ಲೇವಾದೇವಿ ಕಟ್ಟೆ
ರಮಾನಂದ ಶರ್ಮ
೧೯೬೯ರ ಜುಲೈ ೧೯. ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ಅನಿರೀಕ್ಷಿತ ಮತ್ತು ಅಚ್ಚರಿಯ ಬೆಳವಣಿಗೆ ಯಾದ ದಿನವದು. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಪಕ್ಷದಲ್ಲಿನ ಬಲಪಂಥೀಯ ಚಿಂತನೆಯವರು ಮತ್ತು ಪಟ್ಟಭದ್ರ ಹಿತಾಸಕ್ತರ ತೀವ್ರ ವಿರೋಧವನ್ನೂ ಲೆಕ್ಕಿಸದೆ, ೫೦ ಕೋಟಿ ರು. ಮೀರಿ ಠೇವಣಿಯಿದ್ದ ೧೪ ಬ್ಯಾಂಕುಗಳನ್ನು ಅಂದು ರಾತ್ರಿ ರಾಷ್ಟ್ರೀಕರಿಸಿದ್ದರು.
ಬ್ಯಾಂಕ್ ಉದ್ಯೋಗಗಳು ಮತ್ತು ಬ್ಯಾಂಕಿನ ಸಾಲಸೌಲಭ್ಯಗಳು ಸಮಾಜದಲ್ಲಿ ಕೆಲವೇ ಜನರಿಗೆ ಸೀಮಿತ ವಾಗುತ್ತಿರುವುದನ್ನು ನೋಡಿದ ಅವರು, ಇವು ಸಮಾಜದಲ್ಲಿ ಆರ್ಥಿಕವಾಗಿ ಕೆಳಸ್ತರದಲ್ಲಿರುವವರಿಗೂ ದೊರಕ ಬೇಕು ಮತ್ತು ಬ್ಯಾಂಕುಗಳ ಅವಶ್ಯಕತೆಯುಳ್ಳವರ ಮನೆಬಾಗಿಲನ್ನು ಅವು ತಟ್ಟಬೇಕು ಎಂಬ ಘನ ಉದ್ದೇಶ ದಿಂದ ಇಂಥ ಕ್ರಾಂತಿಕಾರಿ ಹೆಜ್ಜೆಯಿಟ್ಟಿದ್ದರು. ಭಾರತದಲ್ಲಿ ೧೭೭೦ರಲ್ಲಿ ‘ಬ್ಯಾಂಕ್ ಆಫ್ ಹಿಂದೂಸ್ತಾನ’ ಸ್ಥಾಪನೆ ಯಾಗುವುದರೊಂದಿಗೆ ಬ್ಯಾಂಕಿಗ್ ಉದ್ಯಮ ಆರಂಭವಾಯಿತು. ನಂತರ ದೇಶದಲ್ಲಿ ಸಾವಿ ರಾರು ಬ್ಯಾಂಕುಗಳು ಮತ್ತು ಲಕ್ಷಾಂತರ ಶಾಖೆಗಳು ಶುರುವಾಗುವುದರೊಂದಿಗೆ ಉದ್ಯಮವು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಆದರೆ ೧೯೬೯ರ ಈ ರಾಷ್ಟ್ರೀಕರಣವು ಬ್ಯಾಂಕಿಂಗ್ ಉದ್ಯಮದ ‘ಲ್ಯಾಂಡ್ ಮಾರ್ಕ್ ಬದಲಾವಣೆ’ ಅಥವಾ ತಿರುವು ಎನ್ನಲಾಗುತ್ತದೆ.
ಬ್ಯಾಂಕಿಂಗ್ ಉದ್ಯಮದಲ್ಲಿ ಬದಲಾವಣೆ ನಿರಂತರವಾಗಿದ್ದರೂ, ಈಗೊಮ್ಮೆ ಹಿಂದಿರುಗಿ ನೋಡಿದರೆ ರಾಷ್ಟ್ರೀಕರಣದ ನಂತರ ಅದರ ಮೂಲಸ್ವರೂಪವೇ
ಆಮೂಲಾಗ್ರ ಬದಲಾಗುವಷ್ಟು ಅದು ಬದಲಾಗಿದ್ದನ್ನುಕಾಣಬಹುದು.
ಇಂದಿರಾ ದಿಟ್ಟನಡೆ
ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದ ಮೂಲಕ ಬ್ಯಾಂಕ್ ರಾಷ್ಟ್ರೀಕರಣದ ಘೋಷಣೆಯನ್ನು ಪ್ರಕಟಿಸಿದ ಇಂದಿರಾ ಗಾಂಧಿಯವರು, ಅದರ ಹಿಂದಿನ
ಉದ್ದೇಶ ಹಾಗೂ ಮುಂದಿನ ಯೋಜನೆಗಳನ್ನು ದೇಶದ ಎದುರಿಗೆ ಇಟ್ಟಿದ್ದರು. ಆದರೆ ರಾಷ್ಟ್ರೀಕರಣದ ಅರ್ಥ, ಮಹತ್ವ ಮತ್ತು ಉದ್ದೇಶವನ್ನು ಗ್ರಹಿಸಲಾಗದ ಕೆಲ
ಮಾಧ್ಯಮದವರು, ಜನಸಾಮಾನ್ಯರು ಮತ್ತು ಪ್ರಜ್ಞಾವಂತರು ಇಂದಿರಾ ಗಾಂಧಿಯವರ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದರು. ‘ಇದು ಪಕ್ಷದೊಳಗಿನ
ತಾತ್ತ್ವಿಕ-ಸೈದ್ಧಾಂತಿಕ ವಿರೋಧಿಗಳನ್ನು ಹಿಮ್ಮೆಟ್ಟಿಸುವ ಒಂದು ರಾಜಕೀಯ ತಂತ್ರಗಾರಿಕೆ’ ಎಂದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಈ ಕ್ರಾಂತಿಕಾರಿ ಸುಧಾರಣಾ ಹೆಜ್ಜೆಗೆ ಪಕ್ಷದಲ್ಲಿನ ಮತ್ತು ಸರಕಾರದಲ್ಲಿನ ಕೆಲವು ಹಿರಿಯ ನಾಯಕರ ಸಹಮತವಿರಲಿಲ್ಲ. ಇದನ್ನು ಮೊದಲೇ ಅರಿತಿದ್ದ ಇಂದಿರಾ ಗಾಂಧಿಯವರು, ತಮ್ಮ ನಂಬುಗೆಯ ಕೆಲವು ಹಿರಿಯ ಅಧಿಕಾರಿಗಳು, ಸ್ವಲ್ಪ ಎಡಪಂಥೀಯ ಚಿಂತನೆಯುಳ್ಳ ‘ಯಂಗ್ ಟರ್ಕ್’ ಹಣೆಪಟ್ಟಿಯ ಕಾಂಗ್ರೆಸ್ಸಿಗರು, ಸಮಾಜವಾದಿ, ಕಮ್ಯುನಿಸ್ಟ್ ರಾಜಕಾರಣಿಗಳನ್ನು ಮಾತ್ರ ಈ ವಿಷಯದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದರಂತೆ. ಸರಕಾರದ ಇಂಥ ಮಹತ್ವದ ಕ್ರಮದ ಬಗ್ಗೆ ಅಂದಿನ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್‌ಗೂ ಸುಳಿವಿರಲಿಲ್ಲವಂತೆ.
ಮೊರಾರ್ಜಿ ದೇಸಾಯಿ ಹಾಗೂ ಇಂದಿರಾರ ನಡುವಿನ ಶೀತಲಸಮರಕ್ಕೆ ಇದೂ ಕಾರಣ ಎಂದು ರಾಜಕೀಯ ಇತಿಹಾಸಕಾರರು ಹೇಳುತ್ತಾರೆ. ರಾಷ್ಟ್ರೀಕರಣಕ್ಕೆ ಸಹಮತವಿರದಿದ್ದರೆ, ಹಣಕಾಸು ಇಲಾಖೆ ಬಿಟ್ಟು ಕೇವಲ ಉಪಪ್ರಧಾನಿಯಾಗಿ ಮುಂದುವರಿಯುವಂತೆ ಮೊರಾರ್ಜಿಯವರಿಗೆ ಇಂದಿರಾ ಸೂಚಿಸುವಷ್ಟರಮಟ್ಟಿಗೆ
ವಿಷಯ ಗಂಭೀರವಾಗಿತ್ತಂತೆ. ಈ ಸೈದ್ಧಾಂತಿಕ ಭಿನ್ನಮತವೇ ಮುಂದೊಂದು ದಿನ ಕಾಂಗ್ರೆಸ್ ಪಕ್ಷ ಒಡೆದು ‘ಸಿಂಡಿಕೇಟ್’ ಮತ್ತು ‘ಇಂಡಿಕೇಟ್’ ಆಗಿದ್ದು ಭಾರತದ
ರಾಜಕೀಯ ಇತಿಹಾಸದ ಘನಘೋರ ಅಧ್ಯಾಯ ಎನ್ನಲಾಗುತ್ತದೆ.
ರಾಷ್ಟ್ರೀಕರಣದ ಸುಗ್ರೀವಾಜ್ಞೆಯನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು, ೩೫ ದಿನಗಳ ಮಧ್ಯಂತರ ತಡೆಯಾಜ್ಞೆಯೂ ಬಂದಿತ್ತು. ದೇಶದ ಹೆಸರಾಂತ
ವಕೀಲ ನಾನಿ ಪಾಲ್ಕೀವಾಲಾ ಅವರು ಸರಕಾರದ ಈ ಕ್ರಮದ ವಿರುದ್ಧ ವಾದಿಸಿದ್ದರು. ಈ ಪ್ರಕರಣದಲ್ಲಿ ಹೆಸರಾಂತ ವಕೀಲರು, ಸಂವಿಧಾನತಜ್ಞರು ಕೋರ್ಟ್‌ನಲ್ಲಿ ತಿಂಗಳುಗಟ್ಟಲೆ ನಡೆಸಿದ ವಾದ- ಪ್ರತಿವಾದಗಳು, ಕೇಶವಾನಂದ ಭಾರತಿ, ಗೋಲಕನಾಥ್ ಪ್ರಕರಣ ಮತ್ತು ರಾಜಧನ ರದ್ಧತಿ ಪ್ರಕರಣಗಳ ರೀತಿಯಲ್ಲಿ ಇಂದಿಗೂ ದೇಶದ ಕಾನೂನು ವಿದ್ಯಾರ್ಥಿ ಗಳಿಗೆ ಸಾಂವಿಧಾನಿಕ ಕಾನೂನಿನಲ್ಲಿನ ಉಲ್ಲೇಖಾರ್ಹ ಪ್ರಕರಣಗಳಾಗಿವೆ; ಇವನ್ನು ಅಭ್ಯಸಿಸದೇ ಕಾನೂನು ಪದವಿ ಪೂರ್ಣಗೊಳ್ಳುವುದಿಲ್ಲ.
ಬ್ಯಾಂಕ್ ರಾಷ್ಟ್ರೀಕರಣದ ಉಪಕ್ರಮವು ಉದ್ದೇಶಿತ ಫಲ ನೀಡಿದ್ದನ್ನು ಕಂಡ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯ ನಂತರದ ಸೋಲಿನ ಬಳಿಕ
೧೯೮೦ರಲ್ಲಿ ಪುನಃ ಅಧಿಕಾರಕ್ಕೆ ಬಂದಾಗ, ೨೦೦ ಕೋಟಿ ರು.ಗೂ ಮೀರಿದ ಠೇವಣಿಯಿರುವ ೬ ಬ್ಯಾಂಕುಗಳನ್ನು ಸರಕಾರದ ಸುಪರ್ದಿಗೆ ತೆಗೆದುಕೊಂಡರು. ಮೊದಲ ಸುತ್ತಿನ ರಾಷ್ಟ್ರೀಕರಣದಿಂದ ದೇಶದ ಶೇ.೮೫ರಷ್ಟು ಬ್ಯಾಂಕಿಂಗ್ ವ್ಯವಹಾರ ಸರಕಾರಿ ಬ್ಯಾಂಕುಗಳಿಗೆ ಬಂದರೆ, ಎರಡನೇ ಸುತ್ತಿನ ರಾಷ್ಟ್ರೀಕರಣದಿಂದ ಶೇ.೯೧ ರವರೆಗೆ ಅದು ಸರಕಾರಿ ಬ್ಯಾಂಕುಗಳಿಗೆ ದೊರಕಿತು.
ರಾಷ್ಟ್ರೀಕರಣದ ಮೊದಲು ಖಾಸಗಿ ಒಡೆತನದಲ್ಲಿದ್ದ ಬ್ಯಾಂಕುಗಳು ಸಾರ್ವಜನಿಕರಿಂದ ಠೇವಣಿ ಸ್ವೀಕರಿಸುತ್ತಿದ್ದು, ಉಳ್ಳವರಿಗೆ, ಪ್ರಭಾವಿಗಳಿಗೆ ಮತ್ತು ಸಮಾಜದ
ಕೆಲವೇ ವರ್ಗದವರಿಗೆ ಇದರ ಪ್ರಯೋಜನ ಸಿಗುತ್ತಿದೆ ಎನ್ನುವ ಆರೋಪವಿತ್ತು. ದೇಶದ ಸಂಪತ್ತು ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃವಾಗುವುದು ರಾಷ್ಟ್ರದ ಒಟ್ಟಾರೆ
ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎನ್ನುವ ಚಿಂತನೆ ಪಕ್ಷದ ಯುವನೇತಾರರಲ್ಲಿತ್ತು. ‘ಯಂಗ್ ಟರ್ಕ್’ ಎಂಬ ಹಣೆಪಟ್ಟಿಯಡಿ ಪಕ್ಷದಲ್ಲಿ ಮುಂಚೂಣಿ
ಯಲ್ಲಿದ್ದ ಎಡಪಂಥೀಯ ಒಲವಿನ ಚಂದ್ರಶೇಖರ್, ಕೃಷ್ಣಕಾಂತ್ ಮತ್ತು ಮೋಹನ್ ಧಾರಿಯಾ ಮೊದಲಾದವರು ಇಂದಿರಾ ಗಾಂಧಿಯವರ ಮೇಲೆ ಸದಾ ಒತ್ತಡ
ಹಾಕುತ್ತಿದ್ದರು.
ಖಾಸಗಿ ಒಡೆತನವನ್ನು ಯಾವಾಗಲೂ ವಿರೋಧಿಸುವ ಕಮ್ಯುನಿಸ್ಟರು ಮತ್ತು ಸಮಾಜ ವಾದಿಗಳು ಕೂಡಾ ಇಂದಿರಾ ಗಾಂಧಿಯವರಿಗೆ ಈ ನಿಟ್ಟಿನಲ್ಲಿ ‘ಸಾಥ್’ ನೀಡಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ‘ಸಿಂಡಿಕೇಟ್’ ಎಂದು ಕರೆಯಲ್ಪಡುತ್ತಿದ್ದ, ಆಂತರಿಕವಾಗಿ-ಅಗೋಚರವಾಗಿ ಅಡಚಣೆ ನೀಡುತ್ತಿದ್ದ ಕೆಲವು ಹಿರಿಯ ಕಾಂಗ್ರೆಸ್ಸಿ ಗರನ್ನು ನಿಯಂತ್ರಿಸಲು ಅವರಿಗೆ ತುರ್ತಾಗಿ ಒಂದು ಜನಪರ ಮತ್ತು ಪ್ರಗತಿಪರ ಆರ್ಥಿಕ ಕಾರ್ಯಕ್ರಮ ಬೇಕಾಗಿತ್ತು.
ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಬ್ಯಾಂಕ್ ಕಾರ್ಮಿಕ ಸಂಘಗಳು ಬಹಳ ಕಾಲ ದಿಂದ ಒತ್ತಾಯಿಸುತ್ತಿದ್ದವು. ಜನಸಾಮಾನ್ಯರ ಬೆವರಿನ ಹಣವು (ಅಂದರೆ ಉಳಿತಾಯದ ಹಣವು) ಬ್ಯಾಂಕ್ ಮೂಲಕ ಉಳ್ಳವರ ಉದ್ಧಾರದೆಡೆಗೆ ಹೊರಳದೆ ಜನ ಸಾಮಾನ್ಯರ ಆರ್ಥಿಕ ಬೆಳವಣಿಗೆಗೆ ಬಳಕೆಯಾಗುವಂತಾಗಲು ಬ್ಯಾಂಕುಗಳ ರಾಷ್ಟ್ರೀಕರಣವೊಂದೇ ಮಾರ್ಗ ಎಂದು ಈ ಕಾರ್ಮಿಕ ಸಂಘಗಳ ಮಂದಿ ನಿರಂತರವಾಗಿ ಮುಷ್ಕರ ನಡೆಸುತ್ತಾ, ಗಂಟಲುಬ್ಬಿಸಿ ಘೋಷಣೆ ಕೂಗುತ್ತಾ, ಮುಷ್ಟಿಯೆತ್ತಿ ಸಂಘರ್ಷದಲ್ಲಿ ತೊಡಗಿದ್ದರು. ಆ ಕಾಲಕ್ಕೆ ‘ಔZಠಿಜಿqಛಿ ಒಟಚಿ’ ಎಂದು ಹೇಳಲ್ಪಡುತ್ತಿದ್ದ ಬ್ಯಾಂಕ್ ಉದ್ಯೋಗಗಳು ಕೆಲವೇ ಕೆಲವರ ಮತ್ತು ಉಳ್ಳವರ ಸ್ವತ್ತಾಗಿದ್ದು, ಜನಸಾಮಾನ್ಯರಿಗೆ ಅವು ಮರೀಚಿಕೆಯಾಗಿವೆ ಎಂಬ ಆರೋಪವಿತ್ತು.
ಬಹುತೇಕ ಬ್ಯಾಂಕುಗಳು ‘ಟ್ರೇಡ್ ಫೈನಾನ್ಸ್’ ಮಾಡುತ್ತಿದ್ದು, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅವಶ್ಯವಾದ ಕೃಷಿ ಮತ್ತು ಸಣ್ಣ ಉದ್ದಿಮೆಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದವು. ಈ ೧೪ ಬ್ಯಾಂಕುಗಳು ಬ್ಯಾಂಕಿಂಗ್ ವಲಯದ ಸುಮಾರು ಶೇ.೭೦ರಷ್ಟು ಠೇವಣಿಯನ್ನು ಹೊಂದಿದ್ದರೂ, ದೇಶದ ಜನತೆಯ ಸಾಲದ ಅವಶ್ಯಕತೆಯನ್ನು ಪೂರೈಸಲು ಪ್ರಯತ್ನಿಸಿಲ್ಲ ಮತ್ತು ಯಾವುದೋ ನೆಪ ಹೇಳಿ ಹಿಂದೇಟು ಹಾಕುತ್ತಿವೆ ಎನ್ನುವ ಆರೋಪವೂ ವ್ಯಾಪಕವಾಗಿತ್ತು. ಕಣ್ಣಿಗೆ ರಾಚು
ವಂತಿದ್ದ ಈ ‘ಕಹಿವಾಸ್ತವ’ಗಳೇ ಬ್ಯಾಂಕ್ ರಾಷ್ಟ್ರೀಕರಣದ ಹಿಂದಿನ ಪ್ರೇರಣೆ ಎಂದು ಹೇಳಲಾಗುತ್ತದೆ.
ಕ್ರಾಂತಿಕಾರಿ ಬೆಳವಣಿಗೆ
ರಾಷ್ಟ್ರೀಕರಣದಂಥ ಐತಿಹಾಸಿಕ ಕ್ರಮದ ನಂತರ, ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದ್ದ ಬ್ಯಾಂಕ್ ಶಾಖೆಗಳ ಜಾಲವು ದೇಶದ ಮೂಲೆಮೂಲೆಗೂ ಪಸರಿ
ಸಿತು. ಅಲ್ಲಿಯವರೆಗೆ ನಿರ್ಲಕ್ಷಿಸಲ್ಪಟ್ಟಿದ್ದ ಗ್ರಾಮಾಂತರ ಪ್ರದೇಶ ಮತ್ತು ಗ್ರಾಮೀಣ ಜನರನ್ನು ಬ್ಯಾಂಕಿಂಗ್ ಪರಿಕಲ್ಪನೆಯೊಳಗೆ ತೊಡಗಿಸಲು ಹಾಗೂ
ಅವರಿಗೆ ಬ್ಯಾಂಕಿಂಗ್ ಸೌಲಭ್ಯ ದೊರೆಯುವಂತೆ ಮಾಡಲು, ಬ್ಯಾಂಕ್ ಶಾಖೆ ತೆರೆಯುವುದಕ್ಕೆ ಸಂಬಂಧಿಸಿದ ನಿಯಮಾವಳಿಗೆ ತಿದ್ದುಪಡಿ ತರಲಾಯಿತು. ಇದರ
ನ್ವಯ, ‘ಮೂರು ಶಾಖೆಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ತೆರೆದರೆ ಮಾತ್ರವೇ, ಒಂದು ಶಾಖೆಯನ್ನು ಪಟ್ಟಣ-ನಗರ ಪ್ರದೇಶದಲ್ಲಿ ತೆರೆಯಬಹುದು’ ಎಂಬ
ನಿಬಂಧನೆ ವಿಽಸಲಾಯಿತು. ಈ ಉಪಕ್ರಮದಿಂದಾಗಿ ಬ್ಯಾಂಕ್ ಶಾಖೆಗಳ ತೆರೆಯುವಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಯಾಗಿ, ಬಹುತೇಕ ‘ಬ್ಯಾಂಕ್-ರಹಿತ’ ಪ್ರದೇಶಗಳು ಬ್ಯಾಂಕುಗಳ ಮುಖವನ್ನು ಕಾಣುವಂತಾಯಿತು.
ಬ್ಯಾಂಕುಗಳು ತಮ್ಮ ‘ಕಮರ್ಷಿಯಲ್-ಕ್ಲಾಸ್’ ಟ್ಯಾಗ್ ತೆಗೆದು ‘ಸೋಷಿಯಲ್-ಮಾಸ್’ ಟ್ಯಾಗ್‌ಗೆ ಬದಲಾವಣೆ ಹೊಂದಿದವು. ಬ್ಯಾಂಕುಗಳು ಕೇವಲ ಲಾಭ
ಗಳಿಸಲು ಅಲ್ಲ ಎನ್ನುವ ಪರಿಕಲ್ಪನೆ ಅನಾವರಣ ಗೊಂಡಿತು. ಗ್ರಾಹಕರು ಮತ್ತು ಜನಸಾಮಾನ್ಯರ ಮನೆ ಬಾಗಿಲನ್ನು ಬ್ಯಾಂಕುಗಳು ಬಡಿಯುವಂಥ ಪರಿಸ್ಥಿತಿ
ರೂಪುಗೊಂಡಿತು. ಅಲ್ಲಿಯವರೆಗೆ ನಿರ್ಲಕ್ಷಿಸಲ್ಪಟ್ಟ ಕೃಷಿ, ಸಣ್ಣ- ಮಧ್ಯಮ ಗಾತ್ರದ ಉದ್ದಿಮೆಗಳು ಇಂದು ಉಚ್ಚ್ರಾಯ ಸ್ಥಿತಿಯಲ್ಲಿದ್ದರೆ ಮತ್ತು ತನ್ಮೂಲಕ ಉದ್ಯೋಗ
ಸೃಷ್ಟಿಯಾಗುತ್ತಿದ್ದರೆ ಅದಕ್ಕೆ ಕಾರಣ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಚಳಿ ಬಿಟ್ಟು ಸಾಲ ನೀಡುವ ಅವುಗಳ ಧೋರಣೆ.
ಅವು ತಮ್ಮ ಒಟ್ಟೂ ಸಾಲದ ಶೇ. ೪೦ರಷ್ಟನ್ನು ಕೃಷಿ, ಸಣ್ಣ-ಮಧ್ಯಮ ಪ್ರಮಾಣದ ಉದ್ದಿಮೆಯನ್ನೊಳಗೊಂಡ ಆದ್ಯತಾ ವಲಯಕ್ಕೆ ನೀಡುತ್ತಿದ್ದು, ಯಾವುದೇ ಕೃಷಿ, ಉದ್ದಿಮೆ, ಉದ್ಯೋಗ, ವೈದ್ಯ, ಎಂಜಿನಿಯರ್ ವೃತ್ತಿಯನ್ನು ಹೆಸರಿಸಿದರೆ ಅದರ ಹಿಂದೆ ಒಂದು ಬ್ಯಾಂಕು, ಅದರಲ್ಲೂ ನಿರ್ದಿಷ್ಟ ವಾಗಿ ರಾಷ್ಟ್ರೀಕೃತ ಬ್ಯಾಂಕು ಇರುವುದನ್ನು ಕಾಣಬಹುದು. ನಮ್ಮ ನಿತ್ಯಜೀವನದ ಒಂದು ಭಾಗವಾಗಿ ಕಾಣುವ ಈ ಬ್ಯಾಂಕುಗಳು, ಸರಕಾರವು ನಿರ್ದೇಶಿಸಿದ ಯಾವುದೇ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತವೆ. ಪ್ರಧಾನಮಂತ್ರಿಗಳ ಜನಧನ ಯೋಜನೆ ಅಡಿಯಲ್ಲಿ ಅವು ೪೭.೮೦ ಕೋಟಿ ಖಾತೆಗಳನ್ನು ತೆರೆದಿದ್ದರೆ, ಈ ಬಾಬತ್ತಿನಲ್ಲಿ ಖಾಸಗಿ ಬ್ಯಾಂಕುಗಳ ಕೊಡುಗೆ ೨.೨೫ ಕೋಟಿ ಮಾತ್ರ.
‘ಖರೀದಿ ಸಾಮರ್ಥ್ಯ’ದ ನಿಟ್ಟಿನಲ್ಲಿ ಭಾರತವಿಂದು ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದ್ದರೆ, ೩ ಲಕ್ಷ ಕೋಟಿ ಡಾಲರ್ ಆರ್ಥಿಕತೆಯದ್ದಾಗಿದ್ದರೆ ಮತ್ತು ೨೦೨೪ರ ಹೊತ್ತಿಗೆ ೫ ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ದೇಶವಾಗುವುದಿದ್ದರೆ, ಇದರಲ್ಲಿ ನಮ್ಮ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಯ ವಿಷಯದಲ್ಲಿ ಬ್ಯಾಂಕುಗಳ
ಬೇವು-ಬೆಲ್ಲದ ಸಮ್ಮಿಶ್ರಣ
ಸಮುದ್ರಮಥನದ ವೇಳೆ ಅಮೃತದ ಸಂಗಡ ವಿಷವೂ ಬಂದಂತೆ, ಯಾವುದಾದರೂ ಹೊಸ ಉಪಕ್ರಮಕ್ಕೆ ಮುಂದಾದಾಗ ಸಿಹಿಯ ಸಂಗಡ ಕಹಿಯೂ ಬರುತ್ತದೆ. ಅಂತೆಯೇ, ರಾಷ್ಟ್ರೀಕರಣದ ಸಂಗಡ ಒಂದಷ್ಟು ನಕಾರಾತ್ಮಕ ಬೆಳವಣಿಗೆಗಳೂ ಆಗಿವೆ. ಬ್ಯಾಂಕುಗಳಲ್ಲಿ ಏರುತ್ತಿರುವ ‘ಸುಸ್ತಿ ಸಾಲ’ವನ್ನು ಈ ವರ್ಗಕ್ಕೆ ಸೇರಿಸ ಬಹುದು. ರಾಷ್ಟ್ರೀಕರಣದ ನಂತರ ಬ್ಯಾಂಕುಗಳು ಮೈಚಳಿ ಬಿಟ್ಟು ಉದಾರವಾಗಿ ಸಾಲ ನೀಡಿದ್ದೇ ಈ ಪರಿಸ್ಥಿತಿಗೆ ಕಾರಣ ಎಂದು ಬ್ಯಾಂಕಿಂಗ್ ಕ್ಷೇತ್ರದ ವಿಶ್ಲೇಷಕರು ಹೇಳುತ್ತಾರೆ. ‘ಬ್ಯಾಂಕಿಂಗ್ ಉದ್ಯಮದಲ್ಲಿ ಪ್ರಸ್ತುತ ವಸೂಲಾಗದೆ ಸಿಲುಕಿಕೊಂಡಿರುವ ೫.೮೦ ಲಕ್ಷ ಕೋಟಿ ರುಪಾಯಿಯಷ್ಟು ಸುಸ್ತಿ ಸಾಲವು ರಾಷ್ಟ್ರೀಕರಣದ ಕೂಸು’ ಎಂದು ಕೆಲವರು ಆಡಿಕೊಳ್ಳುತ್ತಾರೆ. ಈ ಸುಸ್ತಿ ಸಾಲವು ಬ್ಯಾಂಕಿಂಗ್ ಉದ್ಯಮವನ್ನೇ ನಡುಗಿಸುತ್ತಿದೆ ಎಂಬ ಮಾತು ಬ್ಯಾಂಕಿಂಗ್ ಪಡಸಾಲೆಗಳಲ್ಲಿ ಕೇಳಿಬರುತ್ತಿದೆ.
ಸರಕಾರವು ಬ್ಯಾಂಕುಗಳಿಗೆ ಷೇರು ಬಂಡವಾಳ ನೀಡಲು ಕಷ್ಟಪಡುತ್ತಿದ್ದು, ಮುಂದಿನ ದಿನಗಳಲ್ಲಿ ಬ್ಯಾಂಕುಗಳಲ್ಲಿ ತನ್ನ ಷೇರು ಬಂಡವಾಳದ ಪ್ರಮಾಣವನ್ನು ಶೇ.೫೧ಕ್ಕಿಂತ ಕಡಿಮೆ ಮಾಡುವ ಚಿಂತನೆಯೂ ಅದಕ್ಕಿದೆ ಎಂಬ ಮಾತು ಮತ್ತೆ ಮತ್ತೆ ಕೇಳಿಬರುತ್ತಿದೆ. ಏರುತ್ತಿರುವ ಸುಸ್ತಿ ಸಾಲವನ್ನು ನಿಯಂತ್ರಿಸಲು ಖಾಸಗೀ ಕರಣದ ಮಾತು ಕೇಳಿಬರುತ್ತಿದೆ ಎಂದು ಕಾರ್ಮಿಕ ಸಂಘಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ರಾಷ್ಟ್ರೀಕರಣದ ೫೪ನೇ ವರ್ಷದಲ್ಲಿ ಖಾಸಗೀಕರಣದ ಮಾತು ಒಂದು ವಿಪರ್ಯಾಸವಲ್ಲದೆ ಮತ್ತೇನು ಎಂಬುದು ಈ ಸಂಘಗಳ ಟೀಕೆ. ಇದು ರಾಷ್ಟ್ರೀಕರಣ ವನ್ನು ಸರಿಯಾಗಿ ನಿಭಾಯಿಸಲಾಗದ್ದರ ಉದಾಹರಣೆಯೇ ಹೊರತು, ಇದು ‘ರಾಷ್ಟ್ರೀಕರಣ’ದ ಪರಿಕಲ್ಪನೆಯ ವೈಫಲ್ಯವಲ್ಲ ಎನ್ನುವ ಈ ಕಾರ್ಮಿಕ ಸಂಘಗಳು, ರಾಷ್ಟ್ರೀಕರಣ ಈಗ ‘ರಿವರ್ಸ್ ಗೇರ್’ನಲ್ಲಿ ಹೋಗುವ ತಯಾರಿಯಲ್ಲಿದೆ ಎಂದು ಅಭಿಪ್ರಾಯಪಡುತ್ತವೆ. ಒಟ್ಟಿನಲ್ಲಿ, ದಿಢೀರ್ ಎಂದು ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಮುಂದಾದಂತೆ ಅವುಗಳ ಖಾಸಗೀಕರಣವೂ ಅನಾವರಣಗೊಳ್ಳಬಹುದು ಎನ್ನುವ ಸೂಚನೆ ವಾಣಿಜ್ಯ ಕ್ಷೇತ್ರದಲ್ಲಿ ಘನೀಕರಿಸುತ್ತಿರುವುದಂತೂ ಖರೆ.
ಒಂದಿಷ್ಟು ಅಂಕಿ-ಅಂಶ
ರಾಷ್ಟ್ರೀಕರಣಗೊಂಡ ಘಟ್ಟದಲ್ಲಿ ಸದರಿ ೧೪ ಬ್ಯಾಂಕುಗಳು ದೇಶಾದ್ಯಂತ ೮,೨೬೨ ಶಾಖೆಗಳನ್ನು ಹೊಂದಿದ್ದವು. ಆ ಪೈಕಿ ೧,೮೩೨ ಶಾಖೆಗಳು (ಶೇ.೨೨) ಗ್ರಾಮೀಣ ಪ್ರದೇಶಗಳಲ್ಲಿ, ೩,೨೨೩ ಶಾಖೆಗಳು (ಶೇ.೪೦) ಪಟ್ಟಣಗಳಲ್ಲಿ, ೧,೪೪೭ ಶಾಖೆಗಳು ನಗರಗಳಲ್ಲಿ ಮತ್ತು ೧,೬೬೧ ಶಾಖೆಗಳು ಮಹಾನಗರ ಗಳಲ್ಲಿದ್ದವು. ಅವುಗಳಲ್ಲಿ ೪,೬೪೦ ಕೋಟಿ ರು. ಠೇವಣಿಯಿದ್ದು, ೩,೫೯೯ ಕೋಟಿ ರು. ಸಾಲ ನೀಡಿದ್ದವು. ಪ್ರತಿ ೬೦ ಸಾವಿರ ಜನಸಂಖ್ಯೆಗೆ ಒಂದು ಶಾಖೆ ಇದ್ದು, ಬ್ಯಾಂಕಿಂಗ್ ಉದ್ಯಮದಲ್ಲಿ ಒಟ್ಟು ೨.೨೦ ಲಕ್ಷ ಸಿಬ್ಬಂದಿ ಇದ್ದರು.
ಇಂದು ದೇಶವ್ಯಾಪಿ ಬ್ಯಾಂಕಿಂಗ್ ಉದ್ಯಮ ಪಸರಿಸಿದ್ದು ೧,೫೭,೮೬೮ ಬ್ಯಾಂಕ್ ಶಾಖೆಗಳಿವೆ. ಗ್ರಾಮಾಂತರ ಶಾಖೆಗಳ ಸಂಖ್ಯೆಯಲ್ಲಿ ಗಮನಾರ್ಹ ಪ್ರಗತಿ ಯಾಗಿದ್ದು, ಪ್ರಸ್ತುತ ೫೨,೯೧೪ರಷ್ಟು ಸಂಖ್ಯೆಯಲ್ಲಿವೆ. ಇದು ಒಟ್ಟು ಶಾಖೆಗಳ ಶೇ.೩೩ರಷ್ಟು ಪ್ರಮಾಣ ಎಂಬುದು ಗಮನಾರ್ಹ. ಠೇವಣಿ ಪ್ರಮಾಣ ೧೮೭.೦೫ ಟ್ರಿಲಿಯನ್ ರುಪಾಯಿಗಳಿಗೆ ಏರಿದ್ದರೆ, ಸಾಲದ ಪ್ರಮಾಣವು ೧೩೬.೭೫ ಲಕ್ಷ ಕೋಟಿ ರು.ನಷ್ಟಿದೆ.
ಐಟಿ ಮತ್ತು ರೇಲ್ವೆ ಇಲಾಖೆಗಳ ನಂತರದ ೩ನೇ ಅತಿದೊಡ್ಡ ಉದ್ಯಮವಾಗಿರುವ ಬ್ಯಾಂಕಿಂಗ್ ವಲಯದಲ್ಲಿ ಸುಮಾರು ೯.೮೦ ಲಕ್ಷ ಸಿಬ್ಬಂದಿಯಿದ್ದಾರೆ. ಇಂದು ಪ್ರತಿ ೮ರಿಂದ ೧೦ ಸಾವಿರ ಜನಸಂಖ್ಯೆಗೆ ಒಂದು ಬ್ಯಾಂಕ್ ಇದ್ದು, ಕನಿಷ್ಠ ನಾಗರಿಕ ಸೌಲಭ್ಯಗಳಿಲ್ಲದ ಮತ್ತು ದೋಣಿಗಳಲ್ಲಿ ಮಾತ್ರವೇ ತೆರಳಬಹುದಾದ
ಪ್ರದೇಶಗಳಲ್ಲೂ ಬ್ಯಾಂಕ್ ಶಾಖೆಗಳಿವೆ ಎಂಬುದು ಗಮನಾರ್ಹ.