Sunday, 15th December 2024

ನೋವ ನುಂಗಿ ನಗುವ ಕಲಿತ ಅವಧೂತ !

ಯಶೋ ಬೆಳಗು

ಯಶೋಮತಿ ಬೆಳಗೆರೆ

yashomathy@gmail.com

ಇವತ್ತು ಬೆಳಗೆರೆ ಕೃಷ್ಣಶಾಸ್ತ್ರಿಗಳು ಅಂದರೆ ಯಾರುಯಾರಿಗೋ ಏನೇನಾಗಿಯೋ ಅರ್ಥವಾಗುತ್ತಾರೆ. ನನಗೆ ಅರ್ಥ ವಾಗುವ ಮಾಮನೇ ಬೇರೆ. ಆ ಐದು ಸಾವುಗಳಿಂದ ಚೇತರಿಸಿಕೊಂಡ ಮಾಮ. ಅವನಿಗದು ಹೇಗೆ ಸಾಧ್ಯವಾ ಯಿತು? ಕೇಳಿದರೆ, ನನಗೆ ಎಲ್ಲ ಮರೆತು ಹೋಗಿದೆ ಕಣೋ ಅನ್ನುತ್ತಾನೆ. ಅವನ ಮರೆವಿನ ಅವನ ಸ್ಮೃತಿ ಇದೆ…

Empty minds are devil’s workshop ಅಂತಾರೆ. ಸುಮ್ಮನೆ ಕುಳಿತರೆ ನೂರಾರು ಚಿಂತೆ ಗಳು ಮುತ್ತಿಕೊಳ್ಳುತ್ತಾ ಮನಸ್ಸು ಖಿನ್ನತೆಗೆ ಜಾರುತ್ತದೆ. ಚಿತೆ ಮೃತ ದೇಹವನ್ನು ಸುಟ್ಟರೆ ಚಿಂತೆ ಜೀವಂತ ದೇಹವನ್ನೇ ಸುಟ್ಟುಹಾಕುತ್ತದೆ. ಹೀಗಾಗಿ ನಮ್ಮನ್ನು ನಾವು ಆರೋಗ್ಯ ವಂತರಾಗಿಟ್ಟುಕೊಳ್ಳಬೇಕೆಂದರೆ ಯಾವುದಾದರೊಂದು ಕೆಲಸದಲ್ಲಿ ತೊಡಗಿಸಿಕೊಂಡಿ ರುವುದು ಉತ್ತಮ.

Work is worship ಎಂದು ಹೇಳುತ್ತಾ ಕೊಂಡಾಡುವ ನಾವು ಕೆಲಸವಿಲ್ಲದ ಬಡಗಿ ಮಗುವಿನ ….ಕೆತ್ತಿದನಂತೆ ಅನ್ನುವು ದನ್ನು ಅವಹೇಳನ ರೀತಿಯಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಅದರ ಹಿಂದಿರುವ ಅವನ ಕಾರ್ಯತತ್ಪರತೆಯನ್ನು ಗೌಣ ವಾಗಿಸುತ್ತೇವೆ. ಅದನ್ನೇ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಎಲ್ಲರನ್ನೂ ದುಡಿಮೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದರು. ಇದೆಲ್ಲದರ ನಡುವೆ ರವಿ ಬೆಳಗೆರೆಯವರು ಹೇಳಿದ ನೀನು ಹಣ ಮಾಡ್ಬೇಕು ಅಂತ ಹೊರಟರೆ ಕೇವಲ ಹಣ ಮಾಡ್ತೀಯ, ಹೆಸರು ಮಾಡ್ಬೇಕು ಅಂತ ಹೊರಟರೆ ಕೇವಲ ಹೆಸರು ಮಾಡ್ತೀಯ.. ಅದೇ ಕೆಲಸ ಮಾಡ್ತೀನಿ ಅಂತ ಹೊರಟು ನೋಡು- ಹಣ, ಹೆಸರು ಎರಡೂ ನಿನ್ನನ್ನು ಹುಡುಕಿಕೊಂಡು ಬರುತ್ತೆ’ ಎನ್ನುವ ಮಾತುಗಳು ಸಾಕಷ್ಟು ಯುವಜನತೆಯನ್ನು ಹುರುದುಂಬಿಸಿ ದುಡಿತ ದೆಡೆಗೆ ಕರೆದೊಯ್ದಿದೆ. ಮೂರು ರೀತಿಯ ಜನರಿಂದ ನಾನು ಸದಾ ದೂರವಿರಲು ಬಯಸುತ್ತೇನೆ.

ಒಂದು: ಸೋಮಾರಿಗಳಿಂದ.

ಎರಡನೆಯದು: ಅಗೌರವದಿಂದ ಕಾಣುವ/ಮಾತನಾಡುವ ಜನರಿಂದ.

ಮತ್ತೊಂದು: ವಂಚಕರಿಂದ! ರವಿ ಮಾತಿನ ಲಹರಿಗೆ ಬಿದ್ದಾಗ ಅವರ ಮನೆತನದ ವಿಷಯವನ್ನೆಲ್ಲ ಬಹಳ ರಸವತ್ತಾಗಿ ವಿವರಿಸು ತ್ತಿದ್ದರು.

ಅವರು ಹೇಳುತ್ತಿದ್ದ ಒಂದೊಂದು ವಿಷಯವೂ ನನ್ನಲ್ಲಿ ಕುತೂಹಲ ಕೆರಳಿಸುತ್ತಾ ಮತ್ತೇ… ಎನ್ನುತ್ತಾ ಕಣ್ಣರಳಿಸಿ ಕೇಳುವಂತಿ ರುತ್ತಿತ್ತು. ಈಗ ಅವರಿಲ್ಲದೆ ಅದೆಲ್ಲ ವಿಷಯಗಳೂ ಅವರೊಂದಿಗೇ ಉರಿದು ಬೂದಿಯಾಗಿ ಹೋಯ್ತಾ? ಅನ್ನಿಸುವ ಹೊತ್ತಿಗೆ ಎಲ್ಲಿಂದಲೋ ಒಂದು ಸುದ್ದಿ ಬಂದು ತಲುಪುತ್ತದೆ. ಅವರ ಕೆಲವು ಬಂಧುಗಳಿಗೆ ನನ್ನನ್ನು ಪರಿಚಯಿಸಿದ್ದರು. ಅಂತಹ ಪರಿಚಯದಲ್ಲಿ ಒಬ್ಬರಾದ ಲಕ್ಷ್ಮಿ ಇತ್ತೀಚೆಗೊಂದು ದಿನ ಅವರ ಅಜ್ಜಿಯ ತುಂಬು ಕುಟುಂಬವೊಂದರ ಫೋಟೋ ಕಳಿಸಿ ಇದು ನಿಮ್ಮ ಅತ್ತೆಯ ಅಕ್ಕ ರುಕ್ಮಿಣಮ್ಮನ family ಎಂದು ಹೇಳಿ ಜತೆಗೊಂದು smily ಚಿತ್ರವನ್ನೂ ಕಳಿಸಿದ್ದರು.

ಅವರ ನಡುವೆಯಿರುವುದು ಬೆಳಗೆರೆಯ ಕಿಟ್ಟಪ್ಪ ತಾತ ಎಂದು ಹೇಳಿದಾಗ ಒಂದು ರೀತಿಯ ಆಶ್ಚರ್ಯ ಬೆರೆತ ಸಂತೋಷ. ರವಿಗೆ ಅವರು ಪ್ರೀತಿಯ ಕಿಟ್ಟಪ್ಪ ಮಾಮನಾದರೆ ನಮಗೆಲ್ಲ ಬೆಳಗೆರೆ ಅಜ್ಜ. ಅವರು ಒಂದೇ ಒಂದು ದಿನಕ್ಕೂ ತಮ್ಮ ಬಗ್ಗೆಯಾಗಲೀ,
ತಮ್ಮ ಕುಟುಂಬದ ಬಗ್ಗೆಯಾಗಲೀ ಮಾತನಾಡಿದ್ದನ್ನು ನಾನು ನೋಡೇ ಇಲ್ಲ. ಹರಿಹರ, ರಾಘವಾಂಕ, ಲಕ್ಷ್ಮೀಶ, ಜೈಮಿನಿ ಭಾರತ, ಗಮಕ, ಸಾಹಿತ್ಯ, ಗಾಂಧಿ, ಶಿಕ್ಷಣ ಎಲ್ಲದರ ಜತೆಗೆ ಅವರು ಅತ್ಯಂತ ಪ್ರೀತಿಯಿಂದ ಕಟ್ಟಿದ ಶಾರದಾ ಮಂದಿರದ ಕುರಿತಾದ ಮಾತುಗಳೇ ತುಂಬಿ ಹೋಗಿರುತ್ತಿದ್ದವು.

ಬೆಳಗೆರೆ ಅನ್ನುವುದು ನೀರಿಲ್ಲದ ಬಂಜರು ಭೂಮಿ. ಆದರೆ ಅಂಥಾ ಬಂಜರು ಭೂಮಿಯಲ್ಲೂ ಹಸಿರು ನಗುವಂತೆ ಮಾಡಿದ ಸಾಧಕ ಅಂದರೆ ನಮ್ಮ ಕಿಟ್ಟಪ್ಪ ಮಾಮ ಅನ್ನುತ್ತಿದ್ದರು ರವಿ. ನೀನೇ ನೋಡುವಿಯಂತೆ ಬಾ ಎಂದು ಹೇಳಿ ತಮ್ಮ ಹೆಸರಿ ನೊಂದಿಗೆ ತಳಿಕೆ ಹಾಕಿಕೊಂಡಿರುವ ಬೆಳಗೆರೆಯ ಗ್ರಾಮಕ್ಕೆ ಮೊತ್ತಮೊದಲ ಬಾರಿಗೆ ಕರೆದುಕೊಂಡು ಹೋದಾಗ ಆ ಬಿಸಿಲ ಝಳ ದಲ್ಲಿ ಅವರ ಮನೆಯ ಅಂಗಳದಲ್ಲಿ ಕುಳಿತು, ಬಟ್ಟಲ ತುಂಬ ತಣ್ಣನೆಯ ಗಟ್ಟಿ ಮೊಸರು ಕುಡಿದು ತಂಪಾಗಿದ್ದೆ.

ಅಂತಹ ಬಂಜರು ಭೂಮಿಯಲ್ಲೂ ತಮ್ಮ ನಿರಂತರ ಶ್ರಮದಿಂದ ಅದ್ಭುತವಾದ ತೋಟ ಮಾಡಿದ್ದ ಬೆಳಗೆರೆ ಕೃಷ್ಣಶಾಸ್ತ್ರಿಯವ ರೆಡೆಗೆ ಮೆಚ್ಚುಗೆಯಿಂದ ಕೂಡಿದ ಗೌರವ ಭಾವ ತುಂಬಿ ಬಂದಿತ್ತು. ಇಡೀ ತೋಟದಲ್ಲ ಸುತ್ತಾಡುತ್ತಾ ರವಿ ತಮ್ಮ ಬಾಲ್ಯದ ಒಂದೊಂದು ಘಟನೆಗಳನ್ನೂ ವಿವರಿಸುತ್ತಿದ್ದರೆ ನಾನು ಅವೆಲ್ಲಕ್ಕೂ ಮನದ ಚಿತ್ರರೂಪ ಕೊಟ್ಟು ಕಲ್ಪಿಸಿಕೊಳ್ಳುತ್ತಿದ್ದೆ.

ಅದರ ಜತೆಗೆ ಅವರು ಕಟ್ಟಿದ ವಿದ್ಯಾಸಂಸ್ಥೆ! ಬಡಮಕ್ಕಳಿಗೆ ಅ ಉಳಿದುಕೊಂಡು ಓದುವ ವ್ಯವಸ್ಥೆ ನೀಡಿ ಅಲ್ಲಿನ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಕಾಯಕದಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದ ರೀತಿ ಕಂಡು ಮೂಕಳಾಗಿದ್ದೆ. ಅವರಿಬ್ಬರ ನಡುವೆ ಇದ್ದ ಸ್ನೇಹ, ಸಲುಗೆ, ಅಕ್ಕರೆ, ಗೌರವ, ಸತ್ವಯುತವಾದ ಮಾತುಗಳನ್ನು ಕೇಳುವುದೇ ಒಂದು ಸೊಗಸು. ಎಲ್ಲವನ್ನೂ ಕೇಳಿಸಿ ಕೊಳ್ಳುತ್ತಾ, ಸೂಜಿಗಲ್ಲಿನಂತೆ ಸೆಳೆದದ್ದು ಎಷ್ಟೆಲ್ಲ ಏರಿಳಿತಗಳ ನಡುವೆಯೂ ಅವರ ಮಾಸದ ನಿಷ್ಕಲ್ಮಶ ನಗು. ಅಂತಹ ದಿವ್ಯ ಚೈತನ್ಯವನ್ನು ಕಂಡಾಗ ಯಾವ ಪ್ರಚೋದನೆಯೂ ಇಲ್ಲದೆ ಕಾಲಿಗೆ ನಮಸ್ಕರಿಸುತ್ತಿದೆ.

ಯಾಕಮ್ಮಾ ಇದೆ? ಎನ್ನುತ್ತಲೇ ಅದೇ ನಗುವಿನಿಂದ ಹಾರೈಸುತ್ತಿದ್ದರು. ಗಾಂಧಿಯ ಒಡನಾಡಿಯಾಗಿದ್ದರಿಂದ ಗಾಂಧಿಯೆಡೆಗಿದ್ದ ನನ್ನೆಲ್ಲ ಅನುಮಾನಗಳನ್ನೂ ಅವರೊಂದಿಗೆ ಚರ್ಚಿಸುತ್ತಾ ಬಗೆಹರಿಸಿಕೊಳ್ಳುತ್ತಿದ್ದೆ. ರೈತರು ಇಷ್ಟೆಲ್ಲ ಕಷ್ಟ, ಬವಣೆ ಅಂತ ಹೇಳ್ತಾರಲ್ಲ? ಅವರ ಬಿಡುವಿನ ಸಮಯದಲ್ಲಿ ಮನೆಯ ಮಾಡುವಂತಹ ಸಣ್ಣ ಪುಟ್ಟ ಗೃಹ ಉದ್ಯಮಗಳಕೆ ತೊಡಗಿಕೊಳ್ಳುವು ದಿಲ್ಲ? ಜೂಜು, ಕುಡಿತಗಳ ದಾಸರಾಗಿ ತಮ್ಮ ಶ್ರಮದ ದುಡಿಮೆಯ ಹಣವನ್ನೆಲ್ಲ ಕಳೆದುಕೊಳ್ಳುವುದರ ಜತೆಗೆ ತಮ್ಮ ಕುಟುಂಬ ವನ್ನೂ ಸಂಕಷ್ಟಕ್ಕೆ ಒಡ್ಡಿ ತಮ್ಮ ಆರೋಗ್ಯವನ್ನೂ ಹಾಳು ಮಾಡಿಕೊಳ್ಳುತ್ತಾರಲ್ಲ ಯಾಕೆ? ಅವರ ಬಗ್ಗೆ ಅವರಿಗೆ ಪ್ರೀತಿ
ಇರುವು ದಿಲ್ಲವಾ? ಎಂದು ಅಮಾಯಕವಾಗಿ ಕೇಳಿದ್ದೆ.

‘ಅದನ್ನು ಯೋಚಿಸಬೇಕಾದವರು ಅವರು. ಅವರಿಗೇ ಅದರ ಪರಿವೆಯಿಲ್ಲದ ಮೇಲೆ ಯಾರೇನು ಹೇಳಿದರೂ ಅವರ ಮೇಲೆ ಪ್ರಭಾವ ಬೀರುವುದಿಲ್ಲ. ಬದಲಿಗೆ ನಮ್ಮನ್ನೇ ನಿಷ್ಠುರರನ್ನಾಗಿ ಮಾಡಿ ಸಂಚು ಮಾಡುತ್ತಾರೆ. ಅಂದುಕೊಂಡಷ್ಟು ಸುಲಭ ವಲ್ಲಮ್ಮಾ ಅದೆಲ್ಲ ಎಂದು ವಿಷಾದದಿಂದ ನಕ್ಕಿದ್ದರು. ಇದು ನನ್ನ ನಿಲುಕಿನದಲ್ಲ ಎಂದೆನಿಸಿ ನಾನೂ ಅದನ್ನು ಅಲ್ಲಿಗೇ ಮರೆತು ಸುಮ್ಮನಾದೆ. ಆದರೆ ಇವತ್ತಿಗೂ ಮನದೊಳಗೆ ಅದು ಚುಚ್ಚುತ್ತಲೇ ಇರುತ್ತದೆ.

ವೀ, ಬೆಳಗೆರೆ ಅಜ್ಜನಿಗೆ ಹೆಂಡತಿ, ಮಕ್ಕಳು ಯಾರೂ ಇಲ್ಲವಾ? ಎಂದು ಕೇಳಿದಾಗ, ಇಲ್ಲದೇ ಏನು? ಆ ಕಾಲಕ್ಕೆ ಹಿರಿಯೂರಿನ ಹತ್ತು ಮನೆಗಳ ಒಡೆಯರಾಗಿದ್ದ ಹಾಗೂ ಹಿರಿಯೂರಿನ ಮಾರಿಕಣಿವೆಯಲ್ಲಿ ಇಪ್ಪತ್ತು ಎಕರೆ ಫಲವತ್ತಾದ ಜಮೀನಿದ್ದ ಸಾಹಿತ್ಯ-ಸಂಗೀತಾಸಕ್ತರಾಗಿದ್ದ ಅವಧಾನಿಗಳಾದ ಮೋಕ್ಷಗುಂಡಂ ಹನುಮಂತರಾಯರ ಹಿರಿಯ ಪತ್ನಿಯ ಮಗಳು ಪದ್ಮಾವತಿಯನ್ನ ಬಹಳ ಸಂಭ್ರಮ ಹಾಗೂ ಆಡಂಬರದಿಂದಲೇ ೧೯೩೯ರಲ್ಲಿ ಮದುವೆಯಾಗಿದ್ದ. ಮದುವೆಯಾದಾಗ ಆಕೆಗಿನ್ನೂ ಹನ್ನೆರಡು
ವರುಷ. ಈತನಿಗೆ ಇಪ್ಪತ್ತು.

ಮದುವೆಯಾಗಿ ಮೂರು ವರುಷಗಳಾದ ನಂತರವೇ ಸಹಜೀವನ ಆರಂಭವಾದದ್ದು. ಅವರ ನಡುವೆ ಸಾಹಿತ್ಯ ಸಂವಾದಗಳಿರ ದಿದ್ದರೂ ಸಾಮರಸ್ಯದಿಂದ ಕೂಡಿದ ಸಮೃದ್ಧವಾದ ಬದುಕಿತ್ತು. ಎಸ್ಸೆಸ್ಸೆಲ್ಸಿ ಪಾಸಾಗಿದ್ದ ಮಾವನಿಗೆ ಎಚ್.ಎ.ಎಲ್.ನಲ್ಲಿ ನೌಕರಿಯಿದ್ದುದರಿಂದ ಬೆಂಗಳೂರಿನ ಪ್ಯಾಲೆಸ್ ಗುಟ್ಟಳ್ಳಿಯ ಮನೆ ಮಾಡಿಕೊಂಡಿದ್ದರು. ಅ ಮೊದಲ ಮಗುವೂ ಹುಟ್ಟಿತು.
ಮುರಳಿ ಶ್ರೀಧರ ಎಂದು ವಿಧ್ಯುಕ್ತವಾಗಿ ನಾಮಕರಣ ಮಾಡಿದರೂ, ಪ್ರೀತಿಯಿಂದ ಗುಂಡಾ ಎಂದು ಕರೆದರು.

ಮಗ ಹುಟ್ಟಿದ ನಂತರ ಏರ್ ಕ್ರಾಫ್ಟ್ ನ ಎಚ್‌ಎಎಲ್ ನೌಕರಿ ತೊರೆದು ಬೆಳಗೆರೆಗೆ ಹಿಂತಿರುಗುತ್ತಾರೆ. ಅ ಸಮೀಪದ ಹೆಗ್ಗೆರೆಯಲ್ಲಿ ಇಂಗ್ಲಿಷ್ ಟೀಚರ್ ಆಗಿ ನೇಮಕಗೊಂಡ ನಂತರ ಬೆಳಗೆರೆಯಿಂದ ಹೆಗ್ಗೆರೆಗೆ ಕುಟುಂಬವನ್ನು ಕರೆಸಿಕೊಳ್ಳುತ್ತಾನೆ. ಶಿಕ್ಷಕನಾಗಿ ಮಗನೊಂದಿಗೆ ಆಟವಾಡುತ್ತಾ, ಕಥೆ ಹೇಳುತ್ತಾ, ತನ್ನೊಂದಿಗೆ ಶಾಲೆಗೆ ಕರೆದೊಯ್ಯುತ್ತಾ ಮಗುವಿಗೆ ನಾಲ್ಕು ವರುಷ ತುಂಬು ವಷ್ಟರಲ್ಲಿ ಪದ್ಮಾವತಿ ಮತ್ತೊಂದು ಮಗುವಿಗೆ ಗರ್ಭವತಿಯಾಗುತ್ತಾರೆ.

ಬೆಳಗೆರೆಯ ತೋಟದಲ್ಲಿ ಮತ್ತೊಂದು ಹೂವು ಮೂಡಲಿದೆ. ಈ ಬಾರಿ ಹೆಣ್ಣೇ ಆಗಲಿ ಎನ್ನುವುದು ಇಬ್ಬರ ಕನಸಾಗಿತ್ತು. ಆದರೆ ಯಾರ ಗಮನಕ್ಕೂ ಬಾರದಂತೆ ವಿಧಿ ಬೇರೆಯದೇ ಸಂಚು ಹೂಡಿತ್ತು. ತಮ್ಮ ಸ್ವಭಾವ, ಪ್ರೀತಿ, ಕವಿತಾ ಶಕ್ತಿಯಿಂದ ಎಲ್ಲರ
ಕಣ್ಮಣಿ ಯಾಗಿದ್ದ ಸಹೋದರಿ ಬೆಳಗೆರೆ ಜಾನಕಮ್ಮನೂ ಗರ್ಭವತಿಯಾಗುತ್ತಾರೆ. ಅಷ್ಟರಗಲೇ ಅವರಿಗೆ ಕಮಲನಾಭ ಹಾಗೂ ಪದ್ಮನಾಭ ಎಂಬ ಇಬ್ಬರು ಗಂಡು ಮಕ್ಕಳಿರುತ್ತಾರೆ.

ಹಿರಿಯ ಮಗ ಕಮಲನಾಭ ಎಸ್ಸೆಸ್ಸೆಲ್ಸಿ ಓದುತ್ತಿದ್ದರೆ, ಕಿರಿಯ ಮಗ ಏಳನೇ ತರಗತಿ. ಏಳೂವರೆ ತಿಂಗಳಿಗೇ ಪ್ರಸವವಾಗಿ ಹೆಣ್ಣು ಮಗು ಹುಟ್ಟುವಾಗಲೇ ಸತ್ತು ಹೋಗಿರತ್ತೆ. ಅವರ ಆರೋಗ್ಯದಲ್ಲಿ ಏರುಪೇರಾಗಿ ಸ್ಥಿತಿ ಗಂಭೀರವಾಗುತ್ತದೆ. ವೈದ್ಯರು ಅವರಿಗೆ ಮಾತನಾಡಲೇ ಬಾರದೆಂದು ಎಚ್ಚರಿಸಿರುತ್ತಾರೆ. ಅಂಥದ್ದರಲ್ಲೂ ಅವರು ತಮ್ಮ ತಂಗಿ ಪಾರ್ವತಮ್ಮನನ್ನು ಕರೆದು ಕೊನೆಯ ಕವಿತೆಯನ್ನು ಹೇಳಿ ಬರೆಸುತ್ತಾರೆ. ಇತ್ತ ಪದ್ಮಾವತಿಗೂ ಏಳೂವರೆ ತಿಂಗಳ ತುಂಬು ಗರ್ಭ. ಅವರನ್ನು ಹೆರಿಗೆಗೆ ಹಿರಿಯೂರಿಗೆ ಕಳಿಸುಷ್ಟರ ಜಾನಕಮ್ಮನಿಗೆ ಆರೋಗ್ಯ ಸರಿಯಿಲ್ಲವೆಂಬ ಸುದ್ದಿ ಬಂದು ತಲುಪುತ್ತದೆ. ಬಳ್ಳಾರಿಗೆ ಧಾವಿಸಿ ಬರುವಷ್ಟರ ಅಕ್ಕ ಜಾನಕಮ್ಮ ಕೊನೆಯುಸಿರೆಳೆದಿರುತ್ತಾರೆ. ಒಂದೇ ರಾತ್ರಿಯಲ್ಲಿ ಎರಡು ಸಾವು! ಮಾವ ವಿಭ್ರಾಂತನಾಗಿದ್ದ. ಅಕ್ಕನನ್ನು, ಆಕೆ ಮಗುವಿನ ಸಮೇತ ಬೆಂಕಿಗಿಟ್ಟು ಬಳ್ಳಾರಿಯಿಂದ ಹೆಗ್ಗೆರೆಗೆ ಬಂದವನು ಒಂದು ಸಾಂತ್ವನದ ಮಾತಿನ, ತಬ್ಬುಗೆಯ ನಿರೀಕ್ಷೆ ಯಲ್ಲಿದ್ದ.

ಅದೊಂದು ದಿನ ಹಿರಿಯೂರಿನ ಬಸ್‌ಸ್ಟ್ಯಾಂಡಿನಲ್ಲಿ ಮಾತಾಡುತ್ತಾ ನಿಂತವನಿಗೆ ಯಾಕೋ ಗುಂಡನಿಗೆ ಆರೋಗ್ಯ ಚೆನ್ನಾಗಿಲ್ಲ. ಫಿಟ್ಸ್ ನಿಲ್ಲುತ್ತಲೇ ನೀನು ಬೇಗ ಬಾ ಅನ್ನುವ ಸುದ್ದಿ ತಿಳಿದು ಅಲ್ಲಿಗೆ ದೌಡಾಯಿಸುವ ಹೊತ್ತಿಗೆ ನಾಲ್ಕು ವರುಷದ ಮಗ ನೋಡ ನೋಡುತ್ತಿದ್ದಂತೆಯೇ ಕೊಯುಸಿರೆಳೆದ. ಪದ್ಮಾವತಿ ಆಗ ತುಂಬು ಗರ್ಭಿಣಿ. ಮಗನನ್ನು ಕಳೆದುಕೊಂಡ ದುಃಖದಲ್ಲಿ ಅತ್ತೂ ಅತ್ತೂ ಕೆಲವೇ ಗಂಟೆಗಳಲ್ಲಿ ಗರ್ಭ ಕರಗಿ ಹೊಟ್ಟೆಯಲ್ಲಿದ್ದ ಹೆಣ್ಣು ಮಗುವೂ ಸತ್ತು ಹೋಗುತ್ತದೆ.

ಮನೆಯ ಹಿಂದಿನ ವೇದಾವತಿ ನದಿ ತೀರದಲ್ಲಿ ಎರಡೂ ಮಕ್ಕಳ ಸಂಸ್ಕಾರ ಮಾಡಿ ಮನೆಗೆ ಮರಳುವಷ್ಟರಲ್ಲಿ ಮತ್ತೊಂದು ಆಘಾತಕರ ಸುದ್ದಿ ಕಾದು ಕುಳಿತಿರುತ್ತದೆ. ಪದ್ಮಾವತಿ ಕೂಡ ಹೋಗಿಬಿಟ್ಲು ಕಣೋ! ಅಂತ. ಅಷ್ಟು ಪ್ರೀತಿಯ ಅಕ್ಕ, ಆಕೆಯ ಮಗು-ಸತ್ತ ಇಪ್ಪತ್ತೇ ದಿನಗಳಿಗೆ ನಾಲ್ಕು ವರ್ಷದ ಮಗ, ಇನ್ನೊಂದು ಮಗು, ಅಂಥ ಪ್ರೀತಿಯ ಹೆಂಡತಿ ಎಲ್ಲರೂ ಸತ್ತು ಹೋಗಿದ್ದರು.

ಇವತ್ತು ಬೆಳಗೆರೆ ಕೃಷ್ಣಶಾಸ್ತ್ರಿಗಳು ಅಂದರೆ ಯಾರು ಯಾರಿಗೋ ಏನೇನಾಗಿಯೋ ಅರ್ಥವಾಗುತ್ತಾರೆ. ನನಗೆ ಅರ್ಥವಾಗುವ ಮಾಮನೇ ಬೇರೆ. ಆ ಐದು ಸಾವುಗಳಿಂದ ಚೇತರಿಸಿಕೊಂಡ ಮಾಮ. ಅವನಿಗದು ಹೇಗೆ ಸಾಧ್ಯವಾಯಿತು? ಕೇಳಿದರೆ, ನನಗೆ ಎಲ್ಲ ಮರೆತು ಹೋಗಿದೆ ಕಣೋ ಅನ್ನುತ್ತಾನೆ. ಅವನ ಮರೆವಿನ ಅವನ ಸ್ಮೃತಿ ಇದೆ… ಎಂದು ಹೇಳುತ್ತಿದ್ದರೆ, ಇದೆಲ್ಲ ಕೇಳುವುದಕ್ಕೇ ಇಷ್ಟು ಭೀಕರವಾಗಿದೆ. ಇನ್ನು ಅದೆಲ್ಲವನ್ನೂ ಕಂಡು, ಅನುಭವಿಸಿಯೂ ನಗು ಚೆದುರದಂತೆ ಬದುಕು ಕಟ್ಟಿಕೊಂಡ ಬೆಳಗೆರೆಯ
ಕೃಷ್ಣಶಾಸಿಯವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ತವಕ ಹೆಚ್ಚಾಗಿತ್ತು.