ವಿಶ್ಲೇಷಣೆ
ಪ್ರಕಾಶ್ ಶೇಷರಾಘವಾಚಾರ್
ಕರೋನಾ ಕಾಲದಲ್ಲಿ ಜೀವನೋತ್ಸಾಹವೇ ಬತ್ತಿ ಹೋಗಿ ಮುಂದಿನ ಭವಿಷ್ಯವೇನು ಎಂಬುದು ಯಕ್ಷ ಪ್ರಶ್ನೆಯಾಗಿತ್ತು. ಹಲವಾರು ಉದ್ದಿಮೆಗಳು ಕರೋ
ನಾ ಹೊಡತಕ್ಕೆ ತತ್ತರಿಸಿ ಹೋಗಿದ್ದವು. ಸಾವಿರಾರು ಕೈಗಾರಿಕೆಗಳು ಮತ್ತು ವ್ಯಾಪಾರಗಳು ಬಾಗಿಲು ಹಾಕಿದ್ದವು.
ಸಾವಿರಾರು ಜನ ಕೆಲಸ ಕಳೆದುಕೊಂಡು ಅತಂತ್ರರಾಗಿದ್ದರು. ಇಂತಹ ಸಂದಿಗ್ಧ ಸಮಯದಲ್ಲಿ ಮೋದಿಯವರು ದೇಶಕ್ಕೆ ನೀಡಿದ ಮಂತ್ರವೇ ಆತ್ಮನಿರ್ಭರ ಭಾರತ. ಚೀನಾದಿಂದ ಆಮದಾದ ಕರೋನಾ ವೈರಸ್ ದೇಶಕ್ಕೆ ಬರ ಸಿಡಿಲಿನಂತೆ ಅಪ್ಪಳಿಸಿತು. ವಿಪರ್ಯಾಸವೆಂದರೆ, ಇದರ ವಿರುದ್ದ ಹೋರಾಡುವುದಕ್ಕೆ ಚೀನಾದಿಂದಲೇ ಆಮದು ಮಾಡಿಕೊಂಡ ಔಷಧ ಮತ್ತು ಉಪಕರಣಗಳ ಮೇಲೆ ಅವಲಂಬಿತವಾಗಬೇಕಿತ್ತು. ಇದೇ ವೇಳೆ ಚೀನಾ ಡೊಕ್ಲಾಮ್ ನಲ್ಲಿ ಭಾರತೀಯ ಸೇನೆಯೊಂದಿಗೆ ಕಲಹಕ್ಕೆ ಮುಂದಾಗುವುದು. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗುತ್ತದೆ. ಭಾರತ ಕರೋನ ಜತೆಗೆ ಚೀನಾ ಸೇನೆಯ ಉಪಟಳದೊಂದಿಗೂ ಸೆಣಸಬೇಕಾದ ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತದೆ.
ಭಾರತಕ್ಕೆ ಇಂಥ ಕಠಿಣ ಸಮಯದಲ್ಲಿ ನರೇಂದ್ರ ಮೋದಿಯಂತಹ ದೂರದೃಷ್ಟಿ ಚಿಂತನೆಯುಳ್ಳ ಗಟ್ಟಿ ನಾಯಕತ್ವ ಇತ್ತು. ಸಂಕಟದ ಸಮಯವನ್ನು ಅವಕಾಶವಾಗಿ ಬಳಸಿಕೊಂಡು ದೇಶಕ್ಕೆ ಆತ್ಮನಿರ್ಭರತೆಯ ಮಂತ್ರವನ್ನು ನೀಡಿ ಭಾರತವನ್ನು ವಿಶ್ವವೇ ಮೆಚ್ಚುವ ಹಾಗೆ ಮುನ್ನಡೆಸಿದ ಕೀರ್ತಿ ಪ್ರಧಾನಿ ಯವರಿಗೆ ಸಲ್ಲುತ್ತದೆ. ೨೦೨೦ರ ಮೊದಲು ಪ್ರಾಯಶಃ ಬಹುತೇಕ ಜನರು ಆತ್ಮನಿರ್ಭರ ಭಾರತ ಶಬ್ಧವನ್ನು ಕೇಳಿರುವುದೇ ಅನುಮಾನ. ಇದರರ್ಥ ವಿದೇಶಿ ಕಂಪನಿಗಳ ಬಹಿಷ್ಕರವಲ್ಲ. ಭಾರತದಲ್ಲಿ ಉತ್ಪಾದಿಸಿದ ಪದಾರ್ಥಗಳನ್ನು ಹೆಚ್ಚು ಬಳಕೆ ಮಾಡುವುದನ್ನು ಉತ್ತೇಜಿಸುವುದು. ದಶಕಗಳ ಹಿಂದೆ ಮೇಡ್ ಇನ್ ಇಂಡಿಯಾ ಪ್ರಯೋಗ ನಡೆಯಿತು. ಆರ್ಥಿಕ ಉದಾರೀಕರಣ ವಾಗದೆ ಈ ಪರಿಕಲ್ಪನೆ ನಿಂತ ನೀರಾಗಿತ್ತು.
೯೧ರ ತರುವಾಯ ಪಿ.ವಿ.ನರಸಿಂಹರಾಯರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ದೇಶವನ್ನು ಪಾರು ಮಾಡಲು ದೇಶದ ಬಾಗಿಲನ್ನು ವಿದೇಶಿ ಬಂಡವಾಳ ಹೂಡಿಕೆದಾರರಿಗೆ ತೆರೆಯಲಾಯಿತು. ಪರ್ಮಿಟ್ ಮತ್ತು ಲೈಸೆನ್ಸ್ ರಾಜ್‌ಗೆ ಇತಿಶ್ರೀ ಹಾಡಿದರು. ಆರ್ಥಿಕ ಉದಾರೀಕರಣದ ಫಲ ವಿದೇಶಿ ಕಂಪನಿಗಳು
ಭಾರತಕ್ಕೆ ದಾಂಗುಡಿ ಇಡಲಾರಂಭಿಸಿದವು. ಅಂಬಾಸೆಡರ್ ಮತ್ತು ಪ್ರೀಮಿಯರ್ ಪದ್ಮಿನಿ ಪ್ರಪಂಚದಿಂದ ಹೊರಬಂದು ನವನಾವೀನ್ಯ ಕಾರುಗಳನ್ನು ಭಾರತೀಯರು ನೋಡುವಂತಾಯಿತು.
ಆರ್ಥಿಕ ಸುಧಾರಣೆಯು ಆಮೆ ವೇಗದಲ್ಲಿ ಮುಂದುವರೆದಿತ್ತು. ಅಸ್ಥಿರ ಸರಕಾರಗಳು ಒಂದು ಹೆಜ್ಜೆ ಮುಂದೆ ಹೋದರೆ ನಾಲ್ಕು ಹೆಜ್ಜೆ ಹಿಂದಕ್ಕೆ ಎಳೆಯ ಲಾಗುತ್ತಿತ್ತು. ೯೯ರಲ್ಲಿ ಅಧಿಕಾರಕ್ಕೆ ಬಂದ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರಕಾರವು ನಿಧಾನವಾಗಿ ಒಂದೊಂದೇ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆಯ ತೊಡಗಿತು. ಬಿಳಿಯಾನೆಗಳಾಗಿದ್ದ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿ ತೆರಿಗೆ ಹಣವನ್ನು ಉಳಿಸಿದರು. ೨೦೦೪ರಲ್ಲಿ ಮನಮೋಹನ ಸಿಂಗ್ ಸರಕಾರವು ಕಮ್ಯುನಿಸ್ಟರ ಕಪಿಮುಷ್ಠಿಗೆ ಸಿಲುಕಿತ್ತು. ಸೋನಿಯಾ ನೇತೃತ್ವದ ರಾಷ್ಟ್ರೀಯ ಸಲಹಾ ಸಮಿತಿ ಎಡಪಂಥೀಯ ಅಜೆಂಡಾಗೆ ಹೆಚ್ಚು ಒಲವು ತೋರಿ ಆರ್ಥಿಕ ಉದಾರೀಕರಣದ ಪ್ರಕ್ರಿಯೆಗೆ ಹೊಡೆತ ಕೊಟ್ಚರು. ಸರಕಾರವು ರಿಮೋಟ್ ಕಂಟ್ರೋಲ್‌ನಲ್ಲಿ ನಡೆಯುತ್ತಿದ್ದ ಕಾರಣ ಭ್ರಷ್ಟಾಚಾರ ಮುಗಿಲು ಮುಟ್ಟಿತ್ತು.
2014ರಲ್ಲಿ ಮೋದಿ ಸರಕಾರ ಬಂದ ತರುವಾಯ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಆರಂಭಿಸಿದರು. ದೇಶೀಯ ಉತ್ಪಾದನೆಗಿಂತ ದೇಶದಲ್ಲಿ ಉತ್ಪಾದನೆ ಮಾಡಲು ಉತ್ತೇಜಕರ ಕೈಗಾರಿಕಾ ಸ್ನೇಹಿ ನೀತಿಯನ್ನು ಜಾರಿಗೆ ತಂದರು. ಸುಲಭ ವ್ಯಾಪಾರ ಮೌಲ್ಯಾಂಕನದಲ್ಲಿ ಭಾರತ 100 ರಿಂದ
63ರ ಸ್ಥಾನಕ್ಕೆ ಬಂದಿತು. ಆತ್ಮನಿರ್ಭರತೆಯನ್ನು ರಕ್ಷಣಾ ವಲಯದಲ್ಲಿ ಸಾಧಿಸಲು ರಕ್ಷಣಾ ಉಪಕರಣ ಖರೀದಿಗೆ ದೇಶೀಯ ಉತ್ಪಾದನೆಗೆ ಆದ್ಯತೆಯನ್ನು ನೀಡಲಾಗಿದೆ. ಭಾರತದ ರಕ್ಷಣಾ ಇಲಾಖೆಯ ಬಜೆಟ್ 5.25 ಲಕ್ಷ ಕೋಟಿ. ಈ ಬಾರಿಯ 22-23ರ ಮುಂಗಡ ಪತ್ರದಲ್ಲಿ ಶೇ.64ರಷ್ಟು ರಕ್ಷಣಾ ಉಪಕರಣ ಗಳನ್ನು ದೇಶೀಯವಾಗಿ ಖರೀದಿಸಲು ನಿರ್ಧರಿಸಲಾಗಿದೆ.
ಈಗಾಗಲೇ ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ರಕ್ಷಣಾ ಸಂಬಂಧಿತ ಉಪಕರಣಗಳನ್ನು ಉತ್ಪಾದಿಸುವ ರಕ್ಷಣಾ ಕಾರಿಡಾರ್ ಗಳನ್ನು ಕಾರ್ಯಾ ರಂಭ ಮಾಡಿವೆ. ಭಾರತೀಯ ರಕ್ಷಣಾ ಉತ್ಪಾದನಾ ಕಂಪನಿಗಳಿಗೆ ಇದೀಗ ಶುಕ್ರದೆಸೆಯ ಸಮಯವಾಗಿದೆ. ಆತ್ಮನಿರ್ಭರತೆಯ ಫಲ ರಷ್ಯಾ ನಿರ್ಮಿತ ಎಕೆ- 203 ಕಲಾಶ್ನಿಕೋವ್ ರೈಫಲ್ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಉತ್ಪಾದನೆ ಆರಂಭವಾಗಿದೆ. ಬೆಳೆಕಾಳುಗಳು ಮತ್ತು ತಾಳೆ ಎಣ್ಣೆಯ ಬೆಲೆಗಳು ಗಗನಕ್ಕೇರಿದಾಗ ದೇಶೀಯವಾಗಿ ಸ್ವಾವಲಂಬನೆ ಸಾಽಸಲು ಉತ್ತೇಜನಕರ ನೀತಿಯನ್ನು ಜಾರಿಗೆ ತರಲಾಯಿತು. ೨೫-೨೬ರೊಳಗೆ ೬.೫ಲಕ್ಷ ಹೆಕ್ಟೇರ್ ತಾಳೆಗಿಡ ನೆಡುವ ಗುರಿಯನ್ನು ಹೊಂದಲಾಗಿದೆ.
ಬೇಳೆ ಕಾಳುಗಳ ಉತ್ಪಾದನೆಯಲ್ಲಿ ಆತ್ಮನಿರ್ಭರತೆಯನ್ನು ಸಾಽಸಿದ ಫಲವಾಗಿ ದೇಶಕ್ಕೆ ೧,೫೦೦೦ಕೋಟಿ ರು. ವಿದೇಶಿ ವಿನಿಮಯ ಉಳಿತಾಯವಾಗಿದೆ. ಭಾರತದ ಆತ್ಮನಿರ್ಭರತೆಗೆ ಅತ್ಯುತ್ತಮ ಉದಾಹರಣೆಯೆಂದರೆ ಕೋವಿಡ್ ಸೋಂಕಿಗೆ ದೇಶೀಯವಾಗಿ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದು. ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲು ೧೪ ಕ್ಷೇತ್ರಗಳಿಗೆ ೨.೩೪ ಲಕ್ಷ ಕೋಟಿ ರು. ಮೊತ್ತದ ಉತ್ಪಾದನಾ ಉತ್ತೇಜನಕರ ಯೋಜನೆಯನ್ನು ಸರಕಾರ ಜಾರಿಗೆ ತಂದಿ
ರುವುದು. ಈ ಯೋಜನೆಯ -ಲವಾಗಿ ವಿದೇಶಿ ಬಂಡವಾಳ ಹರಿದು ಬಂದಿದೆ. ಉತ್ಪಾದನಾ ಘಟಕಗಳು ಆರಂಭವಾಗಿ ಯುವಕರಿಗೆ ಉದ್ಯೋಗ ದೊರೆಯುವಂತಾಗಿದೆ.
ದೇಶೀಯ ಉತ್ಪಾದನೆಯಿಂದ ಆಮದು ಕಡಿಮೆಯಾಗಿ ವಿದೇಶಿ ವಿನಿಮಯ ಉಳಿತಾಯವಾಗುತ್ತಿದೆ. ನವೋದ್ಯಮಗಳ ಬೆಳವಣಿಗೆಯು ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಮಹತ್ವ ಪೂರ್ಣ ಕೊಡುಗೆಯನ್ನು ನೀಡುತ್ತಿದೆ. ಕೇಂದ್ರ ಸರಕಾರವು ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ ಜಾರಿಗೆ ತಂದು ಹಲವಾರು ರಿಯಾಯಿತಿಗಳನ್ನು ನೀಡಿದ ಪರಿಣಾಮ ವಿಶ್ವದಲ್ಲಿ ಎರಡನೆ ಅತಿ ಹೆಚ್ಚು ನವೋದ್ಯಮಗಳು ಭಾರತದಲ್ಲಿ ಆರಂಭವಾಗಿದೆ.
ನವೋದ್ಯಮವು ನೂರು ಬಿಲಿಯನ್ ಡಾಲರ್ ಮೌಲ್ಯವಾದಾಗ ಅದನ್ನು ಯೂನಿಕಾರ್ನ್ ಎಂದು ಕರೆಯಲಾಗುವುದು ಈಗ ಭಾರತದಲ್ಲಿ ೧೦೦ ಯೂನಿಕಾರ್ನ್ ಗಳು ಇದ್ದು ಪ್ರಪಂಚದಲ್ಲಿ ನಾಲ್ಕನೆ ಸ್ಥಾನದಲ್ಲಿದ್ದೇವೆ. ತೆರಿಗೆ ರಿಯಾಯಿತಿ ಕೇವಲ ದೇಶೀಯವಾಗಿ ಉತ್ಪಾದಿಸುವ ವಿದೇಶಿ ಕಂಪನಿಗಳಿಗೆ ನೀಡಲಾಗುತ್ತಿದೆ. ಆಪಲ್‌ಗೆ ತನ್ನ ಮಾರಾಟ ಮಳಿಗೆ ತೆರೆಯಲು ಕೇಂದ್ರ ಸರಕಾರದ ನಿಬಂಧನೆಗಳನ್ನು ಪಾಲಿಸಿದಾಗ ಮಾತ್ರ ಅನುಮತಿ ದೊರೆತಿದ್ದು.
ಇಂದು ಐ ಫೋನ್-೧೩ ಸಹಾ ಭಾರತದಲ್ಲಿ ತಯಾರಿಯಾಹುತ್ತಿದೆ. ಪೆಟ್ರೋಲಿಯಂ ಪದಾರ್ಥಗಳ ಕ್ಷೇತ್ರದಲ್ಲಿ ಆಮದು ಮೇಲೆ ಅವಲಂಬನೆ ಕಡಿಮೆ ಮಾಡಲು ಎಥಾನಲ್ ಉತ್ಪಾದನೆಗೆ ಉತ್ತೇಜಿಸಲಾಗುತ್ತಿದೆ. ವಿದ್ಯುತ್ ವಾಹನಗಳ ಉತ್ಪಾದನೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಹೈಡ್ರೋಜನ್
ಇಂಧನ ಬಳಸಿ ವಾಹನ ಚಾಲನೆ ಪ್ರಯೋಗ ಯಶಸ್ವಿಯಾಗಿದೆ.
ಪರ್ಯಾಯ ಇಂಧನವನ್ನು ಸ್ಥಳೀಯವಾಗಿಯೇ ಕಂಡುಕೊಂಡು ಇಂಧನ ಕ್ಷೇತ್ರದಲ್ಲಿಯೂ ಆತ್ಮನಿರ್ಭರತೆಗೆ ಆದ್ಯತೆ ದೊರೆಯುತ್ತಿದೆ. ಎಲಾನ್ ಮಸ್ಕ್ ತನ್ನ ವಿದ್ಯುತ್ ಕಾರನ್ನು ಭಾರತದಲ್ಲಿ ಮಾರಾಟ ಮಾಡಲು ಕೇಂದ್ರ ಸರಕಾರವನ್ನು ತೆರಿಗೆ ವಿನಾಯಿತಿ ಕೇಳುತ್ತಲೇ ಇzರೆ. ಬಿಡಿಭಾಗಗಳನ್ನು ತಂದು
ಇಲ್ಲಿಯೇ ಜೋಡಣೆ ಮಾಡಿ ಮಾರಾಟ ಮಾಡಿದರೆ ವಿನಾಯಿತಿ ದೊರೆಯುವುದು, ಕಾರು ಆಮದು ಮಾಡಿದರೆ ದೊರೆಯುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಯಿತು.
ದೇಶೀಯವಾಗಿ ಆರಂಭಿಸಿದ ರುಪೇ ಕಾರ್ಡ್ ಜನಪ್ರಿಯತೆಯಿಂದ ಕಂಗಾಲಾಗಿರುವ ಜಗತ್ತಿನ ಕ್ರೆಡಿಟ್ ಕಾರ್ಡ್ ದೈತ್ಯ ವೀಸಾ ಅಮೆರಿಕ ಸರಕಾರದ ಬಳಿ ತನ್ನ ಗೋಳು ಹೇಳಬೇಕಾಯಿತು. ಇದು ಆತ್ಮನಿರ್ಭರತೆಯ ತಾಕತ್ತು. ಕೋವಿಡ್ ಮಹಾಮಾರಿಯನ್ನು ಮೆಟ್ಟಿ ನಿಂತು ಭಾರತೀಯ ಉದ್ಯಮಗಳು ೨೧-೨೨ರಲ್ಲಿ ದಾಖಲೆಯ ೪೦೦ಬಿಲಿಯನ್ ಮೀರಿದ ರಫ್ತು ಮಾಡಿರುವುದು ಆತ್ಮನಿರ್ಭರ ಭಾರತದ ಯಶಸ್ಸಿನ ದ್ಯೋತಕವಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರ ಕಳೆದ ಎಂಟು ವರ್ಷದಲ್ಲಿ ಅಭೂತಪೂರ್ವ ಬೆಳವಣಿಗೆಯನ್ನು ಕಂಡಿದೆ.
೨೧-೨೨ರಲ್ಲಿ ೯೫ಸಾವಿರ ಕೋಟಿ ಆದಾಯ ಗಳಿಸಿದೆ. ಕಳೆದ ಎಂಟು ವರ್ಷಕ್ಕೆ ಹೋಲಿಕೆ ಮಾಡಿದರೆ ಶೇಕಡಾ ೨೦೦ ರಷ್ಟು ಹೆಚ್ಚಳವಾಗಿದೆ. ಭಾರತದ ಪ್ರತಿಷ್ಠಿತ ವಂದೇ ಭಾರತ ಎಕ್ಸ್‌ಪ್ರೆಸ್ ರೈಲು ಉತ್ಪಾದನೆಯಲ್ಲಿ ಕೇವಲ ದೇಶೀಯವಾಗಿ ತಯಾರು ಮಾಡುವ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಚೀನಾ ಕಂಪನಿಗಳನ್ನು ಭಾಗವಹಿಸಲು ನಿರ್ಬಂಧಿಸಲಾಗರುವುದರಿಂದ ಭಾರತೀಯ ಮೂಲದ ಕಂಪನಿಗಳು ಇದನ್ನು ವಿಶ್ವದರ್ಜೆ ಗುಣಮಟ್ಟದಲ್ಲಿ ಈಗ ತಯಾರು ಮಾಡುತ್ತಿದ್ದಾರೆ.
ನಮ್ಮ ಬೆಂಗಳೂರು ರೈಲು ನಿಲ್ದಾಣದಲ್ಲಿ ಚನ್ನಪಟ್ಟಣ ಗೊಂಬೆಗಳ ಮಾರಾಟ ಮಳಿಗೆ ತೆರೆಯಲಾಗಿದೆ. ಭಾರತ ೨೦೨೦ರಲ್ಲಿ ೧.೫ ಬಿಲಿಯನ್ ಆಟದ ಬೊಂಬೆಗಳನ್ನು ಚೀನಾದಿಂದ ಆಮದು ಮಾಡಿಕೊಂಡಿತ್ತು. ಆಟದ ಬೊಂಬೆಗಳನ್ನು ಸ್ಥಳೀಯವಾಗಿ ಉತ್ಪಾದಿಸಲು ದೇಶದಲ್ಲಿ ?೨,೩೦೦ ಕೋಟಿ ವೆಚ್ಚದಲ್ಲಿ ಎಂಟು ಬೊಂಬೆ ಉತ್ಪಾದನಾ ಸಮೂಹವನ್ನು ಅನುಮೋದಿಸಿತು. ನಮ್ಮ ರಾಜ್ಯದ ಕೊಪ್ಪಳದಲ್ಲಿ ಬೊಂಬೆ ಉತ್ಪಾದನಾ ಸಮೂಹ ತಲೆಯೆತ್ತಿರುವುದು. ಕೋವಿಡ್ ನಂತರ ಉಂಟಾಗಿದ್ದ ಆರ್ಥಿಕ ಹೊಡೆತವನ್ನು ಹಣ ಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರು ಅನುಷ್ಠಾನ ಗೊಳಿಸಿದ ಆತ್ಮನಿರ್ಭರ ಪ್ಯಾಕೇಜ್ ಆರ್ಥಿಕ ಸುಧಾರಣೆಗೆ ಸಹಾಯಕವಾಯಿತು ಎಂದು ಡೆಲಾಯ್ಟ ಕಂಪನಿಯು ಮಾಡಿದ ಸಮೀಕ್ಷೆಯಿಂದ ಬಯಲಾ ಗಿದೆ.
ಮೋದಿಯವರು ಆತ್ಮ ನಿರ್ಭರತೆಯ ಚಿಂತನೆಯನ್ನು ಕೇವಲ ಭಾಷಣಕ್ಕೆ ಮೀಸಲಿಟ್ಟಿಲ್ಲ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಭಾರತವನ್ನು ಉತ್ಪಾದನಾ ದೇಶವನ್ನು ಮಾಡುವ ಪ್ರಯತ್ನದಲ್ಲಿ ಆತ್ಮನಿರ್ಭರ ಭಾರತವು ಬಹುದೊಡ್ಡ ಹೆಜ್ಜೆಯಾಗಿರುವುದು.