Wednesday, 19th June 2024

ನೇಪಥ್ಯಕ್ಕೆ ಸರಿಯುತ್ತಿರುವ ನಾಯಕನ ನೆನಪು ಕಟ್ಟಿಕೊಡುವ ಕೃತಿ

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಆ ಸಲ ಅಟಲ್ ಬಿಹಾರಿ ವಾಜಪೇಯಿ ಅವರು ಮಧ್ಯಪ್ರದೇಶದ ವಿದಿಶಾ ಮತ್ತು ಉತ್ತರ ಪ್ರದೇಶದ ಲಖನೌದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸಿ
ದ್ದರು. ಲಖನೌದಲ್ಲಿ ನಾಮಪತ್ರ ಸಲ್ಲಿಸಿ, ಅದೇ ದಿನ ಅವರು ವಿದಿಶಾಕ್ಕೆ ಹೊರಡುವವರಿದ್ದರು. ಲಖನೌ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದಾಗ, ವಿಮಾನ ನಿಲ್ದಾಣದ ಅಧಿಕಾರಿಗಳು, ’ಅಟಲಜೀ, ನಿಮ್ಮ ವಿರುದ್ಧ ಅಮಿತಾಬ್ ಬಚ್ಚನ್ ಲಖನೌದಿಂದ ಸ್ಪರ್ಧಿಸಬಹುದು’ ಎಂಬ ಮಾಹಿತಿಯನ್ನು ನೀಡಿದರು.

ಭೋಪಾಲ್ ದಲ್ಲಿ ವಾಜಪೇಯಿ ವಿಮಾನ ಇಳಿಯುತ್ತಲೇ, ಪತ್ರಕರ್ತರು ಅವರನ್ನು ಸುತ್ತುವರಿದು, ‘ಅಟಲಜೀ, ನಿಮ್ಮ ವಿರುದ್ಧ ಅಮಿತಾಬ್ ಬಚ್ಚನ್ ಸ್ಪರ್ಧಿಸುತ್ತಾ ರಂತಲ್ಲ?’ ಎಂದು ಕೇಳಿದರು. ಅದಕ್ಕೆ ವಾಜಪೇಯಿ, ಅಮಿತಾಬ್ ಬಚ್ಚನ್ ನಟಿಸಿದ ‘ಲಾವರಿಸ್’ ಸಿನಿಮಾದ ಹಾಡಿನ ಒಂದು ಸಾಲು – ‘ಮೇರೇ ಅಂಗನೆ ಮೇ ತುಮ್ಹಾರಾ ಕ್ಯಾ ಕಾಮ್ ಹೈ? (ನನ್ನ ಅಂಗಳದಲ್ಲಿ ನಿನಗೇನು ಕೆಲಸ?)’ ಹೇಳಿದರು. ನಂತರ ವಾಜಪೇಯಿ ವಿರುದ್ಧ ಬಚ್ಚನ್ ಸ್ಪರ್ಧಿಸಲಿಲ್ಲ. 1988 ರಲ್ಲಿ ಪ್ರಧಾನಿ ರಾಜೀವ ಗಾಂಧಿಯವರು ಅಮೆರಿಕದ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವುದಕ್ಕಾಗಿ ಅಲ್ಲಿಗೆ ಹೊರಟಾಗ, ವಾಜಪೇಯಿ ಅವರನ್ನೂ ನಿಯೋಗದಲ್ಲಿ ಸೇರಿಸಿದರು. ಆ ಸಂದರ್ಭದಲ್ಲಿ ವಾಜಪೇಯಿ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದರು.

ಪ್ರಧಾನಿಯವರ ಅಧಿಕೃತ ಪ್ರವಾಸದ ಸಂದರ್ಭದಲ್ಲಿ ತಮ್ಮನ್ನು ನಿಯೋಗದಲ್ಲಿ ಸೇರಿಸಿದ್ದು ವಾಜಪೇಯಿಯ ವರಿಗೆ ಆಶ್ಚರ್ಯವನ್ನುಂಟು ಮಾಡಿತು. ಆಗ ರಾಜೀವ್ ಗಾಂಧಿಯವರು, ‘ಈ ಪ್ರವಾಸದ ಸಂದರ್ಭದಲ್ಲಿ, ನಿಮ್ಮ ಕಿಡ್ನಿ ಸಮಸ್ಯೆಗೆ ಅಮೆರಿಕದ ನುರಿತ ವೈದ್ಯರಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳಲು ಅನುವಾಗಲಿ ಎಂದು ನಿಮ್ಮನ್ನು ನಿಯೋಗದಲ್ಲಿ ಸೇರಿಸಿದ್ದೇನೆ’ ಎಂದು ಹೇಳಿದರು. ಅದಾದ ಕೆಲವು ವರ್ಷಗಳ ನಂತರ, ಒಂದು ಸಂದರ್ಶನದಲ್ಲಿ ವಾಜಪೇಯಿ ಹೇಳಿದ್ದರು – ‘ನಾನು ಇಂದು ಜೀವಂತ ಬದುಕುಳಿದಿದ್ದಾರೆ ಅದಕ್ಕೆ ರಾಜೀವ ಗಾಂಧಿ ಕಾರಣ… ಇಂದು ನಾನು ಪ್ರತಿಪಕ್ಷದಲ್ಲಿದ್ದೇನೆ.

ನಾನು ಪ್ರತಿಪಕ್ಷದವನಾಗಿ ಕಾಂಗ್ರೆಸ್ಸನ್ನು ಟೀಕಿಸಬೇಕು ಎಂದು ಜನ ಬಯಸುತ್ತಾರೆ. ಆದರೆ ನನಗೆ ಅದು ಸಾಧ್ಯವಾಗುವುದಿಲ್ಲ. ಅವರು (ರಾಜೀವ್) ನನಗೆ ಎಂಥ
ಉಪಕಾರವನ್ನು ಮಾಡಿದ್ದಾರೆ ಎಂಬುದನ್ನೂ ಹೇಳಬೇಕಾಗುತ್ತದೆ.’ 1994 ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಜಿನೀವಾದಲ್ಲಿ ಸಭೆ ಸೇರಿತ್ತು. ಆ ಸಭೆಯಲ್ಲಿ ಕಾಶ್ಮೀರದಲ್ಲಿ ಭಾರತದಿಂದಾದ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಪಾಕಿಸ್ತಾನ ತಕರಾರು ಎತ್ತಿತ್ತು. ಈ ಸಮಾವೇಶಕ್ಕೆ ಭಾರತದ ನಿಯೋಗವನ್ನು ಕಳಿಸಬೇಕಿತ್ತು. ಪ್ರಧಾನಿ ನರಸಿಂಹರಾವ್ ಅವರು ಯಾರನ್ನು ಕಳಿಸಬೇಕು ಎಂದು ಯೋಚಿಸುತ್ತಿದ್ದರು. ಅದಕ್ಕಿಂತ ಒಂದು ವಾರ ಮೊದಲು, ಸಂಸತ್ತಿನಲ್ಲಿ ವಾಜಪೇಯಿ, ನರಸಿಂಹರಾಯರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಸದನದಲ್ಲಿ ವಾಜಪೇಯಿ ಮತ್ತು ರಾವ್ ಮಧ್ಯೆ ಬಿಸಿಬಿಸಿ ಮಾತುಗಳಾಗಿದ್ದವು. ಆದರೆ ಜಿನೀವಾ ಸಮಾವೇಶಕ್ಕೆ ಯಾರನ್ನು ಕಳಿಸಬೇಕು ಎಂಬ ಪ್ರಶ್ನೆ ಬಂದಾಗ, ಪ್ರಧಾನಿ ಮನಸ್ಸಿನಲ್ಲಿ ಬಂದಿದ್ದು ವಾಜಪೇಯಿ ಹೆಸರು. ವಾಜಪೇಯಿ ನೇತೃತ್ವದಲ್ಲಿ ಭಾರತದ ನಿಯೋಗ ಜಿನೀವಾಕ್ಕೆ ತೆರಳಿತು. ಆ ಬಗ್ಗೆ ವಾಜಪೇಯಿ ನಂತರ ಹೇಳಿದ್ದು – ‘ಅಲ್ಲಿ ನನ್ನ ನೋಡಿ ಪಾಕಿಸ್ತಾನಿ ನಿಯೋಗದ ಸದಸ್ಯರಿಗೆ ಆಶ್ಚರ್ಯವಾಯಿತು. ಈ ಮನುಷ್ಯ ಇಲ್ಲಿಗೆ ಹೇಗೆ ಬಂದ ಎಂದು ಅವರು ಅಂದುಕೊಂಡಿರ ಬೇಕು. ಭಾರತದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದವರು ಪರಸ್ಪರ ಕಚ್ಚಾಡುತ್ತಾರೆ, ಆದರೆ ಇಲ್ಲಿ ಸರಕಾರದ ಪರ ವಕಾಲತ್ತು ವಹಿಸಲು ಪ್ರತಿಪಕ್ಷದ ನಾಯಕರೇ ಬಂದಿzರೆ ಎಂದು ಪಾಕ್ ನಿಯೋಗದ ಸದಸ್ಯರು ಅಂದುಕೊಂಡಿದ್ದರಲ್ಲಿ ಆಶ್ಚರ್ಯವಿರಲಿಲ್ಲ.’

ಇದೇ ಪ್ರಸಂಗವನ್ನು ಉದ್ಧರಿಸಿ, 1996ರಲ್ಲಿ ವಾಜಪೇಯಿ ಸಂಸತ್ತಿನಲ್ಲಿ ಹೇಳಿದ್ದರು – ’ಇದು ಒಂದು ಷಡ್ಯಂತ್ರವಾಗಿದ್ದಿರಬಹುದು ಎಂದು ಪಾಕಿಸ್ತಾನಿಯರು ಅಂದು ಕೊಂಡಿದ್ದರು. ಜಿನೀವಾದಲ್ಲಿ ಭಾರತದ ವಾದ ಬಿದ್ದು ಹೋದರೆ ಅದಕ್ಕೆ ವಾಜಪೇಯಿ ಮತ್ತು ಅವರ ಪಕ್ಷ ಕಾರಣ ಎಂದು ಗೂಬೆ ಕೂರಿಸಬಹುದೆಂಬ ಕಾರಣಕ್ಕೆ ಪ್ರಧಾನಿ ರಾವ್, ವಾಜಪೇಯಿಯವರ ನೇತೃತ್ವದಲ್ಲಿ ಭಾರತದ ನಿಯೋಗ ಕಳಿಸಿದ್ದಾರೆ ಎಂದು ಪಾಕಿಸ್ತಾನಿಯರು ಅಂದುಕೊಂಡರು. ಆದರೆ ಅವರಿಗೆ ಭಾರತದ ಜನತಂತ್ರದ ಅಡಿಪಾಯ ಎಷ್ಟು ಬಲಿಷ್ಠವಾಗಿದೆ ಎಂಬುದು ಗೊತ್ತಿಲ್ಲ.’ ಅಚ್ಚರಿ ಎಂಬಂತೆ, ಜಿನೀವಾದಲ್ಲಿ ಭಾರತದ ನಿಲುವಿಗೆ ಜಯ ಲಭಿಸಿತು. ಪಾಕಿಸ್ತಾನ ಭಾರತದ ವಿರುದ್ಧ ಮಂಡಿಸಿದ್ದ ನಿರ್ಣಯವನ್ನು ಬಲವಂತದಿಂದ ವಾಪಸ್ ಪಡೆಯುವಂತಾಯಿತು.

ವಾಜಪೇಯಿ ಅವರನ್ನು ಕಳಿಸಿದ ಪ್ರಧಾನಿ ರಾವ್ ನಿರ್ಧಾರಕ್ಕೆ ಸರ್ವತ್ರ ಪ್ರಶಂಸೆ ವ್ಯಕ್ತವಾಯಿತು. 1994 ರ ಒಂದು ದಿನ.. ವಾಜಪೇಯಿ ಅವರ ಕವನಗಳ ಸಂಗ್ರಹ ‘ಮೇರಿ ಇಕ್ಯಾವನ್ ಕವಿತಾಯೆನ್’ ಬಿಡುಗಡೆಗೆ ಸಿದ್ಧವಾಗಿತ್ತು. ಇದರ ಬಿಡುಗಡೆಗೆ ಯಾರನ್ನು ಆಮಂತ್ರಿಸಬೇಕು ಎಂದು ವಾಜಪೇಯಿ ಯೋಚಿಸು ತ್ತಿದ್ದರು. ಆಗ ಅವರ ಮನಸ್ಸಿನಲ್ಲಿ ಮೂಡಿದ ಒಂದೇ ಹೆಸರು – ಪ್ರಧಾನಿ ನರಸಿಂಹ ರಾವ. ರಾಜಕೀಯದವರನ್ನು ಹೊರತು ಪಡಿಸಿ  ನರಸಿಂಹ ರಾವ್ ಅವರ ಬದಲು) ಬೇರೆಯವರನ್ನು ಕರೆಯಬಹುದಲ್ಲ ಎಂದು ಕೆಲವರು ಸಲಹೆಯನ್ನಿತ್ತರು.

ಆದರೆ ವಾಜಪೇಯಿ ತಮ್ಮ ನಿರ್ಧಾರ ಬದಲಿಸಲಿಲ್ಲ. ಸ್ವತಃ ವಾಜಪೇಯಿಯವರೇ ಆಮಂತ್ರಿಸಿದಾಗ, ಬರುವುದಾಗಿ ಪ್ನರಸಿಂಹ ರಾವ್ ಹೇಳಿದರು. ಈ ಕಾರ್ಯಕ್ರಮ ಹಲವಾರು ದೃಷ್ಟಿಯಿಂದ ಅಪರೂಪದ್ದಾಗಿತ್ತು. ಕಾರ್ಯಕ್ರಮದ ಮೊದಲು ಮತ್ತು ನಂತರ, ವಾಜಪೇಯಿ-ರಾವ್ ಮನಸೋ ಇಚ್ಛೆ ಹರಟೆ ಹೊಡೆದರು, ತಮಾಷೆ ಮಾಡಿಕೊಂಡರು, ಬಾಯ್ತುಂಬಾ ನಕ್ಕರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಪಕ್ಷಗಳ ನಾಯಕರೂ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅಡ್ವಾಣಿ ಏಕಾಂಗಿಯಾಗಿದ್ದರೆ, ವಾಜಪೇಯಿ ಮಾತ್ರ ಎಲ್ಲರ ಕಣ್ಮಣಿಯಾಗಿದ್ದರು. ‘ನೀವು ನರಸಿಂಹರಾಯರನ್ನು ಆಮಂತ್ರಿಸಿದ್ದೇಕೆ?’ ಎಂದು ಕೇಳಿದಾಗ, ‘ಯಾಕೆಂದರೆ ನರಸಿಂಹ ರಾವ್ ಅವರು ಒಳ್ಳೆಯ ಸಾಹಿತಿ. ಕವನ ಸಂಕಲನವನ್ನು ಸಾಹಿತಿಯಿಂದ ಬಿಡುಗಡೆ ಮಾಡಬೇಕಾದುದು ನ್ಯಾಯವಲ್ಲವೇ? ರಾಯರ ಸಾಹಿತ್ಯದ ಮುಖ ಪರಿಚಿತವಾಗಲಿ ಎಂಬುದು ನನ್ನ ಆಸೆಯಾಗಿತ್ತು’ ಎಂದು ವಾಜಪೇಯಿ ಪ್ರತಿಕ್ರಿಯಿಸಿದರು.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ಒಂದು ಭಾನುವಾರ ಸಾಯಂಕಾಲ ಪ್ರಧಾನಿ ಚಂದ್ರಶೇಖರ ಅವರು, ದಿಲ್ಲಿಯ ರೈಸಿನಾ ರಸ್ತೆಯಲ್ಲಿದ್ದ ವಾಜಪೇಯಿ ಮನೆಗೆ ಆಗಮಿಸಿದರು. ಮೂಲತಃ ಇಬ್ಬರೂ ಆಪ್ತ ಸ್ನೇಹಿತರು. ಚಂದ್ರಶೇಖರ ಅವರನ್ನು ನಗುನಗುತ್ತಲೇ ಸ್ವಾಗತಿಸಿದ ವಾಜಪೇಯಿ, ‘ಈಗ ನೀವು
ಪ್ರಧಾನಿ ಮಂತ್ರಿ ಗದ್ದುಗೆಯ ಮೇಲೆ ಕುಳಿತಿದ್ದೀರಿ ಅಂತಾಯಿತು’ ಎಂದು ಹೇಳಿದರು.

ಅದಕ್ಕೆ ಚಂದ್ರಶೇಖರ, ‘ಗುರುದೇವ್, ಇದೆಲ್ಲವೂ ನಿಮ್ಮ ಕೃಪೆ. ನಿಮ್ಮ ರಥಯಾತ್ರೆ ಮುಂದುವರಿಯದಿದ್ದರೆ ವಿ.ಪಿ.ಸಿಂಗ್ ಸರಕಾರ ಬೀಳುತ್ತಿರಲಿಲ್ಲ, ಆಗ ನಾನು ಪ್ರಧಾನಿ ಆಗುತ್ತಿರಲಿಲ್ಲ’ ಎಂದು ನಕ್ಕರು. ‘ನೀವು ಹೇಳುವುದರಲ್ಲಿ ಸ್ವಲ್ಪ ಸತ್ಯವಿದೆ. ಅದೇನೇ ಇರಲಿ, ನೀವು ಋಣ ಸಂದಾಯ ಮಾಡಲು ಬಂದಿದ್ದೀರಿ ಅಂತಾಯ್ತು’
ಎಂದು ವಾಜಪೇಯಿ ಹೇಳಿದಾಗ ಇಬ್ಬರೂ ಜೋರಾಗಿ ನಕ್ಕಿದ್ದರು. ಒಮ್ಮೆ ಲೋಕಸಭೆ ಮತ್ತು ರಾಜ್ಯವಿಧಾನ ಸಭೆಗೆ ಚುನಾವಣೆಗಳು ನಡೆದಾಗ, ವಾಜಪೇಯಿ ಅವರ ಕ್ಷೇತ್ರದ ಅಡಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರದ ಅವರ ವಿರೋಧ ಪಕ್ಷದ ಅಭ್ಯರ್ಥಿ, ‘ಮೇಲಿನ ಚುನಾವಣೆ (ಲೋಕಸಭೆ)ಗೆ ವಾಜಪೇಯಿಗೆ ಮತ ನೀಡಿ, ಕೆಳಗಿನ ಚುನಾವಣೆ (ವಿಧಾನಸಭೆ)ಗೆ ನಮಗೆ ಮತ ನೀಡಿ’ ಎಂದು ಪ್ರಚಾರ ಮಾಡುತ್ತಿದ್ದ. ಈ ವಿಷಯ ವಾಜಪೇಯಿ ಅವರ ಗಮನಕ್ಕೆ ಬಂದಿತು.

ಅದಕ್ಕೆ ವಾಜಪೇಯಿ ಹೇಳಿದ್ದು – ‘ನನಗೆ ಕುರ್ತಾ ನೀಡಿ, ಬೇರೆಯವರಿಗೆ ಧೋತಿ ನೀಡಿದರೆ, ನನ್ನ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸಿದ್ದೀರಾ?’ ಒಮ್ಮೆ ನ್ಯಾಷನಲ್ ಫ್ರಂಟ್ ನಾಯಕರಾದ ವಿ.ಪಿ.ಸಿಂಗ್, ದೇವಿಲಾಲ್, ಎನ್‌ಟಿಆರ್ ಮತ್ತು ವಾಜಪೇಯಿ ಅವರೆಲ್ಲ ಲೋಕಸಭಾ ಚುನಾವಣಾ ನಿಮಿತ್ತ ಸ್ಥಾನ ಹೊಂದಾ ಣಿಕೆ ಮಾತುಕತೆ ನಡೆಸಿ, ಹೊರ ಬಂದರು. ವಿ.ಪಿ.ಸಿಂಗ್ ಮತ್ತು ವಾಜಪೇಯಿ ಅವರನ್ನು ಪತ್ರಕರ್ತರು ಸುತ್ತುವರಿದರು. ವಾಜಪೇಯಿ ಅವರನ್ನುದ್ದೇಶಿಸಿ ಪತ್ರಕರ್ತರು, ‘ಒಂದು ವೇಳೆ ಬಿಜೆಪಿ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಿದರೆ, ನೀವು ಪ್ರಧಾನಿ ಹುದ್ದೆಯ ಆಕಾಂಕ್ಷಿಯಾ?’ ಎಂದು
ಕೇಳಿದರು.

ಆಗ ವಾಜಪೇಯಿ ಅವರು ತಕ್ಷಣ ಪ್ರತಿಕ್ರಿಯಿಸಿದರು – ‘ಈ ಮದುವೆ ದಿಬ್ಬಣದಲ್ಲಿ, ಕುದುರೆ ಮೇಲೆ ಕುಳಿತಿರುವವರು ವಿ.ಪಿ.ಸಿಂಗ್. ಮದುಮಗನೇ ಕನ್ಯೆಯನ್ನು ವರಿಸಬೇಕಲ್ಲವೇ?’ ಅಯೋಧ್ಯೆ ರಾಮ ಮಂದಿರ ಹೋರಾಟ ಉತ್ತುಂಗದಲ್ಲ್ದಿಗ, ಆಡ್ವಾಣಿ ಸಹಜವಾಗಿ ಪಕ್ಷದಲ್ಲಿ ಮಹತ್ವವನ್ನು ಪಡೆದರು. ಒಂದು ರೀತಿಯಲ್ಲಿ ವಾಜಪೇಯಿ ಪ್ರಾಮುಖ್ಯ ಕಡಿಮೆಯಾಗಿತ್ತು. ಅವರನ್ನು ಭೇಟಿ ಮಾಡಲು ಹೆಚ್ಚಾಗಿ ಯಾರೂ ಹೋಗುತ್ತಿರಲಿಲ್ಲ. ಆಪ್ತರಾದ ಕೆಲವರು ಮಾತ್ರ ಆಗಾಗ ಹೋಗು ತ್ತಿದ್ದರು.

1991ರ ಫೆಬ್ರವರಿಯ ಒಂದು ದಿನ ಜೈಪುರದಲ್ಲಿ ಪತ್ರಿಕಾಗೋಷ್ಠಿ. ಪತ್ರಕರ್ತೆಯೊಬ್ಬರು ವಾಜಪೇಯಿಗೆ ಕೇಳಿದರು – ‘ನೀವು ನಿಮ್ಮ ಪಾರ್ಟಿಯಲ್ಲಿ ಮಾರ್ಜಿನಲೈ (ಮೂಲೆಗುಂಪು) ಆಗಿದ್ದೀರಿ ಎಂದು ಅನಿಸುವುದಿಲ್ಲವೇ? Vajpayeeji, are you marginalised in your party now?’ ಅದನ್ನು ಕೇಳಿದ ವಾಜಪೇಯಿ ಶಾಂತವಾಗಿ, ಆದರೆ ಮಾರ್ಮಿಕವಾಗಿ ಹೇಳಿದರು – ‘Sometimes you need the margin if you have to make correc tions.’ ವಾಜಪೇಯಿ ಅವರ ಕುರಿತು, ಇತ್ತೀಚೆಗೆ ಪತ್ರಕರ್ತೆ ಸಾಗರಿಕ ಘೋಷ್ ಬರೆದ ೪೧೪ ಪುಟಗಳ ಜೀವನಕತೆಯಲ್ಲಿ ಇಂಥ ಅನೇಕ ಪ್ರಸಂಗ ಗಳನ್ನು ಕಟ್ಟಿಕೊಟ್ಟಿದ್ದಾರೆ.

ವಾಜಪೇಯಿ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡಲು ಸಾಕಷ್ಟು ಅಧ್ಯಯನ, ಸಂದರ್ಶನಗಳನ್ನು ಮಾಡಿರುವುದು ವೇದ್ಯವಾಗುತ್ತದೆ. ವಾಜಪೇಯಿ ಅವರಂಥ
ಮಹಾನ್ ನಾಯಕರು, ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿರುವ ಈ ದಿನಗಳಲ್ಲಿ, ಈ ಕೃತಿ ಅವರನ್ನು ನೆನಪಿಸಿಕೊಳ್ಳಲು, ಅವರ ವ್ಯಕ್ತಿತ್ವವನ್ನು ಸಮಗ್ರವಾಗಿ ಅರಿಯಲು ಒಂದು ನೆಪವಾಗಬಹುದು.

ಕಾಲ ಕೆಟ್ಟು ಹೋಯ್ತು ಎಂಬ ವ್ಯಸನ

ನಮ್ಮ ಕಾಲದಲ್ಲಿ ಹಾಗಿತ್ತು, ಹೀಗಿತ್ತು, ಈಗ ಕಾಲ ಕೆಟ್ಟು ಹೋಗಿದೆ ಎಂದು ಅಲವತ್ತುಕೊಳ್ಳುವುದು ಸಾಮಾನ್ಯ. ಎಲ್ಲಾ ಕ್ಷೇತ್ರಗಳಲ್ಲಿ, ರಂಗಗಳಲ್ಲಿ ಇಂಥವರು ಸಿಕ್ಕೇ ಸಿಗುತ್ತಾರೆ. ಐವತ ತೈದು ವರ್ಷಗಳ ಹಿಂದೆಯೇ, ಸಿದ್ಧವನಹಳ್ಳಿ ಕೃಷ್ಣ ಶರ್ಮ ಅವರು, ’ಕನ್ನಡ ಪತ್ರಿಕೆಗಳಲ್ಲಿ ಒಳ್ಳೆಯ ಕನ್ನಡ ಭಾಷೆ ಬಲ್ಲ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಪತ್ರಿಕೆಗಳಲ್ಲಿ ತಪ್ಪುಗಳ ಸಂಖ್ಯೆ ಜಾಸ್ತಿಯಾಗುತ್ತಿವೆ. ಮುಂಬರುವ ದಿನಗಳಲ್ಲಿ ಕನ್ನಡ ಪತ್ರಿಕೆಯ ಗುಣಮಟ್ಟ ಗಣನೀಯವಾಗಿ ಕುಸಿಯ ಲಿದೆ’ ಎಂದು ಲೇಖನವನ್ನೇ ಬರೆದಿದ್ದರು.

ಶರ್ಮ ಅವರು ಹೇಳಿದ್ದು ನಿಜವಾಗಿದ್ದರೆ, ಇಷ್ಟೊತ್ತಿಗೆ ಕನ್ನಡ ಪತ್ರಿಕೆಗಳು ಅವಸಾನವಾಗಬೇಕಿತ್ತು. ಇಲ್ಲಿ ಶರ್ಮ ಅವರ ಅಂದಿನ ಮನಸ್ಥಿತಿ ಅಥವಾ ಕಾಳಜಿ ಮತ್ತು ಕನ್ನಡ ಪತ್ರಿಕೆಗಳ ಸ್ಥಿತಿ-ಗತಿ ಮುಖ್ಯವೇ ಹೊರತು ಅವರೇನೋ ಭವಿಷ್ಯವಾಣಿ ನುಡಿದ್ದಾರೆ ಎಂದು ಭಾವಿಸಬೇಕಿಲ್ಲ. ಇಂದಿಗೂ ಹಳೆಯ ಕಾಲದ ಅಂದ್ರೆ ವೃತ್ತಿ ಯಿಂದ ನಿವೃತ್ತರಾದವರು ಅಥವಾ ವೃತ್ತಿಯಲ್ಲಿದ್ದರೂ ನಿವೃತ್ತ ಭಾವದಲ್ಲಿರುವವರು ಸಹ ಆಗಾಗ ಮುತ್ತಜ್ಜಿ ತನ್ನ ತುರುಬನ್ನು ನೆನಪಿಸಿಕೊಳ್ಳುಕ್ಸ್ ಕಥೆಯಂತೆ ಹಳೆಯ ವೈಭವಗಳನ್ನು ಹೇಳುತ್ತಿರುತ್ತಾರೆ. ಒಂದಂತೂ ಸತ್ಯ, ಯಾರಾದರೂ ತಮ್ಮ ಕಾಲದಲ್ಲಿ ಹಾಗಿತ್ತು, ಹೀಗಿತ್ತು ಅಂದರೆ ಮತ್ತೇನಲ್ಲದಿದ್ದರೂ, ಅವರಿಗೆ ವಯಸ್ಸಾಗಿದೆ ಎಂದು ಭಾವಿಸಬಹುದು.

ಈ ಮಾತನ್ನು ಹೇಳಲು ಮತ್ತೊಂದು ಕಾರಣವಿದೆ. ನಾನು ಇತ್ತೀಚೆಗೆ ನಲವತ್ತೇಳು ವರ್ಷಗಳ (1975) ಹಿಂದಿನ ’ಕಸ್ತೂರಿ’ ಮಾಸಪತ್ರಿಕೆಯನ್ನು ಓದುತ್ತಿದ್ದೆ. ಅದರಲ್ಲಿ ‘ಇಂಡಿಯನ್ ಎಕ್ಸ್ ಪ್ರೆಸ್’ ಮತ್ತು ‘ಟೈಮ್ಸ್ ಆಫ್ ಇಂಡಿಯ’ ಪತ್ರಿಕೆಗಳಿಗೆ ಸಂಪಾದಕರಾಗಿದ್ದ ಡಿ.ಆರ್.ಮಂಕೇಕರ್ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ
ಬರೆದಿದ್ದರು – ‘ಭಾರತೀಯ ವೃತ್ತ ಪತ್ರಿಕೆಗಳ ನೈತಿಕ ಸ್ಥೈರ್ಯ ಇಂದು ಎಷ್ಟರ ಮಟ್ಟಿಗೆ ಕುಗ್ಗಿದೆಯೆಂದರೆ, ರಾಜಕೀಯ ಧುರೀಣ ರಿಂದ ಅಪರಾಧ ಸಂಭವಿಸಿದರೆ ಅದನ್ನು ಪ್ರಕಟಿಸುವ ಮಾತಂತೂ ದೂರ ಉಳಿಯಿತು. ಅಪರಾಧಕ್ಕೂ, ಅವರಿಗೂ ಸಂಬಂಧವಿದೆಯೆಂದು ಶಂಕಿಸಲಾದ ಸುದ್ದಿಯನ್ನು ಪ್ರಕಟಿಸುವ ಧೈರ್ಯವೂ
ಅವುಗಳಿಗೆ ಇಲ್ಲವಾಗಿದೆ. ತಮಗೆ ಆಸಕ್ತಿಯಿದ್ದ ಯಾವುದೊಂದು ಸುದ್ದಿಯನ್ನು ವರ್ಣರಂಜಿತವಾಗಿ ಪ್ರಕಟಿಸಬೇಕೆಂದೋ, ಅವುಗಳನ್ನು ನಿಸ್ಸಾರವಾಗಿ ಪ್ರಕಟಿಸ ಬೇಕೆಂದೋ ರಾಜಕೀಯ ರಂಗದಲ್ಲಿನ ವ್ಯಕ್ತಿಗಳು ಪತ್ರಿಕಾಲಯಗಳಿಗೆ ಫೋನ್ ಮಾಡುವುದು ಇಂದು ದಿಲ್ಲಿ-ಕೋಲ್ಕೊತಾಗಳಲ್ಲಿ ಸಾಮಾನ್ಯವಾಗಿದೆ.’ ಕೆಲವು ಪ್ರಸಂಗಗಳನ್ನು ಆಧರಿಸಿ ಮಂಕೇರ್ಕ ಹೀಗೆ ಹೇಳಿರಬಹುದು. ಅವರ ಮಾತಿನ ಭಾವವನ್ನು ಗಂಭೀರವಾಗಿ ಪರಿಗಣಿಸಿದರೆ, ಈ ನಲವತ್ತೇಳು ವರ್ಷಗಳಲ್ಲಿ ಪತ್ರಿಕೆ ಗಳಲ್ಲಿ ಇನ್ನೂ ಏನೇನೋ ಆಗಿಬಿಡಬೇಕಿತ್ತು ಮತ್ತು ಭಾರತೀಯ ವೃತ್ತಪತ್ರಿಕೆಗಳ ನೈತಿಕ ಸ್ಥೈರ್ಯ ನೆಲಕಚ್ಚಬೇಕಿತ್ತು. ಸುದೈವ, ಆದರೆ ಹಾಗೆ ಆಗಿಲ್ಲ.
ಇಂದಿಗೂ ಪತ್ರಿಕೆಗಳು ತಮ್ಮ ನೈತಿಕತೆಯನ್ನು ಕಾಪಾಡಿಕೊಂಡಿವೆ.

ರಾಜಕೀಯ ನಾಯಕರು ಫೋನ್ ಮಾಡಿ ಸುದ್ದಿಯನ್ನು ತಡೆಹಿಡಿಯುವ ‘ದುಸ್ಸಾಹಸ’ಕ್ಕೆ ಮುಂದಾಗುತ್ತಿಲ್ಲ. ಕಾಲಕಾಲಕ್ಕೆ ಕೆಲವರು ಈ ರೀತಿಯ ಹೇಳಿಕೆ (ನಮ್ಮ ಕಾಲದಲ್ಲಿ ಹಾಗಿತ್ತು… ಈಗ.. )ಗಳನ್ನು ಕೊಡುತ್ತಿರುತ್ತಾರೆ. ಆಗ ಅಂಥ ಹೇಳಿಕೆಗಳನ್ನು ಕೇಳಿಸಿಕೊಳ್ಳಬೇಕು, ಆದರೆ ಸಂಪೂರ್ಣ ನಿಜ ಎಂದು ನಂಬಬಾರದು. ಅವರ ಕಾಳಜಿಯನ್ನಷ್ಟೇ ಮೆಚ್ಚಬೇಕು. ಈ ರೀತಿಯ ಹಳಹಳಿಕೆ ಮಾತಾಡುವವರು ಎಲ್ಲಾ ಕಾಲಘಟ್ಟದಲ್ಲೂ ಇರುತ್ತಾರೆ, ಇರಬೇಕು. ಎಂಬತ್ತು ವರ್ಷದ ತಾತನಿಗೆ ಇಪ್ಪತ್ತು ವರ್ಷದ ಮೊಮ್ಮಗನನ್ನು ನೋಡಿದಾಗ, ಕಾಲ ಕೆಟ್ಟು ಹೋಯ್ತು ಅಂತ ಅನಿಸುತ್ತದೆ. ಆದರೆ ಅದೇ ತಾತ ತಾನು ಇಪ್ಪತ್ತು ವರ್ಷದವನಿದ್ದಾಗ ಹೇಗಿದ್ದಾ ಎಂಬುದನ್ನು ಮರೆತುಬಿಟ್ಟಿರುತ್ತಾನೆ.

ಅವನೂ ಆ ಎಲ್ಲಾ ಆಟಗಳನ್ನು ಆಡಿಯೇ ತಾತನಾಗಿರುತ್ತಾನೆ. ಹೀಗಾಗಿ ಇದು ವಯಸ್ಸಾದಾಗ, ಅಸಹಾಯಕರಾದಾಗ, ಅಡರಿಕೊಳ್ಳುವ ಒಂದು ವ್ಯಸನ, ಅಷ್ಟೇ.

ಅಸ್ತಿತ್ವ ಕಾಪಾಡಿಕೊಳ್ಳುವ ಪ್ರಸಂಗಗಳು

ಕೆಲವು ಪ್ರಸಂಗಗಳು ಸುಳ್ಳೋ, ಸತ್ಯವೋ ಗೊತ್ತಾಗುವುದಿಲ್ಲ. ಆದರೆ ಕಾಲದಿಂದ ಕಾಲಕ್ಕೆ ಜಿಗಿಯುತ್ತಾ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿರುತ್ತವೆ. ನಮ್ಮ ನಡುವಿನಲ್ಲಿರುವ ಬುದ್ಧಿವಂತ ನೊಬ್ಬ ತಾನು ಇದನ್ನು ರೀಡರ್ಸ್ ಡೈಜೆಸ್ಟಿನಲ್ಲಿ ಓದಿದ್ದೇ, ‘ಕಸ್ತೂರಿ’ಯಲ್ಲಿ ಓದಿದ್ದೇ, ಟೈಮ್ ಮ್ಯಾಗಜಿನ್ ನಲ್ಲಿ ಓದಿದ್ದೇ ಎಂದು ಅದರ ಅಸ್ತಿತ್ವಕ್ಕೆ ಮತ್ತಷ್ಟು ನಿಖರತೆ ಕೊಡುತ್ತಾನೆ. ಅದನ್ನು ನಾವು ಹಾಗೇ ನಿಜವೆಂದು ಸ್ವೀಕರಿಸಿಬಿಡುತ್ತೇವೆ. ಆದರೆ ಅದು ನಿಜವಾಗಿಯೂ ನಡೆದಿದ್ದು ಹೌದಾ, ಅಲ್ಲವಾ ಎಂಬುದು ಗೊತ್ತಾಗುವುದಿಲ್ಲ.

ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನಂ ಗಣಿತದ ಒಂದು ಸಮಸ್ಯೆಯನ್ನು ಹದಿನಾರು ರೀತಿಗಳಲ್ಲಿ ಬಿಡಿಸುತ್ತಿದ್ದರು ಎಂದು ನಾನು ಹೈಸ್ಕೂಲಿನಲ್ಲಿ ಓದು ವಾಗಿನಿಂದ ಕೇಳುತ್ತ ಬಂದಿದ್ದೇನೆ. ಅವರಿಗೆ ಗಣಿತ ವಿಷಯದಲ್ಲಿ ನೂರಕ್ಕೆ, ನೂರಾ ಇಪ್ಪತ್ತು ಅಂಕಗಳು ಬಂದಿದ್ದವು ಎನ್ನುವುದೂ ಇನ್ನೊಂದು ಸಂಗತಿ. ಆದರೆ ಇಲ್ಲಿ ತನಕ ಇವನ್ನು ಎಲ್ಲಿಯೂ ಓದಿಲ್ಲ. ಕೆಲ ದಿನಗಳ ಹಿಂದೆ, ಕಪಾಟಿನಲ್ಲಿ ಹಾಸಿದ ಕಾಗದವೊಂದನ್ನು ಬಿಸಾಕುವ ಮುನ್ನ ಅದನ್ನು ಓದುತ್ತಿದ್ದೆ. ಎಚ್.ಆರ್.
ಚಂದ್ರವದನರಾವ್ ಎಂಬುವವರು ಬರೆದ ಒಂದು ಸಣ್ಣ ಪ್ರಸಂಗ ಕಂಡಿತು. ಅದರಲ್ಲಿ ಬರೆದಿತ್ತು.

ಟಿ.ಪಿ.ಕೈಲಾಸಂ ಹಾಸನದ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ, ಗಣಿತ ದಲ್ಲಿ ಜಾಣರಾಗಿದ್ದರಂತೆ. ಒಂದು ಪರೀಕ್ಷೆಯಲ್ಲಿ ಹದಿನೈದು ಲೆಕ್ಕಗಳಲ್ಲಿ ಹತ್ತನ್ನು ಆರಿಸಿಕೊಳ್ಳು ವಂತೆ ಪರೀಕ್ಷಕರು ಹೇಳಿದ್ದರು. ಕೈಲಾಸಂ ಹದಿನೈದು ಲೆಕ್ಕಗಳನ್ನೂ ಬಿಡಿಸಿ, ಯಾವುದಾದರೂ ಹತ್ತನ್ನು ಮೌಲ್ಯಮಾಪನಕ್ಕೆ ತೆಗೆದುಕೊಳ್ಳಬ ಹುದೆಂದು ಬರೆದಿದ್ದ ರಂತೆ! ಹಾಗೆ ಇನ್ನೊಂದು ಪ್ರಸಂಗ. ಒಮ್ಮೆ ಕೈಲಾಸಂ ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶದಲ್ಲಿ ರಿಕ್ಷಾದಲ್ಲಿ ಹೋಗುತ್ತಿದ್ದರು. ಸುಡು ಬೇಸಿಗೆ, ಕೆಳಗೆ ಕಾದ ರಸ್ತೆ. ರಿಕ್ಷಾ ಎಳೆಯುತ್ತಿದ್ದವನು ಸುಸ್ತಾಗಿ ಹೋಗಿದ್ದ. ಕೈಲಾಸಂ ಗೆ ರಿಕ್ಷಾ ಎಳೆಯುವವನ ಕಷ್ಟ ತಾವು ಅನುಭವಿಸಿ ತಿಳಿದುಕೊಳ್ಳಬೇಕು ಎನಿಸಿತು. ರಿಕ್ಷಾದವನನ್ನು ಗಾಡಿಯಲ್ಲಿ ಬಲವಂತದಿಂದ ಕೂರಿಸಿ ತಾವು ಸುಮಾರು ಒಂದು -ರ್ಲಾಂಗ್ ರಿಕ್ಷಾ ಎಳೆದು, ಅವನಿಗೆ ಆತ ಕೇಳಿದುದಕ್ಕಿಂತ ಎರಡು
ಪಟ್ಟು ಹಣ ಕೊಟ್ಟು ಕಳಿಸಿದರು.

ಕೆಲ ವರ್ಷಗಳ ನಂತರ ಯಾರೋ, ಕೈಲಾಸಂ ಜಾಗದಲ್ಲಿ ಲೋಕಮಾನ್ಯ ಟಿಳಕರು, ಸರ್ ಎಂ.ವಿ., ತಿ.ತಾ.ಶರ್ಮ, ತೋಟದ ವೀರಪ್ಪನವರು… ಎಂದು ಬದಲಿಸಿ ದರೂ ಗೊತ್ತಾಗುವುದಿಲ್ಲ. ಆದರೆ ಎಲ್ಲರೂ ಈ ಪ್ರಸಂಗವನ್ನು ನಿಜ ಎಂದೇ ಭಾವಿಸುತ್ತಾರೆ. ಇಲ್ಲಿ ವ್ಯಕ್ತಿಗಿಂತ ಆದರ್ಶವೇ ಮುಖ್ಯವೆನಿಸುತ್ತದೆ. ಅದಕ್ಕೆ ಸರಿ
ಹೊಂದುವ ವ್ಯಕ್ತಿಗಳನ್ನು ಪ್ರಸಂಗಕ್ಕೆ ಜೋಡಿಸಿದರೆ ನಿಜ ಎಂದೇ ಅನಿಸುತ್ತದೆ.

ಖುಷಿಯಾಗಿರುವುದು ಹೇಗೆ?
ಇತ್ತೀಚೆಗೆ ದಲೈ ಲಾಮಾ ಅವರು ಬರೆದ ‘ಖುಷಿಯಾಗಿ ರುವುದು ಹೇಗೆ?’ ಎಂಬ ಪುಟ್ಟ ಬರಹವನ್ನು ಓದುತ್ತಿದ್ದೆ. ಕೆಲವೊಮ್ಮೆ ಸಫಲತೆಯ ಖುಷಿಯ ಅನುಭೂತಿ ತಾತ್ಕಾಲಿಕವಾಗಿರುತ್ತದೆ, ಆದರೆ ಯಾವುದಾದರೂ ದುಃಖದ ವಿಚಾರ ಮನಸಿನಲ್ಲಿ ತುಂಬಾ ದಿನಗಳ ತನಕ ನಿರಾಶಾದಾಯಕ ಭಾವವನ್ನು ಮೂಡಿಸಿರುತ್ತದೆ. ಹೀಗಾದಾಗ ನಮ್ಮ ಖುಷಿ ದಿನದಿಂದ ದಿನಕ್ಕೆ ಕಡಮೆಯಾಗುತ್ತ ಹೋಗುತ್ತದೆ. ಮನೋವಿಜ್ಞಾನಿಗಳ ಪ್ರಕಾರ, ಈ ಪ್ರಕ್ರಿಯೆಗೆ ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ಥಿತಿ ಎನ್ನಲಾಗುತ್ತದೆ. ಈ ಸಿದ್ಧಾಂತ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹಾಸುಹೊಕ್ಕಾಗಿರುತ್ತದೆ.

ವೇತನದಲ್ಲಿ ಹೆಚ್ಚಳವಾದಾಗ, ಹೊಸ ಕಾರು ಖರೀದಿಸಿದಾಗ, ಸ್ನೇಹಿತರ ಹೊಗಳಿಕೆಯ ಮಾತುಗಳು ಇವೆಲ್ಲವೂ ನಮಗೆ ಕೆಲ ದಿನಗಳ ತನಕ ಖುಷಿಯನ್ನು ಕೊಡುತ್ತಲೇ ಇರುತ್ತವೆ. ಇವೆಲ್ಲವೂ ತಾತ್ಕಾಲಿಕ. ಮತ್ತೆ ಕೆಲದಿನಗಳಲ್ಲಿ ನಾವು ಖುಷಿಯ ಸಾಮಾನ್ಯ ಸ್ಥಿತಿಗೆ ಮರಳುತ್ತೇವೆ. ಅದೇ ರೀತಿ ಮಿತ್ರನೊಬ್ಬ ನಮ್ಮ ಬಗ್ಗೆ
ಕಟಕಿಯಾಡಿದಾಗ, ರಿಪೇರಿಗೆ ಹೋಗಿ ಬಂದ ಕಾರು ಕೈಕೊಟ್ಟಾಗ, ಹೀಗೆ ಸಣ್ಣಪುಟ್ಟ ಸಂಗತಿಗಳು ನಮ್ಮನ್ನು ಮತ್ತೆ ದುಃಖಕ್ಕೆ ತಳ್ಳುತ್ತವೆ. ಆದರೆ ಕೆಲವೇ ದಿನಗಳಲ್ಲಿ ಅವೆಲ್ಲವೂ ತೆರೆ-ಮರೆಗೆ ಸರಿದು ಮತ್ತೆ ಖುಷಿಯ ಸಹಜಸ್ಥಿತಿಗೆ ಬರುತ್ತೇವೆ. ಬಾಹ್ಯ ಪ್ರಪಂಚದ ಇಂತಹ ಅನೇಕ ಘಟನೆಗಳ ಹೊರತಾಗಿಯೂ ನಾವು ಸ್ವಂತ ಖುಷಿಯ ಅನುಭೂತಿಗೆ ಮರಳಿ ಬರುವುದು ಸಾಧ್ಯವಿದೆ.

ಹಾಗಾದರೆ ಅದನ್ನು ನಿರ್ಧರಿಸುವ ಸಂಗತಿ ಏನು? ಅಂತಹ ಪ್ರತಿಕೂಲ ಸಂಗತಿಗಳಿದ್ದಾಗಲೂ ನಮ್ಮ ಖುಷಿಯ ಸ್ಥಿತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದು ಹೇಗೆ? ನಮಗೆ ಪ್ರಕೃತಿದತ್ತವಾಗಿ ದಕ್ಕಿರುವ ಖುಷಿಯ ಜೊತೆಗೆ ನಮ್ಮ ಮನಸ್ಸಿನಲ್ಲಿ ನಾವೇ ಸ್ಥಾಪನೆ ಮಾಡಿಕೊಳ್ಳಬಹುದಾದ ಕೆಲವು ದಿಟ್ಟ ನಿರ್ಧಾರಗಳಿಂದ ನಮ್ಮ
ಖುಷಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದು ಸಾಧ್ಯವಿದೆ. ಪ್ರತಿ ಬಾರಿಯೂ ಸಣ್ಣಪುಟ್ಟ ಗೆಲುವುಗಳ ಕಾರಣದಿಂದ ಸಿಗುವ ಖುಷಿ ನಮ್ಮ ದೃಷ್ಟಿಕೋನವನ್ನು ಅವಲಂಬಿ ಸಿರುತ್ತದೆ. ಸುಖ ಅಥವಾ ದುಃಖ ಅದನ್ನು ಸ್ವೀಕರಿಸುವುದು ಮತ್ತು ಮನಸ್ಸನ್ನು ಸದಾ ಉಲ್ಲಸಿತವಾಗಿ ಇಟ್ಟುಕೊಳ್ಳುವುದು, ಸ್ಥಿತಪ್ರಜ್ಞ ಮನಃಸ್ಥಿತಿಯನ್ನು
ಕಾಯ್ದು ಕೊಳ್ಳುವುದು ಇವೆಲ್ಲವೂ ನಮ್ಮೊಳಗಿನ ವಿಶೇಷ ತಾಕತ್ತು.

ಆಪಲ್ ಕಂಪನಿ ಬೆಳೆದರೆ ನಿಮಗೇನು?
2011 ರಿಂದ ಟಿಮ್ ಕೂಕ್ ಆಪಲ್ ಕಂಪನಿಯ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ಆಪಲ್ ಕಂಪನಿಯ ಮಾರ್ಕೆಟ್ ಕ್ಯಾಪಿಟಲ್ 340 ಬಿಲಿಯನ್ ಡಾಲರ್‌ ನಿಂದ ಮೂರು ಟ್ರಿಲಿಯನ್ ಡಾಲರ್‌ ಗೆ ಏರಿದೆ. ಆಪಲ್ ಕಂಪನಿ ಈ ಅಗಾಧ ಪ್ರಮಾಣದಲ್ಲಿ ಬೆಳೆದರೂ, ಟಿಮ್ ಕೂಕ್ ಅವರ ನೆಟ್ ವರ್ಥ್ 1.5 ಶತಕೋಟಿ ಡಾಲರ್ ಮಾತ್ರ!

ಇದರ ನೀತಿ ಏನು? : ನೀವು ಎಲ್ಲಿ ತನಕ ಸಿಬ್ಬಂದಿಯಾಗಿ ಇರುತ್ತೀರೋ, ಅಲ್ಲಿ ತನಕ ಸಂಸ್ಥೆ ಶ್ರೀಮಂತವಾಗುವುದರಲ್ಲಿಯೇ ಖುಷಿ ಕಾಣಬೇಕು ಮತ್ತು ತನ್ನನ್ನು ಶ್ರೀಮಂತನನ್ನಾಗಿ ಮಾಡಿದರೆ ಮಾತ್ರ ಸಂಸ್ಥೆ ನಿಮ್ಮನ್ನು ಇಟ್ಟುಕೊಳ್ಳುತ್ತದೆ.

error: Content is protected !!