Saturday, 14th December 2024

ಕಹಿಸತ್ಯವನ್ನು ಅರಿಯಬೇಕಿದೆ

ಪ್ರತಿಸ್ಪಂದನ

ಮಂಜುನಾಥ ಅಜ್ಜಂಪುರ

ಅವಧಿ ಭಾಷೆ ಕುರಿತಾದ ಶಶಿಧರ ಹಾಲಾಡಿ ಅವರ ಬರಹಕ್ಕೆ (ವಿಶ್ವವಾಣಿ ಜ.೫) ಇದು ಪ್ರತಿಕ್ರಿಯೆ. ಕನಿಷ್ಠ ಕಳೆದ ಒಂದು ಶತಮಾನದಿಂದ ಎಲ್ಲ ಭಾರತೀಯ ಭಾಷೆಗಳನ್ನೂ ಮುಖಾಮುಖಿ ಯಾಗಿಸುವ ದುರದೃಷ್ಟಕರ-ದುರುದ್ದೇಶಿತ ಘಟನಾವಳಿ ನಡೆದಿದೆ.

ಅದು ಈಗಲೂ ಕಾರ್ಯೋನ್ಮುಖವಾಗಿದೆ. ಇದು ಆರ್ಯ-ದ್ರಾವಿಡ ಬೇರೆಬೇರೆ ಜನಾಂಗಗಳೆಂಬ ಮತ್ತು ಆರ್ಯರ ಆಕ್ರಮಣ ಎಂಬ ಮೋಸದ ಸಿದ್ಧಾಂತದ ಬಂದಳಿಕೆ. ದ್ರಾವಿಡ ಚಳವಳಿಯ ಭಾಗ ವಾಗಿಯೇ, ಹಿಂದಿ ವಿರೋಧಿ ಚಳವಳಿಯು ಹುಟ್ಟಿಕೊಂಡಿತು. ಕರ್ನಾಟಕದಲ್ಲಿಯೂ ಈ ಚಳವಳಿ ಹುಟ್ಟಿತು, ಬೆಳೆಯಿತು; ಈಗಲೂ ವಿಭಿನ್ನ ಆಯಾಮಗಳಲ್ಲಿ ಅದು ಫೂತ್ಕರಿಸುತ್ತಿರುತ್ತದೆ. ಕನಿಷ್ಠ ೬೦ ವರ್ಷಗಳಿಂದ ಕನ್ನಡ ಮತ್ತು ಮರಾಠಿ, ಹಾಗೂ ಕನ್ನಡ ಮತ್ತು ತಮಿಳು ಹೀಗೆ ಸೋದರ ಭಾಷೆಗಳನ್ನು ಎದುರುಬದರು ನಿಲ್ಲಿಸಿ ಭಾಷಾ ವಿದ್ವೇಷವನ್ನು ಸೃಷ್ಟಿಸಲಾಗಿದೆ, ಬೆಳೆಸಲಾಗಿದೆ.

ನಮ್ಮೆಲ್ಲರ ಮನಸ್ಸು, ಮಾನಸಿಕತೆ, ಅಭಿಮತಗಳ ಮೇಲೆ ಇದು ತುಂಬಾ ಪರಿಣಾಮ ಬೀರಿದೆ. ನಮ್ಮಲ್ಲಿ ಪೂರ್ವಗ್ರಹ ಮನೆಮಾಡಿದೆ. ೨೦೦೦ ವರ್ಷಗಳಲ್ಲಿ ನಮ್ಮ ದೇಶದಲ್ಲಿ ‘ಭಾಷೆಗಳ ಕಾರಣಕ್ಕಾಗಿ ಮತ್ತು ವಿಭಿನ್ನ ಭಾಷಿಕರ ನಡುವೆ’ ಯಾವುದೇ ಯುದ್ಧವಾಗಿಲ್ಲ. ಎಲ್ಲ ಭಾರತೀಯ ಭಾಷೆಗಳೂ ಸೋದರ ಭಾಷೆಗಳೇ.

೬೦-೭೦ರ ದಶಕ ಗಳಲ್ಲಿ ಅಂದಿನ ರಾಜಕೀಯ ವಿಶ್ಲೇಷಕರು, ರಾಜ್ಯಗಳ ಬಳಿ ಸೇನೆ ಇದ್ದಿದ್ದರೆ, ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ಯುದ್ಧವೇ
ನಡೆಯುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದರು. ಹಾಗಿತ್ತು, ಕನ್ನಡ ಮತ್ತು ಮರಾಠಿ ಭಾಷೆಗಳ ನಡುವಿನ ಗಡಿವಿವಾದ ಮತ್ತು ಭಾಷಾ ವಿವಾದ. ೨೦ನೆಯ ಶತಮಾನದ ಕುತಂತ್ರದ ರಾಜಕೀಯದ ದುಷಲವಿದು. ಕನ್ನಡ, ಮರಾಠಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಎಲ್ಲ ಗಡಿ ಪ್ರದೇಶಗಳನ್ನು (ಭಾಷಿಕರನ್ನು ಮತ್ತು ಭಾಷೆಗಳ ಬಳಕೆಯನ್ನು) ಪೂರ್ವಗ್ರಹವಿಲ್ಲದೆ ಅಧ್ಯಯನ ಮಾಡಿದರೆ, ಎಲ್ಲ ಭಾಷೆ ಗಳು ಸೋದರ ಭಾಷೆಗಳೇ ಮತ್ತು ಪದಸಂಪತ್ತನ್ನು ಹೇಗೆಲ್ಲಾ ಈ ಭಾಷೆಗಳು ಹಂಚಿಕೊಂಡಿವೆ ಎಂಬುದು ಸ್ಪಷ್ಟವಾಗುತ್ತದೆ.

ಅರ್ಧ ಶತಮಾನದ ಹಿಂದೆ ಕೆಲ ತಮಿಳು ಸಂಘಟನೆಗಳವರು ತಮ್ಮದು ಪ್ರತ್ಯೇಕ ದೇಶ ಆಗಬೇಕು ಎಂದು ಆಗ್ರಹಿಸುತ್ತಿದ್ದರು. ಮತ್ತೊಮ್ಮೆ ಹೇಳುತ್ತೇನೆ, ಎಲ್ಲ ಗಡಿ ಪ್ರದೇಶಗಳನ್ನು ಅಧ್ಯಯನ ಮಾಡಿದರೆ, ಈ ಪ್ರತ್ಯೇಕತೆಯ ವಾದವು ಎಂಥ ಮೂರ್ಖತನದ್ದು ಎಂಬುದು ತಿಳಿಯುತ್ತದೆ. ಹಿಂದಿ ಭಾಷೆಗೆ ಇತಿಹಾಸವಿಲ್ಲ, ಹಿಂದಿಯಲ್ಲಿ ಮಹಾ ಕಾವ್ಯಗಳಿಲ್ಲ, ನಿಜ. ಇರುವ ಆವಶ್ಯಕತೆಯೂ ಇಲ್ಲ. ಅದು ಅಗತ್ಯಕ್ಕೆ ಹುಟ್ಟಿಕೊಂಡ ಭಾಷೆ. ದೆಹಲಿಯ ರಾಜಕೀಯ ಪ್ರಭುಗಳು ಇಂಗ್ಲಿಷ್ ಬದಲಿಗೆ ಬೆಳೆಸಿದ, ಹಟಹಿಡಿದು ಬೆಂಬಲಿಸಿದ ಭಾಷೆಯಿದು. ಹಾಗೆ ನೋಡಿದರೆ, ಇಂಗ್ಲಿಷ್ ಭಾಷೆಗೂ ಇತಿಹಾಸವಿಲ್ಲ. ಸಾವಿರ ವರ್ಷಗಳ ಹಿಂದೆ ಅದು ಹೇಗಿತ್ತು,  ಎಂದು ಉದಾಹರಣೆಗಳನ್ನು ನೀಡುವ ಅಗತ್ಯವಿಲ್ಲ.

ಅದು ಮುಖ್ಯವಲ್ಲ. ಕನಿಷ್ಠ ಕಳೆದ ೭-೮ ದಶಕಗಳಲ್ಲಿ ಇಂಗ್ಲಿಷ್ ಬ್ರಿಟಿಷರ ಕಾಲಕ್ಕಿಂತಲೂ ಹೆಚ್ಚು ಬೆಳೆದಿದೆ. ಅದರ ಕಬಂಧ ಬಾಹುಗಳು ಎಲ್ಲ
ಭಾರತೀಯ ಭಾಷೆಗಳನ್ನೂ ಆಪೋಶನ ತೆಗೆದುಕೊಂಡಿವೆ, ನಾಶ ಮಾಡುತ್ತಿವೆ. ಹಿಂದಿ-ಇಂಗ್ಲಿಷ್ ಭಾಷೆ ಗಳಿಗೆ ಇತಿಹಾಸವಿಲ್ಲ ಎಂದು ಹೇಳಿದರೆ ಏನುಪಯೋಗ? ಕರ್ನಾಟಕದಲ್ಲಿ ಕಳೆದ ೪ ದಶಕಗಳಲ್ಲಿ ಎಲ್ಲ ಕನ್ನಡ ಮಾಧ್ಯಮದ ಶಾಲೆಗಳು ನಾಶವಾಗಿ, ಇಂಗ್ಲಿಷ್ ಮಾಧ್ಯಮದ ಶಾಲೆಗಳು ಅನೂಹ್ಯ ಪ್ರಮಾಣದಲ್ಲಿ ಬೆಳೆದಿವೆ. ೫೦-೬೦ರ ದಶಕಗಳಲ್ಲಿ ನಮ್ಮ-ನಿಮ್ಮಂಥ ವರು ಓದಿದ್ದೇ ಹಳ್ಳಿಗಳ ಕನ್ನಡ ಮಾಧ್ಯಮದ ಶಾಲೆಗಳಲ್ಲಿ. ಈಗ ಸ್ಥಿತಿ ಏನಾಗಿದೆ? ಇನ್ನು ೨೦ ವರ್ಷಗಳಲ್ಲಿ ಕರ್ನಾಟಕದಲ್ಲಿ ಕನ್ನಡ ಎಷ್ಟು ಪ್ರಮಾಣ ದಲ್ಲಿರುತ್ತದೆ, ಇಂಗ್ಲಿಷ್ ಎಷ್ಟು ಪ್ರಮಾಣದಲ್ಲಿರುತ್ತದೆ? ನೀವೇ ಹೇಳಿ.

೧೯೮೭ರಲ್ಲಿ ಹಾ.ಮಾ.ನಾಯಕರು, ‘ಇನ್ನು ಕೆಲವೇ ವರ್ಷಗಳಲ್ಲಿ, ಕನ್ನಡವು ಅಡುಗೆ ಮನೆಯ ಭಾಷೆಯಾಗಿಬಿಡುತ್ತದೆ’ ಎಂದು ಎಚ್ಚರಿಸಿದ್ದರು. ಆದರೆ, ಕನ್ನಡವು ಅಡುಗೆ ಮನೆಯಿಂದಲೂ ಮಾಯವಾಗಿ ದಶಕಗಳೇ ಆಗಿವೆ! ಪುಣ್ಯಕ್ಕೆ ಈ ದುಸ್ಥಿತಿ ನೋಡಲು ಇಂದು ಹಾ. ಮಾ.ನಾಯಕರು ಇಲ್ಲ! ಸಾರಾಂಶ ಇಷ್ಟೇ. ನಿಜವಾದ ಅಪಾಯ ಇರುವುದು ಇಂಗ್ಲಿಷ್ ಭಾಷೆಯಿಂದ. ನನ್ನ ಸ್ನೇಹಿತರು ೪೦ ವರ್ಷಗಳ ಹಿಂದೆ, ಉqಛ್ಞಿ ಜ್ಛಿ ಉಜ್ಝಜಿoe ಜಟಛಿo ಟ್ಠಠಿ ಟ್ಛ ಉಜ್ಝZb, ಜಿಠಿ ಡಿಜ್ಝ್ಝಿ ಟಠಿ ಜಟ ಟ್ಠಠಿ ಟ್ಛ ಐbಜಿZ ಎಂದಿದ್ದರು. ಅವರ Pಟmeಛಿಠಿಜ್ಚಿ ಮಾತುಗಳು ನಿಜವಾಗುವ ಸ್ಥಿತಿ ಇಂಗ್ಲೆಂಡಿಗೆ ಬಂದಿದೆ (ಜಿಹಾದಿಗಳ ಕಾರಣದಿಂದ ಇಂಗ್ಲೆಂಡಿನ ಬರ್ಮಿಂಗ್‌ಹ್ಯಾಂ ಮುಂತಾದ ಕಡೆ ಇಂಗ್ಲಿಷ್ ಭಾಷೆ ಮತ್ತು ಇಂಗ್ಲಿಷರು ನಾಶವಾಗಿದ್ದಾರೆ).

ಇಂಗ್ಲಿಷ್‌ನ ಕಾರಣದಿಂದ ಭಾರತವೂ ತನ್ನ ಅತ್ಯದ್ಭುತ ಭಾಷಾ ಸಂಸ್ಕೃತಿಗಳನ್ನು ಕಳೆದುಕೊಳ್ಳುತ್ತಿದೆ. ಭಾರತೀಯ ಭಾಷೆಗಳಿದ್ದರೆ ಮಾತ್ರ ಭಾರತ ಉಳಿಯುತ್ತದೆ, ಅಲ್ಲವೇ? ಬೀದರ್‌ನಲ್ಲಿರುವ ಕನ್ನಡ ನಮಗೆಷ್ಟು ಅರ್ಥವಾಗುತ್ತದೆ? ೫೦ ವರ್ಷಗಳ ಹಿಂದೆ, ನಂಜನಗೂಡು ತಾಲೂಕಿನ ಕನ್ನಡ ಕೇಳಿ, ಏನೂ ಅರ್ಥವಾಗದೆ, ಅದರ ಕನ್ನಡಾನುವಾದ ಮಾಡಲು ಗೆಳೆಯರನ್ನು ನಾನು ವಿನಂತಿಸಿದ್ದೆ. ನಮ್ಮಲ್ಲಿಯೇ (ಕೊಡವ, ಹವ್ಯಕ, ಸಂಕೇತಿ ಮುಂತಾದ ಭಾಷೆಗಳನ್ನು ಹೊರತುಪಡಿಸಿಯೂ) ಅಕ್ಷರಶಃ ಹತ್ತಾರು ಬಗೆಯ ಕನ್ನಡ ಭಾಷೆಗಳಿವೆ. ನಿಜ, ಭಾಷೆಗಳು, ಭಾಷಾ ಸಮುದಾಯಗಳು ಇರುವುದೇ ಹಾಗೆ.

ಇಡೀ ಭಾರತದಲ್ಲಿ ಇದೇ ಚಿತ್ರವನ್ನು ನೋಡಬಹುದು. ಈ ಪರಿಪ್ರೇಕ್ಷ್ಯದಲ್ಲಿ, ಅಕಾಡೆಮಿಷಿಯನ್ನರ ಉಪ ಭಾಷೆ, ಡಯಲೆಕ್ಟ್, ಇಂಡೋ-ಆರ್ಯನ್ ಮುಂತಾದ ವರ್ಗೀಕರಣಗಳೇ ಅವೈಜ್ಞಾನಿಕವಾಗಿಬಿಟ್ಟಿವೆ! ಭಾಷೆಗಳ ಸಮಗ್ರವಾದ ಸಾಂಸ್ಕೃತಿಕ ಅಧ್ಯಯನದಿಂದ ಇಂಥ ಅನೇಕ ಸ್ವಾರಸ್ಯಪೂರ್ಣ
ಸಂಗತಿಗಳು ನಮಗೆ ತಿಳಿಯುತ್ತಹೋಗುತ್ತವೆ. ಈ ಆಯಾಮವನ್ನು ಉತ್ತರ ಭಾರತದಲ್ಲೂ ಕಾಣಬಹುದು. ಹೆಸರಿಗೆ ಮಾತ್ರ ಹಿಂದಿ ರಾಜ್ಯ ಗಳು/ಪ್ರಾಂತ್ಯಗಳು ಎಂದು ವರ್ಗೀಕರಿಸಿದರೂ, ಅಲ್ಲಿ ಅವಧಿ, ಮಾಗಧಿ, ಅರ್ಧಮಾಗಧಿ, ಮೈಥಿಲಿಯಂಥ ಅನೇಕಾನೇಕ ಭಾಷೆಗಳಿವೆ. ಅವೆಲ್ಲಕ್ಕೂ ತಥಾಕಥಿತ ಹಿಂದಿ ಭಾಷೆಗಿಂತ ಪ್ರಾಚೀನ ಇತಿಹಾಸವಿದೆ.

ಆದರೆ, ಈ ಪ್ರಾಚೀನತೆ ಎನ್ನುವುದೇ ನಿರರ್ಥಕ ಅಂಶವಾಗಿ ಹೋಗಿದೆ. ಕನ್ನಡವು ೩೦,೦೦೦ ವರ್ಷಗಳ ಹಿಂದಿನ ಭಾಷೆಯೆಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಆದರೆ ಇಂದು ಪಂಪನ ಕನ್ನಡ, ಕನಕದಾಸರ ಕನ್ನಡ ನಮಗೆಷ್ಟು ಅರ್ಥವಾಗುತ್ತಿದೆ? ನಮ್ಮ ವಿಶ್ವ ವಿದ್ಯಾಲಯಗಳು ಕನ್ನಡ ಎಂ.ಎ. ಪರೀಕ್ಷೆಯ ಪಠ್ಯದಲ್ಲಿ ಹಳೆಗನ್ನಡ ಕಲಿಕೆಯನ್ನು ತೆಗೆದದ್ದು ತಿಳಿದು ಕೆಲ ವರ್ಷಗಳ ಹಿಂದೆ ಅಚ್ಚರಿಪಟ್ಟಿದ್ದೆ. ಹಾಗಿದ್ದರೆ, ಹಳೆಗನ್ನಡ ಯಾರು ಕಲಿಯಬೇಕು? ಸಾವಿರ ವರ್ಷಗಳ ಇತಿಹಾಸವೂ ಇಲ್ಲದ ಇಂಗ್ಲಿಷ್, ಕನ್ನಡವನ್ನು ಬಹುತೇಕ ಧ್ವಂಸ ಮಾಡಿದೆ. ಕಟು ವಾಸ್ತವವೆಂದರೆ, ಅವಽಯಂಥ ನೂರಾರು ಭಾರತೀಯ ಭಾಷೆಗಳನ್ನು ನಾಶಮಾಡಿರುವುದು, ಮಾಡುತ್ತಿರುವುದು ಇಂಗ್ಲಿಷೇ ಹೊರತು ಹಿಂದಿ ಅಲ್ಲ!

೭ ವರ್ಷಗಳ ಹಿಂದೆ, ಉತ್ತರ ಪ್ರದೇಶದಂಥ ಬೃಹತ್ ರಾಜ್ಯದಲ್ಲಿ ಸರಕಾರಿ ಶಾಲೆಗಳಲ್ಲೇ ಇಂಗ್ಲಿಷ್ ಮಾಧ್ಯಮದ ಕಲಿಕೆಯನ್ನು (ಕರ್ನಾಟಕದ ಮಾದರಿ?!)
ಆರಂಭಿಸಲಾಯಿತು. ಹಾಗಾಗಿ, ಅಲ್ಲಿಯೂ ಸ್ಥಳೀಯ ಭಾಷೆಗಳು ಸತ್ತುಹೋಗುತ್ತಿವೆ. ಹಿಂದಿಯನ್ನು ಗುಮ್ಮ ಎಂಬಂತೆ ತೋರಿಸಿ, ನಮ್ಮ ಕನ್ನಡ ಚಳವಳಿ ಯ ಮಹನೀಯರು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಕೊಬ್ಬಿಸಿದರು. ಕನ್ನಡದ ಶಾಲೆಗಳೇ ನಾಶವಾಗಿಹೋಗಿವೆ. ಈ ಪ್ರಭೃತಿಗಳು ಅಪ್ಪಿತಪ್ಪಿಯೂ ಒಂದು ಕನ್ನಡ ಮಾಧ್ಯಮದ ಶಾಲೆಯನ್ನೂ ಪ್ರಾರಂಭಿಸಲಿಲ್ಲ! ಹಿಂದಿ ಭಾಷೆ, ಹಿಂದಿ ಹೇರಿಕೆಗಳನ್ನು ವಿರೋಧಿಸುವ ಚಳವಳಿಗಳ ಇತಿಹಾಸದ ನಿಷ್ಪಕ್ಷಪಾತದ ಅಧ್ಯಯನವು ನಮಗೆ ಕಟುಸತ್ಯಗಳನ್ನು ತೆರೆದಿಡುತ್ತದೆ. ಅದೇ ನೋಡಿ, ಇಂಗ್ಲಿಷ್ ಭಾಷೆ, ಇಂಗ್ಲಿಷ್ ಹೇರಿಕೆಗಳನ್ನು ವಿರೋಧಿಸುವ (!?) ಭಾರತದಲ್ಲಿನ ಚಳವಳಿಗಳ ಇತಿಹಾಸವು (ವಿಶೇಷವಾಗಿ ದಕ್ಷಿಣ ಭಾರತದಲ್ಲಿ) ಇನ್ನೂ ಭಯಂಕರವಾದ ಕಟುಸತ್ಯವನ್ನು ಅನಾವರಣ ಮಾಡುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)