Friday, 22nd November 2024

ಬಹ್ರೈನ್ ದೇಶದಲ್ಲೊಬ್ಬ ಯೋಗಿ ಬಾಬಾ !

ವಿದೇಶವಾಸಿ

dhyapaa@gmail.com

ಈಗಾಗಲೇ ನೂರಾರು ಬಹ್ರೈನ್ ಪ್ರಜೆಗಳಿಗೆ ಯೋಗ ಕಲಿಸಿರುವ ಎಹ್ಸಾನ್, ತಮ್ಮ ಮಗ ರಾಯದ್‌ನಿಗೂ ತರಬೇತಿ ನೀಡಿ ಯೋಗದ ಮೆರವಣಿಗೆ ಮುಂದು ವರಿಯಲು ದಾರಿ ಮಾಡಿಕೊಟ್ಟಿದ್ದಾರೆ. ಪ್ರಾಣಾಯಾಮಕ್ಕಿಂತ ಆಸನಗಳು ಇಂದಿನ ಪೀಳಿಗೆಯನ್ನು ಆಕರ್ಷಿಸುತ್ತವೆ ಎನ್ನುವ ಎಹ್ಸಾನ್, ಯೋಗದಲ್ಲಿ ಬೇರೆ ಬೇರೆ ವಸ್ತುಗಳನ್ನು ಬಳಸುವ, ನೃತ್ಯ ಅಳವಡಿಸಿಕೊಳ್ಳುವ ಪ್ರಯೋಗಗಳಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳು ಅಂತಾರಾಷ್ಟ್ರೀಯ ಯೋಗ ದಿನದಂದು ಬಹ್ರೈನ್‌ನಲ್ಲಿಯೂ ಕಾರ್ಯ ಕ್ರಮ ಆಯೋಜಿಸಲಾಗಿತ್ತು. BICAS (Bahrain India Cultural and Arts Services) ಸಂಸ್ಥೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅದಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕದವರೇ ಆದ, ಸ್ವಾಮಿ ವಿವೇಕಾನಂದ ಯೋಗಅನುಸಂಧಾನ ಸಂಸ್ಥಾನ ಡೀಮ್ಡ್ ಯೂನಿ ವರ್ಸಿಟಿಯ ಸಂಸ್ಥಾಪಕ ಉಪಕುಲಪತಿಯವರಾದ ಡಾ. ಎಚ್.ಆರ್. ನಾಗೇಂದ್ರ ಆಗಮಿಸಿದ್ದರು. ಡಾ. ನಾಗೇಂದ್ರ ಈ ಮೊದಲು ೨೦೧೬ರ ಯೋಗ ದಿನಾಚರಣೆಗೆ ಕನ್ನಡ ಸಂಘ ಬಹ್ರೈನ್‌ಗೆ ಅತಿಥಿಯಾಗಿ ಆಗಮಿಸಿದ್ದರು. ಆ ಸಂಬಂಧವನ್ನು ಇನ್ನೂ ಕಾಪಿಟ್ಟು ಕೊಂಡ ಪರಿಣಾಮವಾಗಿ, ನೂತನ ಕನ್ನಡ ಭವನಕ್ಕೆ ಇತರ ಗಣ್ಯರೊಂದಿಗೆ ಭೇಟಿ ನೀಡಿದ್ದರು.

ಅವರಲ್ಲಿ, ಹಣೆಗೆ ತಿಲಕ ಇಟ್ಟುಕೊಂಡು ಬಂದವರೊಬ್ಬರು ನನ್ನ (ಬಹುತೇಕ ಎಲ್ಲರ) ಗಮನ ಸೆಳೆದಿದ್ದರು. ನಿಪುಣ ಶಿಲ್ಪಿಯೊಬ್ಬ ಪುರುಸೊತ್ತಿನಲ್ಲಿ ಕಡೆದಿಟ್ಟ ವಿಗ್ರಹದಂತಿದ್ದ ಮೈಕಟ್ಟು, ಮಂದಸ್ಮಿತ ವದನ, ಬೆಳ್ಳಗಿನ ಹಣೆಯ ಮೇಲೆ ಒಂದು ಸಣ್ಣ ಕೆಂಪು ತಿಲಕ, ಯಾರನ್ನೂ ಆಕರ್ಷಿಸುವಂತಿತ್ತು. ನೋಡಿದರೆ ಕರ್ನಾಟಕದವರಂತಲ್ಲ, ಭಾರತೀಯ ರಂತೆಯೂ ಕಾಣುತ್ತಿರಲಿಲ್ಲ. ಆದರೆ ಮುಖದಲ್ಲಿ ಅದೇನೋ ಓಜಸ್ಸು, ತೇಜಸ್ಸು ಭರಪೂರವಾಗಿ ತುಳುಕುತ್ತಿತ್ತು. ಆ ವ್ಯಕ್ತಿ ಯೊಂದಿಗೆ ನಾಲ್ಕಾರು ಸ್ತ್ರೀಯರೂ ಬಂದಿದ್ದರು. ಮೇಲ್ನೋಟಕ್ಕೆ ಅವರನ್ನು ಅರಬ್ ದೇಶದವರು ಎಂದು ಊಹಿಸಬಹು ದಾಗಿತ್ತು.

ಹಾಗಾದರೆ ಈ ವ್ಯಕ್ತಿ ಯಾರು ಎಂಬ ಕುತೂಹಲ ಅಲ್ಲಿ ಸೇರಿದ ಎಲ್ಲರ ಮನದಲ್ಲೂ ಮೂಡಿತ್ತು. ಕೊನೆಗೆ ಅವರನ್ನು ಮಾತಿಗೆ ಕರೆದಾಗಲೇ ಅವರು ಯಾರೆಂದು ತಿಳಿದದ್ದು. ಅವರು ಹೇಳಿದ್ದು ಐದೇ ಸಾಲು. ‘ನನ್ನ ಹೆಸರು ಎಹ್ಸಾನ್ ಅಸ್ಗರ್. ನಾನು ಇಲ್ಲಿ ಪ್ರಾಪ್ ಯೋಗ ಕಲಿಸುತ್ತೇನೆ. ನನ್ನೊಂದಿಗೆ ಬಂದ ಯುವತಿಯರು ನನ್ನ ಶಿಷ್ಯೆಯರು. ಯೋಗದಂಥ ಒಂದು ಅದ್ಭುತ ವನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ಭಾರತಕ್ಕೆ ಧನ್ಯವಾದ, ಎಲ್ಲರಿಗೂ ಪ್ರೀತಿಯನ್ನು ಹಂಚುವ ಭಾರತವನ್ನು ನಾನು ಪ್ರೀತಿಸುತ್ತೇನೆ’. ಅದರಲ್ಲೇ ಕೊನೆಯ ಎರಡು ಸಾಲು ಹೇಳುವಾಗ ಅವರು ಭಾವುಕರಾಗಿದ್ದರು.

Read E-Paper click here

ಅಷ್ಟು ಕೇಳಿದ ನಂತರ ಸುಮ್ಮನಿರಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮ ಮುಗಿದ ನಂತರ ಅವರ ಬಳಿ ಹೋಗಿ ‘ನಿಮ್ಮನ್ನು ಭೇಟಿಯಾಗಬೇಕು, ನಿಮ್ಮ ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕು’ ಎಂದು ಹೇಳಿದೆ. ‘ಎರಡು ದಿನದ ನಂತರ ಬರುವ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆಯ ತಯಾರಿಯಲ್ಲಿದ್ದೇನೆ. ನಂತರ ಭೇಟಿಯಾಗೋಣ’ ಎಂದರು. ಯೋಗ ದಿನಾಚರಣೆಯ ನಂತರ ನಮ್ಮ ಭೇಟಿಯೂ ಆಯಿತು. ಭಾರತದ ‘ಯೋಗ’ವನ್ನು ಬಹ್ರೈನ್‌ನಲ್ಲಿ ನಿತ್ಯವೂ ಉತ್ಸವದಂತೆ ಆಚರಿಸುತ್ತಿರುವ, ಅದನ್ನು ಇಲ್ಲಿಯ ಶಿಕ್ಷಣಕ್ಕೆ ಅಳವಡಿಸಲು ಪ್ರಯತ್ನಿಸುತ್ತಿರುವ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಳಸಿಕೊಳ್ಳುವ ಕನಸು ಹೊತ್ತ, ಬಹ್ರೈನ್‌ನಲ್ಲಿಯೇ ಹುಟ್ಟಿ ಬೆಳೆದು, ಈಗ ಭಾರತದ ಯೋಗವನ್ನೇ ಉಸಿರಾಗಿಸಿಕೊಂಡಿರುವ ಎಹ್ಸಾನ್ ಅವರ ಪರಿಚಯವನ್ನು ನಿಮಗೆ ಮಾಡಿಕೊಡಲೇಬೇಕು.

ಎಹ್ಸಾನ್ ಅಸ್ಗರ್ ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಎಲ್ಲ ಬಹ್ರೈನ್ ದೇಶದಲ್ಲಿಯೇ. ಓದು ಮುಗಿದ ನಂತರ ಬಹ್ರೈನ್‌ನ ಒಳಾಡ ಳಿತದ ಸಚಿವಾಲಯದಲ್ಲಿ ಮಾಹಿತಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ಸೇರಿದ ಕೆಲವೇ ವರ್ಷದಲ್ಲಿ ಅವರಿಗೆ ವಿಚಿತ್ರ ಕಾಯಿಲೆ ಅಮರಿಕೊಂಡಿತು. ಎಹ್ಸಾನ್ ತೀವ್ರವಾದ ಮಾನಸಿಕ ಖಿನ್ನತೆಗೆ ಒಳಗಾಗಿ ದ್ದರು. ಇದ್ದಕ್ಕಿದ್ದಂತೆ ಅವರ ಕೈ-ಕಾಲುಗಳಲ್ಲಿ ನಡುಕ ಶುರುವಾಗುತ್ತಿತ್ತು. ಭಯ, ಆತಂಕ ಅವರನ್ನು ಮುತ್ತಿಕೊಳ್ಳುತ್ತಿತ್ತು. ಕೆಲವೊಮ್ಮೆ ಜೀವವೇ ಭಾರವಾದಂತೆ ಅನಿಸುತ್ತಿತ್ತು. ಈ ಬದುಕು ಸಾಕು, ಇದಕ್ಕೊಂದು ಅಂತ್ಯ ಹಾಡಬೇಕು ಎನ್ನುವಷ್ಟರ ಮಟ್ಟಿಗೆ ಡಿಪ್ರೆಷನ್‌ಗೆ ಇಳಿಯುತ್ತಿದ್ದರು.

ಈ ರೀತಿಯ ಮನೋವಿಕಾರ ಆವರಿಸಿದಾಗೆಲ್ಲ ಮನೆಯವರು, ಸ್ನೇಹಿತರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿ ಸುತ್ತಿದ್ದರು. ಆ ದಿನಗಳಲ್ಲಿ ಬಹ್ರೈನ್‌ನಲ್ಲಿ ಅವರು ಭೇಟಿ ನೀಡದ ಒಂದೇ ಒಂದು ಆಸ್ಪತ್ರೆಯೂ ಬಾಕಿ ಉಳಿದಿರಲಿಲ್ಲ. ಆಸ್ಪತ್ರೆ ಯಲ್ಲಿ ೩-೪ ದಿನ ಚಿಕಿತ್ಸೆ ಕೊಡಿಸಿ, ತಕ್ಕ ಮಟ್ಟಿಗೆ ಆರೋಗ್ಯ ಸುಧಾರಣೆ ಆಯಿತು ಎನ್ನುವಾಗ ಮನೆಗೆ ಕರೆದುಕೊಂಡು ಬರು ತ್ತಿದ್ದರು. ಕೆಲವೇ ದಿನ ಕಳೆಯುವಷ್ಟರಲ್ಲಿ ಮತ್ತೆ ಅದೇ ಹಾಡು, ಅದೇ ರಾಗ, ಅದೇ ತಾಳ! ಒಂದು ಹಂತದಲ್ಲಿ ಮನೆಗಿಂತ ಆಸ್ಪತ್ರೆಯ ವಾಸವೇ ಹೆಚ್ಚಾಗಿತ್ತು. ಆದರೆ ಆಸ್ಪತ್ರೆಗೆ ಸೇರಿಸಿ, ಅವರೊಂದಿಗೆ ಉಳಿದು ಚಿಕಿತ್ಸೆ ಕೊಡಿಸುವ ಕೆಲಸವನ್ನು ಯಾರಾ ದರೂ ಎಷ್ಟು ದಿನ ಅಂತ ಮಾಡಿಯಾರು? ‘ಪ್ರತಿನಿತ್ಯ ಸಾಯುವವರಿಗೆ ಅಳುವವರು ಯಾರು?’ ಎಂಬ ಮಾತೇ ಇದೆಯಲ್ಲ! ಹಾಗಾಗಿತ್ತು ಅವರ ಸ್ಥಿತಿ.

ಮನೆ ಯವರು, ಸ್ನೇಹಿತರೆಲ್ಲರೂ ‘ಇದು ಯಾವುದೋ ಭಯಾನಕ ಮಾನಸಿಕ ಕಾಯಿಲೆ’ ಎಂದು ನಿರ್ಣಯಿಸಿದ್ದರು. ಇದೊಂದು ಗುಣಪಡಿಸಲಾಗದ, ಶಾಶ್ವತ ರೋಗ ಎಂದು ಎಲ್ಲರೂ ಭಾವಿಸಿ ದ್ದರು. ಸ್ವತಃ ಎಹ್ಸಾನ್ ಕೂಡ ತನ್ನ ಬದುಕು ಮುಗಿದೇಹೋಯಿತು ಎನ್ನುವ ಹಂತಕ್ಕೆ ತಲುಪಿದ್ದರು. ೨೦೦೨, ಅಂದರೆ ಸುಮಾರು ಇಪ್ಪತ್ತು ವರ್ಷದ ಹಿಂದೆ ಎಹ್ಸಾನ್‌ಗೆ ಆಂಧ್ರಪ್ರದೇಶ ಮೂಲದ ಬಂಡಿರಾಮುಲು ಭೇಟಿಯಾದರು. ರಾಮುಲು ಉದ್ಯೋಗ ನಿಮಿತ್ತ ಬಹ್ರೈನ್‌ಗೆ ಬಂದಿದ್ದರೂ, ಪ್ರತಿನಿತ್ಯ ಅಯ್ಯಂಗಾರಿ ಯೋಗ ಅಭ್ಯಾಸ ಮಾಡು ತ್ತಿದ್ದರು. ಆಗಲೇ ಅವರಿಗೆ ಕೆಲವು ಭಾರತೀಯ ಶಿಷ್ಯಂದಿರೂ ಇದ್ದರು. ಸಹೋದ್ಯೋಗಿಯೊಬ್ಬರ ಮೂಲಕ ಎಹ್ಸಾನ್‌ಗೆ ರಾಮುಲು ಪರಿಚಯವಾಯಿತು.

ತಮ್ಮ ಜತೆ ಯೋಗ ಮಾಡುವಂತೆ ರಾಮುಲು ಎಹ್ಸಾನ್‌ಗೆ ಸಲಹೆ ನೀಡಿದರು. ಪ್ರತಿನಿತ್ಯ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು, ರಾಮುಲು ಅವರನ್ನು ಕರೆದುಕೊಂಡು ಹತ್ತಿರದಲ್ಲಿರುವ ಉದ್ಯಾನಕ್ಕೆ ಹೋಗುತ್ತಿದ್ದರು. ಅಲ್ಲಿ ಎರಡು ಗಂಟೆಗಳ ಕಾಲ ಇಬ್ಬರೇ ಯೋಗಾಭ್ಯಾಸ ಮಾಡುತ್ತಿದ್ದರು. ಎರಡು ತಿಂಗಳಾಗುವಷ್ಟರಲ್ಲಿ ಎಹ್ಸಾನ್ ಆರೋಗ್ಯ ಸುಧಾರಿಸಲಾರಂಭಿಸಿತು. ಎರಡು ವರ್ಷ ಆಗುವಷ್ಟರಲ್ಲಿ ಎಹ್ಸಾನ್ ಸಂಪೂರ್ಣ ಬದಲಾಗಿ, ಆರೋಗ್ಯವಂತ ಯೋಗಪಟುವಾದರು. ರಾಮುಲು ಅವರೊಂದಿಗೆ ಸೇರಿ ಯೋಗ ಕಲಿಸುವಷ್ಟು ತಯಾರಾಗಿದ್ದರು. ಎಹ್ಸಾನ್ ತಾವೊಬ್ಬರೇ ಯೋಗಾಭ್ಯಾಸ ಮಾಡಿಕೊಂಡು ಇರಬಹುದಾಗಿತ್ತಾದರೂ, ಇನ್ನೊಂದು ಬದುಕು ಸಿಕ್ಕಿದ್ದು ಪ್ರಾಯಶಃ ಯೋಗದ ಮಹತ್ವವನ್ನು ಜಗತ್ತಿಗೆ ತಿಳಿಸಿಕೊಡಲು ಇರಬೇಕು ಎಂದು ಅದರ ಪರಿ ಚಾರಕರಾಗಿ ಪ್ರಚಾರಕ್ಕಿಳಿದರು.

ತನ್ನಂತೆ ಇತರರು ಕಷ್ಟ, ನೋವು ಅನುಭವಿಸಬಾರದು ಎಂದು ಯೋಗದ ಮೂಲಕ ಚಿಕಿತ್ಸೆಯನ್ನೂ ನೀಡಲು ಆರಂಭಿಸಿದರು. ಸಾಮಾನ್ಯ ಯೋಗ ಕಲಿಸುವುದಷ್ಟೇ ಅಲ್ಲದೆ, PROP Yoga ಹೇಳಿಕೊಡಲು ಆರಂಭಿಸಿದರು. ಅಂದರೆ, ಕೆಲವು ವಸ್ತುಗಳನ್ನು ಬಳಸಿ ಯೋಗಾಸನ ಹಾಕುವುದು ಮತ್ತು ಆಸನದಲ್ಲಿ ವಸ್ತುಗಳನ್ನು ಬಳಸಿ ಕೆಲವು ಊನಗಳಿಗೆ ಚಿಕಿತ್ಸೆ ನೀಡುವುದು ಇವರ ಪ್ರವೃತ್ತಿ ಯಾಯಿತು. ಎಹ್ಸಾನ್ ಈಗ ಪೂರ್ಣ ಪ್ರಮಾಣದ ಯೋಗ ಶಿಕ್ಷಕರಾಗಿದ್ದಾರೆ. ಕಳೆದ ಮೂರು ದಶಕಗಳಿಂದ ತಾವು ಮಾಡಿಕೊಂಡು ಬಂದಿದ್ದ ಸರಕಾರಿ ನೌಕರಿಗೆ ರಾಜೀನಾಮೆ ನೀಡಿದ್ದಾರೆ. ಇದೇ ಸೆಪ್ಟೆಂಬರ್ ತಿಂಗಳಿನಿಂದ ತಾವೇ ಆರಂಭಿಸಿದ ಪ್ರಾಪ್ ಯೋಗ ತರಬೇತಿ ಕೇಂದ್ರದಲ್ಲಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಈಗಾಗಲೇ ಅನೇಕ ಜನರ ಕಾಯಿಲೆಗೆ, ಅಂಗ ಊನಕ್ಕೆ, ಚಿಕಿತ್ಸೆಯನ್ನೂ ನೀಡಿದ್ದಾರೆ. ಕಳೆದ ಐದು ವರ್ಷದಿಂದ ಒಂದು ದಿನವೂ ಬಿಡುವಿಲ್ಲದಂತೆ ಪ್ರತಿನಿತ್ಯ ಆರು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಇನ್ನೊಂದು ಕಾರ್ಯವನ್ನು ನಿಮಗೆ ಹೇಳದಿದ್ದರೆ ಈ ಲೇಖನ ಅಪೂರ್ಣ. ಎಹ್ಸಾನ್ ವರ್ಷಕ್ಕೆ ಎರಡರಿಂದ ಮೂರು ಬಾರಿ ಭಾರತಕ್ಕೆ ಭೇಟಿ ನೀಡುತ್ತಾರೆ. ಈಗಾಗಲೇ ಭಾರತದ ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲೂ ಬಹುಕಾಲದಿಂದ ಎಲುಬು ಮತ್ತು ನರಗಳ ಕಾಯಿಲೆ ಯಿಂದ ಬಳಲುತ್ತಿದ್ದ ಅನೇಕರಿಗೆ ಚಿಕಿತ್ಸೆ ನೀಡಿದ್ದಾರೆ. ಭಾರತದ ಶಾಲೆ ಕಾಲೇಜುಗಳಲ್ಲಿ ಯೋಗದ ಮಹತ್ವದ ಕುರಿತು ಉಪನ್ಯಾಸ ನೀಡಿದ್ದಾರೆ. ಭಾರತದಲ್ಲಿ ಅವರು ನೀಡುವ ಎಲ್ಲ ಚಿಕಿತ್ಸೆಗಳೂ, ಉಪನ್ಯಾಸಗಳೂ ಉಚಿತ. ನನಗೆ ಇನ್ನೊಂದು ಬದುಕು ಕೊಟ್ಟ ಭಾರತಕ್ಕೆ ನಾನು ಮಾಡುವ ಋಣ ಸಂದಾಯ ಇದು ಎನ್ನುವ ಎಹ್ಸಾನ್, ಜನರನ್ನು ನೋಡಿಯೇ, ಅವರಲ್ಲಿ ಯಾವುದೋ ನೋವಿದೆ ಎಂದು ಕಂಡುಹಿಡಿಯುತ್ತಾರೆ. ಭಾರತದಲ್ಲಿ ಓಡಾಡುವಾಗ ಬೀದಿ ಬದಿಯಲ್ಲಿ ಹಣ್ಣು ತರಕಾರಿ ಮಾರುವವರು,
ವಾಹನ ಚಾಲಕರೂ ಒಳಗೊಂಡಂತೆ, ದೇವಸ್ಥಾನದ ಅರ್ಚಕರ ನೋವನ್ನೂ ನಿವಾರಿಸಿದ್ದಾರೆ.

ನಿಜ, ಎಹ್ಸಾನ್ ಮಸೀದಿಗೂ ಹೋಗುತ್ತಾರೆ, ದೇವಸ್ಥಾನ, ಚರ್ಚ್‌ಗಳಿಗೂ ಹೋಗುತ್ತಾರೆ. ಹಣೆಗೆ ತಿಲಕ ಇಟ್ಟುಕೊಂಡು ಬಂದಿದ್ದರು ಎಂದು ಲೇಖನದ ಆರಂಭದಲ್ಲಿ ಉಲ್ಲೇಖಿಸಿರುವೆನಲ್ಲ, ಸಂಘಕ್ಕೆ ಬರುವುದಕ್ಕೆ ಮೊದಲು ಅವರು ಬಹ್ರೈನ್ ರಾಜಧಾನಿ ಮನಾಮಾದಲ್ಲಿರುವ ಕೃಷ್ಣ ಮಂದಿರಕ್ಕೆ ಹೋಗಿ ಬಂದಿದ್ದರಂತೆ. ಈಗಾಗಲೇ ನೂರಾರು ಬಹ್ರೈನ್ ಪ್ರಜೆಗಳಿಗೆ ಯೋಗ ಕಲಿಸಿರುವ ಎಹ್ಸಾನ್, ತಮ್ಮ ಮಗ ರಾಯದ್‌ನಿಗೂ ತರಬೇತಿ ನೀಡಿ ಯೋಗದ ಮೆರವಣಿಗೆ ಮುಂದುವರಿಯಲು ದಾರಿ ಮಾಡಿಕೊಟ್ಟಿದ್ದಾರೆ. ಪ್ರಾಣಾಯಾಮಕ್ಕಿಂತ ಆಸನಗಳು ಇಂದಿನ ಯುವ ಪೀಳಿಗೆಯನ್ನು ಆಕರ್ಷಿಸುತ್ತವೆ, ಅದರಲ್ಲೇ ಹೊಸ ಪ್ರಯೋಗಗಳಿಗೆ ಅವರು ಉತ್ಸುಕರಾಗಿರುತ್ತಾರೆ ಎನ್ನುವ ಎಹ್ಸಾನ್, ಯೋಗದಲ್ಲಿ ಬೇರೆ ಬೇರೆ ವಸ್ತುಗಳನ್ನು ಬಳಸುವುದು, ನೃತ್ಯವನ್ನು ಅಳವಡಿಸಿ ಕೊಳ್ಳುವುದು ಇತ್ಯಾದಿ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಗುರು-ಶಿಷ್ಯ ಪರಂ ಪರೆಯನ್ನು ಮನಸಾರೆ ಒಪ್ಪಿಕೊಂಡಿರುವ ಎಹ್ಸಾನ್, ಶಿಷ್ಯಂದಿರ ಪ್ರೀತಿಯ ‘ಬಾಬಾ’ ಆಗಿದ್ದಾರೆ.

ಬಹ್ರೈನ್‌ನಲ್ಲಿ ಯೋಗವನ್ನು ಕ್ರೀಡೆಯನ್ನಾಗಿ ಪರಿಗಣಿಸಬೇಕು ಎಂಬ ನಿಟ್ಟಿನಲ್ಲಿ ಬಹ್ರೈನ್ ಒಲಿಂಪಿಕ್ ಕಮಿಟಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಯೋಗ ಚಿಕಿತ್ಸೆಯನ್ನು ಆಸ್ಪತ್ರೆಗಳಲ್ಲಿ ಬಳಸಿಕೊಳ್ಳುವಂತೆ ಬಹ್ರೈನ್‌ನ ಆರೋಗ್ಯ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಯೋಗ ಶಿಕ್ಷಣವನ್ನು ಶಾಲೆಗಳಲ್ಲಿ ಪಾಠವಾಗಿ ಬೋಧಿಸುವುದರ ಜತೆಗೆ, ಯೋಗದ ಡಿಪ್ಲೋಮಾ
ಮತ್ತು ಪದವಿ ಕಾಲೇಜುಗಳನ್ನು ಆರಂಭಿಸುವಂತೆ ಶಿಕ್ಷಣ ಸಚಿವಾಲಯವನ್ನು ಒತ್ತಾಯಿಸುತ್ತಿದ್ದಾರೆ.

ಈ ಮೂರರಲ್ಲಿಯೂ ತಾವು ಯಶಸ್ವಿಯಾಗುವ ಭರವಸೆ ಇದೆ ಎನ್ನುತ್ತಾರೆ ಎಹ್ಸಾನ್. ಭಾರತದ ಯೋಗ ಪರಂಪರೆಗೆ ಸಾವಿಲ್ಲ ಬಿಡಿ. ಮುಂದೊಂದು ದಿನ ಭಾರತದಲ್ಲಿ ಯೋಗ, ಯೋಗ ಕಲಿಸುವವರು ಇಲ್ಲ ಎಂದಾದರೂ, ವಿದೇಶಕ್ಕೆ ಹೋಗಿ ಕಲಿಯ ಬಹುದು!