Sunday, 8th September 2024

ಸಿಂಹವೇ ತನ್ನ ಕಥೆ ಹೇಳಬೇಕೇ ಹೊರತು, ನರಿಗಳಲ್ಲ !

ಶಿಶಿರ ಕಾಲ

shishirh@gmail.com

ಸಿದ್ದಾಪುರ ಹಾರ್ಸಿಕಟ್ಟಾದ ಸುವರ್ಣಾ ಹೆಗಡೆಯವರು ಹಿಂದಿನ ವಾರದ ಲೇಖನಕ್ಕೆ ಹೀಗೆ ಪ್ರತಿಕ್ರಿಯಿದ್ದರು. ಈ ತರಹದ ಆವಿಷ್ಕಾರ, ವೈಜ್ಞಾನಿಕ  ಲೇಖನಗಳನ್ನು ಓದಿದ ನಂತರದಲ್ಲಿ ನನಗೊಂದು ವಿಷಾದ ಆವರಿಸಿಕೊಳ್ಳುತ್ತದೆ. ಘಾತಕ ಖಿಲ್ಜಿ ಮೊದಲಾದವರು ನಾಲಂದಾ ಮೊದಲಾದ ಅದೆಷ್ಟೋ ವಿಶ್ವವಿದ್ಯಾಲಯಗಳನ್ನು, ಅಲ್ಲಿನ ಪುಸ್ತಕ, ಜ್ಞಾನ ಭಂಡಾರವನ್ನು ಸುಡದಿದ್ದರೆ, ಇಂತಹ ಅನೇಕ ಆವಿಷ್ಕಾರಗಳು ನಮ್ಮಲ್ಲಿಯೇ ಸಾಧ್ಯವಾಗುತ್ತಿತ್ತು. ಈ ದಾಳಿಕೋರರೆಲ್ಲ ಬರುವುದಕ್ಕಿಂತ ಮೊದಲು ಹಲವು ಪ್ರಥಮಗಳನ್ನು ಜಗತ್ತಿಗೆ ಕೊಟ್ಟಿದ್ದೇ ನಾವು.

ಆರ್ಯಭಟ, ವರಾಹಮಿಹಿರ, ಚರಕ, ಸುಶ್ರುತರು ನಮ್ಮವರು. ಶೇ.೧೦೦ ನಿಜ. ಇದು ನನ್ನನ್ನು ಕೂಡ ಸದಾ ಕಾಡುವ ಖೇದ, ಫ್ರಸ್ಟ್ರೇಷನ್. ಈ ಕಾಡುವಿಕೆಯ ನಿರಂತರತೆ ಎಷ್ಟೆಂದರೆ ಇದು ಮಾನಸಿಕ ಸಮಸ್ಯೆಯೇ ಇರಬಹುದು ಎಂದು ಅನುಮಾನ ಬರುವಷ್ಟು. ಹೊರದೇಶದಯಾವ ಮಾನವ ನಿರ್ಮಿತ ಆಕರ್ಷಣೆಯನ್ನು ನೋಡಿದಾಗಲೂ, ಅಯ್ಯೋ ಇದೇನು ಮಹಾ, ನಮ್ಮಲ್ಲಿ ಅದು ಇದೆ ಎಂದೆನಿಸಿ ಎದುರಿಗಿರುವುದನ್ನು ಎಲ್ಲರಂತೆ ಅನುಭವಿ ಸಲು ಆಗದಷ್ಟು.

ಇದು ಇಂದಿನ ಭಾರತೀಯರ ಸಾರ್ವತ್ರಿಕ ಖೇದ. ಇತಿಹಾಸ ಕೆದಕಿದಷ್ಟು ಈ ಬೇಸರ ವೃದ್ಧಿಸುತ್ತಲೇ ಹೋಗುತ್ತದೆಯೇ ವಿನಃ ಕಡಿಮೆಯಾಗುವುದಿಲ್ಲ. ಕಳೆದುಕೊಂಡ ಜ್ಞಾನ ಸಂಪತ್ತು, ತಾಳಮೇಳವಾಗದ ಕಾಲಮಾನಗಳು. ಇತಿಹಾಸದ ತುಣುಕು, ಜ್ಞಾನ ವೈಭವಗಳನ್ನು ಪೂಣಿಸುವಾಗ ಅದರ ನಡುವಿನ ಸಮಯದ ಅಂತರಗಳು. ಬಹು ದೊಡ್ಡ ಭಾಗ ಅವರವರ ಊಹೆಗೆ. ಇಂದಿರುವ ಭಾರತದ ಇತಿಹಾಸವನ್ನು ಬಿಡಿಯಾಗಿ ನೋಡಿದರಷ್ಟೇ ಸರಿ. ಒಂದಕ್ಕೊಂದು ಜೋಡಿಸಲಿಕ್ಕೆ ಹೊರಟರೆ ಕಥೆ ಪಡ್ಚ. ಹೀಗೆ ಜ್ಞಾನವನ್ನು ಕಳೆದುಕೊಂಡ ದೇಶವ್ಯಾಪಿ ಭಾವ ಹೊಂದಿದ ಏಕೈಕ ದೇಶ ಭಾರತ. ಏಕೆಂದರೆ ಬೇರಿನ್ನೊಂದು ಕಡೆ ಇಷ್ಟು ಜ್ಞಾನ ಬೆಳೆದೇ ಇರಲಿಲ್ಲ.

ನ್ಯಾಷನಲ್ ಜಿಯೋಗ್ರಫಿ, ಸ್ಮಿಥ್ಸೋನಿಯಮ್ ಇವರೆಲ್ಲ ಇಂಕಾ, ಈಜಿಪ್ಟ್ ನಾಗರಿಕತೆಯ ಬಗ್ಗೆ ವೈಭವೋಪೇತ ಕಥೆ ಕಟ್ಟಿ ಹೇಳುವಾಗ, ಇದರ ನೂರು ಪಟ್ಟು ವೈಭವವಿದ್ದ ಭಾರತದ ಬಗ್ಗೆ ಇವರು ಹೇಳುವುದೇ ಇಲ್ಲವಲ್ಲ ಎಂದೆನಿಸಿ ಅವರು ಹೇಳುವುದೆಲ್ಲ ಬಾಲಿಶವೆನಿಸಿಬಿಡುತ್ತದೆ. ಪಿರಮಿಡ್‌ನ
ಕಲ್ಲಿನ ಬಗ್ಗೆ ಹೇಳುತ್ತ ಅಷ್ಟೊಂದು ಗಾತ್ರದ, ಇಂದಿನ ಕ್ರೇನ್‌ನ ಕೈಬಲಕ್ಕೆ ಸಿಗದ ಭಾರದ ಕಲ್ಲುಗಳನ್ನು ಅವರು ಅಲ್ಲಿ ಜೋಡಿಸಿದ್ದು ಹೇಗೆ ಎಂದು ಆಶ್ಚರ್ಯಪಡುತ್ತಾರೆ. ಪಿರಮಿಡ್ ಒಂದು ಅದ್ಭುತವೇ. ಆದರೆ ಅಂತಹ ಉತ್ತರವೇ ಸಿಗದ ಅಸಂಖ್ಯ ಅದ್ಭುತಗಳು ಇಂದಿಗೂ ಭಾರತದಲ್ಲಿದೆಯಲ್ಲ !!
ಅದೇಕೆ ಇವರಿಗೆ ಅದೆಲ್ಲ ಕಾಣಿಸುವುದೇ ಇಲ್ಲ? ಈ ಎಲ್ಲ ಡಾಕ್ಯುಮೆಂಟರಿ ಚಾನೆಲ್ಲುಗಳು ಇಂದಿನ ತಲೆ ಮಾರಿಗೆ ಬೋಗಸ್, ಅಪೂರ್ಣ ಜಾಗತಿಕ ಇತಿಹಾಸವನ್ನೇ ಕಟ್ಟಿ ಕೊಡೋದು.

ಏಕೆಂದರೆ ಇವರದೆಲ್ಲ ಭಾರತದ ಮರೆಯಲ್ಲಿ ನಿಂತ ಇತಿಹಾಸ. ಇಲ್ಲಿನ ಇತಿಹಾಸದ ಬಗ್ಗೆ ತುಂಡು ತುಂಡಾಗಿ ಹೇಳಿದರೂ ಸಮಗ್ರ ಮನುಷ್ಯನ ಇತಿಹಾಸ ಹೇಳುವಾಗ ಭಾರತವನ್ನು ಹೊರಗಿಟ್ಟರೇ ಅವರಿಗೆ ಸುಲಭ, ಅನುಕೂಲ. ಅರೆ, ಸಮಕಾಲೀನ ಭಾರತದ ಹೋಲಿಕೆ, ವಿವರಿಸದೇ
ಮನುಷ್ಯನ ಇತಿಹಾಸ ಪೂರ್ಣವಾಗಲು ಹೇಗೆ ಸಾಧ್ಯ? ಅವರ ಲೆಕ್ಕದಲ್ಲಿ ಭಾರತ ಹಾವಾಡಿಗರ ದೇಶವಾಗಿತ್ತು, ಅದಕ್ಕಿಂತ ತೀರಾ ಮೊದಲು Hunters and Gatherer ಆಗಿದ್ದರು, ನಂತರ ಕಚ್ಚಾಡುವ ರಾಜರುಗಳು ಬಂದರು, ವೇದ ಹುಟ್ಟಿತು.

ಆಮೇಲೆ ದಾಳಿಗಳಾದವು, ಮುಸ್ಲಿಂ ರಾಜರು, ಯುರೋಪಿಯನ್ನರು ಬಂದರು, ನಾಶ ಮಾಡಿದರು. ಹೀಗೊಂದು ಸರಳ ರೇಖೆಯ, ಸಾವಿರದೊಂದು ತೂತಿನ ಇವಿಷ್ಟೇ ನಮ್ಮ ಇತಿಹಾಸ. ನಮ್ಮಲ್ಲಿ ಅದೆಂತಹ ಮಣ್ಣೂ ಇರಲಿಲ್ಲ, ಒಂದಿಷ್ಟು ಪುರೋಹಿತರು ಸೇರಿಕೊಂಡು ಒಂದಿಷ್ಟು ಕೆಲಸಕ್ಕೆ ಬಾರದ
ಮಂತ್ರಗಳನ್ನು ರಚಿಸಿದರು, ಅದು, ಪೂಜೆ, ದೇವಸ್ಥಾನ ಬಳಸಿಕೊಂಡು ಕೆಳವರ್ಗದವರನ್ನು ಉದ್ದಕ್ಕೂ ತುಳಿಯುತ್ತ ಬಂದರು ಎನ್ನುವ ನೆರೇಟಿವ್.
ಭಾರತದವರಿಗೆ ಮೊದಲನಿಂದಲೂ ಇತಿಹಾಸ ದಾಖಲಿಸುವತ್ತ ಒಂದು ಅಸಡ್ಡೆಯಿದೆ ಅಥವಾ ಅದೆಲ್ಲ ಸುಟ್ಟು ಹೋಗಿದೆ.

ಒಂದಂತೂ ಹೌದು, ನಮ್ಮಲ್ಲಿ ಹೆಸರು ಅಜರಾಮರವಾಗ ಬೇಕೆನ್ನುವ ಹಂಬಲ ಮೊದಲೆಲ್ಲ ಇದ್ದಂತಿಲ್ಲ. ಅಂಕಿತನಾಮವನ್ನು ತಮ್ಮ ಕೃತಿಯೊಳಕ್ಕೇ ಸೇರಿಸುವ ಪ್ರಯೋಗಗಳು ತೀರಾ ಇತ್ತೀಚಿನವು. ವಚನ, ದಾಸರ ಕಾಲದಲ್ಲಿ ಅಥವಾ ಅದಕ್ಕಿಂತ ಮೊದಲು. ಅದಕ್ಕೂ ಹಿಂದೆ ಎಂಥೆಂಥ ಮಹಾಕಾವ್ಯ ಗಳನ್ನು ರಚಿಸಿ ಕನಿಷ್ಠ ಒಂದು ಕಡೆ ಹೆಸರನ್ನೂ ಹಾಕದೆ ಹೋದವರು ಎಷ್ಟು ಬೇಕು? ಅವರದು ಅಸಡ್ಡೆಯೆಂದನ್ನಿಸಿ ಕೋಪವೇ ಬರುತ್ತದೆ. ಅದು ಬಿಡಿ, ಇನ್ನು ಕೆಲವು ಮಹಾಕಾವ್ಯಗಳನ್ನು ಒಂದೇ ಹೆಸರನ್ನಿಟ್ಟುಕೊಂಡು ನಾಲ್ಕಾರು ಮಂದಿ ಬರೆದದ್ದೂ ಇದೆಯಲ್ಲ.

ಅವರಿಗೆಲ್ಲ ಹೆಸರು, ಇತಿಹಾಸವಾಗುವುದು ಇವೆಲ್ಲ ನಗಣ್ಯವಾಗಿತ್ತೆಂದರೆ ಅಂದಿನ ಕಾಲದ ಪ್ರಬುದ್ಧತೆಯ ಮಟ್ಟವೇ ಬೆರಗನ್ನು ಹುಟ್ಟಿಸುತ್ತದೆ. ಅಂತಹ ಕಾವ್ಯ, ವೇದಗಳನ್ನು ರಚಿಸುವಾಗ ಕೂಡ ಅಷ್ಟೆ. ಅಲ್ಲಿ ಸಹಜ ಜೀವನವನ್ನು ದಾಖಲಿಸುವುದಕ್ಕಿಂತ ಬೇರೆಯದೇ ಆಯಾಮಗಳಿಗೆ ಮಹತ್ವ. ಹಾಗಂತ ಇತಿಹಾಸವೇ ಇಲ್ಲವೆಂದಲ್ಲ. ಎಲ್ಲ ಋಷಿ, ಮುನಿಗಳು ಇತಿಹಾಸಕಾರರೇ ಆಗಿದ್ದರು ಎಂದು ಆರ್. ಗಣೇಶರು ಹೇಳುವುದನ್ನು ಒಪ್ಪಬೇಕು. ಆದರೆ
ಅವರದೆಲ್ಲ ಸೇರಿಸಿ ಪೂರ್ಣವಾಗಿಸುವ ಕೆಲಸವಾಗಿಲ್ಲವಲ್ಲ.

ಮಿಸ್ಸಿಂಗ್ ಲಿಂಕುಗಳೇ ಜಾಸ್ತಿ. ಇಂಗ್ಲೆಂಡ್, ಅಮೆರಿಕ ಇವಕ್ಕೆಲ್ಲ ಇತಿಹಾಸ ಕೆಲ ನೂರು ಅಥವಾ ಸಾವಿರ ವರ್ಷವಷ್ಟೇ ಇತಿಹಾಸ. ಅದಕ್ಕೂ ಮಿಗಿಲಾದ ಇತಿಹಾಸ ಯುರೋಪಿನಲ್ಲಿ, ದಕ್ಷಿಣ ಅಮೆರಿಕಾದಲ್ಲಿದ್ದಿರಬಹುದು. ಆದರೆ ಉತ್ತರ ಅಮೆರಿಕಾ, ಆಸ್ಟ್ರೇಲಿಯಾ, ಆಫ್ರಿಕಾ ಇಲ್ಲ ಜಾಸ್ತಿ ಇತಿಹಾಸವಿಲ್ಲ.
ಇದರರರ್ಥ ಅಲ್ಲಿ ಜನವಸತಿಯೇ ಇರಲಿಲ್ಲವೆಂದಲ್ಲ. ಅಲ್ಲ ಈ ಸರಳ ರೇಖೆಯ ಇತಿಹಾಸ ಒಪ್ಪಿಗೆಯಾಗುತ್ತದೆ. ಆದಿ ಮಾನವ, ಕಾಡು ಮನುಷ್ಯರಂತೆ ಬದುಕುತ್ತಿದ್ದರು, ಅನ್ಯ ಮುಂದುವರಿದವರು ಹೊರಗಿನಿಂದ ಬಂದು ದಾಳಿಮಾಡಿ, ವಶಪಡಿಸಿಕೊಂಡು, ಗುಲಾಮರನ್ನಾಗಿಸಿ, ನಂತರ ಸ್ವಾತಂತ್ರ್ಯ
ಕೊಟ್ಟು ಇಂದಿಗೆ ತಲುಪದ್ದಾರೆ ಎನ್ನುವ ಇತಿಹಾಸ. ಆದರೆ ಭಾರತದ್ದು ಹಾಗಲ್ಲ.

ಐದು ಸಾವಿರ ವರ್ಷದ ಹಿಂದೆ ಮಹಾಭಾರತ ನಡೆಯಿತು, ಅದನ್ನು ಎರಡೂವರೆ ಸಾವಿರ ವರ್ಷದ ಹಿಂದೆ ಬರೆದದ್ದು, ದಾಖಲಿಸಿದ್ದು ಎನ್ನುತ್ತಾರೆ. ಆದರೆ ಇಲ್ಲಿ ಮುಂದುವರಿಯುವ ಪ್ರಶ್ನೆಗಳಿವೆ. ಈ ಲೆಕ್ಕದಲ್ಲಿ ನಡೆದ ಎರಡೂವರೆ ಸಾವಿರ ವರ್ಷದ ನಂತರ ಬರೆದದ್ದರಿಂದ ಅದು ಇತಿಹಾಸವಲ್ಲ, ಎಪಿಕ್, ಕಾವ್ಯ ಎಂದಾಯಿತು. ಇದು ಮಹಾಭಾರತದ ಸತ್ಯಾಸತ್ಯತೆಯನ್ನೇ ಪ್ರಶ್ನಿಸುತ್ತದೆ. ಇದೇ ಒಂದು ಕಾರಣಕ್ಕೆ, ಇವರ ಲೆಕ್ಕದಲ್ಲಿ ಮಹಾಭಾರತ ಇತಿಹಾಸವಲ್ಲ, ಅದೊಂದು ಕಾಲ್ಪನಿಕ ಕಾವ್ಯ.

ಇಲ್ಲಿ ಗಮನಿಸಬೇಕಾದದ್ದು ಏನೆಂದರೆ ಮಹಾಭಾರತ ಬರೆದದ್ದು ಇಂತಹ ಸಮಯದಲ್ಲಿ ಎನ್ನುವ ಬಗ್ಗೆ ಅವರಿಗೆ ಒಪ್ಪುವ ದಾಖಲೆಯನ್ನು ಮಾತ್ರ ಬಳಸಲಾಗುತ್ತದೆ. ಇದೊಂದೇ ವಿಚಾರ ಮಹಾಭಾರತದ ಸತ್ಯಾಸತ್ಯತೆಯನ್ನು ಪ್ರಶ್ನಿಸುವಂತಾಗಿದೆ. ನಮ್ಮಲ್ಲಿನ ಪ್ರಾಜ್ಞರಿಗೆ ಇದರ ಸರಿಯಾದ
ಕಾಲ ಘಟ್ಟದ ಅರಿವಿರಬಹುದು, ಆದರೆ ಜನಸಾಮಾನ್ಯರಿಗಿಲ್ಲ, ಏಕೆಂದರೆ ಅದು ಶಿಕ್ಷಣದ ಭಾಗವಾಗಿಲ್ಲ. ಅದಕ್ಕಿಂತ ಮೊದಲು ಅದನ್ನು ಕಟ್ಟಿ ಒಂದಾಗಿ ನೋಡುವ, ಹೇಳುವ ಕೆಲಸ ನಮ್ಮಲ್ಲಿ ನಡೆದೇ ಇಲ್ಲ. ಇದಕ್ಕೆ ಧಾರ್ಮಿಕ ಹಿನ್ನೆಲೆ ಕೂಡ ಇದೆ.

ಹಿಂದುಗಳಿಗೆ ಮಹಾಭಾರತ, ಅದರೊಳಗಿನ ಭಗವದ್ಗೀತೆ ಎಂದರೆ ಸರ್ವಸ್ವವಲ್ಲವೇ? ಅಂತಹುದರ ಕ್ರೆಡಿಬಿಲಿಟಿಯನ್ನು ಪ್ರಶ್ನಿಸುವಂತಿಟ್ಟರೆ ಮಾತ್ರ ಅವರ ಬೇಳೆ ಬೇಯುವುದು, ಮತಾಂತರಕ್ಕೆ ಒಪ್ಪಿಸುವಂತೆ ಮಾತನಾಡಲಿಕ್ಕಾಗುವುದು. ಇದರಿಂದಲೇ ಮಹಾಭಾರತ ಕಾವ್ಯವೋ ಇತಿಹಾಸವೋ
ಎಂದು ಗಟ್ಟಿ ಕೇಳಿದರೆ ನಾವು ಭಾರತೀಯರು ವಿವರಿಸಲಿಕ್ಕಾಗದೇ ಗಲಿಬಿಲಿಯಾಗುವುದು. ಮಹಾಭಾರತವನ್ನು ಅವತಾರ್ ಪಿಚ್ಚರಿನಂತೆ ಯಾರೋ ಒಬ್ಬ ಕವಿ, ಕ್ರಿಯೇಟಿವ್ ವ್ಯಕ್ತಿ ರಚಿಸಿದ ಎನ್ನುವ ಪಾಶ್ಚಾತ್ಯ ನಿರೂಪಣೆಯನ್ನು ಒಪ್ಪುವ ಹಂತಕ್ಕೆ ನಾವು ಬಂದು ನಿಂತಿರುವುದು.

ಎರಡನೆಯದೆಂದರೆ ಅದು ಮಹಾಭಾರತಕ್ಕಿಂತ ಹಿಂದಕ್ಕೆ, ಅಲ್ಲಿಯವರೆಗೆ ಮನುಷ್ಯ ಬಂದು ಮುಟ್ಟಿದ್ದಕ್ಕೆ ತಗುಲಿದ ಸಮಯಕ್ಕೆ ಸಂಬಂಧಿಸಿದ್ದು. ಮಹಾಭಾರತದಲ್ಲಿ ಅಲ್ಲಿನ ರಾಜ ಮನೆತನಗಳ, ಆಳ್ವಿಕೆಯ, ಜನರ, ದೇವಸ್ಥಾನಗಳ, ಅರಮನೆಗಳ ವಿವರಣೆಯನ್ನು ಕೊಡಲಾಗಿದೆ, ಅದು ಏನೆಂದು ನಿಮಗೆಲ್ಲ ಗೊತ್ತು ಬಿಡಿ. ಓದಿಯೇ ಗೊತ್ತಿಲ್ಲದಿದ್ದರೂ ಕೊನೆ ಪಕ್ಷ ದೂರದರ್ಶನದಲ್ಲಿ ನೋಡಿದ ಮಹಾಭಾರತದ ಕಲ್ಪನೆಯಾದರೂ ಇರುತ್ತದೆ. ಆಯ್ತು, ಮಹಾಭಾರತ ನಡೆದದ್ದು ಐದುಸಾವಿರ ವರ್ಷದ ಹಿಂದೆ ಎಂದೇ ಇಟ್ಟುಕೊಳ್ಳೋಣ.

ಇಂತಹ ಆಕಾಶಕಾಯ ಇಲ್ಲಿzಗ ಕೃಷ್ಣ ಹುಟ್ಟಿದ, ಇನ್ನೊಬ್ಬ ಇಂತಹ ಸಮಯದಲ್ಲಿ ಸತ್ತ, ಇಂಥzಯಿತು ಎನ್ನುವ ದಾಖಲೆಗಳನ್ನೇ ಇಟ್ಟುಕೊಂಡು ನೋಡಿ ಒಪ್ಪಿ ಐದಾರು ಸಾವಿರ ವರ್ಷದ ಹಿಂದೆ ಮಹಾಭಾರತ ನಡೆಯಿತು ಎನ್ನುವುದನ್ನೇ ಒಪ್ಪೋಣ. ಆದರೆ ಅಂತಹ ಕಾಲ ವೈಭವಕ್ಕೆ, ಆದಿ
ಮಾನವನಿಂದ ಅಂತಹ ವೈಭವೋಪೇತ ಕಾಲಕ್ಕೆ ಬರಲಿಕ್ಕೆ ಎಷ್ಟು ವರ್ಷ ತಲುಪಿತು ಮತ್ತು ಆ ನಡುವಿನ ಕಾಲದ ಇತಿಹಾಸ ತಪ್ಪಿದ ಕೊಂಡಿಯಾಗಿಯೇ ಕಾಡುತ್ತದೆ.

ಇವರ ಪ್ರಕಾರ ಗಾಂಧಾರ ನಾಗರಿಕತೆ ಹುಟ್ಟಿದ್ದು ಕ್ರಿ.ಪೂ.೧೫೦೦ ದಿಂದ ಈಚೆ. ಆದರೆ ಅದಕ್ಕಿಂತ ಸುಮಾರು ಒಂದೂವರೆ ಸಾವಿರ ವರ್ಷದ
ಹಿಂದೆ, ಭಾರತದ ಅತಿದೊಡ್ಡ, ಭವ್ಯ ರಾಜ್ಯದ ಸೊಸೆಯಾಗಿ ಅದೇ ಗಾಂಧಾರದಿಂದ ತಂದಿರುತ್ತಾರೆ ಎಂದರೆ ಇಲ್ಲಿ ಮತ್ತೆ ಲೆಕ್ಕ ತಪ್ಪುತ್ತದೆ. ಗಾಂಧಾರಿ ಯಾರೋ ಒಬ್ಬ ಸಾಮಾನ್ಯನ ಹೆಂಡತಿಯಾಗಿದ್ದವಳಲ್ಲವಲ್ಲ. ಹಸ್ತಿನಾಪುರದ ಮಹಾರಾಜ ನನ್ನು ವರಿಸಿದವಳು. ಅವಳು ಗಾಂಧಾರ ದೇಶದವ ಳೆಂದರೆ ಅಂದು ದೇಶ, ನಾಗರಿಕತೆ ಐದು ಸಾವಿರ ವರ್ಷದ ಹಿಂದೆಯೇ ಇತ್ತೆಂದರ್ಥವಲ್ಲವೇ? ಇದೆಲ್ಲದರ ಜತೆ, ಇವರ ಲೆಕ್ಕದಲ್ಲಿ ಹರಪ್ಪಾ ನಾಗರಿಕತೆ ಮೊದಲು ಹುಟ್ಟಿದ್ದು. ಅಲ್ಲಿನ ಚರಂಡಿ ಇತ್ಯಾದಿ ವ್ಯವಸ್ಥೆಯೆಲ್ಲ ಹೌದು.

ಹಾಗಾದರೆ ಅದು ಹುಟ್ಟಿದ ಸಮಾನಾಂತರವಾಗಿ ಒಂದೇ ಸಾವಿರ ವರ್ಷದಲ್ಲಿ ಶೂನ್ಯದಿಂದ ಮಹಾಭಾರತದಂತಹ ಭವ್ಯತೆಯಷ್ಟು ಬೆಳೆದು ಬಿಟ್ಟೆವು ಎಂದೇ ಅಂದುಕೊಳ್ಳಬೇಕು. ಇದೆಲ್ಲದರ ಜತೆ ಗುರುಕುಲ ಮೊದಲಾದ ಪದ್ಧತಿಯನ್ನು ಕೂಡ ಸಂಪೂರ್ಣ ಇಗ್ನೋರ್ ಮಾಡಲಾಗುತ್ತದೆ. ಆದಿ ಮಾನವನ ಬೇಸಿಕ್ ಇನ್ಸ್ಂಟಿಕ್ಟ್‌ನಿಂದ ಬೆಳೆದು, ಮೀರಿ ತನ್ನ ಮಕ್ಕಳನ್ನು ಶಿಕ್ಷಣಕ್ಕೆ, ಕಲಿಕೆಗೆ ಇನ್ನೊಬ್ಬರ ಜತೆ ಬಿಟ್ಟು ಬಿಡುವ ಒಂದು ಬದಲಾವಣೆ ಯಿದೆಯಲ್ಲ, ಅದೇನು ಸಣ್ಣ ವಿಕಾಸನವೇ? ಅದು ನಿಧಾನಕ್ಕೆ ಅದೆಷ್ಟೋ ಸಾವಿರ ವರ್ಷ ಬೆಳೆದ ನಾಗರಿಕತೆಯಿರಲೇಬೇಕು. ಹೀಗೆ ಒಂದು ಹಂತದ ಹಿಂದಿನ ಇತಿಹಾಸವನ್ನು ಗಟ್ಟಿಯಾಗಿ ಹೇಳಲು ನಮ್ಮಲ್ಲಿನ ಇತಿಹಾಸಕಾರರು ಕೂಡ ಹೆದರುತ್ತಾರೆ.

ಹೀಗೆ ಉದ್ದಕ್ಕೂ ಅಲ್ಲಲ್ಲಿ ಚೆಲ್ಲಿದ ಇತಿಹಾಸದ ತುಂಡುಗಳನ್ನು ತಿರಗಾಮುರಗಾ ನೋಡುತ್ತ, ಒಂದನ್ನಿಟ್ಟು ಇನ್ನೊಂದನ್ನು ಪ್ರಶ್ನಿಸುತ್ತ, ಬ್ರಿಟೀಷರ, ಹಿನ್ನೆಲೆಯನ್ನೇ ಹೊಂದಿರದ ಅನಾಗರಿಕರು ರಚಿಸಿದ ಇತಿಹಾಸವನ್ನು ಅದುವೇ ಹೌದು ಎಂದು ಒಪ್ಪಿಕೊಳ್ಳುತ್ತ ಬದುಕುತ್ತಿದ್ದೇವೆ. ಆಫ್ರಿಕಾದ ಒಂದು ಉಕ್ತಿಯಿದೆ. Until the lions have their own story-teller, history will always glorify the hunter. ಸಿಂಹಗಳಿಗೆ ಅದರದೇ ಆದ ಕಥೆ ಹೇಳುವವರು ಸಿಗುವಲ್ಲಿಯವರೆಗೆ ಇತಿಹಾಸ ಬೇಟೆಗಾರ ನನ್ನೇ ವೈಭವೀಕರಿಸುತ್ತಿರುತ್ತದೆಯಂತೆ. ಇದು ನೇರವಾಗಿ ಇಂದಿನ ಭಾರತೀಯ ರಿಗೇ ಹೇಳಿದಂತಿದೆ. ನಾವು ಇಂದು ಹಿಡಿದು ನಿರಂತರ ನೇತಾಡುವ ಇತಿಹಾಸ ಬಹುತೇಕವಾಗಿ ಸುಮಾರು ನೂರಿನ್ನೂರು ವರ್ಷದಿಂದೀಚೆಗಿನದು.

ಈಗೀಗಂತೂ ಗಾಂಧಿ ಒಳ್ಳೆಯವರೋ, ಬ್ರಿಟಿಷರ ಅಜೇಂಟೋ, ಗೋಡ್ಸೆ ಮಾಡಿದ್ದೇ ಸರಿ, ಭಗತ್ ಸಿಂಗ್, ಸಾವರ್ಕರ್ ಇತ್ಯಾದಿ ಚರ್ಚೆ ಜಗಳಗಳು. ಅಷ್ಟೇ ಇತಿಹಾಸದ ಗಂಜಿಯಲ್ಲಿ ಬಿದ್ದ ನೊಣದಂತೆ ಆಡುತ್ತಿದ್ದೇವೆ. ಅವೇನು ಮುಖ್ಯವಲ್ಲವೆಂದಲ್ಲ. ಅದು ಕೂಡ ಬೇಕು, ಸತ್ಯವೇ ಬೇಕು. ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಅಂತಿಂಥದ್ದಲ್ಲ, ಸ್ವಾತಂತ್ರ್ಯ ಬಂದ ನಂತರ ನಡೆದ ಲೂಟಿ, ಅನಾಚಾರಗಳೂ ಅಷ್ಟಿಷ್ಟಲ್ಲ. ಆದರೆ ನಮಗೆ ಅದಕ್ಕಿಂತ ಸ್ವಲ್ಪವೇ ಮೊದಲ ಬ್ರಿಟಿಷರ ಕಾಲದ ಕ್ರೌರ್ಯದ ಇತಿಹಾಸದ ಅರಿವಿರುವುದು ನಾಲ್ಕಾಣೆಯಷ್ಟು ಮಾತ್ರ.

ಈಗ ಕೆಲವು ವರ್ಷಗಳ ಮೊದಲಂತೂ ಜಲಿಯನ್ ವಾಲಾಬಾಗ್ ಬಿಟ್ಟರೆ ಬೇರೆಡೆ ಬ್ರಿಟಿಷರು ಯಾರನ್ನೂ ಕೊಂದೇ ಇಲ್ಲ ಎನ್ನುವಷ್ಟೇ ಸಾಮಾನ್ಯರಿಗೆ ಗೊತ್ತಿದ್ದದ್ದು. ಈಗೀಗ ಇನ್ನಷ್ಟು ನರಮೇಧಗಳು ಆಚೆ ಬರುತ್ತಿವೆಯಾದರೂ ಅವು ಕೇವಲ ಐದು ಪೈಸೆಯಷ್ಟು ಮಾತ್ರ. ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ಶೇ.೧೦೦ ಅಹಿಂಸೆಯಿಂದ ಮಾತ್ರ ಎಂದೇ ನಂಬಿಕೊಂಡ ಬಹುದೊಡ್ಡ ವರ್ಗ ಇಂದಿಗೂ ಇದೆಯಲ್ಲ. ನಮ್ಮ ಇಂದಿನ ಎಲ್ಲ ಗಲಾಟೆ ವಾದಗಳು ಕೇವಲ ಸ್ವಾತಂತ್ರ್ಯಾ ನಂತರಕ್ಕೆ ಸಂಬಂಧಿಸಿದ್ದು. ಏಕೆಂದರೆ ಅದು ಮಾತ್ರ ರಾಜಕಾರಣಕ್ಕೆ ಕೆಲಸಕ್ಕೆ ಬರೋದು. ಅದರಲ್ಲಿಯೂ ನೂರೆಂಟು ವೈರುಧ್ಯಗಳು.

ಇಂದು ಹೊರಗಿನವರು ಅವರಿಗೆ ಬೇಕಾದಂತೆ ನಮ್ಮ ಇತಿಹಾಸವನ್ನು ಹೇಳುವುದು ಕೇಳಿದರೆ ನಮಗೆ ಕೋಪ ಬರುತ್ತದೆ. ಅವರಲ್ಲಿ ನೀವು ಸರಿಯಾಗಿ ಅಭ್ಯಾಸ ಮಾಡಿಲ್ಲ, ಅರ್ಧಂಬರ್ಧ ತಿಳಿದು ಸುಳ್ಳು ಹೇಳುತ್ತಿದ್ದೀರಿ, ಅವಮಾನ ಮಾಡುವುದೇ ನಿಮ್ಮ ಉದ್ದೇಶ, ನಮ್ಮದು ಭವ್ಯ ಇತಿಹಾಸ ಎಂದು ಕಾಲು ಕೆದರಿ ಜಗಳಕ್ಕಿಳಿಯುತ್ತೇವೆ. ಹಾಗಾದರೆ ನಿಮ್ಮದು ಅಸಲಿ ಕಥೆಯೇನೆಂದು ಅವರು ಕೇಳಿದರೆ ನಮಗೆ ಅದುವೇ ಪೂರ್ಣ ಗೊತ್ತಿಲ್ಲ. ಹೇಳಲಿಕ್ಕೆ ಬರುವುದಿಲ್ಲ.

ಸರಿಯಾದ ಪೂರ್ಣ ಇತಿಹಾಸವನ್ನು ತಿಳಿಯುವುದು, ದಾಖಲಿಸುವುದು ತೀರಾ ಮುಖ್ಯವೆನ್ನುವುದನ್ನು ಇಂದಿಗೂ ನಾವು ಕಲಿತಂತಿಲ್ಲ. ಬರೀ ಬಾಯಿ ಮಾತಿನಲ್ಲಿ ಹೇಳಿಕೊಂಡು ತಿರುಗಾಡಿದಂತಿದೆ. ಇಂದು ಅಂದು ಇಂದು ಎಳೆ ಯನ್ನು ಹೆಕ್ಕಿ, ಬಿಡಿಸಿ ಇತಿಹಾಸ ಹೇಳುವ ಕೆಲಸವನ್ನು ಕೆಲವು
ಸಂಶೋಧಕರು, ಯೌಟ್ಯುಬರ್‌ಗಳು, ಲೇಖಕರು ಮಾಡುತ್ತಿದ್ದಾರೆ, ಶ್ಲಾಘನೀಯ. ಆದರೆ ಅದು ಕೋಳಿ ಕೆದರಿದಂತೆ. ಚಪಿಲ್ಲಿ ಕೆಲಸ. ಅವು ತೀರಾ ಸ್ಥಳೀಯ ಮಟ್ಟದಲ್ಲಿ, ಅಥವಾ ಭಾರತೀಯರನ್ನು ಉದ್ದೇಶಿಸಿ ಮಾಡುವ ಕ್ರಿಯೆಟಿವ್ ಕೆಲಸಗಳೆಂದೇ ಕೆಲಸಮಯದ ನಂತರ ಪರಿಗಣಿತವಾಗುವುದು. ಗತ ವೈಭವವನ್ನು ಹೇಳುವ ಚಲನಚಿತ್ರಗಳೂ ಅಷ್ಟೆ, ಅವು ಎಷ್ಟೆಂದರೂ ಸಿನೆಮಾ.

ಇವೆಲ್ಲವನ್ನೇ ಮುಂದೊಂದು ದಿನ ಇತಿಹಾಸ ಎಂದು ಒಪ್ಪುವುದು ಕಷ್ಟ. ಅವೆಲ್ಲವಕ್ಕೆ ಅದರದೇ ಆದ ವೀಕ್ನೆಸ್‌ಗಳಿವೆ. ಆ ಕಾರಣಕ್ಕೆ ಮಹಾಭಾರತ ದಂತೆ ಮುಂದೆ ಅವು ಕೂಡ  ಪ್ರಶ್ನೆಗೊಳಗಾಗಿ ಗೊಂದಲವನ್ನು ಹುಟ್ಟಿ ಹಾಕುತ್ತವೆ. ಈ ಸಂಗ್ರಹಿಸುವ, ದಾಖಲೆಗಳ ಜೊತೆಯಿಡುವ, ತುಣುಕುಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಕೆಲಸವೇನಿದ್ದರೂ ಸರಕಾರವೇ ಮಾಡಬೇಕು. ನಮ್ಮದು ಸಮಗ್ರ, ಪೂರ್ಣ, ಸರಕಾರ ಗುರುತಿಸಿದ, ಪ್ರಶ್ನಿಸಲು ಅವಕಾಶವಿಲ್ಲದ ಇತಿಹಾಸವಾಗಿರಬೇಕು. ಸರಕಾರವೇ ಇದು ನಮ್ಮ ಇತಿಹಾಸ ಎಂದು ದಾಖಲಿಸಿ ಜಗತ್ತಿಗೆ ಸಾರಿ ಹೇಳಬೇಕು. ಕಟ್ಟುವಾಗ ಈ ಒಪ್ಪಿದ ಇತಿಹಾಸವನ್ನು ಮುಂದೊಂದು ದಿನ ಪ್ರಶ್ನಿಸಲು ಅವಕಾಶ ಕೊಡಬಾರದು.

ಸಿಂಹವೇ ಸಿಂಹದ ಕಥೆಯನ್ನು ಹೇಳಬೇಕೇ ವಿನಃ ನರಿಗಳಲ್ಲ. ಸಿಂಹ ಈ ನರಿಗಳು ಸುಳ್ಳು ಹೇಳುತ್ತಿವೆ, ಅವಕ್ಕೆ ಅಸಲಿಯತ್ತು ಗೊತ್ತೇ ಇಲ್ಲ, ದುರುದ್ದೇಶ ಎಂದೆಲ್ಲ ಎಷ್ಟೇ ಹೇಳಿದರೂ ಪ್ರಯೋಜನವಿಲ್ಲ. ಸಿಂಹ ತನ್ನ ಕಥೆಯನ್ನು ಹೇಳಿದಾಗ ಮಾತ್ರ ನರಿ ಸುಳ್ಳುಹೇಳುತ್ತಿವೆ ಎಂದು ಕಾಡು ನಂಬೋದು. ಆಗಲೇ ನಾಯಿ ನರಿಗಳು ಬಾಯಿ ಮುಚ್ಚೊದು. ಅಲ್ಲಿಯವರೆಗೆ ಅವು ಹೇಳಿದ್ದೇ ಸತ್ಯ, ಸರಿ. Now it is time for Lion to tell its real story..

error: Content is protected !!