Thursday, 12th December 2024

ಭಾರತ ಎಂಬುದು ಬನಾನಾ ರಿಪಬ್ಲಿಕ್ ಅಲ್ಲ

ನೆರೆಹೊರೆ

ಬೈಂದೂರು ಚಂದ್ರಶೇಖರ ನಾವಡ

ಪ್ರಗತಿಯ ಪಥದಲ್ಲಿ ದಾಪುಗಾಲು ಹಾಕುತ್ತಿದ್ದ ರಾಷ್ಟ್ರವನ್ನು, ಮನದಲ್ಲಿ ಕ್ರಾಂತಿಯ ಭ್ರಾಂತಿ ತುಂಬಿಸಿಕೊಂಡಿದ್ದ ಕೆಲವೇ ಕೆಲವು ವಿದ್ಯಾರ್ಥಿಗಳು ಸೇರಿ ಹಳಿ ತಪ್ಪಿಸಿದರು. ಇದಕ್ಕೆ ವಿದೇಶಿ ಶಕ್ತಿಗಳೂ ಕುಮ್ಮಕ್ಕು ಕೊಟ್ಟವು. ಅವಕಾಶಕ್ಕಾಗಿ ಕಾಯುತ್ತಿದ್ದ ಮತಾಂಧರು ಪರಿಸ್ಥಿತಿಯನ್ನು ಬಳಸಿಕೊಂಡು ಉರಿಯುವ ಬೆಂಕಿಗೆ ತುಪ್ಪ ಸುರಿದರು, ಅಧಿಕಾರ ವಂಚಿತ ಸಮಯಸಾಧಕರು ಅದರಲ್ಲಿ ಮೈಕಾಯಿಸಿಕೊಂಡರು.

ಪರಿಣಾಮವಾಗಿ ಆಗಿದ್ದೇನು? ಎಲ್ಲೆಲ್ಲೂ ಅರಾಜಕತೆ. ರಕ್ಷಿಸಬೇಕಿದ್ದ ಸೇನೆ ಅಸಹಾಯಕವಾಗಿ, ರಾಜೀನಾಮೆ ನೀಡುವಂತೆ ದೇಶದ ಪ್ರಧಾನಿಗೆ ಸೂಚಿಸಿತು. ‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬಂತೆ ವರ್ಷಗಳ ಪರಿಶ್ರಮದಿಂದ ಬೆಳಗುತ್ತಿದ್ದ ದೇಶದ ಆರ್ಥಿಕತೆ ಕಳೆಗುಂದಿತು. ಸಂಘರ್ಷದಲ್ಲಿ ತೊಡಗಿ ದ್ದವರು ಹರಿಸಿದ ಅಮಾಯಕರ ರಕ್ತದೋಕುಳಿಯಿಂದ ಢಾಕಾದ ರಸ್ತೆಗಳು ಕೆಂಪಾದವು. ನೂರಾರು ಜೀವಗಳ ಹತ್ಯೆಯಾಯಿತು, ಕೋಟ್ಯಂತರ
ರುಪಾಯಿ ಮೌಲ್ಯದ ಆಸ್ತಿ-ಪಾಸ್ತಿ ಬೆಂಕಿಗೆ ಆಹುತಿಯಾಯಿತು. ಹೌದು, ಇದೆಲ್ಲಾ ನಡೆದದ್ದು ನಮ್ಮ ನೆರೆರಾಷ್ಟ್ರ ಬಾಂಗ್ಲಾದಲ್ಲಿ.

ಕೆಲವರು ಭ್ರಮಿಸಿರುವಂತೆ ‘ಕ್ರಾಂತಿ’ ಎಂದರೆ ಇದೇನಾ? ಅಷ್ಟಕ್ಕೂ ಈ ‘ಕ್ರಾಂತಿ’ ಸಾಧಿಸಿದ್ದಾದರೂ ಏನು? ದೇಶದ ನಿರುದ್ಯೋಗ, ಬಡತನ ಇದರಿಂದ ನಿವಾರಣೆ ಆಗಲಿವೆಯೇ? ಅಥವಾ ಜನಸಾಮಾನ್ಯರ ಬದುಕು ಹಸನಾಗಲಿದೆಯೇ? ಮತಾಂಧ ಶಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿದ ಅಫ್ಗಾನಿಸ್ತಾನದಂತೆ
ಬಾಂಗ್ಲಾದಲ್ಲೂ ಶೀಘ್ರದಲ್ಲೇ ಧಾರ್ಮಿಕ ಕಾನೂನು ಜಾರಿಯಾದರೆ ಆಶ್ಚರ್ಯವಿಲ್ಲ. ದುರ್ಬಲರ ಸ್ವಾತಂತ್ರ್ಯಹರಣ, ಮಹಿಳೆಯರ ಶೋಷಣೆ, ಅಲ್ಪ ಸಂಖ್ಯಾತರ ಅಪಹರಣ/ಮತಾಂತರ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

ಶಾಂತಿಯುತ ಪ್ರದರ್ಶನ, ಚರ್ಚೆ, ಮಾತುಕತೆಗಳ ಮೂಲಕ ಸಾಧಿಸಲಾಗದ ಕೆಲಸವನ್ನೇನಾದರೂ ಈ ಕ್ರಾಂತಿ ಸಾಧಿಸಿದೆಯಾ? ಖಂಡಿತಾ ಇಲ್ಲ. ಇಂಥ ಸ್ಥಿತಿ ನಮ್ಮಲ್ಲೂ ಬರಬಹುದು ಎಂದು ಕೆಲವು ಹತಾಶ ವ್ಯಕ್ತಿಗಳು ಪ್ರತಿಕ್ರಿಯಿಸಿದ್ದಾರೆ! ಇವರದ್ದು ಹಾರೈಕೆಯೋ, ಆಸೆಯೋ ಅಥವಾ ಗುರಿಯೋ…. ಅವರನ್ನೇ ಕೇಳಬೇಕು. ಇದೇ ಮನಸ್ಥಿತಿಯ ಕೆಲವರು ೨೦೧೨ರ ಜನವರಿ ೧೫-೧೬ರ ರಾತ್ರಿ ಹಿಸ್ಸಾರ್ ಮತ್ತು ಆಗ್ರಾದಿಂದ ಮೆಕನೈಸ್ಡ್ ಹಾಗೂ ಪ್ಯಾರಾ ಟ್ರೂಪರ್ ಬ್ರಿಗೇಡ್‌ಗಳು ದೆಹಲಿಯ ಕಡೆ ಬರುತ್ತಿವೆ ಎಂಬ ಸುಳ್ಳುಸುದ್ದಿ ಹರಡಿ, ಅದು ಸೇನಾಕ್ರಾಂತಿಯ ಉದ್ದೇಶದ ಸೈನ್ಯ ಗತಿವಿಧಿ ಎಂದು ಬಿಂಬಿಸ ಹೊರಟಿದ್ದರು.

ಈಗ ನರೇಂದ್ರ ಮೋದಿಯವರು ಮೂರನೆಯ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವುದನ್ನು ಸಹಿಸಲಾಗದವರು ಇಂಥ ಅಸಹನೆಯ ಹೇಳಿಕೆ ನೀಡುತ್ತಿದ್ದಾರೆ, ಚುನಾಯಿತ ಪ್ರಧಾನಿಯನ್ನು ಗದ್ದುಗೆಯಿಂದ ಇಳಿಸುವ ಕನಸು ಕಾಣುತ್ತಿದ್ದಾರೆ. ಬಾಂಗ್ಲಾದಲ್ಲಿ ಹಸೀನಾ ಸರಕಾರ ಪತನವಾದ ನಂತರ ಉಂಟಾಗಿರುವ ಕ್ಷೋಭೆಯಲ್ಲಿ ಅಮಾಯಕ ನಾಗರಿಕರು ಅಸುನೀಗಿದ ಗಂಭೀರ ಬೆಳವಣಿಗೆಯನ್ನು ನಾವೆಲ್ಲ ಕಂಡಿದ್ದೇವೆ. ಈ ದಾರುಣ ದೃಶ್ಯವನ್ನು ನೋಡಿದ, ದೇಶಹಿತದ ಕುರಿತಾಗಿ ಚಿಂತಿಸುವ ಪ್ರತಿಯೊಬ್ಬ ನಾಗರಿಕನೂ, ‘ಹೇ ದೇವರೇ, ಅಂಥ ಸ್ಥಿತಿ ನಮಗೆ ಬಾರದಿರಲಿ’ ಎಂದು ಪ್ರಾರ್ಥಿಸುತ್ತಿದ್ದಾನೆ. ಆದರೆ ಸ್ವಾರ್ಥ ಚಿಂತನೆಯಲ್ಲೇ ಮುಳುಗಿರುವ ಅಽಕಾರದಾಹಿ ರಾಜಕಾರಣಿಗಳು ಮಾತ್ರ ಜನಭಾವನೆಗೆ ವಿರುದ್ಧವಾಗಿಯೇ ಚಿಂತಿಸು ತ್ತಿದ್ದಾರೆ.

ಆದರೆ ಭಾರತವು ಬಾಂಗ್ಲಾದೇಶವಲ್ಲ. ಭಾರತದಂಥ ವಿಶಾಲ ದೇಶದ ಪ್ರಜಾಪ್ರಭುತ್ವದ ಬೇರುಗಳನ್ನು ಅಷ್ಟು ಸುಲಭವಾಗಿ ಅಲುಗಾಡಿಸಲು ಸಾಧ್ಯವಿಲ್ಲ. ನಮ್ಮ ಸಂವಿಧಾನಾತ್ಮಕ ಸಂಸ್ಥೆಗಳು ನಿರಂತರವಾಗಿ ಪರಸ್ಪರ ಪೂರಕವಾಗಿಯೂ, ರಾಷ್ಟ್ರಹಿತದ ಪ್ರೇರಣೆ-ಬದ್ಧತೆ ಇಟ್ಟುಕೊಂಡು ಜವಾಬ್ದಾರಿಯುತ ವಾಗಿಯೂ ಕಾರ್ಯನಿರ್ವಹಿಸುತ್ತಿವೆ. ನಮ್ಮದು ವಿಶ್ವದ ಸಫಲ ಸಂವಿಧಾನಗಳಲ್ಲೊಂದಾಗಿದ್ದು, ಅದರ ಬುನಾದಿಯು ಭದ್ರವಾಗಿದೆ. ಪಾಕಿಸ್ತಾನ, ಬಾಂಗ್ಲಾಗಳಂತೆ ಸಂವಿಧಾನವನ್ನು ಅಮಾನತಿನಲ್ಲಿಡುವ, ‘ಮಾರ್ಷಲ್ ಕಾನೂನು’ ಜಾರಿಮಾಡುವ, ಸೇನಾದಂಗೆ ನಡೆಸುವ ಪರಿಪಾಠ ಈ ಏಳೂವರೆ ದಶಕಗಳಲ್ಲಿ ಭಾರತದಲ್ಲಿ ಕಂಡುಬಂದಿಲ್ಲ. ನಮ್ಮ ವ್ಯವಸ್ಥೆ ಅಷ್ಟು ಶಕ್ತಿಶಾಲಿಯಾಗಿಯೂ, ಪ್ರಜಾಪ್ರಭುತ್ವವಾದಿಯಾಗಿಯೂ ಇರುವುದೇ ಇದಕ್ಕೆ ಕಾರಣ.

ಭಾರತೀಯ ಸೇನೆಯ ನಿಷ್ಪಕ್ಷಪಾತ ನಿಲುವು, ವೃತ್ತಿಪರತೆ, ನಾಗರಿಕ ನೇತೃತ್ವಕ್ಕೆ ಅದು ತೋರುವ ವಿಧೇಯತೆ ಪ್ರಶ್ನಾತೀತ. ಬಾಹ್ಯಶಕ್ತಿಗಳಿಂದ ದೇಶವನ್ನು ರಕ್ಷಿಸುವ ಜತೆಜತೆಗೆ, ಅಗತ್ಯಬಿದ್ದಾಗ ಆಂತರಿಕ ವಿಪತ್ತುಗಳಿಂದ ದೇಶವನ್ನು ಸಂರಕ್ಷಿಸುವ ನಮ್ಮ ಸೇನೆಯು ಸದಾ ಪ್ರಜಾಪ್ರಭುತ್ವದ ರಕ್ಷಕನಾಗಿ ನಿಂತಿದೆ.
ಸೇನಾನೇತೃತ್ವವು ಸರಕಾರದೊಂದಿಗಿನ ತನ್ನ ಭಿನ್ನಾಭಿಪ್ರಾಯ, ವಿರೋಧ ವ್ಯಕ್ತಪಡಿಸುವಾಗ ಸಭ್ಯ-ಸಹಜ ಕಾರ್ಯವಿಧಾನವನ್ನು ಅನುಸರಿಸು ತ್ತದೆಯೇ ಹೊರತು, ನಾಗರಿಕ ನೇತೃತ್ವಕ್ಕೆ ಎಂದೂ ಸವಾಲೊಡ್ಡಿಲ್ಲ. ಅಂಥ ಒಂದೇ ಒಂದು ಘಟನೆಯು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದುವರೆಗೆ ನಡೆದಿಲ್ಲ. ನಮ್ಮ ನೆರೆದೇಶಗಳಲ್ಲಿ ಅಂಥ ಯತ್ನಗಳು ಮತ್ತೆಮತ್ತೆ ನಡೆಯುತ್ತಿರುತ್ತವೆ. ಪಾಕಿಸ್ತಾನದಲ್ಲಂತೂ ಚುನಾಯಿತ ಸರಕಾರವಿದ್ದರೂ, ಅದು ಸೇನೆಯ ಮುಖ್ಯಸ್ಥರ ಆಣತಿಯಂತೆ ಶಾಸನ ನಡೆಸಬೇಕಾದ ದುಸ್ಥಿತಿಯಿದೆ.

ಆಳುಗ ವ್ಯವಸ್ಥೆಯನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸದಾ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ನಮ್ಮ ನೆರೆರಾಷ್ಟ್ರಗಳಲ್ಲಿನ ಸೇನಾವ್ಯವಸ್ಥೆಗೂ, ನಮ್ಮಲ್ಲಿನ ಸೇನಾವ್ಯವಸ್ಥೆಗೂ ಇರುವುದು ಅಜಗಜಾಂತರ. ಪಾಕಿಸ್ತಾನದಲ್ಲಿ ಅಲ್ಲಿನ ಗುಪ್ತಚರ ಸಂಸ್ಥೆ ಮತ್ತು ಗಡಿರಕ್ಷಣಾ ಪಡೆಯಾದ ‘ಪಾಕಿಸ್ತಾನ ರೇಂಜರ‍್ಸ್’ ಕೂಡ ಸೇನಾ ಮುಖ್ಯಸ್ಥರ ಅಧೀನದಲ್ಲಿವೆ. ಭಾರತದಲ್ಲಿ ಗುಪ್ತಚರ ವಿಭಾಗವು ಸರಕಾರದ ಅಧೀನದಲ್ಲಿದೆ. ಅಷ್ಟೇ ಅಲ್ಲ, ನಮ್ಮಲ್ಲಿ ಸೇನೆಯು ರಕ್ಷಣಾ ವಿಭಾಗದ ಅಧೀನದಲ್ಲಿದ್ದು, ಸುಮಾರು ಆರು ಲಕ್ಷಕ್ಕೂ ಅಧಿಕ ಸಂಖ್ಯಾಬಲವಿರುವ ಬಿಎಸ್‌ಎಫ್, ಸಿಐಎಸ್‌ಎಫ್, ಐಟಿಪಿಪಿ, ಎಸ್‌ಎಸ್‌ಬಿ, ಅಸ್ಸಾಂ ರೈಫಲ್ಸ್, ಅರೆಸೇನಾ ಪಡೆಗಳು ಗೃಹಸಚಿವರ ಅಽನದಲ್ಲಿರುತ್ತವೆ. ಯಾವುದೇ ಸಂಭಾವ್ಯ ಸೇನಾಕ್ರಾಂತಿಯನ್ನು ಹತ್ತಿಕ್ಕಲು ಕೇಂದ್ರ ಸರಕಾರದ ಬಳಿ
ಪರ್ಯಾಯಶಕ್ತಿ ಇದೆ.

ಶಿಸ್ತು ಮತ್ತು ದಕ್ಷತೆಯ ಜತೆಜತೆಗೆ ಪ್ರಜಾತಂತ್ರದ ಮೌಲ್ಯಗಳು ನಮ್ಮ ಸೇನೆಯಲ್ಲಿ ಮೇಳೈಸಿವೆ. ಚುನಾಯಿತ ಸರಕಾರದೊಂದಿಗೆ ಅದು ಉತ್ತಮ ಸಾಮರಸ್ಯ ಮತ್ತು ಸಾಮಂಜಸ್ಯವನ್ನು ಕಾಪಾಡಿಕೊಂಡಿದೆ. ಸೇನಾಧ್ಯಕ್ಷರು ಬದಲಾದ ಮಾತ್ರಕ್ಕೆ ಸ್ಥಾಪಿತ ನಿಯಮಗಳು ಬದಲಾಗುವುದಿಲ್ಲ. ಸೇನಾಧ್ಯಕ್ಷರ ನೇಮಕಾತಿ
ಕೂಡ ವೃತ್ತಿಪರತೆ, ವರಿಷ್ಠತೆ, ಅರ್ಹತೆಯ ಆಧಾರದ ಮೇಲೆ ನಡೆಯುತ್ತದೆ. ಸರಕಾರದೊಂದಿಗಿನ ಸೇನೆಯ ಸಂಬಂಧದಲ್ಲೂ ಯಾವುದೇ ರೀತಿಯ ವ್ಯತ್ಯಾಸವಾಗಲೀ ಏರುಪೇರಾಗಲೀ ನಡೆಯುವುದಿಲ್ಲ. ಸೇನೆಯ ಕಮಾಂಡರುಗಳಿಗೆ ತಮ್ಮ ಅಧಿಕಾರದ ಇತಿಮಿತಿಯ ಅರಿವು ಚೆನ್ನಾಗಿಯೇ ಇರುತ್ತದೆ.
ಹಾಂ, ಒಂದಂತೂ ನಿಜ. ಬಾಂಗ್ಲಾ ಘಟನೆಯಿಂದಾಗಿ ರಸ್ತೆಗಿಳಿದು ಪ್ರತಿಭಟಿಸುವ, ಹಿಂಸಾಚಾರ ನಡೆಸಿ ಸರಕಾರವನ್ನು ಅಸ್ಥಿರಗೊಳಿಸುವ ಕನಸು ಕಾಣುವವರು ಹೆಚ್ಚಾಗಬಹುದು.

ನಾಲ್ಕೋ ಐದೋ ಲಕ್ಷ ಜನರನ್ನು ಸೇರಿಸಿ ಬೀದಿಗಿಳಿಸಿ ಹಿಂಸಾಚಾರ ನಡೆಸುವ ದುಸ್ಸಾಹಸಕ್ಕೂ ಅವರು ಕೈಹಾಕಬಹುದು. ಈ ಹಿನ್ನೆಲೆಯಲ್ಲಿ ಸರಕಾರದ ಗುಪ್ತಚರ ತಂತ್ರ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಇಂಥ ಆಂದೋಲನಗಳಿಗೆ ಅನುಮತಿ ಕೊಡದಿರುವ ಸರಕಾರದ ನಿರ್ಣಯದ ವಿರುದ್ಧ ತಮ್ಮ ಮುಂದೆ ಬರುವ ಮೊಕದ್ದಮೆಗಳನ್ನು ಬಗೆಹರಿಸಬೇಕಾಗಿ ಬರುವ ನ್ಯಾಯಾಲಯಗಳು ಹೆಚ್ಚು ಸಂಯಮಶೀಲವಾಗಿರಬೇಕಾದ ಅಗತ್ಯ ವಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಎಷ್ಟೇ ಕೆಟ್ಟ ಸರಕಾರವೂ ಅರಾಜಕತೆಗಿಂತ ಉತ್ತಮವೇ ಎಂಬುದನ್ನು ಬಾಂಗ್ಲಾ ಮತ್ತೊಮ್ಮೆ ತೋರಿಸಿ ಕೊಟ್ಟಿದೆ. ಸೇನೆಯು ಬಾಹ್ಯ ಶಕ್ತಿಗಳ ಆಕ್ರಮಣದಿಂದ ದೇಶವನ್ನು ರಕ್ಷಿಸಬಲ್ಲದು; ಆದರೆ ಆಂತರಿಕವಾಗಿ ದೇಶವನ್ನು ರಕ್ಷಿಸುವಲ್ಲಿ ನಾಗರಿಕರ ಪಾತ್ರ ಬಹಳ ಹಿರಿದಾದುದು. ಅರಾಜಕತೆಯ ದುಸ್ಥಿತಿ ನಮಗೆ ಬಾರದಿರಲಿ.

(ಲೇಖಕರು ಮಾಜಿ ಸೈನಿಕರು)