Sunday, 15th December 2024

ಬಾಳೆಹಣ್ಣು ಫಾರಿನ್ನಿಗೆ ಹೋದ ಕಥೆ !

ಶಿಶಿರ ಕಾಲ

shishirh@gmail.com

ಎಂಥೆಂಥವರಿಗೇ ಸ್ಥಾನ ಕೊಟ್ಟಿದೆಯಂತೆ ಇತಿಹಾಸ! ಇನ್ನು ಮನುಷ್ಯಕುಲ ಇಷ್ಟೊಂದು ಪ್ರಮಾಣದಲ್ಲಿ ತಿಂದು ತೇಗುವ ಬಾಳೆ ಹಣ್ಣಿನದೂ ಏನಾದರು ಇತಿಹಾಸ, ಕಥೆ ಇರಲೇಬೇಕಲ್ಲವೇ? ಸಾಕಷ್ಟಿದೆ.

ಬಾಳೆಹಣ್ಣು : ಈ ಹಣ್ಣಿನಷ್ಟು ಪಾಪದ, ನಿರಾಡಂಬರ, ಸರಳ ಹಣ್ಣು ಇನ್ನೊಂದಿಲ್ಲ. ಇದಕ್ಕೆ ಪೂಜೆ, ಪಂಚಾಮೃತದಿಂದ ಹಿಡಿದು ಮಂಗಳೂರು ಬನ್ಸ್ ಆಗುವಷ್ಟು ವೈವಿಧ್ಯತೆಯಿದ್ದರೂ ಅದಕ್ಕೆ ಜನಮಾನಸದಲ್ಲಿ ಉಳಿದ ಹಣ್ಣಿಗಳಿಗಿರುವಷ್ಟು ಮರ್ಯಾದೆ ಯಿಲ್ಲ. ಅದಕ್ಕೆ ಮನೆಯಲ್ಲಿ ಹಣ್ಣಿನ ಸ್ಥಾನಮಾನ ಸಿಕ್ಕದಷ್ಟು ಸದರ. ಟೊಮೆಟೊ ಅನ್ನು ಹಣ್ಣೋ ತರಕಾರಿನೋ ಎನ್ನುವ ದ್ವಂದ್ವದಲ್ಲಿರುವುದರಿಂದ ಅದನ್ನು ಬಿಟ್ಟರೆ ಮನುಷ್ಯ ಅತಿ ಹೆಚ್ಚು ಸೇವಿಸುವ ಹಣ್ಣೆಂದರೆ ಅದು ಇವತ್ತಿನ ಲೇಖನದ ಹೀರೋ ಬಾಳೆಹಣ್ಣು. ಈ ವಾರ ಅಂತಹ ಮಾಮೂಲಿ ಹಣ್ಣೊಂದು ಫಾರಿನ್ನಿಗೆ ಹೋದ ಕಥೆ. ಬಾಳೆಹಣ್ಣು ಪಾಶ್ಚಾತ್ಯವಾದ ಕಥೆ.

ನಾವೆಲ್ಲಾ ಹುಟ್ಟಿ ಅದೆಷ್ಟೋ ಕಾಲ ತಿಂದದ್ದು, ಕಂಡದ್ದು ಎಲ್ಲ ಕೇವಲ ಮೂರೇ ಜಾತಿಯ ಬಾಳೆಹಣ್ಣುಗಳು. ಒಂದು ಮೆಟ್ಟಗ. ಏಲಕ್ಕಿ ಬಾಳೆಹಣ್ಣು ಎಂದು ಹಲವು ಕಡೆ ಫೇಮಸ್ಸು. ಆ ಬಾಳೆಹಣ್ಣೋ, ಬಲು ರುಚಿ. ಒಂದೇ ಜಪಾಟಿಗೆ ಎಂಟು ಹತ್ತು ತಿಂದರೆ ಮಾತ್ರ ಸಮಾಧಾನ. ಏಲಕ್ಕಿ ಬಾಳೆಹಣ್ಣು ಬಿಟ್ಟರೆ ಕರಿಬಾಳೆ, ಮೈಸೂರು ಇವು ಉಳಿದವು. ಬೇರೆ ಬಾಳೆಹಣ್ಣನ್ನು ಬೆಳೆಯು ತ್ತಿದ್ದರೂ ಅವೆಲ್ಲ ಕೇವಲ ಶೃಂಗಾರಕ್ಕೆ, ಕೃಷೀ ಸಹಜ ಕುತೂಹಲಕ್ಕೆ ಮಾತ್ರ. ಮಂಗನ ಕಾಟ ತಪ್ಪಿಸಲು ಎಳತಿನಲ್ಲೇ ಬಾಳೆಹಣ್ಣಿನ ಕೊನೆಗೆ ಗೋಣಿ ಚೀಲ ಕಟ್ಟುತ್ತಿದ್ದೆವು. ಈ ಪದ್ಧತಿ ಇಂದಿಗೂ ಇದೆ.

ಹೀಗೆ ಬಾಳೆ ಕೊನೆಗೆ ಕಟ್ಟಿದ ಗೋಣಿಚೀಲ ಸರಿಸಿ ಎಷ್ಟು ಬೆಳೆದಿದೆ ಎಂದು ಆಗಾಗ ನೋಡಬೇಕಿತ್ತು. ಕ್ರಮೇಣ ಮಂಗಗ  ಹುಷಾರಾಗಿ ಚೀಲ ಬಿಚ್ಚಲುಕಲಿತಿದ್ದವು. ಹೀಗೆ ಕಟ್ಟಿದ ಕೊನೆಯನ್ನು ನೋಡುವುದೇನಾದರೂ ತಡವಾದರೆ, ಬಿಟ್ಟು ಹೋದರೆ ಬಾಳೆ ಕಾಯಿ ಚೀಲ ದೊಳಕ್ಕೇ ಬೆಳೆದು ಹಣ್ಣಾಗಿ ಊದಿರುರುತ್ತಿದ್ದವು. ವ್ಯಾಪಾರಿಗಳು ಮರದಲ್ಲಿಯೇ ಹಣ್ಣಾದ ಕೊನೆ ಖರೀದಿಸುತ್ತಿರಲಿಲ್ಲ.

ಅವು ಅಷ್ಟು ಹಣ್ಣಾದರೆ ಕೊನೆಯಿಂದ ಉದುರುದುರಿ ಬೀಳುತ್ತಿದ್ದವು. ಹಾಗಾಗಿ ಆ ಹಣ್ಣಿನ ಕೊನೆ ಮನೆಯವರಿಗೆ. ಅವು ಬೆಳೆದ ಕಾಯಿಯನ್ನು ಕೊಯ್ದು ಹಣ್ಣು ಮಾಡಿದಷ್ಟು ರುಚಿ  ಯಾಗಿರುತ್ತಿರಲಿಲ್ಲ. ಏಲಕ್ಕಿ ಬಾಳೆಹಣ್ಣಿನದು ಅದೇ ಸಮಸ್ಯೆ. ಹಣ್ಣಾಗಲು ಶುರುವಾದರೆ ಇಡೀ ಕೊನೆಗೆ ಕೊನೆಯೇ ಒಮ್ಮೆಲೇ ಹಣ್ಣಾಗಿಬಿಡುತ್ತಿತ್ತು. ಹಾಗಾಗಿ ಅಂಗಡಿಯವನಿಗೆ ಅರ್ಧಕ್ಕರ್ಧ ಕೊನೆ ಮಾರಾಟ ಆಗುವುದರೊಳಗೆ ಉದುರಿಹೋಗುತ್ತಿತ್ತು. ಅಂಗಡಿಯಲ್ಲಿ ಹೀಗೆ ಬಿಡಿ ಬಾಳೆಹಣ್ಣು ಕೊಟ್ಟರೆ ಜನ ಖರೀದಿಸುತ್ತಿರಲಿಲ್ಲ. ಅವರಿಗೆ ನೇತು ಹಾಕಿದ ಬಾಳೆಕೊನೆಯಿಂದಲೇ ಕಿತ್ತು ತಾಜಾ ಕೊಡಬೇಕು.

ಇದರಿಂದ ಅಂಗಡಿಯವರಿಗೆ ಒಂದಿಷ್ಟು ಲಾಸ್ ಆಗುತ್ತಿತ್ತು. ಹಾಗಾಗಿ ಏಲಕ್ಕಿ ಬಾಳೆಹಣ್ಣಿನ ರೇಟು ಕೂಡ ದುಪ್ಪಟ್ಟಾಗಿ ಮಾರಲ್ಪಡುತ್ತಿತ್ತು. ಇದೆಲ್ಲ ಬಿಟ್ಟರೆ ಇನ್ನೊಂದು ಕಲ್ಲು ಬಾಳೆ. ಅದು ಬಾಳೆಗಿಡವೇ ಆಗಿದ್ದರೂ ಅದರ ಹಣ್ಣು ತಿನ್ನಲಿಕ್ಕಾಗುವು ದಿಲ್ಲ. ಬರೀ ಚೊಗರು, ಸಿಹಿಯಿಲ್ಲದ, ಬೀಜವಿರುವ ಬಾಳೆ ಅದು. ನಮ್ಮ ತೋಟದಲ್ಲಿ ಅದನ್ನೂ ಬೆಳೆಯಲಿಕ್ಕೆ ಬಿಡುತ್ತಿದ್ದರು. ಅದರ ಬಾಳೆಲೆ ಊಟಕ್ಕೆ ಆಗಿಬರುವುದು ಬಿಟ್ಟರೆ ಅನ್ಯ ಉಪಯೋಗ ಅಷ್ಟಕ್ಕಷ್ಟೆ. ಇವು ಬಿಟ್ಟರೆ ಪುಟ್ಟ ಬಾಳೆ, ಗಿಡ್ಡ ಬಾಳೆ ಇತ್ಯಾದಿ ಇತ್ತೀಚಿಗೆ ಬಂದವು.

ಬಾಳೆಹಣ್ಣು ಖರೀದಿಸುವಾಗ ಸೀಡ್ ಲೆಸ್ ಕೊಡಿ ಎಂದು ಹೇಳಬೇಕಾಗಿಲ್ಲ ಅಲ್ಲವೇ? ಬಾಳೆಹಣ್ಣು ಸ್ವಾಭಾವಿಕವಾಗಿ ಸೀಡ್ ಲೆಸ್. ಆದರೆ ಪ್ರತಿಯೊಂದು ಬಾಳೆಹಣ್ಣಿನಲ್ಲೂ ಒಂದು ಚಿಕ್ಕ ಸಾಸಿವೆಗಿಂತ ಸಣ್ಣ, ಕಪ್ಪು ಚುಕ್ಕೆಯಂತಹ ಬೀಜವಿರುತ್ತದೆಯಲ್ಲ? ಅದು ನಿಜವಾಗಿ ಬೀಜವಲ್ಲ. ಅದು ಬೀಜವಿದ್ದ ಕುರುಹು. ಬಾಳೆಹಣ್ಣಿನಿಂದ ಬೀಜವನ್ನು ತೆಗೆದದ್ದು ಯಾವ ವಿಜ್ಞಾನಿಗಳೂ ಅಲ್ಲ. ಅದು ಸ್ವಾಭಾವಿಕವಾಗಿ ಯಾವತ್ತೋ ಆದ ಅಪರೂಪದ ಬದಲಾವಣೆ. ಇದು ಜೀವ ಜಗತ್ತಿನ ಒಂದು ಆಶ್ಚರ್ಯವೇ ಸರಿ. ಬಾಳೆಗಿಡ ಅದು ಯಾವ ಕಾರಣಕ್ಕೆ, ಸಮಯದಲ್ಲಿ, ವಿಕಸನದ ಯಾವ ತಿರುವಿಗೆ ಸಿಕ್ಕಿ ಬೀಜ ಬಿಟ್ಟು ಬರೀ ಹಣ್ಣನ್ನು ತಯಾರಿ ಸಲು ಶುರುಮಾಡಿದವೋ? ಅಸಲಿಗೆ ಗಿಡ ಯಾವುದೇ ಹಣ್ಣಿಗೆ ಸಿಹಿ ತುಂಬುವುದೇ ಬೀಜ ಪ್ರಸರಣಕ್ಕೆ.

ಆದರೆ ಬಾಳೆಗಿಡ ಅಂತಹ ಉದ್ದೇಶ ಯಾವತ್ತೋ ಬಿಟ್ಟಂತಿದೆ. ಬದಲಿಗೆ ಒಂದರ ಬೇರಿಗೆ ಇನ್ನೊಂದು ಮರಿ ಹುಟ್ಟುವುದರಿಂದ ಅಸಲಿಗೆ ಒಂದು ಪ್ರದೇಶದಲ್ಲಿ ಬೆಳೆಯುವ ಅಥವಾ ಜಾತಿಯ ಬಾಳೆಹಣ್ಣು ಹೆಚ್ಚು ಕಡಿಮೆ ಒಂದೇ ಬಯೋಲಾಜಿಕಲ್ ಪೂರ್ವಜ ರನ್ನು ಹೊಂದಿದೆ ಎನ್ನುವುದು ಇಲ್ಲಿ ಗ್ರಹಿಸಬೇಕಾದದ್ದು. ಇದರಿಂದ ಒಂದು ಸಮಸ್ಯೆಯೂ ಇದೆ. ಅದರ ಬಗ್ಗೆ ಆಮೇಲೆ ಹೇಳುತ್ತೇನೆ. ಬಾಳೆ ಅಸಲಿಗೆ ಪೂರ್ವ ಏಷ್ಯಾ ದೇಶಗಳಾದ ಭಾರತ, ಮಲೇಷಿಯಾ ಮೊದಲಾದ ಸಮಭಾಜಕ ವೃತ್ತದ ಮೇಲ್ಗಡೆಯಿರುವ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆಯಲ್ಪಡುವ ಗಿಡ. ಆಫ್ರಿಕಾದ ಕಾಡುಗಳಲ್ಲಿಯೂ ಬಾಳೆಹಣ್ಣು ಇದ್ದ ಇತಿ
ಹಾಸವಿದೆ.

ಮೊದಲು ಬಾಳೆಹಣ್ಣು ಬೆಳೆಸಿ ತಿಂದವರು ಯಾರು ಎಂದು ಕೇಳಿದರೆ ಅದು ನಾವೇ. ನಮ್ಮಲ್ಲಿ ಮನುಷ್ಯ ಮನುಷ್ಯ ನಾಗುವು ದಕ್ಕಿಂತ ಮೊದಲಿನಿಂದಲೇ ಬಾಳೆಹಣ್ಣು ತಿನ್ನುತ್ತಿದ್ದ ಎಂದೆನಿಸುತ್ತದೆ. ಮಂಗನಿಗೂ ಬಾಳೆಹಣ್ಣು, ಕಾಯಿಯೇ ಇಷ್ಟವಲ್ಲ! ಇದು ಮನುಷ್ಯ ತಾನು ತಿನ್ನಲಿಕ್ಕೆಂದೇ ಬೆಳೆಸಿದ ಮೊದಲ ಹಣ್ಣಿನ ಗಿಡ. ಹಾಗಾಗಿ ಬಾಳೆಹಣ್ಣಿನ ಇತಿಹಾಸ ಹದಿನೈದು ಸಾವಿರ ವರ್ಷಕ್ಕಿಂತ ಆಚೆ ಹೋಗಿಬಿಡುತ್ತದೆ. ಹೀಗೆ ಅದೆಷ್ಟೋ ಸಹಸ್ರ ವರ್ಷದ ಬಾಳೆಹಣ್ಣಿಗೆ ಇತಿಹಾಸವೇನೋ ಇದ್ದರೂ ಈ
ಬಾಳೆಹಣ್ಣು ಪಶ್ಚಿಮದ ದೇಶಕ್ಕೆ, ಅಮೆರಿಕಾಕ್ಕೆ ತಲುಪಿದ್ದು ತೀರಾ ಇತ್ತೀಚಿಗೆ. ಕೆಲವೇ ನೂರು ವರ್ಷಗಳ ಹಿಂದೆ.

ಬಾಳೆಹಣ್ಣನ್ನು ಪಶ್ಚಿಮಕ್ಕೆ, ಯುರೋಪಿಗೆ ಮೊದಲು ಇಲ್ಲಿಂದ ಒಯ್ದದ್ದು ಅಫ್ ಕೋರ್ಸ್ ಪೋರ್ಚುಗೀಸರು ಮತ್ತು ಸ್ಪಾ
ನಿಷರು. ಬಾಳೆಹಣ್ಣು ಅಮೆರಿಕಾ ತಲುಪಿದ್ದು 1876 ರಲ್ಲಿ. ಅದು ಅಮೆರಿಕಾಕ್ಕೆ ಸ್ವಾತಂತ್ರ್ಯ ಸಿಕ್ಕಿ ನೂರು ವರ್ಷದ ಕಾರ್ಯಕ್ರಮ. ಜಗತ್ತಿನ ಎಲ್ಲ ವಿಸ್ಮಯಕಾರೀ ವಸ್ತುಗಳನ್ನು ಫಿಲಡೆಲ್ಫಿಯಾದಲ್ಲಿ ಹಾಕಿದ್ದ ಬ್ರಹತ್ ಸಮಾವೇಶವೊಂದರಲ್ಲಿ ಪ್ರದರ್ಶಿಸಲಾಗು ತ್ತಿತ್ತು. ಅಲ್ಲಿ ಎಲ್ಲಿಲ್ಲದಷ್ಟು ಗಮನ ಸೆಳೆದದ್ದು ನಮ್ಮ ಹೀರೋ ಬಾಳೆಹಣ್ಣು. ಅಲ್ಲಿ ಬಂದವರಿಗೆ ರುಚಿಗೆ ಒಂದೊಂದು ಕೊಡುವ ವ್ಯವಸ್ಥೆಯಾಗಿತ್ತು.

ಅಮೆರಿಕನ್ನರಿಗೋ, ಬಾಳೆಹಣ್ಣು ಎಂದರೆ ಅಲ್ಲಿಯವರೆಗೆ ಹೀಗೊಂದು ಹಣ್ಣಿದೆ ಎನ್ನುವ ಅಂದಾಜೂ ಇರಲಿಲ್ಲ. ಜನರು ಸಾಲಿನಲ್ಲಿ ಬಂದು ಹಣ್ಣನ್ನು ಪಡೆಯುತ್ತಿದ್ದರು. ಒಬ್ಬೊಬ್ಬರಿಗೆ ಒಂದೊಂದೇ ಹಣ್ಣು. ಒಮ್ಮೆ ತಿಂದವರು ಇನ್ನೊಮ್ಮೆ ಬರಬಾರದೆಂದು ಅವರ ಕೈಗೆ ವೋಟ್ ಮಾಡಿದ ಮೇಲೆ ಹಚ್ಚುವಂತಹ ಶಾಯಿಯನ್ನು ಬಳಿಯಲಾಗುತ್ತಿತ್ತು. ಅದನ್ನು ಅಳಿಸಿ ಜನರು ಮತ್ತೆ ಸರತಿಯಲ್ಲಿ ನಿಲ್ಲುತ್ತಿದ್ದರು.

ಬಾಳೆಹಣ್ಣನ್ನು ಪಕ್ಕದಲ್ಲಿ ಬಂದು ಕೈ ಹಾಕೆ ಎತ್ತಬಹುದು ಎಂದು ಅದಕ್ಕೆ ಎಲ್ಲಿಲ್ಲದ ಪೊಲೀಸ್ ಭದ್ರತೆ ಬೇರೆ. ಆ ಕಾರ್ಯಕ್ರಮಕ್ಕೆ ಬರೋಬ್ಬರಿ ಒಂದು ಕೋಟಿ ಜನ ಬಂದಿದ್ದರು ಮತ್ತು ಸುಮಾರು ಎಂಬತ್ತು ಲಕ್ಷ ಬಾಳೆಹಣ್ಣನ್ನು ಸ್ಯಾಂಪಲ್ ಆಗಿ ಕೊಡಲಾಗಿತ್ತು. ಆ ಎಕ್ಸಿಬಿಶನ್‌ನಲ್ಲಿ ಉಗಿ ಬಂಡಿ, ಟೆಲೆ-ನ್, ಟೊಮೇಟೊ ಕೆಚಪ್, ಮೊದಲಾದ ಆವಿಷ್ಕಾರಗಳ ನಡುವೆ ಬಾಳೆಹಣ್ಣಿಗೂ ಒಂದು ಜಾಗ ಸಿಕ್ಕಿತ್ತು. ಅಲ್ಲಿರುವ ಯಾರೂ ಬಾಳೆಹಣ್ಣನ್ನು ತಮ್ಮ ಜೀವಮಾನದಲ್ಲಿ ಹಿಂದೆಂದೂ ನೋಡಿರಲಿಲ್ಲ, ತಿಂದಿರಲಿಲ್ಲ. ಅಲ್ಲಿಂದ ಬಾಳೆಹಣ್ಣಿನ ಹುಚ್ಚು ಅಮೆರಿಕನ್ನರಿಗೆ ಹತ್ತಿದ್ದು.

ಅಲ್ಲಿ ಜನರಿಗೆ ಅಷ್ಟು ಇಷ್ಟವಾದ ಬಾಳೆಹಣ್ಣನ್ನು ಹೇಗಾದರೂ ಮಾಡಿ ಅಮೆರಿಕಾಕ್ಕೆ ತರಿಸುವ ವ್ಯವಸ್ಥೆಯಾಗಬೇಕೆಂದು
ಇಲ್ಲಿನ ಕೆಲವು ವ್ಯಾಪಾರಿಗಳು ಸಿದ್ಧವಾಗಿ ನಿಂತರು. ಭಾರತ ಮಲೇಷಿಯಾ ಮೊದಲಾದಲ್ಲಿಂದ ಬಾಳೆಗಿಡಗಳನ್ನು ತಂದು
ಅಲ್ಲಿನಂತೆ ವಾತಾವರಣವಿರುವ ದಕ್ಷಿಣ ಅಮೆರಿಕಾದಲ್ಲಿ ಬೆಳೆಸುವುದಕ್ಕೆ ವ್ಯವಸ್ಥೆಯಾಯಿತು. ಅಲ್ಲಿ ಅದಾಗಲೇ ಕಬ್ಬಿಣ
ಪ್ಲಾಂಟೇಷನ್‌ಗಳು ಮತ್ತು ಪುಕ್ಸಟ್ಟೆ ದುಡಿಯಲು ಭಾರತದಿಂದ ಹೊತ್ತು ತಂದ ಕೂಲಿ ಜೀತದವರಿದ್ದರು. ಅವರಿಗೆ ಬಾಳೆಹಣ್ಣು
ಗೊತ್ತಿತ್ತು. ಹೀಗೆ ಮೊದಲು ಬಾಳೆಹಣ್ಣನ್ನು ಫಾರಿನ್ನಿಗೆ ಕರೆದುಕೊಂಡು ಹೋಗುವಾಗ ಈ ಯುರೋಪಿಯನ್ನರ ಎದುರು ಮೂರು ಆಯ್ಕೆಗಳಿದ್ದವು. ಮೊದಲನೆಯದು ಏಲಕ್ಕಿ ಬಾಳೆಹಣ್ಣು, ಬಲು ರುಚಿ.

ಎರಡನೆಯದು ಮದ್ರಾಸ್ ಬಾಳೆಹಣ್ಣು, ಸ್ವಲ್ಪ ಹುಳಿ, ಮೂರನೆಯದು ಕರಿಬಾಳೆ. ಅವರಿಗೆ ದಕ್ಷಿಣ ಅಮೆರಿಕಾದಲ್ಲಿ ಬೆಳೆದು ಅದನ್ನು ಹಡಗಿನಲ್ಲಿ ಉತ್ತರ ಅಮೆರಿಕಾಕ್ಕೆ ಮಾರಾಟಕ್ಕೆ ಒಯ್ಯಬೇಕು. ಹೀಗೆ ಕೊಯ್ದ ಬಾಳೆಕಾಯಿ ಹಣ್ಣಾಗುವುದರೊಳಗೆ ಅದು ಗ್ರಾಹಕರ ಮನೆ ತಲುಪಿರಬೇಕು. ಏಲಕ್ಕಿ ಮತ್ತು ಮದ್ರಾಸ್ ನದು ಅಲ್ಪಾಯುಷ್ಯ. ಹಾಗಾಗಿ ಕರಿಬಾಳೆಯನ್ನು ಒಯ್ಯುವು ದೆಂದಾಯಿತು. ಕರಿಬಾಳೆ ಇವತ್ತಿಗೂ ಕರಾವಳಿಯ ಕೆಲವೆಡೆ ಅವಶೇಷವಾಗಿ ಇದೆ. ನೀವು ಈ ಭಾಗದವರಾಗಿರ ದಿದ್ದರೆ ನಿಮಗೆ ಈ ಕರಿ ಬಾಳೆ ಹೆಚ್ಚು ಕಡಿಮೆ ಕೆವೆಂಡಿಷ್ ಬಾಳೆಯಂತೆಯೇ ಕಾಣಿಸುತ್ತದೆ. ಆದರೆ ರುಚಿಯಲ್ಲಿ ಅಜಗಜಾಂತರ.
ಮೊದಲೆಲ್ಲ ಭಾರತದಿಂದ ಅಮೆರಿಕಾಕ್ಕೆ ಬಂದವರು ತಮ್ಮ ಹೆಸರನ್ನು ಬದಲಿಸುವ ಒಂದು ರೂಢಿಯಿತ್ತು.

ಸಂದೀಪ್ ಇಲ್ಲಿಗೆ ಬಂದ ನಂತರ ಸ್ಯಾಂಡಿಯಾಗುತ್ತಿದ್ದ, ಸಂತೋಷ್ ಸ್ಯಾಮ್ ಆಗುತ್ತಿದ್ದ, ಧನರಾಜ್ ಡ್ಯಾನಿ. ಹಾಗೆಯೇ ನಮ್ಮ
ದಕ್ಷಿಣ ಭಾರತದ ಕರಿಬಾಳೆ ಪಾಶ್ಚಾತ್ಯವಾದ ಮೇಲೆ ಹೆಸರು ಬದಲಿಸಿಕೊಂಡಿತು. ಕರಿಬಾಳೆ ಗ್ರೋಸ್ ಮಿಶೆಲ್ / ಬಿಗ್
ಮೈಕ್ ಆಯಿತು. ಬಿಗ್ ಮೈಕ್ ಬಾಳೆಹಣ್ಣಿನ ಕ್ರೆಡಿಟ್ ಅನ್ನು ಭಾರತಕ್ಕೆ ಕೊಡದೇ ಇದು ಕೆರಬ್ಬಿಯನ್ ದ್ವೀಪದ್ದು ಎನ್ನುವವರಿ
ದ್ದಾರೆ. ಆದರೆ ಅಸಲಿಗೆ ಬಿಗ್ ಮೈಕ್ ಬಾಳೆಹಣ್ಣು ನಮ್ಮದೇ ನೆಲದ್ದು, ಪಾಪದ ಬಡಪಾಯಿ ಕರಿಬಾಳೆ.

ಬಿಗ್ ಮೈಕ್ ಅಮೆರಿಕಾಕ್ಕೆ ಹೇಳಿ ಮಾಡಿಸಿದ ಬಾಳೆಹಣ್ಣಾಗಿತ್ತು. ಇದು ಬೆಳೆದ ನಂತರ ಹಣ್ಣಾಗಲು ಸಾಕಷ್ಟು ಸಮಯ ಬೇಕಾಗುತ್ತದೆ ಯಲ್ಲ. ಅದಲ್ಲದೆ ಸ್ವಲ್ಪ ಶೀತದಲ್ಲಿ ಇಟ್ಟರೆ ಈ ಹಣ್ಣಾಗುವ ವೇಗ ಕಡಿಮೆಯಾಗುತ್ತಿತ್ತು. ಉಳಿದ ಬಾಳೆಹಣ್ಣುಗಳು ಶೀತಕ್ಕೆ ಹಾಳಾಗುತ್ತಿದ್ದರೆ ಬಿಗ್ ಮೈಕ್ ಮಾತ್ರ ಹಾಗೆಯೇ ಇರುತ್ತಿತ್ತು. ಅಲ್ಲದೆ ಇದರ ಸಿಪ್ಪೆ ಸ್ವಲ್ಪ ದಪ್ಪ. ಹಾಗಾಗಿ ಸಾಗಿಸು ವಾಗ ಹಣ್ಣು ಪೆಟ್ಟಾಗಿ ಕೊಳೆಯುವ ಸಂಭವ ಕೂಡ ಕಡಿಮೆ. ಈ ಎಲ್ಲ ಕಾರಣದಿಂದ ಅಮೆರಿಕಾಕ್ಕೆ ಕರಿಬಾಳೆ ಮೊದಲು ಕಾಲಿಟ್ಟದ್ದು, ಹವಾ ಎಬ್ಬಿಸಿದ್ದು ಇತ್ಯಾದಿ. ಬಾಳೆ ಗಿಡ ಬೀಜ ಉತ್ಪಾದಿಸದ, ಬೇರು ಟಿಸಿಲೊಡೆದು ಮರಿಯಾಗುವ ಗಿಡವೆಂದೆ ನಲ್ಲ, ಆ ಕಾರಣಕ್ಕೆ ಅವೆಲ್ಲ ಒಂದೇ ಗೋತ್ರ. ಇದರಿಂದ ಒಂದು ಸಮಸ್ಯೆಯಿದೆ. ಹೀಗೆ ಒಂದೇ ಮೂಲಕ್ಕೆ ಹುಟ್ಟುವ ಗಿಡಗಳು ಜೆನೆಟಿಕಲ್ ಆಗಿ ಒಂದೇ ಆಗಿರುತ್ತವೆ. ಊರಿನಲ್ಲಿರುವ ಎಲ್ಲ ಒಂದೇ ಜಾತಿಯ ಬಾಳೆ ಗಿಡಗಳೂ ಹೆಚ್ಚು ಕಡಿಮೆ ಒಂದೇ ಜೆನೆಟಿಕ್ಸ್ ಹೊಂದಿರುತ್ತವೆ.

ಈ ಕಾರಣಕ್ಕೆ ಅವುಗಳ ರೋಗ ನಿರೋಧಕ ಶಕ್ತಿಯೂ ಒಂದೇ ಪ್ರಮಾಣದ್ದಾಗಿರುತ್ತದೆ. ಈ ಕಾರಣಕ್ಕೆ ಬಾಳೆಗೆ ಯಾವುದೋ
ಒಂದು ರೋಗ ಬಂತೆನ್ನಿ, ಅದು ಊರಿಂದ ಊರಿಗೆ ಹಬ್ಬುವುದಲ್ಲದೇ ಬಾಧಿಸುವ ರೀತಿಯೂ ಒಂದೇ ಆಗಿರುತ್ತದೆ. ಅದನ್ನು
ಹತೋಟಿಗೆ ತರುವುದು ಕಷ್ಟ. ಬಾಳೆ ಬೆಳೆಗಾರರಿಗೆಲ್ಲ ನಿದ್ದೆಗೆಡಿಸುವ ರೋಗವೊಂದಿದೆ. ಅದನ್ನು ಕಟ್ಟೆ ರೋಗ ಎಂದು
ನಮ್ಮ ಕಡೆ ಕರೆದರೆ ಇಂಗ್ಲಿಷರು ಕರೆದದ್ದು ಪನಾಮಾ ಡಿಸೀಸ್. ಇದು ಹೇರಳವಾಗಿ ಪನಾಮಾ ಮೊದಲಾದಲ್ಲಿನ ಈ
ಕರಿಬಾಳೆಯ ಪ್ಲಾಂಟೇಷನ್ನಿಗೆ ಬಾಽಸಿತ್ತು. ಇದೆಲ್ಲ ಆದದ್ದು ಎರಡನೇ ಮಹಾಯುದ್ಧದ ನಂತರದ ವರ್ಷಗಳಲ್ಲಿ.

ಅಮೆರಿಕಾಗೆ ಮೊದಲು ಬಾಳೆಹಣ್ಣು ಬಂದು ಜನಸಾಮಾನ್ಯರಿಗೆ ಸಿಕ್ಕುವಂತಾದಾಗ ಇಲ್ಲಿನ ಹಣ್ಣಿನ ಅಂಗಡಿಗಳಿಗೆ ಜನರು
ಗುಂಪಾಗಿ ನುಗ್ಗಿ ಖರೀದಿಸುತ್ತಿದ್ದರು. ಅಂಗಡಿಯವನಿಗೆ ಪರಿಚಯವಿದ್ದ ಖಾಯಂ ಗಿರಾಕಿಗಳಿಗೆ ಅಂಗಡಿಯಾತ ಬಾಳೆಹಣ್ಣನ್ನು ಗೋಡಾನ್‌ನಲ್ಲಿ ಅಡಗಿಸಿಡುತ್ತಿದ್ದ. ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರು ಅತಿಯಾಗಿ ಕದಿಯುತ್ತಿದ್ದ ಹಣ್ಣು ಕೂಡ ಬಾಳೆಹಣ್ಣೇ ಆಗಿತ್ತು. ನೋಡನೋಡುತ್ತ ಇದೊಂದು ಅತ್ಯಂತ ಜನಪ್ರಿಯ ಹಣ್ಣಾಯಿತು. ಅಮೆರಿಕನ್ನರು ಯಥೇಚ್ಛ ತಿನ್ನಲಿಕ್ಕೆ ಶುರುಮಾಡಿದ್ದಲ್ಲದೇ ಬಾಳೆಹಣ್ಣಿನ ಸಿಪ್ಪೆಯನ್ನು ಕಂಡಕಂಡಲ್ಲಿ ಎಸೆಯಲು ಶುರು ಮಾಡಿದರು.

ಇದರ ಪರಿಣಾಮ ಅಮೆರಿಕಾದ ನಗರಗಳ ನಡೆದಾಡುವಲ್ಲೆಲ್ಲ ಬಾಳೆಹಣ್ಣು ಸಿಪ್ಪೆಗಳು. ಇದರ ಮೇಲೆ ಕಾಲಿಟ್ಟು ನ್ಯೂಯಾರ್ಕ್
ನ ಶ್ರೀಮಂತನೊಬ್ಬ ಸೊಂಟ ಮುರಿದುಕೊಂಡು ಮತ್ತೆಂದೂ ರಿಪೇರಿಯಾಗದ ಸ್ಥಿತಿಗೆ ತಲುಪಿದ ಸುದ್ದಿ ಪತ್ರಿಕೆಯಲ್ಲಿ ಹೆಡ್
ಲೈನ್ ಸುದ್ದಿಯಾಯಿತು. ನ್ಯೂಯಾರ್ಕ್, ಚಿಕಾಗೊ ಈ ನಗರಗಳಲ್ಲಿ ಬಾಳೆಹಣ್ಣು ಸಿಪ್ಪೆ ರಸ್ತೆಯಲ್ಲಿ ಎಸೆಯುವುದು ಅಪರಾಧ, ಜೈಲು ಎನ್ನುವ ಕಾನೂನು ಜಾರಿಗೆ ಬಂದವು. ಆಗ ಬಾಳೆಹಣ್ಣನ್ನು ಪಬ್ಲಿಕ್‌ನಲ್ಲಿ ತಿನ್ನಲು ಹೆಂಗಸರಿಗೆ ಮುಜುಗರವಾಗುತ್ತಿತ್ತು. ಅದೊಂದು ಸೆಕ್ಷುವಲ್ ಸಜ್ಜೆಷನ್.

ಇದನ್ನು ಹೋಗಲಾಡಿಸಲು ಈ ಬಾಳೆಹಣ್ಣು ಆಮದು ಮಾಡುವ ಕಂಪನಿಗಳು ಹೆಂಗಸರು ಬಾಳೆಹಣ್ಣು ತಿನ್ನುತ್ತಿರುವುದರ ಫೋಟೋ ಪತ್ರಿಕೆ ಯಲ್ಲಿ ಜಾಹೀರಾತು ಕೊಡಬೇಕಾಯ್ತು. ಬಾಳೆಹಣ್ಣು ಸಿಪ್ಪೆ ಮೆಟ್ಟಿ ಬೀಳುವುದು ಚಾರ್ಲಿ ಚಾಪ್ಲಿನ್‌ನಿಂದ ಹಿಡಿದು ಬಹಳಷ್ಟು ಅಮೆರಿಕನ್ ಟಿವಿ ಧಾರಾವಾಹಿಗಳಲ್ಲಿ ಆ ಕಾಲದಲ್ಲಿದ್ದದ್ದು ಅಂದಿನ ಸ್ಥಿತಿಗೆ ಹಿಡಿದ ಕನ್ನಡಿಯೆನ್ನಲಾಗುತ್ತದೆ.
ಇಂತಹ ಬಹುಜನಪ್ರಿಯ ಬಾಳೆಹಣ್ಣಿಗೆ ಯಾವಾಗ ಪನಾಮಾದಲ್ಲಿ ಈ ಫಂಗಲ್ ರೋಗ (ಕಟ್ಟೆ ರೋಗ) 1950 ರ
ಆಸುಪಾಸಿ ನಲ್ಲಿ ಬಂತು ನೋಡಿ, ಈ ಕರಿಬಾಳೆಹಣ್ಣಿನ ಹಣೆಬರಹವೇ ಬದಲಾಗಿ ಹೋಯ್ತು.

ಪನಾಮಾ, ಸೂರಿನಾಮ್, ಮೆಕ್ಸಿಕೋ ಮತ್ತು ಮಧ್ಯ ಅಮೆರಿಕಾದಲ್ಲಿ ಪ್ಲಾಂಟೇಷನ್ನಿಗೆ ಪ್ಲಾಂಟೇಶನ್ನೇ ಸರ್ವನಾಶವಾಗಿ ಹೋಯಿತು. ಈ ಕಟ್ಟೆ ರೋಗ ಒಂದು ಜಾತಿಯ ಶಿಲೀಂಧ್ರದಿಂದ ಬರುವಂಥದ್ದು. ಅದು ಬಾಧಿಸಿತೆಂದರೆ ಬಾಳೆ ಗಿಡದ ಕಾಂಡ ಕೊಳೆಯಲು ಶುರುವಾಗುತ್ತದೆ. ಅದಲ್ಲದೆ ಅದರ ಎಲೆಗಳು ಹರಿದು ಚೂರಾಗುತ್ತವೆ, ಕಾಯಿ ಬಿಡುವುದಿಲ್ಲ ಇತ್ಯಾದಿ. ಕ್ರಮೇಣ
ಈ ಶಿಲೀಂಧ್ರ ಇಡೀ ಬಾಳೆಯ ಹಿಂಡನ್ನೇ ಸಾಯಿಸುತ್ತದೆ. ಅಷ್ಟೇ ಅಲ್ಲ, ಇದು ಗಾಳಿ, ನೀರು ಮತ್ತು ಮಣ್ಣಿನಿಂದ ಉಳಿದ ಗಿಡಕ್ಕೂ ಹರಡುತ್ತದೆ. ಹೀಗೊಂದು ಶಿಲೀಂಧ್ರದಿಂದ ಕರಿಬಾಳೆ ಇಂದು ಪಶ್ಚಿಮದ ದೇಶದಲ್ಲಿ ಹೆಚ್ಚುಕಡಿಮೆ ಸರ್ವನಾಶವೇ ಆಗಿಹೋಗಿದೆ.

ಹೀಗೆ ಕರಿಬಾಳೆ ನಾಮಾವಶೇಷವಾಗುತ್ತಿದ್ದಂತೆ ಅಮೆರಿಕನ್ ವರ್ತಕರಿಗೆ ಹೊಸ ತಳಿಯ ಹುಡುಕಾಟ. ಆಗ ಸಿಕ್ಕಿದ್ದೇ ಕೆವೆಂಡಿಷ್ ಬಾಳೆಹಣ್ಣು. ಇದೂ ಪೂರ್ವದಿಂದ ಬಂದದ್ದೇ. ಅದನ್ನು ಬ್ರಿಟಿಷ್ ಡ್ಯೂಕ್ ವಿಲಿಯಮ್ ಕೆವೆಂಡಿಷ್ ತನ್ನ ತೋಟದಲ್ಲಿ
ಬೆಳೆಸಿ ಅವನ ಹೆಸರು ಇಟ್ಟುಕೊಂಡದ್ದು. ಇಂದು ಅಮೆರಿಕಾ ಬಿಡಿ, ಜಗತ್ತಿನಲ್ಲಿಯೇ ಅತಿಹೆಚ್ಚು ಸೇವಿಸುವ ಬಾಳೆಹಣ್ಣಿನ
ಜಾತಿ ಈ ಕೆವೆಂಡಿಷ್. ಇದಕ್ಕೆ ನಮ್ಮಲ್ಲಿಯೂ ಅದೇ ಇಂಗ್ಲಿಷ್ ಹೆಸರು. ಕೆವೆಂಡಿಷ್ ಕರಿ ಬಾಳೆಯಷ್ಟು ರುಚಿಯಲ್ಲದಿದ್ದರೂ
ಪರ್ಯಾಯವಾಗಬೇಕಾಯಿತು. ಈ ಹೊಸ ರುಚಿಯ ಬಾಳೆಹಣ್ಣನ್ನು ಮಾರುಕಟ್ಟೆಗೆ ತರಲು ಮೊದಲು ಹಿಂಜರಿಕೆಯಿತ್ತು.
ಅದಕ್ಕಾಗಿ ನಾನಾ ಮಾರ್ಕೆಟಿಂಗ್ ಕಸರತ್ತುಗಳಾದವು.

ಈಗಂತೂ ಈ ಕರಿಬಾಳೆ ಅಮೆರಿಕಾದಲ್ಲಿ ಎಲ್ಲೋ ಒಮ್ಮೊಮ್ಮೆ ಸಿಕ್ಕರೆ ಪುಣ್ಯ. ಹೆಚ್ಚು ಕಡಿಮೆ ಭಾರತದಲ್ಲಿಯೂ ಈ ಎಲ್ಲ
ಬಾಳೆಗಳ ಪ್ರಭೇದ ಕ್ರಮೇಣ ಕಡಿಮೆಯಾಗುತ್ತಿವೆ. ಇಂದಿಗೂ ದಕ್ಷಿಣ ಕನ್ನಡದ ಕಡೆ ಹೋದರೆ ಅಲ್ಲಿನ ಪೂಜೆ, ದೇವಸ್ಥಾನದ
ಅಂಗಡಿಗಳಲ್ಲಿ ವೆರೈಟಿ ಬಾಳೆಹಣ್ಣುಗಳು ಕಾಣಿಸುತ್ತವೆ. ಆದರೆ ಅಲ್ಲಿ ಕೂಡ ಈಗ ಕ್ರಮೇಣ ಕೆವೆಂಡಿಷ್ ಬಾಳೆಹಣ್ಣು
ಆಕ್ರಮಿಸುತ್ತಿದೆ.

ಈಗೊಂದಿಷ್ಟು ತಿಂಗಳ ಹಿಂದೆ ಕಚ್ಚಾ ಬಾದಾಮ್ ಎನ್ನುವ ಹಾಡೊಂದು ಸೋಷಿಯಲ್ ಮೀಡಿಯಾದಲ್ಲೆಲ್ಲ ವೈರಲ್
ಆಗಿತ್ತು, ನೆನಪಿದೆಯಾ? ಪಶ್ಚಿಮ ಬಂಗಾಳದಲ್ಲಿ ಯಾವುದೋ ಊರಲ್ಲಿ ಶೇಂಗಾ ಮಾರುತ್ತಿದ್ದವನ ಕಟ್ಟು ಹಾಡು ಅದು. ಇಂಥದ್ದೇ ಒಂದು ಕಥೆ ಶತಮಾನದ ಹಿಂದೆ ಇಂಟರ್ನೆಟ್ ಇಲ್ಲದ ಸಮಯದಲ್ಲೇ ನಡೆದಿತ್ತು. 1949 ರಲ್ಲಿ £h kbñh
qs dbqbqb ಎನ್ನುವ ಹಾಡು ಆಲ್ಬಮ್ ಆಗಿ ಕೆಲವೇ ವಾರದಲ್ಲಿ ಹತ್ತು ಲಕ್ಷ ಡಿಸ್ಕುಗಳು ಮಾರಾಟವಾಗಿದ್ದವಂತೆ.

ಇದು ಅಸಲಿಗೆ ನ್ಯೂಯಾರ್ಕ್‌ನ ಒಂದು ಹಣ್ಣಿನಂಗಡಿಯವ ಬಾಳೆಹಣ್ಣು ಖಾಲಿಯಾದ ಮೇಲೆ ಅದಕ್ಕೆಂದು ಗಿರಾಕಿಗಳು
ಅಂಗಡಿಗೆ ನುಗ್ಗದಿರಲಿ ಎಂದು ಹಾಡುತ್ತಿದ್ದ ಹಾಡು. ಒಂದು ಸಾಧಾರಣ ಹಣ್ಣು ಅಂತಾರಾಷ್ಟ್ರೀಯ ಉದ್ಯಮವಾಗಿದ್ದು,
ಅದು ಇನ್ನಷ್ಟು ಬೆಳೆದು ಮಾಫಿಯಾ ಕೈಯಲ್ಲಿ ಇಂದು ನರಳುತ್ತಿರುವುದು, ಹಣ್ಣಿನ ಸುತ್ತಲಿನ ರಾಜಕಾರಣ, ರಕ್ತಸಿಕ್ತ
ಕಹಾನಿಗಳು ಹೀಗೆ, ಇಂತಹ ಹಲವು ರೋಚಕ, ಆಶ್ಚರ್ಯ ಹುಟ್ಟಿಸುವ ಕಥೆಗಳು ಡ್ಯಾನ್ ಕಪ್ಪೆಲ್ ಬರೆದಿರುವ ಆ Banana
(The Fate of the Fruit that Changed the World)  ಪುಸ್ತಕದಲ್ಲಿದೆ. ಈ ಪುಸ್ತಕ ಬಾಳೆಹಣ್ಣಿನ ಮಹಾ ಕಾದಂಬರಿ. ಅದರಲ್ಲೊಂದು ಹರಿವು ಬಾಳೆಹಣ್ಣು ಫಾರಿನ್ನಿಗೆ ಬಂದ ಯಶೋಗಾಥೆ.