Sunday, 15th December 2024

ಪ್ರಶಸ್ತಿಗಳಿಗೆ ಗೌರವವಿರಲಿ

ಅಭಿಮತ

ಮೋಹನದಾಸ ಕಿಣಿ, ಕಾಪು

ಕುಸ್ತಿಪಟುಗಳ ವಿರೋಧದ ನಡುವೆಯೂ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಮತ್ತು ಅದರ ಫಲಿತಾಂಶ ಹೊರಬಿದ್ದ ನಂತರ ಕುಸ್ತಿಪಟು ಸಾಕ್ಷಿ ಮಲ್ಲಿಕ್ ಅವರು ಆಟಕ್ಕೆ ತಿಲಾಂಜಲಿ ನೀಡುವ ನಿರ್ಧಾರ ಘೋಷಿಸಿದ್ದು ಹೀಗೆ ಸಾಕಷ್ಟು ಕೋಲಾಹಲಗಳಿಗೆ ಜನರು ಸಾಕ್ಷಿಯಾಗಿದ್ದಾರೆ. ಈಗ ಸದರಿ ಒಕ್ಕೂಟವನ್ನು ಅಮಾನತುಗೊಳಿಸಿಯೂ ಆಗಿದೆ.

ಇದರ ನಿಕಟಪೂರ್ವ ಅಧ್ಯಕ್ಷರು ಓರ್ವ ಮಹಿಳಾ ಕುಸ್ತಿಪಟುವಿನೊಂದಿಗೆ ಅನುಚಿತವಾಗಿ ನಡೆದುಕೊಂಡರೆಂದು ಈ ಹಿಂದೆ ಗಲಾಟೆಯಾಗಿತ್ತು. ಅದು ಕುಸ್ತಿಪಟುಗಳ ಮುಷ್ಕರಕ್ಕೆ, ಸಂಸತ್ತಿನಲ್ಲೂ ಸಾಕಷ್ಟು ಜಟಾಪಟಿಯಾಗುವುದಕ್ಕೆ ಕಾರಣವಾಗಿತ್ತು. ಇವೆಲ್ಲವೂ ರಾಜಕೀಯ ಪ್ರೇರಿತ ಬೆಳವಣಿಗೆಗಳಾಗಿರುವುದರಿಂದ ಇಲ್ಲಿ ಅಪ್ರಸ್ತುತ. ಇಲ್ಲಿ ಹೇಳಬಯಸಿರುವುದು, ವೈಯಕ್ತಿಕ ಮತ್ತು ರಾಜಕೀಯ ಪ್ರೇರಿತ ಕಾರಣಗಳಿಂದಾಗಿ, ಈ ಪ್ರಕರಣವೂ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ನಡೆದ, ನಡೆಯುತ್ತಿರುವ ‘ಪ್ರಶಸ್ತಿ ವಾಪ್ಸಿ’ ಅಭಿಯಾನಕ್ಕೆ ಸಂಬಂಧಿಸಿದ್ದು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಭಿನ್ನ ಕ್ಷೇತ್ರಗಳ ಸಾಧಕರಿಗೆ ನೀಡುವ ಪ್ರಶಸ್ತಿಗಳಿಗೆ ಅಗೌರವ ತರುವ ಮತ್ತು ಪ್ರಶಸ್ತಿಗಳಿಗೆ ರಾಜಕೀಯ ಸ್ವರೂಪ
ನೀಡುವ ಪ್ರವೃತ್ತಿ ಹೆಚ್ಚುತ್ತಿದೆ. ಅದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಇರಲಿ, ಪದ್ಮಭೂಷಣ, ಪದ್ಮಶ್ರೀ ಆಗಿರಲಿ ಅಥವಾ ಕಲೆ-ಸಾಹಿತ್ಯ-ಕ್ರೀಡಾ ಕ್ಷೇತ್ರಗಳಲ್ಲಿನ ಸಾಧನೆಗಾಗಿ ನೀಡುವ ರಾಜ್ಯ/ಜಿಲ್ಲಾ ಮಟ್ಟದ ಪ್ರಶಸ್ತಿಗಳೇ ಆಗಿರಲಿ, ಎಲ್ಲದಕ್ಕೂ ಅದರದೇ ಆದ ಗೌರವವಿದೆ. ಖಾಸಗಿ
ಪ್ರಶಸ್ತಿಗಳ ವಿಷಯ ಬೇರೆ. ಸರಕಾರದಿಂದ ಪ್ರಾಯೋಜಿತವಾಗುವ ಯಾವುದೇ ಪ್ರಶಸ್ತಿಯಿದ್ದರೂ ಅದಕ್ಕೊಂದು ತೂಕವಿದೆ. ಕಾರಣ ಏನೇ ಇರಲಿ, ಪ್ರಶಸ್ತಿ
ವಿಜೇತರು ಅದನ್ನು ಹಿಂದಿರುಗಿಸುವ ಮೂಲಕ ಪ್ರತಿಭಟನೆ ತೋರುವುದು ಸರ್ವಥಾ ಸಮರ್ಥನೀಯವಲ್ಲ.

ಕುಸ್ತಿಪಟು ಬಜರಂಗ್ ಪೂನಿಯಾ ಅವರು ತಮಗೆ ನೀಡಲಾಗಿದ್ದ ‘ಪದ್ಮಶ್ರೀ’ ಪ್ರಶಸ್ತಿ ಪದಕವನ್ನು ಇತ್ತೀಚೆಗೆ ಪ್ರಧಾನಿಯವರ ಅಧಿಕೃತ ನಿವಾಸವಿರುವ ರಸ್ತೆಯಲ್ಲಿ ಇರಿಸಿದ್ದಲ್ಲದೆ, ‘ಕುಸ್ತಿ ಒಕ್ಕೂಟಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದವರು ಹಿಂದೆ ಆಪಾದನೆ ಎದುರಿಸಿದ್ದ ಅಧ್ಯಕ್ಷರ ನಿಕಟವರ್ತಿ ಎಂಬ ಕಾರಣಕ್ಕೆ ಪ್ರತಿಭಟನಾರ್ಥವಾಗಿ ಈ ಕ್ರಮ ಕೈಗೊಂಡಿರುವೆ’ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು. ‘ಪದ್ಮಶ್ರೀ’ಯಂಥ ಉನ್ನತ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡುವುದು ಪ್ರಧಾನ ಮಂತ್ರಿಯವರ ವೈಯಕ್ತಿಕ ನಿರ್ಧಾರವಲ್ಲ; ಅದಕ್ಕೆ ಉನ್ನತಾಧಿಕಾರ ಸಮಿತಿಯಿರುತ್ತದೆ. ಹಾಗೆಯೇ ಇಂಥ ಪ್ರಶಸ್ತಿಗಳನ್ನು ಪ್ರದಾನಿಸುವುದು ಸಾಂವಿಧಾನಿಕ ಮುಖ್ಯಸ್ಥರಾದ ರಾಷ್ಟ್ರಪತಿಯವರೇ ವಿನಾ ಪ್ರಧಾನಮಂತ್ರಿಯಲ್ಲ.

ಹೀಗಿರುವಾಗ, ಪೂನಿಯಾ ಅವರು ವೈಯಕ್ತಿಕ ಅಸಮಾಧಾನ ವ್ಯಕ್ತಪಡಿಸುವ ದ್ಯೋತಕವಾಗಿ ಪ್ರಧಾನಿ ನಿವಾಸದ ರಸ್ತೆಯಲ್ಲಿ ತಮ್ಮ ಪದಕವನ್ನು ಇಟ್ಟು
ಹೋದದ್ದು ಸಂವಿಧಾನಕ್ಕೆ ಮಾಡಿರುವ ಅಪಚಾರವೆನಿಸದೇ? ಇಂಥ ವರ್ತನೆಗೆ ಕಡಿವಾಣ ಹಾಕಬೇಕು. ರಾಷ್ಟ್ರಗೀತೆಗೆ, ರಾಷ್ಟ್ರಧ್ವಜಕ್ಕೆ ಅವಮಾನಿಸಿದರೆ ಕೈಗೊಳ್ಳಬೇಕಾದ ಕ್ರಮಗಳನ್ನು ನಿಗದಿಪಡಿಸಿರುವಂತೆ, ‘ಪ್ರಶಸ್ತಿ ವಾಪ್ಸಿ’ ಹಣೆಪಟ್ಟಿಯಡಿ ನಡೆಯುವ ಇಂಥ ಅನುಚಿತ ವರ್ತನೆಗಳಿಗೆ ಸಂಬಂಧಿಸಿಯೂ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರತಿಭಟನೆ ಏನಿದ್ದರೂ ಸೂಕ್ತ ವೇದಿಕೆಯಲ್ಲಿ, ಸೂಕ್ತ ರೀತಿಯಲ್ಲಿ ಇರಬೇಕೇ ವಿನಾ, ಅದು ಪ್ರಶಸ್ತಿಗೆ ಅವಮಾನ ಮಾಡುವಂತಿರಬಾರದು.

(ಲೇಖಕರು ಹವ್ಯಾಸಿ ಬರಹಗಾರರು