ಮಿಶ್ರಾ ಕೃಷಿ
ಕವಿತಾ ಮಿಶ್ರಾ
mishraformkvt@gmail.com
ನಾವು ಹೇಗೆ ಬೇಕಾದರೂ ವರ್ತನೆ ಮಾಡಬಹುದೆನ್ನುವ ವಿಕೃತ ಮನಃಸ್ಥಿತಿಯೇ ಪರಿಸರ ಮಾಲಿನ್ಯಕ್ಕೆ ಮುಖ್ಯ ಕಾರಣ ಅಂತ ಅನಿಸುತ್ತೆ. ನಮ್ಮ ನೋವು
ಕಷ್ಟಗಳನ್ನು ಮರೆಸುವ ಶಕ್ತಿ ಆ ಪರಿಸರಕ್ಕಿದ್ದಾಗ ಆ ಪರಿಸರವನ್ನು ಹಾಳು ಮಾಡುವ ಅಧಿಕಾರವನ್ನು ನಮಗೆ ಕೊಟ್ಟಿದ್ದಾದರೂ ಯಾರು?
ಸಾಮಾನ್ಯವಾಗಿ ಭಾರತದಲ್ಲಿ ಮಾನ್ಸೂನ್ ಮಾರುತಗಳು ಒಂದೇ ರೀತಿಯದ್ದಾಗಿರೋದಿಲ್ಲ. ವಿಸ್ತಾರ ಭೌಗೋಳಿಕ ಸನ್ನಿವೇಶಗಳನ್ನೊಳಗೊಂಡ ಈ ದೇಶದ ಹಲವು ರಾಜ್ಯಗಳಲ್ಲಿ ಹಲವು ರೀತಿಯ ವಾತಾವರಣ ವ್ಯತ್ಯಾಸವಿದೆ. ಅದರಂತೆ ಬೆಳೆಗಳಲ್ಲಿಯೂ ವೈವಿಧ್ಯಗಳಿವೆ. ಆಯಾ ಪ್ರದೇಶಗಳಿಗೆ ತಕ್ಕಂತೆ ಅಲ್ಲಿಯ ಆಹಾರ, ವೇಷ- ಭೂಷಣ, ಪದ್ಧತಿಗಳೂ ವಿಭಿನ್ನವಾಗಿಯೇ ಇರುತ್ತದೆ.
ಉಪಖಂಡದಲ್ಲಿ ಮಳೆ ಒಂದೇ ತೆರನಾಗಿಲ್ಲದ ಕಾರಣ ಹಲವು ರಾಜ್ಯಗಳು ಮಳೆಯಾಶ್ರಿತವಾಗಿದ್ದು ಇನ್ನು ಕೆಲವು ರಾಜ್ಯಗಳು ನೀರಾವರಿ ಪ್ರದೇಶದಿಂದ ಕೂಡಿ ಕೊಂಡು ರೈತನ ಆರ್ಥಿಕ ಪರಿಸ್ಥಿತಿಯಲ್ಲಿ ಅಸಮತೋಲನ ಕಾಣುತ್ತದೆ. ಅದರಂತೆ ಎತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಬರಗಾಲದ ಪರಿಸ್ಥಿತಿಯ ಕಾರಣ ದಿಂದಾಗಿ ಗುಳೇ ಹೋಗೋದು ಸರ್ವೇ ಸಾಮಾನ್ಯ. ಎತ್ತರ ಪ್ರದೇಶದ ಸೋನಭದ್ರ, ಬಾಂದಾ, ಮಿರ್ಜಾಪುರ ಜಿಲ್ಲೆಗಳು ಅತ್ಯಂತ ಹಿಂದುಳಿದ ಹಾಗೂ ಕಡಿಮೆ ಮಳೆ ಪ್ರಮಾಣವಿರುವ ಸ್ಥಳಗಳು. ಜತೆಗೆ ಅಲ್ಲಿನ ಸಾಕ್ಷರತೆಯ ಪ್ರಮಾಣವೂ ಕಡಿಮೆಯೆ.
ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಾಣಸಿಯ ‘ಬನಾರಸ್ ಹಿಂದೂ ವಿಶ್ವವಿದ್ಯಾಲ ಯ’ವು ಪುರಾತನ ವಿಶ್ವವಿದ್ಯಾಲಯಗಳಲ್ಲೊಂದು. ಆ ವಿಶ್ವವಿದ್ಯಾಲಯದಲ್ಲಿ ‘ನೀರಿನ ನಿರ್ವಹಣೆಯ ಜತೆಗೆ ರೈತನ ಕೃಷೀ ಆದಾಯ ಹೆಚ್ಚಳ, ಆಯ್ಕೆ ಮತ್ತು ಸವಾಲುಗಳು’ ವಿಷಯವನ್ನು ರೈತರನ್ನುದ್ದೇಶಿಸಿ ಉಪನ್ಯಾಸ ನೀಡಬೇಕೆಂದು ಅಲ್ಲಿನ ಜಿಲ್ಲಾಡಳಿತಕ್ಕೆ ನನ್ನನ್ನು ಆಹ್ವಾನಿಸಲು ಪ್ರಧಾನಿ ಸಚಿವಾಲಯದಿಂದ ನಿರ್ದೇಶನ ವಾಗಿತ್ತು. ಈ ವಿಷಯದಲ್ಲಿ ಅಲ್ಲಿನ ರೈತರಿಗೆ ಕರ್ನಾಟಕ ಸರಕಾರ ‘ವಾಟರ್ ಶೆಡ್ ಪ್ರೋಗ್ರಾಂ’ನಲ್ಲಿ ಹೇಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ, ಇಲ್ಲಿನ ರೈತರು ಅದರ ಸದ್ಬಳಕೆಯನ್ನು ಹೇಗೆ ಮಾಡಿಕೊಳ್ಳು ತ್ತಾರೆ ಹಾಗೂ ಉತ್ಪನ್ನಗಳ ಮೌಲ್ಯವರ್ಧನೆಗಳ ಬಗೆಗೆ ಉಪನ್ಯಾಸ ನೀಡಿದುದರ ಜತೆಗೆ ನೀರಿನ ನಿರ್ವಹಣೆಯ ಕುರಿತೂ ಮಾತನಾಡಿದ್ದೆ.
ಮರುದಿನ ವಾರಾಣಸಿಯ ಹಲವು ರೈತರ ಜಮೀನುಗಳಿಗೂ ಭೇಟಿ ನೀಡಿ ಅಲ್ಲಿಯ ಬದುಗಳಲ್ಲಿ ಟಿಂಬರ್ ವ್ಯಾಲ್ಯೂ ಇರುವ ಮರಗಳನ್ನು ನಾಟಿ ಮಾಡಲು ಸಲಹೆ ನೀಡಿದ್ದೆ. ಸ್ವಾತಂತ್ರ್ಯಾ ಪೂರ್ವದಲ್ಲಿ ಮರೀಚಿಕೆಯಾಗಿದ್ದ ಶಿಕ್ಷಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಪಂಡಿತ ಮದನಮೋಹನ ಮಾಳವೀಯ
ಬ್ರಿಟೀಷರ ಯಾವುದೇ ನೆರವನ್ನೂ ಪಡೆಯದೇ ದೇಶದ ರಾಜಮಹಾರಜರುಗಳಿಂದ ಮತ್ತು ಜನಸಾಮಾನ್ಯರಿಂದ ಒಂದೊಂದು ರೂಪಾಯಿಯನ್ನು ದಾನವಾಗಿ ಪಡೆದು ವಾರಾಣಸಿಯ ಪ್ರತಿಷ್ಠಿತ ವಿಶ್ವವಿದ್ಯಾಲವಾದ ಇದನ್ನು 1916ರಲ್ಲಿ ಸ್ಥಾಪಿಸಿದ್ದರು.
ಮಡಿಕಲ್, ಎಂಜಿನಿಯರಿಂಗ್, ಬಿಸಿನೆಸ್ ಮ್ಯಾನೇಜ್‌ಮೆಂಟ್, ಸಂಸ್ಕೃತ, ಜ್ಯೋತಿಷ್ಯ, ಕೃಷಿ ಸೇರಿದಂತೆ ಇಲ್ಲಿ ಸುಮಾರು 148 ವಿಷಯಗಳನ್ನು ಬೋಧಿಸ ಲಾಗುತ್ತದೆ. ಈ ವಿಶ್ವವಿದ್ಯಾಲಯ 1365 ಎಕರೆ ವಿಸ್ತೀರ್ಣವನ್ನು ಹೊಂದಿದ್ದು ಅದರಲ್ಲಿ ಸುಮಾರು 600 ಎಕರೆ ಪ್ರದೇಶ ಕೃಷಿ ಕ್ಯಾಂಪಸ್ ಹೊಂದಿದೆ. ಸೆಂಟ್ರಲ್ ಯುನಿವರ್ಸಿಟಿಯಾದ್ದರಿಂದ ಪ್ರತೀ ರಾಜ್ಯದಿಂದಲೂ ಕಲಿಯಲು ಬರುತ್ತಾರೆ. ಅಲ್ಲಿ ಉಪನ್ಯಾಸ ಮುಗಿಸಿದ ನಂತರ ಕರ್ನಾಟಕದ ಕೆಲವು ವಿದ್ಯಾರ್ಥಿಗಳು ಬಂದು ಮಾತನಾಡಿದಾಗ ನಾನು ಸಂತೋಷಗೊಂಡಿದ್ದೆ. ಆಶ್ಚರ್ಯಕರ ಸಂಗತಿ ಅಂದ್ರೆ ಬನಾರಸ್‌ನಲ್ಲಿ ಹಾಲಿನ ಉತ್ಪಾದನೆಯಿಲ್ಲ, ಆದರೆ ಹಾಲಿನ ಸಂಸ್ಕರಣೆ
ಅತ್ಯಾಧುನಿಕವಾಗಿದೆ.
ಇಲ್ಲಿನ ವಾತಾವರಣಕ್ಕ ನುಗುಣವಾಗಿ ಹಲವು ತಳಿಗಳ ಮಾವಿನ ಗಿಡಗಳಿದ್ದು, ಅದರಲ್ಲಿ ಅತ್ಯಂತ ರುಚವಿಕರವಾಗಿರೋ ತಳಿ ‘ಬನಾರಸಿ ಲಾಂಗಡಾ’. ಇದು ಔಷಧಿಯ ಗುಣಗಳನ್ನೂ ಹೊಂದಿದೆಯಂತೆ. ಈ ಹಣ್ಣುಗಳು ಸಾಮಾನ್ಯವಾಗಿ ಜುಲೈ ತಿಂಗಳಿಗೆ ಕೊಯ್ಲಿಗೆ ಬಂದು ಸುಮಾರು ಅಗಸ್ಟ್- ಸೆಪ್ಟೆಂಬರಿನವರೆಗೂ
ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಇರಲಿ, ಆಗಲೇ ಅಂದರೆ ಸುಮಾರು ಹತ್ತು ತಿಂಗಳುಗಳ ಹಿಂದೆ ವಾರಾಣಸಿಗೆ ಭೇಟಿ ನೀಡಿದಾಗ ಅಲ್ಲಿನ ಜಿಲ್ಲಾಡಳಿತ ನನ್ನನ್ನು ದೇವಸ್ಥಾನಕ್ಕೆ ಕರೆದೊಯ್ದಿತ್ತು. ಆರಂಭದಲ್ಲಿ ನಾನು ಎಲ್ಲಿಗೆ ಹೋಗುತ್ತಿದ್ದೇನೆ ಅನ್ನೋದೇ ತಿಳಿಯುತ್ತಿರಲಿಲ್ಲ. ಆ ರಸ್ತೆಯಲ್ಲಿ ಸಂತೆ, ಜಾತ್ರೆಯಂತಹಾ ಗದ್ದಲ, ಜನರ ನೂಕು- ನುಗ್ಗಲು, ಅದೇ ರಸ್ತೆಯಲ್ಲಿ ವಾಹನಗಳ ಓಡಾಟ, ಹೋಗುತ್ತಿದ್ದಂತೆ ರಸ್ತೆಯ ಅಗಲ ಆರು ಅಡಿಯಾಗಿತ್ತು.
ರಸ್ತೆಗಳು ಅತ್ಯಂತ ಹೊಲಸು ಮತ್ತು ಗಲೀಜಾಗಿತ್ತು. ಜನರು ಎಲ್ಲೆಂದರಲ್ಲಿ ಕೊಳಕು ಮಾಡುವ ದೃಶ್ಯ. ಒಂದು ರೀತಿಯಲ್ಲಿ ಒಂದುಚೂರೂ ತಿಳೀವಳಿಕೆ ಇಲ್ಲದ ಜನಸಮೂಹ ಅದಾಗಿತ್ತು. ನಮ್ಮ ಕಡೆ ಪವಿತ್ರ ಕಾಶೀ ಅಂತ ಹೇಳ್ತಾರೆ. ಆಗ ಅದೆಷ್ಟು ಶುದ್ಧವಾಗಿದ್ದಿರಬಹುದು ಅನ್ನೋದನ್ನ ನೀವೇ ಒಮ್ಮೆ ಯೋಚಿಸಿ. ಪುರಾಣ
ಕಾಲದಲ್ಲಿ ಕಾಶಿ ಹೇಗಿತ್ತು ಅಂತ ನಾನು ಕೇಳಿದ್ದಕ್ಕೂ, ನಂತರ ನಾನೇ ಆ ಪ್ರದೇಶಕ್ಕೆ ಹೋಗಿ ನೋಡಿದ್ದಕ್ಕೂ ಅಜಗಜಾಂತರವಾಗಿ ಕಾಣುತ್ತಿತ್ತು. ಕೇವಲ ಕಾಶಿ
ಅಂತಲ್ಲ ದೇಶದ ಹಲವು ಪ್ರೇಕ್ಷಣೀಯ ಸ್ಥಳಗಳು ನಾರೆದ್ದಿದೆ. ಇದನ್ನ ನಮ್ಮ ದೇಶದ ದೌರ್ಭಾಗ್ಯ ಅಂತ ಹೇಳಬೇಕೋ? ಅಥವಾ ಜನರ ಮನಸ್ಥಿತಿಯೇ ಅಷ್ಟು ಕೊಳಕಾಗಿದೆಯೋ? ತಿಳಿದೂ ತಿಳಿದೂ ತಪ್ಪನ್ನು ಮಾಡುತ್ತಿದ್ದಾರೋ? ಅಥವಾ ತಿಳಿಯದೆಯೇ ತಪ್ಪಾಗಿ ನಡೆದುಕೊಳ್ಳುತ್ತಿದ್ದಾರೋ ಗೊತ್ತಿಲ್ಲ.
ತಿಳಿಯದೇ ಅಂತಹಾ ತಪ್ಪನ್ನ ಮಾಡುತ್ತಾರೆ ಅಂತಾಗಿದ್ದರೆ ಅವರ ಮನೆಯೂ ಅಷ್ಟೇ ಗಲೀಜಾಗಿರಬೇಕಿತ್ತು. ಆದರೆ, ಆ ಭಾಗದ ಹೆಚ್ಚಿನ ಮನೆಗಳು ಶುದ್ಧ ವಾಗಿಯೇ ಇವೆ. ಅಲ್ಲಿಯ ಜನರು ಹಾಗೆ ಮಾಡುತ್ತಾರೆ ಅನ್ನೋದಕ್ಕಿಂತ ಬೇರೆ ಬೇರೆ ಪ್ರದೇಶಗಳಿಂದ ಕಾಶಿಗೆ ಹೋಗುವ ಜನರು ಆ ಭಾಗವನ್ನು ಮಲಿನ ಗೊಳಿಸುತ್ತಾರೆ. ಹೇಗೋ ಸುಧಾರಿಸಿಕೊಂಡು ದೇವಸ್ಥಾನವನ್ನು ತಲುಪಿದ್ದಾಯಿತು. ವಿಶ್ವನಾಥನ ದರ್ಶನವನ್ನು ಮಾಡಿ ಹೊರಗೆ ಬರುತ್ತಿದ್ದಂತೆ ಅಲ್ಲೇ ಹತ್ತು ಅಡಿ
ಅಂತರದಲ್ಲಿ ಎತ್ತರವಾದ ಮಸೀದಿ ಕಾಣುತ್ತಿತ್ತು.
ಸೋಜಿಗವೆಂದರೆ ಇಡೀ ಭಾರತದಲ್ಲಿ ಎಷ್ಟು ಹೆಸರಿನಿಂದ ಶಿವನನ್ನು ಕರೆಯಲಾಗುತ್ತದೆಯೋ ಅಷ್ಟೂ ಹೆಸರಿನ ಶಿವನ ವಿಗ್ರಹಗಳೂ ಕಾಶಿಯಲ್ಲಿದೆ. ಆ ಭಾಗದಲ್ಲಿ ಎಲ್ಲೇ ಹೋದರೂ ದೇವಸ್ಥಾನಗಳೇ… ನೆನಪಿರಲಿ ಅಲ್ಲಿ ಒಟ್ಟೂ 22000 ಗುಡಿಗಳಿವೆ. ಸಾಯಂಕಾಲದ ಸಮಯಕ್ಕೆ ಗಂಗಾರತಿ ಇದೆಯೆಂದು ಗಂಗಾನದಿಯತ್ತ ಸಾಗಿದ್ದೆ. ಗಂಗಾರತಿಯನ್ನು ಎರಡು ರೀತಿಯಾಗಿ ವೀಕ್ಷಣೆ ಮಾಡಬಹುದು, ಒಂದು ಗಂಗಾತೀರದ ಮೆಟ್ಟಿಲುಗಳ ಮೇಲೆ ಕುಳಿತು ಅಥವಾ ಅಲ್ಲಿ ಲಭ್ಯವಾಗುವ ದೋಣಿಗಳ ಮೇಲೆ ಕುಳಿತು.
ಅದೊಂದು ಅದ್ಭುತ ವಿಹಂಗಮ ನೋಟ. ಸುಮಾರು ಅರ್ಧ ಗಂಟೆಯವರೆಗೆ ನಡೆಯುವ ಈ ಕಾರ್ಯಕ್ರಮ ಭಕ್ತಪರವಶವಾಗುವಂತೆ ಮಾಡಿಬಿಡುತ್ತೆ. ಮನಸ್ಸು ಮೌನವಾಗಿ ಶಾಂತತೆ ಹೃದಯವನ್ನು ಆವರಿಸಿದ್ದರೂ ಅಲ್ಲಿನ ಗಲಾಟೆ ಎಚ್ಚರ ಮಾಡುತ್ತಲಿರತ್ತೆ. ಮಿಕ್ಕೆಲ್ಲ ಪ್ರದೇಶಗಳಲ್ಲಿ ಬೋರ್ಗರೆಯುವ ಈ ಗಂಗೆ ಇಲ್ಲಿ ಮಾತ್ರ ಅತ್ಯಂತ ಶಾಂತಳಾಗಿ ಹರಿಯುತ್ತಾಳೆ.
ಇಂಥ ಕಾಶಿಯಲ್ಲಿ ಕನ್ನಡದ ಕಂಪನ್ನು ಘಮಿಸಬೇಕು, ಮಾತನಾಡಬೇಕು ಅಂದ್ರೆ ಅಲ್ಲಿನ ಜಂಗಮರ ಮಠಕ್ಕೊಮ್ಮೆ ಭೇಟಿ ನೀಡಿ. ಅಲ್ಲಿ ಜನರು ಕನ್ನಡದಲ್ಲೇ ಮಾತನಾಡುತ್ತಾರೆ, ಕನ್ನಡದಲ್ಲೇ ಮಾರ್ಗದರ್ಶನವನ್ನು ನೀಡುತ್ತಾರೆ. ಯಾರೇನೇ ಹೇಳಲಿ ಕಣ್ರಿ, ಇಲ್ಲಿನ ಪಾನ್‌ನಲ್ಲಿ ಇರುವಷ್ಟು ಸ್ವಾದಿಷ್ಟ ಇನ್ನೆಲ್ಲೇ ಹೋದರೂ ಸಿಗಲ್ಲ. ಎಲೆ ಅಡಿಕೆ ಅಂದ್ರೆ ಗಲೀಜು ಅಂತ ಹೇಳೋರು ಒಮ್ಮೆ ಬನಾರಸಿನ ಬೀಡಾದ ಸವಿಯನ್ನ ನೋಡಲೇಬೇಕು. ಇಲ್ಲಿನ ಜನರು ಪಾನ್ ಅಗೆಯೋದು ತಿಂಬಾನೆ ಸಾಮಾನ್ಯ, ಹತ್ತು ರುಪಾಯಿಯಿಂದ ಐದುನೂರು ರುಪಾಯಿಯವರೆಗಿನ ಪಾನ್ ಇಲ್ಲಿನ ಬಹುತೇಕ ಅಂಗಡಿಗಳಲ್ಲಿ ಲಭ್ಯ.
ಕರ್ನಾಟಕದಲ್ಲಿ ಈಗೀಗ ಹಲವಾರು ರೀತಿಯ ಪಾನ್‌ಗಳು ಸಿಗುತ್ತಿದ್ದರೂ ಆ ರುಚಿಯನ್ನ ಆಮದು ಮಾಡಿಕೊಳ್ಳುವಲ್ಲಿ ಎಲ್ಲೋ ಒಂದು ಕಡೆ ವಿಫಲವಾಗಿದೆ. ಇಲ್ಲಿಯ ಪಾನ್‌ಗಳಿಗೆ ಬೇರೆ ಬೇರೆ ರೀತಿಯ ಗಿಡಮೂಲಿಕೆಗಳನ್ನ ಹಾಕಲಾಗುತ್ತೆ, ಅದರಿಂದ ಇನ್ನೂ ಹೆಚ್ಚಿನ ರುಚಿ ನಮ್ಮದಾಗುತ್ತೆ. ಪಾನ್‌ಗಳೇ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಇಲ್ಲಿಯ ಪಾನ್‌ಗಳಿಗೆ ಗಿಡಮೂಲಿಕೆಗಳನ್ನು ಹಾಕುವುದರಿಂದ ಆರೋಗ್ಯಕ್ಕೆ ಇನ್ನೂ ಳ್ಳೆಯದೆ. ಇದೇ ಕಾರಣದಿಂದಾಗಿರಬಹುದು, ‘ಪಾನ್ ಬನಾರಸ್
ವಾಲಾ’ ಹಾಡು ಅಷ್ಟೊಂದು ಪ್ರಸಿದ್ಧಿ ಪಡೆದಿದ್ದು. ಇರಲಿ, ಅಂಥಾ ಕಾಶಿ, ನಾನು ನೋಡಿದ್ದ ಆ ಗಲೀಜು ವಾರಾಣಸಿ ಈಗ ಸಂಪೂರ್ಣ ಬದಲಾಗಿದ್ದನ್ನು ಮೊನ್ನೆಮೊನ್ನೆ ಟೀವಿ, ಮಾಧ್ಯಮಗಳಲ್ಲಿ ನೋಡಿದೆ.
ಹಿಂದಿನವಾರ ಕಾಶಿ ವಿಶ್ವನಾಥನ ಭವ್ಯ ಮಂದಿರದ ಕುರಿತು ಎಲ್ಲೆಲ್ಲೂ ಸುದ್ದಿಯಾಗಿತ್ತು. ಮೋದಿಯ ಬಗ್ಗೆ ಇಲ್ಲಿ ಹೇಳಿದರೆ ನಾನು ಮೋದೀ ಭಕ್ತೆ ಅಂತೆಲ್ಲ ತಲೆಗೆ
ನೂರಾಎಂಟು ಮಾತುಗಳು ಹುಟ್ಟಿಕೊಳ್ಳಬಹುದು. ಏನಾದರೂ ಹೇಲಿಕೊಳ್ಳಲಿ. ವಿಷಯ ಅದಲ್ಲ. ಮುಂಚೆ ಗಲೀಜು ಅಂತ ಅನಿಸುತ್ತಿದ್ದ ಈ ಪ್ರದೇಶ ಮೋದೀ ಬಂದ ನಂತರ ಅತ್ಯಂತ ರಮ್ಯವಾಗಿ ಕಾಣುತ್ತಿದೆ. ಅಷ್ಟಕ್ಕೂ ಕಾಶಿ ಆಮಟ್ಟಿಗೆ ಗಲೀಜ್ದಾದ್ದಾದರೂ ಹೇಗೆ? ಪ್ರೇಕ್ಷಣೀಯ ಸ್ಥಳಗಳಿಗೆ ಹೋದಾಗ ಅನೇಕರು ತಮ್ಮ
ಪರಿಽಯನ್ನು ಮೀರಿ ನಡೆದುಕೊಳ್ಳುತ್ತಾರೆ.
ಹೇಗಿದ್ದರೂ ತಮಗೆ ಪರಿಚಯ ಇರುವವರು ಇಲ್ಲಿ ಇರೋದಿಲ್ಲ. ನಾವು ಹೇಗೆ ಬೇಕಾದರೂ ವರ್ತನೆ ಮಾಡಬಹುದೆನ್ನುವ ವಿಕೃತ ಮನಃಸ್ಥಿತಿಯೇ ಪರಿಸರ ಮಾಲಿನ್ಯಕ್ಕೆ ಮುಖ್ಯ ಕಾರಣ ಅಂತ ಅನಿಸುತ್ತೆ. ನಮ್ಮ ನೋವು ಕಷ್ಟಗಳನ್ನು ಮರೆಸುವ ಶಕ್ತಿ ಆ ಪರಿಸರಕ್ಕಿದ್ದಾಗ ಆ ಪರಿಸರವನ್ನು ಹಾಳು ಮಾಡುವ ಅಧಿಕಾರ ವನ್ನು ನಮಗೆ ಕೊಟ್ಟಿದ್ದಾದರೂ ಯಾರು? ಪರಿಸರವನ್ನ ಹಾಳುಮಾಡೋದು ಅಂದ್ರೆ ನಮ್ಮ ತಾಯಿಯ ಹೊಟ್ಟೆಗೆ ನಾವೇ ಚಾಕು ಹಾಕಿದಂತಲ್ಲವೇ? ನಾವು ಸಿಟಿಗಳಲ್ಲಿ ಅದೆಷ್ಟೇ ಹಣವನ್ನು ಗಳಿಸಿಕೊಳ್ಳೋಕೆ ಸಾಧ್ಯತೆಗಳಿರಬಹುದು.
ಆದರೆ ಸಿಟಿಯ ಮಹಡಿಗಳ ಮೇಲೆ ನಿಂತು ಒಮ್ಮೆ ಸುತ್ತ ಮುತ್ತಲಿನ ಪ್ರದೇಶಗಳನ್ನು ಕಣ್ಣಾಡಿಸಿದರೆ ನಮಗೆ ಕಾಣೋದು ಒಂದಿಷ್ಟು ಸಿಮೆಂಟ್ ಕಟ್ಟಡಗಳು, ಗಟಾರಗಳು, ಕಿವಿಯಿಟ್ಟು ಆಲಿಸಿದರೆ ಕಿವಿಕಟ್ಟುವ ವಾಹನಗಳ ಶಬ್ದ, ಉಸಿರು ಕಟ್ಟಿಸುವ ಹೊಗೆ. ಪರಿಸರದ ಮಡಿಲಿನಲ್ಲಿ ಒಮ್ಮೆ ನಿಂತರೆ ಆಕೆ ನಮಗೆ
ನೀಡುವುದು? ಅಂತಹಾ ಪರಿಸರಕ್ಕೆ ಹೋಗಿ ಪರಿಸರ ನಾಶವವನ್ನು ಮಾಡುವ ದುಸ್ಸಾಹಸಕ್ಕೆ ಕೈ ಹಾಕಬೇಡಿ.
ಇನ್ನು ಕೆಲವು ಕಡೆ ನಮ್ಮ ಪ್ರಿಸ್ಟೀಜುಗಳೇ ಅತಿಯಾಗಿಬಿಡುತ್ತವೆ. ನಾವು ತಿಂದಿದ್ದನ್ನ ನಮ್ಮದೇ ಬ್ಯಾಗಿನಲ್ಲಿ ಇರಿಸಿಕೊಳ್ಳುವುದಕ್ಕೂ ನಮಗೆ ತಾತ್ಸಾರ. ನಮ್ಮ ಮನೆಯಲ್ಲಿರುವಂತೆಯೇ ಹೋದಲ್ಲಿಯೂ ಇದ್ದುಬಿಡೋಣ ಅಲ್ಲವೇ? ಆಗ ಎಲ್ಲವೂ ಅದೆಷ್ಟು ಸುಂದರವಾಗಿರುತ್ತೆ!