ಅಭಿಮತ
ಪ್ರೊ.ಸಿದ್ದು ಯಾಪಲಪರವಿ
ವಿಶಾಲವಾದ ಗುರುಕುಲದ ಆವರಣದಲ್ಲಿ ಅನೇಕ ಚಟುವಟಿಕೆಗಳು ಏಕ ಕಾಲದಲ್ಲಿ ಸಾಗಿವೆ. ವಿಶೇಷವಾಗಿ ಅನಾಥಾಲಯ ಮತ್ತು ಶಿಕ್ಷಣ ಕೇಂದ್ರಗಳು ಇಡೀ ನಾಡಿನ ಗಮನ ಸೆಳೆದಿವೆ. ಭಾಲ್ಕಿ ಗುರುಕುಲವನ್ನು ನಮ್ಮ ಶರಣ ಸಂಪ್ರದಾಯದ ಅನುಭವ ಮಂಟಪವನ್ನಾಗಿ ಬೆಳೆಸುವ ಇಚ್ಛಾಶಕ್ತಿ ಇಬ್ಬರೂ ಪೂಜ್ಯರಲ್ಲಿ ಇದೆ. ಅದು ಸಾಧ್ಯವಾಗುತ್ತದೆ ಕೂಡ!
ಭಾಲ್ಕಿ ಹಿರೇಮಠ ಸಂಸ್ಥಾನ ಮಠಕ್ಕೆ ತನ್ನದೇ ಆದ ಪರಂಪರೆ ಇದೆ. ಅದು ಕೇವಲ ಕನ್ನಡ, ಬಸವ ಪರಂಪರೆ ಎಂಬುದು ಅಷ್ಟೇ ಗಮನಾರ್ಹ. ಕಳೆದ ಶತಮಾನದಿಂದ ಮಠದ ಪರಂಪರೆ ಎಂದರೆ ಜಾತ್ಯಾತೀತತೆ ಮತ್ತು ಗಡಿ ಪ್ರದೇಶದಲ್ಲಿ ಕನ್ನಡ ರಕ್ಷಣೆ. ಹಿಂದಿನ ಪೂಜ್ಯರಾದ ಶ್ರೀ ಡಾ. ಚನ್ನಬಸವ ಪಟ್ಟದೇವರು ಹೊರಗಡೆ ಮರಾಠಿ ಫಲಕ ಹಾಕಿ ಒಳಗಡೆ ಕನ್ನಡ ಶಾಲೆ ನಡೆಸುತ್ತಿದ್ದರು. ಭಾಲ್ಕಿ, ಬೀದರ ಮತ್ತು ಕಲಬುರಗಿ ಹೊರತುಪಡಿಸಿ ನಾಡಿನ ಇತರ ಪ್ರದೇಶಗಳಿಗೆ ಪ್ರವಾಸ ಮಾಡುವಷ್ಟು ಸಮಯ ಇರಲಿಲ್ಲ. ಅನೇಕ ಅನಾಥರಿಗೆ ಮತ್ತು ಅಸಹಾಯಕ ಮಹಿಳೆಯರಿಗೆ ಮಠದಲ್ಲಿ ಅವಕಾಶ ಕಲ್ಪಿಸಿ ಮಾತೃ ಪ್ರೇಮ ಮೆರೆದರು. ಶತಾಯುಷಿ ಗಳಾದ ಚನ್ನಬಸವ ಪಟ್ಟದ್ದೆವರು ಯಾವತ್ತೂ ಪ್ರಚಾರ, ಹಣ, ಅಧಿಕಾರ ಬಯಸದೇ, ಅನೇಕ ಮಠಾಧೀಶರು, ಸಾಹಿತಿಗಳಿಗೆ ಆಶ್ರಯ ತಾಣ ನೀಡಿದರು.
ಶಾಂತರಸರಂತಹ ಪ್ರತಿಭಾ ಸಂಪನ್ನ ಬರಹಗಾರರು ಭಾಲ್ಕಿಯ ಮಠದ ಪರಿಸರದಲ್ಲಿ ತಮ್ಮ ಮೌಲಿಕ ವ್ಯಕ್ತಿತ್ವ ರೂಪಿಸಿಕೊಂಡರು. ಭಾಲ್ಕಿ ಮಠ ಅಪ್ಪಟ ಅನುಭವ ಮಂಟಪ, ಆಧ್ಯಾತ್ಮ ಕೇಂದ್ರವಾಗಿ ಬೆಳೆಯಿತು. ಬಸವ ಪರಂಪರೆ ಮತ್ತು ವಚನ ಸಂಸ್ಕೃತಿಯನ್ನು ಕಲ್ಯಾಣ ಪ್ರದೇಶದಲ್ಲಿ ಹುಟ್ಟು ಹಾಕಿತು. ಬೀದರ ಪ್ರದೇಶಕ್ಕೆ ಹೋದರೆ ಲಿಂಗಾಯತ ಮನೆಗಳಲ್ಲಿ ಬಸವ ಸಂಸ್ಕೃತಿ ಎದ್ದು ಕಾಣುತ್ತದೆ. ಪಾದ ಪೂಜೆ ಸಮಯದಲ್ಲಿ ತೋರುವ ಭಕ್ತಿ, ಗೌರವ ತೋರುವುದು ಕಂಡಾಗ ಮನಸು ಪುಳಕವಾಗಿ, ಧನ್ಯತಾ ಭಾವ ನೆಲೆಗೊಳ್ಳುತ್ತದೆ.
ಎಂಬತ್ತರ ದಶಕದಲ್ಲಿ ಗದುಗಿನ ಡಾ.ತೋಂಟದ ಸಿದ್ಧಲಿಂಗ ಸ್ವಾಮಿಗಳು ಮೊದಲ ಬಾರಿಗೆ ಶ್ರೀ ಮಠದ ಹಿರಿಮೆಯನ್ನು ನಾಡಿಗೆ ಪರಿಚಯಿಸಿದರು. 1980 ನೇ ಇಸವಿಯಲ್ಲಿ ಪೂಜ್ಯ ಶ್ರೀ ಚನ್ನಬಸವ ಪಟ್ಟದ್ದೇವರನ್ನು ಗದ್ದುಗಿಗೆ ಆಹ್ವಾನಿಸಿ ಬಹುದೊಡ್ಡ ಗೌರವಾರ್ಪಣೆ ನೀಡಿದ್ದು ಐತಿಹಾಸಿಕ ಸಂಗತಿ. ಕನ್ನಡ ಶಾಲೆ ಮತ್ತು ಬಸವ ತತ್ವ ಪ್ರಚಾರದ ಆಚೆಗೆ ಮಠವನ್ನು ಬೆಳೆಸಿದ ಶ್ರೇಯಸ್ಸು ನಂತರ ಬಂದ ಡಾ.ಬಸವಲಿಂಗ ಪಟ್ಟದ್ದೇವರು ಅವರಿಗೆ ಸಲ್ಲುತ್ತದೆ. ಅನಾಥಾಲಯ, ಹಿರಿಯ ನಾಗರಿಕರಿಗೆ ಆಶ್ರಯ, ವಟುಗಳಿಗೆ ಧಾರ್ಮಿಕ ಶಿಕ್ಷಣ ಮತ್ತು ಸಂಸ್ಕಾರ ಕೊಡುವ ಕಾರ್ಯ ಮುಂದುವರೆಯಿತು.
ಭಾಲ್ಕಿ ಮಠದ ಎಲ್ಲ ಕ್ರಿಯಾಶೀಲ ಚಟುವಟಿಕೆಗಳಿಗೆ ಬೆಂಗಾವಲಾಗಿ ಡಾ.ತೋಂಟದಾರ್ಯ ಶ್ರೀಗಳು ನಿಂತರು. ಅಲ್ಲಿನ ಪ್ರತಿಯೊಂದು ಬೆಳವಣಿಗೆಯನ್ನು
ಕಂಡು ಸಂಭ್ರಮ ಪಡುತ್ತಿದ್ದರು. ಭಾಲ್ಕಿ, ಬಸವಕಲ್ಯಾಣ, ಬೀದರ ಪ್ರದೇಶಕ್ಕೆ ಹೋಗಿ ಬಂದರೆ ತೋಂಟದಾರ್ಯ ಅಜ್ಜಾ ಅವರ ಹುಮ್ಮಸ್ಸು ಹೆಚ್ಚಾಗುವುದನ್ನು ಅವರ ಶಿವಾನುಭವದ ಆಶೀರ್ವಚನ ಮತ್ತು ವರ್ತನೆಯಲ್ಲಿ ವೈಯಕ್ತಿಕವಾಗಿ ಕಂಡಿದ್ದೇನೆ. ಭಾಲ್ಕಿ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ವಿಜ್ಞಾನ ಕಾಲೇಜು ಇರಲಿಲ್ಲ. ಗುಣಮಟ್ಟದ ಶಿಕ್ಷಣ ಪಡೆಯಲು ದೂರದ ಪ್ರದೇಶಗಳಿಗೆ ತೆರಳುವ ಪರಿಸ್ಥಿತಿ ಇತ್ತು, ಇದನ್ನು ಅರಿತ ಪೂಜ್ಯರು ಗುರುಕುಲ ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದರು. ಇಂದು ಈ ಗುರುಕುಲದ ಮೂಲಕ ನೂರಾರು ವೈದ್ಯರು, ವಿಜ್ಞಾನಿಗಳು ಹೊರ ಹೊಮ್ಮಿzರೆ. ಇದೊಂದು ಆದರ್ಶ ಸಂಸ್ಥೆಯಾಗಿ
ಬೆಳೆದಿದೆ.
ಇನ್ನೂ ಅಭಿಮಾನದ ಸಂಗತಿ ಎಂದರೆ ಈಗಿನ ಪೀಠಾಽಪತಿಗಳಾದ ಪೂಜ್ಯ ಶ್ರೀ ಗುರುಬಸವ ಟ್ಟದ್ದೇವರು ಅದೇ ಪರಂಪರೆಯನ್ನು ಮುಂದುವರೆಸಿಕೊಂಡು ಸಾಗಿದ್ದಾರೆ. ಕೆಲವು ಮಠಗಳ ಭವ್ಯ ಇತಿಹಾಸ ಒಂದೇ ತಲೆಮಾರಿಗೆ ಮುಗಿದು ಹೋಗುತ್ತದೆ ಆದರೆ ಭಾಲ್ಕಿ ಮಠದ ಪರಂಪರೆ ಬೆಳೆಯುತ್ತ ಸಾಗಲು ಸಮರ್ಥ
ಉತ್ತರಾಧಿಗಳ ಆಯ್ಕೆಯೇ ಮೂಲ ಕಾರಣ. ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಬೀದರ ಜಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ, ತನ್ಮೂಲಕ ಪರಿಚಯ ವಾದ ಈರ್ವರೂ ಒಮ್ಮೆ ಭಾಲ್ಕಿ ಮಠಕ್ಕೆ ಕರೆದುಕೊಂಡು ಹೋದಾಗ ನನಗೊಂದು ದಿವ್ಯಾನುಭವ.
ಅನಾಥಾಲಯದ ಹಸುಗೂಸುಗಳು, ಭಸ್ಮ ಧಾರಣೆ ಮಾಡಿಕೊಂಡು ಓಡಾಡುವ ಸಾವಿರಾರು ವಿದ್ಯಾರ್ಥಿಗಳ ಕಂಡಾಗ ನಿಜವಾಗಿಯೂ ನಂಬಲಸಾಧ್ಯ ಎನಿಸಿತು. ಮಠಗಳ ಸ್ವಾಮಿಗಳು ಎಂದರೆ ಆಧುನಿಕ ರಾಜರು ಎಂದು ಕೆಲವೊಮ್ಮೆ ನಾವು ತಪ್ಪಾಗಿ ಗ್ರಹಿಸಿರುತ್ತೇವೆ ಆದರೆ ಭಾಲ್ಕಿ ಮಠದ ಈರ್ವರೂ ಪೂಜ್ಯರ ಸರಳತೆ ಅನುಕರಣೀಯ. ನಡೆ,ನುಡಿಯಲ್ಲಿ ಸದು ವಿನಯದ ಮೆರುಗು.
ವಿಶಾಲವಾದ ಗುರುಕುಲದ ಆವರಣದಲ್ಲಿ ಅನೇಕ ಚಟುವಟಿಕೆಗಳು ಏಕ ಕಾಲದಲ್ಲಿ ಸಾಗಿವೆ. ವಿಶೇಷವಾಗಿ ಅನಾಥಾಲಯ ಮತ್ತು ಶಿಕ್ಷಣ ಕೇಂದ್ರಗಳು ಇಡೀ ನಾಡಿನ ಗಮನ ಸೆಳೆದಿವೆ. ಭಾಲ್ಕಿ ಗುರುಕುಲವನ್ನು ನಮ್ಮ ಶರಣ ಸಂಪ್ರದಾಯದ ಅನುಭವ ಮಂಟಪವನ್ನಾಗಿ ಬೆಳೆಸುವ ಇಚ್ಛಾಶಕ್ತಿ ಇಬ್ಬರೂ ಪೂಜ್ಯರಲ್ಲಿ ಇದೆ. ಅದು ಸಾಧ್ಯವಾಗುತ್ತದೆ ಕೂಡ!
ಭಾರತ ದೇಶದಲ್ಲಿ ಕರ್ನಾಟಕ ರಾಜ್ಯಕ್ಕೆ ತನ್ನದೇ ಆದ ಪರಂಪರೆ ಮತ್ತು ಗೌರವ ಇರಲು ವಚನ ಚಳುವಳಿಯೇ ಕಾರಣ, ಭಾರತ ಸಂವಿಧಾನ ಹೊಂದಿರುವ ಎಲ್ಲಾ ಮೌಲ್ಯಗಳನ್ನು ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪ ಎಂಬ ಪಾರ್ಲಿಮೆಂಟ್ ಮೂಲಕ ಜಾರಿಗೊಳಿಸಿದರು. ಅದೇ ಕಾರಣ ದಿಂದಾಗಿ ಅದು ಕಲ್ಯಾಣ ರಾಜ್ಯ ಎನಿಸಿಕೊಂಡಿತು. ಆಧುನಿಕ ಸಮಾಜ ಬಯಸುವ ’Welfare state’ ನಮಗೆ ಹೊಸದಲ್ಲ. ಈಗಲೂ ಅಷ್ಟೇ, ವಚನಗಳ ಆಧಾರಿತ ಬದುಕು ನಮ್ಮದಾದರೆ ನಮ್ಮ ರಾಜ್ಯ ಕಲ್ಯಾಣ ರಾಜ್ಯವಾಗುವುದರಲ್ಲಿ ಸಂಶಯವಿಲ್ಲ. ಅಂತಹ ಸಂಕಲ್ಪವನ್ನು ನಾಡಿನ ಇತರ ಸಾವಿರಾರು ಮಠಗಳು ಮಾಡಬೇಕು. ಇದು ಈ ಕಾಲದ ಅಗತ್ಯವಾಗಿದೆ.
ವೈಯಕ್ತಿಕ ಅಹಮಿಕೆ, ಧಾರ್ಮಿಕ ಸಂಘರ್ಷ, ಆಸ್ತಿ ವಿವಾದ, ಪೀಠಗಳ ಘನತೆಯ ಜಂಜಾಟಗಳನ್ನು ದೂರ ಸರಿಸಿ ಸಾಮಾನ್ಯ ಜನರಿಗೆ ಆಧ್ಯಾತ್ಮ ಸಂಸ್ಕಾರ
ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು ಕೇವಲ ಮಠಗಳಿಗೆ ಮಾತ್ರ ಸಾಧ್ಯ. ಜನ ಇನ್ನೂ ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ವಿಶ್ವಾಸ ಕಾಪಿಟ್ಟು ಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಧರ್ಮ, ಶಿಕ್ಷಣ, ಸಂಸ್ಕೃತಿ ಮತ್ತು ಗ್ರಂಥ ಪ್ರಕಟಣೆಗಳ ಮೂಲಕ ಜನ ಕಲ್ಯಾಣದಲ್ಲಿ ನಿರತರಾಗಿರುವ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಅವರಿಗೆ ಕರ್ನಾಟಕ ಸರಕಾರ ’ರಾಷ್ಟ್ರೀಯ ಬಸವ ಪುರಸ್ಕಾರ’ ನೀಡಿ ಗೌರವಿಸಿ ಪ್ರಶಸ್ತಿಯ ಘನತೆಯನ್ನು ಉಳಿಸಿಕೊಂಡಿದೆ. ಪೂಜ್ಯರನ್ನು ಬಸವತತ್ವ ಪರಂಪರೆಯ ಅನುಯಾಯಿಗಳ ಪರವಾಗಿ ಅಭಿನಂದಿಸುತ್ತೇನೆ.