Saturday, 14th December 2024

ನಾಯಕಾದರ್ಶ ಮತ್ತು ನಾಗರಿಕ ಪ್ರಜ್ಞೆ

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್

ರಾಮನ ಪ್ರಜೆಗಳಲ್ಲಿದ್ದ ನೈತಿಕತೆ ಹಾಗೂ ಪ್ರಾಮಾಣಿಕತೆ ಕಲಿಯುಗದಲ್ಲಿ ಬದುಕುತ್ತಿರುವ ಜನರಲ್ಲಿದ್ದರೆ ನಮಗೆ ಶ್ರೀರಾಮನಂತಹ ನಾಯಕ ಸಿಗುತ್ತಿದ್ದ. ರಾಮನಂತಹ ನಾಯಕ ಸಿಗಬೇಕು ಎಂದು ಬಯಸುವ ನಾವು ರಾಮನ ಪ್ರಜೆಗಳಂತಾಗಲೂ ಬಯಸುವುದಿಲ್ಲ.

ಅನಾಗರಿಕತೆಯ ಕಾಲದಲ್ಲೂ ಗುಂಪಿನ ನಾಯಕ ಅದರ ಮುಖಂಡನೇ ಆಗಿದ್ದ. ಕಾಲಗತಿಯಲ್ಲಿ ಇದು ರೂಪಾಂತರ ಹೊಂದುತ್ತಾ ಮಹಾಪ್ರಭುತ್ವವಾಗಿ
ರಾಜಾ ಪ್ರತ್ಯಕ್ಷ ದೇವತಾ ಎಂಬಲ್ಲಿಯವರೆಗೆ ಬೆಳೆಯಿತು. ಎಲ್ಲರೂ ತಮ್ಮಲ್ಲಿರುವ ತಮ್ಮಂತೆಯೇ ಇರುವ ಒಬ್ಬನನ್ನು ನಾಯಕನನ್ನಾಗಿಸಿಕೊಳ್ಳುವ ಈ ರೀತಿಯ ಗುಂಪನ್ನು ಒಂದು ರಾಷ್ಟ್ರದಂತಹ ವಿಶಾಲವಾದ ವ್ಯಾಪ್ತಿಯಲ್ಲಿ ನೋಡಿದಾಗ ಗುಂಪಿನಿಂದಲೇ ಹುಟ್ಟಿಕೊಳ್ಳುವ ನಾಯಕನ ಸ್ಥಾನದ ಜವಾಬ್ದಾರಿ ಅರಿವಾಗುತ್ತದೆ. ಹೀಗೆ ತಮ್ಮ ಒಬ್ಬನನ್ನು ನಾಯಕನನ್ನಾಗಿ ಮಾಡಿ ಅವನನ್ನೇ ಬೆಂಬಲಿಸುವ ಆ ಗುಂಪು ಅಥವಾ ಆ ರಾಷ್ಟ್ರ ಅವನಿಂದ ಏನೇನು ಬಯಸುತ್ತದೋ ಅವೆಲ್ಲವೂ ಅವನ ಬೌದ್ಧಿಕ ಮತ್ತು ಮಾನಸಿಕ ಅಸ್ತಿತ್ವಕ್ಕೆ ಬಲ ತುಂಬುತ್ತಾ ಹೋಗುತ್ತದೆ. ಅಂತಹ ಬಲವನ್ನು ಅವನಲ್ಲಿ ಹುಟ್ಟುವಂತೆ ಮಾಡುವುದು ಕೂಡ ಅವನನ್ನು ನಾಯಕನನ್ನಾಗಿಸಿದ ಆ ಗುಂಪೇ ಆಗಿರುತ್ತದೆ. ಇದೊಂದು ಒಪ್ಪಿತ ವ್ಯವಸ್ಥೆ.

ಇಡೀಯ ಗುಂಪು ಅವನನ್ನು ಅನುಸರಿಸುತ್ತದೆ; ಅನುಕರಿಸುತ್ತದೆ. ತಮ್ಮ ದೌರ್ಬಲ್ಯಗಳನ್ನು ಹೋಗಲಾಡಿಸಲು ತಮ್ಮ ನಾಯಕನೇ ತಮಗೆ ಸಮರ್ಥ ಆದರ್ಶವೆಂಬ ಪ್ರeಯಲ್ಲೂ ನಾಯಕಾದರ್ಶ ಹುಟ್ಟಿ, ಬೆಳೆಯುತ್ತಾ ಅಂತಹ ನಾಯಕಾದರ್ಶವೇ ನಿರಂಕುಶ ಪ್ರಭುತ್ವವಾಗಿ, ರಾಜಪ್ರಭುತ್ವವಾಗಿ, ಈಗ ನಮ್ಮ ಕಾಲಘಟ್ಟದಲ್ಲಿ ಭಾರತದಂಥ ವೈವಿಧ್ಯಮಯ ರಾಷ್ಟ್ರಕ್ಕೆ ಪ್ರಜಾಪ್ರಭುತ್ವವಾಗಿ ಹೆಮ್ಮರವಾಗಿ ನಿಂತಿದೆ. ತಮ್ಮ ನಾಯಕನೆಂದರೆ ದೇವರಂತೆ. ಅವನೆಂದೂ ತಪ್ಪು ಮಾಡುವುದಿಲ್ಲ. ತಮ್ಮ ನಾಯಕನ ದೇವರನ್ನು ಕಾಣುವ ಆ ಕಾಲದಲ್ಲಿಯೂ ನಾಯಕಾದರ್ಶವು ಔನ್ನತ್ಯದ ತುದಿಯ ಮೆಟ್ಟಲಿನಲ್ಲಿ ಇತ್ತು ಎನ್ನುವುದನ್ನು ಚರಿತ್ರೆಯಲ್ಲಿ ಕಾಣಬಹುದು.

ತಮ್ಮನ್ನಾಳುತ್ತಾ, ರಾಜ್ಯಾಡಳಿತ ನಡೆಸುತ್ತಾ, ತಮ್ಮ ತಪ್ಪು ಒಪ್ಪುಗಳನ್ನು ನೋಡಿಕೊಳ್ಳುವ ಅಧಿಕಾರವನ್ನು ತಾವೇ ನೀಡಿದ ಆ ಗುಂಪು ತಮ್ಮಲ್ಲಿಲ್ಲದ ಶ್ರೇಷ್ಠ ಮೌಲ್ಯಗಳನ್ನು ತಮ್ಮ ನಾಯಕ ನಲ್ಲಿ ಕಾಣುವುದಕ್ಕೆ ಆರಂಭಿಸಿದ ದಿನದಿಂದಲೂ ನಾಯಕಾ ದರ್ಶದ ಘನತೆ ಹೆಚ್ಚುತ್ತಾ ಬಂತು. ಆಗ ಸ್ಪರ್ಧೆಯಿಲ್ಲದ ಕಾಲವದು. ಯಾವ ಕೊಳಕು ರಾಜಕೀಯದ ಸೋಂಕು ಇಲ್ಲದ ದಿನಮಾನಗಳಲ್ಲಿ ನಾಯಕನೆಂದರೆ ಸರ್ವಸ್ವ, ಎಲ್ಲವೂ ಅವನನ್ನೇ ಆಧರಿಸುತ್ತದೆಂಬ ಪ್ರeಯನ್ನು ತಾವೇ ಆರಿಸಿದ ನಾಯಕನಲ್ಲಿ ಕಾಣುತ್ತಾ ಬಂದ ಆ ಗುಂಪು ನಾಯಕಾದರ್ಶವನ್ನು ಅವನಲ್ಲಿ ಬೆಳೆಸುತ್ತಾ ಅದನ್ನು ಸರ್ವಕಾಲಕ್ಕೂ ಅಪೇಕ್ಷಿಸುತ್ತಾ ಬಂದಿರುವು ದರಿಂದ ಈಗಲೂ ನಾಯಕನಾದವನಿಗೆ ಒಂದು ವಿಶೇಷವಾದ ಸ್ಥಾನವನ್ನು ನಮ್ಮ ಸಮಾಜ ನೀಡಿದೆ.

ರಾಜನನ್ನೇ ದೇವರೆಂದು ಆರಾಽಸಿದ ದೇಶ ನಮ್ಮದು. ತನ್ನ ಧರ್ಮಪತ್ನಿಯ ಬಗ್ಗೆ ಪ್ರಜೆಯೊಬ್ಬ ಸಂಶಯದ ಮಾತುಗಳನ್ನು ವ್ಯಕ್ತಪಡಿಸಿದ ಎಂದು ಧರ್ಮಪತ್ನಿ ಯನ್ನೇ ಪರಿತ್ಯಾಗ ಮಾಡಿದ ಶ್ರೀರಾಮಚಂದ್ರನಂಥ ಶ್ರೇಷ್ಠರಾಜನೊಬ್ಬ ಹುಟ್ಟಿ ಆಳಿದ ನಾಡಿದು. ಶ್ರೀರಾಮಚಂದ್ರನ ನಾಯಕಾದರ್ಶದ ಉದಾತ್ತ ಮೌಲ್ಯವಾಗಿ ಸೀತಾಪರಿತ್ಯಾಗ ನಮ್ಮನ್ನಾವರಿಸಿದೆ. ಹೆಂಡತಿಯ ಪಾತಿವ್ರತ್ಯವೆಂಬುದು ಸಂಶಯಾತೀತವೆಂದೂ, ಅದನ್ನು ಯಾರೂ ಪ್ರಶ್ನಿಸಬಾರದೆಂದು ದರ್ಪವನ್ನು ತೋರಿದ
ರಾಜನನ್ನೂ ಚರಿತ್ರೆಯಲ್ಲಿ ಓದಿದ್ದೇವೆ. ಇದು ಒಂದು ತರದ ನಾಯಕಾದರ್ಶವೇ.

ತಾವು ಹೇಗೆ ಇರಲಿ, ತಮ್ಮ ನಾಯಕನನ್ನು ಮಾತ್ರ ಪರಮಾದರ್ಶವಾಗಿಯೇ ಕಾಣುವ ಜನರು ತಮ್ಮೊಳಗಿನ ನ್ಯೂನತೆಗಳು, ಲೋಪದೋಷಗಳು ಸ್ವಾಭಾವಿಕ ವಾಗಿಯೇ ಇರುವಂಥವೆಂಬ ಭಾವನೆಯಲ್ಲಿರುತ್ತಾರೆ. ಮತ್ತು ಅದು ಹಾಗೆಯೇ ಇದ್ದು ನಾಯಕನ ತಪ್ಪನ್ನೇ ದೂಷಿಸುವ, ಅರೋಪಿಸುವ ಮನಸ್ಥಿತಿಯನ್ನು ಹೊಂದಿ ರುತ್ತದೆ. ತಮ್ಮ ಗುಣಗಳೇನೇ ಇರಲಿ, ತಮ್ಮ ನಾಯಕ ಮಾತ್ರ ಸದ್ಗುಣಗಳ ಗಣಿಯಾಗಿರಬೇಕೆಂದು ಬಯಸುವುದು ರಾಜಪ್ರಭುತ್ವದಲ್ಲೂ ಇತ್ತು, ಪ್ರಜಾಪ್ರಭುತ್ವ ದಲ್ಲೂ ಇದೆ.

ತಾವೇ ಆರಿಸಿ ಕಳಿಸಿದ ತಮ್ಮ ಪ್ರತಿನಿಽ ಭ್ರಷ್ಟನಾಗುವುದನ್ನು ಪ್ರಜಾಪ್ರಭುತ್ವದಲ್ಲೂ ಜನತೆ ಸಹಿಸುವುದಿಲ್ಲ. ಸಾರ್ವಕಾಲಿಕ ನೈತಿಕತೆಯೆಂಬುವುದು ಅವನಲ್ಲಿ ಹಾಸು ಹೊಕ್ಕಾಗಿರಬೇಕೆಂದು ಅಪೇಕ್ಷಿಸುವ ಜನತೆ ತಮ್ಮ ಮನಸ್ಸಿಗೊಲ್ಲದ ಅಭಿವ್ಯಕ್ತಿಯನ್ನು ತಮ್ಮ ನಾಯಕನಲ್ಲಿ ಕಂಡಾಗ ಅವನನ್ನು ಅಪರಾಧಿಯೆಂಬಂತೆ
ಕಂಡು ದಂಗೆಯೆದ್ದದ್ದೂ ಇದೆ. ಪಾಶ್ಚಾತ್ಯರಾಷ್ಟ್ರಗಳಲ್ಲೂ ಹೀಗೆಯೇ ನಡೆಯುವುದು. ತಾವು ಹೇಗಿದ್ದರೂ ತಮ್ಮ ನಾಯಕ ಮಾತ್ರ ಪರಿಶುದ್ಧನಾಗಿ ಇರಬೇಕೆನ್ನುವ ಒಟ್ಟು ಮನೋ ಧರ್ಮವೇ ಪ್ರಭುತ್ವದಲ್ಲೂ ಕಾಣುತ್ತಿರುವ ಈ ದಿನಗಳಲ್ಲಿ ಜನತೆ ನೈತಿಕತೆಯನ್ನು ತಮ್ಮ ಪ್ರತಿನಿಧಿ ಅಥವಾ ನಾಯಕನಲ್ಲಿ ಮಾತ್ರ ಕಾಣುತ್ತಾರೆ. ಇದು ಅಚ್ಚರಿಯಷ್ಟೇ ಅಲ್ಲ ಸತ್ಯ ಕೂಡ.

ಪ್ರಜಾಪ್ರಭುತ್ವವೆಂಬುದು ರಾಜಪ್ರಭುತ್ವಕ್ಕಿಂತ ಭಿನ್ನವಾಗಿರುತ್ತದೆ. ರಾಜಪ್ರಭುತ್ವವೆಂಬುದು ವಂಶಪಾರಂಪರ್ಯವಾಗಿ ಬರುವಂತದಾದ್ದರಿಂದ ಜನತೆಗೆ ರಾಜನನ್ನು ಅಪರೋಕ್ಷವಾಗಿ ಪ್ರಶ್ನಿಸಿ, ದೂಷಿಸಿ ಅರೋಪಿಸುವ ನೈತಿಕತೆ ಇರುತ್ತದೆಂದ ಮಾತ್ರಕ್ಕೆ ಅದು ಪ್ರಭುತ್ವದಿಂದ ಬಂದುದಾಗಿರುವುದಿಲ್ಲ. ಆದರೆ, ಪ್ರಜಾಪ್ರಭುತ್ವ ತನ್ನ ಪ್ರಜೆಗಳಿಗೆ ಇಂತಹ ಹಕ್ಕನ್ನು, ಅಧಿಕಾರವನ್ನು ನೀಡಿಯೇ ನಾಯಕತ್ವವನ್ನು ಆಯ್ದುಕೊಳ್ಳುವಲ್ಲಿ ಸ್ವಾತಂತ್ರ್ಯವನ್ನು ನೀಡಿರುತ್ತದೆ. ಪ್ರಶ್ನಿಸುವ ಮೂಲಕ ಪ್ರಭುತ್ವಕ್ಕೆ ಎಚ್ಚರವನ್ನು ನೇರವಾಗಿ ರವಾನಿಸುತ್ತಾ ತಮ್ಮ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಬೇಕಾದ ಅಗತ್ಯಗಳನ್ನು ಅವರೇ ಒದಗಿಸಿಕೊಳ್ಳುತ್ತಾರೆ. ಈ ಪ್ರಕ್ರಿಯೆ ನಿರಂತರವಾಗಿರುವು  ರಿಂದ ತಾವೇ ರೂಪಿಸಿದ ಪ್ರಭುತ್ವವನ್ನೂ ಮೀರಿ ಜನತೆಗೆ ನಿಲ್ಲುವುದಕ್ಕೆ ಸಾಧ್ಯವಾಗುವುದು ಪ್ರಜಾಪ್ರಭುತ್ವದಲ್ಲಿ ಮಾತ್ರ.
ಪ್ರಭುತ್ವದಲ್ಲಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂಬ ಉದಾತ್ತತೆಯಲ್ಲಿ ಕೊನೆಗೆ ಆದರ್ಶವೇ ಪ್ರಭುತ್ವವನ್ನೂ ಮೀರಿ ಬೆಳೆದದ್ದು ಮರ್ಯಾದಾ ಪುರುಷೋತ್ತಮ ನಾದ ಶ್ರೀರಾಮಚಂದ್ರನ ಆಡಳಿತದಲ್ಲಿ. ರಾಜ ಪ್ರಜೆಗಳಿಗಷ್ಟೇ ರಾಜನಾಗಿರದೇ ತನಗೂ ತಾನು ರಾಜನಾಗುವುದು ಹೇಗೆಂಬುದನ್ನು ಜಗತ್ತಿಗೆ ರಿಸಿಕೊಟ್ಟವನು ಪ್ರಭು ಶ್ರೀರಾಮಚಂದ್ರ.

ಇದು ಪ್ರಜಾಪ್ರಭುತ್ವದಲ್ಲೂ ಸಾಧ್ಯವಾಗುವುದು ನಾಯಕನಾದವ ತನ್ನಲ್ಲಿ ರೂಢಿಸಿಕೊಂಡ ಮೌಲ್ಯಾದರ್ಶಗಳಿಂದ. ತೇತ್ರಾಯುಗದಲ್ಲಿ ರಾಮನ ಪ್ರಜೆಗಳಲ್ಲಿದ್ದ ನೈತಿಕತೆ ಮತ್ತು ಪ್ರಾಮಾಣಿಕತೆ ಕಲಿಯುಗದಲ್ಲಿ ಬದುಕುತ್ತಿರುವ ನಮ್ಮಲ್ಲಿದ್ದರೆ ನಮಗೊಬ್ಬ ಶ್ರೀರಾಮಚಂದ್ರನಂಥ ನಾಯಕ ಸಿಕ್ಕಾನು! ನಮ್ಮ ನಾಯಕ ಶ್ರೀರಾಮನಂಥವನಾಗಿರಬೇಕೆಂದು ಬಯಸುವ ನಾವು ಅಯೋಧ್ಯೆಯ ಪ್ರಜೆಗಳಂತಿರುವುದಕ್ಕೆ ಸಿದ್ಧರಿರುವುದಿಲ್ಲ. ಇದು ಕಲಿಯುಗ. ಒಬ್ಬ ಉತ್ತಮನಾದ, ಯೋಗ್ಯನಾದ ನಾಯಕನನ್ನು ಮೆಚ್ಚುವವರಿಲ್ಲಿದ್ದಾರೆ.

ತಮ್ಮ ಭ್ರಷ್ಟಾಚಾರವನ್ನು ಜೀವಂತವಾಗಿಯೇ ಉಳಿಸಿ ಬೆಳೆಸಿಕೊಳ್ಳಲು ಸಹಕರಿಸುವ ಅಯೋಗ್ಯ, ಅಧರ್ಮಿ ನಾಯಕನನ್ನು ಮೆಚ್ಚುವವರೂ ಇಲ್ಲಿದ್ದಾರೆ. ಬಾಹ್ಯ ಜಗತ್ತಿಗೆ ಶ್ರೀರಾಮಚಂದ್ರನನ್ನು ಮೆಚ್ಚಿ ಹಾಡಿ ಹೊಗಳುವ ಈ ಕಾಲದ ಜನರಿಗೆ ಒಳಬದುಕಿಗೆ ರಾವಣಸ್ವರೂಪಿ ಬುದ್ಧಿಯೇ ಇಷ್ಟವಾಗಿರುತ್ತದೆ. ಈ ಬುದ್ಧಿ
ಉಳಿದವರ ನೈತಿಕತೆಯನ್ನು ಸದಾ ಪ್ರಶ್ನಿಸುತ್ತಾ ತಾನೂ ಹೇಗಿದ್ದರೂ ಈ ಸಮಾಜ ತನ್ನನ್ನು ಒಪ್ಪಬೇಕು ಅಥವಾ ಒಪ್ಪಲಿ, ಬಿಡಲಿ ತಾನಿರುವುದು ಹೀಗೆಯೇ ಎಂಬ ಉದ್ಧಟತ ನವನ್ನು ವ್ಯಕ್ತಪಡಿಸುತ್ತಿರುತ್ತದೆ. ಎಲ್ಲಾ ಆದರ್ಶಗಳನ್ನೂ ಸಾಂಕೇತಿಕವಾಗಿ ಗೌರವಿಸುವ ಬುದ್ಧಿ ಬೆಳೆಯುತ್ತಿರುವುದು ನಮ್ಮ ಕಾಲದ ದುರಂತ. ತನ್ನ ಪ್ರಜೆಯ ಸಂಶಯದ ಮಾತಿಗೆ ಪತ್ನಿಯನ್ನು ದೂರೀಕರಿಸಿದ ರಾಜಾ ಶ್ರೀರಾಮಚಂದ್ರ ಪ್ರಜಾತಂತ್ರವು ನೀಡುವ ವ್ಯಕ್ತಿಸ್ವಾತಂತ್ರ್ಯವನ್ನು ತನ್ನ ಪ್ರಜೆಗಳಿಗೆ
ನೀಡಿದ್ದನೆಂಬುದನ್ನು ಸ್ಪಷ್ಟವಾಗಿಸುತ್ತದೆ.

ಪ್ರಜೆಗಳನ್ನು ಗೌರವಿಸಿದ ಜಗತ್ತಿನ ಬೇರೆಲ್ಲೂ ಕಾಣದ ರಾಜಪ್ರಭುತ್ವದ ಶ್ರೇಷ್ಠಮಾದರಿ ಅಯೋಧ್ಯೆಯದ್ದು. ಇದು ನಾಯಕನಾಗಿ ಶ್ರೀರಾಮಚಂದ್ರ ಪ್ರಭು ಆಳಿದ ರಾಮರಾಜ್ಯದ ಮಾದರಿ. ನಗುಮೊಗದಿಂದಲೇ ತನ್ನ ಪ್ರಜೆಗಳ ಸಾಮೀಪ್ಯವನ್ನು ಬಯಸಿ ಕುಶಲೋಪರಿಯನ್ನು ಮಾತಾಡುವ ರಾಮನನ್ನು ಅಯೋಧ್ಯೆಯ ಪ್ರಜೆಗಳು ದೇವರೆಂದು ಕಂಡು ಆರಾಧಿಸಿದ್ದು ಅನಂತರದಲ್ಲಿ ಆಳಿದ ಅದೆಷ್ಟೋ ರಾಜಪ್ರಭುತ್ವಕ್ಕೆ ಸಂದಿದ ಸಾರ್ವಕಾಲಿಕ ಮರ್ಯಾದೆ ಯಾಗಿಯೇ ಉಳಿದಿದೆ.

ಪ್ರಜಾಪ್ರಭುತ್ವದ ಈ ದಿನಗಳಲ್ಲೂ ರಾಜಪ್ರಭುತ್ವವನ್ನೇ ಹಂಬಲಿಸುವವರಿದ್ದಾರೆ. ರಾಜನೊಬ್ಬನಿಗೆ ಮಾತ್ರ ಪರಮಾಧಿಕಾರವಿರುವ ರಾಜಪ್ರಭುತ್ವದಲ್ಲಿ ಪ್ರಜೆಗಳಿಗೆ ಅಂತಿಮ ಉತ್ತರದಾಯಿಯಾಗಿ ರಾಜನೇ ಆಗಿರುತ್ತಾನೆ. ಆಗ ರಾಜನಿಗೆ ಮಾತ್ರ ಸೆಲ್ಯೂಟ್ ಹೊಡೆದರೆ ಸಾಕಾಗುತ್ತದೆ. ನೇರವಾಗಿಯೇ ತನ್ನ ದೂರನ್ನು, ನೋವನ್ನು ದೊರೆಯಲ್ಲಿ ಹೇಳಿಕೊಳ್ಳಬಹುದು. ಆದರೆ ಪ್ರಜಾಪ್ರಭುತ್ವದಲ್ಲಿ ಇದು ಅಸಾಧ್ಯ. ಅದರೆ ನಿಜವಾದ ಪ್ರಜಾಪ್ರಭುತ್ವದ ಶಕ್ತಿಯ ವ್ಯಾಖ್ಯಾನವೇ ಬೇರೆ. ತನ್ನ ಪ್ರತಿನಿಧಿಯನ್ನು ಆರಿಸುವ ಹಕ್ಕನ್ನು ಪ್ರಜಾಪ್ರಭುತ್ವದಲ್ಲಿ ಹೊಂದಿರುವ ಪ್ರಜೆಗಳು ತಮ್ಮ ನಾಯಕನನ್ನು ತಮ್ಮ ಪ್ರತಿನಿಧಿಗಳ ಒಬ್ಬನನ್ನು ಆಯ್ದು ಅವನನ್ನೇ ಬಲಗೊಳಿಸುತ್ತಾ ಅಪರೋಕ್ಷವಾಗಿ ತಮ್ಮೊಳಗಿನ ಒಳಪ್ರಭುತ್ವದ ಪ್ರeಯನ್ನು ಪುಷ್ಟೀಕರಿಸಿಕೊಳ್ಳುತ್ತಾ ತಾವೇ ರಾಜರಾಗುವುದು ಪ್ರಜಾಪ್ರಭುತ್ವದ ನಿಜವಾದ ಅಂತಃಶಕ್ತಿ.

ತಾವೇ ಸೃಷ್ಟಿಸಿದ ನಾಯಕನಿಗೆ ತಮ್ಮನ್ನಾಳುವುದಕ್ಕೆ ಶಕ್ತಿ-ಸಾಮರ್ಥ್ಯವನ್ನು ಪ್ರಜೆಗಳು ತುಂಬಬೇಕು. ಇದು ಹೇಗೆಂದರೆ, ವೈದಿಕ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪನೆಗೊಂಡ ಮೂರ್ತಿಗೆ ಮಂತ್ರಘೋಷಗಳೊಂದಿಗೆ ಪ್ರಾಣಶಕ್ತಿ ಯನ್ನು ಆವಾಹನೆ ಮಾಡಿ ಸಂಚಯಿಸಿದಂತೆ. ಪ್ರಜೆಗಳು ತಮ್ಮ ನಾಯಕನನ್ನು ಜಾಗೃತ ಮತ್ತು ಬಲಗೊಳಿಸುವುದರ ಪ್ರಭುತ್ವಕ್ಕೆ ಗಟ್ಟಿತನ ಬರುವುದು. ಆಗಲೇ ಪ್ರಜಾಪ್ರಭುತ್ವ ಗಟ್ಟಿಯಾಗುವುದು.