Thursday, 12th December 2024

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

ರಾಮರಥ

ಜಯಶ್ರೀ ಕಾಲ್ಕುಂದ್ರಿ

ರಾಮನಾಮ ಜಪದ ಮೂಲಕ ರಾಮನನ್ನು ಆರಾಽಸಿದರೆ, ಭಾವನೆ ಮತ್ತು ಸಂವೇದನೆಗಳ ಮೇಲೆ ಹತೋಟಿ ದಕ್ಕಿ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆಯಿದೆ. ‘ಶ್ರೀರಾಮ’ ಎಂದು ೩ ಸಲ ಹೇಳಿದರೂ ಸಾಕು, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣದ ಫಲ ಸಿಗುತ್ತದೆ ಎಂದಿವೆ ಶಾಸ್ತ್ರಗಳು.

ಜನವರಿ ೨೨ರಂದು ಶ್ರೀರಾಮನ ಅನುಯಾಯಿಗಳೆಲ್ಲರಿಗೂ ಉತ್ಸವವೊಂದರಲ್ಲಿ ಭಾಗಿಯಾದಷ್ಟು ಸಂಭ್ರಮ. ಅಯೋಧ್ಯೆಯಲ್ಲಿ, ನಮ್ಮದೇ ರಾಜ್ಯದ ಶಿಲ್ಪಿ ಯೋಗಿರಾಜರಿಂದ ರೂಪುಗೊಂಡ ಬಾಲರಾಮನ ಪ್ರಾಣಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದವರಿಗೆ ಮತ್ತು ದೃಶ್ಯಮಾಧ್ಯಮಗಳ ಮೂಲಕ ತಮ್ಮ ಆರಾಧ್ಯದೇವನ ಮಂದಿರವನ್ನು ಕಣ್ತುಂಬಿಕೊಳ್ಳುತ್ತಿದ್ದವರಿಗೆ ಹೃದಯ ತುಂಬಿ ಬಂದಿತ್ತು.

ಮಠಾಧೀಪತಿಗಳು, ಲೇಖಕರು, ಗಾಯಕರು, ಸಿನಿಮಾ ಕಲಾವಿದರು ಮತ್ತು ಮಾಧ್ಯಮಮಿತ್ರರ ಗಂಟಲು ಕಟ್ಟಿತ್ತು. ಭಾವೋ ದ್ವೇಗದಲ್ಲಿ ಮಿಂದೆದ್ದ ಪ್ರತ್ಯಕ್ಷದರ್ಶಿಗಳಿಗೆ ವಾಹಿನಿಗಳ ನಿರೂಪಕರ ಪ್ರಶ್ನೆಗಳಿಗೆ ಉತ್ತರಿಸಲೂ ಸಾಧ್ಯವಾಗದಾಗಿತ್ತು. ‘ಜೈ ಶ್ರೀರಾಮ್’ ಘೋಷಣೆ ಮುಗಿಲುಮುಟ್ಟಿತ್ತು. ಪ್ರಧಾನಿ ನರೇಂದ್ರ ಮೋದಿಯವರು, ‘ಈ ಕ್ಷಣವನ್ನು ಜೀವಿಸುತ್ತಿದ್ದೇವೆ ಎಂಬುದು  ನಮಗೆ ಸೌಭಾಗ್ಯದ ವಿಚಾರ. ನಮ್ಮ ತ್ಯಾಗ ಮತ್ತು ತಪಸ್ಸಿನಲ್ಲಿ ಎಲ್ಲೋ ಕೊರತೆಯಿತ್ತು. ಅದಕ್ಕಾಗಿಯೇ ಇಷ್ಟು ದಿನ ಈ ಸತ್ಕಾರ್ಯವನ್ನು ಮಾಡಲು ಆಗಿರಲಿಲ್ಲ.

ಪ್ರಭು ರಾಮಚಂದ್ರ ನಮ್ಮನ್ನು ಮನ್ನಿಸುತ್ತಾನೆ ಎಂದು ಭಾವಿಸಿದ್ದೇನೆ’ ಎಂಬ ಅಂತರಾಳದ ಮಾತುಗಳನ್ನಾಡಿದಾಗ ಶ್ರದ್ಧಾಳುಗಳು ಮತ್ತೊಮ್ಮೆ ಆನಂದಬಾಷ್ಪವನ್ನು ಮಿಡಿದರು. ಎಲ್ಲರ ಮುಖದಲ್ಲೂ ರಾಮರಾಜ್ಯದ ಗತವೈಭವ ಮರಳಿದೆಯೇನೋ ಎಂಬ ಸಂತಸದ ಭಾವ! ಒಟ್ಟಿನಲ್ಲಿ, ಅಯೋಧ್ಯೆಯಲ್ಲಿ ರಾಮ ದೇಗುಲ ನಿರ್ಮಿಸಲು ೫ ಶತಮಾನಗಳ ಕಾಲ ಹೋರಾಡಿದ ತ್ಯಾಗಜೀವಿ ಗಳ ಶ್ರಮ ಸಾರ್ಥಕವಾದ ಕ್ಷಣವದು. ‘ರಾಮಮಂದಿರ ನಿರ್ಮಿಸುವ ಬದಲು ಅದೇ ಸ್ಥಳದಲ್ಲಿ ಆಸ್ಪತ್ರೆಯನ್ನೋ ಶಾಲೆಯನ್ನೋ ಕಟ್ಟ ಬೇಕಾಗಿತ್ತು’ ಎನ್ನುತ್ತಿದ್ದವರಿಗೆ ಇದು ಅಚ್ಚರಿಯ ವಿಷಯವಾಗಿತ್ತು.

ಅಯೋಧ್ಯೆಯೆಂದರೆ ಯುದ್ಧದಲ್ಲಿ ಸೋಲದ ನಗರವೆಂದರ್ಥ. ಅಯೋಧ್ಯೆಯೆಂದರೆ ಕೇವಲ ಭೌಗೋಳಿಕ ಅಸ್ತಿತ್ವವಲ್ಲ.
ರಾಮಮಂದಿರ ಅಯೋಧ್ಯೆಯಲ್ಲಿಯೇ ಏಕೆ ಬೇಕು? ನಿಮ್ಮ ಮನೆಯ ಪೂಜಾಗೃಹದಲ್ಲಿ, ನಿಮ್ಮೂರಿನ ದೇಗುಲಗಳಲ್ಲಿ ರಾಮ ನಿಲ್ಲವೇ? ಪ್ರಾರ್ಥನೆಗೆ ನೆಮ್ಮದಿಯ ಸ್ಥಳವಿದ್ದರೆ ಸಾಕಲ್ಲವೇ? ಎಂದು ಕೇಳುವವರಿಗೆ ಉತ್ತರಿಸಲಾಗದು. ಅಯೋಧ್ಯೆಯೆಂದರೆ ಸಾಕು, ರಾಮಜನ್ಮ ಭೂಮಿಯ ಜತೆಜತೆಗೆ ರಾಮಾಯಣದ ಪುಟಗಳೂ ತೆರೆದುಕೊಳ್ಳುತ್ತವೆ. ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯಾ ದಾಗಿನಿಂದ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಭಗವಂತನ ದರ್ಶನ ಪಡೆಯುತ್ತಿದ್ದಾರೆ.

ರಾಮನಾಮದ ಜಪದ ಮೂಲಕ ರಾಮನನ್ನು ಆರಾಧಿಸಿದರೆ, ಭಾವನೆ ಮತ್ತು ಸಂವೇದನೆಗಳ ಮೇಲೆ ಹತೋಟಿ ಪಡೆಯಲು
ಸಾಧ್ಯವಾಗಿ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂಬ ಬಲವಾದ ನಂಬಿಕೆಯಿದೆ. ಹೀಗಾಗಿಯೇ ಪುರಂದರದಾಸರು, ‘ರಾಮಮಂತ್ರವ ಜಪಿಸೋ ಹೇ ಮನುಜ, ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ, ಸೋಮಶೇಖರ ತನ್ನ ಸತಿಗೆ ಹೇಳಿದ ಮಂತ್ರ’ ಎಂದು ಹಾಡಿದ್ದಾರೆ. ‘ಶ್ರೀರಾಮ’ ಎಂದು ೩ ಸಲ ಹೇಳಿದರೂ ಸಾಕು, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣದ ಫಲ ಸಿಗುತ್ತದೆ ಎಂದೇ ಶಾಸ್ತ್ರಗಳು ಹೇಳಿವೆ.

ರಾಮನಾಮ ಜಪದಿಂದ ಎಷ್ಟೋ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಯಾಗಿದೆ. ರಾಮನಾಮ ಜಪಿಸಲು ಯಾವುದೇ ನಿಯಮವಿಲ್ಲ. ಕುಳಿತಾಗ, ನಿಂತಾಗ, ನಡೆಯುವಾಗ ಮತ್ತು ಮಲಗುವ ಮುಂಚೆ ರಾಮನಾಮವನ್ನು ಜಪಿಸಬಹುದು.
ಜನನವಾದರೂ ಮರಣವಾದರೂ ಜಪಿಸಬಹುದಾದದ್ದೇ ರಾಮನಾಮ. ಅಪಹೃತ ಸೀತೆಯನ್ನು ಮರಳಿ ಕರೆತರುವ ಕಾರ್ಯ ಭಾರದ ಅಂಗವಾಗಿ ಶ್ರೀರಾಮಚಂದ್ರ ಸಮುದ್ರದಲ್ಲಿ ಸೇತುವೆಯನ್ನು ನಿರ್ಮಿಸಲು ಉದ್ಯುಕ್ತನಾದ. ಆಗ ಕಪಿಶ್ರೇಷ್ಠರು ಕಲ್ಲುಗಳ
ಮೇಲೆ ‘ರಾಮ’ ಎಂದು ಬರೆದು ಸಮುದ್ರಕ್ಕೆ ಎಸೆದರೆ ಅದು ನೀರಲ್ಲಿ ಮುಳುಗದೆ ತೇಲುತ್ತಿತ್ತಂತೆ.

‘ನನ್ನ ಹೆಸರು ಬರೆದ ಕಲ್ಲುಗಳಿಗೆ ತೇಲುವ ಶಕ್ತಿ ಇರುವುದಾದರೆ, ನಾನು ಸ್ಪರ್ಶಿಸುವ ಕಲ್ಲಿಗೂ ಅಂಥ ಶಕ್ತಿ ಬರಬೇಕಲ್ಲವೇ?’ ಎಂದುಕೊಂಡ ರಾಮ ತಾನೂ ಕಲ್ಲೊಂದನ್ನು ಎತ್ತಿಕೊಂಡು ಸಮುದ್ರಕ್ಕೆ ಎಸೆದನಂತೆ. ಅಚ್ಚರಿಯೆಂದರೆ, ಅದು ತೇಲದೆ ಮುಳುಗಿಹೋಯಿತಂತೆ. ಶ್ರೀರಾಮನನ್ನೇ ಗಮನಿಸುತ್ತಿದ್ದ ಹನುಮಂತ ಆಗ ನಗುತ್ತಾ, ‘ಪ್ರಭು, ನಿಮಗಿಂತ ನಿಮ್ಮ ನಾಮದ ಬಲ ದೊಡ್ಡದು; ನೀವು ಕೈಬಿಟ್ಟರೆ ಮುಳುಗುವುದು ನಿಶ್ಚಿತ’ ಎಂದನಂತೆ!

ಶ್ರೀರಾಮನ ಪರಮಭಕ್ತನಾದ ಕಾಶೀರಾಜನ ರಾಜ್ಯದಲ್ಲಿ ಒಮ್ಮೆ ಮಾಯೆಯ ಪ್ರಭಾವದಿಂದ ಮಳೆ, ಬಿರುಗಾಳಿ, ಪ್ರವಾಹಗಳಂಥ ಸಮಸ್ಯೆ ಉಂಟಾಯಿತಂತೆ. ಬೆಳೆನಷ್ಟದಿಂದಾಗಿ ಜನರು ಕಂಗೆಟ್ಟಾಗ ಕಾಶೀರಾಜನು ಮಾಯೆಯನ್ನು ಬೆನ್ನಟ್ಟಿ ಬಾಣ ಪ್ರಯೋ ಗಿಸಿದನಂತೆ. ಮಾಯೆ ಯು ವಿಶ್ವಾಮಿತ್ರರ ಆಶ್ರಮದ ಬಳಿ ಹೋಗಿ ಅದೃಶ್ಯಳಾದಳಂತೆ. ಕಾಶೀರಾಜನ ಬಾಣದ ಪ್ರಭಾವದಿಂದ ಆಶ್ರಮದ ಬಳಿಯಿದ್ದ ಮರ ವೊಂದು ಉರುಳಿ, ಅದರ ಸದ್ದಿನಿಂದ ವಿಶ್ವಾಮಿತ್ರರ ತಪಸ್ಸಿಗೆ ಭಂಗವಾಯಿತಂತೆ.

ಕುಪಿತ ವಿಶ್ವಾಮಿತ್ರರು, ತಮ್ಮ ತಪೋಭಂಗ ಮಾಡಿದ ಕಾಶೀರಾಜನಿಗೆ ಮರಣದಂಡನೆ ವಿಧಿಸುವಂತೆ ಶ್ರೀರಾಮನಿಗೆ ಆದೇಶಿಸಿದ ರಂತೆ. ಶ್ರೀರಾಮನಿಂದ ತನಗೆ ರಕ್ಷಣೆ ನೀಡುವಂತೆ ಕಾಶೀರಾಜ ಹನುಮಂತನನ್ನು ಪ್ರಾರ್ಥಿಸಿದನಂತೆ. ಅಯೋಧ್ಯೆ ಮತ್ತು ಕಿಷ್ಕಿಂದೆಯ ಸೈನ್ಯಗಳು ಮುಖಾಮುಖಿಯಾದವು. ಕಿಷ್ಕಿಂದೆಯ ಯೋಧರು ಹನುಮಂತನ ಸಲಹೆಯಂತೆ ತಮ್ಮ ಬಾಣ-ಬತ್ತಳಿಕೆಗಳನ್ನು ಶ್ರೀರಾಮನ ಪದತಲದಲ್ಲಿರಿಸಿ ರಾಮನಾಮವನ್ನು ಪಠಿಸಲಾರಂಭಿಸಿದರಂತೆ.

ಅವರ ಮೇಲೆ ಶ್ರೀರಾಮ ಮತ್ತು ಆತನ ಸೈನಿಕರು ಬಾಣ ಪ್ರಯೋಗಿಸಿದರೂ, ಕಿಷ್ಕಿಂದೆಯ ಸೈನಿಕರ ರಾಮಜಪದಿಂದಾಗಿ ರೂಪುಗೊಂಡಿದ್ದ ರಕ್ಷಾಕವಚವನ್ನು ಭೇದಿಸಲಾಗದೆ ಆ ಬಾಣಗಳು ಮರಳಿ ದವಂತೆ. ಕೊಟ್ಟ ವಚನಕ್ಕೆ ತಪ್ಪಿನಡೆಯದ ಶ್ರೀರಾಮ, ತನ್ನ ತಲೆಯನ್ನು ತೆಗೆಯುವಂತೆ ವಿಶ್ವಾಮಿತ್ರರನ್ನು ಕೋರಿದನಂತೆ. ಆದರೆ, ಖಡ್ಗವನ್ನು ದೂರಕ್ಕೆಸೆದ ವಿಶ್ವಾಮಿತ್ರರು ಶ್ರೀರಾಮ ನನ್ನು ಕುರಿತು, ‘ರಾಮನಿಗಿಂತ ರಾಮನಾಮ ದೊಡ್ಡದೆಂಬುದನ್ನು ಹನುಮಂತ ನಿರೂಪಿಸಿ ದ್ದಾನೆ; ಇದೊಂದು ಚಿಕ್ಕ ಪರೀಕ್ಷೆಯಾಗಿತ್ತಷ್ಟೇ’ ಎನ್ನುತ್ತಾ ಆಶ್ರಮಕ್ಕೆ ಮರಳಿದರಂತೆ.

೧೬೭೪ರಲ್ಲಿ, ಅಬ್ದುಲ್ ಹಸನ್ ತಾನಿಷಾ ನವಾಬ ತೆಲಂಗಾಣದಲ್ಲಿರುವ ಗೊಲ್ಕೊಂಡ ಸಂಸ್ಥಾನವನ್ನು ಆಳುತ್ತಿದ್ದ. ಅವನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಅಕ್ಕನ್ನ ಅವರ ಸೋದರಳಿ ಯನಾದ ಗೋಪಣ್ಣ ಅಥವಾ ರಾಮದಾಸು, ಭದ್ರಾಚಲಂ ತಾಲೂಕಿನ ತಹಶೀಲ್ದಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಭದ್ರಾಚಲಂ ಪ್ರಾಂತ್ಯದಿಂದ ೬ ಲಕ್ಷ ವರಹಗಳು ಸಂಸ್ಥಾನಕ್ಕೆ ಕಂದಾಯ ರೂಪದಲ್ಲಿ ಸಂದಾಯವಾಗಬೇಕಿತ್ತು. ಇದನ್ನು ವಸೂಲಿಮಾಡಿ ಸಂಸ್ಥಾನಕ್ಕೆ ಜಮಾ ಮಾಡುವಂತೆ ಮಂತ್ರಿಗಳಾದ ಅಕ್ಕನ್ನ ಮತ್ತು ಮಾದನ್ನ ಅವರು ಗೋಪಣ್ಣನಿಗೆ ಆದೇಶಿಸಿದರು. ಶ್ರೀರಾಮನ ಪರಮಭಕ್ತನಾಗಿದ್ದ ಗೋಪಣ್ಣ, ಜನರು ಸಂದಾಯ ಮಾಡಿದ ಕಂದಾಯದ ಹಣವನ್ನು, ನವಾಬರ ಅಪ್ಪಣೆಯಿಲ್ಲದೆ ಶ್ರೀರಾಮನ ದೇಗುಲದ ನಿರ್ಮಾಣಕ್ಕೆ ವೆಚ್ಚ ಮಾಡಿದ. ನವಾಬನಿಗೆ ಈ ವಿಷಯ ತಿಳಿದು ಗೋಪಣ್ಣನನ್ನು ಸೆರೆಮನೆಗೆ ತಳ್ಳಿದ.

ಗೋಪಣ್ಣ ಅಲ್ಲಿದ್ದುಕೊಂಡೇ ರಾಮನಾಮ ಜಪಿಸುತ್ತಾ, ತನ್ನ ನೋವು-ನಲಿವುಗಳನ್ನು ಭಕ್ತಿಗೀತೆಗಳ ರೂಪದಲ್ಲಿ ಬರೆಯು ತ್ತಾನೆ (‘ರಾಮದಾಸು’ ಎಂದೇ ಹೆಸರಾದ ಗೋಪಣ್ಣ ತೆಲುಗಿನಲ್ಲಿ ಬರೆದ ಭಕ್ತಿಗೀತೆಗಳನ್ನು ಲಾವಣಿ ರೂಪದಲ್ಲಿ ಹಾಡಲಾಗುತ್ತದೆ). ಭಕ್ತನ ಮೊರೆಯನ್ನು ಆಲಿಸಿದ ಶ್ರೀರಾಮ ಮತ್ತು ಲಕ್ಷ್ಮಣರು, ರಾಮೋಜಿ ಮತ್ತು ಲಕ್ಷ್ಮೋಜಿ ಎಂಬ ಹೆಸರಿನಲ್ಲಿ ನವಾಬ ತಾನಿಷಾನ ಬಳಿ ಬಂದು ೬ ಲಕ್ಷ ವರಹಗಳನ್ನು ಸಂದಾಯಮಾಡಿ ರಸೀದಿಯನ್ನು ಪಡೆಯುತ್ತಾರೆ. ಹಣ ಸಂದಾಯ ಮಾಡಿದವರು
ಸಾಕ್ಷಾತ್ ಶ್ರೀರಾಮ-ಲಕ್ಷ್ಮಣರೆಂದು ಸಂತ ಕಬೀರರಿಂದ ತಿಳಿದಾಗ, ನವಾಬನು ರಾಮದಾಸುವಿನ ಕ್ಷಮೆ ಯಾಚಿಸಿ ಆತನನ್ನು ಸೆರೆಮನೆಯಿಂದ ಬಿಡುಗಡೆ ಮಾಡುತ್ತಾನೆ.

ಅಂದು ರಾಮೋಜಿ ಮತ್ತು ಲಕ್ಷ್ಮೋಜಿ ಹೆಸರಲ್ಲಿ ನವಾಬರಿಗೆ ನೀಡಲ್ಪಟ್ಟ ‘ರಾಮಮಾಡ’ ನಾಣ್ಯವನ್ನು ಹಾಗೂ ರಾಮದಾಸು ದೇಗುಲಕ್ಕೆ ನೀಡಿದ ಚಿನ್ನಾಭರಣ ಗಳನ್ನು ಭದ್ರಾಚಲದ ದೇಗುಲದಲ್ಲಿ ಇಂದಿಗೂ ಕಾಣಬಹುದಾಗಿದೆ. ಸಂತ ಕಬೀರರು ಶ್ರೀರಾಮನ ದರ್ಶನಾಕಾಂಕ್ಷಿ ಯಾಗಿ ಭದ್ರಾಚಲಕ್ಕೆ ಆಗಮಿಸಿದರು. ಅನ್ಯ ಧರ್ಮೀಯರೆಂಬ ಕಾರಣಕ್ಕೆ ಕಬೀರರಿಗೆ ದೇಗುಲದ ಅರ್ಚಕರು ಶ್ರೀರಾಮನ ದರ್ಶನ ಪಡೆಯಲು ಅವಕಾಶ ನೀಡಲಿಲ್ಲ. ಇದರಿಂದ ಬೇಸರಿಸಿಕೊಳ್ಳದ ಕಬೀರರು ಗೋದಾವರಿ ದಿದಂಡೆಯ ಮೇಲೆ ರಾಮನಾಮ ಜಪಿಸಲಾರಂಭಿಸಿದಾಗ, ಶ್ರೀರಾಮನ ವಿಗ್ರಹವು ದೇಗುಲದಿಂದ ಚಲಿಸುತ್ತಾ ಬಂದು ಕಬೀರರ ಬಳಿ ನಿಂತಿತಂತೆ. ದೇಗುಲದಲ್ಲಿ ವಿಗ್ರಹವನ್ನು ಕಾಣದೆ ಭಯಭೀತರಾದ ಅರ್ಚಕರು, ದೈವಭಕ್ತ ಗೋಪಣ್ಣನಿಗೆ ಈ ವಿಷಯ ತಿಳಿಸಿದರಂತೆ.

ಅರ್ಚಕರು ಮಾಡಿದ ತಪ್ಪಿಗೆ ಗೋಪಣ್ಣ ಕಬೀರರಲ್ಲಿ ಕ್ಷಮೆ ಯಾಚಿಸಿದಾಗ, ಕಬೀರರು ಶ್ರೀರಾಮನನ್ನು ಸ್ತುತಿಸಲಾಗಿ ವಿಗ್ರಹವು ತನ್ನ ಸ್ಥಾನಕ್ಕೆ ಮರಳಿತಂತೆ. ಗೋಪಣ್ಣನು ಸಂತ ಕಬೀರರಿಂದ ರಾಮತಾರಕ ಮಂತ್ರದ ಉಪದೇಶ ಪಡೆದಿರುವುದಾಗಿ
ಐತಿಹ್ಯವಿದೆ. ವರದಪುರದ ಶ್ರೀಧರ ಸ್ವಾಮಿಗಳು ರಾಮನ ಪರಮಭಕ್ತರು. ಶ್ರೀಧರರು ಎರಡನೇ ತರಗತಿ ಯಲ್ಲಿ ಓದುತ್ತಿರುವಾಗ ವಿಷಮಶೀತ ಜ್ವರದಿಂದ ಬಳಲಿ, ಕೆಲ ದಿನಗಳು ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. ಶ್ರೀಧರರ ತಾಯಿ ಅವರ ಆತ್ಮವಿಶ್ವಾಸ
ಹೆಚ್ಚಿಸಲು, ‘ನೀನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದರೆ ಮಾತ್ರ ನಿನ್ನ ಉಪನಯ ನವನ್ನು ವಿಜೃಂಭಣೆಯಿಂದ ಮಾಡುವುದರ ಜತೆಗೆ, ಕುದುರೆ ಮೇಲೆ ಮೆರವಣಿಗೆ ಮಾಡಿಸುತ್ತೇನೆ’ ಎಂದು ನಿಬಂಧನೆ ಹಾಕಿದರಂತೆ. ‘ಅನಾರೋಗ್ಯದಿಂದಾಗಿ ಕೆಲದಿನಗಳು ಶಾಲೆಗೆ ಹೋಗಲಾಗದ ಕಾರಣ, ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗುವುದು ಸಾಧ್ಯವೇ?’ ಎಂದು ಶ್ರೀಧರರು ಸಂದೇಹವನ್ನು ವ್ಯಕ್ತಪಡಿಸಿದಾಗ ತಾಯಿ, ‘ಶ್ರೀರಾಮನ ನಾಮಸ್ಮರಣೆ ಮಾಡುತ್ತಾ ಪಾಠಗಳನ್ನು ಓದು’ ಎಂದು ಸಲಹೆ ನೀಡಿದರಂತೆ.

ಪರೀಕ್ಷೆಯ ದಿನ ಪರೀಕ್ಷಕರು ಕೇಳಿದ ಪ್ರಶ್ನೆಗಳಿಗೆಲ್ಲಾ ಶ್ರೀಧರರು ಲೀಲಾಜಾಲವಾಗಿ ಉತ್ತರಿಸುತ್ತಿದ್ದರೆ, ಮನಸ್ಸಿನಲ್ಲಿ ಶ್ರೀರಾಮನ ನಾಮಸ್ಮರಣೆ ನಡೆಯುತ್ತಿತ್ತಂತೆ. ಸತತ ಪರಿಶ್ರಮ ಮತ್ತು ಶ್ರೀರಾಮನ ಅನುಗ್ರಹದಿಂದ ಶ್ರೀಧರರು ಪ್ರಥಮ ದರ್ಜೆಯಲ್ಲೇ ಉತ್ತೀರ್ಣರಾದರಂತೆ. ಒಟ್ಟಾರೆ ಹೇಳುವುದಾದರೆ, ಅಯೋಧ್ಯೆಯ ತರಹವೇ ಶ್ರೀರಾಮಚಂದ್ರ ನಡೆದಾಡಿದ ಮತ್ತು ಭೇಟಿಯಿತ್ತ ಸ್ಥಳಗಳೆಲ್ಲಾ ತೀರ್ಥಕ್ಷೇತ್ರಗಳೇ. ‘ಶ್ರೀರಾಮನ ಹೆಜ್ಜೆಗುರುತುಗಳು ನಮ್ಮೂರಿನಲ್ಲಿಯೂ ಇವೆ’ ಎಂದು ಹೆಮ್ಮೆಯಿಂದ ಕಥೆಯನ್ನು
ಬಿಡಿಸಿಡುವ ಶ್ರದ್ಧಾಳುಗಳ ಸಂಖ್ಯೆ ಕಡಿಮೆಯೇನಿಲ್ಲ.

ಪರಂಪರೆಯ ಪ್ರತೀಕ ಮತ್ತು ಧರ್ಮದ ಸಂಕೇತವೆನಿಸಿದ ರಾಮಮಂದಿರವು ಅಯೋಧ್ಯೆ ಯಲ್ಲಿ ನಿರ್ಮಾಣವಾಗಿದೆ. ಶ್ರೀರಾಮ ನವಮಿ ಉತ್ಸವಕ್ಕೆ ಅಯೋಧ್ಯೆಯು ಮದುವಣಗಿತ್ತಿಯಂತೆ ಸಜ್ಜುಗೊಂಡಿದೆ. ಶ್ರೀರಾಮನ ದೇಗುಲದ ಜತೆಜತೆಗೆ, ಶ್ರೀರಾಮನ ಸಚ್ಚಾರಿತ್ರ್ಯಗಳೆನಿಸಿದ್ದ ಸತ್ಯಸಂಧತೆ, ಕ್ಷಮೆ, ಪ್ರಾಮಾಣಿಕತೆ, ಸಾಮರಸ್ಯ, ಸಮಾನತೆಯಂಥ ಮೌಲ್ಯಗಳು ಸಮಾಜದೆಲ್ಲೆಡೆ ಪಸರಿಸಿದರೆ ರಾಮರಾಜ್ಯದ ಮರುಸ್ಥಾಪನೆ ಸಾಧ್ಯ. ರಾಮಮಂದಿರದ ಜತೆಗೆ ಭಾರತೀಯರ ಹೃದಯಮಂದಿರ ದಲ್ಲಿಯೂ ಶ್ರೀರಾಮ ನೆಲೆಸುವಂತಾಗಬೇಕು. ರಾಮಮಂದಿರದಿಂದ ರಾಮರಾಜ್ಯದವರೆಗೆ ಸಾಗೋಣವೇ?

(ಲೇಖಕಿ ಹಿರಿಯ ಸಾಹಿತಿ)