Saturday, 21st September 2024

’ಬಾತು-ದಾಟು’ವಿನಿಂದ ಹಿಡಿದು ಭವಾಬ್ಧಿ ದಾಟುವವರೆಗೆ…

ತಿಳಿರುತೋರಣ

ಶ್ರೀವತ್ಸ ಜೋಶಿ

srivathsajoshi@gmail.com

ಅಮೆರಿಕ ದೇಶಕ್ಕೆ ಬಂದು 21 ವರ್ಷಗಳಾದುವು, ಇಲ್ಲಿಗೆ ಬಂದ ಹೊಸದರಲ್ಲಿ ಪ್ರತಿಯೊಂದನ್ನೂ ಬೆರಗುಗಣ್ಣುಗಳಿಂದ ನೋಡುತ್ತಿದ್ದ ದಿನಗಳು
ನಿನ್ನೆ- ಮೊನ್ನೆಯೋ ಎಂಬಂತೆ ನನಗಿನ್ನೂ ನೆನಪಿವೆ. ಅಂತಹ ಹತ್ತುಹಲವು ಬೆರಗುಗಳಲ್ಲೊಂದು DUCK XING ಎಂದು ಕಪ್ಪಗಿನ ದಪ್ಪಕ್ಷರಗಳಲ್ಲಿ ಬರೆದ ಹಳದಿ ಬಣ್ಣದ ರಸ್ತೆಫಲಕ.

ನಾನು ಮತ್ತು ನನ್ನೊಬ್ಬ ಸಹೋದ್ಯೋಗಿ ಇಬ್ಬರೂ ಒಟ್ಟಿಗೆ ಮುಂಬೈಯಿಂದ ಹೊರಟು ಶಿಕಾಗೊಕ್ಕೆ ಬಂದಿಳಿ ದಿದ್ದೆವು. ಅಲ್ಲಿ ನಮಗೆ ಆರಂಭದ ಒಂದಷ್ಟು ದಿನ ಕಂಪನಿಯ ಗೆಸ್ಟ್‌ಹೌಸ್‌ನಲ್ಲಿ ವಸತಿ ವ್ಯವಸ್ಥೆ ಮಾಡಿದ್ದರು. ಶಿಕಾಗೊದ ಪಶ್ಚಿಮ ಭಾಗದಲ್ಲಿ ಉಪನಗರ ಪ್ರದೇಶವೊಂದರಲ್ಲಿತ್ತು ಆ ಗೆಸ್ಟ್‌ ಹೌಸ್. ಅದರ ಹತ್ತಿರದಲ್ಲಿ ಎರಡು ಪುಟ್ಟ ಸರೋವರಗಳೆನ್ನಬಹುದಾದ ಕೆರೆಗಳು. ನಡುವೆ ರಸ್ತೆ. ಹೊಸ ದೇಶ ಹೊಸ ಪರಿಸರ, ಯಾರೂ ಪರಿಚಿತರಿಲ್ಲ ಆಪ್ತರಿಲ್ಲ. ನಾನೂ ನನ್ನ ಸ್ನೇಹಿತನೂ ಸಂಜೆ ಹೊತ್ತು ವೇಳೆ ಕಳೆಯಲೆಂದು ಆ ಕೆರೆಗಳ ಬಳಿಗೆ ವಾಕಿಂಗ್ ಹೋಗುತ್ತಿದ್ದೆವು. ಅಲ್ಲಿಯೇ ನಮ್ಮ ಕಣ್ಣಿಗೆ ಬಿದ್ದದ್ದು ಆ DUCK XING ಫಲಕ. ಡಕ್ ಎಂದರೆ ಬಾತುಕೋಳಿ ಅಂತ ಸುಲಭದಲ್ಲೇ ಅರ್ಥವಾಗಿತ್ತು. ಅಲ್ಲದೇ ಬಾತಿನ ಚಿತ್ರ ಬೇರೆ ಆ ಫಲಕ ದಲ್ಲಿತ್ತು. ಆದರೆ ಕ್ಸಿಂಗ್ ಎಂದರೇನು? ಅಥವಾ ಅದನ್ನು ಎಕ್ಸಿಂಗ್ ಎಂದು ಓದಬೇಕೇ? ನಮಗಿಬ್ಬರಿಗೂ ತಿಳಿಯದು. ಚೈನಿಸ್ ಭಾಷೆಯ ಪದ ದಂತಿದೆ ಏನಾದ್ರೂ ಇರಬಹುದು ಎಂದುಕೊಂಡು ಸುಮ್ಮನಾಗಿದ್ದೆವು.

ಅದೇ ರಸ್ತೆಯಲ್ಲಿ ಮುಂದೆ ನಡೆದರೆ ಒಂದು ಟ್ರಾಫಿಕ್ ಸಿಗ್ನಲ್. ಅಲ್ಲಿ ಒಂದು ಕಂಬಕ್ಕೆ ಜೋಡಿಸಿದ ಹಳದಿ ಫಲಕದಲ್ಲಿ PED XING ಅಂತ ಬರೆದಿತ್ತು. ರಸ್ತೆ ದಾಟುತ್ತಿರುವ ಮನುಷ್ಯನ ಚಿತ್ರವೂ ಇತ್ತು. ಓಹೋ! ಆಗ ನಮಗೆ ಜ್ಞಾನೋದಯ ಆಯ್ತು. XINGG ಎಂದರೆ ಕ್ರಾಸಿಂಗ್ ಅಥವಾ ದಾಟುವುದು. ಪೆಡ್ ಕ್ಸಿಂಗ್ ಎಂದರೆ ಪೆಡೆಸ್ಟ್ರಿ ಯನ್ಸ್ ಕ್ರಾಸಿಂಗ್; ಪಾದಚಾರಿಗಳು ರಸ್ತೆ ದಾಟುವ ಸ್ಥಳ. ಹಾಗೆಯೇ ಡಕ್ ಕ್ಸಿಂಗ್ ಎಂದರೆ ಬಾತುಕೋಳಿಗಳು ರಸ್ತೆ ದಾಟುವ ಸ್ಥಳ! ಮತ್ತೆ ಅವು ಒಂದು ಕೆರೆಯಿಂದ ಇನ್ನೊಂದಕ್ಕೆ ನಡೆದುಕೊಂಡು ಹೋಗಬೇಕಾದರೆ ಮಧ್ಯದ ರಸ್ತೆ ದಾಟಲೇಬೇಕಲ್ಲ? ಅದಕ್ಕೇ ಅಲ್ಲಿ ಡಕ್ಸ್ ಕ್ರಾಸಿಂಗ್ ಬೋರ್ಡು. ನಮ್ಮ ಅದೃಷ್ಟಕ್ಕೆ ಕೆಲವೊಮ್ಮೆ ತಾಯಿಬಾತುಕೋಳಿ ತನ್ನೊಂದಿಷ್ಟು ಪುಟ್ಟ ಮರಿಗಳೊಂದಿಗೆ ಒಂದು ಕೆರೆಯಿಂದ ಇನ್ನೊಂದು ಕೆರೆಗೆ ಹೋಗಲಿಕ್ಕೆ ರಸ್ತೆ ದಾಟುತ್ತಿದ್ದ ಮುದ್ದಾದ ದೃಶ್ಯ ನಮಗೆ ಕಾಣಸಿಗುತ್ತಿತ್ತು.

ಬಾತುಗಳು ದಾಟಿ ಆಗುವವರೆಗೆ ಬೇರೆ ವಾಹನಗಳು ನಿಂತು ದಾರಿ ಬಿಟ್ಟುಕೊಡಬೇಕು. ಒಂದುವೇಳೆ ಕಾರಿನ ಚಕ್ರದಡಿ ಸಿಲುಕಿ ಬಾತುಕೋಳಿಯೇನಾದರೂ ಪಡ್ಚ ಆದರೆ ಪೊಲೀಸರು ಆ ವಾಹನಚಾಲಕನಿಗೆ ದಂಡ ವಿಧಿಸಬಹುದು. ಹಾಗಾಗಿ ನಿಜವಾಗಿಯೂ DUCK XING ಫಲಕ ಇರುವುದು  ಬಾತು ಕೋಳಿಗಳು ಅದನ್ನೋದಿ ಅಲ್ಲಿಯೇ ರಸ್ತೆ ದಾಟಲಿ ಎಂದು ಸೂಚನೆ ಕೊಡುವುದಕ್ಕಲ್ಲ. ‘ಇಲ್ಲಿ ರಸ್ತೆ ದಾಟುವ ಬಾತುಕೋಳಿಗಳಿರುತ್ತವೆ ನಿಧಾನವಾಗಿ ಚಲಿಸಿ’ ಎಂದು ವಾಹನ ಚಾಲಕರಿಗೆ ಎಚ್ಚರಿಕೆ ಕೊಡಲಿಕ್ಕೆ! ಜಿಂಕೆಗಳು ಹೆಚ್ಚಾಗಿ ಇರುವಲ್ಲಿ DEER XING ಫಲಕವೂ ಆ  ಉದ್ದೇಶ ದಿಂದಲೇ. ಏಕೆಂದರೆ ಅಮೆರಿಕದಲ್ಲಿ ಪಬ್ಲಿಕ್ ರೋಡಿನಲಿ ಜಿಂಕೆ ಬಂದೈತಲ್ಲೋ ಎಂದಾಗುವುದು ತೀರ ಸಾಮಾನ್ಯ. ಮತ್ತೆ, ಪಾದಚಾರಿಗಳು ರಸ್ತೆ ದಾಟುವ ಸ್ಥಳ ನಿಜವಾಗಿಯಾದರೆ ZEBRA
XING ಆಗಬೇಕಿತ್ತಲ್ಲವೇ? ಇರಲಿ, ‘ಬಾತು-ದಾಟು’ ಮತ್ತಿತರ ಪ್ರಾಣಿ-ದಾಟುಗಳ ವಿಚಾರವನ್ನು ಅಲ್ಲಿಗೇ ಮುಗಿಸಿ ನಾವೀಗ ಒಮ್ಮೆ ಮನುಷ್ಯರು ದಾಟುವ ಪ್ರಕ್ರಿಯೆಯನ್ನೇ ಸೂಕ್ಷ್ಮವಾಗಿ ಗಮನಿಸೋಣ.

ದಾಟುವುದು ಎಂದೊಡನೆ ನಮಗೆ ಮೊದಲು ಕಣ್ಮುಂದೆ ಬರುವುದು ಯಾವುದೋ ಒಂದು ನದಿಯನ್ನು ದಾಟುವ, ಹಳ್ಳ-ಕೊಳ್ಳ ದಾಟುವ, ಅಥವಾ ರಸ್ತೆ ದಾಟುವ ಚಿತ್ರಣವೇ. ಹಾಗೆಯೇ ಗಡಿ ದಾಟುವುದು, ಲಕ್ಷ್ಮಣರೇಖೆ ದಾಟುವುದು, ಎಲ್‌ಒಸಿ ಅಥವಾ ಲೈನ್ ಆಫ್ ಕಂಟ್ರೋಲ್ ದಾಟುವುದು ಸಹ ನೆನಪಾಗ ಬಹುದು. ಇನ್ನು, ಭವಾಬ್ಧಿ ದಾಟುವುದು (ಅದಕ್ಕಾಗಿ ತಂಬೂರಿ ಮೀಟುವುದು), ತಾಪತ್ರಯಗಳ  ಜಂಜಡ ತುಂಬಿರುವ ಸಂಸಾರ ಸಾಗರವನ್ನು ದಾಟು ವುದು ಎಂದೆಲ್ಲ ಮಾತಿನ ಅಂದಕ್ಕೆ, ಬರವಣಿಗೆಯ ಚಂದಕ್ಕೆ ಬಳಸುತ್ತೇವೆಯೇ ಹೊರತು ನದಿ ದಾಟುವುದು ಎಂದಾಗ ಮೂಡುವ ಸ್ಪಷ್ಟ ಚಿತ್ರಣ ಆ ಆಧ್ಯಾತ್ಮಿಕ ಆಲಂಕಾರಿಕ ಪದಪುಂಜಗಳಿಂದ ಬರುವುದಿಲ್ಲ.

ಭವಾಬ್ಧಿ ಎಂದರೇನೇ ಏನೆಂದು ಸ್ಪಷ್ಟವಾಗಿ ಗೊತ್ತಿಲ್ಲದ ಮೇಲೆ ಅದನ್ನು ದಾಟುವ ಕಲ್ಪನೆ ಬಲು ಕಷ್ಟವೇ. ಆದ್ದರಿಂದ ಇಲ್ಲಿಯೂ ನಾವು ನದಿ ದಾಟು ವುದು, ರಸ್ತೆ ದಾಟುವುದು- ಹೀಗೆ ನಮ್ಮ ಚಿಂತನೆಯ ಮಟ್ಟಕ್ಕೆ ನಿಲುಕುವ ಸಿಂಪಲ್ ವಿಚಾರಗಳನ್ನಷ್ಟೇ ಮೊದಲಿಗೆ ವಿಶ್ಲೇಷಣೆಗೆ ಎತ್ತಿಕೊಳ್ಳೋಣ. ನಾವು ನದಿಯನ್ನು ಹೇಗೆ ದಾಟುತ್ತೇವೆ? ಬೇಸಗೆಯಲ್ಲಿ ಕೆಲವು ಸಣ್ಣಪುಟ್ಟ ನದಿಗಳಲ್ಲಿ ಮೊಣಕಾಲಿನವರೆಗಾಗುವಷ್ಟೂ ನೀರಿರುವುದಿಲ್ಲ, ಅಂತಹ ಸಂದರ್ಭ ದಲ್ಲಿ ನದಿಯಲ್ಲೇ ನಡೆದುಕೊಂಡು ಹೋಗುತ್ತ ದಾಟಬಹುದು.

ನಾನು ಹೇಳುತ್ತಿರುವುದು ನಗರಗಳ ಕೊಚ್ಚೆ ತುಂಬಿಕೊಂಡು ನಾರುವ ವೃಷಭಾವತಿಯಂಥ ನದಿಗಳ ಬಗ್ಗೆ ಅಲ್ಲ. ಗ್ರಾಮೀಣ ಪರಿಸರದಲ್ಲಿ ಜುಳುಜುಳು ಹರಿಯುವ ನದಿ-ತೊರೆಗಳು. ಆಹಾ! ಕಾಲಿಗೆ ಕಚಗುಳಿಯಿಡುವ ಆ ತಣ್ಣೀರಿನಲ್ಲಿ ಒಂದೊಂದೇ ಹೆಜ್ಜೆಯಿಡುತ್ತ ನದಿ ದಾಟುವುದು ಎಷ್ಟು ಹಿತಕರ ಅನುಭವ! ಹೀಗೆ ನದಿಯಲ್ಲೇ ನಡೆದುಕೊಂಡು ಹೋಗಿ ನದಿದಾಟುವುದು ಒಂದನೆಯ ವಿಧಾನ. ನದಿಯಲ್ಲಿ ನೀರು ತುಂಬ ಆಳವಿರುವಾಗ ನಡೆದು ಕೊಂಡು ದಾಟುವುದಾಗದು. ಆಗ ದೋಣಿಯ ಸಹಾಯ ಬೇಕು. ದೋಣಿಯಲ್ಲಿ ಕುಳಿತು ನದಿ ದಾಟುವುದರ ಸೊಗಸು ಹೆಚ್ಚಬೇಕಿದ್ದರೆ ‘ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ…’ ಎಂದು ಗುನುಗುನಿಸುವಿಕೆಯೂ ಆಗಬೇಕು.

ಅಷ್ಟು ಒಳ್ಳೆಯ ಪದ್ಯ ಬರೆದ ಕುವೆಂಪು ಕೂಡ ನೆನಪಾಗಬೇಕು. ದೋಣಿ ಏರಬಯಸದ ಸಾಹಸಿಗರು ಅಥವಾ ದೋಣಿಯವನಿಗೆ ಕೊಡಲು ದುಡ್ಡಿಲ್ಲದಾಗ ಅವನ ಕೃಪಾಕಟಾಕ್ಷಕ್ಕೆ ಕಾಯುವುದು ತರವಲ್ಲ ಎನ್ನುವ ಲಾಲಬಹಾದ್ದೂರ ಶಾಸ್ತ್ರೀಜಿಯವರಂತಹ ಕೆಚ್ಚೆದೆಯ ಸ್ವಾಭಿಮಾನಿಗಳು ಈಜಿಕೊಂಡೇ ನದಿ ದಾಟಬಹುದು. ಅವರಿಗೆ ಹೊಳೆ ದಾಟಿದ ಮೇಲಲ್ಲ ದಾಟುವುದಕ್ಕೂ ಅಂಬಿಗನ ಹಂಗು ಬೇಡ. ಮಿಹಿರ್‌ಸೇನ್‌ನಂತಹ ಶೂರರು ನದಿಯನ್ನೇನು
ಕಡಲನ್ನೇ ಈಜಿ ದಾಟುತ್ತಾರೆ, ದಾಖಲೆಗಳಿಗೋಸ್ಕರ. ಒಟ್ಟಿನಲ್ಲಿ ನಡಿಗೆ, ದೋಣಿ, ಮತ್ತು ಈಜು- ಇವು ಮೂರು ವಿಧಾನಗಳಾದುವು ನದಿ ದಾಟಲಿಕ್ಕೆ. ಮೂರರಲ್ಲೂ ಸಾಮ್ಯವೇನೆಂದರೆ ನೀರನ್ನು ಸ್ಪರ್ಶಿಸುತ್ತಲೇ ದಾಟುವುದು.

ನದಿಗೆ ಅಡ್ಡವಾಗಿ ಸಂಕ ಅಥವಾ ಸೇತುವೆ ಕಟ್ಟಿ ಅದರ ಮೇಲಿನಿಂದ ನಡೆದುಕೊಂಡು ಹೋಗಿ ಅಥವಾ ವಾಹನದಲ್ಲಿ ಸಾಗಿ ನದಿ ದಾಟುವುದು- ಪ್ರಪಂಚದ ಜನಸಂಖ್ಯೆಯ ತೊಂಬತ್ತು ಶೇಕಡಾ ಜನರು, ಪ್ರಪಂಚದ ನದಿಗಳ ಪೈಕಿ ನೂರಕ್ಕೆ ತೊಂಬತ್ತರಷ್ಟನ್ನು, ಬಹುಶಃ ಈ ವಿಧಾನದಲ್ಲೇ
ದಾಟುವುದು. ಹಾಗೆ ಸೇತುವೆಯ ಮೇಲಿಂದ ನದಿ ದಾಟುವಾಗ ನದಿಗೆ ನಾಣ್ಯ ಎಸೆಯುವವರ ಸಂಖ್ಯೆಯೂ ನೂರಕ್ಕೆ ತೊಂಬತ್ತರಷ್ಟಲ್ಲದಿದ್ದರೂ ಸೊನ್ನೆಯಂತೂ ಅಲ್ಲ. ಅದರ ಬಗ್ಗೆ ಹೆಚ್ಚಿನ ವಿವರಣೆ ಇಲ್ಲಿ ಬೇಡ. ಮತ್ತೆ ಪೌರಾಣಿಕ ಕಥೆಗಳನ್ನು ಉಲ್ಲೇಖಿಸುವುದಾದರೆ ಭಾಗವತದಲ್ಲಿ ವಸುದೇವನಿಗೆ,
ರಾಮಾಯಣದಲ್ಲಿ ರಾಮ-ಸೀತೆ-ಲಕ್ಷ್ಮಣರಿಗೆ, ಯಮುನಾ ನದಿ ದಾಟಬೇಕಾಗಿ ಬಂದಾಗ ಅದು ತನ್ನ ಪ್ರವಾಹವನ್ನು ನಿಲ್ಲಿಸಿ ಅವರಿಗೆ ದಾರಿ ಮಾಡಿ ಕೊಟ್ಟಿತ್ತಂತೆ. ಆದರೆ ನಮ್ಮಂಥ ಹುಲುಮಾನವರಿಗೆಲ್ಲ ಯಾವ ನದಿಯೂ ಆರೀತಿ ದಾರಿ ಮಾಡಿಕೊಡುವುದಿಲ್ಲ. ಹಾಗಾಗಿ ನಮಗದು ನದಿ ದಾಟುವ
ವಿಧಾನವಾಗುವುದಿಲ್ಲ.

ಅಥವಾ ಕಾವೇರಿ ನದಿಯನ್ನು ಒಂದೇ ಗುಕ್ಕಿನಲ್ಲಿ ಹಾರಿ ದಾಟಿದ ಮೇಕೆಯಂತೆ (ಅಂದಹಾಗೆ ‘ಮೇಕೆದಾಟು’ ಒಂದುವೇಳೆ ಅಮೆರಿಕದಲ್ಲಿರುತ್ತಿದ್ದರೆ ಎuಅS
ಗಿಐಘೆಎಎಂದು ಎಷ್ಟು ಪ್ರಸಿದ್ಧ ಪ್ರವಾಸಿತಾಣವಾಗುತ್ತಿತ್ತೊ ಏನೊ) ನಾವು ಹಾರಲಾರೆವಲ್ಲ? ನಿಜ, ವಿಮಾನದಲ್ಲಿ ಹಾರುತ್ತ ನದಿಗಳನ್ನೂ ಸಮುದ್ರ ಗಳನ್ನೂ ದಾಟುತ್ತೇವೆ. ಹಾಗೆನ್ನುವಾಗ ನನಗೆ ಇನ್ನೊಂದು ಲಾಜಿಕ್ ನೆನಪಾಗುತ್ತಿದೆ. ಇದು ಕನಕದಾಸರು ರಚಿಸಿದ, ಪುತ್ತೂರು ನರಸಿಂಹ ನಾಯಕ್ ಹಾಡಿ ಜನಪ್ರಿಯವಾದ ‘ದಾಸನಾಗು ವಿಶೇಷನಾಗು…’ ಭಕ್ತಿಗೀತೆಯ ಆರಂಭದಲ್ಲಿರುವ ‘ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿಬಂದ ಈ ಶರೀರ ತಾನಲ್ಲ ತನ್ನದಲ್ಲ…’ ಎಂಬ ಸಾಲು. ಆ ಭಕ್ತಿಗೀತೆಯನ್ನು ಕೇಳುವಾಗೆಲ್ಲ ನನ್ನ ಮಡದಿಯ ಉವಾಚ: ಭಾರತ ದಿಂದ ಅಮೆರಿಕಕ್ಕೆ ಬರುವಾಗ ಎಷ್ಟೋ ನದಿ-ಕೆರೆ-ಸಮುದ್ರಗಳ ಮೇಲಿಂದ ನಮ್ಮ ವಿಮಾನ ಹಾರಿಕೊಂಡು ಬಂದಿರುತ್ತದೆ.

ಎಂಬತ್ನಾಲ್ಕು ಲಕ್ಷವೇನು ಅದಕ್ಕಿಂತಲೂ ಹೆಚ್ಚು ಜೀವರಾಶಿಯನ್ನು ದಾಟಿ ಬಂದ ಶರೀರ ನಮ್ಮದು! ಹೌದಲ್ವಾ, ಮೆಚ್ಚಲೇಬೇಕಾದ ತರ್ಕಬದ್ಧ ಹಾಸ್ಯಪ್ರಜ್ಞೆ! ಸರಿ, ಮತ್ತೆ ನದಿ ದಾಟುವ ವಿಚಾರಕ್ಕೆ ಬಂದರೆ, ಒಂದು ಸೂಕ್ಷ್ಮ ಸಂಗತಿಯನ್ನು ನಾವು ಗಮನಿಸಬೇಕಾಗುತ್ತದೆ. ಮೇಲೆ ವಿವರಿಸಿದಂತೆ ನದಿ ದಾಟುವ ಎಲ್ಲ ವಿಧಾನಗಳಲ್ಲೂ ಒಂದು ಸಾಮಾನ್ಯ ಅಂಶವಿದೆ. ಅದೇನೆಂದರೆ ನದಿ (ಅಂದರೆ ನದಿಯ ನೀರು) ನಮ್ಮ ಕೆಳಗಿರುತ್ತದೆ ಮತ್ತು ನಾವು ಅದರ ಮೇಲಿಂದ ಹಾಯ್ದು ದಾಟುತ್ತೇವೆ. ಅಸಲಿಗೆ ‘ದಾಟು’ ಪದ ನಮ್ಮ ಮನಸ್ಸಿನಲ್ಲಿ ಮೂಡಿಸುವ ಚಿತ್ರಣವೇ ಹಾಗೆ. ಹೊಸ್ತಿಲು ಇರಲಿ, ಬೇಲಿ ಇರಲಿ, ಕಾಂಪೌಂಡೇ ಇರಲಿ- ಯಾವುದನ್ನು ದಾಟುತ್ತೇವೋ ಅದು ನಮ್ಮ ಕೆಳಗಿರುತ್ತದೆ, ನಾವು ಅದರ ಮೇಲಿನಿಂದ ದಾಟಿರುತ್ತೇವೆ. ಹೌದು ತಾನೆ? ಆದರೆ
ನನಗೊಂದು ಜಿಜ್ಞಾಸೆಯಿದೆ. ಅದನ್ನೀಗ ವಿವರಿಸುತ್ತೇನೆ, ಮತ್ತೊಮ್ಮೆ ನನ್ನ ಅಮೆರಿಕ ಜೀವನದಿಂದಲೇ ಆಯ್ದ ಒಂದು ಚಿಕ್ಕ ತುಣುಕಿನ (ಸ್ಲೈಸ್ ಆಫ್ ಲೈಫ್) ಮೂಲಕ: ಶಿಕಾಗೊದಲ್ಲಿ ನಾನು ಸುಮಾರು ಒಂದು-ಒಂದೂವರೆ ವರ್ಷ ಮಾತ್ರ ಇದ್ದೆ. ಆಮೇಲೆ ಬೇರೆ ಕಂಪನಿಯಲ್ಲಿ ಉದ್ಯೋಗ ನಿಮಿತ್ತ ರಾಜಧಾನಿ ವಾಷಿಂಗ್ಟನ್ ಡಿಸಿ.ಪ್ರದೇಶಕ್ಕೆ ಬಂದೆ.

ವಾಷಿಂಗ್ಟನ್ ಡಿಸಿ. ಎಂದು ಹೇಳಿದರೆ ಎಲ್ಲರಿಗೂ (ಭಾರತದಲ್ಲಿರುವವರಿಗೂ) ಬೇಗ ಗೊತ್ತಾಗುತ್ತದೆ ಎಂಬುದಕ್ಕಷ್ಟೇ ಹಾಗೆ ಹೇಳುತ್ತೇವೆಯೇ ವಿನಾ ಇಲ್ಲಿ ನಮ್ಮ ಮನೆ ಇರುವುದು ವಾಷಿಂಗ್ಟನ್ ಡಿಸಿ.ಯಲ್ಲಿ ಅಲ್ಲ, ಅದಕ್ಕೆ ತಾಗಿಕೊಂಡ ವರ್ಜೀನಿಯಾ ಸಂಸ್ಥಾನದಲ್ಲಿ. ವಾಷಿಂಗ್ಟನ್ ಡಿಸಿ.ಯಿಂದ ಸುಮಾರು 40 ಮೈಲುಗಳಷ್ಟು ದೂರ. ಹತ್ತು ವರ್ಷಗಳ ಹಿಂದೆಯೊಮ್ಮೆ ನನ್ನ ಕೆಲಸದ ಸ್ಥಳ ವಾಷಿಂಗ್ಟನ್ ಡಿಸಿ.ಯಲ್ಲೇ ಇತ್ತು. ದಿನಾ ಅಲ್ಲಿಗೆ ಹೋಗಿಬಂದು ಮಾಡು ತ್ತಿದ್ದೆ. ಮೆಟ್ರೊರೈಲು ಸೌಕರ್ಯ ಚೆನ್ನಾಗಿಯೇ ಇರುವುದರಿಂದ ಪಬ್ಲಿಕ್ ಟ್ರಾನ್ಸ್‌ಪೊರ್ಟೆಷನ್ ಬಳಕೆದಾರನಾಗಿದ್ದೆ ಮತ್ತು ಅದು ನನಗೆ ತುಂಬ ಖುಶಿಯ ವಿಚಾರ ಕೂಡ ಆಗಿತ್ತು. ವಾಷಿಂಗ್ಟನ್ ಡಿಸಿ. ನಗರಕ್ಕೂ ವರ್ಜೀನಿಯಾ ಸಂಸ್ಥಾನಕ್ಕೂ ನಡುವೆ ಪೊಟೊಮ್ಯಾಕ್ ನದಿ ಹರಿಯುತ್ತದೆ.

ಅದು ಅವೆರಡರ ಗಡಿರೇಖೆ. ಮೆಟ್ರೊರೈಲು ಭೂಗತ ಮಾರ್ಗದಲ್ಲಿ ಸಂಚರಿಸುವುದಾದ್ದರಿಂದ ಪೊಟೊಮ್ಯಾಕ್ ನದಿಯನ್ನು ಸೇತುವೆಯ ಮೇಲೆ ದಾಟುವು ದಿಲ್ಲ, ಬದಲಿಗೆ ನದಿಯ ಕೆಳಗಿನಿಂದಲೇ ಕೊರೆದಿರುವ ಸುರಂಗದ ಮೂಲಕ ಹಾಯ್ದುಹೋಗುತ್ತದೆ. ಅಂದರೆ, ದಿನಾ ಬೆಳಿಗ್ಗೆ ಮತ್ತು ಸಂಜೆ ನಾನು
ಪೊಟೊ ಮ್ಯಾಕ್ ನದಿಯ ಒಂದು ತೀರದಿಂದ ಇನ್ನೊಂದು ತೀರಕ್ಕೆ ಹೋಗುತ್ತಿದ್ದೆ, ಆದರೆ ‘ದಾಟು’ತ್ತಿರಲಿಲ್ಲ! ಹೀಗೆ ನದಿಯ ಕೆಳಗೆ ಸುರಂಗಗಳಿರುವುದು ಅಮೆರಿಕ ಮತ್ತಿತರ ದೇಶಗಳಲ್ಲಿ ತೀರ ಸಾಮಾನ್ಯ. ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್ ನಡುವಿನ ರೈಲುಸಂಪರ್ಕ ಸಹ ನಡುವೆ ಗಡಿಯಾಗಿರುವ ಹಡ್ಸನ್ ನದಿಯ ಕೆಳಗಿನಿಂದಿರುವ ಸುರಂಗ ಮಾರ್ಗದ ಮೂಲಕವೇ ಇರುವುದು. ಲಂಡನ್ ನಗರದಲ್ಲಂತೂ ಥೇಮ್ಸ್ ನದಿಯ ಕೆಳಗಿನಿಂದ ಸುರಂಗ ಮಾರ್ಗಗಳು ಬಹಳಷ್ಟಿವೆ.

ಅಷ್ಟೇಕೆ, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ನಡುವೆ ಹೈ-ಸ್ಪೀಡ್ ರೈಲುಗಳ ಓಡಾಟಕ್ಕಾಗಿ ಸಮುದ್ರದ ಕೆಳಗಿನಿಂದ ಸುರಂಗ ಮಾರ್ಗವಿದೆ. ಅಟ್ಲಾಂಟಿಕ್ ಸಮುದ್ರವನ್ನು ಉತ್ತರಸಮುದ್ರದೊಂದಿಗೆ ಜೋಡಿಸುವ ಇಂಗ್ಲಿಷ್ ಚಾನೆಲ್ ಜಲಸಂಧಿಯ ಕೆಳಗಿನಿಂದ ಆ ಸುರಂಗ ಇರುವುದು. ಅದನ್ನು Channel tunnel ಎಂದು, ಅಥವಾ ಇನ್ನೂ ಹ್ರಸ್ವವಾಗಿ Chunnel ಎಂದು ಕೂಡ ಕರೆಯುತ್ತಾರೆ. ಹೀಗೆ ನದಿ-ಸಮುದ್ರಗಳ ಕೆಳಗೆ ಸುರಂಗಮಾರ್ಗವಾಗಿ ಸಂಚರಿಸು ವವರು ಪ್ರಪಂಚದಲ್ಲಿ ಎಷ್ಟೋ ಜನರಿದ್ದಾರೆ.ಅವರಿಗೆಲ್ಲ ಈ ಆಲೋಚನೆ/ಜಿeಸೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ನನಗಂತೂ ದಿನಾ ಬೆಳಿಗ್ಗೆ-ಸಂಜೆ ಮೆಟ್ರೊರೈಲಿನಲ್ಲಿ ಪೊಟೊಮ್ಯಾಕ್ ನದಿಯ ಕೆಳಗಿನಿಂದ ಹೋಗುವಾಗ ಹೀಗೊಂದು ಯೋಚನೆ ಬರುತ್ತಿತ್ತು: ಚಾಪೆಯ ಕೆಳಗೆ ತೂರುವುದು, ರಂಗೋಲಿಯ ಕೆಳಗೆ ತೂರುವುದು ಅಂತೇವಲ್ಲ, ಹಾಗೆ ನಾನು ನದಿಯ ಕೆಳಗೆ ತೂರಿಕೊಂಡು ಹೋಗುತ್ತಿದ್ದೇನೆ!

ಅಂದರೆ, ನದಿಯ ಈ ಕಡೆಯಿಂದ ಆ ಕಡೆಗೆ ಹೋಗುತ್ತೇನಾದರೂ ನಾನು ನದಿಯನ್ನು ‘ದಾಟು’ತ್ತಿಲ್ಲ! ನದಿಯ ನೀರು ನಮ್ಮ ಕೆಳಗಿದ್ದು ನಾವು ಅದರ ಮೇಲಿಂದ ಹಾಯ್ದು ಹೋದರಷ್ಟೇ ತಾನೆ ‘ದಾಟು’ ಎಂದಾಗುವುದು? ಅಲ್ಲಿಗೆ ಬಾತು-ದಾಟು ಆಯ್ತು, ನದಿ ದಾಟದೆಯೇ ನದಿ-ದಾಟು ಕೂಡ ಆಯ್ತು. ಕೊನೆಯಲ್ಲಿ ಭವಾಬ್ಧಿ-ದಾಟುವಿನತ್ತಲೂ ಒಂದು ಕ್ಷ-ಕಿರಣ ಬೀರೋಣ. ಪುರಂದರ ದಾಸರಿಂದ ಪದ ಎರವಲು ಪಡೆದುಕೊಂಡು ‘ಆರು ತೆರೆಯ ನೋಡಂಬಿಗ ಅದುಮೀರಿ ಬರುತಲಿದೆ ಅಂಬಿಗಯಾರಿಂದಲಾಗದು ಅಂಬಿಗ ಅದನಿವಾರಿಸಿ ದಾಟಿಸೋ ಅಂಬಿಗ…’ ಎನ್ನೋಣ. ಭಗವಂತನನ್ನೇ ಕರೆಯಬೇಕಾಗುತ್ತದೆ ಭವಾಬ್ಧಿ ದಾಟಬೇಕಾದರೆ. ಭಗವಂತ ನಮಗೆಲ್ಲರಿಗೂ ತಂದೆಯಿದ್ದಂತೆ ಮತ್ತು ತಂದೆಯನ್ನು ನಾವು ತೀರ್ಥರೂಪ ಎನ್ನುತ್ತೇವಷ್ಟೇ? ಈ ‘ತೀರ್ಥ’ ಎಂಬ ಪದಕ್ಕೂ ‘ದಾಟು’ವಿಕೆಗೂ ಅಕ್ಷರಶಃ ಸಂಬಂಧವಿದೆ. ಅದನ್ನು ಪಾ.ವೆಂ.ಆಚಾರ್ಯರ ವಿವರಣೆಯಲ್ಲೇ ಓದಿ ಸವಿಯಬೇಕು.

ಪದಾರ್ಥಚಿಂತಾಮಣಿಯಲ್ಲಿ ಪಾ.ವೆಂ ಹೀಗೆ ಬರೆದಿದ್ದಾರೆ: ತೀರ್ಥ ಶಬ್ದ ಋಗ್ವೇದದಷ್ಟು ಹಳೆಯದು. ಮೂಲತಃ ‘ತೃ-ತರಣೇ’ ಅಂದರೆ ದಾಟುವುದು ಎಂಬರ್ಥದ ಧಾತುವಿನಿಂದ ಹುಟ್ಟಿದ ಶಬ್ದ. ಅದು ದಾರಿ ದಾಟುವುದಾಗಬಹುದು, ನದಿ ಅಥವಾ ಸಮುದ್ರವನ್ನು ದಾಟುವುದಾಗಿರಬಹುದು. ಹೀಗೆ ದಾಟಲು ಅನುಕೂಲವಾದ ಸ್ಥಳ, ವಿಶೇಷವಾಗಿ ನದಿಯ ಕಡವು ತೀರ್ಥವೆನಿಸುತ್ತಿತ್ತು. ಅದರ ಅರ್ಥ ವಿಸ್ತರಿಸಿ ನದಿ ಸರೋವರಗಳಿಗೆ ಇಳಿದು ಸ್ನಾನ
ಮಾಡಬಹುದಾದ ಸ್ಥಳ, ಸೋಪಾನಗಳು ಇವೆಲ್ಲ ತೀರ್ಥವೆನಿಸಿದವು. ಬೇರೆ ದೇಶಗಳಲ್ಲಿಯೂ ನದಿಗಳಿವೆ, ದಾಟಲಿಕ್ಕೆ ಕಡವುಗಳಿವೆ, ಉದಾಹರಣೆಗೆ ಇಂಗ್ಲಿಷ್‌ನಲ್ಲಿ ‘ಫೋರ್ಡ್ಸ್’ ಇವೆ. ಆದರೆ ಅವೆಂದೂ ಪವಿತ್ರವೆನಿಸಲಿಲ್ಲ.

ನಮ್ಮ ಭಾರತ ದೇಶದಲ್ಲಿ ಆರ್ಯರ ಅಥವಾ ಅದಕ್ಕಿಂತ ಹಿಂದಿನ ಕಾಲದಿಂದಲೇ ಸ್ನಾನದ ಬಗ್ಗೆ ಒಂದು ತರಹದ ಹುಚ್ಚು (ಅಬ್ಸೆಷನ್) ಇದ್ದಿರಬೇಕು. ಸ್ನಾನಕ್ಕಿರುವ ಈ ಮಹತ್ತ್ವ ಧರ್ಮದಲ್ಲಿ ಸ್ಥಾನ ಪಡೆದು ಅದಕ್ಕೆ ಪಾವಿತ್ರ್ಯ ಬಂತು. ಸ್ನಾನಕ್ಕೆ ಅನುಕೂಲವಾದ ಸ್ಥಾನ ತೀರ್ಥವೆಂದಮೇಲೆ ತೀರ್ಥವೇ
ಪವಿತ್ರವೆನಿಸಿತು. ಅದನ್ನೇ ತಿರುವುಮುರುವು ಮಾಡಿದರೆ ಪವಿತ್ರವಾದದ್ದು ತೀರ್ಥವೆನಿಸುತ್ತದೆ. ಹೀಗೆ ಗುರುಗಳು, ಸ್ವಾಮಿಗಳು, ತೀರ್ಥಪಾದರು- ಅವರ ಪಾದ ತೊಳೆದ ನೀರೂ ತೀರ್ಥವಾಯಿತು. ತಂದೆಯೇ ನಮ್ಮ ಪ್ರಥಮ ಗುರು. ಅವನು ‘ತೀರ್ಥ’ (ಪವಿತ್ರ, ಗೌರವಾರ್ಹ) ರೂಪ ಅಥವಾ ತೀರ್ಥಸ್ವರೂಪ ಎನಿಸುವುದು ಸ್ವಾಭಾವಿಕ. ತಂದೆಗೆ ಸಮಾನವಾಗಿರುವವರು ತೀರ್ಥರೂಪ ಸಮಾನರು.

ಶಂಕರಾಚಾರ್ಯರು ಸಂನ್ಯಾಸಿಗಳನ್ನು ಬೇರೆಬೇರೆ ಶಾಖೆಗಳಾಗಿ ವಿಂಗಡಿಸಿ ಒಂದೊಂದಕ್ಕೂ ಒಂದೊಂದು ಉಪಾಧಿಯನ್ನು ಕೊಟ್ಟರೆಂದು ಇತಿಹಾಸ ಹೇಳುತ್ತದೆ. ಶಕ್ತಿ, ಭಾರತಿ ಇತ್ಯಾದಿ. ಅಂತಹ ಉಪಾಽಗಳಲ್ಲಿ ತೀರ್ಥ ಎನ್ನುವುದೂ ಒಂದು. ಉದಾ: ಭಾರತೀತೀರ್ಥ, ಆನಂದತೀರ್ಥ ಇತ್ಯಾದಿ.
ವೈಷ್ಣವ ಸಂನ್ಯಾಸಿಗಳು ಅಧಿಕತರವಾಗಿ ತೀರ್ಥ ಎಂಬ ಉಪಾಽಯನ್ನು ಧರಿಸುತ್ತಾರೆ. ಸಂನ್ಯಾಸಿಗಳಿಗೆ ತೀರ್ಥ ಎಂಬ ಉಪಾಧಿ ಬರಲು ಬೇರೊಂದು ಕಾರಣವೂ ಇದೆ. ತೀರ್ಥ ಪದ ದಾಟುವಿಕೆ ಎಂಬರ್ಥದ ಪದದಿಂದಲೇ ಬಂದದ್ದು ತಾನೆ? ಸಂಸಾರ ಸಾಗರವನ್ನು ದಾಟಿದವರು ತೀರ್ಥರಲ್ಲದೆ ಮತ್ತೇನು?
ಸಂನ್ಯಾಸವೆಂದರೆ ಸಂಸಾರವನ್ನು ದಾಟುವ ಉಪಾಯ. ಇದೇ ತರ್ಕದಿಂದ, ಒಂದು ವಿದ್ಯೆಯಲ್ಲಿ ಪೂರ್ಣತೆ ಪಡೆದವನು ತೀರ್ಥನಾಗಬಲ್ಲ.

ಪಾರಂಗತ ಎಂಬ ಪದ ಅದೇ ಅರ್ಥದಿಂದ ಬಂದದ್ದು. ಪಾರಂಗತ ಅಂದರೆ ಆಚೆ ದಾಟಿದವನು = ತೀರ್ಥ. ವ್ಯಕ್ತಿಯು ಪ್ರಾಣ ತ್ಯಜಿಸುವ ಹೊತ್ತಿನಲ್ಲಿ ಗಂಗಾಜಲವನ್ನು ತೀರ್ಥ ಎಂಬ ಭಾವನೆಯಿಂದ ಆತನ ಬಾಯಿಯೊಳಗೆ ಹಾಕುವುದು ಕೂಡ ಗಾಢವಾದ ಅರ್ಥವಿರುವ ಆಚರಣೆಯೇ. ಹಾಗೆ ಬಾಯಿಯೊಳಗೆ ಹಾಕಿದ ತೀರ್ಥ, ಆ ವ್ಯಕ್ತಿಯು ಭವಾಬ್ಧಿಯನ್ನು ದಾಟಿ ಭಗವಂತನ ದಿವ್ಯಚರಣಗಳೆಡೆಗೆ ಸಾಗಲಿ ಎಂಬ ಉನ್ನತ ಆಶಯದ ಅರ್ಥ ಪೂರ್ಣ ಸಂಕೇತ.