Thursday, 12th December 2024

ಬ್ಯಾಂಕುಗಳಲ್ಲಿ ಠೇವಣಿ ಕುಸಿತ ಆಗುತ್ತಿರುವುದೇಕೆ ?

ವಾಣಿಜ್ಯ ವಿಭಾಗ

ರಮಾನಂದ ಶರ್ಮಾ

ಬ್ಯಾಂಕುಗಳಲ್ಲಿ ಸಾಲದ ಪ್ರಮಾಣ ಏರುತ್ತಿದೆ, ಆದರೆ ಠೇವಣಿ ಸಂಗ್ರಹದಲ್ಲಿ ಏರಿಕೆ ಕಾಣುತ್ತಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಳವಳ
ವ್ಯಕ್ತಪಡಿಸಿದ್ದಾರೆ. ಅಂತೆಯೇ, ಠೇವಣಿ ಸಂಗ್ರಹವನ್ನು ಚುರುಕುಗೊಳಿಸುವಂತೆ ಇತ್ತೀಚೆಗೆ ಬ್ಯಾಂಕ್ ಮುಖ್ಯಸ್ಥರ ಸಭೆಯಲ್ಲಿ ಆದೇಶಿಸಿದ್ದಾರೆ. ಈ ನಿಟ್ಟಿ ನಲ್ಲಿ ಅವರು ಬ್ಯಾಂಕುಗಳ ಮೇಲೆ ಗಂಭೀರ ಒತ್ತಡ ಹೇರಿದ್ದಾರೆ.

೨೦೨೪ರ ಜೂನ್ ಅಂತ್ಯದ ವೇಳೆಗೆ ಬ್ಯಾಂಕುಗಳಲ್ಲಿ ೧೭೬.೮೦ ಲಕ್ಷ ಕೋಟಿ ರು. ಸಾಲ ಇದ್ದರೆ, ೨೨೦.೬೦ ಲಕ್ಷ ಕೋಟಿ ರು. ಠೇವಣಿ ಇದೆ. ಸಾಲದ ಪ್ರಮಾಣ ದಲ್ಲಿ ಶೇ.೧೯.೬ರಷ್ಟು ಏರಿಕೆಯಾಗಿದ್ದರೆ, ಅದೇ ಪ್ರಮಾಣದಲ್ಲಿ ಠೇವಣಿಯಲ್ಲಿ ಏರಿಕೆಯಾಗುತ್ತಿಲ್ಲ ಎನ್ನಲಾಗುತ್ತಿದೆ. ಸಾಲ ಮತ್ತು ಠೇವಣಿ ಮಧ್ಯದ ಅಂತರ ಹೆಚ್ಚುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಮಾಧ್ಯಮ ವರದಿಯೊಂದರ ಪ್ರಕಾರ, ಸಾಲ ತೆಗೆದು ಕೊಳ್ಳಿ ಎಂದು ಗ್ರಾಹಕರಿಗೆ ಮುಗಿಬೀಳುವ ಬ್ಯಾಂಕುಗಳು ಮತ್ತೊಂದೆಡೆ ಹಣವಿಲ್ಲದೆ ಪರದಾಡುತ್ತಿವೆ. ದೇಶದ ವಾಣಿಜ್ಯ ಬ್ಯಾಂಕುಗಳು ವಿವಿಧ ಮೂಲಗಳಿಂದ ಪಡೆದು ಕೊಂಡ ಸಾಲದ ಮೊತ್ತವು ಇದೇ ಮೊದಲ ಬಾರಿಗೆ ೯ ಲಕ್ಷ ಕೋಟಿ ರು. ದಾಟಿದ್ದು, ಇದು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರಕಾರವನ್ನೇ ಕಂಗಾಲಾಗಿಸಿದೆಯಂತೆ. ಬ್ಯಾಂಕುಗಳಿಂದ ಸಾಲ ಪಡೆಯುವವರ ಸಂಖ್ಯೆ ಏರುತ್ತಿದ್ದು, ಠೇವಣಿ ಇಡುವವರ ಪ್ರಮಾಣ ಕುಗ್ಗುತ್ತಿದೆ. ಹೀಗಾಗಿ ಠೇವಣಿ ಹಣವಿಲ್ಲದೆ ಬ್ಯಾಂಕುಗಳು ಗ್ರಾಹಕರಿಗೆ ಸಾಲ ನೀಡಲು ವಿವಿಧ ಮೂಲಗಳನ್ನು ಆಶ್ರಯಿಸ ಬೇಕಾಗಿ ಬಂದಿದೆಯಂತೆ.

ರಿಸರ್ವ್ ಬ್ಯಾಂಕ್ ೧೫ ದಿನಗಳಿಗೊಮ್ಮೆ ಪ್ರಕಟಿಸುವ ದತ್ತಾಂಶದ ಪ್ರಕಾರ, ಜುಲೈ ೨೬ರ ವೇಳೆಗೆ ಬ್ಯಾಂಕುಗಳು ಪಡೆದುಕೊಂಡಿರುವ ಸಾಲ ೯.೩೨ ಲಕ್ಷ ಕೋಟಿ ರು. ತಲುಪಿದೆಯಂತೆ. ಏಪ್ರಿಲ್ ೫ರ ವೇಳೆಯ ಮೊತ್ತಕ್ಕೆ ಹೋಲಿಸಿದರೆ ಇದು ಶೇ.೨೦ರಷ್ಟು ಹೆಚ್ಚಿದೆ. ಬ್ಯಾಂಕುಗಳ ನಡುವಿನ ಸಾಲ ಮತ್ತು ಬಾಂಡ್ ಮೊದಲಾದ ಮೂಲ ಗಳಿಂದ ವಾಣಿಜ್ಯ ಬ್ಯಾಂಕುಗಳು ಹಣವನ್ನು ಹೊಂದಿಸಿ ಕೊಳ್ಳುತ್ತವೆ. ಈ ವರ್ಷ ಸರಾಸರಿ ಸಾಲ ೭.೯೯ ಲಕ್ಷ ಕೋಟಿ ರು. ಆಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.೪೫ರಷ್ಟು ಹೆಚ್ಚಾಗಿದೆ. ಗ್ರಾಹಕರಿಗೆ ನೀಡುವ ಸಾಲವು ಜುಲೈ ೨೬ರ ವೇಳೆಗೆ ಶೇ.೧೫.೧೦ರಷ್ಟು ಏರಿಕೆ ಕಂಡಿದ್ದರೆ, ಠೇವಣಿ ಪ್ರಮಾಣವು ಶೇ.೧೧ರ ವೇಗದಲ್ಲಿ ಬೆಳವಣಿಗೆ ಕಂಡಿದೆ.

೨೦೨೨ರಿಂದ ಇದೇ ಪರಿಸ್ಥಿತಿಯಿದ್ದು, ಠೇವಣಿ ಹಾಗೂ ಸಾಲದ ನಡುವಿನ ಅಂತರ ಹೆಚ್ಚುತ್ತಲೇ ಇದೆಯಂತೆ. ಇದು ಬ್ಯಾಂಕಿಂಗ್ ಉದ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆಯಂತೆ. ಠೇವಣಿ ಕುಸಿತದ ಬಗ್ಗೆ ವಿತ್ತ ಸಚಿವೆ ಆತಂಕ ವ್ಯಕ್ತಪಡಿಸುವಾಗ, ಅದರ ಹಿಂದಿನ ಕಾರಣಗಳನ್ನು ತಿಳಿದುಕೊಳ್ಳುವ ಅಥವಾ ವಿಶ್ಲೇಷಿಸುವ ಪ್ರಯತ್ನ ಮಾಡಲಿಲ್ಲ. ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್‌ರ ಆರ್ಥಿಕ ಸುಧಾರಣೆ, ಜಾಗತೀಕರಣ ಮತ್ತು ಉದಾರೀ
ಕರಣದವರೆಗೆ ಬ್ಯಾಂಕುಗಳಲ್ಲಿ ಠೇವಣಿ ಸಂಗ್ರಹಕ್ಕೆ ಆದ್ಯತೆಯಿತ್ತು. ಹೆಚ್ಚು ಠೇವಣಿ ಸಂಗ್ರಹ ಮಾಡಿದ ವರನ್ನು ‘ಡೈನಮಿಕ್ ಮ್ಯಾನೇಜರ್’ ಎನ್ನುತ್ತಿದ್ದರು ಮತ್ತು ಅವರು ಆಡಳಿತವರ್ಗದ ಪ್ರಶಂಸೆಗೆ ಪಾತ್ರರಾಗುತ್ತಿದ್ದರು.

ಅಂಥ ಬ್ಯಾಂಕುಗಳನ್ನು ಹೊಗಳಿ ಅಟ್ಟಕ್ಕೇರಿಸಲಾಗುತ್ತಿತ್ತು. ಆರ್ಥಿಕ ಸುಧಾರಣೆಯ ನಂತರದ ದಿನಗಳಲ್ಲಿ ಬ್ಯಾಂಕುಗಳು ತಮ್ಮ ವ್ಯವಹಾರ ಮತ್ತು
ಲಾಭವನ್ನು ಹೆಚ್ಚಿಸಿಕೊಳ್ಳಲು ಸಾಲ ನೀಡಿಕೆಯಲ್ಲಿನ ಮಡಿವಂತಿಕೆಗೆ ಗುಡ್‌ಬೈ ಹೇಳಿ, ಮೈಚಳಿ ಬಿಟ್ಟು ಸಾಲ ನೀಡಲು ಆರಂಭಿಸಿದವು. ಇದರಿಂದಾಗಿ ಠೇವಣಿ ಸಂಗ್ರಹ ಸ್ವಲ್ಪ ಹಿನ್ನಡೆ ಅನುಭವಿಸತೊಡಗಿತು. ಹೆಚ್ಚು ಸಾಲ ನೀಡಿದವರು ಮತ್ತು ಸಾಲ ವಸೂಲಿ ಮಾಡಿದ ಮ್ಯಾನೇಜರ್‌ಗಳ ಬಗೆಗೆ ಆಡಳಿತ ವರ್ಗ ಹೆಚ್ಚಿನ ಗಮನ ನೀಡತೊಡಗಿತು.

ಜನರು ಹೂಡಿಕೆ ಮಾಡುವಾಗ ಮತ್ತು ಠೇವಣಿ ಇಡುವಾಗ, ಅವರ ಗಮನವೆಲ್ಲವೂ ಸುರಕ್ಷಿತತೆ, ಗಳಿಕೆ (ರಿಟರ್ನ್) ಮತ್ತು ದ್ರವ್ಯತೆ/ನಗದೀಕರಣ (ಲಿಕ್ವಿಡಿಟಿ) ಇವುಗಳ ಮೇಲಿರುತ್ತದೆ. ಐದು ಲಕ್ಷ ರು.ವರೆಗಿನ ಠೇವಣಿಗೆ ಕೆಲವು ಕಟ್ಟಳೆಯೊಂದಿಗೆ ವಿಮಾ ರಕ್ಷಣೆ ಕೂಡ ಇರುತ್ತದೆ. ಹಿರಿಯ ನಾಗರಿಕರಿಗೆ ಮತ್ತು ಸಣ್ಣ ಠೇವಣಿದಾರರಿಗೆ ಈ ಮಿತಿಯನ್ನು ಹೆಚ್ಚಿಸುವ ಸಾಧ್ಯತೆ ಯಿದ್ದು, ಇಂಥ ಸುಳಿವು ರಿಸರ್ವ್ ಬ್ಯಾಂಕ್‌ನಿಂದ ಬಂದಿದೆ. ತುರ್ತು ಅಗತ್ಯಕ್ಕೆ ಕೆಲವು ಕಟ್ಟಳೆಯೊಂದಿಗೆ ನಗದೀಕರಣ ಅಥವಾ ದ್ರವ್ಯತೆಯ ಅವಕಾಶವೂ ಇರುತ್ತದೆ. ಆದರೆ ಠೇವಣಿ ಅಥವಾ ಹೂಡಿಕೆಯ ಮೇಲಿನ ರಿಟರ್ನ್ ಅಥವಾ ಗಳಿಕೆಯ ನಿಟ್ಟಿನಲ್ಲಿ ಜನರು ಸಂತುಷ್ಟರಾಗಿಲ್ಲ.

೨೦೦೮ರ ಆರ್ಥಿಕ ಹಿಂಜರಿತದವರೆಗೆ ಬ್ಯಾಂಕ್ ಠೇವಣಿ ಮೇಲೆ ಸಮಾಧಾನಕರ ಬಡ್ಡಿ (ಗಳಿಕೆ) ಬರುತ್ತಿತ್ತು. ಠೇವಣಿ ಮೇಲಿನ ಬಡ್ಡಿದರವು ಶೇ.೧೨ರ
ವರೆಗೂ ತಲುಪಿತ್ತು. ಸುಮಾರು ೫-೬ ವರ್ಷಗಳಲ್ಲಿ ಠೇವಣಿಯು ಶೇ.೧೧-೧೨ರ ದರದಲ್ಲಿ ದ್ವಿಗುಣ ವಾಗುತ್ತಿತ್ತು. ಈಗ ಶೇ. ೭-೮ರ ದರದಲ್ಲಿ ೧೧-೧೨
ವರ್ಷಗಳು ಬೇಕು. ಬ್ಯಾಂಕ್‌ನ ಒಟ್ಟು ಠೇವಣಿಯಲ್ಲಿ ಸುಮಾರು ಶೇ.೪೭ರಷ್ಟು ಪಾಲು ಹೊಂದಿರುವ ಹಿರಿಯ ನಾಗರಿಕರು ತಮ್ಮ ಠೇವಣಿಯ ಸುರಕ್ಷಿತತೆಗೆ ಆದ್ಯತೆ ನೀಡುತ್ತಿದ್ದು, ಅಂತೆಯೇ ಬ್ಯಾಂಕ್‌ನಲ್ಲಿ ಠೇವಣಿ ಇಡುತ್ತಾರೆ. ಆದರೆ ಇಂದಿನ ಯುವಜನಾಂಗ ಮತ್ತು ಹೂಡಿಕೆ ದಾರರು ತಮ್ಮ ಹೂಡಿಕೆ ಅಥವಾ ಠೇವಣಿಯ ಮೇಲೆ ದೊರಕುವ ಗಳಿಕೆ (ರಿಟರ್ನ್) ಬಗೆಗೆ ಹೆಚ್ಚು ಚಿಂತಿಸುತ್ತಾರೆ.

ಬ್ಯಾಂಕುಗಳಲ್ಲಿ ಠೇವಣಿಗಳನ್ನು ಇಡುವಾಗ ನಿಗದಿಪಡಿಸಿದ ಬಡ್ಡಿದರದ ಆಧಾರದ ಮೇಲೆ ಗಳಿಕೆ ದೊರಕುತ್ತಿದ್ದು, ಠೇವಣಿ ಪಕ್ವವಾಗುವವರೆಗೆ ಬಡ್ಡಿದರ ಬದಲಾಗುವುದಿಲ್ಲ. ಬ್ಯಾಂಕುಗಳಲ್ಲಿ ಠೇವಣಿ ಮೇಲಿನ ಬಡ್ಡಿದರ ಏರಿದರೂ ಅದರ ಫಲ ಠೇವಣಿದಾರನಿಗೆ ದೊರಕುವುದಿಲ್ಲ ಮತ್ತು ಅವಧಿಗಿಂತ ಮೊದಲು ಠೇವಣಿಯನ್ನು ಬಂದ್ ಮಾಡಿದರೆ, ನಿಗದಿಪಡಿಸಿದ ಬಡ್ಡಿದರದಲ್ಲೂ ಖೋತಾ ಬೇರೆ. ಇಂದಿನ ಯುವಜನರಿಗೆ ಠೇವಣಿಗಳು ಪಕ್ವವಾಗುವ ವರೆಗೆ ಕಾಯುವ ತಾಳ್ಮೆ ಕೂಡ ಇರುವುದಿಲ್ಲ. ಅಂತೆಯೇ ಅವರು ಹೆಚ್ಚು ಗಳಿಕೆ ನೀಡುವ ಕ್ಯಾಪಿಟಲ್ ಮಾರ್ಕೆಟ್ ನತ್ತ ಚಿತ್ತ ಹರಿಸುತ್ತಾರೆ. ಹೂಡಿಕೆಗೆ ದಕ್ಕುವ ಗಳಿಕೆಯ ಪ್ರಮಾಣವು ಕಡಿಮೆಯಾಗುವುದು ಎಂಬ ಸುಳಿವು ಸಿಗುತ್ತಿದ್ದಂತೆ ತಕ್ಷಣ ಅದನ್ನು ಮಾರಿ ಕೈತೊಳೆದು ಕೊಳ್ಳುತ್ತಾರೆ ಮತ್ತು ಅದು ಏರುಗತಿಯಲ್ಲಿದೆ ಎಂದರೆ ಇನ್ನೂ ಕೆಲಕಾಲ ಕಾಯ್ದು ಫಲವನ್ನು ಪಡೆಯುತ್ತಾರೆ.

ಷೇರು ಮಾರುಕಟ್ಟೆಯು ‘ವಂದೇಭಾರತ್ ಎಕ್ಸ್‌ಪ್ರೆಸ್’ ವೇಗದಲ್ಲಿ ಮೇಲೇರುತ್ತಿದೆ. ಹೀಗಾಗಿ ಈಗ ಹೂಡಿಕೆದಾರರು ಬ್ಯಾಂಕ್ ಬಿಟ್ಟು ದಲಾಲ್ ಸ್ಟ್ರೀಟ್ ಕಡೆ
ನುಗ್ಗುತ್ತಿದ್ದು, ಗರಿಷ್ಠ ಶೇ.೯ರಷ್ಟು ಬಡ್ಡಿ ಅಥವಾ ಗಳಿಕೆ ನೀಡುವ ಬ್ಯಾಂಕುಗಳಿಗೆ ಬೆನ್ನುಹಾಕುತ್ತಿದ್ದಾರೆ. ‘ಬರಗಾಲದಲ್ಲಿ ಅಧಿಕಮಾಸ’ ಎನ್ನುವಂತೆ ನೀಡುವ ಕಿಸಬಾಕಿ ಬಡ್ಡಿಗೂ ಟಿಡಿಎಸ್ ಕಡಿತ ಬೇರೆ ಎಂದು ಅವರು ಕೊರಗುತ್ತಾರೆ. ಗ್ರಾಹಕರ ಠೇವಣಿ ಎನ್ನುವ ಒಂದೇ ಕಾರಣಕ್ಕೆ ಬ್ಯಾಂಕುಗಳಿಗೆ ಠೇವಣಿ ಹರಿದು ಬರುತ್ತದೆ.

ಉಳಿದ ಮಾನದಂಡಗಳನ್ನು ಪರಿಗಣಿಸಿದರೆ ಬ್ಯಾಂಕುಗಳು ಬೋರ್ಡಿಗೆ ಬರುವುದು ತುಸು ಕಷ್ಟ. ಯಾರೂ ಸಾಲ ಮಾಡಿ ಬ್ಯಾಂಕುಗಳಲ್ಲಿ ಠೇವಣಿ
ಇಡುವುದಿಲ್ಲ. ಬ್ಯಾಂಕುಗಳಲ್ಲಿ ಠೇವಣಿ ಇಡಬೇಕಾದರೆ ಗ್ರಾಹಕರ ಬಳಿ ಮಿಗತೆ ಹಣ (ಸರ್‌ಪ್ಲಸ್) ಇರಬೇಕು. ಹಣ ಇದ್ದವರು ಕ್ಯಾಪಿಟಲ್ ಮಾರ್ಕೆಟ್‌ಗೆ ಹೋಗುತ್ತಾರೆ. ಹೆಚ್ಚು ಲಾಭದಾಯಕವಾಗಿರುವ ರಿಯಲ್ ಎಸ್ಟೇಟ್ ಮತ್ತು ಚಿನ್ನ ಖರೀದಿಯತ್ತ ಮುಖ ಮಾಡುತ್ತಾರೆ. ಇದರಲ್ಲಿ ಮೌಲ್ಯದ ಏರಿಕೆಯು ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ ದರಕ್ಕಿಂತ ಹಲವು ಪಟ್ಟು ಹೆಚ್ಚಿರುತ್ತದೆ.

ಬ್ಯಾಂಕುಗಳಲ್ಲಿ ಠೇವಣಿ ಇಡುವ ಬಡ, ಬಡ-ಮಧ್ಯಮ ಮತ್ತು ಮಧ್ಯಮ ವರ್ಗದವರು ತಮ್ಮ ಆದಾಯದ ಸುಮಾರು ಶೇ.೪೦ರಷ್ಟನ್ನು ಸರಕಾರಕ್ಕೆ ತೆರಿಗೆ ರೂಪದಲ್ಲಿ ನೀಡುತ್ತಿದ್ದಾರೆ. ಹೀಗಾಗಿ ಅವರಿಗೆ ತಿಂಗಳ ಕೊನೆ ನೋಡುವುದು ದುಸ್ತರವಾಗಿದ್ದು, ಉಳಿತಾಯ ಮತ್ತು ಬ್ಯಾಂಕ್‌ನಲ್ಲಿ ಠೇವಣಿ ಇರಿಸುವುದು ಮರೀಚಿಕೆ ಯಾಗಿದೆ. ಹೋಟೆಲ್‌ನಲ್ಲಿ ಕುಳಿತು ಒಂದು ಕಪ್ ಚಹಾ ಕುಡಿದರೆ ನಿಮಗರಿವಿಲ್ಲದಂತೆ ಸುಮಾರು ೫೬ ರೀತಿಯ ತೆರಿಗೆಯನ್ನು ನೀವು ಸರಕಾರಕ್ಕೆ ನೀಡಿರುತ್ತೀರಿ ಎಂದು ಹಿರಿಯ ರಾಜಕಾರಣಿ ರಾಮಕೃಷ್ಣ ಹೆಗಡೆಯವರು ಒಮ್ಮೆ ಹೇಳಿದ್ದರು. ‘ಅಳಿಯ ಅಲ್ಲ, ಮಗಳ ಗಂಡ’ ಎನ್ನುವಂತೆ ಅದು ಈಗಲೂ ಇದೆ. ತೆರಿಗೆಗಳ ಸಂಖ್ಯೆ ಕಡಿಮೆ, ಆದರೆ ತೆರಿಗೆಯ ಮೊತ್ತ ಅಷ್ಟೇ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ.

ಭಾರತೀಯರು ಪ್ರತಿ ದಿನ, ನೇರವಾಗಿ ಅಥವಾ ಪರೋಕ್ಷವಾಗಿ ಯಾವುದಾದರೂ ರೂಪದಲ್ಲಿ ನಿರಂತರವಾಗಿ ತೆರಿಗೆ ನೀಡುತ್ತಿದ್ದು, ಬಹುತೇಕರ ಕಿಸೆ ಮತ್ತು ಕೈ ಖಾಲಿಯಾಗಿ, ಉಳಿತಾಯ ಮತ್ತು ಬ್ಯಾಂಕ್ ಠೇವಣಿಯನ್ನು ಮರೆಯಬೇಕಾಗುತ್ತದೆ. ಇದು ಆರೋಗ್ಯ ವಿಮೆಯನ್ನೂ ಬಿಟ್ಟಿಲ್ಲವಂತೆ. ಇತ್ತೀಚೆಗೆ ಕೇಂದ್ರ ಸಾರಿಗೆ ಮಂತ್ರಿ ನಿತಿನ್ ಗಡ್ಕರಿಯ ವರು ವಿತ್ತ ಮಂತ್ರಿಗಳಿಗೆ ಪತ್ರ ಬರೆದು, ‘ಇದು ಬದುಕಿನ ಅನಿಶ್ಚಿತತೆಯ ಮೇಲಿನ ತೆರಿಗೆ’ ಎಂದು ಮಾರ್ಮಿಕವಾಗಿ
ಹೇಳಿ ಶೇ.೧೮ರಷ್ಟಿರುವ ಜಿಎಸ್‌ಟಿಯನ್ನು ರದ್ದುಪಡಿಸುವಂತೆ ಕೇಳಿದ್ದಾರಂತೆ.

ರಿಟರ್ನ್ ಮತ್ತು ತೆರಿಗೆ ಹೆಸರಿನಲ್ಲಿ ಬ್ಯಾಂಕುಗಳಿಗೆ ಠೇವಣಿ ನೀಡದವರನ್ನು ಸೆಳೆಯಲು, ಬ್ಯಾಂಕುಗಳಲ್ಲಿ ಠೇವಣಿ ಮೇಲೆ ನೀಡುವ ಬಡ್ಡಿದರದ ಮೇಲ್ಮುಖ
ಪರಿಷ್ಕರಣೆ ಅನಿವಾರ್ಯವಾಗಿದೆ ಮತ್ತು ಇದು ಸ್ಪರ್ಧಾತ್ಮಕವಾಗಿರುವಂತೆ ಗಮನ ಹರಿಸಬೇಕು. ಹಾಗೆಯೇ, ಬ್ಯಾಂಕ್ ಠೇವಣಿಗಳ ಪಾಲಿಗೆ ‘ಸೆರಗಿನ ಕೆಂಡ’ದಂತಿರುವ ಟಿಡಿಎಸ್ ಅನ್ನು ಪುನರ್‌ವಿಮರ್ಶಿಸಬೇಕು. ರೆಪೋ ದರ ಬದಲಾದಾಗ ಸಾಲದ ಮೇಲಿನ ಬಡ್ಡಿದರ ಏರು ಪೇರಾಗುತ್ತದೆ. ಆದರೆ ಠೇವಣಿ ಮೇಲಿನ ಬಡ್ಡಿದರವು ಠೇವಣಿ ಪಕ್ವವಾಗುವವರೆಗೆ ಬದಲಾಗುವುದಿಲ್ಲ. ಠೇವಣಿ ದಾರರಿಗೆ ಅನನುಕೂಲವಾಗಿರುವ ಈ ವ್ಯವಸ್ಥೆಯನ್ನು ಸರಿಪಡಿಸಬೇಕು. ಬ್ಯಾಂಕುಗಳಲ್ಲಿ ಚಾಲ್ತಿ ಖಾತೆಗೆ ಬಡ್ಡಿಯನ್ನು ನೀಡುವುದಿಲ್ಲ ಮತ್ತು ಉಳಿತಾಯ ಖಾತೆಗೆ ಶೇ.೩-೩.೫೦ರಷ್ಟು ಕಾಟಾಚಾರದ ಬಡ್ಡಿ ಇರುತ್ತದೆ.

ಅಂತೆಯೇ ಈ ದಿನಗಳಲ್ಲಿ ಗ್ರಾಹಕರು ತಮ್ಮ ಹಣವನ್ನು ಸ್ಥಿರ ಠೇವಣಿಯಲ್ಲಿ ಇಡುತ್ತಾರೆ. ಇದು ಬ್ಯಾಂಕುಗಳಿಗೆ ದುಬಾರಿಯಾಗುತ್ತಿದ್ದು, ಉಳಿತಾಯ ಖಾತೆಗಳ ಮೇಲೆ ನೀಡುವ ಬಡ್ಡಿದರವನ್ನು ಹೆಚ್ಚಿಸುವುದನ್ನು ಮತ್ತು ಚಾಲ್ತಿ ಖಾತೆಗೂ ಸ್ವಲ್ಪ ಬಡ್ಡಿ ನೀಡುವುದನ್ನು ಬ್ಯಾಂಕುಗಳು ಪರಿಗಣಿಸಬಹುದು.
ಬ್ಯಾಂಕುಗಳು ತಮ್ಮ ಠೇವಣಿಯನ್ನು ಹೆಚ್ಚಿಸಿಕೊಳ್ಳದಿ ದ್ದರೆ, ತಾವು ವಿವಿಧ ಮೂಲಗಳಿಂದ ಪಡೆದ ಸಾಲವನ್ನು ಗ್ರಾಹಕರಿಗೆ ಸಾಲ ನೀಡಲೆಂದು ಬಳಸಿ ಕೊಳ್ಳಬೇಕಾಗು ತ್ತದೆ. ಇದು ಅಂತಿಮವಾಗಿ ಸ್ಪರ್ಧಾತ್ಮಕವಾಗಿರದೆ ಸಾಲ ನೀಡುವಿಕೆಯಲ್ಲಿನ ತನ್ನ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳಬೇಕಾಗುತ್ತದೆ.

(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)