Thursday, 12th December 2024

ಅಶ್ವಮೇಧದ ಕುದುರೆ ಕಟ್ಟೋರ‍್ಯಾರು ?

ಅಶ್ವತ್ಥಕಟ್ಟೆ

ranjith.hoskere@gmail.com

ದೇಶದಲ್ಲಿ ಲೋಕಸಭಾ ಚುನಾವಣೆಯ ಹವಾದಿನದಿಂದ ದಿನಕ್ಕೆ ಏರುತ್ತಿದೆ, ಅದರಲ್ಲಿಯೂ ಟಿಕೆಟ್ ಹಂಚಿಕೆ ವಿಷಯ ಸಾಕಷ್ಟು ಸಂಚಲನೆ ಸೃಷ್ಟಿಸಿದೆ. ತಮಗೆ ಟಿಕೆಟ್ ಸಿಗುವುದೋ ಇಲ್ಲವೋ ಎನ್ನುವ ಆತಂಕದಲ್ಲಿ ಹಲವು ಆಕಾಂಕ್ಷಿಗಳು ದಿನ ದೂಡುತ್ತಿದ್ದರೆ, ಕರ್ನಾಟಕದಲ್ಲಿ ಮಾತ್ರ ‘ಇದನ್ನು ನಮ್ಮ ಹಣೆಗೆ ಕಟ್ಟದಿದ್ದರೆ ಸಾಕು’ ಎನ್ನುವ ಮನಸ್ಥಿತಿಯಲ್ಲಿದ್ದಾರೆ ಹಲವು ನಾಯಕರು.

ಹೌದು, ಮುಂದಿನ ಐದು ವರ್ಷ ದೇಶವನ್ನು ಯಾರು ಮುನ್ನಡೆಸಬೇಕು ಎಂಬ ಮಹತ್ವದ ವಿಷಯವನ್ನು ಒಳಗೊಂಡಿರುವ ಲೋಕಸಭಾ ಚುನಾವಣೆ ಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದು ಸಹಜ. ಆದರೆ, ಈ ಬಾರಿಯ ಲೋಕಸಭಾ ಚುನಾವಣಾ ಟಿಕೆಟ್ ವಿಷಯದಲ್ಲಿ ಕರ್ನಾಟಕದ ಕಾಂಗ್ರೆಸ್‌ನ ವರ್ತನೆ ಮಾತ್ರ ಕೊಂಚ ವಿಭಿನ್ನವಾಗಿದೆ. ಈ ಬಾರಿ ರಾಜ್ಯ ಕಾಂಗ್ರೆಸಿಗರಿಗೆ ‘ಟಾರ್ಗೆಟ್-೨೦’ ನೀಡಿರುವ ಪಕ್ಷದ ಹೈಕಮಾಂಡ್, ರಾಜ್ಯದ ಹಲವು ನಾಯಕರ ಮನಸ್ಥಿತಿಯಿಂದಾಗಿ ಗೊಂದಲಕ್ಕೀಡಾಗಿದೆ.

ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ ಎಂಬುದು ಹೆಚ್ಚುತ್ತಿರುವ ಈ ಗೊಂದಲಕ್ಕೆ ಕಾರಣವಲ್ಲ; ಬದಲಿಗೆ ಹಲವು ಕ್ಷೇತ್ರ ದಲ್ಲಿ ಯಾರನ್ನು ಅಭ್ಯರ್ಥಿ ಯನ್ನಾಗಿ ಮಾಡಬೇಕು ಎಂಬುದು. ಕರ್ನಾಟಕದಲ್ಲಿ ಭರ್ಜರಿ ಬಹುಮತದೊಂದಿಗೆ ಗದ್ದುಗೆ ಯೇರಿದ ಕಾಂಗ್ರೆಸ್‌ಗೆ ಈ ಬಾರಿ ರಾಜ್ಯದಲ್ಲಿ ಅಭ್ಯರ್ಥಿ
ಗಳಿಗೇನೂ ಕೊರತೆಯಾಗುವುದಿಲ್ಲ; ಎಂಟರಿಂದ ಹತ್ತು ಕ್ಷೇತ್ರಗಳಲ್ಲಿ ಹಾಲಿ ಸಚಿವರನ್ನೇ ಚುನಾವಣೆಗೆ ನಿಲ್ಲಿಸಿದರಾಯಿತು ಎಂಬುದು ಕಾಂಗ್ರೆಸ್ ಹೈಕಮಾಂಡ್‌ನ ಲೆಕ್ಕಾಚಾರವಾಗಿತ್ತು.

ಕೆಲ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೊದಲೇ ಈ ಷರತ್ತನ್ನು ಹೈಕಮಾಂಡ್ ವಿಧಿಸಿತ್ತು. ಆದರೆ ಆರಂಭದಲ್ಲಿ ಈ ವಿಷಯದಲ್ಲಿ ‘ಮೌನ’ವಾಗಿದ್ದ ಬಹುಪಾಲು ಸಚಿವರು ಇದೀಗ ತಮ್ಮ ವರಸೆ ಬದಲಿಸಿ ‘ಟಿಕೆಟ್ ಬೇಡ’ ಎನ್ನುತ್ತಿದ್ದಾರೆ. ಹೀಗೆ ಬೇಡವೆನ್ನಲು ಒಬ್ಬೊಬ್ಬರು ಒಂದೊಂದು ‘ಸಮಜಾಯಿಷಿ’ ನೀಡುತ್ತಿದ್ದರೂ ಅಂತಿಮವಾಗಿ, ‘ಈಗಿರುವ ಸಚಿವ ಸ್ಥಾನವನ್ನು ಕೈಬಿಟ್ಟು ಸುಮ್ಮನೆ ರಿಸ್ಕ್ ತೆಗೆದುಕೊಳ್ಳುವುದೇಕೆ?’ ಎಂಬುದು ಎಲ್ಲರ ಲೆಕ್ಕಾಚಾರವಾಗಿದೆ.
ಸಚಿವರು ಟಿಕೆಟ್ ನಿರಾಕರಿಸುತ್ತಿರುವುದಕ್ಕೆ ಮತ್ತೊಂದು ಪ್ರಮುಖ ಕಾರಣವಿದೆ. ಅದೆಂದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಚಿವರು ಗೆದ್ದರೂ ಸೋತರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.

ಅಂದರೆ, ಒಂದೊಮ್ಮೆ ಗೆದ್ದರೆ, ಸಂಸದರಾಗಿ ಆಯ್ಕೆಯಾದ ಕಾರಣಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ; ಒಂದು ವೇಳೆ ಸೋತರೆ, ಸಚಿವರ ಲೋಕಸಭಾ ಕ್ಷೇತ್ರದಿಂದ ಜನರಿಂದಲೇ ತಿರಸ್ಕೃತಗೊಂಡವರು ಯಾವ ‘ನೈತಿಕತೆ’ಯ ಮೇಲೆ ಸಚಿವರಾಗಿ ಮುಂದುವರಿಯಬೇಕು? ಎನ್ನುವ ಪ್ರಶ್ನೆಯನ್ನು ಹೈಕಮಾಂಡ್ ಅವರ ಮುಂದಿಡಲಿದೆ. ಈ ಸಾಧ್ಯತೆಗಳು ಗೊತ್ತಿರುವುದರಿಂದಲೇ ಕಾಂಗ್ರೆಸ್‌ನ ಹಲವು ಸಚಿವರು ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ.

ಹಾಗೆ ನೋಡಿದರೆ, ಮೊದಲ ಹಂತದಲ್ಲಿ ಕಾಂಗ್ರೆಸ್ ಬಿಡುಗಡೆಗೊಳಿಸಿರುವ ೬ ಮಂದಿಯ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರದ ಡಿ.ಕೆ.ಸುರೇಶ್ ಸ್ಪರ್ಧೆ ಖಚಿತ ಎಂಬ ಮಾತು ಮೊದಲಿನಿಂದಲೂ ಕೇಳಿಬಂದಿತ್ತು. ಇನ್ನುಳಿದಂತೆ ಮಂಡ್ಯಕ್ಕೆ ಚಲುವರಾಯಸ್ವಾಮಿ, ಶಿವಮೊಗ್ಗಕ್ಕೆ ಮಧು ಬಂಗಾರಪ್ಪ, ತುಮಕೂರಿಗೆ ಡಾ.ಜಿ.ಪರಮೇಶ್ವರ್ ಹೀಗೆ ಒಂದೊಂದು ಕ್ಷೇತ್ರಕ್ಕೆ ಒಬ್ಬೊಬ್ಬ ಸಚಿವರ ಹೆಸರು ಕೇಳಿಬಂದಿತ್ತು. ಆದರೆ ಈ ಎಲ್ಲರೂ ‘ಟಿಕೆಟ್ ಸಹವಾಸ
ಬೇಡ’ ಎಂಬ ಸಂದೇಶವನ್ನು ನೇರವಾಗಿ ಅಥವಾ ಪರೋಕ್ಷ ವಾಗಿ ಹೈಕಮಾಂಡ್‌ಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಈ ಎಲ್ಲ ಕ್ಷೇತ್ರಗಳಲ್ಲಿ ಬದಲಿ ಅಭ್ಯರ್ಥಿಗಳ ಹೆಸರನ್ನು ಸಚಿವರೇ ಶಿಫಾರಸು ಮಾಡಿದ್ದರು. ಜತೆಗೆ ಆ ಅಭ್ಯರ್ಥಿಗಳು ಸ್ಪರ್ಧೆಗೆ ಉತ್ಸುಕತೆ ತೋರಿದ್ದರಿಂದ ಮೊದಲ ಹಂತದಲ್ಲಿ ಸುಲಭ ವಾಗಿ ೬ ಜನರಿಗೆ ಟಿಕೆಟ್ ಹಂಚಿಕೆಯಾಗಿದೆ.

ಇನ್ನುಳಿದ ೨೨ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯೇ ಕಾಂಗ್ರೆಸ್ ನಾಯಕರಿಗೆ ಬಹುದೊಡ್ಡ ತಲೆನೋವಾಗಿದೆ. ಬೆಂಗಳೂರು ಉತ್ತರ, ದಕ್ಷಿಣ, ಚಾಮರಾಜ ನಗರ, ಬೆಳಗಾವಿ ಸೇರಿದಂತೆ ಆರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹಾಲಿ ಸಚಿವರನ್ನು ನಿಲ್ಲಿಸಬೇಕು ಎಂಬ ಉಮೇದನ್ನು ವರಿಷ್ಠರು ಹೊಂದಿದ್ದಾರೆ. ಆದರೆ, ಬೆಂಗಳೂರು ಉತ್ತರಕ್ಕೆ ಕೇಳಿಬರುತ್ತಿರುವ ಕೃಷ್ಣ ಬೈರೇಗೌಡ ಅವರು ಈಗಾಗಲೇ ೨ ಬಾರಿ ಸೋತಿರುವುದರಿಂದ ಅವರಲ್ಲಿ ಆಸಕ್ತಿ ಉಳಿದಿಲ್ಲ. ಇನ್ನುಳಿದಂತೆ ಬೆಂಗಳೂರು ದಕ್ಷಿಣಕ್ಕೆ ಯಾರನ್ನೇ ನಿಲ್ಲಿಸಿದರೂ, ಬಿಜೆಪಿ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ ಎಂಬ ವಾತಾವರಣವಿರುವುದರಿಂದ ಕಾಂಗ್ರೆಸ್ ನಲ್ಲಿ ಈ ಕ್ಷೇತ್ರಕ್ಕೆ ಅಭ್ಯರ್ಥಿಯ ಕೊರತೆ ಕಾಡುತ್ತಿದೆ.

ಇನ್ನುಳಿದಂತೆ ಚಾಮರಾಜನಗರಕ್ಕೆ ಎಚ್.ಸಿ.ಮಹದೇವಪ್ಪ, ಬೆಳಗಾವಿಗೆ ಸತೀಶ್ ಜಾರಕಿಹೊಳಿ ಹೆಸರು ಕೇಳಿಬರುತ್ತಿದೆ. ಆದರೆ ಈ ನಾಯಕರು, ‘ನಮಗೆ ಟಿಕೆಟ್ ಬೇಡ; ಆದರೆ ನಾವು ಹೇಳಿದವರಿಗೆ ಟಿಕೆಟ್ ಕೊಡಿ, ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು’ ಎನ್ನುವ ಮನಸ್ಥಿತಿಯಲ್ಲಿರುವುದು, ಟಿಕೆಟ್ ಘೋಷಿಸಲು ಕಾಂಗ್ರೆಸ್ ವರಿಷ್ಠರಿಗೆ ಎದುರಾಗಿರುವ ಬಹುದೊಡ್ಡ ಸಮಸ್ಯೆ ಎಂದರೆ ತಪ್ಪಾಗುವುದಿಲ್ಲ. ಹಾಗೆ ನೋಡಿದರೆ, ಈ ಎಲ್ಲ ನಾಯಕರು ಲೋಕಸಭಾ ಟಿಕೆಟ್ ‘ನಮಗೆ ಬೇಡ’ ಎನ್ನುತ್ತಿದ್ದಾರೆಯೇ ಹೊರತು, ‘ನಮ್ಮವರಿಗೆ ಬೇಡ’ ಎನ್ನುತ್ತಿಲ್ಲ. ಸುಮಾರು ಏಳೆಂಟು ಸಚಿವರು ‘ನಮ್ಮ ಬದಲಿಗೆ ನಮ್ಮ ಮುಂದಿನ ಪೀಳಿಗೆಗೆ ಅವಕಾಶ ನೀಡಿ’ ಎಂದು ಆಗ್ರಹಿಸುತ್ತಿದ್ದಾರೆ. ಸಚಿವರ ಈ ಆಗ್ರಹವೇ ಸ್ಥಳೀಯ ಮಟ್ಟದಲ್ಲಿ ಕೊಂಚ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದು, ‘ಕುಟುಂಬ ರಾಜಕಾರಣದ ಬದಲು ಸಚಿವರಿಗೆ ಟಿಕೆಟ್ ನೀಡಿ, ಇಲ್ಲವೇ ಕಾರ್ಯಕರ್ತರಿಗೆ ಅವಕಾಶ ನೀಡಿ’ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಕೆಲ ಕ್ಷೇತ್ರಗಳಲ್ಲಿ ನಾಲ್ಕಕ್ಕೂ ಹೆಚ್ಚು ಆಕಾಂಕ್ಷಿಗಳ ಹೆಸರು ಕೇಳಿ ಬರುತ್ತಿರುವುದಕ್ಕೂ ಇದೇ ಕಾರಣವಾಗಿದೆ. ಈ ಬಾರಿಯ ಲೋಕಸಭಾ ಟಿಕೆಟ್‌ಗೆ ಕೆಲವಷ್ಟು ಸಚಿವರು ತಮ್ಮ ಮಕ್ಕಳನ್ನು ಮುನ್ನೆಲೆಗೆ ತರುತ್ತಿರುವುದು, ಕೆಲ ಕಾರ್ಯಕರ್ತರು ಟಿಕೆಟ್ ಬೇಕೆಂದು ಪಟ್ಟುಹಿಡಿಯುತ್ತಿರುವುದು, ರಾಜ್ಯದ ೨೮ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಪೂರಕ ವಾತಾವರಣ ವಿದೆ ಎಂಬ ಕಾರಣಕ್ಕಲ್ಲ; ಬದಲಿಗೆ, ಲೋಕಸಭಾ ಚುನಾವಣೆ ಯನ್ನು ಮುಂದಿನ ರಾಜಕೀಯದ ‘ಮೆಟ್ಟಿಲನ್ನಾಗಿ’ ಮಾಡಿ ಕೊಳ್ಳಬೇಕು ಎನ್ನುವ ಉದ್ದೇಶಕ್ಕೆ. ಈಗ ಎದುರಾಗಲಿರುವ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ‘ಸಂಸದ’ ಎಂಬ ಸ್ಥಾನಮಾನ; ಒಂದು ವೇಳೆ ಸೋತರೆ, ಮುಂದಿನ ೫ ವರ್ಷ ಗಳ ಕಾಲ ೨೦೨೪ರ ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಎಂಬ ಬ್ರ್ಯಾಂಡ್! ಈ ‘ಬ್ರ್ಯಾಂಡ್’ ಅನ್ನು ಮುಂದಿಟ್ಟುಕೊಂಡೇ ಪಕ್ಷದ ವಿವಿಧ ಸ್ಥಾನಮಾನ, ೨೦೨೮ರ ವಿಧಾನಸಭಾ ಚುನಾವಣೆ ಸೇರಿದಂತೆ ರಾಜಕೀಯದ ವಿವಿಧ ಹುದ್ದೆಗಳಿಗೆ ‘ಟವೆಲ್’ ಹಾಕಬಹುದು ಎನ್ನುವ ಲೆಕ್ಕಾಚಾರ ದಲ್ಲಿ ಹಲವರಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಲು ಸಚಿವರ ಹಿಂದೇಟಿಗೆ ಮತ್ತು ಸೋತರೂ ಪರವಾಗಿಲ್ಲ ಈ ಚುನಾವಣೆಯನ್ನು ಭವಿಷ್ಯದ ರಾಜಕೀಯಕ್ಕೆ ಏಣಿಯಾಗಿ ಮಾಡಿಕೊಳ್ಳೋಣ ಎನ್ನುವ ಲೆಕ್ಕಾಚಾರ ಶುರುವಾಗುವುದಕ್ಕೆ ಪ್ರಮುಖ ಕಾರಣ, ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ರಾಜ್ಯದಲ್ಲಿ ಹೊಮ್ಮಿರುವ ಹಲವು ಸಮೀಕ್ಷಾ ವರದಿಗಳು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ‘ಮೋದಿ ಹವಾ’ ಬಲದೊಂದಿಗೆ ೨೫ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ, ಈ ಬಾರಿ ಆ ಪ್ರಮಾಣದಲ್ಲಿ ಗೆಲುವು ಸಾಧಿಸುವುದು ಕಷ್ಟ ವಿದೆ. ಹಾಗೆಂದು, ಕಾಂಗ್ರೆಸ್ ಎರಡಂಕಿ ದಾಟುವುದಕ್ಕೂ ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಚಿತ್ರಣ ಬಹುತೇಕ ವರದಿಗಳಲ್ಲಿದೆ.

ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಪ್ರಭಾವ, ಹಿಂದಿನ ಬಿಜೆಪಿ ಸರಕಾರದ ವಿರುದ್ಧವಿದ್ದ ಅಲೆ ಸೇರಿದಂತೆ ವಿವಿಧ ಕಾರಣಗಳಿಗೆ ಕಾಂಗ್ರೆಸ್‌ಗೆ ಭರ್ಜರಿ ಬಹುಮತ ಬಂದಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಈ ಎಲ್ಲ ವಿಷಯಗಳು ವಕಟ್ ಆಗುವುದಿಲ್ಲ ಎಂಬುದು ಕಾಂಗ್ರೆಸ್ ನಾಯಕರಿಗೂ ಗೊತ್ತಿದೆ. ೨೮ ಲೋಕಸಭಾ ಕ್ಷೇತ್ರಗಳಲ್ಲಿ ಅಡಕ ವಾಗಿರುವ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಗೆದ್ದು ಬಂದಿದ್ದರೂ, ಲೋಕಸಭೆ
ಚುನಾವu ಯಲ್ಲೂ ಪಕ್ಷಕ್ಕೆ ಈ ಗೆಲುವು ಪುನರಾವರ್ತನೆ ಯಾಗುತ್ತದೆ ಎಂಬ ವಿಶ್ವಾಸವಿಲ್ಲ.

ಹಾಗೆಂದ ಮಾತ್ರಕ್ಕೆ, ಬಿಜೆಪಿಯ ಹಲವು ಹಾಲಿ ಸಂಸದರ ವಿಷಯದಲ್ಲಿ ಕ್ಷೇತ್ರದ ಮತದಾರರಿಗೆ ಭಾರಿ ‘ನಂಬಿಕೆ- ವಿಶ್ವಾಸ’ ಉಳಿದಿಲ್ಲ. ಬಿಜೆಪಿಯ ರಾಜ್ಯ ನಾಯಕತ್ವದ ವಿಷಯದಲ್ಲೂ ಮತದಾರರಿಗೆ ಹೇಳಿಕೊಳ್ಳುವಂಥ ಒಲವಿಲ್ಲ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ‘ಮೋದಿ’ ನಾಮಬಲ ದೊಂದಿಗೆ ಮತವನ್ನು ಗಿಟ್ಟಿಸಿ ಕೊಂಡಂತೆಯೇ, ಈ ಬಾರಿಯೂ ಬಿಜೆಪಿಯ ಹಲವು ಸಂಸದರು ‘ಮೋದಿ’ ಹೆಸರಲ್ಲಿ ಮತ್ತು ‘ಅದೃಷ್ಟ’ದ ಬಲದೊಂದಿಗೆ ಸಂಸತ್ ಭವನವನ್ನು ಪ್ರವೇಶಿಸುವುದು ನಿಶ್ಚಿತ; ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಇನ್ನೊಂದು ಅವಧಿಗೆ ಅವಕಾಶ ನೀಡ ಬೇಕು ಎನ್ನುವ ಮನಸ್ಥಿತಿ ಹಲವು ಕ್ಷೇತ್ರಗಳ ಮತದಾರರಲ್ಲಿ ಇರುವುದು ಈ ಗ್ರಹಿಕೆಗೆ ಪೂರಕ ವಾಗಬಲ್ಲದು.

ವಾಸ್ತವವಾಗಿ, ರಾಜ್ಯದಲ್ಲಿ ಶಾಸಕರು, ನಿಗಮ-ಮಂಡಳಿ ಅಧ್ಯಕ್ಷರಾಗಿದ್ದವರಿಗೆ ಸಿಗಬಹುದಾದ ಸ್ಥಳೀಯ ಮಟ್ಟದ ಅಧಿಕಾರವು, ಕೇಂದ್ರದ ಹಲವು ಖಾತೆಯ ಸಚಿವರಾಗಿದ್ದರೂ ಇರುವುದಿಲ್ಲ. ಈಗಿರುವ ಪರಿಸ್ಥಿತಿಯಲ್ಲಿ ಅಧಿಕೃತ ಪ್ರತಿಪಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹೋರಾಡಬೇಕಾಗಿದೆ. ಒಂದು ವೇಳೆ
ರಾಜ್ಯದಲ್ಲಿ ಸಚಿವರಾಗಿರುವವರು ಗೆಲುವು ಸಾಧಿಸಿದರೂ, ಗದ್ದುಗೆ ಬಲವಿರುವ ಸ್ಥಾನದಿಂದ ಅನಿವಾರ್ಯವಾಗಿ ಪಲ್ಲಟಗೊಂಡು ದೆಹಲಿಯಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕು.

ಇನ್ನೂ ೪ ವರ್ಷ ಸಚಿವರಾಗಿರುವ ಅವಕಾಶವನ್ನು ಕೈಬಿಟ್ಟು ದೆಹಲಿಯಲ್ಲಿ ಹೀಗೆ ‘ವಿಪಕ್ಷ ಸಂಸದರ ಪೈಕಿ ಒಬ್ಬ’ ಎನಿಸಿ ಕೊಳ್ಳಲು ಹಲವರಿಗೆ ಸುತರಾಂ ಇಷ್ಟವಿಲ್ಲ. ಈ ಎಲ್ಲವನ್ನೂ ಮೀರಿ, ರಾಹುಲ್ ಗಾಂಧಿ ಅವರನ್ನು ದೇಶದ ಜನರು ಒಪ್ಪಿ, ‘ಇಂಡಿಯ’ ಮೈತ್ರಿಕೂಟಕ್ಕೆ ಅಧಿಕಾರವನ್ನು ನೀಡಿದರೂ, ಆಯ್ಕೆಯಾಗುವ ಇವರು ಮಾಡುವುದಾದರೂ ಏನು? ಸ್ಥಳೀಯ ನೆಲೆಯಲ್ಲಿರುವ ಅಧಿಕಾರ/ಹಿಡಿತವನ್ನು ಬಿಟ್ಟು, ದೆಹಲಿಯಂಥ ‘ಅಪರಿಚಿತ’ ಆಸ್ಥಾನ ದಲ್ಲಿ ಸಂಸದ ರಾಗಿದ್ದು ಕೊಂಡು, ನಾಯಕರು ಹೇಳುವ ಮಾತಿಗೆ ‘ಜೈ’ ಎನ್ನಬೇಕಷ್ಟೇ. ಇದು ಹಲವರಿಗೆ ಬೇಕಾಗಿಲ್ಲ. ಈ ಎಲ್ಲ ಕಾರಣಗಳಿಂದಾಗಿ, ನರೇಂದ್ರ ಮೋದಿ ಎಂಬ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಲು ಸಜ್ಜಾಗಿರುವ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಎಂಬ ಸೈನ್ಯದಲ್ಲಿ ಕರ್ನಾ ಟಕದ ‘ಸೇನಾಧಿಪತಿ’ಗಳೇ ಹಿಂದೇಟು ಹಾಕುತ್ತಿರುವುದು ಸ್ಪಷ್ಟ.