Friday, 22nd November 2024

ನತದೃಷ್ಟ ಬಾರ್ಥಲೋಮಿಯೋ ಯುಸ್ಟಾಷಿ

ಹಿಂದಿರುಗಿ ನೋಡಿದಾಗ

ಅಂಗರಚನಾ ವಿಜ್ಞಾನದ ತ್ರಿಮೂರ್ತಿಗಳು ಎಂದು ಪ್ರಸಿದ್ಧರಾದವರು ಬಾರ್ಥಲೊಮಿಯೊ ಯುಸ್ಟಾಷಿ, ಆಂಡ್ರಿಯಸ್
ವೆಸಾಲಿಯಸ್ ಮತ್ತು ಗೇಬ್ರಿಯಲ್ ಫೆಲೋಪಿಯೊ.

ಇವರು ಸರಿಸುಮಾರು ಸಮಕಾಲೀನರು. ಆದರೆ ಆಧುನಿಕ ಅಂಗರಚನಾ ವಿಜ್ಞಾನದ ಹರಿಕಾರ ಎಂಬ ಕೀರ್ತಿ ಆಂಡ್ರಿಯಸ್ ವೆಸಾಲಿಯಸ್‌ಗೆ ಮಾತ್ರ ದೊರೆತಿದೆ. ಈತ ೧೫೪೩ರಲ್ಲಿ ಪ್ರಕಟಿಸಿದ ‘ಡಿ ಹ್ಯೂಮಿನಿ ಕಾರ್ಪೊರಸ್ ಫ್ಯಾಬ್ರಿಕ್’ ಎಂಬ ೭ ಸಂಪುಟಗಳ ಅಂಗರಚನಾ ವಿಜ್ಞಾನದ ಕೃತಿ ಈತನನ್ನು ಅಮರನನ್ನಾಗಿಸಿದೆ. ಅನಾರೋಗ್ಯ ಹಾಗೂ ದುರದೃಷ್ಟದಿಂದಾಗಿ ಯುಸ್ಟಾಷಿಯಂಥವರು ಕಾಲದ ಕತ್ತಲಲ್ಲೇ ಉಳಿದುಹೋಗುವಂತಾಗಿದ್ದು ಖೇದನೀಯ ವಿಚಾರ.

ಗೇಬ್ರಿಯಲ್ ಫೆಲೋಪಿಯ ಅಕಾಲ ಮೃತ್ಯುವಿಗೀಡಾದ. ಬಾರ್ಥಲೋಮಿಯೋ ಯುಸ್ಟಾಷಿ ಇಟಲಿಯ ಸ್ಯಾನ್ ಸೆವರಿನೊ ಎಂಬಲ್ಲಿ ಹುಟ್ಟಿದ. ಈತನ ತಂದೆ ಮೇರಿಯಾನೋ ಯುಸ್ಟಾಷಿ, ತಾಯಿ ಫ್ರಾನ್ಸೆಸ್ಕ ಯುಸ್ಟಾಷಿ. ಈತ ಪ್ರಖ್ಯಾತ ಶ್ರೀಮಂತ ಕುಟುಂಬಕ್ಕೆ ಸೇರಿದವನು. ತನ್ನ ಕಾಲದ ಪ್ರಖ್ಯಾತ ವೈದ್ಯನೇ ಆಗಿದ್ದ ತಂದೆಗೆ ಮಗನೂ ವೈದ್ಯನಾಗ ಬೇಕೆಂಬ ಆಸೆಯಿತ್ತು. ಹೀಗಾಗಿ ಹಿಬ್ರೂ, ಗ್ರೀಕ್, ಅರಾಬಿಕ್ ಭಾಷೆಗಳಲ್ಲಿ ಪಾಂಡಿತ್ಯ ಪಡೆಯಲು ಮಗನಿಗೆ ಹೇಳಿದ.

ಚೀನ ವೈದ್ಯಕೀಯ ಗ್ರಂಥಗಳನ್ನು ಮೂಲಭಾಷೆಗಳಲ್ಲಿಯೇ ಓದಿ ಗ್ರಹಿಸಿದರಷ್ಟೇ ಉತ್ತಮ ವೈದ್ಯನಾಗಲು ಸಾಧ್ಯ ಎಂದಾತ ಭಾವಿಸಿದ್ದ. ರೋಮ್ ನಗರದ ಆರ್ಕಿಜಿನಾಸಿಯೊದೆಲ್ಲ ಸ್ಯಾಪಿಯೆಂಜ ಎಂಬ ವೈದ್ಯಕೀಯ ವಿದ್ಯಾಲಯದಲ್ಲಿ ವೈದ್ಯಶಿಕ್ಷಣವನ್ನು ಪೂರೈಸಿದ ಯುಸ್ಟಾಷಿ, 1540ರಲ್ಲಿ ಹುಟ್ಟೂರು ಸ್ಯಾನ್ ಸೆವರಿನೋಗೆ ಬಂದು ವೈದ್ಯವೃತ್ತಿ ಆರಂಭಿಸಿದ. ಗ್ರೀಕ್ ಭಾಷೆಯಲ್ಲಿದ್ದ ಹಿಪ್ಪೋಕ್ರೇಟ್ಸ್ ಹಾಗೂ ಅರಾಬಿಕ್ ಭಾಷೆಗಳಲ್ಲಿದ್ದ ಅವಿಸೆನ್ನನ ಗ್ರಂಥಗಳನ್ನು ಅನುವಾದಿಸಿದ. ಯುಸ್ಟಾಷಿಯ ಪ್ರತಿಭೆಯನ್ನು ಗಮನಿಸಿದ ಡ್ಯೂಕ್ ಆಫ್ ಅರ್ಬಿನೊ, ಅವನನ್ನು ತನ್ನ ಖಾಸಗಿ ವೈದ್ಯನಾಗಿ ನೇಮಿಸಿಕೊಂಡ.

ಈತನಿಗೆ ಕಾರ್ಡಿನಲ್ ಗಿಲಿಯೊ ದೆಲ್ಲ ರೋವೇರ್ ಎಂಬ ತಮ್ಮನಿದ್ದ. ಅವನ ಜತೆಗೂಡಿ 1549ರಲ್ಲಿ ರೋಮ್‌ಗೆ ಮರಳಿದ. ದೆಲ್ಲ ಸ್ಯಾಪಿಯೆಂಜ ಕಾಲೇಜಿನಲ್ಲಿ ಅಂಗರಚನಾ ವಿಜ್ಞಾನದ ಪ್ರಾಚಾರ್ಯನಾಗಿ ನೇಮಕಗೊಂಡ. ಪ್ರಾಚಾರ್ಯನಾಗಿದ್ದ ಕಾರಣ ಯುಸ್ಟಾಷಿಗೆ ಶವಗಳು ಸುಲಭವಾಗಿ ದೊರೆಯುತ್ತಿದ್ದವು. ಹಾಗಾಗಿ ಆತ ಪಾರಂಪರಿಕವಾಗಿ ಬಂದಿದ್ದ ಅಂಗರಚನಾ ಜ್ಞಾನವನ್ನು
ಒಪ್ಪದೆ ತಾನೇ ಮಾನವ ಶರೀರವನ್ನು ಛೇದಿಸಿ, ಒಂದೊಂದು ಅಂಗವನ್ನೂ ಪ್ರತ್ಯೇಕವಾಗಿ ಅಧ್ಯಯನ ಮಾಡಿದ.

ಯುಸ್ಟಾಷಿ ೧೫೬೧ರಲ್ಲಿ ಮಾನವ ದೇಹದ ಮೂಳೆಗೆ ಸಂಬಂಧಿಸಿದ ‘ಆಸಿಯಮ್ ಎಕ್ಸಾಮೆನ್’ ಮತ್ತು ತಲೆಗೆ ಸಂಬಂಧಿಸಿದ ‘ಡಿ ಮೋಟು ಕ್ಯಾಪಿಟಸ್’ ಪ್ರಬಂಧಗಳನ್ನು ಪ್ರಕಟಿಸಿದ. ಈ ಪ್ರಬಂಧಗಳಲ್ಲಿ ಗ್ಯಾಲನ್ ನಿಲುವನ್ನು ಬೆಂಬಲಿಸಿದ್ದ. ಆದರೆ ಯುಸ್ಟಾಷಿ ಸ್ವಯಂ ಶವವಿಚ್ಛೇದನ ಮಾಡಲಾರಂಭಿಸಿದಾಗ, ಗ್ಯಾಲನ್ನನ ಹಲವು ನಿಲುವುಗಳನ್ನು ತಪ್ಪಾಗಿರುವುದನ್ನು ಮನಗಂಡ. ಗ್ಯಾಲನ್‌ನನ್ನು ಕಣ್ಣು ಮುಚ್ಚಿ ಅನುಸರಿಸುವ ಬದಲು ಸ್ವತಂತ್ರ ಅಧ್ಯಯನವನ್ನು ಮುಂದುವರಿಸಿದ.

೧೫೬೨-೬೩ರಲ್ಲಿ, ಮಾನವ ದೇಹದ ಮೂತ್ರಪಿಂಡ ರಚನೆಗೆ ಸಂಬಂಧಿಸಿ ‘ಡಿ ರೀನಮ್ ಸ್ಟ್ರಕ್ಟುರ’ ಕಿವಿಗಳಿಗೆ ಸಂಬಂಧಿಸಿ ‘ಡಿ ಆಡಿಟಸ್ ಆರ್ಗ್ಯಾನಿಸ್’ ಹಲ್ಲುಗಳಿಗೆ ಸಂಬಂಽಸಿ ‘ಡಿ ಡೆಂಟಿಬಸ್’ ಸಿರೆಗಳ ವ್ಯವಸ್ಥೆಗೆ ಸಂಬಂಧಿಸಿ ‘ಡಿ ವೀನ ಕ್ವೆ ಅಜೈಗಸ್ ಗ್ರೇಸಿಸ್ ಡಿಸಿಟ್ಯೂರ್’ ಎಂಬ ಪ್ರಬಂಧಗಳನ್ನು ಬರೆದ. ಕೊನೆಗೆ ಈ ಬಿಡಿಪ್ರಬಂಧಗಳನ್ನೆಲ್ಲ ಸೇರಿಸಿ ‘ಒಪಸ್ಕ್ಯುಲ ಅನಟಾಮಿಕ’
ಎನ್ನುವ ಪುಸ್ತಕ ಪ್ರಕಟಿಸಿದ. ಇದನ್ನು ಅಂಗರಚನೆಯ ಲಘುಹೊತ್ತಿಗೆ ಎಂದು ಅನುವಾದಿಸಬಹುದು.

ಮಾನವ ಭ್ರೂಣ, ನವಜಾತ ಶಿಶು ಹಾಗೂ ಶಿಶುಗಳ ಶವಗಳನ್ನು ಛೇದಿಸಿದ ಯುಸ್ಟಾಷಿ ಅವುಗಳ ಹಲ್ಲುಗಳ ರಚನೆಯನ್ನು ವಿಶದವಾಗಿ ಅಧ್ಯಯನ ಮಾಡಿದ. ಇದು ಅಂಗರಚನಾ ವಿಜ್ಞಾನ ಕ್ಷೇತ್ರದಲ್ಲಿನ ಇಂಥ ಮೊದಲ ಅಧ್ಯಯನವಾಗಿತ್ತು. ಹಾಲು ಹಲ್ಲುಗಳು ಹಾಗೂ ವಯಸ್ಕ ಹಲ್ಲುಗಳ ಬಗ್ಗೆ ವಿವರಿಸಿದ, ಹಲ್ಲಿನ ರಚನೆ ಕುರಿತು ಅದುವರೆಗೂ ವಿಜ್ಞಾನಕ್ಕೆ ತಿಳಿಯದ ಹೊಸ ವಿಚಾರಗಳನ್ನು ತಿಳಿಸಿಕೊಟ್ಟ.

ಹಲ್ಲಿನ ಹೊರಭಾಗ ಗಡುಸಾದ ವಸ್ತುವಿನಿಂದಾಗಿದ್ದು, ಒಳಭಾಗದಲ್ಲಿ ಮೃದುರಚನೆಯಿರುವುದನ್ನು ತೋರಿಸಿದ. ಹಲ್ಲುಗಳ ಅತಿಸಂವೇದನೆಯ ಕುರಿತು ದಾಖಲಿಸಿದ ನಾದರೂ ಅದಕ್ಕೆ ಕಾರಣ ತಿಳಿಸಲು ಅಸಮರ್ಥನಾಗಿದ್ದ. ಇಂದಿಗೂ ಇದಕ್ಕೆ ಸೂಕ್ತವಿವರ ನೀಡಲಾಗಿಲ್ಲ. ಮಾನವ ಕಿವಿಯ ರಚನೆಯಲ್ಲಿ ಹೊರಕಿವಿ, ನಡುಕಿವಿ ಮತ್ತು ಒಳಕಿವಿ ಎಂಬ ೩ ಭಾಗಗಳಿವೆ. ಹೊರಕಿವಿ-ನಡುಕಿವಿಯ ನಡುವೆ ಕಿವಿತಮಟೆಯಿದ್ದು ಇದಕ್ಕೆ ಹೊಂದಿಕೊಂಡಂತೆ ೩ ಪುಟ್ಟ ಮೂಳೆಗಳಿವೆ.

ಇವು ಶ್ರವಣಾಸ್ಥಿಗಳು, ಶಬ್ದರವಾನೆಯಲ್ಲಿ ಪಾಲ್ಗೊಳ್ಳುತ್ತವೆ. ಮೊದಲನೆಯದು ಮುದ್ಗರಾಸ್ಥಿ ಅಥವ ಸುತ್ತಿಮೂಳೆ (ಮ್ಯಾಲಿಯಸ್) ಎರಡನೆಯದು ಸ್ಥೂಣಾಸ್ಥಿ ಇಲ್ಲವೇ ಅಡಿಮೂಳೆ (ಇಂಕಸ್) ಹಾಗೂ ಮೂರನೆಯದು ಲಾಳಾಸ್ಥಿ ಅಥವ ರಿಕಾಪು ಮೂಳೆ (ಸ್ಟೇಪಿಸ್). ಮ್ಯಾಲಿಯಸ್ ಮೂಳೆಯನ್ನು ನಿಯಂತ್ರಿಸುವ ಟೆನ್ಸರ್ ಟಿಂಪಾನಿ ಎಂಬ ಸ್ನಾಯುವಿದೆ. ರಿಕಾಪು ಮೂಳೆಯನ್ನು ನಿಯಂತ್ರಿಸುವ ಸ್ಟೆಪೀಡಿಯಸ್ ಸ್ನಾಯುವಿದೆ. ಈ ಅಸ್ಥಿಗಳನ್ನು ಹಾಗೂ ಸ್ನಾಯುವನ್ನು ಯುಸ್ಟಾಷಿ ವಿವರಿಸಿದ.
ಈ ನಡುಕಿವಿಗೆ ಹೊಂದಿಕೊಂಡಂತೆ ಒಂದು ನಳಿಕೆಯಿದ್ದು ಅದು ನಡುಕಿವಿಯಲ್ಲಿ ಆರಂಭವಾಗಿ ಗಂಟಲ ಪ್ರದೇಶದೊಳಗೆ ತೆರೆದುಕೊಳ್ಳುತ್ತದೆ. ಹಾಗಾಗಿ ಇದನ್ನು ಕರ್ಣಕಂಠ ನಳಿಕೆ ಎನ್ನುವುದುಂಟು.

ಮನುಷ್ಯರಲ್ಲಿ ಇಂಥ ನಳಿಕೆಯಿರುವ ಬಗ್ಗೆ ಮೊದಲು ತಿಳಿಸಿದವ ಕ್ರಿ.ಪೂ. ೬ನೆಯ ಶತಮಾನದ ಗ್ರೀಸ್ ದೇಶದ ಅಂಗರಚನಾ ವಿಜ್ಞಾನಿ ಅಲ್ಕ್ಮಿಯಾನ್. ಆದರೆ ಇದನ್ನು ಟ್ಯೂಬಾ ಆಡಿಟಿವ ಎಂದು ಕರೆದು, ಮೊದಲಿಗೆ ಇದರ ಸಂಪೂರ್ಣ ವಿವರಣೆ ನೀಡಿದ್ದು
ಯುಸ್ಟಾಷಿ. ಹಾಗಾಗಿ ಇದನ್ನು ಯುಸ್ಟೇಷಿಯನ್ ನಳಿಕೆ ಎನ್ನುವುದುಂಟು. ಇದು ನೇರವಾಗಿ ಗಂಟಲು ಹಾಗೂ ಮಧ್ಯಕಿವಿಯ ನಡುವೆ ಸಂಪರ್ಕ ರೂಪಿಸುತ್ತದೆ.

ಕಿವಿತಮಟೆಯ ಹೊರಗಡೆ ಪರಿಸರದ ಗಾಳಿಯು ಒತ್ತಡ ಬೀರುತ್ತಿರುತ್ತದೆ. ಅದಕ್ಕೆ ಸಮನಾಗಿ ಯುಸ್ಟೇಷಿಯನ್ ನಳಿಕೆ
ಮೂಲಕ ಮಧ್ಯಕಿವಿಯಲ್ಲಿರುವ ಗಾಳಿಯು ಪ್ರತಿ ಒತ್ತಡ ಹಾಕುತ್ತ ಒತ್ತಡವನ್ನು ತೂಗಿಸುತ್ತದೆ. ಹಾಗಾಗಿ ಕಿವಿತಮಟೆಗೆ
ಹಾನಿಯಾಗುವುದಿಲ್ಲ. ಯುಸ್ಟಾಷಿ ವಿವರಣೆಯಿಂದ ಪ್ರೇರಿತನಾದ ಶೇಕ್ಸ್‌ಪಿಯರ್ ತನ್ನ ‘ಹ್ಯಾಮ್ಲೆಟ್’ ನಾಟಕದಲ್ಲಿ, ಹ್ಯಾಮ್ಲೆಟ್‌ನ ತಂದೆಯ ಸಾವಿಗೆ, ಅವನ ಕಿವಿಯಲ್ಲಿ ಹೊಯ್ದ ವಿಷವೇ ಕಾರಣವಾಯಿತು ಎಂದು ಬರೆದನೆನ್ನಲಾಗಿದೆ.

ಯುಸ್ಟಾಷಿಯು ಕಿವಿಯ ೩ನೇ ಭಾಗದಲ್ಲಿರುವ ಕಾಕ್ಲಿಯದ ಕ್ಲಿಷ್ಟ ರಚನೆಯ ಬಗ್ಗೆ ವಿವರಿಸಿದ. ‘ಡೀ ರೀನಮ್ ಸ್ಟ್ರಕ್ಟುರ’ ಪ್ರಬಂಧದಲ್ಲಿ ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ಮೂತ್ರಪಿಂಡ ರಚನೆ ನ್ನು ಸಮಗ್ರವಾಗಿ ವಿವರಿಸಿದ್ದ. ೨ ಮೂತ್ರಪಿಂಡ ಗಳು ಒಂದೇ ಮಟ್ಟದಲ್ಲಿರುವುದಿಲ್ಲ ಎನ್ನುವುದನ್ನು ಗಮನಿಸಿದ. ಉದರದ ಬಲಮೂಲೆಯಲ್ಲಿ ಬೃಹತ್ ಯಕೃತ್ತು ಇರುವ
ಕಾರಣ, ಸ್ಥಳ ಸಂಕೋಚದ ಕಾರಣ, ಬಲ ಮೂತ್ರಪಿಂಡವು, ಎಡ ಮೂತ್ರಪಿಂಡಕ್ಕಿಂತಲೂ ತುಸು ಕೆಳಗೆ ಇರುತ್ತದೆಯೆಂದ.
ಹಾಗೆಯೇ ಪ್ರತಿ ಮೂತ್ರಪಿಂಡದ ಮೇಲೆ ಟೊಪ್ಪಿಗೆ ರೀತಿಯಲ್ಲಿ ಕುಳಿತಿರುವ ಅಡ್ರಿನಲ್ ಗ್ರಂಥಿ ಬಗ್ಗೆ ಮೊದಲ ಬಾರಿಗೆ ದಾಖಲಿಸಿದ.

ಹೃದಯಕ್ಕೆ ರಕ್ತ ಮರಳಿಸುವ ಸಿರೆಗಳ ಬಗ್ಗೆ ಅಧ್ಯಯನ ಮಾಡಿ, ದೇಹದ ಕೆಳಭಾಗದಿಂದ ರಕ್ತ ಸಂಗ್ರಹಿಸಿ ಅದನ್ನು ಹೃದಯದ ಬಲ ಹೃತ್ಕರ್ಣಕ್ಕೆ ಪೂರೈಸುವ ಕೆಳ ಮಹಾಸಿರೆಯು ಹೃದಯವನ್ನು ಸೇರುವ ಮೊದಲಲ್ಲಿ ಒಂದು ಕವಾಟವಿರುವುದನ್ನು ಗುರುತಿಸಿದ. ಈ ಕವಾಟವು ಪಾದದಿಂದ ಹೃದಯದವರೆಗೆ ಬಂದ ರಕ್ತವು ಹಿಮ್ಮರಳದಂತೆ ತಡೆಯುತ್ತದೆ ಎಂದ. ಆತನ ವಿವರ ಸರಿಯಾಗಿಯೇ ಇದೆ. ಹಾಗಾಗಿ ಇಂದು ಇದನ್ನು ಯುಸ್ಟೇಷಿಯನ್ ಕವಾಟ ಎಂದು ಕರೆದು ಗೌರವಿಸಲಾಗಿದೆ.

ಶರೀರದ ಕ್ಷೀರರಸವನ್ನು (ಲಿಂ-) ವಿಲೇವಾರಿ ಮಾಡುವ ಏಜೈಗಸ್ ವೇನ್ ಮತ್ತು ತೊರಾಸಿಕ್ ಡಕ್ಟ್ ಎನ್ನುವ ರಚನೆಯನ್ನೂ
ಗಮನಿಸಿ ಅದನ್ನು ಅಧ್ಯಯನ ಮಾಡಿದ. ಗ್ಯಾಲನ್ ತನ್ನ ಅಂಗರಚನಾ ಜ್ಞಾನವನ್ನು ಕೇವಲ ಪ್ರಾಣಿಗಳ ಛೇದನದಿಂದ ಗಳಿಸಿದ್ದರೆ, ಯುಸ್ಟಾಷಿ ಪ್ರಾಣಿಗಳನ್ನು ಮತ್ತು ಮನುಷ್ಯರಿಬ್ಬರನ್ನೂ ಛೇದಿಸಿ, ತುಲನಾತ್ಮಕ ಅಂಗರಚನಾ ವಿಜ್ಞಾನಕ್ಕೆ ಬುನಾದಿ ಹಾಕಿದ. ಜತೆಗೆ ಆರೋಗ್ಯವಂತ ಅಂಗಗಳು ಮತ್ತು ರೋಗಗ್ರಸ್ತ ಅಂಗಗಳ ನಡುವಿನ ವ್ಯತ್ಯಾಸವನ್ನು ಅಧ್ಯಯನ ಮಾಡಿದ.

ಯುಸ್ಟಾಷಿ ತನ್ನ ಬಂಧು ಮತ್ತು ಚಿತ್ರಕಾರ ಪಿಯರ್ ಮಾಟಿಯೊ ಪಿನಿ ಜತೆಗೂಡಿ, ತನ್ನ ಅಧ್ಯಯನವನ್ನು ವಿವರಿಸುವ ೪೭
ಅಂಗರಚನಾ ವಿವರಗಳ ಚಿತ್ರಗಳನ್ನು ಬರೆಸಿದ. ಗಿಲಿಯೊ ಡಿ ಮೂಸಿ ಎಂಬಾತ ಈ ಚಿತ್ರಗಳನ್ನು ತಾಮ್ರದ ಹಲಗೆಯ ಮೇಲೆ
ರೇಖಿಸಿದ. ಈ ೪೭ ಚಿತ್ರಫಲಕಗಳ ನೆರವಿನೊಡನೆ ‘ಡಿ ಡಿಸೆನ್ಷಿಯೋನಿಬಸ್ ಅಕ್ ಕಾಂಟ್ರೋವರ್ಸೀಸ್ ಅನಟಾಮಿಸಿಸ್’
ಎಂಬ ಪುಸ್ತಕ ಬರೆಯಲು ಸಿದ್ಧತೆ ನಡೆಸಿದ. ಆದರೆ ಆ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ.

ಮೊದಲ ೮ ಫಲಕಗಳನ್ನು ಬಳಸಿಕೊಂಡು ಈಗಾಗಲೇ ವಿವರಿಸಿದ ‘ಓಪಸ್ಕ್ಯುಲ ಅನಟಾಮಿಕ’ವನ್ನು ಪ್ರಕಟಿಸಿದ. ಉಳಿದ ೩೯
ಫಲಕಗಳು ಕಾಲಗರ್ಭದಲ್ಲಿ ಮಾಯವಾದವು. ೧೬೨ ವರ್ಷಗಳ ನಂತರ ಅವು ಚಿತ್ರಕಾರ ಪಿಯರ್ ಮಾಟಿಯೊ ಪಿನಿಯ ವಂಶಸ್ಥರಲ್ಲಿರುವುದು ಪತ್ತೆಯಾಯಿತು. ೬೦೦ ಸ್ಕುಡಿ (ಇಟಾಲಿಯನ್ ಬೆಳ್ಳಿನಾಣ್ಯ) ಕೊಟ್ಟು ಪೋಪ್ ಕ್ಲೆಮೆಂಟ್-೯ ಅವನ್ನು ಕೊಂಡುಕೊಂಡ. ಸ್ಯಾಪಿಯೆಂಜದಲ್ಲಿ ಅಂಗರಚನಾ ವಿಜ್ಞಾನವನ್ನು ಬೋಧಿಸುತ್ತಿದ್ದ ಜಿಯೋವನ್ನಿ ಮೇರಿಯ ಲ್ಯಾನ್ಸೀಸಿಯ ವಶಕ್ಕೆ ಒಪ್ಪಿಸಿದ. ಈತ ಯುಸ್ಟಾಷಿಯ ಎಲ್ಲ ೪೭ ಫಲಕಗಳನ್ನು ‘ಟ್ಯಾಬ್ಯುಲೇ ಅನಟಾಮಿಕೆ ಬಾರ್ಥಲೋಮಿಯೆ ಯುಸ್ಟಾಷಿ ಕ್ವಾಸ್ ಎಲ್ಲಾ ಟೆನಿಬ್ರಿಸ್ ವಿಂಡಿಕೇಟಾಸ್’ ಎನ್ನುವ ಹೆಸರಿನಲ್ಲಿ ಪ್ರಕಟಿಸಿದ.

ಯುಸ್ಟಾಷಿಯ ಚಿತ್ರಗಳು ವೆಸಾಲಿಯಸ್ ಬರೆಸಿದ ಚಿತ್ರಗಳಷ್ಟು ಸುಂದರವಾಗಿಲ್ಲ. ಆದರೆ ವೈಜ್ಞಾನಿಕ ವಿವರಗಳಲ್ಲಿ ವೆಸಾಲಿ ಯಸ್ ಬರೆಯಿಸಿದ ಚಿತ್ರಗಳಿಗಿಂತಲೂ ಹೆಚ್ಚು ನಿಖರವಾಗಿತ್ತು. ಕಾರಣ ಯುಸ್ಟಾಷಿ ತಾನು ಛೇದಿಸಿದ ಪ್ರತಿ ಅಂಗವನ್ನೂ ಭೂತಕನ್ನಡಿಯ ಕೆಳಗೆ ವಿಶ್ಲೇಷಿಸಿದ್ದ. ಹಾಗಾಗಿ ಅನೇಕ ಸೂಕ್ಷ್ಮವಿಚಾರಗಳು ಆ ಚಿತ್ರಗಳಲ್ಲಿ ದಾಖಲಾಗಿದ್ದವು. ಯುಸ್ಟಾಷಿ ನತದೃಷ್ಟ. ಕೀಲುವಾತಕಿಯ (ಗೌಟ್) ಕಾರಣ ಅವನು ಅಕಾಲ ನಿವೃತ್ತಿ ಪಡೆದಿದ್ದರ ಜತೆಗೆ ಸಾವನ್ನಪ್ಪ ಬೇಕಾಯಿತು.

ಅವನ ಜೀವಮಾನ ಸಾಧನೆಯ ಫಲಕಗಳು ಹಠಾತ್ ಕಣ್ಮರೆಯಾದವು. ಶತಮಾನದ ನಂತರ ಫಲಕಗಳು ದೊರೆತವಾ ದರೂ, ಅವುಗಳ ಜತೆಯಲ್ಲಿ ಪಠ್ಯವು ದೊರೆಯಲೇ ಇಲ್ಲ. ಆತನ ೧೮ನೆಯ ಫಲಕದಲ್ಲಿರುವ ಅನುವೇದನಾ ನರವ್ಯೂಹದ ಚಿತ್ರ (ಸಿಂಪ್ಯಾಥೆಟಿಕ್ ನರ್ವಸ್ ಸಿಸ್ಟಮ್) ಎಷ್ಟು ಸೊಗಸಾಗಿದೆಯೆಂದರೆ, ಇವತ್ತಿಗೂ ಅದರಷ್ಟು ಸುಂದರ ಮತ್ತು ನಿಖರವಾದ ಚಿತ್ರವನ್ನು ರಚಿಸಲು ಆಗಿಲ್ಲ. ಯುಸ್ಟಾಷಿಯ ಜತೆ ಅದೃಷ್ಟ ಸಹಕರಿಸಿದ್ದರೆ, ಆಧುನಿಕ ಅಂಗರಚನಾ ವಿಜ್ಞಾನದ ಪ್ರವರ್ತಕರಲ್ಲಿ ಆತನ ಹೆಸರು ವೆಸಾಲಿಯಸ್ಸನ ಹೆಸರಿನೊಂದಿಗೆ ಕೇಳಿಬರುತ್ತಿತ್ತು.