Sunday, 15th December 2024

S M Jamdar Column: ಅದು ಹಾಗಲ್ಲ, ಹೀಗೆ…

ಪ್ರತಿಸ್ಪಂದನ

ಎಸ್.ಎಂ.ಜಾಮದಾರ್‌

ಅದು ಹಾಗಲ್ಲ, ಹೀಗೆ…ಬಸವ ಮಂಟಪ’ ಅಂಕಣ(Basava Mantapa Column) ದಲ್ಲಿ (ವಿಶ್ವವಾಣಿ ಸೆ.೧೧) ರವಿ ಹಂಜ್ (Ravi Hanj) ಅವರು ಬರೆದ ಲೇಖನ ವನ್ನು ಓದಿದೆ. ಅದರಲ್ಲಿ ಉಲ್ಲೇಖಿಸಲಾಗಿರುವ ಕೆಲ ವಿಷಯಗಳ ಕುರಿತು ಒಂದಷ್ಟು ಅಭಿಪ್ರಾಯವನ್ನು ವ್ಯಕ್ತಪಡಿಸಲು ಬಯಸುವೆ.

ಬಿ.ಎಲ್. ರೈಸ್ ಅವರು ತಮ್ಮ ವಿಷಯ ಪ್ರಸ್ತುತಿಗೆ ಧರಣಿ ಪಂಡಿತನ ‘ಬಿಜ್ಜಳ ರಾಯ ಚರಿತ್ರೆ’ ಕೃತಿಯನ್ನು ಆಧಾರ ವಾಗಿಟ್ಟುಕೊಂಡಿದ್ದಾರೆ. ಈ ಕೃತಿಯಲ್ಲಿ ಅಕ್ಕ ನಾಗಮ್ಮನನ್ನು ಪದ್ಮಾವತಿ ಎಂದೂ, ಆಕೆಯ ಮಗನನ್ನು ಬಿಜ್ಜಳನಿಗೆ ಹುಟ್ಟಿದವನು ಎಂದೂ ಬಿಂಬಿಸಲಾಗಿದೆ. ಈ ಕೃತಿಕಾರನು ಒಬ್ಬ ಜೈನನಾಗಿದ್ದುದರಿಂದ, ಬಿಜ್ಜಳ ಒಬ್ಬ ಜೈನನಾಗಿದ್ದ ಎಂಬ ಹುಸಿನಂಬಿಕೆಯ ಆಧಾರದ ಮೇಲೆ ಹಾಗೆ ತರ್ಕಿಸಿದ್ದಾನೆ. ಆದರೆ, ಬಿಜ್ಜಳ ಓರ್ವ ಶೈವನಾಗಿದ್ದ ಮತ್ತು ನಂದಿ ಯು ಅವನ ಲಾಂಛನವಾಗಿತ್ತು. ಆತ ಮಧ್ಯಪ್ರದೇಶದಲ್ಲಿನ ಮಾಹಿಷ್ಮತಿಯ ಕಲಚೂರಿ ರಾಜವಂಶಕ್ಕೆ ಸೇರಿದವನು, ಆದರೆ ಆತ ಹಾಗೂ ಆತನ ತಂದೆ ಮದುವೆಯಾಗಿದ್ದು ಜೈನ ಧರ್ಮದ ಚಾಲುಕ್ಯ ಕುಟುಂಬದ ಹೆಣ್ಣನ್ನು. ಇದು ರಾಜವಂಶಗಳ ವಿಷಯದಲ್ಲಿ ಸಾಮಾನ್ಯವಾಗಿದ್ದ ಸಂಗತಿ.

ಇದನ್ನೂ ಓದಿ: Ravi Hanj column: ಬಸವ ಮೂಲ, ಸನಾತನ ಶೈವಮೂಲ !

ಬಸವಣ್ಣನು ಒಬ್ಬ ಆರಾಧ್ಯ ಬ್ರಾಹ್ಮಣನಾಗಿದ್ದ ಎಂಬ ಬಿ.ಎಲ್.ರೈಸ್ ಅವರ ಹೇಳಿಕೆ ತಪ್ಪು. ಆತ ಒಬ್ಬ
ಕಮ್ಮೆಕುಲದ ಬ್ರಾಹ್ಮಣನಾಗಿದ್ದ. ಇದು ಹಿರಿಯೂರು ಸೇರಿದಂತೆ ಆಂಧ್ರ ಪ್ರದೇಶದ ಗಡಿಗೆ ತಾಗಿಕೊಂಡಂತಿರುವ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಕಂಡುಬರುವ ಒಂದು ಒಳಪಂಗಡ.

ಆರ್.ಜಿ.ಭಂಡಾರ್ಕರ್ ಅವರು ಸ್ವತಃ ಒಬ್ಬ ಚಿತ್ಪಾವನ ಬ್ರಾಹ್ಮಣರಾಗಿದ್ದರಿಂದ ಹಾಗೂ ಲೋಕಮಾನ್ಯ ತಿಲಕರಂತೆ ಬಸವ ಸಿದ್ಧಾಂತದ ವಿರುದ್ಧ ವಿದ್ದುದರಿಂದ, ಬಸವಣ್ಣನ ಜೀವನವೃತ್ತಾಂತದ ಜೈನ ಆವೃತ್ತಿಯನ್ನು ಅವರು ಜನಪ್ರಿಯಗೊಳಿಸಿದರು.

ಬಸವಣ್ಣನ ಕಾಲಘಟ್ಟದಲ್ಲಿ ಜಾತಿಯ ಪರಿಗಣನೆಗಳು ಅಸ್ತಿತ್ವದಲ್ಲಿರಲಿಲ್ಲ ಎಂಬ ಅಂಕಣಕಾರ ರವಿ ಹಂಜ್ ಅವರ ಉಲ್ಲೇಖವೇ ಸರಿಯಲ್ಲ. ಜಾತಿ ಎಂಬುದು ವೈದಿಕ ಧರ್ಮದ ಒಂದು ಅವಿಭಾಜ್ಯ ಅಂಶವಾಗಿದೆ. ಋಗ್ವೇದದ ಹತ್ತನೇ ಮಂಡಲದಲ್ಲಿ ಬರುವ ‘ಪುರುಷ ಸೂಕ್ತ’ದೊಂದಿಗೆ ಇದು ಶುರುವಾಗುತ್ತದೆ ಹಾಗೂ ಭಗವದ್ಗೀತೆಯಲ್ಲೂ ಇದು ಪ್ರತಿಧ್ವನಿತವಾಗಿದೆ; ‘ಚಾತುರ್ವಣಂ ಮಯಾ ಸೃಷ್ಟಂ ಗುಣ ಕರ್ಮ ವಿಭಾಗಶಃ’ ಎಂಬ ಕೃಷ್ಣನ ಉಕ್ತಿಯೇ ಇದಕ್ಕೆ ಸಾಕ್ಷಿ.

ಅರ್ಜುನವಾಡ ಶಾಸನದಲ್ಲಿ ಕಂಡುಬಂದಿರುವ ಪ್ರತಿಯೊಬ್ಬ ವ್ಯಕ್ತಿ ಅಥವಾ ಮಾತುಗಳಿಗೆ ಜಾತಿಯನ್ನು ಆರೋಪಿ ಸುವುದಕ್ಕೆ, ಭಾರತದಲ್ಲಿ ಬೆಳೆಯುತ್ತಿರುವ ಗುರುತಿನ ರಾಜಕೀಯ ಅಥವಾ ಅಸ್ಮಿತೆಯ ರಾಜಕೀಯದ ಪಿಡುಗು/ಬೆದರಿಕೆಯೇ ಕಾರಣ ಎಂಬ ಅಂಕಣಕಾರರ ಮಾತು ಸರಿಯಾಗಿದೆ.

ಅರ್ಜುನವಾಡ ಶಾಸನವು, ಬಸವಣ್ಣನ ಹಿರಿಯ ಮಲಸೋದರನಾಗಿದ್ದ ದೇವರಾಜನ ಮರಿಮಗನಿಗೆ ಸೇರಿದ್ದು. ಬಸವಣ್ಣನು ಉಪನಯನ ಸಂಸ್ಕಾರದಲ್ಲಿ ಭಾಗಿಯಾಗುವುದಕ್ಕೆ ನಿರಾಕರಿಸಿ ತನ್ನ ಯಜ್ಞೋಪವೀತವನ್ನು
ಹರಿದೆಸೆಯುವ ಮೂಲಕ ಬ್ರಾಹ್ಮಣತ್ವವನ್ನು ತ್ಯಜಿಸಿದರೂ, ಆತನ ಕುಟುಂಬದ ಇತರ ಸದಸ್ಯರು ಮಾತ್ರ ತಮ್ಮ ಬ್ರಾಹ್ಮಣ್ಯದ ಅಸ್ತಿತ್ವವನ್ನು ಮುಂದುವರಿಸಿದರು. ಆದ್ದರಿಂದ, ‘ಮಾಹೇಶ್ವರ’ ಎಂಬುದು ಬ್ರಾಹ್ಮಣ ವಿದ್ವಾಂಸನನ್ನು ಉಲ್ಲೇಖಿಸಲು ಬಳಸುತ್ತಿದ್ದ ಒಂದು ಗುಣಲಕ್ಷಣವಾಗಿತ್ತು ಮತ್ತು ‘ಹಾಲಬಸವಿದೇವ’ ಎಂಬಾತ ಇಂಥ ಒಬ್ಬ ವಿದ್ವಾಂಸನಾಗಿದ್ದ.

(ಲೇಖಕರು ನಿವೃತ್ತ ಐಎಎಸ್ ಅಧಿಕಾರಿ)