Friday, 2nd June 2023

ಮಧ್ಯಯುಗದ ಪ್ರಬುದ್ಧವೈದ್ಯ- ಅವಿಸೆನ್ನ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಒಂದು ಔಷಧವನ್ನು ಸಿದ್ಧಪಡಿಸಬೇಕಾದರೆ, ಅದಕ್ಕೆ ಬೇಕಾಗುವ ಕಚ್ಚಾಪದಾರ್ಥಗಳು, ಅವುಗಳ ಪ್ರಮಾಣ, ಔಷಧ ತಯಾರಿಕಾ ವಿಧಿ, ವಿವಿಧ ವಯೋಮಾನದವರಿಗೆ ನೀಡಬೇಕಾದ ಪ್ರಮಾಣ, ಔಷಧ ಸೇವನಾ ಅವಧಿ ಇತ್ಯಾದಿ ಮೂಲಭೂತ ಮಾಹಿತಿಗಳು ಇಲ್ಲಿವೆ.

ಮಧ್ಯಯುಗದ ಪ್ರಬುದ್ಧ ವೈದ್ಯ ಅವಿಸೆನ್ನ ಪ್ರಾಚೀನ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ವೈದ್ಯರ ಪಟ್ಟಿಯನ್ನು ಮಾಡಿದರೆ, ಅದರಲ್ಲಿ ಇಬ್ನ್ ಸಿನ ಅಥವಾ ಅವಿಸೆನ್ನನ ಹೆಸರು ಖಂಡಿತ ಒಂದು ಸ್ಥಾನವನ್ನು ಪಡೆಯುತ್ತದೆ. ಇಸ್ಲಾಂ ಜಗತ್ತಿನಲ್ಲಿ ಇಬ್ನ್ ಸಿನ ಎಂದು ಹೆಸರಾಗಿರುವ ಅಬು ಅಲಿ ಅಲ್-ಹುಸ್ಯಾನ್ ಬಿನ್ ಅಬ್ದುಲ್ಲ ಇಬ್ನ್ ಅಲ್-ಹಸನ್ ಬಿನ್ ಅಲಿ ಬಿನ್ ಸಿನ್ ಅಲ್ ಬಾಲ್ಕಿ ಅಲ್ ಬುಖಾರಿ ಇಬ್ನ್ ಸಿನ ಯೂರೋಪಿ ಯನ್ನರಿಗೆ ಅವಿಸೆನ್ನ (೯೮೦-೧೦೩೭) ಎಂಬ ಹೆಸರಿನಿಂದ ಸುಪರಿಚಿತ.

ಅವಿಸೆನ್ನ ಇಂದಿನ ಉಜ್ಬೇಕಿಸ್ತಾನದ ಅ-ನ, ಬುಖಾರದಲ್ಲಿ ಹುಟ್ಟಿದ. ತಂದೆ ಬಾಲ್ಕ್ ನಗರದ ಅಬ್ದುಲ್ಲ. ತಾಯಿ ಸಿತಾರ. ಅವಿಸೆನ್ನ ಬಾಲ ಪ್ರತಿಭಾವಂತ. ತನ್ನ ೧೦ನೆಯ ಹುಟ್ಟಿದ ಹಬ್ಬದ ಹೊತ್ತಿಗೆ ಕುರಾನ್‌ನನ್ನು ಸಂಪೂರ್ಣ ವಾಗಿ ಕಂಠಪಾಠ ಮಾಡಿದ್ದ. ಅರೆಬಿಕ್ ಭಾಷೆಯ ಮೇಲೆ ಪ್ರಭುತ್ವವನ್ನು ಪಡೆದಿದ್ದ. ಮುಂದಿನ ೬ ವರ್ಷಗಳಲ್ಲಿ ಇಸ್ಲಾಮಿಕ್ ಧರ್ಮ, ಇಸ್ಲಾಮಿಕ್ ಕಾನೂನು, ತರ್ಕಶಾಸ್ತ್ರ ಹಾಗೂ ಪ್ರಾಕೃತಿಕ ವಿಜ್ಞಾನಗಳನ್ನು ಕಲಿತ. ಅವಿಸೆನ್ನ ತನ್ನ ೧೩ನೆಯ ವಯಸ್ಸಿನಲ್ಲಿ ವೈದ್ಯಕೀಯ ಶಿಕ್ಷಣ ಆರಂಭಿಸಿದ.

೧೮ನೆಯ ವಯಸ್ಸಿಗೆ ತನ್ನ ಶಿಕ್ಷಣವನ್ನು ಮುಗಿಸಿದ. ವೈದ್ಯನಾಗಿ ತನ್ನ ವೃತ್ತಿಯನ್ನು ಆರಂಭಿಸುವ ಹೊತ್ತಿಗೆ ಇಸ್ಲಾಂ ಜಗತ್ತಿನಲ್ಲಿ ಪ್ರಖ್ಯಾತನಾಗಿದ್ದ. ಈತನ ಹೆಸರನ್ನು ಕೇಳಿ ಬುಖಾರದ ಸುಲ್ತಾನ ನುಹ್ ಇಬ್ನ್ ಮನ್ಸೂರ್ ಈತನನ್ನು ತನ್ನ ಆಸ್ಥಾನಕ್ಕೆ ಆಹ್ವಾನಿಸಿದ. ಅವಿಸೆನ್ನ ಸುಲ್ತಾನನಿಗೆ ತಗುಲಿದ್ದ ಸೋಂಕನ್ನು ಗುರುತಿಸಿದ. ಚಿಕಿತ್ಸೆ ನೀಡಿದ ಹಾಗೂ ಗುಣಪಡಿಸಿದ. ಸುಲ್ತಾನನಿಗೆ ಬಹಳ ಸಂತೋಷವಾಯಿತು.

ನಿನಗೇನು ಬಹುಮಾನ ಬೇಕು, ಅದನ್ನು ನಾನು ಕೊಡುವೆ ಎಂದಾಗ ಅವಿಸೆನ್ನ ಯಾವುದೇ ಹಣ, ಅಧಿಕಾರ, ಅಂತಸ್ತನ್ನು ಯಾಚಿಸಲಿಲ್ಲ. ಬದಲಿಗೆ ಸುಲ್ತಾನನ ಅರಮನೆಯ ಗ್ರಂಥ ಭಂಡಾರದಲ್ಲಿದ್ದ ಅಮೂಲ್ಯವಾದ ಗ್ರಂಥಗಳನ್ನು ಅಧ್ಯಯನ ಮಾಡಲು ಅವಕಾಶವನ್ನು ಬೇಡಿದ. ಸ್ವಲ್ಪ ದಿನಗಳಲ್ಲಿ ಸುಲ್ತಾ ನನು ಮರಣಿಸಿದ. ಬುಖಾರವನ್ನು ತುರ್ಕಿಯ ಅರಸ ಮುಹಮ್ಮದ್ ಘಜ್ನವಿ ಗೆದ್ದಿದ್ದ. ಹಾಗಾಗಿ ಅವಿಸೆನ್ನ ಬುಖಾರವನ್ನು ಬಿಟ್ಟು ಕ್ಯಾಸ್ಪಿಯನ್ ಸಮುದ್ರದ ಬಳಿಯ ಜೆರ್ಜಾನ್ ನಗರವನ್ನು ಸೇರಿದ. ಇಲ್ಲಿ ಖಗೋಳವಿಜ್ಞಾನ ಮತ್ತು ತರ್ಕಶಾಸ್ತ್ರದ ಬಗ್ಗೆ ಬೋಧಿಸಿದ.

ನಂತರ ಅಲ್-ರಯ್ ನಗರಕ್ಕೆ (ಇಂದಿನ ಟೆಹರಾನ್) ಬಂದು ತನ್ನ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದ. ಇಲ್ಲಿ ಸುಮಾರು ೩೦ ಪುಸ್ತಕಗಳನ್ನು
ಬರೆದ. ನಂತರ ಹಮ್ದಾನ್ ನಗರಕ್ಕೆ ಹೋದ. ಆಗ ರಾಜಕುಮಾರ ಎಮಿರ್ ಶಾಮ್ಸ್ ಅಲ್-ದವ್ಲ ತೀವ್ರ ಸ್ವರೂಪದ ಹೊಟ್ಟೆನೋವಿನಿಂದ ನರಳುತ್ತಿದ್ದ. ಅದನ್ನು ಅವಿಸೆನ್ನ ಗುಣಪಡಿಸಿದ. ಇದರಿಂದ ತೃಪ್ತನಾದ ಎಮಿರ್ ಅವಿಸೆನ್ನ ನನ್ನು ತನ್ನ ಖಾಸಗೀ ವೈದ್ಯನನ್ನಾಗಿ ನೇಮಕ ಮಾಡುವುದರ ಜೊತೆಯಲ್ಲಿ ಮಹಾ ವಜ಼ೀರ್ (ಪ್ರಧಾನಮಂತ್ರಿ) ಪಟ್ಟವನ್ನೂ ನೀಡಿದ. ಶಮ್ಸ್ ಅಲ್ ದವ್ಲಾನ ಮರಣಾ ನಂತರ, ಅವಿಸೆನ್ನ ಇಸಹಾನ್ ನಗರದ ಸುಲ್ತಾನನ ಬಳಿಗೆ ಕೆಲಸವನ್ನು ಬೇಡಿ ಪತ್ರವನ್ನು ಬರೆದ. ಇದು ಹಮ್ದಾನ್ ನಗರದ ಎಮಿರನಿಗೆ ಗೊತ್ತಾಗಿ, ಅವನು ಅವಿಸೆನ್ನನನ್ನು ಬಂಧನದಲ್ಲಿಟ್ಟ. ಅವಿಸೆನ್ನ ಬಂಧನ ದಲ್ಲಿ ಅನೇಕ ಪುಸ್ತಕಗಳನ್ನು ಬರೆದ. ಕೊನೆಗೆ ಬಂಧನ ದಿಂದ ಬಿಡುಗಡೆಯಾಗಿ ಎಮಿರನ ಸೇವೆಯಲ್ಲಿ ತನ್ನ ಉಳಿದ ಕಾಲವನ್ನು ಕಳೆದ. ಕ್ರಿ.ಶ.೧೦೩೭ರಲ್ಲಿ ತನ್ನ ೫೭ನೆಯ ವಯಸ್ಸಿ ನಲ್ಲಿ ಮರಣಿಸಿದ. ಹಮ್ದಾನಿನಲ್ಲಿ ಆತನ ಸಮಾದಿಯಿದೆ.

ಅವಿಸೆನ್ನನು ತನ್ನ ಜೀವಮಾನದಲ್ಲಿ ಎಷ್ಟು ಪುಸ್ತಕಗಳನ್ನು ಬರೆದ ಎನ್ನುವುದರ ಬಗ್ಗೆ ಗೊಂದಲವಿದೆ. ಆತನು ಸುಮಾರು ೪೫೦ ಪುಸ್ತಕಗಳನ್ನು ಬರೆದಿದ್ದು, ಅವುಗಳಲ್ಲಿ ೨೪೦ ಪುಸ್ತಕಗಳು ಉಳಿದು ಬಂದಿವೆ. ವೈದ್ಯಕೀಯ ಇತಿಹಾಸಕಾರರು ಸಾಮಾನ್ಯವಾಗಿ ಅವಿಸೆನ್ನನದು ಎನ್ನಲಾದ ೨೧ ಪ್ರಧಾನ ಪುಸ್ತಕಗಳನ್ನು ಹಾಗೂ ೨೪ ಕಿರುಪುಸ್ತಕಗಳ ಪಟ್ಟಿಯನ್ನು ನೀಡುವುದುಂಟು. ಅವಿಸೆನ್ನನು ಬರೆದ ಪುಸ್ತಕಗಳಲ್ಲಿ ಮಕುಟಪ್ರಾಯವಾದದ್ದು ಹಾಗೂ ಆತನ ಹೆಸರನ್ನು ಜಾಗತಿಕ ವೈದ್ಯಕೀಯದಲ್ಲಿ ಚಿರಸ್ಥಾಯಿಯನ್ನಾಗಿ ಮಾಡಿದ್ದು ಅಲ್ ಖಾನೂನ್, ಫಿ ಅಲ್- ತಿಬ್ ಎನ್ನುವ ಪುಸ್ತಕ. ಸ್ಥೂಲವಾಗಿ ಇದನ್ನು ವೈದ್ಯಕೀಯ ಸಂಹಿತೆ ಎಂದು ಅನುವಾದಿಸಬಹುದು.

ಅವಿಸೆನ್ನ ಇದನ್ನು ಅರಾಬಿಕ್ ಭಾಷೆಯಲ್ಲಿ ಬರೆದಿದ್ದ. ಕ್ರಿ.ಶ. ೧೨ನೆಯ ಶತಮಾನದ ಹೊತ್ತಿಗೆ ಜೆರಾರ್ಡ್ ಕ್ರೆಮೋನ ಎನ್ನುವವನು ಇದನ್ನು ದಿ
ಕೆನಾನ್ ಆ- ಮೆಡಿಸಿನ್ ಎನ್ನುವ ಹೆಸರಿನಲ್ಲಿ ಲ್ಯಾಟಿನ್ ಭಾಷೆಗೆ ಅನುವಾದಿಸಿದ. ನಂತರ ಪರ್ಷಿಯನ್, ಚೈನೀಸ್, ಹಿಬ್ರೂ, ಜರ್ಮನ್, ಫ್ರೆಂಚ್, ಇಂಗ್ಲಿಷ್ ಭಾಷೆಗಳಿಗೆ ಅನುವಾದವಾಯಿತು. ಇದು ೧೭ನೆಯ ಶತಮಾನದವರೆಗೆ, ಯೂರೋಪಿನ ವೈದ್ಯಕೀಯ ವಿದ್ಯಾಲಯಗಳಲ್ಲಿ ಸಾಟಿಯಿಲ್ಲದ ವೈದ್ಯಕೀಯ ಪಠ್ಯ ಪುಸ್ತಕವಾಗಿ ಹೆಸರನ್ನು ಪಡೆಯಿತು.

ವೈದ್ಯಕೀಯ ಸಂಹಿತೆಯು ಐದು ಸಂಪುಟಗಳ ಸಮುಚ್ಚಯ. ಅವಿಸೆನ್ನನು ತನ್ನ ಸಮಕಾಲೀನ ಜಾಗತಿಕ ವೈದ್ಯಕೀಯ ಜ್ಞಾನವನ್ನು ಸಂಗ್ರಹಿಸಿರುವು ದರ ಜೊತೆಗೆ, ತನ್ನದೇ ಅದ ಅನೇಕ ಸ್ವತಂತ್ರ ಹೊಳಹುಗಳನ್ನು ನೀಡಿರುವುದು ಅವನ ಹೆಗ್ಗಳಿಕೆಯಾಗಿದೆ. ಅವಿಸೆನ್ನನ ಐದು ಸಂಪುಟಗಳತ್ತ ಒಂದು ಪಕ್ಷಿನೋಟವನ್ನು ಹರಿಸೋಣ. ಮೊದಲನೆಯ ಸಂಪುಟದಲ್ಲಿ ನಾಲ್ಕು ಭಾಗಗಳಿವೆ. ಭಾಗ- ೧ರಲ್ಲಿ ವೈದ್ಯಕೀಯ ಶಿಕ್ಷಣದ ಬಗ್ಗೆ ಮಾಹಿತಿಯಿದೆ. ವೈದ್ಯಕೀಯ ಎಂದರೆ ಏನು? ವೈದ್ಯಕೀಯ ಸಿದ್ಧಾಂತಗಳೇನು? ವೈದ್ಯಕೀಯದ ಉದ್ದೇಶಗಳೇನು? ಮಾನವ ಶರೀರ ರಚನೆಯಲ್ಲಿ ಪಾಲುಗೊಳ್ಳುವ ಧಾತುಗಳು, ರಸಗಳು, ಮನೋಭಾವಗಳು ಇತ್ಯಾದಿ ಹಾಗೂ ಮಾನವ ದೇಹ ರಚನೆ, ದೇಹದಲ್ಲಿರುವ ವಿವಿಧ ಭಾಗಗಳು ಹಾಗೂ ಅವುಗಳ ಕೆಲಸ ಕಾರ್ಯಗಳ ವಿವರಣೆಯು ದೊರೆಯುತ್ತದೆ.

ಭಾಗ-೨ರಲ್ಲಿ ರೋಗಗಳು ಬರಲು ನಾನಾ ಕಾರಣಗಳು ಹಾಗೂ ವಿವಿಧ ರೋಗಗಳಲ್ಲಿ ಕಂಡುಬರುವ ರೋಗಲಕ್ಷಣ ಗಳ ವಿವರಣೆಯಿದೆ. ಭಾಗ-೩ರಲ್ಲಿ ಆಹಾರ ಪದ್ಧತಿ, ಪಥ್ಯಗಳ ಜೊತೆಯಲ್ಲಿ ರೋಗಗಳು ಬರದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ವಿವರಣೆಯಿದೆ. ಭಾಗ-೪ ರಲ್ಲಿ
ರೋಗಚಿಕಿತ್ಸೆಯ ಸಾಮಾನ್ಯ ತತ್ತ್ವಗಳ ವಿವರಣೆಯಿದೆ. ಎರಡನೆಯ ಸಂಪುಟದಲ್ಲಿ ಅತ್ಯಂತ ಸರಳ ಔಷಧಗಳ ವಿವರಣೆಯಿದೆ. ಪ್ರತಿಯೊಂದು ಔಷಧವು ಮನುಷ್ಯನ ಶರೀರದಲ್ಲಿ ಹೇಗೆ ಕೆಲಸ ಮಾಡುತ್ತದೆ ಹಾಗೂ ಹೇಗೆ ಗುಣಪಡಿಸುತ್ತದೆ ಎನ್ನುವ ವಿಚಾರವಿದೆ. ಮೂರನೆಯ ಸಂಪುಟದಲ್ಲಿ ಮಾನವ ದೇಹದ ವಿವಿಧ ಅಂಗಗಳಿಗೆ ಬರುವ ಕಾಯಿಲೆಗಳ ಕ್ರಮಬದ್ಧ ವಿವರಣೆಯಿದೆ.

ಮಿದುಳು, ಕಣ್ಣು, ಕಿವಿ, ಬಾಯಿ ಮತ್ತು ಗಂಟಲು, ಶ್ವಾಸಕೋಶಗಳು, ಹೃದಯ, ಸ್ತನಗಳು, ಜಠರ, ಯಕೃತ್ತು, ಗುಲ್ಮ, ಕರುಳು, ಮೂತ್ರಪಿಂಡಗಳು ಹಾಗೂ
ಜನನಾಂಗಗಳ ಕಾಯಿಲೆಗಳ ವರ್ಣನೆಯಿದೆ. ನಾಲ್ಕನೆಯ ಸಂಪುಟದಲ್ಲಿ ೬ ಭಾಗಗಳಿವೆ. ಮೊದಲನೆಯ ಭಾಗದಲ್ಲಿ ವಿವಿಧ ಜ್ವರಗಳ ವಿವರಣೆಯಿದೆ. ಎರಡನೆಯ ಭಾಗದಲ್ಲಿ ರೋಗಲಕ್ಷಣಗಳ ಬಗ್ಗೆ ಹಾಗೂ ರೋಗ ಮುನ್ನರಿವಿನ (ಪ್ರೋಗ್ನೋಸಿಸ್) ಬಗ್ಗೆ ಮಾಹಿತಿಯಿದೆ. ಮೂರನೆಯ ಭಾಗದಲ್ಲಿ ಶರೀರದಲ್ಲಿ ಸಂಚಯವಾಗಬಹುದಾದ (ಸೆಡಿಮೆಂಟ್ಸ್) ವಿವಿಧ ವಸ್ತುಗಳ ಪರಿಚಯವಿದೆ. ನಾಲ್ಕನೆಯ ಭಾಗವು ಗಾಯಗಳ ಬಗ್ಗೆ ವಿವರಿಸಿದರೆ, ಐದನೆಯ ಭಾಗವು ಕೀಲು ತಪ್ಪುವುದರ ಬಗ್ಗೆ ಮಾಹಿತಿಯನ್ನು ನೀಡುತ್ತವೆ.

ಆರನೆಯ ಭಾಗವು ವಿವಿಧ ವಿಷವಸ್ತುಗಳ ಪ್ರಯೋಗ, ವಿಷವೇರಿಕೆಯ ಲಕ್ಷಣಗಳು ಹಾಗೂ ಆವುಗಳ ಚಿಕಿತ್ಸೆಯ ಕುರಿತು ವರ್ಣಿಸುತ್ತದೆ. ಇದರ ಜೊತೆ ಯಲ್ಲಿ ಸುರೂಪಿಕೆಯ ಬಗ್ಗೆ ಹಾಗೂ ಪ್ರಸಾದನದ ಬಗ್ಗೆ (ಕಾಸ್ಮೆಟಿಕ್ಸ್) ಮಾಹಿತಿಯನ್ನು ಒದಗಿಸುತ್ತದೆ. ಐದನೆಯ ಸಂಪುಟವು ಪ್ರಧಾನವಾದ
ಸಂಪುಟ. ಇದರಲ್ಲಿ ಯಾವ ರೋಗಕ್ಕೆ ಯಾವ ಔಷಧವನ್ನು ನೀಡಬೇಕು ಎನ್ನುವುದರ ಸವಿಸ್ತಾರ ವರ್ಣಯಿದೆ.

ಒಂದು ಔಷಧವನ್ನು ಸಿದ್ಧಪಡಿಸಬೇಕಾದರೆ, ಅದಕ್ಕೆ ಬೇಕಾಗುವ ಕಚ್ಚಾಪದಾರ್ಥಗಳು, ಅವುಗಳ ಪ್ರಮಾಣ, ಔಷಧ ತಯಾರಿಕಾ ವಿಧಿ, ವಿವಿಧ ವಯೋ ಮಾನದವರಿಗೆ ನೀಡಬೇಕಾದ ಪ್ರಮಾಣ, ಔಷಧ ಸೇವನಾ ಅವಽ ಇತ್ಯಾದಿ ಮೂಲಭೂತ ಮಾಹಿತಿಗಳು ಈ ಸಂಪುಟದಲ್ಲಿವೆ. ಒಟ್ಟು ೭೬೦ ಔಷಧಗಳ ಮಾಹಿತಿಯಿದೆ. ಈ ಭಾಗವು ಸಮಕಾಲೀನ ಔಷಧವಿಜ್ಞಾನದ ಒಂದು ಪ್ರಮಾಣಬದ್ಧವಾದ ಗ್ರಂಥವಾಗಿತ್ತು ಎಂದರೆ ಅದು ಅತಿಶಯೋಕ್ತಿಯಾಗಲಾರದು. ಅವಿಸೆನ್ನನು ತನ್ನ ಚಿಕಿತ್ಸೆಯಲ್ಲಿ ಮನೋವೈದ್ಯಕೀಯವನ್ನು ಧಾರಾಳವಾಗಿ ಬಳಸಿದ. ಒಮ್ಮೆ ಪರ್ಷಿಯದ ರಾಜಕುಮಾರನು ತೀವ್ರ ವಿಷಣ್ಣತೆಯಿಂದ (ಮೆಲಾಂಕೋಲಿಯ) ನರಳಲಾರಂಬಿಸಿದ.

ಅವನಿಗೆ ತಾನೋರ್ವ ಹಸು ಎಂಬ ಭ್ರಮೆಯುಂಟಾಗಿತ್ತು. ಆಹಾರ ನೀರನ್ನು ಬಿಟ್ಟ. ನನ್ನನ್ನು ಕಸಾಯಿಖಾನೆಗೆ ಕರೆದೊಯ್ಯಿರಿ. ನನ್ನನ್ನು ಕೊಲ್ಲಿ. ನನ್ನ ಮಾಂಸದಿಂದ ರುಚಿರುಚಿಯಾದ ಅಡುಗೆಯನ್ನು ಮಾಡಿ ಎಂದು ಒತ್ತಾಯ ಮಾಡಲಾರಂಭಿಸಿದ. ಇದು ಅವಿಸೆನ್ನನಿಗೆ ಗೊತ್ತಾಯಿತು. ಕೂಡಲೇ ಕಟುಕನು ಮಚ್ಚಿನ ಸಮೇತ ಅರಮನೆಗೆ ಬರುತ್ತಿ ದ್ದಾನೆ. ಸಿದ್ಧವಾಗಿರುವಂತೆ ಹಸುವಿಗೆ ಹೇಳಿ ಎಂದು ಮುಂಚಿತವಾಗಿ ಹೇಳಿ ಕಳುಹಿಸಿದ. ರಾಜಕುಮಾರ ನಿಗೆ ತುಂಬಾ ಸಂತೋಷವಾಯಿತು. ಅವಿಸೆನ್ನನು ಮಚ್ಚನ್ನು ಹಿಡಿದುಕೊಂಡು ಅರಮನೆಗೆ ಬಂದ. ಹಸುವಿನ ಕೈಕಾಲುಗಳನ್ನು ಕಟ್ಟಿ ಹಾಕಿ ಎಂದ. ಸೇವಕರು ರಾಜಕುಮಾರನನ್ನು ಕಟ್ಟಿಹಾಕಿದರು.

ಅವಿಸೆನ್ನನು ಮಚ್ಚನ್ನು ಅಲ್ಲಿಯೇ ಮಸಿದು ಹರಿತಗೊಳಿಸಿದ. ನಂತರ ಮಚ್ಚನ್ನು ತೆಗೆದುಕೊಂಡು ರಾಜಕುಮಾರನ ಬಳಿಗೆ ಬಂದ. ಆಪಾದ ಮಸ್ತಕ ನೋಡಿದ. ತುಸು ನಿರಾಸೆಯಿಂದ ತಲೆಯನ್ನು ಆಕಡೆ ಈ ಕಡೆ ಅಲ್ಲಾಡಿಸುತ್ತಾ ಏನೂ ಪ್ರಯೋಜನವಿಲ್ಲ. ಈ ಬಡಕಲು ಹಸುವನ್ನು ಕೊಲ್ಲುವುದರಿಂದ
ಏನೇನೂ ಪ್ರಯೋಜನವಿಲ್ಲ. ಹಿಡಿ ಮಾಂಸ ಸಿಗೋಲ್ಲ. ಮೊದಲು ಚೆನ್ನಾಗಿ ಹುಲ್ಲು ಹಿಂಡಿ ಹಾಕಿ ಮೇಯಿಸಿ. ಆಮೇಲೆ ಕೊಲ್ಲೋಣ ಎಂದು ಮಚ್ಚನ್ನು ತೆಗೆದುಕೊಂಡು ಹೊರಬಂದ. ರಾಜಕುಮಾರನಿಗೆ ತಾನು ಬಡಕಲಾಗಿದ್ದೇನೆ, ಚೆನ್ನಾಗಿ ತಿಂದು ದಷ್ಟಪುಷ್ಟವಾಗಬೇಕು ಎನ್ನುವ ವಿಚಾರವು
ಮನದಟ್ಟಾ ಯಿತು. ಕೂಡಲೇ ಆತ ಆಹಾರವನ್ನು ಸೇವಿಸಲಾರಂಭಿಸಿದ.

ದಷ್ಟಪುಷ್ಟನಾಗುತ್ತಿರುವಂತೆಯೇ ಆತನ ವಿಷಣ್ಣತೆಯು ಕ್ರಮೇಣ ಕಡಿಮೆಯಾಯಿತು. ಅವಿಸೆನ್ನನುಯ ರೋಗವನ್ನು ಒಂದು ಸೋಂಕು ರೋಗವೆಂದು
ಗುರುತಿಸಿದ. ಸೋಂಕು ರೋಗಗಳು ಕಲುಷಿತ ನೀರು ಮತ್ತು ಮಣ್ಣಿನಿಂದ ಹರಡುತ್ತವೆಯೆಂದ. ಮನಸ್ಸು ಮತ್ತು ಆರೋಗ್ಯಗಳ ನಡುವೆ ನಿಕಟವಾದ ಸಂಬಂಧವಿದೆಯೆಂದ. ಅಂಗರಚನ ವಿಜ್ಞಾನ, ಸೀವೈದ್ಯಕೀಯ, ಮನೋವೈದ್ಯಕೀಯ ಹಾಗೂ ಶಿಶುವೈದ್ಯಕೀಯಕ್ಕೆ ಸಂಬಂಧಿಸಿದ ಅಪೂರ್ವ
ಒಳನೋಟಗಳನ್ನು ನೀಡಿದ. ಹಾಗಾಗಿ ಅವಿಸೆನ್ನನನ್ನು ಆತನ ವಿದ್ಯಾರ್ಥಿಗಳು ಮತ್ತುಅನುಯಾಯಿಗಳು ಪ್ರಬುದ್ಧ ಮಹಾಗುರು (ಅಲ್-ಶೆಯೀಕ್ ಅಲ್-ರಯೀಸ್) ಎಂದು ಕರೆದರು. ಕಾರಣ ಜೊಹಾನ್ ವೂಲ್ ಗಾಂಗ್ ಗೋಥೆ (೧೭೪೯-೧೮೩೨) ಎಂಬ ಜರ್ಮನ್ ಬಹುಮುಖ ಪ್ರತಿಭಾಶಾಲಿ ಮತ್ತು ಮನು ಕುಲದ ಮಹಾನ್ ಪ್ರತಿಭೆ ಲಿಯೋನಾರ್ಡೊ ಡ ವಿಂಚಿ (೧೪೫೨-೧೫೧೯) ಎಂಬ ಇಬ್ಬರು ಮಹಾನ್ ಪ್ರತಿಭೆಗಳು ಅವಿಸೆನ್ನನಲ್ಲಿ ಮಿಳಿತವಾಗಿತ್ತು
ಎಂದು ಅವರ ಅಭಿಮತ. ಯೂರೋಪಿಯನ್ನರು ಅವಿಸೆನ್ನನನ್ನು ವೈದ್ಯಲೋಕದ ರಾಜಕುಮಾರ (ಪ್ರಿನ್ಸ್ ಆಫ್ ಫಿಸಿಶಿಯನ್ಸ್) ಎಂದು ಕರೆದು ಗೌರವ ವನ್ನು ಸಲ್ಲಿಸಿದರು. ಈ ಅನಿಸಿಕೆಯು ಖಂಡಿತಾ ಅತಿಶಯೋಕ್ತಿಯೇನಲ್ಲ!

error: Content is protected !!