ಸಂಸ್ಮರಣೆ
ಕೆ.ವಿ.ವಾಸು
ವ್ಯವಸ್ಥೆಯಲ್ಲಿ ತಾಂಡವವಾಡುತ್ತಿದ್ದ ಜಾತೀಯತೆಯೆಂಬ ಪಿಡುಗಿನ ವಿರುದ್ಧ ನಿರಂತರ ಹೋರಾಡಿದ ಬಾಬೂಜಿ, ಸಾಮಾಜಿಕ ಪರಿವರ್ತನೆಯ ಹರಿಕಾರರಾದರು. ಅಂಬೇಡ್ಕರರ ನಂತರ ದಲಿತರ ಅತಿದೊಡ್ಡ ನಾಯಕರೆನಿಸಿಕೊಂಡು ಸ್ವಾತಂತ್ರ್ಯ ಚಳವಳಿಯಲ್ಲೂ ಸಕ್ರಿಯವಾಗಿ ಪಾಲ್ಗೊಂಡರು.
ಹಿರಿಯ ರಾಜಕೀಯ ಮುತ್ಸದ್ದಿ, ದಲಿತ ಮುಖಂಡರಾಗಿದ್ದ ಡಾ.ಬಾಬು ಜಗಜೀವನ್ ರಾಮ್ ಅವರು ಭಾರತದ ಉಪಪ್ರಧಾನಿ ಯಾಗಿ ಸೇವೆ ಸಲ್ಲಿಸಿದವರು ಹಾಗೂ ಹಸಿರು ಕ್ರಾಂತಿಯ ಹರಿಕಾರ ಎನಿಸಿಕೊಂಡವರು. ತಮ್ಮ ಆರು ದಶಕಗಳ ಸಾರ್ವಜನಿಕ
ಬದುಕಿನಲ್ಲಿ ಮಹತ್ತರವಾದ ಹಲವು ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಜಗಜೀವನ್ ರಾಮ್ ಅವರನ್ನು ಜನರು ಪ್ರೀತಿ ಯಿಂದ ‘ಬಾಬೂಜಿ’ ಎಂದು ಕರೆಯುತ್ತಿದ್ದರು. ಬಾಬೂಜಿಯವರ ಜನ್ಮದಿನವಾದ ಇಂದು (ಏ.೫), ದೇಶಕ್ಕೆ ಅವರು ಸಲ್ಲಿಸಿ ರುವ ಸೇವೆಯನ್ನು ಸ್ಮರಿಸುವುದು ಪ್ರಸ್ತುತವೆನಿಸುತ್ತದೆ.
ಬಿಹಾರ ಜಿಲ್ಲೆಯ ಚಾಂದ್ವ ಎಂಬ ಗ್ರಾಮದಲ್ಲಿ ಸೋಬಿ ರಾಮ್ ಮತ್ತು ವಾಸಂತಿ ದೇವಿಯವರ ಸುಪುತ್ರರಾಗಿ ೧೯೦೮ರ ಏಪ್ರಿಲ್ ೫ರಂದು ಜನಿಸಿದವರು ಬಾಬೂಜಿ. ಮದನಮೋಹನ ಮಾಳವೀಯರಿಂದ ಪ್ರಭಾವಿತರಾಗಿ ಅವರೇ ಸ್ಥಾಪಿಸಿದ್ದ ಬನಾರಸ್ ವಿಶ್ವವಿದ್ಯಾಲಯ ಸೇರಿಕೊಂಡ ಬಾಬೂಜಿ, ಮೆಟ್ರಿಕ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ಮುಂದೆ ಕಲ್ಕತ್ತಾ
ವಿಶ್ವವಿದ್ಯಾಲಯದಿಂದ ೧೯೩೧ರಲ್ಲಿ ಬಿಎಸ್‌ಸಿ ಪದವಿ ಪಡೆದರು. ತಮ್ಮ ಶಾಲಾ-ಕಾಲೇಜು ದಿನಗಳಲ್ಲಿ ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಬಾಬೂಜಿ, ಜಾತಿಯ ಹೆಸರಿನಲ್ಲಿ ನಡೆಯುತ್ತಿದ್ದ ಕಂದಾಚಾರಗಳನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಒಮ್ಮೆ ಹೀಗಾಯಿತು: ಅವರು ಓದುತ್ತಿದ್ದ ಶಾಲೆಯಲ್ಲಿ ಹಿಂದೂಗಳಿಗೆ ಮತ್ತು ಮುಸ್ಲಿಮರಿಗೆ ನೀರು ಕುಡಿಯಲು ಪ್ರತ್ಯೇಕವಾದ ಮಡಕೆ ಗಳನ್ನು ಇರಿಸಲಾಗುತ್ತಿತ್ತು.
ಒಮ್ಮೆ ಬಾಲಕ ಜಗಜೀವನ್ ರಾಮ್, ಹಿಂದೂಗಳಿಗಾಗಿ ಇಟ್ಟಿದ್ದ ಮಡಕೆಯ ನೀರನ್ನು ಕುಡಿದುಬಿಟ್ಟರಂತೆ. ಇದರಿಂದ ಕೋಪಗೊಂಡ ಶಾಲೆಯ ಆಡಳಿತ ಮಂಡಳಿಯು ಅಸ್ಪೃಶ್ಯರಿಗಾಗಿ ಅಂದಿನಿಂದ ಮೂರನೇ ಮಡಕೆಯನ್ನು ಇರಿಸಿತಂತೆ. ಇದನ್ನು ಕಂಡು ಕೆರಳಿ ಕೆಂಡವಾದ ಬಾಲಕ ಜಗಜೀವನ್ ರಾಮ್ ಆ ಮಡಕೆಯನ್ನು ಒಡೆದು ಹಾಕಿದರಂತೆ. ಶಾಲೆಯ ವ್ಯವಸ್ಥಾಪಕರು ಪ್ರತಿದಿನ ಒಂದೊಂದು ಹೊಸ ಮಡಕೆ ತಂದಿಟ್ಟಾಗಲೂ ಜಗಜೀವನ್ ರಾಮ್ ಅದನ್ನು ಒಡೆದುಹಾಕುತ್ತಿದ್ದರಂತೆ. ಕೊನೆಗೆ ೩ನೇ ಮಡಕೆಯನ್ನು ಇರಿಸುವುದನ್ನು ನಿಲ್ಲಿಸಲಾಯಿತಂತೆ. ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ತಾಂಡವವಾಡುತ್ತಿದ್ದ ಜಾತೀಯತೆ ಯೆಂಬ ಪಿಡುಗಿನ ವಿರುದ್ಧ ನಿರಂತರವಾಗಿ ಹೋರಾಡಿದ ಬಾಬೂಜಿ ಸಾಮಾಜಿಕ ಪರಿವರ್ತನೆಯ ಹರಿಕಾರರಾದರು.
ಡಾ.ಬಾಬಾಸಾಹೇಬ್ ಅಂಬೇಡ್ಕರರ ನಂತರ ದಲಿತರ ಅತಿದೊಡ್ಡ ನಾಯಕರೆನಿಸಿಕೊಂಡು ಸ್ವಾತಂತ್ರ್ಯ ಚಳವಳಿಯಲ್ಲೂ
ಸಕ್ರಿಯವಾಗಿ ಪಾಲ್ಗೊಂಡರು. ೧೯೩೫ರಲ್ಲಿ ಬಿಹಾರ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ತಮ್ಮ ಸಾರ್ವಜನಿಕ ಜೀವನ ವನ್ನು ಪ್ರಾರಂಭಿಸಿದ ಬಾಬೂಜಿ ನಂತರ ಹಿಂದಿರುಗಿ ನೋಡಲೇ ಇಲ್ಲ. ೧೯೪೬ರ ಸೆಪ್ಟೆಂಬರ್ ೨ರಂದು ದೇಶದಲ್ಲಿ ಜವಾಹರ ಲಾಲ್ ನೆಹರು ನೇತೃತ್ವದಲ್ಲಿ ಪ್ರಪ್ರಥಮವಾಗಿ ರಚನೆಯಾದ ಮಧ್ಯಂತರ ಸರಕಾರದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಸಚಿವರಾಗಿ ನೇಮಕಗೊಂಡ ಜಗಜೀವನ್ ರಾಮ್ ಅವರು ಅದೇ ಅವಧಿಯಲ್ಲಿ ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿ
ಕೂಡ ಕಾರ್ಯನಿರ್ವಹಿಸಿದರು.
ತರುವಾಯದ ವಿವಿಧ ಕಾಲಘಟ್ಟಗಳಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಹೆಗ್ಗಳಿಕೆ ಅವರದ್ದು. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದಾಗ ರಕ್ಷಣಾ ಖಾತೆಯಂಥ ಮಹತ್ತರ ಹೊಣೆಗಾರಿಕೆಯನ್ನು ಹೊತ್ತಿದ್ದ ಬಾಬೂಜಿ ೧೯೭೪ರಲ್ಲಿ ಕೃಷಿ ಮಂತ್ರಿಗಳಾಗಿ ದೇಶದಲ್ಲಿ ‘ಹಸಿರು ಕ್ರಾಂತಿ’ಯ ರೂವಾರಿ ಎನಿಸಿಕೊಂಡರು. ಹೀಗೆ, ರೈಲ್ವೆ, ಸಂಪರ್ಕ, ಕಾರ್ಮಿಕ ಮುಂತಾದ ಮಹತ್ವದ ಖಾತೆಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಅವರು, ಕೇಂದ್ರ ಸರಕಾರದಲ್ಲಿ ದೀರ್ಘಾವಧಿವರೆಗೆ ಸೇವೆ ಸಲ್ಲಿಸಿ ದಾಖಲೆ ಬರೆದಿದ್ದಾರೆ.
ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರಿಗೆ ಅತೀವ ನಿಷ್ಠರಾಗಿದ್ದ ಬಾಬೂಜಿ, ೧೯೭೭ರಲ್ಲಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ‘ಕಾಂಗ್ರೆಸ್ ಫಾರ್ ಡೆಮಾಕ್ರಸಿ’ ಎಂಬ ಪಕ್ಷವನ್ನು ಸ್ಥಾಪಿಸಿದರಾದರೂ, ಮುಂದೆ ಆ ಪಕ್ಷವನ್ನು ಜನತಾ ಪಕ್ಷದೊಳಗೆ ವಿಲೀನಗೊಳಿಸಿದರು. ನಂತರ ಅಂದಿನ ಪ್ರಧಾನ ಮಂತ್ರಿ ಮೊರಾರ್ಜಿ ದೇಸಾಯಿಯವರ ಸಂಪುಟದಲ್ಲಿ ಉಪಪ್ರಧಾನಿಯಾಗಿ ಸೇವೆಗೆ ನಿಯುಕ್ತರಾದರು. ೨೪.೩.೧೯೭೭ರಿಂದ ೨೮.೭.೧೯೭೯ರವರೆಗೆ ಈ ಹೊಣೆಗಾರಿಕೆಯನ್ನು ನಿಭಾಯಿಸಿದ ಬಾಬೂಜಿಯವರು
ಜನತಾ ಪಕ್ಷದಲ್ಲಿ ಭುಗಿಲೆದ್ದ ಒಳಜಗಳದಿಂದ ಬೇಸತ್ತು ಅಲ್ಲಿಂದ ನಿರ್ಗಮಿಸಿ ‘ಕಾಂಗ್ರೆಸ್-(ಜೆ)’ ಎಂಬ ಪಕ್ಷವನ್ನು ಸ್ಥಾಪಿಸಿದರಾದರೂ ಅದು ಹೆಚ್ಚು ಕಾಲ ಬದುಕಲಿಲ್ಲ.
೧೯೮೫ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಸಸಾರಾಂ ಕ್ಷೇತ್ರದಿಂದ ಲೋಕಸಭೆಗೆ ಕಡೆಯದಾಗಿ ಆಯ್ಕೆಯಾದ ಬಾಬೂ ಜಿ, ಅಂದಿನ ಲೋಕಸಭೆಯ ಅತ್ಯಂತ ಹಿರಿಯ ಸದಸ್ಯರಾಗಿದ್ದರಿಂದ ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿ, ರಾಜೀವ್ ಗಾಂಧಿ ಸೇರಿದಂತೆ ಲೋಕಸಭೆಯ ಎಲ್ಲಾ ಸದಸ್ಯರಿಗೂ ಪ್ರಮಾಣವಚನ ಬೋಧಿಸಿದರು. ಅದರ ಮರುವರ್ಷವೇ, ಅಂದರೆ ೧೯೮೬ರ ಜುಲೈ ೬ರಂದು ಬಾಬೂಜಿ ಅಸುನೀಗಿದರು. ಅಲ್ಲಿಗೆ, ಜಗಜೀವನ್ ರಾಮ್ ಎಂಬ ‘ದಲಿತಜ್ಯೋತಿ’ ನಂದಿ ಹೋಯಿತು. ಬಾಬೂಜಿಯವರ ಪುತ್ರಿ ಮೀರಾ ಕುಮಾರ್ ಅವರು ತಂದೆಯ ಸ್ವಕ್ಷೇತ್ರ ಬಿಹಾರದ ಸಸಾರಾಂನಿಂದ ೫ ಬಾರಿ ಆಯ್ಕೆಯಾಗಿರುವು ದಲ್ಲದೆ, ೨೦೦೯ರಲ್ಲಿ ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿ ದಾಖಲೆ ಬರೆದಿದ್ದಾರೆ. ಪ್ರಧಾನ ಮಂತ್ರಿ ಯಾಗುವ ಎಲ್ಲ ಅರ್ಹತೆಗಳಿದ್ದರೂ ಜಗಜೀವನ್ ರಾಮ್‌ರಿಗೆ ಆ ಸಿಂಹಾಸನ ದಕ್ಕಲಿಲ್ಲ, ಈ ಕೊರಗು ಅವರನ್ನು ಆಗಾಗ ಕಾಡು ತ್ತಿತ್ತು.
ಮಾತ್ರವಲ್ಲ, ಈ ದೇಶದಲ್ಲಿ ದಲಿತರೊಬ್ಬರಿಗೆ ಪ್ರಧಾನಿಯಾಗುವ ಅವಕಾಶ ಇದುವರೆಗೂ ದೊರಕದಿರುವುದು ದುರದೃಷ್ಟಕರ ಸಂಗತಿ. ಅದೇನೇ ಇರಲಿ, ಓರ್ವ ದಲಿತ ಮುಖಂಡರಾಗಿ, ಕಾರ್ಮಿಕ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕೇಂದ್ರ ಸಚಿವ ಮತ್ತು ಉಪಪ್ರಧಾನಿಯಾಗಿ ದೇಶಕ್ಕೆ ಅವರು ಸಲ್ಲಿಸಿದ ಸೇವೆ ಗಮನಾರ್ಹವಾಗಿದೆ. ಈ ಅನುಪಮ ಸಾಧಕನ ಜನ್ಮದಿನವಾದ ಇಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸೋಣ.
(ಲೇಖಕರು ವಕೀಲರು ಮತ್ತು ನೋಟರಿ)