Sunday, 15th December 2024

ಭಾರತದ ಪ್ರೇರಣಾಶಕ್ತಿ ಅಟಲ್‌ ಜೀ

ತನ್ನಿಮಿತ್ತ

ನರೆಂದ್ರ ಎಸ್‌.ಗಂಗೊಳ್ಳಿ

ಭಾ ರತ! ಇದು ವಂದನೆಯ ಭೂಮಿ. ಅಭಿನಂದನೆಯ ಭೂಮಿ. ಅರ್ಪಣೆಯ ಭೂಮಿ ತರ್ಪಣೆಯ ಭೂಮಿ. ಇದರ ಕಲ್ಲು ಕಲ್ಲಿನಲೂ ಶಂಕರನಿದ್ದಾನೆ. ಹನಿಹನಿಯಲ್ಲೂ ಗಂಗೆ. ನಾವು ಬದುಕುವುದು ಇದಕ್ಕಾಗಿ. ಸಾಯುವುದೂ ಇದಕ್ಕಾಗಿಯೇ!

ಸತ್ತ ನಂತರವೂ ಗಂಗಾನದಿಯಲ್ಲಿ ಹರಿಯುವ ನಮ್ಮ ಅಸ್ಥಿಯ ಬಳಿ ಕಿವಿಗೊಟ್ಟು ಕೇಳಿದರೆ ಅಲ್ಲಿಂದ ಬರುವ ಧ್ವನಿ ಒಂದೇ…
ಅದು… ಭಾರತ್ ಮಾತಾ ಕೀ ಜೈ.

ಇದು ಅಟಲ್ ಜೀ ಬರೆದ ಕತೆ. ನಿಜ. ಅಟಲ್ ಬಿಹಾರಿ ವಾಜಪೇಯಿಯವರಂಥ ಅದ್ಭುತ ಚೇತನ ನಮ್ಮ ನಡುವೆ ಇದ್ದಿದ್ದರೆನ್ನು ವುದೇ ಯಾವತ್ತಿಗೂ ನಮಗೆ ಅದ್ಭುತ ಮತ್ತು ಹೆಮ್ಮೆಯ ಸಂಗತಿ. ಅಟಲ್‌ಜೀಯ ಒಳಗೆ ಒಬ್ಬ ನಿಜವಾದ ದೇಶಭಕ್ತನಿದ್ದ. ಅಂತಹ ದೇಶಭಕ್ತಿ ಇದ್ದಾಗ ಮಾತ್ರ ಇಂತಾದ್ದೊMದು ಕತೆ ಸ್ಫುರಿಸಲು ಸಾಧ್ಯ.

ಮುತ್ಸದ್ಧಿತನ, ಸರಳತೆ, ಸ್ನೇಹ ಪರತೆ, ಸೌಹಾರ್ದತೆ, ಚತುರತೆ, ವಾಕ್ಪಟುತ್ವ, ಸೃಜನಶೀಲ ರಾಜಕರಣ, ಆಡಳಿತ ಪ್ರಖರತೆ, ನಾಯಕತ್ವ, ನೇರ ನಡೆ ನುಡಿ, ಪ್ರಮಾಣಿಕತೆ ಹೀಗೆ ಎಲ್ಲದಕ್ಕೂ ಒಂದು ಅದ್ಭುತ ಪ್ರತೀಕದಂತಿದ್ದವರು ವಾಜಪೇಯಿ. ಈ ವಿಚಾರ
ದಲ್ಲಿ ಅವರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಮತ್ತೊಬ್ಬ ರಾಜಕಾರಣಿಯನ್ನು ಕಾಣುವುದು ಬಹಳ ಕಷ್ಟ. ಅಂತಹ ವಾಜಪೇಯಿ ಇವತ್ತು ನಮ್ಮೊಂದಿಗಿಲ್ಲ ಎನ್ನುವುದು ಅತ್ಯಂತ ಬೇಸರದ ಸಂಗತಿ.

ವಾಜಪೇಯಿಯವರು ಭೌತಿಕವಾಗಿ ನಮ್ಮನ್ನಗಲಿದಾಗ ನಿಜವಾದ ಅರ್ಥದಲ್ಲಿ ಭಾರತ ಒಬ್ಬ ಅಪ್ರತಿಮ ವ್ಯಕ್ತಿಯನ್ನು ಕಳೆದು ಕೊಂಡು ಕಣ್ಣೀರಿಟ್ಟಿತು. ದೇಶಾದ್ಯಂತ ಹಳ್ಳಿಹಳ್ಳಿಗಳಲ್ಲಿನ ಸಮಾನ್ಯ ಜನರೂ ಕೂಡ ಅಗಲಿದ ಧೀಮಂತ ನಾಯಕನಿಗೆ ಕಂಬನಿ ಮಿಡಿದದ್ದು, ಹೃದಯಪೂರ್ವಕವಾಗಿ ಅವರೊಬ್ಬರಿರಬೇಕಿತ್ತು ಎಂದು ಬಯಸುತ್ತಾ ಇನ್ನೂ ಕೂಡ ಅವರನ್ನು ಸ್ಮರಿಸಿಕೊಳ್ಳು ತ್ತಿರುವುದು ಒಂದು ಅರ್ಥಪೂರ್ಣ ಬದುಕಿನ ಸಾರ್ಥಕತೆಯನ್ನು ಸೂಚಿಸುವಂತಾದ್ದು.

ಇಂದು ದೇಶಾದ್ಯಂತ ಬಿಜೆಪಿಯ ಅಲೆ ಪಸರಿಸುವಲ್ಲಿ ಅದನ್ನು ಕಟ್ಟಿ ಬೆಳೆಸಿದ ಅಟಲ್‌ಜೀ ಮತ್ತವರ ಬಳಗದ ಪರಿಶ್ರಮವನ್ನು ಯಾವತ್ತಿಗೂ ಮರೆಯುವಂತಿಲ್ಲ. ಸೋಲಿಗೆ ಕುಗ್ಗದೆ ಜಯದತ್ತ ಆತ್ಮವಿಶ್ವಾಸದಿಂದ ಮುನ್ನಡೆಯುವುದು ಹೇಗೆಂದು ತೋರಿಸಿ ಕೊಟ್ಟವರು ವಾಜಪೇಯಿ. ಮೊದಲು 13 ದಿನ, ಬಳಿಕ 13 ತಿಂಗಳು ಪ್ರಧಾನಿಯಾಗಿ ಮತ್ತೆ ಮತ್ತೆ ವಿಶ್ವಾಸ ಮತ ಸೋತರೂ ನಂತರ ದಲ್ಲಿ ಮಿತ್ರ ಪಕ್ಷಗಳನ್ನೊಳಗೂಡಿ ಮೊತ್ತ ಮೊದಲ ಬಾರಿಗೆ ಸಮರ್ಥವಾಗಿ ಐದು ವರುಷಗಳ ಕಾಲ ಭಾರತಕ್ಕೊಂದು ಕಾಂಗ್ರೆಸೇ ತರ ಹೆಮ್ಮೆಯ ಸ್ಥಿರ ಸರಕಾರವನ್ನು ನೀಡಿ ಭಾರತದ ಅಭಿವೃದ್ಧಿಗೆ ಕಾರಣವಾದ ವಾಜಪೇಯಿ ತಮ್ಮ ಸುತ್ತಲಿನ ಇತಿಮಿತಿಗಳ
ನಡುವೆಯೂ ಅತ್ಯಂತ ಸಮರ್ಥವಾದ ಆಡಳಿತ ನೀಡಿದ್ದು ಅವರ ಆಡಳಿತ ನಿರ್ವಹಣಾ ಸಾಮರ್ಥ್ಯಕ್ಕೆ ಸಾಕ್ಷಿ.

ಉಗ್ರರನ್ನು ದಮನಿಸಲಿಕ್ಕಾಗಿ ಫೋಟಾ ಕಾಯಿದೆಯನ್ನು ಜಾರಿಗೆ ತಂದಿದ್ದು ಬರೋಬ್ಬರಿ 5846 ಕಿ.ಮೀ ನಷ್ಟು ಉದ್ದದ ರಾಷ್ಟ್ರೀಯ ದ್ವಿಪಥ ಹೆದ್ದಾರಿಗಳನ್ನು ಐದು ವರುಷಗಳಲ್ಲಿ ಚತುಷ್ಪಥಗೊಳಿಸಿ ಭಾರತದ ಆಂತರಿಕ ವ್ಯಾಪಾರ ವಹಿವಾಟು, ಸರಕು ಸಾಗಣೆ, ಸಾರಿಗೆ ಸಂಚಾರಗಳನ್ನು ಸುಗಮಗೊಳಿಸಿದ್ದು, ಭಾರತ್ ಸಂಚಾರ್ ನಿಗಮ್ ಸ್ಥಾಪನೆಯ ಮೂಲಕ ದೂರವಾಣಿ ಸಂಪರ್ಕ ಕ್ಷೇತ್ರದಲ್ಲಿ ಮೂರು ಕೋಟಿಗೂ ಅಧಿಕ ಸಂಪರ್ಕವನ್ನು ಸೃಷ್ಟಿಸಿ ಕ್ರಾಂತಿಯನ್ನು ಉಂಟು ಮಾಡಿದ್ದು, ನಾಲ್ಕು ಕೋಟಿಗೂ ಅಧಿಕ
ಅಡುಗೆ ಅನಿಲ ಸಂಪರ್ಕವನ್ನು ತರಿಸಿದ್ದು (ನಿಮಗೆ ಗೊತ್ತಿರಲಿ ಅದಕ್ಕೂ ಮೊದಲಿನ 50 ವರುಷಗಳಲ್ಲಿ ಕೇವಲ 1.86 ಲಕ್ಷ
ದೂರವಾಣಿ ಸಂಪರ್ಕಗಳನ್ನು ಮತ್ತು ಮೊದಲಿನ 40 ವರುಷಗಳಲ್ಲಿ 1.37 ಕೋಟಿ ಅಡುಗೆ ಅನಿಲ ಸಂಪರ್ಕವನ್ನು ನೀಡಲಾ ಗಿತ್ತು) ಡಿಟಿಎಚ್ ಸೇವೆಯನ್ನು ಆರಂಭಿಸಿದ್ದು ಎಲ್ಲವೂ ಸಾಧನೆಯ ಮೈಲುಗಲ್ಲುಗಳು.

ಎರಡು ರುಪಾಯಿಗೆ ಕೆ.ಜಿ ಗೋಧಿ ಮತ್ತು ಮೂರು ರುಪಾಯಿಗೆ ಕೆ.ಜಿ ಅಕ್ಕಿ ನೀಡುವ ಅಂತ್ಯೋದಯ ಅನ್ನ ಯೋಜನೆ, 6 ರಿಂದ 14 ವರುಷ ವಯಸ್ಸಿನ ಮಕ್ಕಳಿಗೆ ಉಚಿತ ಶಿಕ್ಷಣವು ಕಡ್ಡಾಾಯವಾಗಿ ಲಭಿಸಬೇಕು ಎನ್ನುವ ಉದ್ದೇಶದಿಂದ ಸರ್ವಶಿಕ್ಷಾ ಅಭಿಯಾನ ವನ್ನು ಜಾರಿಗೆ ತಂದಿದ್ದು, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ರಸ್ತೆಗಳೆ ಇಲ್ಲದಿದ್ದ ನೂರಾರು ಹಳ್ಳಿಗಳಲ್ಲಿ ರಸ್ತೆ ನಿರ್ಮಿಸಿ ಬಸ್ಸುಗಳು ಓಡಾಡುವಂತಾಗಿದ್ದು, ಛತ್ತೀಸ್‌ಗಡ್, ಜಾರ್ಖಂಡ್ ಮತ್ತು ಉತ್ತರಾಂಚಲ್ ರಾಜ್ಯವನ್ನು ಹೊಸದಾಗಿ ರಚಿಸಿದ್ದು ಇವೆಲ್ಲವೂ ವಾಜಪೇಯಿ ಅವರ ಅದ್ಭುತ ಸಾಧನೆಗಳಾಗಿ ದಾಖಲಾಗಿವೆ.

ಅವರ ವಿದೇಶಾಂಗ ನೀತಿ, ಖಾಸಗೀಕರಣಕ್ಕೆ ಪ್ರೋತ್ಸಾಹ. ಕೈಗಾರಿಕೆಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ, ಬಂಡವಳ ಹಿಂತೆಗೆತಕ್ಕಾಗಿ ಪ್ರತ್ಯೇಕ ಸಚಿವಾಲಯದ ಸ್ಥಾಪನೆ ಮತ್ತು ಜಾರಿಗೆ ತಂದ ವಿತ್ತೀಯ ಹೊಣೆಗಾರಿಕೆ ಕಾಯಿದೆ ಇತ್ಯಾದಿ ದೇಶದ ಅರ್ಥ
ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿದ್ದವು. ಸಹನಾ ಮೂರ್ತಿಯಂತಿದ್ದ ಅಟಲ್‌ರೊಳಗಿದ್ದ ಅಪ್ರತಿಮ ನಾಯಕತ್ವದ ಧೈರ್ಯ ವನ್ನು ತೋರಿಸಿದ್ದು 1998ರ ಮೇನಲ್ಲಿ ಪೋಖ್ರಾನ್‌ನಲ್ಲಿ ನಡೆದ ಅಣ್ವಸ್ತ್ರ ಪರೀಕ್ಷೆ ಮತ್ತು ಆ ಬಳಕಿದ ಕಾರ್ಗಿಲ್ ಯುದ್ಧ.

ಅಣ್ವಸ್ತ್ರ ಪರೀಕ್ಷೆಯ ಮೂಲಕ ಇಡೀ ವಿಶ್ವಕ್ಕೆ ಭಾರತದ ತಾಕತ್ತು ತೋರಿದ ವಾಜಪೇಯಿ ಆ ಬಳಿಕ ಅಮೆರಿಕ ಕೆನಡಾ ಸೇರಿದಂತೆ ವಿಶ್ವದ ಕೆಲವು ದೈತ್ಯ ರಾಷ್ಟ್ರಗಳು ಆರ್ಥಿಕ ದಿಗ್ಭಂಧನದ ಆಲೋಚನೆಗಳನ್ನು ಮಾಡಿದಾಗ ಅದನ್ನು ತಮ್ಮ ಚಾಣಾಕ್ಷ ನಡೆಗಳ ಮೂಲಕ ನಿಭಾಯಿಸಿದ ರೀತಿಯೂ ಗಮನಾರ್ಹ. ಆ ಬಳಿಕ ವಿಶ್ವವೇ ಅಚ್ಚರಿ ಪಡುವಂತೆ ಲಾಹೋರ್‌ಗೆ ಬಸ್ ಯಾನ ಆರಂಭಿಸಿ ಎರಡು ದೇಶಗಳ ನಡುವಿನ ಸಂಬಂಧ ಸುಧಾರಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದರು ಅಟಲ್. ಅದರೆ ಪಾಪಿ ಪಾಕಿಸ್ತಾನದ ಮುಶ್ರಫ್ ಅದೆಲ್ಲವನ್ನೂ ಮೀರಿ ತಿಂಗಳುಗಳು ಕಳೆಯುವಷ್ಟರಲ್ಲೇ ಭಾರತದೆಡೆಗೆ ತಮ್ಮ ಸೈನ್ಯ ನುಗ್ಗಿಸಿದ್ದರು.

ಎದೆಗುಂದದ ವಾಜಪೇಯಿ ಸೈನಿಕರಲ್ಲಿ ಹುರುಪನ್ನು ತುಂಬಿದ್ದರು. ಅಪರೇಷನ್ ಜಯ್ ಕಾರ್ಯಾಾಚರಣೆಯ ಮೂಲಕ ಕಾರ್ಗಿಲ್ ಯುದ್ಧವನ್ನು ಭಾರತ ಗೆದ್ದಿತ್ತು. ಇಡೀ ದೇಶದ ಜನರಲ್ಲಿ ರಾಷ್ಟ್ರ ಪ್ರೇಮವನ್ನು ಉಕ್ಕೇರಿಸುವಲ್ಲಿ ಈ ಕದನ ಯಶಸ್ವಿ ಯಾಯಿತು. ಒಟ್ಟಿನಲ್ಲಿ ವಾಜಪೇಯಿ ಎಂದರೆ ಸಮಸ್ತ ಭಾರತೀಯರ, ಅಷ್ಟೇ ಏಕೆ ಇಡೀ ಜಗತ್ತಿನ ಜನರ ಮನದಂಗಳದಲ್ಲಿ
ಯಾವತ್ತಿಗೂ ಅಳಿಸಲಾಗದ ಬಹಳ ಸುಂದರ ಅಪರೂಪದ ವ್ಯಕ್ತಿತ್ವ.

‘ಹೇ ಪ್ರಭು ಇತರರನ್ನು ಆಲಂಗಿಸಲಾಗದಷ್ಟೆತ್ತರಕ್ಕೆ ನನ್ನನ್ನು ಬೆಳೆಸಬೇಡ’ ಎನ್ನುವ ಅವರ ಕವಿ ಮನಸ್ಸಿನ ಸಾಲುಗಳು ವಾಜಪೇಯಿ ಅವರ ಅನುಕರಣೀಯ ಧೀಮಂತ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ. ಭಾರತ ಪ್ರಕಾಶಿಸುತ್ತಿರಬೇಕೆನ್ನುವುದು ಅವರ ಅನುಗಾಲದ ಕನಸು. ಅದನ್ನು ನನಸಾಗಿಸುವುದೇ ನಾವು ಅವರಿಗೆ ನೀಡಬಲ್ಲ ಶ್ರೇಷ್ಠ ಗೌರವ.

ಆವತ್ತು ದೇಶದ ಅಪ್ರತಿಮ ನಾಯಕನನ್ನು ವಿಶ್ವಾಸ ಮತದ ಹೆಸರಿನಲ್ಲಿ ಅಧಿಕಾರದಿಂದ ಕೆಳಗಿಳಿಸುವಾಗ ಮುಸಿಮುಸಿ ನಕ್ಕವರು, 2004ರ ಚುನಾವಣೆಯಲ್ಲಿ ವಾಜಪೇಯಿ ಅವರ ನೇತೃತ್ವದ ಬಿಜೆಪಿ ಸೋತಾಗ ಅದನ್ನೇ ಜಯಕ್ಕಿಂತ ಹೆಚ್ಚಾಗಿ ಸಂಭ್ರಮಿಸಿದ ವರೆಲ್ಲಾ ಅಟಲ್ ತೀರಿಕೊಂಡಾಗ ಮೊಸಳೆ ಕಣ್ಣೀರು ಸುರಿಸಿಕೊಂಡು ಹೇಳಿಕೆ ನೀಡಿ ತಮ್ಮ ಬೂಟಾಟಿಕೆಯನ್ನು ಪ್ರದರ್ಶಿಸಿದ್ದರು.

ಕನಿಷ್ಠ ನಮ್ಮ ಮಹಾನ್ ಜನತೆ ಆ ಹೊತ್ತು ಪಕ್ಷ ಭೇದವಿಲ್ಲದೆ ವಾಜಪೇಯಿಯವರನ್ನು ಪ್ರೋತ್ಸಾಹಿಸಿದ್ದರೆ ಈ ಹೊತ್ತು ಭಾರತ ವಿಶ್ವ ಭೂಪಟದಲ್ಲಿ ಬೇರೆಯದೇ ಆದ ಬಹಳ ದೊಡ್ಡ ಮಜಲನ್ನು ಮುಟ್ಟುತ್ತಿದ್ದುದರಲ್ಲಿ ಸಂಶಯವಿಲ್ಲ. ವಾಜಪೇಯಿ ಯವರ ಕನಸುಗಳನ್ನು ನನಸು ಮಾಡುವಲ್ಲಿ ಇಂದು ನರೇಂದ್ರ ಮೋದಿಯವರ ಸಮರ್ಥ ಆಡಳಿತದಲ್ಲಿ ದೇಶ ಮುನ್ನುಗ್ಗುತ್ತಾ ಯಶಸ್ಸಿ ನತ್ತ ಸಾಗುತ್ತಿರುವುದು ಮತ್ತು ಕರೋನಾ ತಂದಿಟ್ಟಿರುವ ಹತಾಶೆಯ ಅಲೆಗಳ ನಡುವೆಯು ಭಾರತ ವಿಶ್ವದ ಶಕ್ತಿ ಕೇಂದ್ರಗಳ ಲ್ಲೊಂದಾಗಿ ಗುರುತಿಸಿಕೊಳ್ಳುತ್ತಿರುವುದು ನಿಜಕ್ಕೂ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಾದ ವಿಚಾರ.

ಈ ಹೊತ್ತು ವಾಜಪೇಯಿಯವರ ಆತ್ಮ ಸಂತೋಷಿಸುತ್ತಿರುವುದು ಸತ್ಯ. ಈ ಸಂತೋಷ ನಮ್ಮೆಲ್ಲರದ್ದೂ ಆಗಿರಲಿ.