ಪ್ರಚಲಿತ
ಪ್ರಕಾಶ್ ಶೇಷರಾಘವಾಚಾರ್
ಇದೀಗ ಆತ್ಮನಿರ್ಭರ ಭಾರತ ಅಭಿಯಾನವು ರಕ್ಷಣಾ ಇಲಾಖೆಯ ಮೂಲ ಮಂತ್ರವಾಗಿರುವ ಕಾರಣ ದೇಶೀಯ ರಕ್ಷಣಾ ಉದ್ಯಮಗಳಿಗೆ ವರವಾಗಿದೆ. 2022- 23ರ ಮುಂಗಡ ಪತ್ರದಲ್ಲಿ ರಕ್ಷಣಾ ಇಲಾಖೆಗೆ ನೀಡಿರುವ ಅನುದಾನ 5 ಲಕ್ಷ ಕೋಟಿ ಮೀರಿದೆ. 2.7 ಲಕ್ಷ ಕೋಟಿ ರಕ್ಷಣಾ ಉಪಕರಣಗಳನ್ನು ಖರೀದಿಸಲು ಬಳಸಲಾಗುತ್ತದೆ.
ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಭಾರತ ಅಭಿಯಾನದ ಯಶಸ್ಸು ಹಿಂದೆಂದಿಗಿಂತಲೂ ಪ್ರಸಕ್ತ ವಾತಾವರಣದಲ್ಲಿ ಹೆಚ್ಚು ಅಗತ್ಯವಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಫಲವಾಗಿ ಭಾರತದ ಶಸ್ತ್ರಾಸ್ತ್ರ ಸರಬರಾಜಿನ ಮೇಲೆ ದೀರ್ಘಕಾಲೀನ ಪರಿಣಾಮ ಬೀರುವುದು ಖಚಿತ. ಭಾರತ ತನ್ನ ರಕ್ಷಣಾ ಬೇಡಿಕೆಗಳಿಗೆ ದಶಕಗಳಿಂದ ರಷ್ಯಾ ಮೇಲೆ ವಿಪರೀತವಾಗಿ ಅವಲಂಬಿತವಾಗಿದೆ.
ಒಂದು ಅಂದಾಜಿನ ಪ್ರಕಾರ ಶೇಕಡ ೬೦ರಷ್ಟು ರಕ್ಷಣಾ ಅಗತ್ಯಗಳನ್ನು ನಾವು ರಷ್ಯಾದಿಂದ ಖರೀದಿಸುತ್ತೇವೆ. ಇದೀಗ ನ್ಯಾಟೋ ಮತ್ತು ಇತರ ಮುಂದುವರೆದ ರಾಷ್ಟ್ರಗಳು ರಷ್ಯಾ ಮೇಲೆ ವಿಧಿಸಿರುವ ಆರ್ಥಿಕ ದಿಗ್ಬಂಧನದ ಕಾರಣ ಭಾರತವು ತನ್ನ ಅಗತ್ಯಗಳಿಗೆ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಅನಿವಾರ್ಯ ವಾಗಿದೆ. 2014ರ ತರುವಾಯ ಭಾರತ ತನ್ನ ರಕ್ಷಣಾ ಅಗತ್ಯಗಳಿಗೆ ದೇಶೀಯವಾಗಿ ಉತ್ಪಾದಿಸುವುದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿತು ಮತ್ತು ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳು ತಮ್ಮ ಮುಚ್ಚಿದ್ದ ಬಾಗಿಲನ್ನು ಭಾರತಕ್ಕೆ ತೆರೆದ ಕಾರಣ ನಿಧಾನವಾಗಿ ತನ್ನ ಗಮನ ಅತ್ತ ಕಡೆಯೂ ಹರಿಸತೊಡಗಿತು.
ಮೇಕ್ ಇನ್ ಇಂಡಿಯಾ ಉಪಕ್ರಮ ದಡಿಯಲ್ಲಿ ವಿದೇಶಿ ಕಂಪನಿಗಳು ಭಾರತದಲ್ಲಿ ಉತ್ಪಾದನೆ ಮಾಡಲು ಉತ್ತೇಜನ ನೀಡಲಾಯಿತು ಮತ್ತು ಕರೋನಾ ಸಂಕಟದ ಸಮಯದಲ್ಲಿ ತನ್ನ ಕಾಲ ಮೇಲೆ ತಾನು ನಿಲ್ಲಬೇಕಾದ ಕಟು ಸತ್ಯದ ಅರಿವಾದ ತರುವಾಯ ಪ್ರಧಾನಿ ಮೋದಿಯವರು ದೇಶಕ್ಕೆ ಆತ್ಮನಿರ್ಭರ ಭಾರತದ ನೀತಿಯನ್ನು ಬಲವಾಗಿ ಪ್ರತಿಪಾದಿಸಿದರು. ಇದೀಗ ಆತ್ಮನಿ ರ್ಭರ ಭಾರತ ಅಭಿಯಾನವು ರಕ್ಷಣಾ ಇಲಾಖೆಯ ಮೂಲ ಮಂತ್ರವಾಗಿರುವ ಕಾರಣ ದೇಶೀಯ ರಕ್ಷಣಾ ಉದ್ಯಮಗಳಿಗೆ ವರವಾಗಿದೆ. 2022-23ರ ಮುಂಗಡ ಪತ್ರದಲ್ಲಿ ರಕ್ಷಣಾ ಇಲಾಖೆಗೆ ನೀಡಿರುವ ಅನುದಾನ 5 ಲಕ್ಷ ಕೋಟಿ ಮೀರಿದೆ.
ಬಜೆಟ್‌ನ 2.7 ಲಕ್ಷ ಕೋಟಿ ರಕ್ಷಣಾ ಉಪಕರಣಗಳನ್ನು ಖರೀದಿಸಲು ಬಳಸಲಾಗುತ್ತದೆ. ರಕ್ಷಣಾ ಇಲಾಖೆಯ ಶೇ.68ರಷ್ಟು ಅಗತ್ಯಗಳನ್ನು ದೇಶೀಯ ಉದ್ಯಮ ಗಳಿಂದಲೇ ಖರೀದಿಸಲು ನಿರ್ಧರಿಸಲಾಗಿದೆ. 2021-22ರಲ್ಲಿ 40000 ಕೋಟಿಯಷ್ಟು ಭಾರತದ ಉದ್ದಿಮೆಗಳೊಂದಿಗೆ ಕರಾರು ಮಾಡಿಕೊಳ್ಳ ಲಾಗಿದೆ ಮತ್ತು 2024ರೊಳಗೆ 1.75 ಲಕ್ಷ ಕೋಟಿ ವಹಿವಾಟು ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರವರು ತಿಳಿಸಿದ್ದಾರೆ.
ಭಾರತ ರಕ್ಷಣಾ ಉಪಕರಣಗಳನ್ನು ದೇಶೀಯವಾಗಿಯೇ ಖರೀದಿಸಲು ಕಳೆದ ಅನೇಕ ದಶಕಗಳಿಂದ ಪ್ರಯತ್ನಗಳು ನಡೆಯುತ್ತಿದ್ದರೂ ಹೆಚ್ಚಿನ ಯಶಸ್ಸು ದೊರೆ ತಿರಲಿಲ್ಲ. ಮೋದಿ ಸರಕಾರ ಇದರ ಚಿತ್ರಣ ಬದಲಾಯಿಸಿದೆ. ಆತ್ಮನಿರ್ಭರ ಭಾರತ ಅಭಿಯಾನ ಇಂದು ರಕ್ಷಣಾ ಇಲಾಖೆಯ ಖರೀದಿಯಲ್ಲಿ ಸ್ವಾವಲಂಬನೆ ಯ ಮಂತ್ರದ ಧ್ವನಿಗೆ ಆನೆ ಬಲ ನೀಡಿದೆ. ಆತ್ಮನಿರ್ಭರ ಭಾರತದ ಅಭಿಯಾನದ ಫಲವಾಗಿ ರಕ್ಷಣಾ ಕ್ಷೇತ್ರದಲ್ಲಿ ಸುಧಾರಿತ ತಂತ್ರಜ್ಞಾನಗಳು ಹೊಸ ಹೊಸ ವಿನ್ಯಾಸಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸುವುದು ಮತ್ತು ಅವುಗಳ ಉತ್ಪಾದಿಸುವ ಸಾಮರ್ಥ್ಯವು ವೃದ್ಧಿಯಾಗುತ್ತಿದೆ. ದೇಶದ ರಕ್ಷಣೆಯ ವಿಚಾರದಲ್ಲಿ ಕಿಂಚಿತ್ತೂ ರಾಜಿ ಮಾಡಿಕೊಳ್ಳದೆ ಸೇನೆಯ ಆಧುನೀಕರಣ ಕೈಗೊಳ್ಳುತ್ತಿರುವ ಹಾಗೆಯೇ ದೇಶೀಯವಾಗಿಯು ಉತ್ಪಾದಿಸಲು ಹೊಸ ಹೊಸ ಕೈಗಾರಿಕೆಗಳನ್ನು ಉತ್ತೇಜಿಸಲು ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ಗುರುತಿಸಲಾಗಿರುವ ಡಿಫೆನ್ಸ್ ಕಾರಿಡಾರ್ ರಕ್ಷಣಾ ಉತ್ಪಾದನೆಗೆ ಸಂಬಂಽಸಿದ ಉದ್ಯಮಗಳ ಸ್ಥಾಪನೆಗೆ ಹೊಸ ಆಯಾಮ ನೀಡಿದೆ.
90ರ ದಶಕದಲ್ಲಿ ಅಮೆರಿಕ ಭಾರತಕ್ಕೆ ಸೂಪರ್ ಕಂಪ್ಯೂಟರ್ ಖರೀದಿಸಲು ನಿರ್ಬಂಧ ಹಾಕಿತ್ತು. ಆದರೆ ಭಾರತೀಯ ವಿಜ್ಞಾನಿಗಳು ಇದನ್ನು ಸವಾಲಾಗಿ ಸ್ವೀಕರಿಸಿ ದೇಶೀಯವಾಗಿ ಪರಮ ಸೂಪರ್ ಕಂಪ್ಯೂಟರ್ ಅಭಿವೃದ್ಧಿಪಡಿಸಿದರು. ಬಲಾಢ್ಯ ರಾಷ್ಟ್ರಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಅಥವಾ ಉಪಕರಣಗಳನ್ನು ಸರಬರಾಜು ಮಾಡಲು ಒಡ್ಡುವ ನಿಬಂಧನೆಗಳು ದೇಶದ ರಕ್ಷಣಾ ಆಧುನೀಕರಣಕ್ಕೆ ಅಡ್ಡಿಯಾಗುವ ಕಾರಣ ಭಾರತ ದೇಶೀಯವಾಗಿ ಅಭಿವೃದ್ಧಿ ಪಡಿಸಿ ಉತ್ಪಾದಿಸಿ ಈ ಕೊರತೆ ಯನ್ನು ನೀಗಿಸಿಕೊಳ್ಳಲು ಮಹತ್ತರ ಹೆಜ್ಜೆ ಇಟ್ಟಿರುವುದು. ಭಾರತದಲ್ಲಿಯೇ ನೌಕಾ ಪಡೆಗೆ ಬೇಕಾದ ಹೆಲಿಕಾಪ್ಟರ್, ಗಸ್ತು ಹಡಗುಗಳು, ಹಡಗು ನಿರೋಧಕ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಭಾರತದಲ್ಲಿ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗಿದೆ.
ದೇಶೀಯವಾಗಿಯೇ ಆರು ಜಲಾಂತರ್‌ಗಾಮಿಗಳನ್ನು ಉತ್ಪಾದಿಸಲು 43000 ಕೋಟಿ ಯೋಜನೆಗೆ ಅನುಮೋದನೆ ದೊರತಿದೆ. ಜಲ ಶಕ್ತಿಯನ್ನು ಗಣನೀಯ ವಾಗಿ ಹೆಚ್ಚಿಸಲು ಇದರಿಂದ ಉಪಯೋಗವಾಗುವುದು. ಏಳು ರಕ್ಷಣಾ ಸಾರ್ವಜನಿಕ ಉದ್ದಿಮೆಗಳನ್ನು ವಿಲೀನ ಮಾಡಿ ಕಾರ್ಪೋರೇಟ್ ಶೈಲಿಯ ಆಡಳಿತವನ್ನು ತಂದ ಕಾರಣ ಬಿಳಿಯಾನೆಗಳಾಗಿದ್ದ ಈ ೭ ಉದ್ದಿಮೆಗಳ ಪೈಕಿ ಈಗ ೬ ಉದ್ದಿಮೆಗಳು ತಮ್ಮ ವಹಿವಾಟು ಹೆಚ್ಚಿಸಿಕೊಂಡು ಲಾಭವನ್ನು ದಾಖಲಿಸಿದೆ.
ಬೋಫೋರ್ಸ್‌ಗೆ ಸಮನಾದ ಹೌಟ್ಜ್‌ರ್ ಆರ್ಟಿಲರಿ ಗನ್ ಧನುಷ್ ಸೇನೆಗೆ ಸೇರ್ಪಡೆಯಾಗಿದೆ. ಈಗಾಗಲೇ ದೇಶದ ಗಡಿ ಭಾಗದಲ್ಲಿ ಇವನ್ನು ಸ್ಥಾಪಿಸಲಾಗಿದೆ.
ಮತ್ತೊಂದು ದೇಶೀಯವಾಗಿ ಅಭಿವೃದ್ಧಿ ಪಡಿಸಿ ಉತ್ಪಾದನೆ ಮಾಡುವ ಪ್ರಯತ್ನ ಯಶಸ್ವಿಯಾಗಿದೆ. ಸಾರ್ವಜನಿಕ ಉದ್ದಿಮೆಗಳನ್ನು ಸರಕಾರ ಕಡೆಗಣಿಸುತ್ತಿದೆ ಎಂದು ಅಂಕಿ ಅಂಶವಿಲ್ಲದೆ ಟೀಕಿಸುತ್ತಿದ್ದವರಿಗೆ ದಿಗ್ಭ್ರಾಂತಿ ಮಾಡುವ ಹಾಗೆ ರಕ್ಷಣಾ ಉಪಕರಣಗಳ ಉತ್ಪಾದಿಸುವ ಸಾರ್ವಜನಿಕ ಉದ್ದಿಮೆಗಳು ಕಳೆದ ಮೂರು ವರ್ಷದಲ್ಲಿ ೧,೫೨,೨೭೫ ಕೋಟಿ ಮೌಲ್ಯದ ಉತ್ಪಾದನೆ ಮಾಡಿರುವ ಮಾಹಿತಿಯನ್ನು ಕೇಂದ್ರ ರಕ್ಷಣಾ ರಾಜ್ಯ ಸಚಿವ ಅಜಯ್ ಭಟ್ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಹೆಚ್.ಎ.ಎಲ್. ಮುಚ್ಚಲು ಹುನ್ನಾರ ನಡೆಯುತ್ತಿದೆ ಎಂದು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ದೊಡ್ಡ ಗುಬ್ಬಿಸಿದರು, ಆದರೆ ಇಂದು ಹೆಚ್.ಎ.ಎಲ್. ಭಾರತೀಯ ಸೇನೆಗೆ ಲಘು ಯುದ್ಧ ಹೆಲಿಕಾಪ್ಟರ್ ಸರಬರಾಜು ಮಾಡುತ್ತಿದೆ ಮತ್ತು ೪೮,೦೦೦ ಕೋಟಿ ವೆಚ್ಚದಲ್ಲಿ ೮೩ ತೇಜಸ್ ಹಗುರ ಯುದ್ಧ ವಿಮಾನಗಳನ್ನು
ಖರೀದಿಸಲು ಆದೇಶ ಪಡೆದಿದೆ. ೨೨-೨೩ರಲ್ಲಿ ಹೆಚ್ .ಎ.ಎಲ್. ಒಂದು ಲಕ್ಷ ಕೋಟಿ ರಕ್ಷಣಾ ಉಪಕರಣಗಳ ಆದೇಶ ಪಡೆಯುವ ನಿರೀಕ್ಷೆಯಿರುವುದು. ಮತ್ತೊಂದು ಸಾರ್ವಜನಿಕ ಉದ್ದಿಮೆ ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಒಟ್ಟು ಉಪಕರಣಗಳ ಸರಬರಾಜಿಗೆ ಪಡೆದಿರುವ ಆದೇಶ ೫೩,೦೦೦ಕೋಟಿ ದಾಟಿದೆ.
ಭಾರತವು ಇಂದು ದೇಶೀಯವಾಗಿ ನ್ಯೂಕ್ಲಿಯರ್ ಜಲಾಂತರ್‌ಗಾಮಿ ತಯಾರು ಮಾಡುವ ಪ್ರತಿಭೆಗಳನ್ನು ಮತ್ತು ತಂತ್ರeನವನ್ನು ಹೊಂದಿದೆ. ಇದಲ್ಲದೆ, ವಿಮಾನವಾಹಕ ಯುದ್ಧ ಹಡಗುಗಳನ್ನು ನಿರ್ಮಾಣ ಮಾಡಲು ಶಕ್ತವಾಗಿದೆ. ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ದೇಶೀಯವಾಗಿ ನಿರ್ಮಾಣಗೊಂಡ ಐ.ಎನ್.ಎಸ್. ವಿಕ್ರಾಂತ್ ಏರ್ ಕ್ರಾಫ್ಟ್ ಕೆರಿಯರ್ ತನ್ನ ಮೊದಲನೆಯ ಸಂಚಾರ ಆರಂಭಿಸಿ ಹೊಸ ಇತಿಹಾಸ ಬರೆದಿದೆ. ಇದರ ನಿರ್ಮಾಣದಲ್ಲಿ ಶೇಕಡಾ ೭೬ರಷ್ಟು ದೇಶೀಯ ವಸ್ತುಗಳನ್ನು ಬಳಸಿ ಆತ್ಮ ನಿರ್ಭರ ಭಾರತಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.
ಆತ್ಮನಿರ್ಭರ ಭಾರತ ಅಭಿಯಾನದ ಫಲವಾಗಿ ದೇಶೀಯವಾಗಿ ಉತ್ಪಾದನೆಗೆ ಉತ್ತೇಜನ ದೊರೆಯುತ್ತಿರುವುದರಿಂದ ಭಾರತೀಯ ಉದ್ದಿಮೆಗಳಿಗೆ ಕೈತುಂಬಾ ಕೆಲಸ ದೊರೆತಿದೆ ಮತ್ತು ಸಾವಿರಾರು ಜನರಿಗೆ ಉದ್ಯೋಗ ಲಭ್ಯವಾಗಿದೆ. ಇದಲ್ಲದೆ, ದೇಶೀಯವಾಗಿ ಖರೀದಿಸುತ್ತಿರುವ ಕಾರಣ ಆಮದು ಕಡಿಮೆಯಾಗಿ ವಿದೇಶಿ ವಿನಿಮಯವು ಉಳಿತಾಯವಾಗುತ್ತಿದೆ. ಆತ್ಮನಿರ್ಭರ ಭಾರತದ ಯೋಜನೆಯ ಭಾಗವಾಗಿ ರಷ್ಯಾದ ಅಓ-೨೦೩ ಅಸಾಲ್ಟರೈಫಲ್ ಭಾರತದಲ್ಲಿ ಉತ್ಪಾದಿಸಲು ಒಪ್ಪಂದವಾಗಿದೆ.
ಆರು ಲಕ್ಷ ರೈಫಲ್‌ಗಳನ್ನು ಅಮೇಥಿಯ ಸಮೀಪದ ಕಾವಾದ ರಕ್ಷಣಾ ಕಾರಿಡಾರ್‌ನಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಕಾನ್ಪುರದ Iಓಖಿ ಠಿb., ಮೂಲಕ ದೇಶೀಯವಾಗಿ ಉತ್ಪಾದಿಸಿದ ೧,೫೮,೦೦೦ ಗುಂಡು ನಿರೋಧಕ ಹೆಲ್ಮೆಟ್ ಖರೀದಿ ಮತ್ತು ದೇಶದಲ್ಲೇ ಉತ್ಪಾದಿಸಿದ ಹಗುರವಾದ ೧,೮೬,೦೦೦ ಬುಲೆಟ್‌ಪ್ರೂಫ್ ಜಾಕೆಟ್ ಖರೀದಿಸಲಾಗಿದೆ. ಆತ್ಮನಿರ್ಭರ ಭಾರತದ ಫಲವಾಗಿ ಭಾರತೀಯ ಉತ್ಪಾದಕರಿಗೆ ಹಿಂದೆಂದು ಇಲ್ಲದ ಬೇಡಿಕೆಯು ಸೃಷ್ಟಿಯಾಗಿದೆ.
ಮತ್ತೊಂದು ಸಂತಸದ ಸಂಗತಿಯೆಂದರೆ ರಕ್ಷಣಾ ಉತ್ಪನ್ನಗಳನ್ನು ನಮಗೆ ಕೇವಲ ಆಮದು ಮಾಡಿಕೊಳ್ಳಲು ಮಾತ್ರ ತಿಳಿದಿದ್ದು ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ ಭಾರತ ರಫ್ತು ಕೂಡಾ ಮಾಡಲು ಆರಂಭಿಸಿದೆ.
೨೦೧೪ರಲ್ಲಿ ಭಾರತ ಕೈಗೊಂಡ ರಫ್ತು ಮೊತ್ತ ಕೇವಲ ೧,೯೪೧ ಕೋಟಿಗಳು ೨೧-೨೨ರಲ್ಲಿ ಅದು ಆರು ಪಟ್ಟು ಹೆಚ್ಚಳವಾಗಿ ೧೧,೬೦೭ ಕೋಟಿ ತಲುಪಿದೆ. ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಬ್ರಹ್ಮೋಸ್ ಮಿಸೈಲ್ ಈಗ ಫಿಲಿಪೈನ್ಸ್‌ಗೆ ರಫ್ತಾಗಲಿದೆ. ನಂಬಲು ಕಷ್ಟವಾದ ಸಂಗತಿಯೆಂದರೆ, ದೇಶದ ಗಡಿಗಳನ್ನು
ಕಾಪಾಡುವ ಸೈನ್ಯದ ಪ್ರಧಾನ ಕಚೇರಿಯು ಕಳೆದ ೭೫ವರ್ಷದಿಂದ ದೆಹಲಿಯಲ್ಲಿ ಎರಡನೆ ವಿಶ್ವಯುದ್ಧದ ಸಮಯದಲ್ಲಿ ಬ್ರಿಟಿಷರು ಕಟ್ಟಿದ್ದ ಕುದುರೆ ಲಾಯದಲ್ಲಿತ್ತು.
ಸೆಂಟ್ರಲ್ ವಿಸ್ಟಾ ಯೋಜನೆಯಲ್ಲಿ ಸೇನೆಯ ೭,೦೦೦ ಸಿಬ್ಬಂದಿಗಳಿಗೆ ನೂತನವಾದ ಎರಡು ಅತ್ಯಾಧುನಿಕ ಸೌಲಭ್ಯವುಳ್ಳ ಕಟ್ಟಡವನ್ನು ನಿರ್ಮಿಸಿ ಸೇನಾ ಕಚೇರಿಗಳಿಗೆ ಕುದುರೆ ಲಾಯದಿಂದ ಮುಕ್ತಿ ನೀಡಲು ಮೋದಿ ಸರಕಾರವು ಬರಬೇಕಾಯಿತು.
ಈ ದೇಶದಲ್ಲಿ ದೇಶಕ್ಕಾಗಿ ಮಡಿದ ಯೋಧರಿಗೆ ಸೂಕ್ತವಾದ ಸ್ಮಾರಕವಿರಲಿಲ್ಲ. ಮೋದಿಯವರು ಪ್ರಧಾನಿಯಾದ ತರುವಾಯ ಈ ಕೊರತೆ ನೀಗಿಸುವ ಪವಿತ್ರವಾದ ಕೆಲಸವನ್ನು ಮಾಡಿದ್ದಾರೆ. ದೆಹಲಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣ ಮಾಡಿ ಹುತಾತ್ಮ ಯೋಧರಿಗೆ ಸಲ್ಲಬೇಕಾದ ಸೂಕ್ತ ಗೌರವವನ್ನು ಅರ್ಪಿಸಿದ್ದಾರೆ. ಒಂದು ಶ್ರೇಣಿಗೆ ಒಂದು ಪಿಂಚಣಿ, ನಿವೃತ್ತಿಯ ದಿನಾಂಕವನ್ನು ಲೆಕ್ಕಿಸದೆ ಪಿಂಚಣಿ ನೀಡುವುದೇ uuP. ಇದು ಸೇನೆಯ ಬಹುದಿನಗಳ ಬೇಡಿಕೆ ಯಾಗಿತ್ತು. ದಶಕಗಳ ಬೇಡಿಕೆಯನ್ನು ಮೋದಿ ಸರಕಾರವು ಈಡೇರಿಸಿತು.
ಮೂರೂ ಸೇನಾಪಡೆಗಳ ಸೇನಾ ಮುಖ್ಯಸ್ಥರಾಗಿ ಜನರಲ್ ರಾವತ್‌ರನ್ನು ನೇಮಕ ಮಾಡಲಾಗಿತ್ತು ಜನರಲ್ ರಾವತ್‌ರವರ ಅಕಾಲಿಕ ಮೃತ್ಯು ಆಗದಿದ್ದರೆ
ಈಗಾಗಲೇ ಮೂರು ಸೇನಾಪಡೆಗಳ ಏಕೀಕೃತ ಆಜ್ಞೆಯ ವ್ಯವಸ್ಥೆಯು ಪ್ರಾಯಶಃ ಜಾರಿಗೆ ಬಂದಿರುತ್ತಿತ್ತು. ಮೋದಿ ಸರಕಾರವು ಸೈನ್ಯಕ್ಕೆ ನೀಡಿರುವ ಸ್ವಾತಂತ್ರ ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ. ಹೀಗಾಗಿಯೇ ಡೊಕ್ಲಮ್ ಮತ್ತು ಗಾಲ್ವಾನ್ ಪ್ರದೇಶದಲ್ಲಿ ಚೀನಾ ಉಪಟಳವನ್ನು ಭಾರತೀಯ ಸೇನೆಯು ಸೇರಿಗೆ ಸವ್ವಾಸೇರು ಮಾದರಿಯಲ್ಲಿ ಎದುರಿಸಿ ಚೀನಿ ಸೈನಿಕರಿಗೆ ತಕ್ಕ ಉತ್ತರ ನೀಡಿದ್ದಾರೆ.
ಭಾರತವು ಇಂದು ಬದಲಾಗುತ್ತಿರುವ ಜಗತ್ತಿನ ಪರಿಸ್ಥಿತಿಗೆ ಅನುಗುಣವಾಗಿ ದೇಶದ ಹಿತಾಸಕ್ತಿಯನ್ನು ಮತ್ತು ದೇಶದ ಗಡಿಯನ್ನು ಕಾಪಾಡಬೇಕಾಗಿದೆ. ಹೀಗಾಗಿ ಸಂಕಟದ ಸಮಯದಲ್ಲಿ ಯಾವ ಕಾಲಕ್ಕೂ ಭಾರತ ಅಸಹಾಯಕ ಪರಿಸ್ಥಿತಿ ಎದುರಿಸದಿರಲು ದೇಶವನ್ನು ಸಶಕ್ತವಾಗಿ ಸನ್ನದ್ಧಗೊಳಿಸಲು ಆತ್ಮನಿರ್ಭರ ಭಾರತ ಅಭಿಯಾನ ದೇಶದ ರಕ್ಷಣಾ ಕ್ಷೇತ್ರಕ್ಕೆ ದಾರಿ ದೀಪವಾಗಿದೆ.