Thursday, 12th December 2024

ಮಂದಿರದ ಹಿಂದಿನ ನೋವಿನ ಕಥೆಗಳು

ರಾಜಬೀದಿ

ವಿನಾಯಕ ಮಠಪತಿ

ಬಾಬರಿ ಮಸೀದಿ ಧ್ವಂಸಗೊಂಡ ನಂತರದಲ್ಲಿ ದೇಶದಲ್ಲಿ ಅನೇಕ ಹಿಂಸಾತ್ಮಕ ಕೃತ್ಯಗಳು ನಡೆದವು. ಸುಮಾರು ೯೦೦ ಜನ ಪ್ರಾಣಬಿಟ್ಟರು. ಅದರ ವಿಚಾರವಾಗಿ
ಅಂದು ಬಿಜೆಪಿ ಅಧಿಕಾರದಲ್ಲಿದ್ದ ರಾಜ್ಯದಲ್ಲಿ ಸರಕಾರ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ ಪಿ.ವಿ.ನರಸಿಂಹರಾವ್ ಸರಕಾರ ಆದೇಶ ಹೊರಡಿಸಿತ್ತು.

ಅಯೋಧ್ಯೆ. ಈ ಒಂದು ಹೆಸರು ಕಳೆದ ೫೦೦ ವರ್ಷಗಳಿಂದ ಹಿಂದೂಗಳ ಹೃದಯದಲ್ಲಿ ಸಂಕಟದ ಉರಿಯನ್ನೇ ಹಚ್ಚಿತ್ತು. ಯಾವ ಸಾಮ್ರಾಜ್ಯದ ಜನರ ನ್ಯಾಯಕ್ಕಾಗಿ ಹೋರಾಡಿದ್ದ ಮರ್ಯಾದಾ ಪುರುಷೋತ್ತಮ ಶ್ರೀರಾಮ, ಅಂದು ಮೊಘಲರ ಅಟ್ಟಹಾಸಕ್ಕೆ ಸಿಲುಕಿ ಬಯಲ ನೆಲೆಯೂರಿದ್ದ. ಅದೆಷ್ಟೋ ಚಳಿಗಾಲ ಕಳೆದವೋ? ಅದೆಷ್ಟೋ ಮಳೆಗಾಲದಲ್ಲಿ ಶ್ರೀರಾಮ ಒzಯಾದನೋ? ಇವೆಲ್ಲವನ್ನೂ ಸಹಿಸಿಕೊಂಡಿದ್ದ ಹಿಂದೂ ಸಮಾಜ ಮೈಕೊಡವಿ ಎದ್ದು ನಿಲ್ಲುವ ಈ ದಿನಕ್ಕೆ
ಕಾದಿತ್ತು.

ಹೌದು, ಕೆಲವರಿಗೆ ರಾಮ ಮಂದಿರ ಕಲ್ಲು, ಮಣ್ಣಿನ ಸಾಮಾನ್ಯ ಕಟ್ಟಡದಂತೆ ಕಾಣಬಹುದು. ಇನ್ನೂ ಕೆಲವರಿಗೆ ಅದೊಂದು ಶ್ರದ್ಧಾ ಕೇಂದ್ರವಾಗಿಯಷ್ಟೇ ಕಾಣಬಹುದು. ಆದರೆ ರಾಮ ಮಂದಿರ ಕೇವಲ ಕಟ್ಟಡವಲ್ಲ, ಇದು ಅಸಂಖ್ಯಾತ ಹಿಂದೂ ಸಮಾಜದ ಹೃದಯಬಡಿತ. ಲಕ್ಷಾಂತರ ಜನರು ಹಗಲಿರುಳು ಕಂಡ
ಕನಸು. ಹಾಗೆಯೇ ಸಾವಿರಾರು ಜನರ ಬದುಕಿನ ತ್ಯಾಗದ ಫಲ. ಹೀಗೆ ಅಯೋಧ್ಯೆ ಕುರಿತು ಹೇಳುತ್ತಾ ಹೋದಂತೆ ಪದಗಳೇ ಸಾಲಲ್ಲ. ಇವೆಲ್ಲ ಕಾರಣದಿಂದಾಗಿ ಈ ದೇಶದ ಮಣ್ಣಿನ ಕಣ, ಕಣದಲ್ಲಿಯೂ ಶ್ರೀರಾಮ ಬೆರೆತಿದ್ದಾರೆ.

ಬರುವ ಜನವರಿ ೨೨ರಂದು ಅಯೋಧ್ಯೆಯ ಪುಣ್ಯ ಭೂಮಿಯಲ್ಲಿ ಪ್ರಭು ಶ್ರೀರಾಮಚಂದ್ರರ ಭವ್ಯ ಮಂದಿರದ ಉದ್ಘಾಟನೆಯಾಗಲಿದೆ. ಕೊಟ್ಟ ಮಾತಿನಂತೆ
ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಶ್ರೀರಾಮನ ವನವಾಸಕ್ಕೆ ಮುಕ್ತಿ ಕೊಡಿಸಿದ್ದು, ಮೊದಲಿನಂತೆ ಪ್ರಭು ಶ್ರೀರಾಮ ತನ್ನ ಆಸ್ಥಾನ ಅಲಂಕರಿಸಲಿದ್ದಾನೆ.
ಇಷ್ಟೆಲ್ಲ ಸಡಗರ ಸಂಭ್ರಮದ ಮಧ್ಯೆ ರಾಮನಿಗಾಗಿ ನಡೆದ ದೀರ್ಘಕಾಲದ ಸಂಘರ್ಷ ಮರೆಯಲು ಸಾಧ್ಯವೆ? ಖಂಡಿತಾ ಸಾಧ್ಯವಿಲ್ಲ. ೫೦೦ ವರ್ಷಗಳ ಸುದೀರ್ಘ
ಹೋರಾಟದ ಹಿಂದೆ ದುಡಿದ ಆ ಕೈಗಳನ್ನು ಹಿಂದೂ ಸಮಾಜ ಯಾವತ್ತೂ ಮರೆಯಲ್ಲ.

೧೫೨೮ರಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮ ಸ್ಥಳದಲ್ಲಿ ರಾಜಾ ವಿಕ್ರಮಾದಿತ್ಯ ಕಟ್ಟಿದ್ದ ಏಳು ಅಂತಸ್ತಿನ ಭವ್ಯ ಮಂದಿರವನ್ನು ಮೊಘಲ್ ದೊರೆ ಬಾಬರನ ಸೇನಾಧಿ ಪತಿ ಮೀರ್ ಬಾಕಿ ನೆಲಸಮ ಮಾಡಿದ್ದ. ಇದೇ ಜಾಗದಲ್ಲಿ ಮಸ್ಜಿದ್ ತಲೆಯೆತ್ತಿತ್ತು. ಈ ಎಲ್ಲ ಬೆಳವಣಿಗೆಯನ್ನು ಗಮನಿಸುತ್ತಿದ್ದ ಹಿಂದೂ ಸಮಾಜ ಮತ್ತೆ ಶ್ರೀರಾಮ ತನ್ನ ಆಸ್ಥಾನದಲ್ಲಿ ವಿರಾಜಮಾನದ ಕನಸು ಹೊತ್ತು ಸಣ್ಣ, ಪುಟ್ಟ ಹೋರಾಟ ಪ್ರಾರಂಭಿಸಿದ್ದರು. ಆದರೆ ಹಿಂದೂಗಳು ಸಂಘಟಿತರಾಗದ ಕಾರಣ ಮಂದಿರ ಕಟ್ಟುವ ಕೂಗು ಆಳುವ ವರ್ಗಕ್ಕೆ ಕೇಳಿಸುತ್ತಿರಲಿಲ್ಲ.

ರಾಮ ಮಂದಿರಕ್ಕಾಗಿ ೧೮೫೩ರಲ್ಲಿ ಮೊದಲ ಬಾರಿಗೆ ಹಿಂದೂ ಹಾಗೂ ಮುಸಲ್ಮಾನರ ನಡುವೆ ಹಿಂಸಾತ್ಮಕ ಗಲಾಟೆ ಪ್ರಾರಂಭವಾಯಿತು. ಮಸೀದಿ ನಿರ್ಮಾಣ ಕ್ಕೆ ಮಂದಿರ ನಾಶಮಾಡಲಾಗಿದೆ ಎಂದು ನಿರ್ಮೋಹಿ ಅಖಾಡ ತಕರಾರು ಆರಂಭಿಸಿತು. ೧೮೫೯ರ ಹೊತ್ತಿಗೆ ಬ್ರಿಟಿಷ್ ಸರಕಾರ ವಿವಾದಿತ ಸ್ಥಳವನ್ನು ಎರಡು ಭಾಗ ಮಾಡಿ, ಮಸೀದಿಯ ಒಳಭಾಗ ಮುಸ್ಲಿಮರಿಗೆ ಹಾಗೂ ಹೊರಾಂಗಣ ಹಿಂದೂಗಳಿಗೆ ವಿಂಗಡಿಸಿದ್ದು, ರಾಮ ಮಂದಿರ ಹೋರಾಟದ ದಿಕ್ಕು ಬದಲಿಸುವಂತೆ ಮಾಡಿತ್ತು.

ರಾಮ ಮಂದಿರ ವಿಷಯದಲ್ಲಿ ಹಿಂದೂ ಸಮಾಜ ನಿರಂತರವಾಗಿ ಜಾಗೃತೆಯಿಂದ ಇತ್ತು. ಹೋರಾಟದ ತೀವ್ರತೆ ಕಡಿಮೆ ಇದ್ದರು, ಆಗಾಗ್ಗೆ ಒತ್ತಡ ಹೇರುವ ಕೆಲಸ ನಿರಂತರವಾಗಿ ನಡೆಯುತ್ತಿತ್ತು. ಆದರೆ ರಾಮ ಮಂದಿರ ಹೋರಾಟಕ್ಕೆ ಹೊಸ ದಿಕ್ಕು ನೀಡಿದ್ದು ಭಾರತೀಯ ಜನತಾ ಪಾರ್ಟಿ ಹಾಗೂ ವಿಶ್ವ ಹಿಂದೂ ಪರಿಷತ್ ಎಂದರೆ ತಪ್ಪಾಗಲಾರದು. ೮೦ರ ದಶಕದಲ್ಲಿ ರಾಮ ಮಂದಿರಕ್ಕಾಗಿ ನಡೆದ ಹೋರಾಟದ ಪರಿ ಎಂದಿಗೂ ಅದ್ಭುತ. ಹೋರಾಟಗಾರರಿಗೆ ಈ ಬಾರಿ ವಿವಾದಿತ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ ಎಂಬ ದೃಢವಾದ ಸಂಕಲ್ಪ ಅಡಗಿತ್ತು.

೧೯೮೪ರ ಸಮಯದಲ್ಲಿ ವಿಎಚ್‌ಪಿ ಮಹತ್ವದ ಜವಾಬ್ದಾರಿ ಹೊತ್ತುಕೊಂಡಿತ್ತು. ರಾಮಮಂದಿರ ನಿರ್ಮಾಣ ಸಮಿತಿ ರಚಿಸುವ ಮೂಲಕ ಹಿಂದೂಪರ ಸಂಘಟನೆ ಗಳನ್ನು ಒಗ್ಗೂಡಿಸುವ ಕೆಲಸ ಮಾಡಿತು. ಇದೇ ಸಂದರ್ಭದಲ್ಲಿ ವಿವಿಧ ಮಠಾಧಿಪತಿಗಳು ಹಾಗೂ ಹೋರಾಟಗಾರ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಕೆಲಸ ಪ್ರಾರಂಭವಾದವು. ಇಷ್ಟೇ ಅಲ್ಲದೆ, ಹೋರಾಟದ ರೂಪುರೇಷೆ ಹಾಗೂ ಚಳವಳಿಯನ್ನು ವ್ಯವಸ್ಥಿತವಾಗಿ ರೂಪಿಸುವ ನಿಟ್ಟಿನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆ ೮೦ ರ ದಶಕ ಅತ್ಯಂತ ಮಹತ್ವದ ಘಟ್ಟ. ಹೀಗೆಯೇ ನಿರಂತರವಾಗಿ ಸಾಗಿದ್ದ ಮಂದಿರ ಪರವಾದ ಹೋರಾಟದ ಕಿಚ್ಚು ೧೯೮೮ರ ಹೊತ್ತಿಗೆ ಎಡೆಗೂ ಪಸರಿಸಿತು.

ಶಿಲಾಪೂಜನ ಹೆಸರಿನಲ್ಲಿ ದೇಶಾದ್ಯಂತ ೩ ಲಕ್ಷಕ್ಕೂ ಅಧಿಕ ಕಡೆ ಇಟ್ಟಿಗೆ ಪೂಜೆ ನಡೆದವು. ಈ ಹೋರಾಟದ ಫಲವಾಗಿ ಕೋಟ್ಯಂತರ ಹಿಂದೂಗಳಲ್ಲಿ
ಮಂದಿರ ನಿರ್ಮಾಣ ಕುರಿತು ಜಾಗೃತಿ ಹೆಚ್ಚಿತು. ಹಾಗೆಯೇ ಪೂಜಿಸಿದ್ದ ಲಕ್ಷಾಂತರ ಇಟ್ಟಿಗೆಗಳು ಅಯೋಧ್ಯೆ ಪುಣ್ಯಸ್ಥಳಕ್ಕೆ ಬಂದವು. ಒಂದು ಕಡೆ ವಿಎಚ್‌ಪಿ ಪ್ರಮುಖ ಅಶೋಕ್ ಸಿಂಘಲ್‌ರ ಹೋರಾಟದ ರೂಪುರೇಷೆ ಹಾಗೂ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ, ಪ್ರಮೋದ್ ಮಹಾಜನ್ ಅವರ ರಾಮರಥ ಯಾತ್ರೆ ಪರಿಣಾಮ ವಿವಾದಿತ ಮಸೀದಿ ನೆಲಸಮವಾಯಿತು.

೧೯೯೦ ಸೆ. ೨೫ಕ್ಕೆ ಬಿಜೆಪಿ ಅಧ್ಯಕ್ಷ ಎಲ್.ಕೆ. ಅಡ್ವಾಣಿ ಗುಜರಾತ್‌ನ ಸೋಮನಾಥ ಮಂದಿರದಿಂದ ಅಯೋಧ್ಯೆವರೆಗೆ ರಾಮರಥ ಯಾತ್ರೆ ಆರಂಭಿಸಿದರು. ಈ ಯಾತ್ರೆ ದೇಶಾದ್ಯಂತ ಸುಮಾರು ೧೦ ಸಾವಿರ ಕಿ.ಮೀ ಸಾಗಿಬಂತು. ದಿನ ಕಳೆದಂತೆ ಹೋರಾಟದ ತೀವ್ರತೆ ಹೆಚ್ಚುತ್ತಿರುವುದನ್ನು ಸಹಿಸದ ಅಂದಿನ ಉತ್ತರ ಪ್ರದೇಶ ಸಿಎಂ ಮುಲಾಮಯ್ ಸಿಂಗ್, ಬಿಹಾರ ಸಿಎಂ ಲಾಲೂ ಪ್ರಸಾದ್ ಯಾದವ್ ಹಾಗೆಯೇ ಬಿಜೆಪಿ ಬೆಂಬಲಿತ ಪ್ರಧಾನಿಯಾಗಿದ್ದ ವಿ.ಪಿ ಸಿಂಗ್ ಕೂಡ ಯಾತ್ರೆಗೆ ಬ್ರೆಕ್ ಹಾಕಲು ಹೊಂಚು ಹಾಕಿದವರೇ. ರಾಮರಥಯಾತ್ರೆ ಸಂದರ್ಭದಲ್ಲಿ ದೇಶಾದ್ಯಂತ ಮಂದಿರದ ಕಿಚ್ಚು ಹೆಚ್ಚಾಗಿತ್ತು. ಹಿಂದೂಗಳ ಸ್ವಾಭಿಮಾನದ ಸಂಕೇತವಾಗಿ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ ಎಂಬ ಪ್ರತಿe ಎಡೆ ಮೊಳಗಿತ್ತು. ಕರಸೇವೆ ಹೆಸರಿನಲ್ಲಿ ಲಕ್ಷಾಂತರ ಹಿಂದೂಗಳು ಅಯೋಧ್ಯೆಗೆ ಬರಲು ಪ್ರಾರಂಭಿಸಿದರು.

ಆಗಲೇ ರಾಜಕೀಯ ನಾಯಕರ ಅಟ್ಟಹಾಸ ಕರಸೇವಕರ ಮೇಲೆ ನಡೆದಿದ್ದು. ಸಾವಿರಾರು ಹಿಂದುಗಳನ್ನು ಅಂದಿನ ಯುಪಿ ಸಿಎಂ ಮುಲಾಯಂ ಸಿಂಗ್ ಮಾರಣ ಹೋಮ ಮಾಡಿದ್ದ. ಕಂಡಲ್ಲಿ ಗುಂಡಿಟ್ಟು ಕರಸೇವಕರನ್ನು ಕೊಂದಿದ್ದ. ಆದರೆ ಯಾವುದೇ ಅಡೆತಡೆ ಬಂದರೂ ಹಿಂದೆ ಸರಿಯಲ್ಲ ಎಂಬ ಹೋರಾಟದ ಫಲವಾಗಿ ೧೯೯೨ರ ಡಿ. ೬ರಂದು ಅಯೋಧ್ಯೆಯಲ್ಲಿನ ವಿವಾದಿತ ಕಟ್ಟಡ ನೆಲಸಮವಾಗಿತ್ತು. ಬಾಬರಿ ಮಸೀದಿ ಧ್ವಂಸಗೊಂಡ ನಂತರದಲ್ಲಿ ದೇಶದಲ್ಲಿ ಅನೇಕ ಹಿಂಸಾತ್ಮಕ ಕೃತ್ಯಗಳು ನಡೆದವು. ಸುಮಾರು ೯೦೦ ಜನ ಪ್ರಾಣಬಿಟ್ಟರು. ಅದರ ವಿಚಾರವಾಗಿ ಅಂದು ಬಿಜೆಪಿ ಅಧಿಕಾರದಲ್ಲಿದ್ದ ಮಧ್ಯಪ್ರದೇಶ, ರಾಜಸ್ಥಾನ, ಹಾಗೂ ಹಿಮಾಲಯ ಪ್ರದೇಶ ಸರಕಾರ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿ ಕೇಂದ್ರದಲ್ಲಿದ್ದ ಪಿ.ವಿ.ನರಸಿಂಹರಾವ್ ಸರಕಾರ ಆದೇಶ ಹೊರಡಿಸಿತ್ತು. ಇಷ್ಟೇ ಅಲ್ಲ ಮಸೀದಿ ಧ್ವಂಸಗೊಳಿಸಲು ಅವಕಾಶ ಕೊಟ್ಟರು ಎಂಬ ಕಾರಣಕ್ಕೆ ಉತ್ತರಪ್ರದೇಶದ ಬಿಜೆಪಿಯ ಕಲ್ಯಾಣ್ ಸಿಂಗ್ ಸರಕಾರ ವಜಾ ಮಾಡಿದರು.

ಆದರೆ ಮಂದಿರಕ್ಕಿಂತ ಸಿಎಂ ಹುದ್ದೆ ಮುಖ್ಯವಲ್ಲ ಎಂಬ ಸಂದೇಶವನ್ನೂ ಇಡೀ ಜಗತ್ತಿಗೆ ಸಾರಿ ಹಿಂದುಗಳ ಹೃದಯ ಗೆದ್ದವರು ಕಲ್ಯಾಣ್ ಸಿಂಗ್. ಈ ಮಧ್ಯೆ ೨೦೦೨ರ -. ೨೭ರಂದು ಅಯೋಧ್ಯೆಗೆ ಬಂದಿದ್ದ ರಾಮಭಕ್ತರು ವಾಪಸ್ ತೆರಳುತ್ತಿದ್ದಾಗ ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿ ಸುಡಲಾಯ್ತು. ಇದರಲ್ಲಿ ಒಟ್ಟು ೫೮ ಜನ ಪ್ರಾಣಬಿಟ್ಟರು. ಇಷ್ಟೆಲ್ಲ ಸಾವು, ನೋವಿನ ನಂತರ ೨೦೧೯ರಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ನ್ಯಾಯಾಲಯ ಅವಕಾಶ ನೀಡಿತ್ತು. ಬರುವ
ಜನವರಿ ೨೨ಕ್ಕೆ ಭವ್ಯ ರಾಮಮಂದಿರದ ಉದ್ಘಾಟನೆಯಾಗಲಿದೆ. ಆದರೆ ಮಂದಿರಕ್ಕಾಗಿ ಹೋರಾಟ ಮಾಡಿದವನ್ನು ಮರೆಯಲು ಸಾಧ್ಯವೆ? ಖಂಡಿತಾ
ಇಲ್ಲ.

ಹೋರಾಟವನ್ನೇ ತಮ್ಮ ಬದುಕಾಗಿಸಿಕೊಂಡ ಹಿರಿಯರಾದ ಮುರಳಿ ಮನೋಹರ ಜೋಶಿ, ಎಲ್.ಕೆ.ಅಡ್ವಾಣಿ, ಅಶೋಕ್ ಸಿಂಘಲ, ಉಮಾ ಭಾರತಿ, ವಿನಯ್ ಕಟಿಯಾರ್, ಪ್ರಮೋದ್ ಮಹಾಜನ್ ಸೇರಿದಂತೆ ಲಕ್ಷಾಂತರ ಕರಸೇವಕರು, ಸಂಘದ ಸ್ವಯಂ ಸೇವಕರ ಪರಿಶ್ರಮದ ಫಲವೇ ಇವತ್ತಿನ ಈ ಭವ್ಯ ರಾಮ
ಮಂದಿರ. ಮಾತು ಕೊಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭವ್ಯ ಮಂದಿರ ನಿರ್ಮಾಣಕ್ಕೆ ಹನುಮಂತ ನಂತೆ ದುಡಿದಿದ್ದಾರೆ.

ಮತಕ್ಕಾಗಿ ಮಂದಿರ ವಿರೋಧಿಸಿದ್ದ ಕಾಂಗ್ರೆಸ್‌ಗೆ ರಾಮ ಭಜನೆ ಈಗ ಅನಿವಾರ್ಯವಾಗಿದೆ. ರಾಮ ಮಂದಿರ ಕೇವಲ ಕಟ್ಟಡವಲ್ಲ, ಶತಮಾನಗಳ ದಬ್ಬಾಳಿಕೆಯ ಹುಟ್ಟಡಿಗಿಸಿದ ವಿಜಯದ ಸಂಕೇತವಾಗಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿದೆ. ಅಸಂಖ್ಯಾತ ಹಿಂದೂ ಸಮಾಜ ಮತ್ತೊಮ್ಮೆ ತಲೆ ಎತ್ತಿ ಹೇಳುತ್ತಿದೆ ಜೈ ಶ್ರೀ ರಾಮ.

(ಲೇಖಕರು ಪತ್ರಕರ್ತರು)