ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
‘ಸಾರ್, ಬ್ರಿಟನ್ ಪ್ರಧಾನಿ ಗುಟ್ಟಾಗಿ ಮದುವೆ ಆಗಿದ್ದಾರಂತೆ, ಈ ಸುದ್ದಿ ತೆಗೆದುಕೊಳ್ಳೋಣವಾ?’ ಎಂದು ಮೊನ್ನೆ ನಮ್ಮ ಸುದ್ದಿ ಸಂಪಾದಕರು ಕೇಳಿದರು. ಅದಕ್ಕೆ ನಾನು, ‘ಅಮೆರಿಕ ಅಧ್ಯಕ್ಷ ಮತ್ತು ಬ್ರಿಟನ್ ಪ್ರಧಾನಿಗೆ ಗುಟ್ಟಾಗಿ ಏನನ್ನೂ ಮಾಡಲು ಬರುವು ದಿಲ್ಲ.
ಒಂದು ಸಲ ಸೀನುವ ಅಮೆರಿಕ ಅಧ್ಯಕ್ಷ ಎರಡು ಸಲ ಸೀನಿದರೆ ಅದು ಜಗತ್ತಿಗೇ ಗೊತ್ತಾಗುತ್ತದೆ. ಬ್ರಿಟನ್ ಪ್ರಧಾನಿ ಎರಡು ಸಲ ಕಣ್ಣು ಮಿಟುಕಿಸಿದರೆ ಅದು ಪ್ರಪಂಚಕ್ಕೆ ಸುದ್ದಿ. ಹೀಗಿರುವಾಗ, ಬ್ರಿಟನ್ ಪ್ರಧಾನಿ ಗುಟ್ಟಾಗಿ ಮದುವೆಯಾಗಿದ್ದಾನೆ ಎಂದು
ಹೇಳುತ್ತಿದ್ದೀರಿ. ಇದು ಪ್ರಮುಖ ಸುದ್ದಿಯಲ್ಲವೇ?’ ಎಂದೆ.
ಅದರಲ್ಲೂ ಅಧಿಕಾರದಲ್ಲಿದ್ದಾಗ, ಬ್ರಿಟನ್ ಪ್ರಧಾನಿ ಎಂದಲ್ಲ, ಯಾವ ದೇಶದ ಪ್ರಧಾನಿಯೇ ಆಗಲಿ, ಮದುವೆಯಾದರೆ ಅದು ಮುಖಪುಟ ಸುದ್ದಿಯೇ. ಪ್ರಧಾನಿಯಾದವರಿಗೆ ಹೆಂಡತಿಯನ್ನು ಮಾತಾಡಿಸಲು ಸಹ ಪುರುಸೊತ್ತು ಸಿಗುವುದಿಲ್ಲ. ಇನ್ನು ಮದುವೆ ಯಾಗಲು ಸಮಯ ಸಿಕ್ಕಿದೆಯೆಂದರೆ ಅದು ನಿಜಕ್ಕೂ ಮಹತ್ವದ ಸುದ್ದಿಯೇ. ಬ್ರಿಟನ್‌ನ ಪ್ರಧಾನಿಯಾಗಿದ್ದ ವಿನ್ ಸ್ಟನ್ ಚರ್ಚಿಲ್ ಚಿತ್ರವನ್ನು ನೋಡದವರು ಇರಲಿಕ್ಕಿಲ್ಲ. ಆದರೆ ಅವರ ಪತ್ನಿ ಕ್ಲೆಮೆಂಟೀನ್ ಚರ್ಚಿಲ್ ಫೋಟೋವನ್ನು ನೋಡಿದವರು ಅಪರೂಪ. ಆಕೆಯ ಫೋಟೋವನ್ನು ಎದುರಿಗೆ ಹಿಡಿದರೂ ಗುರುತು ಹಿಡಿಯಲಾರರು.
ಇವರಿಬ್ಬರಿಗೆ ಐವರು ಮಕ್ಕಳು. ಆದರೆ ಚರ್ಚಿಲ್ ಹೆಂಡತಿಯನ್ನು ಎಡೆ ಕರೆದುಕೊಂಡು ಹೋಗುತ್ತಿರಲಿಲ್ಲ. (ಈ ವಿಷಯದಲ್ಲಿ ಅಮೆರಿಕದ ಅಧ್ಯಕ್ಷರು ಅಮ್ಮಾವ್ರ ಗಂಡ! ಹೋದಲ್ಲಿ ಬಂದಲ್ಲಿ ಪಕ್ಕದಲ್ಲಿ ಹೆಂಡತಿ ಇರಲೇಬೇಕು. ಅದ್ಯಾಕೋ ಗೊತ್ತಿಲ್ಲ, ವಿಮಾನ ಇಳಿಯುವಾಗಲೂ ಪತ್ನಿಯ ಕೈ ಹಿಡಿದೇ ಇಳಿಯುತ್ತಾರೆ.) ಬ್ರಿಟನ್ನಿನ ಪ್ರಧಾನಿಗಳು ತಾವು ‘ಅಮ್ಮಾವ್ರ ಗಂಡ’ ಎಂಬುದನ್ನು ಹೊರಗಂತೂ ತೋರಿಸಿಕೊಳ್ಳುವುದಿಲ್ಲ. ಪತ್ನಿಯ ಉಡುಪಿನ ಚುಂಗು ಹಿಡಿದು ಸುತ್ತುವುದಿಲ್ಲ.
ಸಾಮಾನ್ಯವಾಗಿ, ಪ್ರಧಾನಿ ಪಟ್ಟಕ್ಕೆ ಅರವತ್ತು ದಾಟಿದವರೇ ಬರುತ್ತಾರೆ. ಅಷ್ಟರಲ್ಲಿ ಅವರಿಗೆ ಒಂದೆರಡು ಆಪರೇಷನ್ ಆಗಿರುತ್ತದೆ. ಎಲ್ಲ ಅಂಗಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಹೀಗಾಗಿ ಮನಸ್ಸಿನಲ್ಲಿ ಶೋಕಿಗಳಿದ್ದರೂ, ಅವರ ಅಂಗಾಂಗ ಸಹಕರಿಸುವು ದಿಲ್ಲ. ಹೀಗಾಗಿ ಉಳಿದ ಹಪಾಹಪಿ, ಚೇಷ್ಟೆಗಳಿಗೆ ಹೋಗುವುದಿಲ್ಲ. ಈ ಕಾರಣದಿಂದ ಪ್ರಧಾನಿ, ಅಧ್ಯಕ್ಷರಾದವರಿಗೆ ಮದುವೆ ಯಾಗಲು ಮತ್ತು ಮಕ್ಕಳನ್ನು ಮಾಡಲು (ಹೀಗೆ ಬರೆದರೆ ಕೆಲವರು ಅಸಹ್ಯ ಎಂದು ಮೂಗು ಮುರಿಯುವವರಿದ್ದಾರೆ!) ಆಗುವು ದಿಲ್ಲ.
ಅಂಥವರು ಅಧಿಕಾರವೆಂಬ ಅಮಲಿನ ಎಲ್ಲಾ ಸುಖವನ್ನೂ ಕಾಣುತ್ತಾರೆ. ಹೀಗಾಗಿ ಪ್ರಧಾನಿ ಅಥವಾ ಅಧ್ಯಕ್ಷರು ಮದುವೆಯಾದ ಸುದ್ದಿ ಅಪರೂಪವೇ. ಇನ್ನು ಕೆಲವರು ಮದುವೆಯಾಗಿ ಮಾಡುವುದನ್ನು, ಮದುವೆಯಾಗದೇ ಮಾಡುತ್ತಾರೆ. ಅದರಲ್ಲೂ ಪ್ರಧಾನಿ ಅಂದ್ರೆ ಯಾರು ಬಯಸಿ ಬರುವುದಿಲ್ಲ? ಅಂಥವರಿಗೆ ಮದುವೆ extra baggage! ಹೀಗಾಗಿ ಅಧಿಕಾರದಲ್ಲಿರು ವವರಿಗೆ ಮದುವೆಯಾಗುವ ಅವಶ್ಯಕತೆ ಬರುವುದಿಲ್ಲ. ಅವರಿಗೆ ಒಂಟಿತನ ಮತ್ತು ಏಕಾಂಗಿತನ ಎಂದೂ ಕಾಡುವುದಿಲ್ಲ.
ಅದೇನಿದ್ದರೂ ಅಧಿಕಾರ ಕಳಕೊಂಡ ನಂತರವೇ. ಹೀಗಾಗಿ ಬ್ರಿಟನ್ನಿನ ಕಳೆದ 199 ವರ್ಷಗಳ ಇತಿಹಾಸದಲ್ಲಿ, ಪ್ರಧಾನಿ ಯೊಬ್ಬರು ಅಧಿಕಾರದಲ್ಲಿ ಇರುವಾಗಲೇ ಮದುವೆಯಾದ ನಿದರ್ಶನಗಳಿಲ್ಲ. ಎಡ್ವರ್ಡ್ ಹೀಥ್ ಸೇರಿದಂತೆ ನಾಲ್ವರು ಅವಿವಾ ಹಿತರು ಪ್ರಧಾನಿಗಳಾಗಿದ್ದಾರೆ. ಹೆಂಡತಿ ನಿಧನಳಾದ ಬಳಿಕ ಒಂಬತ್ತು ಮಂದಿ (ವಿಧುರ) ಪ್ರಧಾನಿಗಳಾಗಿದ್ದಾರೆ. ಆದರೆ ಅಧಿಕಾರ ದಲ್ಲಿದ್ದಾಗ ಮದುವೆಯಾದವರು ಇಲ್ಲ. ಅದರಲ್ಲೂ ಪ್ರಧಾನಿಯವರ ಅಧಿಕೃತ ನಿವಾಸ ‘10, ಡೌವ್ನಿಂಗ್ ಸ್ಟ್ರೀಟ್’ನಲ್ಲಿ
ಮದುವೆಯಾದವರೂ ಇಲ್ಲ. ಮೊನ್ನೆ ಹಾಲಿ ಪ್ರಧಾನಿ ಐವತ್ತಾರು ವರ್ಷದ ಬೋರಿಸ್ ಜಾನ್ಸನ್, ತಮಗಿಂತ ಇಪ್ಪತ್ಮೂರು ವರ್ಷ ಚಿಕ್ಕವಳಾದ, ಕೆಲ ಕಾಲದ ಪ್ರೇಯಸಿ ಕೆರಿ ಜಾನ್ಸನ್‌ಳನ್ನು ವಿವಾಹವಾಗಿದ್ದು ಈ ಎಲ್ಲಾ ಕಾರಣಗಳಿಂದ ವಿಶೇಷವಾಗಿತ್ತು.
ಬ್ರಿಟನ್ನಿನ ಕೆಲವು ಕಿಡಿಗೇಡಿ ಪತ್ರಕರ್ತರು ಈ ವಿವಾಹಕ್ಕೆ ‘ಜಾನ್ಸನ್ ಅಂಡ್ ಜಾನ್ಸನ್’ ಎಂದು ಹೆಡ್ ಲೈನ್ ನೀಡಿ ತಮಾಷೆ ಮಾಡಿದವು. ಬೋರಿಸ್ ಗೆ ಇದು ಮೊದಲ ಮದುವೆಯೇನಲ್ಲ. ಈಗಾಗಲೇ ಇಬ್ಬರು ‘ಅಧಿಕೃತ’ ಪತ್ನಿಯರಿಗೆ ವಿಚ್ಛೇದನ ನೀಡಿದ ಬೋರಿಸ್, ಅರ್ಧ ಡಜನ್‌ಗಿಂತ ಹೆಚ್ಚು ಮಹಿಳೆಯರ ಜತೆ ಸಂಬಂಧ ಇಟ್ಟುಕೊಂಡ ಮಹಾಪೋಲಿ. ಹೀಗಾಗಿ ಬೋರಿಸ್ ಎರಡು
ಸಲ ಕಣ್ಣು ಮಿಟುಕಿಸಿದರೆ, ಅದಕ್ಕೆ ಅನೇಕ ಅರ್ಥ.
ಪ್ರಧಾನಿಯಾದವರು ತಮ ಸುತ್ತ ಮುತ್ತ ಇರುವ ಜನರ ಬಗ್ಗೆ ಎಚ್ಚರದಿಂದ ಇರಬೇಕು. ಅದರಲ್ಲೂ ಒಂದನೇ ಸಲ ಭೇಟಿ ಮಾಡಿದವಳನ್ನು, ಎರಡನೇ ಅಥವಾ ಮೂರನೇ ಸಲ ಭೇಟಿ ಮಾಡಿದರೆ, ರಾಜಕೀಯದಲ್ಲಿ ಅದಕ್ಕೆ ವಿಶೇಷ ಅರ್ಥ. ಬಹುತೇಕ ಸಂದರ್ಭಗಳಲ್ಲಿ ಅನರ್ಥ. ಹೀಗಿರುವಾಗ ಬೋರಿಸ್ ಜಾನ್ಸನ್, ಕೆರಿ ಮುಂದೆ ಆಗಾಗ ಕಾಲು ಕೆರೆದರೆ, ಪದೇ ಪದೆ ಕದ್ದು ಮುಚ್ಚಿ ಭೇಟಿಯಾದರೆ, ಗುಟ್ಟಾಗಿ ಸುತ್ತಿದರೆ, ಸುದ್ದಿಯಾಗದೇ ಇರುವುದೇ? ಆದರೆ ಅವರಿಬ್ಬರ ವಯಸ್ಸಿನ ಅಂತರವನ್ನು ಗಮನಿಸಿ ಅನೇಕರು, ‘ಹಾಗಿರಲಿಕ್ಕಿಲ್ಲ ಬಿಡಿ’ ಎಂದೇ ಸುಮ್ಮನಿದ್ದರು.
ಆದರೆ ಮೊನ್ನೆ ಜಾನ್ಸನ್ ಗುಟ್ಟಾಗಿ, ಕೆಲವು ಆಪ್ತರನ್ನಷ್ಟೇ ಆಹ್ವಾನಿಸಿ, ಮೂರನೇ ಬಾರಿಗೆ ಹಸೆಮಣೆ ಏರಿದರು. ಅವರಿಬ್ಬರೂ ಅದೆಷ್ಟು ಅವಸರವಸರವಾಗಿ ಮದುವೆಯಾಗಿzರೆಂದರೆ, ವಧುವಿವ ಶ್ವೇತ ನೀಳ ಉಡುಪು (ವೆಡಿಂಗ್ ಗೌನ್) ಬಾಡಿಗೆಗೆ ತರಲಾ ಗಿತ್ತು! ಇದೇನೇ ಇರಲಿ, ಕೋವಿಡ್ ನಿಂದ ಬ್ರಿಟನ್ ಚೇತರಿಸಿಕೊಳ್ಳುತ್ತಿದೆ ಎಂಬುದಕ್ಕೆ ತಮ್ಮವಿವಾಹವೇ ಸಾಕ್ಷಿ ಎಂದು ಬೋರಿಸ್ ಜಾನ್ಸನ್ ಒಂದೇ ಮಾತಿನಲ್ಲಿ ಎಲ್ಲರಿಗೂ ಉತ್ತರ ಕೊಟ್ಟು, ಟೀಕಾಕಾರರನ್ನು ಸುಮ್ಮನಾಗಿಸಬಹುದು.
ಇಷ್ಟು ದಿನಗಳ ತನಕ ’ರಾಣಿಗೆ ಗಂಡನಿಲ್ಲ, ಪ್ರಧಾನಿಗೆ ಹೆಂಡತಿಯಿಲ್ಲ’ ಎಂದು ಅಲ್ಲಿನ ಜನ ಆಡಿಕೊಳ್ಳುತ್ತಿದ್ದರು. ಹಾಗೆ ಹೇಳುತ್ತಿದ್ದವರು ಇನ್ನಾದರೂ ಬಾಯಿ ಮುಚ್ಚಿಕೊಳ್ಳಬಹುದು. ಈಗ ಅಲ್ಲಿನ ಟ್ಯಾಬ್ಲಾಯಿಡ್ ಪತ್ರಿಕೆಗಳು ‘ಜಾನ್ಸನ್ ಅಂಡ್ ಜಾನ್ಸನ್’ ಹನಿಮೂನ್ ಗೆ ಎಲ್ಲಿಗೆ ಹೋಗಬಹುದು ಎಂದು ದಿನಕ್ಕೊಂದು ಅತಿರಂಜಿತ ವರದಿಗಳನ್ನು ಪ್ರಕಟಿಸುತ್ತಿವೆ.
‘ಕೋವಿಡ್ ನಂತರ ಬ್ರಿಟನ್ನಿನ ಆರ್ಥಿಕತೆಯನ್ನು ವೃದ್ಧಿಸುವುದು ನನ್ನ ಆದ್ಯತೆ’ ಎಂದು ಬೋರಿಸ್ ಜಾನ್ಸನ್ ಹೇಳಿದರೆ ಯಾರೂ ನಂಬುತ್ತಿಲ್ಲ. ‘ನೀವು ನಿಮ್ಮ ಮದುವೆ ವಿಷಯದಲ್ಲಿ ಸಿರೀಯಸ್ ಆಗಿದ್ದೀರಿ, ಪರವಾಗಿಲ್ಲ, ಆದರೆ ದೇಶದ ಆರ್ಥಿಕತೆ ವಿಷಯದಲ್ಲಿ ಜೋಕ್ ಮಾಡಬೇಡಿ’ ಎಂದು ಪ್ರಧಾನಿಯ ಕಾಲೆಳೆಯುತ್ತಿದ್ದಾರೆ. ‘ಬೋರಿಸ್ ಜಾನ್ಸನ್ ತಮ್ಮ ಬಹು ಕಾಲದ ಪ್ರೇಯಸಿಯನ್ನು
ಮದುವೆಯಾಗಿದ್ದಾರೆ, ಒಳ್ಳೆಯದು.
ಆದರೆ ಮುಂದಿನ ಪ್ರೇಯಸಿಯನ್ನು ಹುಡುಕಲು ಕನಿಷ್ಠ ಒಂದು ವರ್ಷವನ್ನಾದರೂ ತೆಗೆದುಕೊಳ್ಳಲಿ’ ಎಂದು ಅವರ ರಾಜಕೀಯ ಪ್ರತಿಸ್ಪರ್ಧಿಗಳು ಟ್ವೀಟ್ ಮಾಡಿ ಭಲೇ ಮಜಾ ತೆಗೆದುಕೊಳ್ಳುತ್ತಿದ್ದಾರೆ. ’ಕೋವಿಡ್ ಕಾಲದಲ್ಲೂ ಸಾಮಾಜಿಕ ಅಂತರ ಕಾಪಾಡದ ಒಬ್ಬ ವ್ಯಕ್ತಿಯಿದ್ದರೆ ಅದು ನಮ್ಮ ಪ್ರಧಾನಿ, ಇವರಿಗ್ಯಾವ ಶಿಕ್ಷೆ?’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಗರು ಕೇಳು ತ್ತಿದ್ದಾರೆ.
ಅಮೆರಿಕ, ಬ್ರಿಟನ್ನಿನಂಥ ದೇಶಗಳಲ್ಲಿ ಇದೇನು ದೊಡ್ಡ ಸಂಗತಿಯಲ್ಲ. ಅಲ್ಲಿ ಡೇಟಿಂಗ್, ವಿವಾಹ ಮತ್ತು ವಿಚ್ಛೇದನ ಬಗ್ಗೆ ಜನ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗೆಂದು ಸಾರ್ವಜನಿಕ ಬದುಕಿನಲ್ಲಿ ಪ್ರಧಾನಿ, ಅಧ್ಯಕ್ಷರ ಹಾದರವನ್ನು ಸಹಿಸುವುದಿಲ್ಲ. ‘ನಾನು ಹೇಗಾದರೂ ಇರುತ್ತೇನೆ, ಆದರೆ ನಮ್ಮನ್ನು ಆಳುವವರು ಮಾತ್ರ ಸರಿಯಾಗಿರಬೇಕು’ ಎಂಬ ಧೋರಣೆ. ಬ್ರಿಟನ್ ಈ
ಕೋವಿಡ್‌ನಿಂದ ಝರ್ಜರಿತವಾಗಿದ್ದರೂ, ಇಷ್ಟು ದಿನಗಳ ಒಬ್ಬಂಟಿ ಬದುಕಿಗೆ ಪೂರ್ಣವಿರಾಮ ಹಾಕಿ, ತಮ್ಮ ವೈಯಕ್ತಿಕ ಬದುಕನ್ನು ಸರಿ ಮಾಡಿಕೊಳ್ಳಲು ಮುಂದಾದ ಬ್ರಿಟಿಷ್ ಪ್ರಧಾನಿ ಧೈರ್ಯವನ್ನು ಮೆಚ್ಚಲೇಬೇಕು.
‘ನನ್ನ ಬಗ್ಗೆ ನೀವೇನು ಬೇಕಾದರೂ ತಿಳಿದುಕೊಳ್ಳಿ, ಅದು ನಿಮ್ಮ ಹಣೆಬರಹ, ಮೊದಲು ನನ್ನ ಹಣೆಬರಹ ಬದಲಿಸಿಕೊಳ್ಳುವೆ’ ಎಂದು ಯೋಚಿಸುವುದು ಸಹ ಸಾಮಾನ್ಯ ಸಂಗತಿಯಲ್ಲ. ಬೋರಿಸ್ ಜಾನ್ಸನ್ ಜಾಗದಲ್ಲಿ ಒಂದು ಕ್ಷಣ ಸುಮ್ಮನೆ ಭಾರತದ
ಪ್ರಧಾನಿಯನ್ನಿಟ್ಟು ನೋಡಿ. ಇದು ನಮ್ಮ ಪ್ರಧಾನಿ ವಿಷಯದಲ್ಲಿ ಸಾಧ್ಯವಾ? ನಮ್ಮ ಪ್ರಧಾನಿ ಯಾರೇ ಆಗಿರಲಿ. ನಮ್ಮಲ್ಲಿ
ಇದು ಸಾಧ್ಯವಾ? ಇಂಪಾಸಿಬಲ!!
‘ಅಯ್ಯೋ ಎಂಥಾ ಮಾತಾಡುತ್ತೀರಿ’ ಎಂದು ಬಾಯಿ ಮುಚ್ಚಿಸದಿದ್ದರೆ ಕೇಳಿ. ಪ್ರಧಾನಿ ಹುದ್ದೆಯಲ್ಲಿದ್ದವರು ಮದುವೆಯಾದರೆ, ಮುಗಿದೇ ಹೋಯಿತು. ಪ್ರತಿಪಕ್ಷಗಳು ಬಿಡ್ತಾವಾ? ಎಲ್ಲರೂ ಪ್ರಧಾನಿ ರಾಜೀನಾಮೆಗೆ ಆಗ್ರಹಿಸುತ್ತಾರೆ. ಜನ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೇ ಸಾಯುತ್ತಿದ್ದಾರೆ, ಪ್ರಧಾನಿಯವರು ಹಾಸಿಗೆ ಏರುವ ಕನಸು ಕಾಣುತ್ತಿದ್ದಾರೆ ಎಂದು ಅಪಹಾಸ್ಯ ಶುರು. ಈ ಟೈಮಲ್ಲೂ
ಇವೆ ಬೇಕಿತ್ತಾ, ಈ ಸಮಯದಲ್ಲಿ ಜನರಿಗೆ ಆಸ್ಪತ್ರೆಯಲ್ಲಿ ಐಸಿಯು ಕೋಣೆ ಸಿಗುತ್ತಿಲ್ಲ, ಆದರೆ ಪ್ರಧಾನಿ ಮಾತ್ರ ಪ್ರಸ್ತದ ಕೋಣೆ ಸೇರಿದ್ದಾರೆ ಎಂಬ ಕುಹಕ.
ಈ ವಯಸ್ಸಿನಲ್ಲಿ ಬೇಕಿತ್ತೇನ್ರೀ, ಹಾಲು ಬೇಕು ಅಂತ ಅನಿಸಿದಾಗ ಯಾರಾದರೂ ಆಕಳನ್ನು ಸಾಕ್ತಾರಾ? ಡೇರಿ ಹಾಲು ಸಿಗುತ್ತಿರ ಲಿಲ್ಲವಾ? ಎಂಬ ಗೇಲಿ. ರೋಮ್ ಸಾಮ್ರಾಜ್ಯಕ್ಕೆ ಬೆಂಕಿ ಬಿದ್ದಾಗ ನೀರೋ ದೊರೆ ಪಿಟೀಲು ನುಡಿಸುತ್ತಿದ್ದನಂತೆ. ಅದೇ ರೀತಿ, ಜನ ಕೋವಿಡ್ ನಿಂದ ಸಾಯುತ್ತಿದ್ದಾರೆ, ಈ ಪ್ರಧಾನಿಗೆ ಬಾಸಿಂಗ, ಪಲ್ಲಂಗದ್ದೇ ಯೋಚನೆ ಆಯ್ತ ಎಂದು ವ್ಯಂಗ್ಯ ಮಾಡದೇ
ಬಿಡುತ್ತಿದ್ದರಾ? ಇದನ್ನೇ ಮುಖ್ಯವಾಗಿಟ್ಟುಕೊಂಡು ಪ್ರತಿಪಕ್ಷಗಳು ‘ಭಾರತ ಬಂದ್’ಗೆ, ಪ್ರತಿ ಊರಿನಲ್ಲೂ ಪ್ರತಿಭಟನೆಗೆ ಕರೆ ಕೊಡುತ್ತಿದ್ದವು. ಕೆಲವು ರಾಜ್ಯ ಸರಕಾರಗಳಿಂದ ಖಂಡನಾ ನಿರ್ಣಯ ಸ್ವೀಕಾರ.
ಇನ್ನು ಹದಿನೈದು ದಿನ ಟಿವಿ ಚಾನೆಲ್ಲುಗಳಲ್ಲಿ ಪ್ರಧಾನಿ ಮದುವೆ ಆಗಿದ್ದು ಸರಿಯೋ, ತಪ್ಪೋ ಎಂಬ ಚರ್ಚೆ. ಸಾಮಾಜಿಕ
ಜಾಲತಾಣಗಳ ಇದೇ ವಿಷಯದ ಬಗ್ಗೆ ಜಟಾಪಟಿ. ಪ್ರಧಾನಿಗೆ ತಾನು ಯಾಕಾದರೂ ಮದುವೆ ಆದೆ ಎಂದು ತಲೆ ಚಿಟ್ಟುಹಿಡಿದು, ವಿಚ್ಛೇದನಕ್ಕೆ ಯೋಚಿಸುವ ತನಕ ವಿರೋಧಿಗಳು ಬಿಡುತ್ತಿರಲಿಲ್ಲ.
ಭಾರತದಲ್ಲಿ ಇದನ್ನು ಊಹಿಸಲೂ ಸಾಧ್ಯವಿಲ್ಲ. ಪ್ರಧಾನಿಗೊಂದೇ ಅಲ್ಲ, ಮುಖ್ಯಮಂತ್ರಿಯಾದವರಿಗೂ ಇದು ಸಾಧ್ಯವಿಲ್ಲ. ಅಧಿಕಾರದಲ್ಲಿದ್ದವರು ಪರಸೀ ಸಂಗ ಅಥವಾ ಹಾದರ ಮಾಡುವುದನ್ನು ಸಹಿಸಿಕೊಳ್ಳಬಹುದು, ಅದು ಅವರ ವೈಯಕ್ತಿಕ ಅಥವಾ ಖಾಸಗಿ ವಿಷಯ ಎಂದು ಸುಮ್ಮನಾಗುತ್ತಾರೆ. ಆದರೆ ವಿವಾಹವಾಗುವುದನ್ನು ಸಹಿಸುವುದಿಲ್ಲ. ಇದೇ ಕಾರಣದಿಂದ, ಐವತ್ತು ವರ್ಷ ದಾಟಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇನ್ನು ಮದುವೆಯಾಗುವುದು ಕಷ್ಟ. ಅವರು ನಾಳೆ ಮದುವೆಯಾದರೆ, ಇಂಥ ಟೀಕೆಗಳ ಕೂರಂಬುಗಳನ್ನು ಎದುರಿಸಬೇಕು. ಯೌವನದಲ್ಲಿ ಮದುವೆಯಾಗಿದ್ದರೆ ಈ ಸಮಸ್ಯೆಯೇ ಎದುರಾಗುತ್ತಿರಲಿಲ್ಲ.
ಈಗಲೂ ಅವರು ಮದುವೆ ಆಗಲು ಮನಸ್ಸು ಮಾಡಿದರೆ, ಸಾವಿರಾರು ಸುಂದರಿಯರು ಸಾಲು ಹಚ್ಚಿ ನಿಲ್ಲಬಹುದು. ಈಗಲೂ
ಅವರು Most eligible bachelor. ರೂಪ, ವಯಸ್ಸು, ಹಣ, ಅಂತಸ್ತು, ಹೆಸರು … ಎಲ್ಲವೂ ಇವೆ. ಆದರೆ ಜನರ ಟೀಕೆಗಳಿಗೆ ಹೆದರಿ ಅವರು ಅವಿವಾಹಿತರಾಗಿ ಇದ್ದಿರಬಹುದಾ, ಗೊತ್ತಿಲ್ಲ. ‘ಈ ಹೊತ್ತಿನಲ್ಲಿ ಕಾಂಗ್ರೆಸ್ಸನ್ನು ಮೇಲೆತ್ತುವ ಬದಲು… ’ ಎಂದು ಜನ ಮೂದಲಿಸದೇ ಇರುತ್ತಾರಾ? ಅಬ್ಬಾ.. ಈ ಜನರ ಮಾತುಗಳನ್ನು ಕೇಳುವುದುಂಟಾ? ಅಧಿಕಾರದಲ್ಲಿದ್ದಾಗ ಮದುವೆಯಾಗುವು ದೊಂದೇ ಅಲ್ಲ, ಮಕ್ಕಳನ್ನು ಹೆರುವುದು ಸಹ ಅಷ್ಟೇ ಕಷ್ಟ.
ಆಗಲೂ ಜನ ಬಾಯಿಗೆ ಬಂದಂತೆ ಮಾತಾಡಿಕೊಳ್ಳುತ್ತಾರೆ. ಅದು ಅವರ ವೈಯಕ್ತಿಕ ವಿಷಯ ಎಂದು ಭಾವಿಸುವುದಿಲ್ಲ.
ಜನಸೇವೆಗೆಂದು ಆರಿಸಿ ಕಳಿಸಿದರೆ, ಈತ ಮಕ್ಕಳನ್ನು ಮಾಡುತ್ತಿದ್ದಾನಲ್ಲ ಎನ್ನುತ್ತಾರೆ. ಇನ್ನು ಹೆಂಗಸರು ಅಧಿಕಾರದಲ್ಲಿದ್ದರೆ, ಸರಿಯಾಗಿ ಆಡಳಿತ ಮಾಡುವ ಬದಲು, ಇವಳು ಮಕ್ಕಳನ್ನು ಹೆರುತ್ತಿದ್ದಾಳಲ್ಲ ಎಂದು ಟೀಕಿಸುತ್ತಾರೆ. ಇಂಥ ಮೂದಲಿಕೆ, ವ್ಯಂಗ್ಯಗಳನ್ನು ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂದಾ ಆರ್ಡೆರ್ನ್ ಅನುಭವಿಸಿದಳು.
2017ರಲ್ಲಿ ಅವರು ಆ ದೇಶದ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದರು. ಅದಾಗಿ ಐದು ತಿಂಗಳಿಗೆ ಅವರು ಗರ್ಭವತಿಯಾದ ಸುದ್ದಿ ಪ್ರಕಟವಾದಾಗ, ‘ನಮ್ಮ ಪ್ರಧಾನಿ ಆದ್ಯತೆ ಏನು?’ ಎಂಬುದನ್ನು ತಿಳಿಸಿಕೊಟ್ಟಿzರೆ ಎಂದು ಅವರ ವಿರೋಧಿಗಳು ಚುಚ್ಚದೇ
ಬಿಡಲಿಲ್ಲ. ಅದಾಗಿ ನಾಲ್ಕು ತಿಂಗಳಿಗೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡುವ ತನಕವೂ ಅವರ ಬಗ್ಗೆ ಮೂದಲಿಕೆ, ಟೀಕೆ ಮುಂದುವರಿದಿತ್ತು.
ಈ ವಿಷಯದಲ್ಲಿ ಇದಕ್ಕಿಂತ ತೀಕ್ಷ್ಣ ವ್ಯಂಗ್ಯ, ಚುಚ್ಚುನುಡಿ, ಅಪಹಾಸ್ಯ, ವಿಡಂಬನೆ, ಚೋದ್ಯವನ್ನು ಅನುಭವಿಸಿದವರೆಂದರೆ ಪಾಕಿಸ್ತಾನದ ಬೆನರ್ಜೀ ಭುಟ್ಟೋ. 1988ರಲ್ಲಿ ಬೆನರ್ಜೀ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವಾಗಲೇ ಗಂಡು ಮಗುವಿಗೆ (ಬಿಲಾವಲ) ಜನ್ಮ ನೀಡಿದರು. ಅವರು ಪ್ರಧಾನಿಯಾಗಿದ್ದಾಗ, ಹೆಣ್ಣು ಮಗು (ಭಕ್ತಾವರ್)ವಿಗೆ (1990ರಲ್ಲಿ) ಜನ್ಮ ನೀಡಿದರು. ವಿಶ್ವದಲ್ಲಿಯೇ, ಪ್ರಧಾನಿಯಂಥ ಹುದ್ದೆಯಲ್ಲಿದ್ದಾಗ ತಾಯಿಯಾದ ಮೊದಲಿಗಳು ಎಂಬ ಅಭಿದಾನಕ್ಕೆ ಪಾತ್ರವಾದ ಬೆನಜೀರ್
ಭುಟ್ಟೋ ಅವರನ್ನು ಅವರ ದೇಶವಾಸಿಗಳು ಮಾತ್ರ ಟೀಕಿಸದೇ ಬಿಡಲಿಲ್ಲ. ಅವರು ಎರಡನೇ ಸಲ ಪ್ರಧಾನಿಯಾಗುವುದಕ್ಕಿಂತ ಆರು ತಿಂಗಳು ಮುಂಚೆ, ಮೂರನೇ ಮಗುವಿಗೆ (ಆಸೀಫ್) ಜನ್ಮ ನೀಡಿದರು.
ಆಗಲೂ ಅಲ್ಲಿನ ಜನ ಬೆನಜೀರ್ ಅವರನ್ನು ಕೆಟ್ಟದಾಗಿ ಲೇವಡಿ ಮಾಡಿದರು. ಬೆನಜೀರ್ ಗಂಡ ಅಸೀಫ್ ಅಲಿ ಜರ್ದಾರಿ ಜೈಲು ಸೇರಿದರೇ ಒಳ್ಳೆಯದು. ಆಗ ಬೆನಜೀರ್‌ಗೆ ಪ್ರಧಾನಿಯಾಗಿ ನಿಶ್ಚಿಂತೆಯಿಂದ ಆಡಳಿತ ನಡೆಸಲು ಸಮಯ ಸಿಗುತ್ತದೆ. ಗಂಡ ಜೈಲಿ ನಿಂದ ಹೊರ ಬಂದರೆ, ತಾಯಿಯಾಗಬೇಕಾಗುತ್ತದೆ ಎಂದು ಜನ ಬೀದಿಗಳಲ್ಲಿ ಮಾತಾಡಿಕೊಳ್ಳುತ್ತಿದ್ದರು. ಜನರ ತೆರಿಗೆ ಹಣದಲ್ಲಿ ಬಸುರಾಗಿ, ಮಗು ಹೆತ್ತವಳು ಎಂದು ಜನ ಗೇಲಿ ಮಾಡಿದರು.
ಅಧಿಕಾರದಲ್ಲಿದ್ದಾಗ ಮದುವೆಯಾದರೆ, ಮಕ್ಕಳನ್ನು ಹೆತ್ತರೆ ಇವನ್ನೆ ಕೇಳಿಸಿಕೊಳ್ಳಬೇಕು. ಹೀಗಾಗಿ ಯಾರೂ ಇವೆರಡು ’ಸಾಹಸ’ ಗಳಿಗೆ ಮುಂದಾಗುವುದಿಲ್ಲ. ಇಂಥ ಟೀಕೆಗಳಿಗೆ ತಲೆಕೆಡಿಸಿಕೊಳ್ಳದವರೆಂದರೆ ಲಾಲೂ ಪ್ರಸಾದ ಯಾದವ್. ಒಟ್ಟೂ ಒಂಬತ್ತು ಮಕ್ಕಳ ತಂದೆಯಾದ ಅವರು, ಮುಖ್ಯಮಂತ್ರಿಯಾಗಿದ್ದಾಗಲೇ, ಅವರ ಪತ್ನಿ ಎರಡು ಮಕ್ಕಳಿಗೆ ಜನ್ಮ ನೀಡಿದ್ದಳು. ಲಾಲೂ ಜೈಲು ಸೇರಿ, ರಾಬ್ರಿದೇವಿ ಮುಖ್ಯಮಂತ್ರಿ ಆದ ನಂತರವೇ ಅವರ ‘ಪುತ್ರಕಾಮೇಷ್ಟಿ ಯಾಗ’ ನಿಂತಿದ್ದು! ಇವೇನೇ ಇರಲಿ, ಬೋರಿಸ್ ಜಾನ್ಸನ್ ಮುಂದಿನ ನಡೆ ಬಗ್ಗೆ ಕುತೂಹಲ ಸಹಜ.