥೆಗಳ ಮೂಲಕ ಆಸಕ್ತಿ ಕೆರಳಿಸಿ, ಆಮೇಲೆ ಖಗೋಳಶಾಸ್ತ್ರ ಮತ್ತು ಸಂಸ್ಕೃತ ಮಂತ್ರಗಳಂಥ ಜಟಿಲ ವಿಚಾರಗಳನ್ನು ಸುಲಭವಾಗಿಸಿದ್ದು!