Thursday, 12th December 2024

ಆತ್ಮನಿರ್ಭರ ಭಾರತದ ಆರ್ಥಿಕತೆ

ವೀಕೆಂಡ್ ವಿತ್‌ ಮೋಹನ್‌

ಮೋಹನ್ ವಿಶ್ವ

camohanbn@gmail.com

ಕೇಂದ್ರ ಬಜೆಟ್‌ನಲ್ಲಿ ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡಲಿಲ್ಲ. ಚುನಾವಣೆ ಹಾಗೂ ಬಜೆಟ್-ಒಂದಕ್ಕೊಂದು ಸಂಬಂಧವಿಲ್ಲದ ಸಂಗತಿ ಎಂಬ ಸ್ಪಷ್ಟ ಸಂದೇಶ ಇತ್ತು. ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವುದು ಮೂಲಭೂತ ಸೌಕರ್ಯಗಳು.

ಒಂದು ಕಾಲದಲ್ಲಿ ದೇಶದ ‘ಬಜೆಟ್’ ಎಂದರೆ ಎರಡು ದಿನಗಳ ಕಾಲ ನಡೆಯುತ್ತಿತ್ತು. ಮೊದಲನೆಯ ದಿವಸ ‘ರೈಲ್ವೆ ಬಜೆಟ್’, ಎರಡನೆಯ ದಿವಸ ‘ಆರ್ಥಿಕ ಬಜೆಟ’. ರೈಲ್ವೆ ಬಜೆಟ್‌ನಲ್ಲಿ ಹೊಸದಾಗಿ ಪರಿಚಯಿಸಿದ ಬಹುತೇಕ ರೈಲುಗಳ ಹೆಸರುಗಳ ಆರಂಭಿಕ ನಿಲ್ದಾಣ ಹಾಗೂ ಅಂತಿಮ ನಿಲ್ದಾಣದ ಹೆಸರನ್ನು ಹೇಳದೆ ಮುಂದೆ ಹೋಗುತ್ತಿರಲಿಲ್ಲ. ಪ್ರತಿಯೊಂದು ರೈಲುಗಳ ಹೆಸರನ್ನು ಹೇಳುತ್ತಿದ್ದಂತೆ ಆಯಾ ರಾಜ್ಯದ ಸಂಸದರಿಗೆ ಖುಷಿಯೋ ಖುಷಿ, ಆ ರೈಲುಗಳು ವಾಸ್ತವವಾಗಿ ಆರಂಭ ವಾಗಲು ದಶಕಗಳ ಸಮಯ ತೆಗೆದುಕೊಂಡರೂ ಸಹ ಪ್ರತಿ ವರ್ಷ ನೂತನ ರೈಲು ಘೋಷಣೆಯಾದರೆ ಮಾತ್ರ ಬಜೆಟನ ಬಗ್ಗೆ ಉತ್ತಮ ಪ್ರತಿಕ್ರಿಯೆ ಬರುತ್ತಿತ್ತು.

ಆರ್ಥಿಕ ಬಜೆಟ್‌ನ ಕಥೆಯೂ ಅಷ್ಟೇ, ಕಳೆದ ಬಾರಿಯ ಬಜೆಟ್ ಯೋಜನೆಗಳು ಅನುಷ್ಠಾನಕ್ಕೆ ಬರದಿದ್ದರೂ ಪರವಾಗಿಲ್ಲ. ನೂತನ ಯೋಜನೆಗಳು ಘೋಷಣೆ ಯಾಗಬೇಕಷ್ಟೆ. ಮೂರು ತಾಸು ಬಜೆಟ್ ಓದಿ, ಮರುದಿನ ಪತ್ರಿಕೆಗಳಲ್ಲಿ ಅತಿ ಹೆಚ್ಚು ಗಂಟೆಗಳ ಕಾಲ ಬಜೆಟ್ ಓದಿದ ವಿತ್ತ ಮಂತ್ರಿಯೆಂಬ ಬಾಕ್ಸ್ ಐಟಂ ನೋಡಬೇಕಿ ತ್ತಷ್ಟೆ! ಈ ಬಾರಿಯ-2022ರ ಕೇಂದ್ರ ಬಜೆಟ್ ಕೇವಲ 90 ನಿಮಿಷಗಳಲ್ಲಿ ಮುಗಿದಿತ್ತು. ಬಹುತೇಕ ಹಳೆಯ ಯೋಜನೆಗಳ ಅನುಷ್ಠಾನಗಳ ಮೇಲೆ ಹೆಚ್ಚಿನ ಗಮನ ಹರಿಸಿ ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡಲಿಲ್ಲ.

ಪಂಚರಾಜ್ಯಗಳ ಚುನಾವಣೆಯ ನಡುವೆಯೂ ಆಯಾ ರಾಜ್ಯಗಳಿಗೆ ನಿರ್ದಿಷ್ಟ ಘೋಷಣೆಗಳಿರಲಿಲ್ಲ. ಚುನಾವಣೆ ಹಾಗೂ ಬಜೆಟ್-ಒಂದಕ್ಕೊಂದು ಸಂಬಂಧವಿಲ್ಲದ ಸಂಗತಿ ಎಂಬ ಸ್ಪಷ್ಟ ಸಂದೇಶ ಈ ಬಾರಿ ಇತ್ತು. ಒಂದು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವುದು ಮೂಲಭೂತ ಸೌಕರ್ಯಗಳು. ಆರ್ಥಿಕತೆ ಅಭಿವೃದ್ಧಿಯ ಪಂಚಾಂಗವದು. ಅಮೆರಿಕ 1940ರ ದಶಕದಲ್ಲಿ ಬೃಹತ್ ಮಟ್ಟದಲ್ಲಿ ಹೆದ್ದಾರಿ, ರೈಲು ಹಾಗೂ ವಿಮಾನ ನಿಲ್ದಾಣಗಳ ಕಾಮಗಾರಿಗಳನ್ನು ಕೈಗೆತ್ತಿ ಕೊಂಡ ಪರಿಣಾಮವೇ ಅದು ಜಗತ್ತಿನ ಮುಂದುವರಿದ ದೇಶವಾಯಿತು. 1980ರ ದಶಕದಲ್ಲಿ ಚೀನಾ ಸಹ ಬೃಹತ್ ಮೂಲ ಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಂಡಿತ್ತು.

ಪರಿಣಾಮ ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಮುಂದುವರಿದ ದೇಶವಾಯಿತು. ಒಂದು ಅಂದಾಜಿನ ಪ್ರಕಾರ 2002 ಹಾಗೂ 2012 ರ ನಡುವೆ ಚೀನಾ ಬಳಸಿದಷ್ಟು ಸಿಮೆಂಟ್ ಅನ್ನು ಅಮೆರಿಕ 1940 ಹಾಗೂ 2000ರ ನಡುವೆ ಬಳಸಿತ್ತಂತೆ. ಅಮೆರಿಕ 60 ವರ್ಷಗಳಲ್ಲಿ ಬಳಸಿದ ಸಿಮೆಂಟ್ ಪ್ರಮಾಣವನ್ನು ಚೀನಾ ಕೇವಲ 10 ವರ್ಷದಲ್ಲಿ ಬಳಸಿತ್ತು. ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ ಸಹ ಬೃಹತ್ ಮಟ್ಟದಲ್ಲಿ ರಸ್ತೆಗಳ ನಿರ್ಮಾಣವಾಗುತ್ತಿದೆ. ದಿನವೊಂದಕ್ಕೆ ದಾಖಲೆ ಪ್ರಮಾಣದ ಸುಮಾರು 38 ಕಿ.ಮೀಗಳ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈ ಬಾರಿ ಸುಮಾರು 25000 ಕಿ.ಮೀ ಉದ್ದದ ಹೆದ್ದಾರಿ ನಿರ್ಮಾಣದ ಗುರಿ ಹೊಂದಲಾಗಿದೆ.

ಅಂದರೆ ದಿವಸಕ್ಕೆ ಸುಮಾರು 68 ಕಿ. ಮೀಗಳಷ್ಟು ರಸ್ತೆ ನಿರ್ಮಾಣವಾಗಲಿದೆ. ಒಂದು ಹೆದ್ದಾರಿ ಕೋಟ್ಯಂತರ ಜನರಿಗೆ ಉದ್ಯೋಗ ಸೃಷ್ಟಿ ಮಾಡುತ್ತದೆ.
‘ಸುವರ್ಣ ಚತುಷ್ಪಥ’ದ ಫಲವಾಗಿ ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆಯಂತಹ ನಗರಗಳಲ್ಲಿ ಖಾಸಗೀ ಬಡಾವಣೆಗಳು ತಲೆ ಎತ್ತಿದವು. ದೊಡ್ಡ ದೊಡ್ಡ ವಿದ್ಯಾ ಸಂಸ್ಥೆಗಳು ಆರಂಭವಾದವು. ರಾಜಧಾನಿಯ ಜತೆಗಿನ ದಿನನಿತ್ಯದ ವ್ಯಾವಹಾರಿಕ ಸಂಪರ್ಕ ಹೆಚ್ಚಾಯಿತು. ರಿಯಲ್ ಎಸ್ಟೇಟ್ ಉದ್ಯಮವಂತೂ ಹತ್ತು ಪಟ್ಟು ಬೆಳೆಯಿತು. ನೂರಾರು ಹೋಟೆಲುಗಳು ಆರಂಭವಾದವು. ವ್ಯವಹಾರಗಳು ಹೆಚ್ಚಾದಂತೆಲ್ಲ ಆರ್ಥಿಕತೆ ಬೆಳೆಯತೊಡಗಿತು. ಉದ್ಯೋಗಗಳು ಸೃಷ್ಟಿಯಾದವು.
ಮಹಾತ್ಮ ಗಾಂಽಯವರ ‘ಗುಡಿ ಕೈಗಾರಿಕೆ’ಯ ಮಹತ್ವ ಅರಿತು ಸ್ವತಂತ್ರ್ಯಾ ನಂತರ ಭಾರತದಲ್ಲಿ ಸ್ವ ಉದ್ಯೋಗವನ್ನು ಏಳು ದಶಕಗಳ ಹಿಂದೆಯೇ ಪ್ರೋತ್ಸಾ ಹಿಸಿದ್ದಿದ್ದರೆ, ಇಂದು ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿರುತ್ತಿತ್ತು.

ಈ 75 ವರ್ಷಗಳಲ್ಲಿ ಬ್ರಿಟಿಷರು ಬಿಟ್ಟುಹೋದ ಗುಲಾಮಗಿರಿಯನ್ನೇ ಹೆಚ್ಚಾಗಿ ಪ್ರೋತ್ಸಾಹಿಸಲಾಗಿದೆ. ಕರೋನ ಮಹಾಮಾರಿಯನ್ನು ಜಗತ್ತಿಗೆ ಹಬ್ಬಿಸಿದ ಚೀನಾ ವನ್ನು ಇಡೀ ಜಗತ್ತೇ ಮೂಲೆಗುಂಪು ಮಾಡಲು ಶುರುಮಾಡಿದೆ. ಭಾರತ ಸಹ ಚೀನಾದಿಂದ ಆಮದಾಗುತ್ತಿದ್ದ ವಸ್ತುಗಳ ಬದಲಿಗೆ ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಯಡಿ ದೇಸೀಯವಾಗೇ ಉತ್ಪಾದಿಸಲು ಬೃಹತ್ ಯೋಜನೆಯನ್ನು ಹಾಕಿಕೊಂಡಿದೆ. ‘ಮೇಕ್ ಇನ್ ಇಂಡಿಯಾ’ಅಡಿಯಲ್ಲಿ ಭಾರತದಲ್ಲಿ ಈಗಾಗಲೇ ಹಲವು ಕಾರ್ಖಾನೆಗಳು ತಲೆಯೆತ್ತಿವೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ‘ಕ್ಸಿಯೋಮಿ’ ಕಂಪನಿಯ ಬೃಹತ್ ಮೊಬೈಲ್ ತಯಾರಿಕಾ ಕಾರ್ಖಾನೆಯಿದೆ. ಅನಂತ ಪುರ ಪೆನುಕೊಂಡ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದಕ್ಷಿಣ ಕೊರಿಯಾ ದೇಶದ ‘ಕಿಯಾ’ ಸಂಸ್ಥೆ ಸುಮಾರು ಮೂರು ಕಿಲೋಮೀಟರು ಉದ್ದದ ಕಾರು ಉತ್ಪಾದಕ ಘಟಕ ಸ್ಥಾಪಿಸಿದೆ. ಕೋಲಾರದಲ್ಲಿ ಆಪಲ ಮೊಬೈಲ್ ತಯಾರಿಸುವ ‘ವಿಸ್ಟ್ರಾನ್’ ತಲೆಯೆತ್ತಿದೆ.

‘ಟೆಸ್ಲಾ’ ಕಂಪೆನಿಯ ಎಲಾನ್ ಮಸ್ಕ್ ಬೆಂಗಳೂರಿನಲ್ಲಿ ತನ್ನ ಸಂಶೋಧನಾ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ನೋಂದಣಿ ಮಾಡಿದ್ದಾರೆ. ಉತ್ತರ
ಪ್ರದೇಶದಲ್ಲಿ ‘ಸ್ಯಾಮ್ ಸಂಗ್’ ಜಗತ್ತಿನ ಬಹುದೊಡ್ಡ ಮೊಬೈಲ್ ತಯಾರಿಕಾ ಕಾರ್ಖಾನೆ ಸ್ಥಾಪಿಸುತ್ತಿದೆ. ಪುಣೆಯಲ್ಲಿ ಓಲಾ ಕಂಪನಿಯ ಬೃಹತ್ ಎಲೆಕ್ಟ್ರಿಕ್ ಚಾಲಿತ
ದ್ವಿಚಕ್ರ ವಾಹನಗಳ ತಯಾರಿಕಾ ಕಾರ್ಖಾನೆಯಿದೆ. ಒಂದು ಕಾಲದಲ್ಲಿ ಭಾರತ ಕೇವಲ ೨೨,೦೦೦ ಕೋಟಿಯಷ್ಟು ಮೊಬೈಲ್ ಉತ್ಪಾದನೆ ಮಾಡುತ್ತಿತ್ತು. ಇಂದು
ಸುಮಾರು ಎರಡು ಲಕ್ಷ ಕೋಟಿಯಷ್ಟು ಮೌಲ್ಯದ ಮೊಬೈಲ್ ಉತ್ಪಾದನೆ ಭಾರತದಗುತ್ತಿದೆ. ದೊಡ್ಡ ಮಟ್ಟದಲ್ಲಿ ಆಮದಾಗುತ್ತಿದ್ದಂತಹ ಮೊಬೈಲ್ಗಳ ಸಂಖ್ಯೆ ಗಣನೀಯ ಕಡಿಮೆಯಾಗಿದೆ. ಈಗಾಗಲೇ ಹತ್ತಾರು ಸ್ವದೇಶೀ ನಿರ್ಮಿತ ‘ಎಲೆಕ್ಟ್ರಿಕ್ ಚಾಲಿತ’ ದ್ವಿಚಕ್ರ ವಾಹನಗಳು ರಸ್ತೆಗಿಳಿದಿವೆ.

ಹೆಚ್ಚು ಹೆಚ್ಚು ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಯ ಕಡೆಗೆ ಗಮನ ಹರಿಸುವ ನಿಟ್ಟಿನಲ್ಲಿ ಸರಕಾರದಿಂದ ಭೂಮಿ ನೀಡುವ ಯೋಜನೆ ಘೋಷಣೆಯಾಗಿದೆ. ವಾತಾವರಣಕ್ಕೆ ಸೇರುತ್ತಿದ್ದಂತಹ ಇಂಗಾಲದ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗೊಂಡ ಹಲವು ಯೋಜನೆಗಳ ಪರಿಣಾಮ 2030 ರ ಹೊತ್ತಿಗೆ ಸಾಧಿಸಬೇಕಿದ್ದಂತಹ ಗುರಿಯನ್ನು ಭಾರತ 2021ರಲ್ಲಿಯೇ ಸಾಧಿಸಿದೆ. 2022ರ ಕೇಂದ್ರ ಬಜೆಟಿನಲ್ಲಿ ‘ಹಸಿರು ಶಕ್ತಿ ಬಾಂಡ್’ಗಳ ಯೋಜನೆ ಘೋಷಿಸಲಾಗಿದೆ. ಯುನೈಟೆಡ್ ಕಿಂಗ್ಡಮ ಇದೇ ರೀತಿಯ ಹಸಿರು ಶಕ್ತಿ ಬಾಂಡು ಗಳ ಮೂಲಕ ಸುಮಾರು 100 ಬಿಲಿಯನ್‌ನಷ್ಟು ಹಣವನ್ನು ಹೊಂದಿಸಲು ಸಾಧ್ಯವಾಗಿದೆ. ಸ್ಪೇನ್ ಹಾಗೂ ಇಟಲಿ, ಇಂಗ್ಲೆಂಡ್‌ನ ಹಸಿರು ಶಕ್ತಿ ಬಾಂಡ್‌ಗಳನ್ನು ಹೆಚ್ಚಾಗಿ ಕೊಂಡಿವೆ.

1980ರ ದಶಕದಲ್ಲಿ ಅಡುಗೆ ಎಣ್ಣೆ ಆಮದನ್ನು ಹೆಚ್ಚಾಗಿ ಉತ್ತೇಜಿಸಿ, ಭಾರತದಲ್ಲಿನ ರೈತರು ಎಣ್ಣೆಕಾಳುಗಳನ್ನು ಬೆಳೆಯುವ ವೇಗಕ್ಕೆ ಬ್ರೇಕ್ ಹಾಕಲಾಗಿತ್ತು. ಪರಿಣಾಮ ಬಹುತೇಕ ಅಡುಗೆ ಎಣ್ಣೆಯು ಆಗ್ನೇಯ ಏಷ್ಯಾ ರಾಷ್ಟ್ರಗಳಿಂದ ಆಮದಾಗುತ್ತಿದೆ. ಕರೋನ ಸಂದರ್ಭದಲ್ಲಿ ಆಮದಿನ ಮೇಲೆ ನಿರ್ಬಂಧ ಹೇರಿದ ಪರಿಣಾಮ ಅಡುಗೆ ಎಣ್ಣೆಯ ಬೆಲೆ ಗಗನಕ್ಕೇರಿತು. ಆತ್ಮನಿರ್ಭರ ಭಾರತದಡಿಯಲ್ಲಿ ಎಣ್ಣೆಕಾಳುಗಳ ಬೆಳೆಯನ್ನು ಉತ್ತೇಜಿಸುವ ಸಲುವಾಗಿ ಹಲವು ಯೋಜನೆ
ಯನ್ನು ರೂಪಿಸಲಾಗಿದ್ದು, ರೈತರಿಗೆ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ. ಭಾರತದಲ್ಲಿ ಎಣ್ಣೆಕಾಳುಗಳ ಬೆಳೆ ಹೆಚ್ಚಾದಷ್ಟೂ ಆಮದಾಗುವ ಎಣ್ಣೆಯ ಪ್ರಮಾಣ ಕಡಿಮೆಯಾಗುವುದರಿಂದ, ಬೆಲೆಯೂ ಕಡಿಮೆಯಾಗುತ್ತದೆ.

ಆಗಲೇ ರೈಲುಗಳ ವಿಚಾರ ಚರ್ಚೆ ಮಾಡುತ್ತಿದ್ದೆ. ನಿಮಗೆ ನೆನಪಿದ್ದರೆ ಒಂದು ದಶಕದ ಹಿಂದಿನವರೆಗೂ ಆಗಿಂದಾಗ್ಗೆ ರೈಲು ಅಪಘಾತಗಳ ಸುದ್ದಿ ವರದಿ ಯಾಗುತ್ತಿತ್ತು. ಆದರೆ ಕಳೆದ ಎಂಟು ವರ್ಷಗಳಲ್ಲಿ ರೈಲ್ವೆಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಮಾನವರಹಿತ ಕ್ರಾಸಿಂಗ್‌ಗಳಲ್ಲಿ ಎಡೆ ಗೇಟ್ ಅಳವಡಿಸ ಲಾಗಿದೆ. ಜಿಪಿಎಸ್ ತಂತ್ರಜ್ಞಾನದ ಮೂಲಕ ಒಂದೇ ಹಳಿಗಳ ಮೇಲೆ ಓಡುತ್ತಿರುವ ರೈಲುಗಳ ನಿಖರ ಮಾಹಿತಿಗಳಿಂದ ಅಪಘಾತ ಸಾಧ್ಯತೆ ಕಡಿಮೆ ಮಾಡ ಲಾಗಿದೆ. ರೈಲು ಹಳಿಗಳ ಸಮರ್ಪಕ ನಿರ್ವಹಣೆಯಿಂದ ರೈಲುಗಳು ಹಳಿ ತಪ್ಪುವುದನ್ನು ನಿಯಂತ್ರಿಸಲಾಗಿದೆ.

ವಿದೇಶಗಳ ಮಾದರಿಯ ಸುಸಜ್ಜಿತ ರೈಲುಗಳ ಕಲ್ಪನೆ ಸಹ ‘ವಂದೇ ಭಾರತ್’ ರೈಲುಗಳ ಮೂಲಕ ಸಾಕಾರವಾಗುತ್ತಿದೆ. ವಿದೇಶಿ ರೈಲುಗಳಿಗೆ ಸಮನಾದ ವೇಗ ಹಾಗೂ ಗುಣ ಮಟ್ಟಕ್ಕನುಗುಣವಾದ ಮೂರು ವರ್ಷಗಳಲ್ಲಿ ಸುಮಾರು 400 ‘ವಂದೇ ಭಾರತ್’ರೈಲುಗಳು ಇನ್ನು ಮುಂದೆ ದೇಶದಾದ್ಯಂತ ಸಂಚರಿಸಲಿವೆ ಎಂದು ಘೋಷಿಸಲಾಗಿದೆ. ರೈತರನ್ನು ಸ್ವಾವಲಂಬಿಯನ್ನಾಗಿಸುವ ವಿಚಾರದಲ್ಲಿ ನರೇಂದ್ರ ಮೋದಿ ತೆಗೆದುಕೊಂಡಂಥ ನಿರ್ಧಾರಗಳನ್ನು ಯಾರೂ ತೆಗೆದುಕೊಂಡಿಲ್ಲ. ಸ್ವಾಮಿನಾಥನ್ ವರದಿ ಅನುಷ್ಠಾನಕ್ಕಾಗಿ ಸದಾ ಬೊಬ್ಬೆ ಹೊಡೆಯುವ ಒಂದಷ್ಟು ರೈತ ಮುಖಂಡರು ತಿಳಿಯಬೇಕಿರುವ ವಿಷಯವೆಂದರೆ, 2018 ರಲ್ಲಿ ಸ್ವತಃ ಸ್ವಾಮಿನಾಥನ್ ಪತ್ರಿಕೆಯೊಂದಕ್ಕೆ ಬರೆದಿರುವ ಅಂಕಣದಲ್ಲಿ ತಮ್ಮ ವರದಿಯನ್ನು ಅತೀ ಹೆಚ್ಚು ಅನುಷ್ಠಾನಗೊಳಿಸಿರುವುದು ನರೇಂದ್ರ ಮೋದಿಯೆಂದು ಹೇಳಿ ದ್ದಾರೆ.

ಟ್ವೀಟ್ ಮಾಡಿಯ ಮೋದಿಯವರನ್ನು ಹೊಗಳಿದ್ದಾರೆ. ರೈತರಿಗೆ ಸಾಲ ಮನ್ನಾ ಬದಲು ಅವರ ಖಾತೆಗಳಿಗೆ ನೇರವಾಗಿ ಸುಮಾರು 180000 ಕೋಟಿಯಷ್ಟು ಹಣವನ್ನು ಇದುವರೆಗೂ ವರ್ಗಾಯಿಸಲಾಗಿದೆ. ಒಂದು ಕಾಲದಲ್ಲಿ ದೇಶದಲ್ಲಿ ರಸಗೊಬ್ಬರದ ವಿಚಾರಕ್ಕೆ ನೂರಾರು ಪ್ರತಿಭಟನೆಗಳು ನಡೆಯುತ್ತಿದ್ದವು. ಆದರೆ ಕಳೆದ ಎಂಟು ವರ್ಷಗಳಿಂದ ಎಲ್ಲಿಯೂ ಇಂಥ ಪ್ರತಿಭಟನೆಗಳಿಲ್ಲ. ಕಳೆದ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರದ ಬೆಲೆ ಹೆಚ್ಚಾದಾಗ ಸಂಪೂರ್ಣ ಬೆಲೆ ಏರಿಕೆಯನ್ನು ಸಹಾಯಧನದ ಮೂಲಕ ಭರಿಸಲಾಗಿತ್ತು.

ತೈವಾನ್ ಹಾಗೂ ಸಿಂಗಾಪುರದಲ್ಲಿ ಸೆಮಿ ಕಂಡಕ್ಟರ್‌ಗಳು ಹೆಚ್ಚಾಗಿ ಉತ್ಪಾದನೆಯಾಗುತ್ತವೆ. ಜಗತ್ತಿನ ಬೇಡಿಕೆಯ ಸುಮಾರು ಶೇ.94 ರಷ್ಟು ಸೆಮಿ ಕಂಡಕ್ಟರ್‌ ಗಳು ತೈವಾನ್ ಒಂದರಲ್ಲೇ ಉತ್ಪಾದನೆಯಾಗುತ್ತಿದೆ. ಭಾರತದ ಎಲೆಕ್ಟ್ರಾನಿಕ್ ಉದ್ಯಮ ತೈವಾನ್ ಮೇಲೆ ಸಂಪೂರ್ಣ ಅವಲಂಬಿತವಾಗಿದೆ. ವಿಪರ್ಯಾಸ ವೆಂದರೆ ಸೆಮಿ ಕಂಡಕ್ಟರ್‌ಗಳ ಸಂಶೋಧಕರು ಹೆಚ್ಚು ಭಾರತದಲ್ಲಿದ್ದಾರೆ. ಆದರೆ ಈ ಸಂಶೋಧನೆ ಆಧರಿಸಿ ತೈವಾನ್‌ನಲ್ಲದು ಉತ್ಪಾದನೆ ಯಾಗುತ್ತದೆ. ಇದಕ್ಕೆ ಕಾರಣ ಸೆಮಿಕಂಡರ್ ಕಾರ್ಖಾನೆ ಸ್ಥಾಪನೆಗೆ ಬೃಹತ್ ಪ್ರಮಾಣದ ಬಂಡವಾಳ ಬೇಕು.

ಇದೀಗ ನಮ್ಮಲ್ಲಿ ಸೆಮಿ ಕಂಡಕ್ಟರ್ ಉತ್ಪಾದನೆ ಹೆಚ್ಚಿಸಲು 75 ಸಾವಿರ ಕೋಟಿಯ ಬೃಹತ್ ಯೋಜನೆಯನ್ನು ಕೆಲ ತಿಂಗಳುಗಳ ಹಿಂದೆ ಘೋಷಿಸಲಾಯಿತು. ಈ ಯೋಜನೆಯ ಸಫಲತೆಯಿಂದ ಕೋಟ್ಯಂತರ ಜನರಿಗೆ ಉದ್ಯೋಗ ಸಿಗಲಿದ್ದು, ಎಲೆಕ್ಟ್ರಾನಿಕ್ಸ್ ಉಪಕರಣಗಳ ಆಮದಿನಲ್ಲಿ ಗಣನೀಯ ಕಡಿಮೆಯಾಗುವುದರಲ್ಲಿ
ಯಾವುದೇ ಅನುಮಾನವಿಲ್ಲ. ಈ ರೀತಿಯ ಹಲವು ಯೋಜನೆಗಳು ‘ಆತ್ಮ ನಿರ್ಭರ ಭಾರತ’ದ ಆರ್ಥಿಕ ವ್ಯವಸ್ಥೆಯ ಭದ್ರ ಬುನಾದಿಗೆ ಸಾಕ್ಷಿಯಾಗಿವೆ.