ವಿಶ್ಲೇಷಣೆ
ನೆ.ಲ.ನರೇಂದ್ರಬಾಬು
ಭಾರತ ಹಳ್ಳಿಗಳ ದೇಶ. ಹಿಂದುಳಿದ ವರ್ಗಗಳ ಮುಕ್ಕಾಲು ಭಾಗ ಹಳ್ಳಿಗಳಲ್ಲಿದೆ. ವಿಕೇಂದ್ರೀಕರಣ ನೀತಿಯಿಂದ ಸ್ಥಳೀಯ ಸಂಸ್ಥೆಗಳು ಚುನಾಯಿತ ಸಂಸ್ಥೆಗಳಾಗಿ ಮಾರ್ಪಟ್ಟು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚುನಾವಣೆಗಳು ಪ್ರಾರಂಭವಾದರೂ ಅದರಲ್ಲಿ ಸ್ಪರ್ಧಿಸುವ ಅವಕಾಶವನ್ನು ಎಲ್ಲ ಹಿಂದುಳಿದ ವರ್ಗದವರಿಗೆ ಪಡೆದುಕೊಳ್ಳಲಾಗಿಲ್ಲ.
ಸ್ವಾತಂತ್ರ್ಯಪೂರ್ವದಿಂದಲೂ ಮೀಸಲಾತಿ ಹೋರಾಟ ಪ್ರಾರಂಭಿಸಿದ್ದೇ ಹಿಂದುಳಿದ ವರ್ಗಗಳ ನಾಯಕರು. ಸ್ವಾತಂತ್ರ್ಯಾನಂತರ ಸಾಂವಿಧಾನಿಕ ವಾಗಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿಯ ಜತೆಗೆ ರಾಜಕೀಯ ಮೀಸಲಾತಿಯೂ ದೊರಕಿತು.
ಇದರಿಂದ ಈ ಸಮುದಾಯಗಳ ಅಭಿವೃದ್ಧಿ ಮತ್ತು ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ತತ್ತ್ವದ ಅಡಿಯಲ್ಲಿ ರಾಜಕೀಯ ಅಧಿಕಾರವನ್ನು ಅನುಭವಿಸುವ ಅವಕಾಶವು ಕಾನೂನು ಬದ್ಧವಾಗಿ ದೊರಕಿತು. ಆದರೆ ಕರ್ನಾಟಕದ ಶೇ. 56 ಪ್ರಮಾಣಕ್ಕಿಂತ ಹೆಚ್ಚಿರುವ ಹಿಂದುಳಿದ ವರ್ಗಗಳಿಗೆ ಬರೀ ಶೈಕ್ಷಣಿಕ ಮತ್ತು ಸ್ವಲ್ಪ ಪ್ರಮಾಣದ ಔದ್ಯೋಗಿಕ ಮೀಸಲಾತಿ ದೊರಕಿತು. ಮುಂದೆ ಸ್ಥಳೀಯ ಸಂಸ್ಥೆಗಳಲ್ಲಿ ಸ್ಪಽಸಲು ಸ್ಥಳೀಯ ಮಟ್ಟದ ಹಿಂದುಳಿದ ವರ್ಗಗಳ ಮೀಸಲಾತಿ ನೀತಿಯನ್ನು ಜಾರಿಗೆ ತರಲಾಯಿತು.
ಇದು ಬರೀ ಸ್ಥಳೀಯ ಸಂಸ್ಥೆಗಳ ಮಟ್ಟಕ್ಕೆ ಮಾತ್ರ ಸೀಮಿತವಾಗಿ, ವಿಧಾನಸಭೆ ಮತ್ತು ಲೋಕಸಭೆಯನ್ನು ಪ್ರತಿನಿಽಸುವ ಹಿಂದುಳಿದ ವರ್ಗಗಳ ಕನಸು ನನಸಾಗಲೇ ಇಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ ಹಿಂದುಳಿದ ವರ್ಗಗಳ ಕೆಲವು ನಾಯಕರು ತಮ್ಮ ವೈಯಕ್ತಿಕ ಸಾಮರ್ಥ್ಯದಿಂದ ವಿಧಾನಸಭೆ ಮತ್ತು ಲೋಕಸಭೆಗಳಿಗೆ ಆರಿಸಿ ಬರುತ್ತಿದ್ದು, ಈ ಪ್ರಮಾಣ ಕೇವಲ ಬೆರಳೆಣಿಕೆ ಯಷ್ಟು ಮಾತ್ರವೇ ಆಗಿದೆ.
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 56 ಪ್ರಮಾಣಕ್ಕಿಂತ ಹೆಚ್ಚಿರುವ ಹಿಂದುಳಿದ ವರ್ಗಗಳು ತಮ್ಮ ಸಂಖ್ಯೆಗೆ ಅನುಗುಣ ವಾಗಿ ರಾಜಕೀಯ ಮೀಸಲಾತಿಯನ್ನು ಪಡೆಯುವಲ್ಲಿ ವಿಫಲವಾಗಿವೆ. ಇದಕ್ಕೆ ಹಲವಾರು ಕಾರಣಗಳಿವೆ. ಹಿಂದುಳಿದ ವರ್ಗದಲ್ಲಿ 205ಕ್ಕೂ ಹೆಚ್ಚು ಸಣ್ಣ, ಅತಿಸಣ್ಣ ಜಾತಿಗಳಿದ್ದು ಇವುಗಳಲ್ಲಿ ಹೊಂದಾಣಿಕೆಯ ಕೊರತೆ, ಸಾಮರಸ್ಯದ ಕೊರತೆ, ಸಂಘಟನೆಯ ಕೊರತೆ, ಮುಖ್ಯವಾಗಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಹೀಗೆ ಬರೀ ಕೊರತೆಗಳೇ ತುಂಬಿದ್ದು, ಈ ಕೊರತೆ ಗಳನ್ನು ಸರಿಪಡಿಸುವ ನಾಯಕತ್ವವು ಸ್ಥಳೀಯ ಮಟ್ಟದಲ್ಲಿ ಬೆಳೆಯದಿದ್ದುದು ಒಂದು ರೀತಿಯ ಕಾರಣವೆಂದರೆ ತಪ್ಪಾಗಲಾರದು.
ಭಾರತ ಮೂಲತಃ ಹಳ್ಳಿಗಳಿಂದಾಗಿರುವ ದೇಶ. ಹಿಂದುಳಿದ ವರ್ಗಗಳ ಶೇ. 75ರಷ್ಟು ಜನಸಂಖ್ಯೆ ಹಳ್ಳಿಗಳಲ್ಲಿ ಇದೆ. ವಿಕೇಂದ್ರೀಕರಣ ನೀತಿಯಿಂದ ಸ್ಥಳೀಯ ಸಂಸ್ಥೆಗಳು ಚುನಾಯಿತ ಸಂಸ್ಥೆಗಳಾಗಿ ಮಾರ್ಪಟ್ಟು, ಅದರಲ್ಲೂ ಗ್ರಾಮ
ಪಂಚಾಯಿತಿ ಮಟ್ಟದಲ್ಲಿ ಚುನಾವಣೆಗಳು ನಡೆಯಲು ಪ್ರಾರಂಭವಾದರೂ ಎಲ್ಲ ಹಿಂದುಳಿದ ವರ್ಗದವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಥವಾ ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
ಇದಕ್ಕೆ ಗ್ರಾಮ ಮಟ್ಟದಲ್ಲಿ ಅದರದ್ದೇ ಆದ ಸಾಮಾಜಿಕ ಕಾರಣಗಳಿದ್ದು, ಅವನ್ನು ಸರಿಪಡಿಸಲು ಸಾಧ್ಯವಾಗದಿರುವುದು ಈ ಅಸಮತೋಲನಕ್ಕೆ ಕಾರಣವಾಗಿದೆ. ಸಂವಿಧಾನದ ಅನುಚ್ಛೇದ 15 (೪ನೇ ಖಂಡ) ಮತ್ತು 16 (೪ನೇ ಖಂಡ)ದಲ್ಲಿ, ರಾಜ್ಯ ಸರಕಾರದ ಮೂಲಕ ಅಧಿಸೂಚಿತವಾದ ಜಾತಿಗಳನ್ನು ಹಿಂದುಳಿದ ವರ್ಗಗಳೆಂದು ಕರೆಯುತ್ತಾರೆ. ಇದರಲ್ಲಿ ಕೇಂದ್ರ ಸರಕಾರವೂ ಪ್ರತ್ಯೇಕವಾಗಿ ಹಿಂದುಳಿದ ವರ್ಗಗಳ ಜಾತಿಗಳನ್ನು ಅಧಿಸೂಚನೆಯ ಮೂಲಕ ಗುರುತಿಸಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ರಾಜ್ಯ ಮಟ್ಟದಲ್ಲಿ ಪ್ರಬಲವಾಗಿರುವ ಕೆಲವು ಜಾತಿಗಳು ಕೇಂದ್ರ ಸರಕಾರದ ಪಟ್ಟಿ ಯಲ್ಲಿ ಹಿಂದುಳಿದ ಜಾತಿಗಳಾಗಿ ಅಧಿಸೂಚಿಸಲ್ಪಟ್ಟಿವೆ. ಹೀಗಾಗಿ ಹಿಂದುಳಿದ ವರ್ಗ ಎಂಬ ಪದಕಲ್ಪನೆಗೆ ರಾಜ್ಯ ಸರಕಾರದ ವ್ಯಾಪ್ತಿಯ ಅಧಿಸೂಚಿತ ಅರ್ಥವೇ ಬೇರೆ, ಕೇಂದ್ರ ಸರಕಾರದ ವ್ಯಾಪ್ತಿಯ ಅಧಿಸೂಚಿತ ಅರ್ಥವೇ ಬೇರೆಯಾಗಿದೆ. ಇದು ಒಂದು ರೀತಿಯಲ್ಲಿ ಹಿಂದುಳಿದ ವರ್ಗಗಳಲ್ಲಿ ಗೊಂದಲದ ಮನಸ್ಥಿತಿಯನ್ನು ಉಂಟುಮಾಡಿದೆ.
ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮನ್ವಯತೆ ಸಾರುವ ಸಮಿತಿಯನ್ನು ಸುಪ್ರೀಂಕೋರ್ಟಿನ ಕಣ್ಗಾವಲಿನಲ್ಲಿ ರಚಿಸಿ
ವರದಿ ತಯಾರಿಸಿ ಸೂಕ್ತವಾದ ಮಾರ್ಪಾಟಾದ ಆದೇಶವನ್ನು ಹೊರಡಿಸುವ ಮೂಲಕ ಹಿಂದುಳಿದ ವರ್ಗಗಳ ಅಧಿಸೂಚನೆ ಯನ್ನು ಪ್ರಕಟಿಸಬಹುದಾಗಿದೆ. ಈ ಬಗ್ಗೆ ಕೇಂದ್ರ ಸರಕಾರ ಮತ್ತು ಎಲ್ಲ ರಾಜ್ಯ ಸರಕಾರಗಳು ಸೂಕ್ತವಾದ ನಿರ್ಧಾರವನ್ನು
ಕೈಗೊಳ್ಳಬೇಕಾದುದು ಅನಿವಾರ್ಯವೆಂದು ನನ್ನ ಅನಿಸಿಕೆ.
ಈ ಎಲ್ಲ ವಿಷಯಗಳು ಒಂದು ಕಡೆ ಇದ್ದರೂ, ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಹಂತದಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿಕೊಡುವ ಪ್ರಥಮ ಹಂತದ ರಾಜಕೀಯ ಚುನಾವಣಾ ಹಂತವೆಂದರೆ, ಅದು ಸಹಕಾರ ಸಂಘಗಳ ಚುನಾವಣಾ ಹಂತ. ಗ್ರಾಮ ಪಂಚಾಯಿತಿಗಳ ಸಂಖ್ಯೆ ಕರ್ನಾಟಕ ರಾಜ್ಯದಲ್ಲಿ ಸೀಮಿತವಾಗಿದ್ದು, ಸುಮಾರು6000ಕ್ಕೂ ಮಿಕ್ಕಿ ಅವು ರಚನೆಯಾಗಿವೆ. ಇಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಪ್ರಮಾಣ ಅತ್ಯಲ್ಪ.
ಆದರೆ ಸಹಕಾರ ಸಂಘಗಳಲ್ಲಿ ಸುಮಾರು 65000ಕ್ಕೂ ಹೆಚ್ಚು ಸ್ಥಾನಗಳು ಹಿಂದುಳಿದ ವರ್ಗಗಳಿಗೆ ದೊರಕುವಂತೆ
ಚುನಾವಣಾ ಮೀಸಲಾತಿ ನಿಯಮವನ್ನು ಸ್ವತಂತ್ರ ಭಾರತದ ೭೫ ವರ್ಷಗಳ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸನ್ಮಾನ್ಯ ಯಡಿಯೂರಪ್ಪ ನೇತೃತ್ವದ ಭಾರತೀಯ ಜನತಾ ಪಾರ್ಟಿಯ ಸರಕಾರದಲ್ಲಿ ಸಹಕಾರ ಸಚಿವರಾಗಿದ್ದ ಬಿ.ಜೆ. ಪುಟ್ಟಸ್ವಾಮಿಯವರು, ಸಹಕಾರ ಸಂಘಗಳಲ್ಲಿ ಇಬ್ಬರು ಹಿಂದುಳಿದ ವರ್ಗಗಳ ಪ್ರತಿನಿಧಿ ಇರುವಂತೆ ಕಾನೂನಿಗೆ ತಿದ್ದುಪಡಿ ತಂದು ವಿಧಾನಮಂಡಲಗಳಲ್ಲಿ ಜಾರಿಗೊಳಿಸಿದ್ದರ ಪರಿಣಾಮವಾಗಿ, ಇಂದು ಗ್ರಾಮೀಣ ಮಟ್ಟದಿಂದ ಜಿಲ್ಲಾಮಟ್ಟದವರೆಗೂ,
ಮುಂದುವರಿದು ರಾಜ್ಯಮಟ್ಟದವರೆಗಿನ ಸಾವಿರಾರು ಸಹಕಾರ ಸಂಘಗಳಲ್ಲಿ ಅತಿ ಸಣ್ಣ ಸಣ್ಣ ಜಾತಿಯ ಹಿಂದುಳಿದ ವರ್ಗಗಳ ಪ್ರತಿನಿಧಿಗಳು ರಾಜಕೀಯ ಸ್ಥಾನಮಾನವನ್ನು ಪಡೆಯುವಂತಾಗಿದೆ.
ಅಷ್ಟೇ ಅಲ್ಲ, ಪ್ರಾಥಮಿಕ ಹಂತದ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ಗಿಟ್ಟಿಸಿಕೊಳ್ಳುವುದರ ಜತೆಗೆ ಮೇಲ್ಮಟ್ಟದ
ರಾಜಕೀಯ ಪ್ರಾತಿನಿಧ್ಯವನ್ನು ಪಡೆಯಲು ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ತರಬೇತಿ ಕೇಂದ್ರಗಳಂತೆ ಅಥವಾ ಜೀವನಾನುಭವದ ಪಾಠಶಾಲೆಗಳಂತೆ ಈ ಸಹಕಾರ ಸಂಘಗಳ ಚುನಾವಣೆಗಳು ಹಿಂದುಳಿದ ವರ್ಗದ ಜನಪ್ರತಿನಿಧಿಗಳಿಗೆ ರಾಜಕೀಯ ಶಿಕ್ಷಣವನ್ನು ನೀಡುವ ಕೇಂದ್ರಗಳಂತಾಗಿವೆ ಎಂದರೂ ತಪ್ಪಾಗಲಾರದು.
ಕೆಲವು ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳ ಪರವಾಗಿ ಬರೀ ಮೊಸಳೆ ಕಣ್ಣೀರನ್ನು ಸುರಿಸಿದ್ದು ಬಿಟ್ಟರೆ, ಹಿಂದುಳಿದ ವರ್ಗಗಳು ರಾಜಕೀಯವಾಗಿ ಬಲಗೊಳ್ಳುವುದಕ್ಕೆ ತಯಾರಾಗಲು ಯಾವುದೇ ಕ್ರಮಗಳನ್ನು ಕೈಗೊಳ್ಳಲೇ ಇಲ್ಲ. ಆದರೆ
ಭಾರತೀಯ ಜನತಾಪಕ್ಷವು ತನ್ನ ಅಂತ್ಯೋದಯ ಸಿದ್ಧಾಂತದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಎಲ್ಲಾ ಪ್ರಾಥಮಿಕ ಸೌಲಭ್ಯಗಳು, ಸವಲತ್ತುಗಳು ದೊರಕಬೇಕು ಎಂಬಂತೆ ರಾಜಕೀಯ ಚುನಾವಣಾ ಪ್ರಾತಿನಿಧ್ಯವು ದೊರಕಬೇಕೆಂದು ಆಶಿಸಿತು.
ಇದರ ಪರಿಣಾಮವಾಗಿ ಹಿಂದುಳಿದ ವರ್ಗಗಳ ಕಲ್ಯಾಣದ ಬಗೆಗಿನ ತನ್ನ ಮುಕ್ತಮನಸ್ಸಿನ ಅನೇಕ ಯೋಜನೆ ಗಳನ್ನು ಜಾರಿಗೆ
ತರುವುದರ ಜತೆಯಲ್ಲೇ, ಸಹಕಾರ ಸಂಘಗಳ ಪ್ರಾತಿನಿಧ್ಯ ನಿಯಮಕ್ಕೆ ತಿದ್ದುಪಡಿ ತಂದು ಸಾಮಾಜಿಕ ನ್ಯಾಯವನ್ನು ನೀಡುವ ಕೆಲಸವನ್ನು ಪ್ರಾಮಾಣಿಕವಾಗಿ ಈ ಹಿಂದೆಯೂ ಮಾಡಿದೆ, ಈಗಲೂ ಮಾಡುತ್ತಿದೆ, ಮುಂದೆಯೂ ಮಾಡುತ್ತದೆ ಎಂದು ಘಂಟಾಘೋಷವಾಗಿ ಹೇಳಬಲ್ಲೆ.