Thursday, 12th December 2024

ಬನ್ನಂಜೆ: ಯಾರಿಗೂ ಅಂಜೆ, ಎಂದು ಬದುಕಿದವರು

ಪ್ರಾಣೇಶ್‌ ಪ್ರಪಂಚ

ಗಂಗಾವತಿ ಪ್ರಾಣೇಶ್‌

ಬನ್ನಂಜೆ ಗೋವಿಂದಾಚಾರ್ಯರೆಂದರೆ ನನಗೆ ಕೌತುಕ, ಅವರ ಬಗ್ಗೆ ನನಗೆ ತಿಳಿಯದೇ ಇದ್ದ ದಿನಗಳಲ್ಲಿ ಅವರ ಗಡ್ಡ, ಕನ್ನಡಕ ನೋಡಿ ನಾನು ಅವರನ್ನು ಮುಸ್ಲಿಂ ಎಂದೇ ಭಾವಿಸಿದ್ದೆ.

ಬೆಂಗಳೂರಿಗೆ ಹೋದ ಮೇಲೆ ಮಿತ್ರರಾದ ಬದರಿನಾಥ ಅವರಿಂದ ವೀಣಾ ಬನ್ನಂಜೆಯವರ ಪರಿಚಯವಾದ ಮೇಲೆ ಹಲವಾರು ಬಾರಿ ಗೋವಿಂದಾಚಾರ್ಯರನ್ನು ಹತ್ತಿರದಿಂದ ನೋಡುವ, ಕೇಳುವ, ಮಾತನಾಡಿಸುವ ಅವಕಾಶಗಳು ಒದಗಿಬಂದವು.
ಅವೆಲ್ಲ ಮಧುರ ನೆನಪುಗಳೆ, ಬನ್ನಂಜೆಯವರ ಮಿದುಳು, ಜ್ಞಾಪಕ ಶಕ್ತಿ, ಮಾತಿನ ನಿರರ್ಗಳತೆಗಳು ದೈವ ಕೃಪೆ, ಪೂರ್ವಾಜಿತ, ಅದ್ಭುತ, ಅಸದೃಶ, ಸ್ಮರಣೀಯ ಎಂಬ ಶಬ್ದಗಳಿಗೆ ಜೀವಂತ ಉದಾಹರಣೆಗಳು.

ಅನುಭವ, ಸುತ್ತಾಟ, ಅಧ್ಯಯನಗಳಂತೂ ಇವರು ಮನುಷ್ಯ ವೇಷತೊಟ್ಟ ಗಂಧರ್ವರು ಎನಿಸುವಂತಿದ್ದವು. ಅನಿಸಿದ್ದನ್ನು ನಿರ್ಭೀತರಾಗಿ ಹೇಳಿದರು, ಬರೆದರು, ಹಂಚಿಕೊಂಡರು, ಪೀಠಾಽಪತಿಗಳಿಗೇ ಪಾಠ ಹೇಳಿದರು, ಇತಿಹಾಸ ತಿರುಚುವವರಿಗೆ ತಿರುಗಿ ನಿಂತು ಉತ್ತರಿಸಿದರು. ಯಾರಿಗೂ ಅಂಜದ ಬನ್ನಂಜೆ, ಸದಾ ಸತ್ಯದ ಪರವಾಗಿಯೇ ನಿಂತರು. ನಾನು ಬನ್ನಂಜೆ, ಯಾರಿಗೂ ಅಂಜೆ ಎಂದೇ ಬದುಕಿ ತೋರಿಸಿದರು. ಅವರಿಲ್ಲವಾದರೂ ಇನ್ನು ಮುಂದೆ ನಮಗೆ ಸಾಗಲು ಅವರ ಬರಹ, ಭಾಷಣಗಳಿವೆ.

ವೇದ, ಉಪನಿಷತ್ತು, ಗೀತೆ, ಯಾವುದರಲ್ಲಿ ಕೇಳಿದರೂ, ಯಾವುದನ್ನು ಕೇಳಿದರೂ ತೃಪ್ತಿಯಾಗುವಂಥ ಉತ್ತರವನ್ನು ಕೊಡು ತ್ತಿದ್ದರು. ಎಂಭತ್ತರ ವಯಸ್ಸಿನಲ್ಲಿಯೂ ತೊದಲುತ್ತಿರಲಿಲ್ಲ, ತಡವರಿಸುತ್ತಿರಲಿಲ್ಲ, ಮರೆಯುತ್ತಿದ್ದಿಲ್ಲ, ಆಯಾ ವಯಸ್ಸಿನಲ್ಲಿ, ಆಯಾ ವಯಸ್ಸಿನವರಿಗೆ ಮಾದರಿಯಾಗುವಂತೆ ಬದುಕಿದ ಬನ್ನಂಜೆಯವರು ನಮ್ಮ ಕಾಲದ ನಮ್ಮ ಕಣ್ಮುಂದಿನ ಆದರ್ಶವಾಗಿ ದ್ದರು. ಅವರ ಕೆಲವು ಭಾಷಣಗಳ ಸಂಗ್ರಹ ಪುಸ್ತಕವೊಂದಿದೆ.

ಅದರ ಹೆಸರು ‘ಸಾರಸ್ವತ ಸಂಪತ್ತು’ ಅದರಲ್ಲಿ ಅವರು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮಾಡಿದ ಭಾಷಣದಲ್ಲಿ ಈ ವಿಚಾರವನ್ನು ಹೇಳಿ ತಮ್ಮ ಖೇದ, ಆಕ್ರೋಶಗಳನ್ನು ಯಾರಿಗೂ ಅಂಜದೇ ಮಾತನಾಡಿದ್ದಾರೆ. ದಡ್ಡರಿಗೆ ಎಲ್ಲರೂ ದಡ್ಡರಾಗಿ ಕಾಣುತ್ತಾರೆ. ಆದರೆ ವಿದ್ವಾಂಸರಿಗೆ ಎಲ್ಲರೂ ವಿದ್ವಾಂಸರಾಗಿ ಕಾಣುವುದಿಲ್ಲ. ಆದರೆ ವಿದ್ವಾಂಸರನ್ನು ಕೇಳುವವರು ಯಾರು? ರಾಜಕೀಯ ಎಲ್ಲವನ್ನು ಹೊಲೆಗೆಡಿಸಿ ಬಿಟ್ಟಿದೆ. ಕಮರ್ಷಿಯಲ್ ಮನೋವೃತ್ತಿಯಿಂದ ಸಾಹಿತ್ಯವೂ ಸೊರಗುತ್ತಿದೆ.

‘ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸದಸ್ಯನಾಗಿದ್ದಾಗ ನಡೆದ ಘಟನೆ ನೆನಪಾಗುತ್ತಿದೆ. ಸಂಸ್ಕೃತಿ ವಿಭಾಗದ ಅಧ್ಯಕ್ಷರಿಗೆ ಒಬ್ಬ ಹಿರಿಯ ಸರಕಾರಿ ಅಧಿಕಾರಿಗಳು ಫೋನ್ ಮಾಡಿ ಹೀಗೆ ಹೇಳಿದರು. ನಾನೊಬ್ಬ ವ್ಯಕ್ತಿಯನ್ನು ಕಳಿಸುತ್ತೇನೆ, ಆತನಿಗೆ ಈ ವರ್ಷದ ಶ್ರೇಷ್ಠ ಸಾಹಿತಿ ಪ್ರಶಸ್ತಿ ನೀಡಿ ಗೌರವಿಸಿ. ಅಧ್ಯಕ್ಷರು ಆತ ಏನು ಬರೆದಿದ್ದಾನೆಂದು ಕೇಳಿದರೆ, ಅಧಿಕಾರಿ ಹೇಳಿದ ಏನೂ ಬರೆದಿಲ್ಲ, ಫ್ಯಾಮಿಲಿ ಪ್ಲ್ಯಾನಿಂಗ್ ಬಗ್ಗೆ ಸರಕಾರಿ ಕವನ ಬರೆದಿದ್ದಾನೆ, ಸಾಲದಾ? ಎಲ್ಲಕ್ಕಿಂತ ಹೆಚ್ಚು ಆತನ ಜಾತಿಗೆ ಈ ತನಕ ಯಾವ ಸಾಹಿತ್ಯ ಪ್ರಶಸ್ತಿ ನೀಡಿಲ್ಲ. ಆತನಿರುವ ರೀಜನ್‌ಗೆ ಈ ತನಕ ನೀಡಿಲ್ಲ.

ಪ್ರಜಾಪ್ರಭುತ್ವದಲ್ಲಿ ಎಲ್ಲ ಜಾತಿಗೂ ಸಮಾನವಾದ ಮನ್ನಣೆ ನೀಡಬೇಕಲ್ಲವೆ?’ ಎಂದರಂತೆ. ನೊಂದ ಬನ್ನಂಜೆಯವರು.
ಹಾಗಾದರೆ ಸಾಹಿತ್ಯ ಪ್ರಶಸ್ತಿಗಳೆಂದರೆ ಜಾತಿವಾರು, ಪ್ರದೇಶವಾರು ಸರಿಯಾಗಿ ಪಾಲು ಮಾಡಿ ಹಂಚಬೇಕಾದ ಕಜ್ಜಾಯವೆ? ಎಂದು ಕೇಳಿದರು. ಮುಂದುವರಿದು ಬರೆಯುವ ಬನ್ನಂಜೆಯವರು ಹೀಗೆ ಒಟ್ಟು ಸಾಂಸ್ಕೃತಿಕ ಸೌಧವೆ ಗಟ್ಟಿ ಪಂಚಾಂಗವಿಲ್ಲದೆ
ಕುಸಿಯುತ್ತಿದೆ. ಯಾರಿಗೂ ಅದನ್ನು ಉಳಿಸುವ ಕಾಳಜಿ ಇಲ್ಲ, ಅಳಿದು ಹೋಗುತ್ತಿದೆಯಲ್ಲ ಎಂಬ ಕಳಕಳಿಯೂ ಇಲ್ಲ.

ಇತಿಹಾಸವನ್ನು ಮರೆತವನಿಗೆ ವರ್ತಮಾನವಿಲ್ಲ. ವರ್ತಮಾನ ಇರದವನಿಗೆ ಭವಿಷ್ಯವೂ ಇಲ್ಲ. ಇತಿಹಾಸದ ಪಂಚಾಂಗದ
ಮೇಲೆ ವರ್ತಮಾನದ ಕಟ್ಟಡ ಕಟ್ಟಬೇಕು. ಪಂಚಾಂಗ ಇರದ ಕಟ್ಟಡ ಬಹಳ ದಿನ ಬಾಳುವುದಿಲ್ಲ. ಇದು ಬನ್ನಂಜೆಯವರಿಗಿದ್ದ ಪ್ರಸ್ತುತ ಪರಿಸ್ಥಿತಿಯ ಕಾಳಜಿ, ಭಾಷೆಗಳ ಬಗ್ಗೆಯೂ ಅವರಿಗಿದ್ದ ಮಾಹಿತಿ ಬಾಯಿ, ಮೂಗಿನ ಮೇಲೆ ಬೆರಳಿಟ್ಟುಕೊಳ್ಳವಂಥದು. ಪುರಾಣದಲ್ಲಿ ಮೂರು ಭಾಷೆಗಳಿವೆಯಂತೆ. ಒಂದೇ ಭಾಷೆಯಲ್ಲಿ ಮೂರು ರೀತಿ ಭಾಷೆ ಬಳಸಿದ್ದಾರೆ. ‘ರೀತಿನಾಂ ಶತಮೇವಚ’ ನೂರು ರೀತಿಗಳಿವೆ.

‘ವ್ಯತ್ಯಾಸಾದೀನ್ ಸಪ್ತಭೇದಾನ್’ ಏಳು ಪ್ರಬೇಧಗಳಿವೆ. ಇಷ್ಟೆಲ್ಲ ತಿಳಿದುಕೊಂಡವನು ಮಾತ್ರ ಪುರಾಣಕ್ಕೆ ಅರ್ಥ ಹಚ್ಚಬಹುದು. ಸಂಸ್ಕೃತದಲ್ಲಿ ಒಂದು ತಮಾಷೆ ಇದೆ. ನರಕಕ್ಕೆ ಹೋಗಬೇಕೆನ್ನುವವರಿಗೆ ಸುಲಭದ ಎರಡು ವಿಧಾನಗಳೆಂದರೆ ಒಂದು ಪೌರೋಹಿತ್ಯ ಮಾಡಿರಿ, ಎರಡನೇಯದು ಪುರಾಣ ಹೇಳಿರಿ ಎಂದು.

ಏನಿದು ಸಾರ್? ಪೌರೋಹಿತ್ಯ, ಪುರಾಣ ಹೇಳುವುದು ಎರಡೂ ಪುಣ್ಯದ ಕೆಲಸಗಳಲ್ಲವೆ? ಇದರಿಂದ ನರಕವೆ? ಎನ್ನುತ್ತಿರಾ? ಹಾಗಾದರೆ ಕೇಳಿ, ಇದರರ್ಥ ಏನೆಂದರೆ, ನಾನೊಬ್ಬನೇ ಪುರಾಣ ಓದಿ ತಪ್ಪು ಅರ್ಥ ಮಾಡಿಕೊಂಡರೆ ನಾನು ಒಬ್ಬ ಕೆಟ್ಟೆ, ಆದರೆ ನಾನು ಓದಿದ ಮೇಲೆ ಜನಕ್ಕೆಲ್ಲ ಪುರಾಣ ಹೇಳಲಿಕ್ಕೆ ಶುರು ಮಾಡಿ, ಅವರೆಲ್ಲರನ್ನು ನನ್ನಂತೆ ಕೆಡಿಸಿದರೆ, ಇಡೀ ಊರು ಕೆಟ್ಟ ಹಾಗಾಯಿತು ಅಲ್ಲವೆ? ಪುರಾಣಗಳಿಗೆ ಶಾಬ್ಧಿಕವಲ್ಲದ ಬೇರೆ ಅರ್ಥವಿದೆ.

ಅದು ಎಲ್ಲ ಅಧ್ಯಾತ್ಮ ಸಾಹಿತ್ಯದಲ್ಲೂ ಇದೆ. ಅದಕ್ಕೆ ರಹಸ್ಯಾರ್ಥ ಅಂತಾರೆ. ವಾಚ್ಯಾರ್ಥ ಹಾಗೂ ರಹಸ್ಯಾರ್ಥ ಎಂಬವುಗಳೇ ಎಲ್ಲ ಧಾರ್ಮಿಕ ಗ್ರಂಥಗಳಲ್ಲೂ ಇವು ಇವೆ. ಇವೆರೆಡೂ ಅಲ್ಲದೆ ಇನ್ನೊಂದು ಗುಹ್ಯಭಾಷೆ ಎಂಬುದೊಂದಿದೆ ಪುರಾಣಗಳಲ್ಲಿ.
ಉದಾಹರಣೆಗೆ, ಅಟ್ಟ ಶೂಲಾ ಜನಪದಾಃ ಶಿವಶೂಲಾ ದ್ವಿಜಾತಯಃ |
ಕಾಮಿನ್ಯಃ ಕೇಶ ಶೂಲಿನ್ಯ ಸಂಭವಂತಿ ಕಲೌಯುಗೇ ||
ಏನಿದು? ಅರ್ಥವಾಗುವುದಿಲ್ಲ. ಶಬ್ದಶಃ ಅರ್ಥ
ಮಾಡಿದರೆ, ಕಲಿಯುಗದಲ್ಲಿ ಜನರು ಅಟ್ಟಶೂಲರಾಗುತ್ತಾರೆ ಎಂದಿದೆ? ಇದರ ಗುಹ್ಯಾರ್ಥ ಬಿಡಿಸಿದರೆ, ಅಟ್ಟ ಎಂದರೆ ಉಪ್ಪರಿಗೆ, ಶೂಲ ಎಂದರೆ ತಲೆನೋವು, ತಲೆನೋವು ಬಂದಾಗ ಉಪ್ಪರಿಗೆಗೆ ಹೋಗುತ್ತಾರೆಯೇ? ಏನು ಕಥೆ? ಹಾಗೆಯೆ ಶಿವಶೂಲಾ
ದ್ವಿಜಾತಯಃ ಅಂದರೆ ಶಿವನ ಶೂಲ, ಬ್ರಾಹ್ಮಣರ ಕೈಗೆ ಯಾಕೆ ಬಂತು? ವಾಚ್ಯಾರ್ಥ ಶಬ್ದ ಸಹ ಅರ್ಥ ಮಾಡಿಕೊಂಡರೆ
ನಮ್ಮ ತಲೆ ಕೆಟ್ಟು ಹೋಗಿ, ಪುರಾಣಗಳೆಲ್ಲ ಗೊಳ್ಳು, ಅಸಂಬದ್ಧ, ಕಲ್ಪಿತ ಎನಿಸಿಕೊಳ್ಳುತ್ತವೆ.

ಇನ್ನು ಕಾಮಿನ್ಯಃ ಕೇಶಶೂಲಿನ್ಯಃ ಎಂದರೆ ಹೆಣ್ಣುಮಕ್ಕಳಿಗೆ ತಲೆಕೂದಲಿನ ನೋವು ಎಂದಂತೆ ಆಗುತ್ತದೆ. ಇಲ್ಲಿ ಅತ್ಯಂತ ಸರಳವಾದ ಕಲಿಯುಗದ ಭವಿಷ್ಯವನ್ನು ಹೀಗೆ ಗುಹ್ಯವಾಗಿ ಹೇಳಲಾಗಿದೆ. ಈಗ ಇದರ ನಿಜವಾದ ಅರ್ಥ ನೋಡೋಣ, ಅಟ್ಟ ಶೂಲಾ ಜನಪದ ಎಂದರೆ, ಅಟ್ಟ ಎಂದರೆ ಸಂಸ್ಕೃತದ್ದಲ್ಲ. ಕನ್ನಡದ ಅಟ್ಟ, ಅಟ್ಟು ಉಣ್ಣುವದು ಅನ್ನುತ್ತಾರಲ್ಲ ಅದು, ಶೂಲ ಅಂದರೆ ವ್ಯಾಪಾರ, ಅಟ್ಟ ಶೂಲ ಎಂದರೆ, ಬೇಯಿಸಿದ ಅನ್ನದ ವ್ಯಾಪಾರ ಎಂದರೆ ಹೋಟೆಲ್, ಖಾನಾವಳಿ, ಲಂಚ್
ಹೋಮ್‌ಗಳನ್ನಿಡುವ ಅಂಗಡಿಗಳೆಂದರ್ಥ.

ಕಲಿಯುಗದಲ್ಲಿ ಜನ ಅನ್ನವನ್ನು ಮಾರಾಟ ಮಾಡಿ ಬದುಕುತ್ತಾರೆ ಎಂದರ್ಥ. ಇದು ತಲೆಯನ್ನು ಕರಪರ ಕೆರೆದುಕೊಂಡು, ಗೋಡೆಗೆ ಜಜ್ಜಿದರೂ ಅರ್ಥವಾಗದ ಗುಹ್ಯ ಭಾಷೆಯ ಅರ್ಥ! ಹಾಗೆಯೇ ಎರಡನೆಯದು, ‘ಶಿವಶೂಲಾ ದ್ವಿಜಾತಯಃ’, ಶಿವ ಎಂದರೆ ಇಲ್ಲಿ ವೇದ, ಶೂಲ ಎಂದರೆ ವ್ಯಾಪಾರ, ಅಂದರೆ ಬ್ರಾಹ್ಮಣರು ವೇದ ಓದಿ, ಹೇಳಿ, ಅಧ್ಯಯನದಿಂದ ಬದುಕುವುದಿಲ್ಲ. ವೇದವನ್ನು ಮಾರಾಟ ಮಾಡಿ ಬದುಕುತ್ತಾರೆ.

ಇನ್ನು ಕೇಶ ಶೂಲಿನ್ಯ ಅಂದರೆ ಕೂದಲು. ಕೂದಲು ವ್ಯಾಪಾರ ಅಂದರೆ ಚೌರಿ ಕೂದಲು ವಿಗ್‌ಗಾಗಿ ಅಲ್ಲ, ಇಲ್ಲಿ ಮೊದಲು
ಕಾಮಿನ್ಯ ಎಂದು ಬಂದಿದೆ, ಅಂದರೆ ಕಾಮಿನಿಯರು, ತಮ್ಮ ರಹಸ್ಯಾಂಗ ಮಾರಿ ಬದುಕುತ್ತಾರೆ. ಅಂದರೆ ವೇಶ್ಯಾವಾಟಿಕೆಗಳಿಂದ ಬದುಕುತ್ತಾರೆ. ಇದೇ ಕಲಿಯುಗದ ಪಾಠಗಳು ಎಂದು ಅರ್ಥ. ನೋಡಿದಿರಾ ಕನ್ನಡದ ಗುಹ್ಯ ಭಾಷೆಯ ಸೊಗಸನ್ನು!

ಹೀಗೆ ಬನ್ನಂಜೆಯವರ ಓದು, ತಿರುಗಾಟ ಅಸಾಧಾರಣವಾದದ್ದು. ಪಂಢರಪುರ, ಮದ್ರಾಸ್, ಸಮ್ಮೇಳನಗಳ ಅಧ್ಯಕ್ಷತೆಯಲ್ಲಿ ಇವರು ನೀಡಿದ ಅಧ್ಯಕ್ಷೀಯ ಭಾಷಣ ಚಿರಕಾಲ ಉಳಿಯುವಂಥ ವಿಷಯಗಳನ್ನೊಳಗೊಂಡವು. ಮಧ್ವಾಚಾರ್ಯರನ್ನು, ಮಧ್ವ ತತ್ವಜ್ಞಾನವನ್ನು, ಬನ್ನಂಜೆಯವರಷ್ಟು ಸರಳವಾಗಿ, ಉದಾಹರಣೆಗಳ ಮೂಲಕ ಈಗಿನ ಯುವಕರಿಗೂ ಮೆಚ್ಚಿಕೆಯಾಗುವಷ್ಟು ಹೇಳುವ ಕಲೆ ಇವರಿಗಲ್ಲದೇ ಮತ್ತೊಬ್ಬರಿಗೆ ಸಿದ್ದಿಸುವುದು ಕಷ್ಟವಾದದ್ದು.

ಇವರು ಭಾಷಣದಲ್ಲಿ ಗಾದೆ ಮಾತು, ನಾಣ್ಣುಡಿಗಳನ್ನು, ನಮ್ಮ ಹಾಗೆ ಎರವಲು ತಂದು ಹೇಳುತ್ತಿದ್ದಿಲ್ಲ. ಅವರಿಂದಲೇ ಅಲ್ಲೇ ರಚಿತವಾಗಿ ಬಿಡುತ್ತಿದ್ದವು. ಪೆನ್ನು, ನೋಟು ಪುಸ್ತಕಗಳಿಲ್ಲದೇ ಇವರ ಉಪನ್ಯಾಸಕ್ಕೆ ಕುಳಿತರೆ, ಆಮೇಲೆ ಅವರು ಹೇಳಿದ್ದು ಖಂಡಿತ ನಮಗೆ ಪುನರುಚ್ಛರಿಸಲೂ ಸಾಧ್ಯವಾಗುತ್ತಿರಲಿಲ್ಲ.

ಈ ಅವರ ಮಾತುಗಳನ್ನು ಕೇಳಿ, ಎಂದೆಂದಿಗೂ ನಿತ್ಯ ನೂತನ ವಿಚಾರದ ವಾಕ್ಯ ಸರಣಿ ‘ಉತ್ತಿಷ್ಠತ, ಜಾಗ್ರತ, ಪ್ರಾಪ್ಯವರಾನ್ ನಿಭೋದತ’ ಎಂಬ ಉಪನಿಷತ್ತಿನ ಕರೆ ನಮ್ಮನ್ನು ಮುಟ್ಟಬೇಕು, ನಮ್ಮನ್ನು ತಟ್ಟಬೇಕು, ಒಳಗೆ ತುಂಬಿರುವ ಪೂರ್ವಾಗ್ರಹದ ಕೊಳೆಯನ್ನು ತೊಳೆದು ತಿಳಿಯಾದ ಹೃದಯದಿಂದ ಬೆಳಕನ್ನು ಸ್ವಾಗತಿಸಲು ಅಣಿಯಾಗಬೇಕು.

ಅದಕ್ಕೆ ತಟ್ಟೆ ತೊಳೆದು ಖಾಲಿ ಮಾಡಬೇಕು. ಥಳಥಳಿಸುವ ತಟ್ಟೆಯಲ್ಲಿ ಸ್ವಚ್ಛ ಹಾಲನ್ನು ತುಂಬೋಣ. ಅದಕ್ಕಾಗಿ ತಲೆಯೊಳಗೆ ತುಂಬಿದ್ದನ್ನೆ ಶಾಸಗ್ರಂಥಗಳಲ್ಲಿ ಕಾಣುವ ಬದಲು, ಶಾಸಗಳಲ್ಲಿದ್ದುದನ್ನು ತಲೆಯೊಳಗೆ ತುಂಬಲು ಕಲಿಯೋಣ. ಸತ್ಯ ಎಂದೂ ತರ್ಕದಿಂದ ಸಿದ್ದವಾಗುವುದಿಲ್ಲ. ಏಕೆಂದರೆ ತರ್ಕ ನಮ್ಮ ನಂಬಿಕೆಯ ಮರಿ. ನಮ್ಮ ನಂಬಿಕೆಯಂತೆಯೇ ನಮ್ಮ ತರ್ಕ, ಬುದ್ಧಿವಂತಿಕೆ ಇನ್ನಷ್ಟು ತರ್ಕ ಮಾಡಿ ಮಾಡಿ ಸಂಶಯವನ್ನೇ ಸಿದ್ಧಾಂತ ಮಾಡಿಬಿಡುತ್ತದೆ.

ಮನಸ್ಸಿನ ಮಟ್ಟದಲ್ಲೇ ಸಂಶಯ ನಿವಾರಿಸಿ ಕೊಳ್ಳಿ, ಅದನ್ನು ಬುದ್ದಿಗೆ ರವಾನಿಸಬೇಡಿ, ಏಕೆಂದರೆ ಬುದ್ಧಿವಂತಿಕೆಯ ಸಂಶಯಕ್ಕೆ ಪರಿಹಾರವೇ ಇಲ್ಲ, ಇಂತಹ ಮಧ್ವರ ವಿಚಾರವನ್ನು ಕನ್ನಡಕ್ಕೆ ಕೊಟ್ಟವರು ಬನ್ನಂಜೆ. ಇದು ಬನ್ನಂಜೆಯವರ ಬೌದ್ಧಿಕ ಮಟ್ಟ!
ಪಂಢರಪುರದ ಸಾಹಿತ್ಯ ಸಮ್ಮೇಳನದ ಕೊನೆಯದಾಗಿ ತಮ್ಮ ಭಾಷಣ ಮುಗಿಸುವ ಮುನ್ನ ಈ ನಾಲ್ಕು ಸಾಲಿನ ಪದ್ಯ ಹೇಳಿದರು.

ಹರಸಯ್ಯ ನಮ್ಮನ್ನು ಉಡುಪಿಯಾ ತುಳುವ ವಿಠಲ ಹರಸಯ್ಯ ನಮ್ಮನ್ನು ತಿರುಪತಿಯಾ ತೆಲುಗ ವಿಠಲ ಹರಸಯ್ಯ ನಮ್ಮನ್ನು ಪಂಢರಾಪುರದ ಕಾನಡೀ ವಿಠಲ ಹರಸಯ್ಯ ತುಳು, ತೆಲುಗು, ಕನ್ನಡ, ಮರಾಠಿಗಳ ನಂಟು ಬಿಗಿಗೊಳಿಸಯ್ಯ ಗೋವಿಂದ ವಿಠಲ. ಇಂತಹ ಕನ್ನಡ, ಸಂಸ್ಕೃತ, ತುಳು ಭಾಷೆಗಳ ಎರಕ ಹೋಯ್ದಂತಿದ್ದ ಕನ್ನಡದ ಆಸ್ತಿಯಾಗಿದ್ದ ಶ್ರೀ ಬನ್ನಂಜೆ ಗೋವಿಂದಾ ಚಾರ್ಯರನ್ನು ನಾವು ಕಳೆದುಕೊಂಡಿದ್ದೇವೆ. ಮತ್ತೆ ಈ ಕನ್ನಡದ ನೆಲದಲ್ಲೇ ಅವರು ಹುಟ್ಟಿ ಬರುತ್ತಾರೆಂಬ ಭರವಸೆಯನ್ನು ಇಟ್ಟುಕೊಂಡಿದ್ದೇವೆ. ಅವರ ಸ್ಮರಣೆಗೆ ನಮೋ ನಮಃ.