ಸಂಸ್ಕೃತಿ ಚಿಂತನೆ
ಡಾ.ಜಯಂತಿ ಮನೋಹರ್
ಚಾರಿತ್ರಿಕವಾಗಿ ನೋಡಿದಾಗ, ‘ಹಿಂದು’ ಎನ್ನುವ ಪದ ಪರ್ಶಿಯಾ ದೇಶದವರಿಂದ ಭಾರತದ ಭೌಗೋಳಿಕ ಎಲ್ಲೆಯನ್ನು ಗುರುತಿಸಲು ಪ್ರಯೋಗವಾಗಿರುವುದು ತಿಳಿಯುತ್ತದೆ. ಪರ್ಶಿಯಾದ ಭಾಷೆಯಲ್ಲಿ ‘ಸ’ ಅಕ್ಷರವನ್ನು ‘ಹ’ಕಾರವಾಗಿ ಉಪಯೋ ಗಿಸುವುದರಿಂದಾಗಿ ಸಿಂಧೂನದಿ ಹಿಂದೂ ನದಿಯಾಯಿತು ಹಾಗೂ ಇಂದಿನ ಪಾಕಿಸ್ತಾನ, ಬಾಂಗ್ಲಾ ದೇಶ, ಬರ್ಮಾ, ನೇಪಾಳಗಳು ಭಾರತದೊಂದಿಗೆ ಸೇರಿದ್ದ ಕಾಲಘಟ್ಟದಲ್ಲಿ ಸಿಂಧೂನದಿಯ ಆಚೆ ಇದ್ದ ಜನರನ್ನು ಅವರು ಅವರು ‘ಹಿಂದುಷ್’
ಎಂದರೆ ಹಿಂದುಗಳು ಎಂದು ಕರೆದರು.
ಈ ‘ಹಿಂದುಷ್’ ಪದ ಪೂರ್ವ ಪ್ರಸಕ್ತ ಶಕೆಯ (ಕ್ರಿಸ್ತ ಪೂರ್ವ)6 ನೇ ಶತಮಾನದ ‘ದೈರೂಸ್’ ಶಿಲಾಲೇಖದಲ್ಲಿ ಮೊದಲು ಕಾಣುತ್ತದೆ. ರಾಜ ಆಪದಾನನ ಸ್ಟೇರ್ಕಾಸಸ್‌ನಿಗೆ ಹಿಂದೂ ಪ್ರತಿನಿಧಿಗಳು ಉಡುಗೊರೆಗಳನ್ನು ತಂದ ವಿಚಾರವನ್ನು ಶಾಸನ ವೊಂದು ತಿಳಿಸುತ್ತದೆ. ಇರಾನಿನ ಮೊದಲ ಚಕ್ರವರ್ತಿ ಆಕಮೆನಿದನ ಸೈನ್ಯದ ಹಿಂದೂ ಸೈನಿಕನ ಚಿತ್ರವೊಂದು ಇರಾನಿನ ಪೆರೆಪೊಲಿಸ್ ಉತ್ಖನನ ತಾಣದಲ್ಲಿ ಕಾಣುತ್ತದೆ.
‘ದೈರೂಸ್’ನ ಶಿಲಾಲೇಖ ಹೇಳುವಂತೆ, ಸಿಂಧೂ ನದಿಯ ಆಚೆಯ ವಿಶಾಲ ಪ್ರದೇಶ ಹಿಂದೂ ದೇಶವಾಗಿ, ಅಲ್ಲಿ ಅಂದು ವಾಸಿಸು ತ್ತಿದ್ದವರನ್ನು ಹಿಂದೂಗಳೆಂದು ಗುರುತಿಸಿ ಇಂದಿಗೆ 2800 ವರ್ಷಗಳಾಗಿವೆ. ಅದಕ್ಕಿಂತಲೂ ಹಿಂದಿನಿಂದಲೂ ಪ್ರಚಲಿತವಿದ್ದ ತತ್ತ್ವಚಿಂತನಗಳು ಹಾಗೂ ವಿವಿಧ ಆಯಾಮಗಳಲ್ಲಿ ವಿಕಸಿತವಾಗಿರುವ ದೈವಾರಾಧನೆಯ ಆಚರಣೆಗಳು ಹಿಂದೂ ಧರ್ಮದ ಪರಿಧಿಯಲ್ಲಿ ಮಿಳಿತ ವಾಗಿವೆ. ಪರ್ಶಿಯನ್ನರು ಹೆಸರಿಸಿದ ‘ಹಿಂದುಷ್’ ಪದದಲ್ಲಿರುವ sಹಭಿಕಾರವನ್ನು ಬಿಟ್ಟು ಗ್ರೀಕರು ‘ಇಂಡಿಕ್’ ಎಂದಿದ್ದು ಕ್ರಮೇಣ ಇಂಡಿಯಾ ಆಗಿದೆ.
ಇದು, ಗ್ರೀಕ್ ಇತಿಹಾಸಕಾರ ಮೆಗಸ್ತಾನೆಸ್ ದಾಖಲಿಸಿರುವ ಅವನ ಪುಸ್ತಕ, ‘ಇಂಡಿಕಾ’ದಲ್ಲಿ ವಿವರವಾಗಿ ದಾಖಲಾಗಿದೆ. ವಿವಿಧ ಕಾಲಘಟ್ಟಗಳಲ್ಲಿ ಸಮೃದ್ಧ ಭಾರತದತ್ತ ಬಂದ ಹಲವಾರು ವಿದೇಶಿ ಆಕ್ರಮಣಕಾರರ, ವ್ಯಾಪಾರಕ್ಕೆಂದು ಬಂದವರ ಹಾಗೂ ಇ ನಿಂತು ರಾಜ್ಯಭಾರ ಮಾಡಿದವರ ದಾಖಲೆಗಳಲ್ಲಿ ಇಂಡಿಯಾ ಎಂದೇ ಉಲ್ಲೇಖಗೊಂಡಿದೆ.
ದೀರ್ಘಕಾಲ ರಾಜ್ಯಭಾರ ಮಾಡಿದ ಬ್ರಿಟಿಷರು ಭಾರತಕ್ಕೆ ಬಂದದ್ದು 17 ನೇ ಶತಮಾನದ ಪ್ರಾರಂಭದಲ್ಲಿ. ಅವರ ರಾಜ್ಯಭಾರದ ಸಮಯದಲ್ಲಿ ತಮ್ಮ ಧರ್ಮ ಪ್ರಚಾರಕ್ಕಾಗಿಯೇ ಬಂದ ಕ್ರಿಶ್ಚಿಯನ್ ಪಾದರಿಗಳಿಗೆ ಹಾಗೂ ಆಡಳಿತದ ಚುಕ್ಕಾಣಿ ಹಿಡಿದು ಬಂದ ಕೆಲವರಿಗೆ, ಭಾರತೀಯ ಭಾಷೆಗಳಲ್ಲಿ ಆಸಕ್ತಿ ಬೆಳೆಯಿತು. ಇಂಗ್ಲಿಷ್ ಭಾಷೆಯೊಂದಿಗೆ ಸಂಸ್ಕೃತ ಮತ್ತು ಹಲವು ಪ್ರಮುಖ
ಐರೋಪೀಯ ಭಾಷೆಗಳಲ್ಲಿರುವ ಸಾಮ್ಯತೆಯನ್ನು ಕಂಡ ಅಂದಿನ ಭಾಷಾ ತಜ್ಞರು ಮಾಡಿದ ಅಧ್ಯಯನದಿಂದ ಭಾಷಾಶಾಸ್ತ್ರದ ಹೊಸ ಸಿದ್ಧಾಂತಗಳ ಉಗಮಕ್ಕೆ ಕಾರಣವಾಯಿತು.
ಅಂದಿನ ವಿದ್ವಾಂಸರು, ಮೊದಲು ಮಾಡಿದ ಕೆಲಸ ಎಂದರೆ, ಸಂಸ್ಕೃತ ಭಾಷೆಯೊಂದಿಗೆ ಸಾಮ್ಯತೆ ಕಂಡ ಭಾಷೆಗಳನ್ನು ಸೇರಿಸಿ, ‘ಇಂಡೋ ಯೂರೋಪಿಯನ್ ಭಾಷಾ ಸಮೂಹ’ , ‘ಇಂಡೋ ಆರ್ಯನ್ ಭಾಷಾ ಸಮೂಹ’ ಎನ್ನುವ ಭಾಷಾ ಕುಟುಂಬಗಳನ್ನು ಸೃಷ್ಟಿ ಮಾಡಿದರು. ಇಂತಹ ಅಧ್ಯಯನದಿಂದಾಗಿ, ‘ಭಾರತವೊಂದು ಅನಾಗರೀಕತೆಯ ಬೀಡು’ ಎಂದು ತಿಳಿದಿದ್ದ ಅವರ ತಪ್ಪು ತಿಳುವಳಿಕೆ ದೂರವಾಯಿತು.
ಆದರೆ, ಅಗಾಧವಾದ ಜ್ಞಾನ ಭಂಡಾರವನ್ನು ಹೊಂದಿರುವ ಸಂಸ್ಕೃತ ಭಾಷೆ ಪಲ್ಲವಿಸಿದ ನಾಡೆಂದು ಭಾರತವನ್ನು ಒಪ್ಪಿಕೊಳ್ಳು ವುದು ಅವರಿಗೆ ಬೇಕಿರಲಿಲ್ಲ. ಅದರೊಂದಿಗೇ, ಅಂದು ವೇದ ಸಾಹಿತ್ಯದ ಅಪವ್ಯಾಖ್ಯಾನವನ್ನು ಮಾಡಿರುವ ಕೆಲವು ಐರೋಪೀಯ ಹಾಗೂ ಪಾಶ್ಚಿಮಾತ್ಯ ವಿದ್ವಾಂಸರು ಕಾಣುತ್ತಾರೆ. ಭಾಷಾ ಶಾಸ್ತ್ರದ ಶಿಥಲ ಆಧಾರದಿಂದ ಸೃಷ್ಟಿಯಾಗಿದ್ದ
‘ಇಂಡೋ ಆರ್ಯನ್ ಭಾಷಾ ಸಮೂಹ’ ಎನ್ನುವ ವರ್ಗಕ್ಕೆ ಸೇರಿದ ಸಂಸ್ಕೃತ ಭಾಷೆಗೆ ಮತ್ಯಾವುದೋ ಒಂದು ಮೂಲ ಭಾಷೆ ಇದ್ದಿರಬೇಕೆಂದು ಊಹೆ ಮಾಡಿದರು.
ಅಂತೆಯೇ, ಆ ಭಾಷೆಯನ್ನು ಬಳಸುತ್ತಿದ್ದ ಜನರೆಲ್ಲರೂ,ಯಾವುದೋ ಒಂದು ಪ್ರದೇಶದಲ್ಲಿ ಒಟ್ಟಾಗಿ ಇದ್ದಿರಬೇಕು ಎನ್ನುವ ವಿಚಾರವನ್ನು ಮುಂದಿಟ್ಟರು. ಹೀಗೆ, ಒಟ್ಟಾಗಿ ಇದ್ದಂತಹವರಲ್ಲಿ ಒಂದು ಗುಂಪಿನ ಜನರು, ಏಶ್ಯಾ ಮೇನರ್ ಮೂಲಕ ಭಾರತ ದೇಶಕ್ಕೆ ಬಂದರು ಎನ್ನುವುದು ಅವರ ಕಲ್ಪನೆಯ ಕೂಸು. ಅದು, ಇನ್ನೂ ಮುಂದುವರೆದು, ಅವರು ತಮ್ಮೊಂದಿಗೆ ಸಂಸ್ಕೃತ
ಭಾಷೆಯನ್ನಷ್ಟೇ ಅಲ್ಲದೆ, ವೇದಸಾಹಿತ್ಯವನ್ನೂ ತಂದರು ಎನ್ನುವುದು ಅವರ ಆಧಾರವಿಲ್ಲದ ಸಿದ್ಧಾಂತವಾಗಿತ್ತು.
ಹಾಗೆ, ಎಲ್ಲಿಂದಲೋ ಬಂದವರು ಎಂದು ಅವರು ಹೇಳಿದ ಜನರಿಗೆ ‘ಆರ್ಯ’ ಎನ್ನುವ ಜನಾಂಗದ ಹಣೆಪಟ್ಟಿ ಕಟ್ಟಿ, ಭಾರತದಲ್ಲಿ ಮೂಲದಲ್ಲಿದ್ದ ಜನರು ‘ದ್ರಾವಿಡರು’ ಎಂದೂ ತಮ್ಮ ವಾದವನ್ನು ಮುಂದುವರೆಸಿದರು. ಅದರೊಂದಿಗೆ ಆರ್ಯರ ಆಕ್ರಮಣ ವಾಗಿ ಸರಸ್ವತಿ ನದಿ ತೀರದಲ್ಲಿದ್ದ ದ್ರಾವಿಡರು ದಕ್ಷಿಣದತ್ತ ವಲಸೆ ಹೋದರು ಎನ್ನುವುದು ಅವರ ಮತ್ತೊಂದು ಊಹಾ ಸಿದ್ಧಾಂತ.
ವೇದಕಾಲದಲ್ಲಿ ಬೃಹತ್ ಪ್ರಮಾಣದಲ್ಲಿ ಹರಿಯುತ್ತಿದ್ದ ಸರಸ್ವತಿ ನದಿಗೆ ಸೇರುತ್ತಲಿದ್ದ ಉಪನದಿಗಳು ಪಾತ್ರ ಬದಲಿಸಿ, ಕ್ರಮೇಣ ಸರಸ್ವತಿ ಬತ್ತಿಹೋದದ್ದೇ ಅಲ್ಲಿದ್ದ ಜನರು ಬೇರೆಡೆ ವಲಸೆ ಹೋದದ್ದಕ್ಕೆ ಪ್ರಮುಖ ಕಾರಣವೆನ್ನುವುದನ್ನು ಇಂದಿನ ಉಪಗ್ರಹ ಚಿತ್ರಗಳು ಹೇಳುತ್ತವೆ.
‘ದ್ರಾವಿಡ’ ಅಥವಾ ‘ದ್ರವಿಡ’ ಎನ್ನುವ ಪದ ಇಂದಿನ ತಮಿಳು ನಾಡಿನ ಭೌಗೋಳಿಕ ಎಗೆ ಹಾಗೂ ಅಲ್ಲಿ ಮಾತನಾಡುವ ಭಾಷೆಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಇಡೀ ದಕ್ಷಿಣ ಭಾರತಕ್ಕೆ ಎಂದೂ ಅನ್ವಯಿಸಿರಲಿಲ್ಲ ಎನ್ನುವುದೂ ಕೂಡ ಹಲವಾರು
ವಿದ್ವಾಂಸರಿಂದ ಇಂದು ಆಧಾರಸಹಿತವಾಗಿ ನಿರೂಪಿತವಾಗಿದೆ. ಅಂತೆಯೇ, ವೇದಸಾಹಿತ್ಯ ಹಾಗೂ ವೇದೋತ್ತರ ಸಂಸ್ಕೃತ ಸಾಹಿತ್ಯದಲ್ಲಿ ಉತ್ತಮ ಗುಣವುಳ್ಳವರು ಎನ್ನುವ ಅರ್ಥದಲ್ಲಿ ‘ಆರ್ಯ’ ಪದದ ಬಳಕೆಯಾಗಿದೆ. ಜನಾಂಗ ಸೂಚಕವಾಗಿ ಭಾರತದ
ಯಾವುದೇ ಪ್ರಾಚೀನ ಗ್ರಂಥಗಳಲ್ಲಿ ಇದು ಕಾಣಿಸುವುದಿಲ್ಲ.
ಯಾವುದೇ ದೇಶದ ಅಥವಾ ಭಾಷೆಯ ಇತಿಹಾಸ ರಚಿಸಲು ಅಂದಿನ ವಿದ್ವಾಂಸರು ನಂಬಿದ್ದ ಪ್ರಮುಖ ಆಧಾರವೆಂದರೆ, ‘ಕ್ರಿಶ್ಚಿಯನ್ ಕಾಲಗಣನೆ’ ಎನ್ನುವುದು ಅಚ್ಚರಿ ತರಿಸುವಂತಹುದು ! ಕ್ರಿಸ್ತ ಪೂರ್ವ 4004ನೇ ಇಸವಿ ಅಕ್ಟೋಬರ್ 23ನೇ ದಿನಾಂಕ ದಂದು ಭೂಮಿಯ ಸೃಷ್ಟಿ ಆಯಿತು ಎಂದು 17ನೇ ಶತಮಾನದಲ್ಲಿ, ಇವಾನ್ ಜೇಮ್ಸ ಉಶರ್ ಎಂಬ ಕ್ರೈಸ್ತ ಧರ್ಮ ಗುರುಗಳು ಘೋಷಿಸಿದರು.
ಯಾವುದೇ ಆಧಾರಗಳಿಲ್ಲದ ಅಂತಹ ಮಾತನ್ನು ನಂಬಿದ್ದ ಅಂದಿನ ವಿದ್ವಾಂಸರು, ಭಾರತದಲ್ಲಿದ್ದ ಮಾನವ ಜನಾಂಗವೊಂದು, ವೇದಗಳನ್ನು ರಚಿಸುವಷ್ಟರ ಮಟ್ಟಕ್ಕೆ ಬರಲು 2500 ವರ್ಷಗಳು ಬೇಕು ಎಂದು ದೃಢವಾಗಿ ನಂಬಿದ್ದರು. ಹಾಗಾಗಿ, ವೇದಗಳ ಕಾಲವನ್ನು, ಕ್ರಿಸ್ತ ಪೂರ್ವ 1500 ರಿಂದ 500 ಎಂಬ ನಿರ್ಣಯಕ್ಕೆ ಬಂದರು. ಹಾಗೆ ಹೇಳಿದ ಪ್ರಖ್ಯಾತ ವಿದ್ವಾಂಸರಾದ ಮ್ಯಾಕ್ಸ ಮುಲ್ಲರ್, ವೇದಾಧ್ಯಯನದ ಆಳಕ್ಕೆ ಇಳಿದ ನಂತರ ತನ್ನ ಅಭಿಪ್ರಾಯವನ್ನು ಬದಲಿಸಿಕೊಂಡರು. ‘ಮಾನವರ ಗ್ರಂಥಾಲಯ ದಲ್ಲಿ ಅತ್ಯಂತ ಹಿಂದಿನ ಗಹನವಾದ ಗ್ರಂಥಗಳಾದ ವೇದಗಳು ಮುಂಬರುವ ಶತಮಾನಗಳಲ್ಲಿ ವಿದ್ವಾಂಸರನ್ನು ಬಹುವಾಗಿ ಆಕರ್ಷಿಸುತ್ತದೆ … ಇದರ ಕಾಲವು ಕ್ರಿ.ಪೂ. 4000 – 5000 ವರ್ಷಗಳಿಗೂ ಹಿಂದೆ ಹೋಗುತ್ತದೆ… ’ ಎಂದು ಹೇಳಿದ್ದಾರೆ.
ವಿಶ್ವದಲ್ಲಿ ಅತ್ಯಂತ ಹಿಂದಿನ ಕಾಲಘಟ್ಟದಲ್ಲಿ ಮಾನವ ಜನಾಂಗವೊಂದು ದಾಖಲಿಸಿರುವ ಚಿಂತನೆಗಳಿರುವ ವೇದ ಸಾಹಿತ್ಯದಲ್ಲಿ ಕಾಣುವ ಸರಸ್ವತಿ ನದಿಯ ಪಾತ್ರದ ಮಾಹಿತಿ ಇಂದು ಉಪಗ್ರಹದ ನೆರವಿನಿಂದ ಲಭ್ಯವಿದೆ. ಹಾಗಾಗಿ ವೇದ ಸಾಹಿತ್ಯದ ಕಾಲ ಸುಮಾರು ಪೂರ್ವ ಪ್ರಸಕ್ತ ಶಕೆಯ 5000 ವರ್ಷಗಳಷ್ಟು ಹಿಂದಿನದು ಎಂದು ತಿಳಿಯುತ್ತದೆ. ಇರಾನಿನ ಶಿಲಾಲೇಖದಲ್ಲಿರುವಂತೆ, ಪೂರ್ವ ಪ್ರಸಕ್ತ ಶಕೆಯ (ಕ್ರಿಸ್ತ ಪೂರ್ವ) ೬ನೇ ಶತಮಾನದಲ್ಲಿ ಕಾಣುವ ಹಿಂದೂ (ಹಿಂದುಷ್) ಪದದ ಉಲ್ಲೇಖ ಭಾರತದ
ಭೌಗೋಳಿಕ ಮಾಹಿತಿಯನ್ನು ಹಾಗೂ ಅಲ್ಲಿ ವಾಸಿಸುವ ಜನರು ಹಿಂದುಗಳು ಎಂದು ತಿಳಿಸುತ್ತದೆ.
ಅಂತೆಯೇ ಹಿಂದು ಪದದ ವ್ಯಾಪ್ತಿ ಅಂದಿಗೆ ಸಾವಿರಾರು ವರ್ಷಗಳ ಹಿಂದಿನಿಂದ ಪ್ರಚಲಿತವಿರುವ ಭಾರತೀಯ ತಾತ್ತ್ವಿಕ
ಚಿಂತನೆಗಳನ್ನು, ವೇದಾಂತ ದರ್ಶನಗಳನ್ನು, ಶೈವ, ಶಾಕ್ತ, ವೈಷ್ಣವ ಮುಂತಾದ ಪಂಥಗಳನ್ನು, ದೈವಾರಾಧನೆಯ ವಿವಿಧ ಆಯಾಮಗಳನ್ನು, ಜಾನಪದೀಯ ನಂಬಿಕೆಗಳನ್ನು ಹಾಗೂ ಭಾರತದಾದ್ಯಂತ ಕಾಣುವ ಸಾಂಸ್ಕೃತಿಕ ಆಚರಣೆಗಳನ್ನು ಒಳಗೊಂಡಿದೆ.