Thursday, 12th December 2024

ಅವನತಿಯ ಹಾದಿ ಹಿಡಿಯುತ್ತಿರುವ ಅವಧಿ ಭಾಷೆ

ಶಶಾಂಕಣ

shashidhara.halady@gmail.com

ಉತ್ತರ ಭಾರತದಲ್ಲಿ ಅಧಿಕಾರ ಹೊಂದಿದವರ ಭಾಷೆಯಾದ ಹಿಂದಿಯ ಹೇರಿಕೆಯ ಎದುರು, ಜನಸಾಮಾನ್ಯರ ಭಾಷೆಯಾಗಿದ್ದ ಅವಽ ಕಳೆದುಹೋಗಿದೆ! ಅವಧಿಯು ಅನ್ನ ನೀಡುವ ಭಾಷೆಯಾಗಿ ಮುಂದುವರಿಯಲಿಲ್ಲ; ಆದ್ದರಿಂದ ಅದು ‘ಅಡುಗೆ ಮನೆ’ ಭಾಷೆಯಾಗಿ ರೂಪಾಂತರ ಹೊಂದಿದೆ! ವರ್ತಮಾನದಲ್ಲಿ ಭಾಷೆಯೊಂದು ಅನ್ನನೀಡುವ ಭಾಷೆಯಾಗದಿದ್ದರೆ, ಅಧಿಕಾರದ ಬೆಂಬಲ, ಅಂತಾರಾಷ್ಟ್ರೀಯ ಮಾನ್ಯತೆ ಇರುವ ಭಾಷೆಗಳೆದುರು ಅದು ನಿಧಾನವಾಗಿ ಮೂಲೆ ಗುಂಪಾಗುತ್ತದೆ ಎನ್ನುತ್ತಾರೆ ಪ್ರಾಜ್ಞರು.

ಅವಧಿ ಎಂಬ ಹೆಸರಿನ ಒಂದು ಭಾಷೆ ಇದೆ ಎಂಬುದು ದಕ್ಷಿಣ ಭಾರತದ ನಮಗೆ ಸ್ಪಷ್ಟವಾಗಿ ಗೊತ್ತಿಲ್ಲ! ನಾನೇ ನಡೆಸಿದ ಒಂದು ಪುಟ್ಟ ಸರ್ವೇ ಇದಕ್ಕೆ ಪೂರಕ ವಾಗಿದೆ. ಬಹು ಪುರಾತನ ಎನಿಸಿರುವ ಅಯೋಧ್ಯೆ ರಾಜ್ಯಕ್ಕೆ ಸಂಬಂಧ ಹೊಂದಿರುವ ಭಾಷೆ ಇದು. ಅಯೋಧ್ಯೆ ಅಥವಾ ಅಯೋಧ್ಯ ಎಂಬ ಹೆಸರು, ಹಲವು ಶತಮಾನಗಳ ನಂತರ ನಿಧಾನವಾಗಿ ಅವಧ್, ಔಧ್ ಎಂದೆಲ್ಲಾ ಬದಲಾಯಿತು; ಔಧ್ ಎಂಬ, ತುಸು ವಿಚಿತ್ರ ಎನಿಸುವ, ಮೂಲ ಅಯೋಧ್ಯಕ್ಕೆ ಸಂಬಂಧವೇ ಇಲ್ಲದಂತೆ ತೋರುವ ಪದ ಹೆಚ್ಚು ಪ್ರಚುರ ಗೊಳ್ಳಲು ಬ್ರಿಟಿಷರ ಪದಬಳಕೆ ಮತ್ತು ಉಚ್ಚಾರವೂ ಕಾರಣ- ಮಡಿಕೇರಿಯು ಮರ್ಕೆರಾ ಆದಂತೆ! ಅವಧ್ ಅಥವಾ ಔಧ್ ಪ್ರಾಂತ್ಯದಲ್ಲಿ ಬಳಕೆಯಲ್ಲಿರುವ ಭಾಷೆಯೇ ಅವಧಿ.

ಇಂದು ಅವಧಿ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೦ರಿಂದ ೪೦ ಲಕ್ಷ ಎಂದು ಅಧಿಕೃತ ಅಂಕಿ-ಅಂಶ ಸಾರುತ್ತಿದ್ದರೂ, ಎರಡು- ಮೂರು ಶತಮಾನಗಳ ಮುಂಚೆ ಈ ಭಾಷೆಯನ್ನು ೨ ಕೋಟಿಗಿಂತಲೂ ಅಧಿಕ ಜನರು ಮಾತನಾಡುತ್ತಿದ್ದರು ಎಂದು ಬ್ರಿಟಿಷ್ ಆಡಳಿತ ಕಾಲದ ದಾಖಲೆಗಳು, ಅಧ್ಯಯನಗಳು ಗುರುತಿಸಿವೆ. ಕೋಟಿಕೋಟಿ ಜನರಾಡುತ್ತಿದ್ದ ಈ ಭಾಷೆ ಇಂದು ಅದೇಕೆ ಮೂಲೆ ಗುಂಪಾಯಿತು? ಅಷ್ಟೊಂದು ಜನರ ಅಽಕೃತ ಭಾಷೆಯಾಗಿದ್ದ ಅವಧಿಯನ್ನು ಇಂದು ಕೇವಲ ಸುಮಾರು ೪೦ ಲಕ್ಷ ಜನರು ಮಾತ್ರ ಬಳಸುತ್ತಿದ್ದಾರೆ ಎಂದಾದರೆ, ಅದೇಕೆ ಆ ಭಾಷೆ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತು?

ಉತ್ತರ ಸ್ಪಷ್ಟ: ಉತ್ತರ ಭಾರತದಲ್ಲಿ ಅಧಿಕಾರ ಹೊಂದಿದವರ ಭಾಷೆಯಾದ ಹಿಂದಿಯ ಹೇರಿಕೆಯ ಎದುರು, ಜನಸಾಮಾನ್ಯರ ಭಾಷೆಯಾಗಿದ್ದ ಅವಧಿ ಕಳೆದು
ಹೋಗಿದೆ! ಅವಽಯು ಅನ್ನ ನೀಡುವ ಭಾಷೆಯಾಗಿ ಮುಂದುವರಿಯಲಿಲ್ಲ; ಆದ್ದರಿಂದ ಅದು ‘ಅಡುಗೆ ಮನೆ’ ಭಾಷೆಯಾಗಿ ರೂಪಾಂತರ ಹೊಂದಿದೆ! ಈಗಿನ
ಆಧುನಿಕ ಕಾಲದಲ್ಲಿ, ಒಂದು ಭಾಷೆಯು ಅನ್ನ ನೀಡುವ ಭಾಷೆಯಾಗಬೇಕು, ಇಲ್ಲವಾದರೆ, ಇತರ ಅನ್ನ ನೀಡುವ, ಅಧಿಕಾರದ ಬೆಂಬಲ ಇರುವ, ಅಂತಾರಾಷ್ಟ್ರೀಯ ಮಾನ್ಯತೆ ಇರುವ ಭಾಷೆಗಳ ಎದುರು ಆ ಭಾಷೆಯು ನಿಧಾನವಾಗಿ ಮೂಲೆಗುಂಪಾಗುತ್ತದೆ ಎಂಬ, ಕೆಲವು ಪ್ರಾಜ್ಞರ ಎಚ್ಚರಿಕೆಯ ಮಾತುಗಳ ಹಿನ್ನೆಲೆಯಲ್ಲಿ, ಅವಧಿ ಭಾಷೆಯ ರೂಪಾಂತರವನ್ನು ಗಮನಿಸಬೇಕಾಗುತ್ತದೆ.

ಅವಧಿ ಭಾಷೆ ಎಷ್ಟು ಪುರಾತನ? ತುಸು ಬಿಡುಬೀಸಾಗಿ ಹೇಳಬೇಕೆಂದರೆ, ಅಯೋಧ್ಯೆ ಎಂಬ ಹೆಸರಿನಷ್ಟೇ ಪುರಾತನ ಈ ಅವಧಿ. ಭಾಷೆಯ ಹೆಸರಿನ ಮೂಲ
ಸ್ಪಷ್ಟವಿದೆ: ಅಯೋಧ್ಯೆ ಪ್ರದೇಶದಲ್ಲಿ ಮಾತನಾಡುವ ಭಾಷೆಯೇ ಅವಧಿ. ಹಾಗೆಂದು, ಇದು ಸಹಸ್ರಾರು ವರ್ಷಗಳಿಂದಲೇ ಬಳಕೆಯಲ್ಲಿತ್ತು ಎಂದು ಸಾಧಿಸಲು
ಬರುವುದಿಲ್ಲ. ಅವಧ್ ಪ್ರಾಂತ್ಯದಲ್ಲಿ ಮತ್ತು ಈಗಿನ ನೇಪಾಳದ ಕೆಲವು ಪ್ರದೇಶಗಳಲ್ಲಿ ಅವಧಿ ಭಾಷೆಯ ಬಳಕೆಯು ಹಿಂದೆ ವ್ಯಾಪಕವಾಗಿತ್ತು, ಈಗಲೂ ಸಾಕಷ್ಟು
ಇದೆ. ಅವಧಿಯನ್ನು ಇಂಡೋ ಆರ್ಯನ್ ಭಾಷೆಯ ಗುಂಪಿಗೆ ಸೇರಿಸಿದ್ದಾರೆ.

ಅವಧಿ, ಬಘೇಲಿ, ಛತ್ತೀಸ್‌ಗಡಿ ಭಾಷೆಗಳು ಒಂದೇ ಮೂಲದ ಭಾಷೆಯಿಂದ ರೂಪುಗೊಂಡವು ಎಂದು ಭಾಷಾ ತಜ್ಞರು ಗುರುತಿಸಿದ್ದಾರೆ. ಬ್ರಿಜ್ ಭಾಷೆ, ಅರ್ಧ ಮಾಗಧಿ ಮೊದಲಾದ ಭಾಷೆಗಳಿಗೆ ಸಮೀಪ ಎನಿಸಿರುವ ಅವಧಿಯು, ಹಿಂದಿನ ಕಾಲದಲ್ಲಿ ಕೋಟಿಗಿಂತಲೂ ಹೆಚ್ಚು ಜನರ ಆಡುಭಾಷೆಯಾಗಿತ್ತು ಎಂಬುದು ಸ್ಪಷ್ಟ. ಈಚಿನ ದಶಕಗಳಲ್ಲಿ, ಇದನ್ನು ಹಿಂದಿಯ ಉಪಭಾಷೆ ಎಂದು ಹೇಳುವ ಪದ್ಧತಿ ಬೆಳೆದು ಬಂದಿದೆಯಾದರೂ, ಇದು ಹಳ್ಳಿ ಜನರ ಭಾಷೆ ಎಂದು ಸಿನಿಮಾಗಳಲ್ಲಿ ತೋರಿಸುವ ಚಾಳಿ ಮುಂದುವರಿದಿದ್ದರೂ, ಅವಧಿಯು ಒಂದು ಪ್ರತ್ಯೇಕ ಭಾಷೆ ಎಂಬುದನ್ನು ಭಾಷಾ ತಜ್ಞರು ಸ್ಪಷ್ಟವಾಗಿ ಗುರುತಿಸಿದ್ದಾರೆ.

ಅವಧಿ ಭಾಷೆಯಲ್ಲಿ ಹಲವು ಪುರಾತನ ಕಾವ್ಯಗಳು ರಚಿಸಲ್ಪಟ್ಟಿರುವುದು ವಿಶೇಷ ಮತ್ತು ಇದು ಈ ಭಾಷೆಯ ಪ್ರಾಮುಖ್ಯವನ್ನು ತೋರಿಸುತ್ತದೆ. ತುಳಸೀದಾಸರು
(೧೫೩೨-೧೬೨೩) ‘ರಾಮಚರಿತ ಮಾನಸ’ ಮತ್ತು ‘ಹನುಮಾನ್ ಚಾಳೀಸಾ’ವನ್ನು ಅವಽ ಭಾಷೆಯಲ್ಲಿ ರಚಿಸಿದರು. ‘ರಾಮಚರಿತ ಮಾನಸ’ ಕಾವ್ಯವನ್ನು, ನಮ್ಮ ದೇಶದ ಪ್ರಮುಖ ಸಾಹಿತ್ಯಕೃತಿಗಳಲ್ಲಿ ಒಂದು ಎಂದೇ ಪರಿಗಣಿಸಲಾಗಿದೆ. ಜತೆಗೆ, ‘ರಾಮಚರಿತ ಮಾನಸ’ವು ಉತ್ತರ ಭಾರತದ ಜನಸಾಮಾನ್ಯರ ಬದುಕನ್ನು ರೂಪಿಸುವಲ್ಲಿ, ಜನರು ಇಂದು ವರ್ತಿಸುವ ರೀತಿಯ ಮೇಲೆ ಪ್ರಬಲ ಪರಿಣಾಮ ಬೀರಿದೆ ಎಂದು ಹಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೋಟ್ಯಂತರ ಜನರನ್ನು ತಲುಪಬೇಕೆಂಬ ಪ್ರಮುಖ ಉದ್ದೇಶದಿಂದಲೇ, ತುಳಸೀ ದಾಸರು, ಆ ಕಾವ್ಯವನ್ನು ಅವಧಿ ಭಾಷೆಯಲ್ಲಿ ರಚಿಸಿದರು ಎಂಬುದು ಸ್ಪಷ್ಟ.

ತುಳಸೀದಾಸರು ‘ರಾಮಚರಿತ ಮಾನಸ’ವನ್ನು ರಚಿಸಲು ಅವಧಿ ಭಾಷೆಯನ್ನು ಏಕೆ ಆರಿಸಿಕೊಂಡರು ಎಂಬುದು ಸಹ ಬಹಳ ಕುತೂಹಲಕಾರಿ ವಿಚಾರ.
ಅಂದಿನ ದಿನಗಳಲ್ಲಿ ಪಂಡಿತರು, ರಾಜಾಶ್ರಯ ಹೊಂದಿದವರು ಮುಖ್ಯವಾಗಿ ಸಂಸ್ಕೃತದಲ್ಲಿ ಕಾವ್ಯ ರಚಿಸುತ್ತಿದ್ದರು. ತುಳಸಿದಾಸರು ಸಂಸ್ಕೃತದಲ್ಲಿ ಪ್ರಕಾಂಡ ಪಂಡಿತ ರಾಗಿದ್ದರು; ವೇದಗಳನ್ನು, ಉಪನಿಷತ್ತುಗಳನ್ನು ಸಂಸ್ಕೃತ ದಲ್ಲಿ ಅಧ್ಯಯನ ಮಾಡಿದವರಾಗಿದ್ದರು. ಅವರು ವಾಸ ವಾಗಿದ್ದುದು ಸಹ, ಸಂಸ್ಕೃತ ಅಧ್ಯಯನದ ಪ್ರಮುಖ ಕೇಂದ್ರವಾಗಿದ್ದ ವಾರಾಣಸಿಯಲ್ಲಿ. ಪ್ರತಿದಿನ ಸಂಸ್ಕೃತ ಪಂಡಿತರನ್ನು ಎದುರಿಸಬೇಕಾದ ಸನ್ನಿವೇಶ. ಆದರೂ ಅವರು ಅವಽ ಭಾಷೆಯಲ್ಲಿ ಕಾವ್ಯ ರಚಿಸಿದ್ದು ಬಹಳ ಪ್ರಮುಖ ವಿಚಾರ. ಸಂಸ್ಕೃತ ಕಾವ್ಯಗಳಾದ ಮಹಾಭಾರತ, ರಾಮಾಯಣ ಮೊದಲಾದವುಗಳ ಸಾರವನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಅವರು ವಾಲ್ಮೀಕಿ ರಾಮಾಯಣವನ್ನು ಆಧರಿಸಿ, ‘ರಾಮಚರಿತ ಮಾನಸ’ವನ್ನು ಅವಽ ಭಾಷೆಯಲ್ಲಿ ರಚಿಸಿದರು ಎಂಬುದು ಸ್ಪಷ್ಟ.

ತಂದೆ ತಾಯಿಯರ ಆಶ್ರಯ ತಪ್ಪಿ, ಕಷ್ಟದಲ್ಲಿ ದಿನಸವೆಸಿ, ಬದುಕನ್ನು ಕಟ್ಟಿಕೊಂಡ ತುಳಸೀ ದಾಸರಿಗೆ, ಜನಸಾಮಾನ್ಯರ ಸಂಪರ್ಕವಿತ್ತು, ಅವರ ಮನಸ್ಸಿನ ಪರಿಚಯವಿತ್ತು; ಆದ್ದರಿಂದಲೇ, ಜನರ ಭಾಷೆ ಯಲ್ಲಿ ಕಾವ್ಯ ಬರೆಯಲು ನಿರ್ಧರಿಸಿದರು. ಸಂಸ್ಕೃತದಲ್ಲಿ ರಚಿಸುವ ಬದಲು, ಜನಸಾಮಾನ್ಯರ ಭಾಷೆಯಾದ
ಅವಽಯಲ್ಲಿ ಕಾವ್ಯ ರಚಿಸಿದ್ದಕ್ಕಾಗಿ, ಅವರು ಪಂಡಿತ ವಲಯದಿಂದ ವ್ಯಂಗ್ಯಕ್ಕೆ, ತಮಾಷೆಗೆ ಒಳಗಾಗಿರುವುದನ್ನು ಗುರುತಿಸಲಾಗಿದೆ. ಅದೇನೇ ಇದ್ದರೂ,
ಕೋಟ್ಯಂತರ ಜನರ ಭಾಷೆಯಾಗಿದ್ದ ಅವಽಯಲ್ಲಿ ರಾಮಚರಿತ ಮಾನಸವನ್ನು ರಚಿಸಿ, ಅವರು ಜನರ ಮನಸ್ಸಿನಲ್ಲಿ ನೆಲೆಸಿದರು, ಮಾತ್ರವಲ್ಲ ಒಂದು
ಜನಾಂಗದ ಕಣ್ಣು ತೆರೆಸಿದರು, ತಲೆಮಾರುಗಳ ಮೇಲೆ ಪ್ರಭಾವ ಬೀರಿದರು.

ಅವರು ಹನುಮಾನ್ ಚಾಳೀಸ ವನ್ನು ಮತ್ತು ಇತರ ಆರೆಂಟು ಕೃತಿಗಳನ್ನು ಅವಽ ಭಾಷೆಯಲ್ಲೂ, ಇನ್ನಷ್ಟು ಕೃತಿಗಳನ್ನು ಜನಸಾಮಾನ್ಯರ ಇನ್ನೊಂದು ಭಾಷೆಯಾದ ಬೃಜಭಾಷೆಯಲ್ಲೂ ರಚಿಸಿದ್ದಾರೆ. ೨೦೧೭ರಲ್ಲಿ ಬಿಡುಗಡೆಗೊಂಡ ‘ಪದ್ಮಾವತ್’ ಚಲನ ಚಿತ್ರದ ವಿಚಾರವನ್ನು ನೀವು ಕೇಳಿರಬಹುದು; ರಾಣಿ
ಪದ್ಮಾವತಿಯ ಕಥೆಯನ್ನು ಬಿಂಬಿಸುವ ಈ ಚಿತ್ರವನ್ನು, ಮೂಲ ‘ಪದ್ಮಾವತ್’ ಎಂಬ ಕಾವ್ಯವನ್ನಾಧರಿಸಿ ನಿರ್ಮಿಸಲಾಗಿದೆ. ಮಾಲಿಕ್ ಮುಹಮ್ಮದ್ ಜಯಾಸಿ ಎಂಬ ಸೂಫಿ ಕವಿಯು ೧೫೪೦ರಲ್ಲಿ ‘ಪದ್ಮಾವತ್’ ಕಾವ್ಯವನ್ನು ರಚಿಸಿದ್ದು ಅವಽ ಭಾಷೆಯಲ್ಲಿ. ಚಿತ್ತೂರಿನ ರಾಣಿಯನ್ನು ಬಯಸಿದ ಅಲ್ಲಾವುದ್ದೀನ್ ಖಿಲ್ಜಿಯ ಕಥೆಯನ್ನು ಹೇಳುವ ಈ ಅವಽ ಭಾಷೆಯ ಕಾವ್ಯವನ್ನು ಪ್ರಮುಖ ಸೂಫಿ ಸಾಹಿತ್ಯ ಎಂದು ವರ್ಗೀಕರಿಸಲಾಗಿದೆ.

ಇಲ್ಲಿ ಹೇಳಬಯಸಿದ್ದೇನೆಂದರೆ, ಅವಧಿ ಭಾಷೆಯಲ್ಲಿ ಅಂದು ಹಲವು ಕಾವ್ಯಗಳು ರಚನೆಗೊಂಡು, ಜನರನ್ನು ತಲುಪುತ್ತಿದ್ದವು ಎಂಬ ವಿಚಾರ. ಅದೇ ರೀತಿ ತುಳಸೀದಾಸರ ‘ರಾಮಚರಿತ ಮಾನಸ’ದಿಂದಾಗಿ, ಅವಧಿ ಭಾಷೆಯ ಕಾವ್ಯವು ಶ್ರೀಮಂತವಾಯಿತು. ರಾಯ್‌ಬರೇಲಿಯ ಹಸ್ತಿಗ್ರಾಮದ ಲಾಲಚ್‌ದಾಸ್ ಎಂಬ ಕವಿ ರಚಿಸಿದ ಭಾಗವತ ಪುರಾಣವು (೧೫೩೦) ಅವಽ ಭಾಷೆಯ ಇನ್ನೊಂದು ಪ್ರಮುಖ ಕಾವ್ಯ. ಇದನ್ನು ಖೈತಿ ಲಿಪಿಯಲ್ಲಿ (ದೇವನಾಗರಿಯನ್ನು ಹೋಲುವ ಇನ್ನೊಂದು ಲಿಪಿ) ಬರೆಯಲಾಗಿದ್ದು, ಇದರ ಪ್ರತಿಗಳು ಉತ್ತರ ಭಾರತ ದಾದ್ಯಂತ ಲಭ್ಯವಾಗಿವೆ. ಸಂತ ಕಬೀರರು ಅವಧಿ ಭಾಷೆಯಲ್ಲಿ ಮತ್ತು ಇತರ ಸ್ಥಳೀಯ ಭಾಷೆಗಳಲ್ಲಿ ಕಾವ್ಯ ರಚಿಸಿದ್ದಾರೆ. ಮುಘಲರ ಕಾಲದಲ್ಲಿ ಹಲವು ಪ್ರೇಮಕಥೆ ಗಳನ್ನು ಅವಧಿ ಭಾಷೆಯಲ್ಲಿ ರಚಿಸಲಾಗಿತ್ತು!

ಅವುಗಳಲ್ಲಿ ಹೆಚ್ಚು ಪ್ರಖ್ಯಾತವಾಗಿದ್ದೇ ‘ಪದ್ಮಾವತ್’ ಮತ್ತು ಅವಧಿ ಭಾಷೆಯ ಈ ಕಾವ್ಯದ ಶಕ್ತಿ ಅದೆಷ್ಟಿದೆಯೆಂದರೆ, ಈ ೨೧ನೆಯ ಶತಮಾನದಲ್ಲೂ ಅದು ಸಿನಿಮಾ ರೂಪ ತಾಳಿ, ಜನರನ್ನು ರಂಜಿಸುತ್ತಿದೆ! ಇಪ್ಪತ್ತನೆಯ ಶತಮಾನದಲ್ಲಿ ರಾಮಯ್ ಕಾಕಾ, ಬಾಲಭದ್ರ ಪ್ರಸಾದ್ ದೀಕ್ಷಿತ್, ವಂಶಿಧರ್ ಶುಕ್ಲಾ
ಮೊದಲಾದವರು, ಅವಽ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾರೆ. ಹಿಂದಿ ಮತ್ತು ಅವಽಗಳೆರಡರಲ್ಲೂ ಸಾಹಿತ್ಯ ರಚಿಸಿದ ವಿದ್ಯಾ ವಿಂದು ಸಿಂಗ್ ಅವರಿಗೆ ೨೦೨೨ರಲ್ಲಿ
ಪದ್ಮಶ್ರೀ ಪ್ರಶಸ್ತಿ ದೊರಕಿದೆ. ‘ರಾಮಚರಿತ ಮಾನಸ’ದಂಥ ಪ್ರಮುಖ ಕಾವ್ಯಗಳಿಗೆ ಆಶ್ರಯ ನೀಡಿದ ಅವಧಿ ಭಾಷೆಯು, ಇಂದು ಅದೇಕೆ ಮೂಲೆಗುಂಪಾಗಿದೆ? ಈ ವಿದ್ಯಮಾನದ ಅಧ್ಯಯನ, ವಿಶ್ಲೇಷಣೆಯು, ನಮ್ಮ ದೇಶದ ಎಲ್ಲಾ ಸ್ಥಳೀಯ ಭಾಷೆಗಳ ಅಸ್ತಿತ್ವ, ಭವಿಷ್ಯದ ಕುರಿತು ಪ್ರಮುಖ ಎಂದೇ ನನ್ನ ಅನಿಸಿದೆ. ಕಳೆದ ಶತಮಾನದಲ್ಲಿ ಉತ್ತರ ಪ್ರದೇಶ, ಬಿಹಾರದ ಕೆಲವು ಭಾಗಗಳಲ್ಲಿ ಅವಽ ಭಾಷೆ ಬೋಧಿಸುವ ನೂರಾರು ಶಾಲೆಗಳಿದ್ದವು. ಆದರೆ, ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ, ಕ್ರಮೇಣ ಹಿಂದಿ ಶಾಲೆಗಳೇ ಅಲ್ಲೆಲ್ಲಾ ವಿರಾಜಮಾನವಾದವು, ಆಧಿಪತ್ಯ ಸಾಧಿಸಿದವು.

ಅಷ್ಟು ಮಾತ್ರವಲ್ಲ, ಸ್ವತಂತ್ರ ಭಾಷೆ ಎನಿಸಿದ್ದ ಅವಧಿಯನ್ನು ಹಿಂದಿಯ ಒಂದು ಉಪಭಾಷೆ ಅಥವಾ ಡಯಲೆಕ್ಟ್ ಎಂದು ವರ್ಗೀಕರಿಸುವ ಒಂದು ಕೆಟ್ಟ ಸಂಪ್ರದಾಯವೂ ಬೆಳೆಯಿತು! ಅವಧಿ ಎಂದರೆ, ಹಳ್ಳಿ ಜನರು ಮಾತನಾಡುವ ಭಾಷೆ ಎಂಬ ವಿಚಾರವು ಹೆಚ್ಚು ಹೆಚ್ಚು ಬಿಂಬಿತವಾಗತೊಡಗಿತು. ೨೦೦೧ರಲ್ಲಿ ತೆರೆಕಂಡ, ಪ್ರಸಿದ್ಧ ಎನಿಸಿದ ‘ಲಗಾನ್’ ಚಿತ್ರವನ್ನು ನೀವು ನೋಡಿರಬಹುದು. ಅದರಲ್ಲಿ ಅವಧಿ ಭಾಷೆಯ ಪ್ರಯೋಗವಿದೆ; ಆದರೆ, ಹಿಂದಿ ಮಾತನಾಡುವವರಿಗೆ ಮತ್ತು ದಕ್ಷಿಣ ಭಾರತದವರಿಗೆ ಹೆಚ್ಚು ಅರ್ಥ ವಾಗಲೆಂದು, ಅವಽಯನ್ನು ಹೆಚ್ಚು ಹೆಚ್ಚು ಹಿಂದೀಕರಣಕ್ಕೆ ಒಳಪಡಿಸಲಾಗಿದೆ! ಅದಕ್ಕೂ ಹಿಂದಿನ ‘ಗಂಗಾ ಜಮುನಾ’ ಹಿಂದಿ ಚಲನಚಿತ್ರದಲ್ಲಿ, ಹಳ್ಳಿಯ ಜನರು ಅವಧಿ ಮಾತನಾಡುವುದನ್ನು ತೋರಿಸಲಾಗಿದೆ.

ರಮಾನಂದ ಸಾಗರ ಅವರ ‘ರಾಮಾಯಣ’ ಧಾರಾವಾಹಿ ಯಲ್ಲಿ, ಹಳ್ಳಿಯ ಜನರು ಅವಽ ಭಾಷೆಯನ್ನು ಮಾತನಾಡುವುದನ್ನು ಬಳಸಿಕೊಳ್ಳಲಾಗಿದೆ; ಅದಕ್ಕೆ ಮುಖ್ಯ ಕಾರಣವೆಂದರೆ, ಅಯೋಧ್ಯೆಯ ಸುತ್ತಮುತ್ತ ಅವಧಿ ಭಾಷೆಯು ಪುರಾತನ ಕಾಲದಿಂದಲೂ ಬಳಕೆಯಲ್ಲಿತ್ತು ಎಂದು ತೋರಿಸಲು. ಆದರೆ, ಅನಕ್ಷರಸ್ಥರು, ಹಳ್ಳಿಯ ಜನರು ಮಾತ್ರ ಅವಽ ಭಾಷೆ ಮಾತನಾಡಿ, ಪ್ರಮುಖ ಪಾತ್ರಗಳು ಹಿಂದಿ ಮಾತನಾಡಿದಾಗ, ಸಹಜವಾಗಿ, ಅವಧಿಯು ಕೆಳಮಟ್ಟದ ಭಾಷೆ ಎಂದೇ ಬಿಂಬಿತವಾಗುತ್ತದೆ.

ಅವಽ ಒಂದು ಸ್ವತಂತ್ರ ಭಾಷೆ; ಈಗ ಅದನ್ನು ಬರೆಯಲು ದೇವನಾಗರಿ ಮತ್ತು ಖೇತಿ ಲಿಪಿಯನ್ನು ಬಳಸಲಾಗುತ್ತಿದೆ. ಅವಽಗೆ ಹಲವು ಉಪಭಾಷೆಗಳಿವೆ!
ಒಂದು ಕಾಲದಲ್ಲಿ ಅಯೋಧ್ಯೆ ಅಥವಾ ಅವಧ್ ಪ್ರಾಂತ್ಯದ ಪ್ರಮುಖ ಭಾಷೆಯಾಗಿದ್ದ ಅವಧಿಯು, ಇಂದು ಕೇವಲ ಹಿಂದಿಯ ಉಪಭಾಷೆ ಎಂದು ಕರೆಯಲ್ಪಡುವ ಸ್ಥಿತಿ ತಲುಪಿದ್ದು ಹೇಗೆ? ಹದಿನಾರನೆಯ ಶತಮಾನದಲ್ಲಿ ‘ರಾಮಚರಿತ ಮಾನಸ’ದಂಥ ಪ್ರಮುಖ ಕಾವ್ಯ ಜನಿಸಲು ಅವಕಾಶ ನೀಡಿದ ಈ ಭಾಷೆಯು, ಇಂದು ಹೊರಜಗತ್ತಿಗೆ ಬಹುಮಟ್ಟಿಗೆ ಅಪರಿಚಿತ ಎನಿಸಿದ್ದು ಹೇಗೆ? ಅವಽ ಮಾತೃಭಾಷೆ ಹೊಂದಿರುವ ಜನರೆಲ್ಲರೂ, ಇಂದು ತಾವು ಅಕ್ಷರಸ್ಥರಾಗುವುದಾದರೆ,
ಹಿಂದಿಯಲ್ಲಿ ಅಥವಾ ಇಂಗ್ಲಿಷಿನಲ್ಲಿ ಆಗಬೇಕು ಎಂದು ಬಯಸುವಂತಾಗಿದ್ದು ಹೇಗೆ? ಭಾಷೆಯೊಂದರ ಅವನತಿಗೆ ಅವಧಿಯು ಒಂದು ಉದಾಹರಣೆ ಎನಿಸಬಲ್ಲದೆ?
ಸುಮಾರು ಎರಡು ನೂರು ವರ್ಷಗಳ ಹಿಂದೆ ಕೋಟ್ಯಂತರ ಜನರ ಭಾಷೆಯಾಗಿದ್ದ ಅವಧಿಯು ಇಂದು ಮೂಲೆಗುಂಪಾಗಿರುವುದು, ನಮ್ಮ ದೇಶದ ಹಲವು ಭಾಷೆಗಳಿಗೆ ಒಂದು ಪಾಠ ಎಂದೇ ನನ್ನ ಅನಿಸಿಕೆ.

ದಿ. ಯು.ಆರ್. ಅನಂತಮೂರ್ತಿಯವರು ‘ಅಡುಗೆ ಮನೆ ಭಾಷೆ’ ಎಂಬ ಹೋಲಿಕೆಯನ್ನು ಆಗಾಗ ತಮ್ಮ ಮಾತುಗಳಲ್ಲಿ ಹೇಳುತ್ತಿದ್ದರು. ಅಂದರೆ, ಇಡೀ ಜನ
ಸಮೂಹವು ವಿವಿಧ ಕಾರಣಗಳಿಗಾಗಿ ಇಂಗ್ಲಿಷ್, ಹಿಂದಿ ಅಥವಾ ಬೇರೊಂದು ಭಾಷೆಯನ್ನುಕಲಿತು, ಉದ್ಯೋಗ ಪಡೆದು, ಅದೇ ಭಾಷೆಯಲ್ಲಿ ಅಽಕೃತವಾಗಿ ವ್ಯವಹರಿಸುತ್ತಾ, ಅಡುಗೆ ಮನೆಯಲ್ಲಿ, ಮನೆಯೊಳಗೆ, ಊಟ ಮಾಡುವಾಗ ಮಾತ್ರ ತಮ್ಮ ಸ್ವಂತ ಭಾಷೆಯನ್ನು ಬಳಸುವ ಪ್ರಕ್ರಿಯೆಗೆ ಅವರು ನೀಡಿದ ಉಪಮೆ ಅದು. ಇಂದು ಅವಧಿ ಭಾಷೆ ತಲುಪಿರುವ ಸ್ಥಿತಿಯು, ‘ಅಡುಗೆ ಮನೆ ಭಾಷೆ’ಯ ಪರಿಕಲ್ಪನೆಗೆ ಪರಿಪೂರ್ಣವಾಗಿ ಅನ್ವಯವಾಗುತ್ತದೆ!

ಅವಧಿ ಮಾತ್ರವಲ್ಲ, ಮೈಥಿಲಿ, ಬ್ರಜ್‌ಭಾಷಾ, ಮಾಗಽ, ಅರ್ಧ ಮಾಗಧಿ- ಈ ರೀತಿ ಉತ್ತರ ಭಾರತದಾದ್ಯಂತ ಇರುವ ಹಲವು ಭಾಷೆಗಳು, ‘ಹಳ್ಳಿಯವರು’ ಎಂದು ವರ್ಗೀಕರಿಸಬಹುದಾದ ಜನರ (ಇಂಥ ವರ್ಗೀಕರಣ ಸರಿಯಲ್ಲ!) ಭಾಷೆಯಾಗಿ ಉಳಿದುಕೊಂಡಿದೆ; ಅವರೆಲ್ಲರೂ ವಿದ್ಯಾಭ್ಯಾಸ ಪಡೆಯಲು, ಪದವಿ ಪಡೆಯಲು ಹಿಂದಿ ಅಥವಾ ಇಂಗ್ಲಿಷ್ ಭಾಷೆಯನ್ನು ಕಲಿಯುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ, ಉತ್ತರ ಭಾರತದಲ್ಲಿ ಹಿಂದಿಯು ಅಧಿಕಾರಸ್ಥರ ಭಾಷೆಯಾಗಿರುವುದರಿಂದ, ಅದು ಆ ಪ್ರದೇಶದ ಜನರಿಗೆ ಅನ್ನಕೊಡುವ ಭಾಷೆಯೂ ಆಗಿ ಮಾರ್ಪಾಡು ಹೊಂದಿರುವುದರಿಂದಾಗಿ, ಅವಧಿಯಂಥ ಭಾಷೆಯನ್ನು ಕಲಿಯುವವರ ಸಂಖ್ಯೆ ತೀರಾ ಕಡಿಮೆ ಯಾಗಿದೆ; ಇನ್ನು ತುಳಸೀದಾಸರ ರೀತಿ, ಆ ಭಾಷೆಯಲ್ಲಿ ಪ್ರಮುಖ ಸಾಹಿತ್ಯ ರಚಿಸುವ ಮಾತಂತೂ ದೂರವೇ ಉಳಿಯಿತು.

ನಿಧಾನವಾಗಿ ಭಾಷೆಯೊಂದು ಸಾಯುತ್ತಿರುವುದನ್ನು ನಾವು ಅವಧಿಯ ಅವನತಿಯಲ್ಲಿ ನೋಡ ಬಹುದು. ಇದು ಬಹುಶಃ, ಹಿಂದಿಯನ್ನು ಹೊರತು ಪಡಿಸಿದ ನಮ್ಮ
ದೇಶದ ಎಲ್ಲಾ ಸ್ಥಳೀಯ ಭಾಷೆಗಳಿಗೆ ಎಚ್ಚರಿಕೆಯ ಗಂಟೆಯಾಗಬೇಕು. ಅಲ್ಲವೆ? (ಈ ಬರಹದಲ್ಲಿ ನಾನು ಎಲ್ಲೂ ಕನ್ನಡ ಭಾಷೆಯನ್ನು ನೆನಪಿಸುವ ಸಾಲುಗಳನ್ನು
ಬರೆದಿಲ್ಲ; ಆದರೆ, ಅವಽ ಭಾಷೆಯ ಅವನತಿಯನ್ನು ಕಂಡು ನಿಮಗೆ ಕನ್ನಡದ ನೆನಪಾದರೆ, ಅದಕ್ಕೆ ನಾನು ಕಾರಣನಲ್ಲ!)