ತನ್ನಿಮಿತ್ತ
ಗ.ನಾ.ಭಟ್ಟ
ಒಳಿತು-ಕೆಡುಕುಗಳನ್ನು ನಮ್ಮ ಮುಂದೆ ಬಿತ್ತರಿಸುವ, ನೀತಿ-ಅನೀತಿಗಳನ್ನೂ, ಧರ್ಮ- ಅಧರ್ಮಗಳನ್ನೂ ಸೂಕ್ಷ್ಮಾತಿಸೂಕ್ಷ್ಮವಾಗಿ ಪರಿಚಯಿಸಿಕೊಡುವ ರಾಮಾಯಣ, ಮಹಾಭಾರತ, ವೇದೋಪನಿಷತ್ತುಗಳು ಬಂದೇ ಸಾವಿರಾರು ವರ್ಷಗಳು ಸಂದುಹೋಗಿವೆ.
ಸಂತರ ವಾಣಿಗಳು, ಧರ್ಮೋಪದೇಶಗಳು, ಸುಭಾಷಿತಗಳು ಲೆಕ್ಕವಿಲ್ಲದಷ್ಟು ಬಂದಿವೆ. ಇದು ನೀತಿಯಲ್ಲ, ನ್ಯಾಯವಲ್ಲ ಎಂದು ಹೇಳುವ ಅಸಂಖ್ಯ
ಕೃತಿಗಳು, ಸಿನೆಮಾಗಳು, ಅಭಿನಯ, ನರ್ತನಗಳು ನಾಟಕಗಳು ನಮ್ಮ ಮುಂದಿವೆ. ಆದರೂ ಮನುಷ್ಯ ಸುಧಾರಿಸಿಲ್ಲ. ಸುಳ್ಳು, ಕಪಟ, ವಕ್ರತೆ, ಕುಟಿಲತೆ, ಮೋಸ, ವಂಚನೆ, ಕ್ರೌರ್ಯ, ನೀಚತನ, ಸ್ವಾರ್ಥ, ಹೊಟ್ಟೆಕಿಚ್ಚು ಮುಂತಾದುವನ್ನು ಆತ ಬಿಟ್ಟಿಲ್ಲ. ಹಾಗಾದರೆ ಇವೆಲ್ಲ ಹೋಗುವುದು ಯಾವಾಗ? ಮನುಷ್ಯನಲ್ಲಿರುವ ದೈವಾಂಶದ ಚೈತನ್ಯ ಅಥವಾ ಸಚ್ಛಕ್ತಿ ಎಚ್ಚರಗೊಂಡಾಗ ಮಾತ್ರ ಅವು ಇಲ್ಲವಾಗುತ್ತವೆ. ಆದರೆ ಆ ದೈವಾಂಶ ಎಚ್ಚರಗೊಳ್ಳುವುದಕ್ಕೆ ಮೇಲೆ ಹೇಳಿದ ಎಲ್ಲವೂ ಸಾಧಕವಾಗುತ್ತವೆ. ಅಂತಹ ಸಾಧನಗಳಲ್ಲಿ ಕ್ರಾಂತಿಕಾರಿ, ಭಕ ಭಂಡಾರಿ ಬಸವಣ್ಣನವರ ವಚನಗಳೂ ಒಂದು.
ಬಸವಣ್ಣನವರ ವಚನವೆಂದರೆ ಅದೊಂದು ತತ್ತ್ವ ಚಿಂತನೆ; ದಿವ್ಯಪ್ರಭೆ; ಸುಭಾಷಿತರತ್ನ; ಜೀವ ತಾರಕಮಂತ್ರ, ಒಳಿತು-ಕೆಡುಕುಗಳ ವಿರಾಡ್ದರ್ಶನ; ನೀತಿ-ಅನೀತಿಗಳ ಅನಾವರಣ.
ಮಾಡುವ ಭಕ್ತನು ಕಾಯ
ಬಾಳೆಯ ಕಂಬದಂತಿರಬೇಕು!
ಮೆಲ್ಲ ಮೆಲ್ಲನೆ ಹೊರೆಯೆತ್ತಿ ನೋಡಿದರೆ
ಒಳಗೆ ಕೆಚ್ಚಿಲ್ಲದಿರಬೇಕು!
ಮೇಲಾದ -ಲವ ನಮ್ಮವರು
ಬೀಜ ಸಹಿತ ನುಂಗಿದರು
ಎನಗಿನ್ನಾವ ಭಯವಿಲ್ಲ ಕಾಣಾ
ಕೂಡಲಸಂಗಮದೇವಾ
‘ನಾವು ಮಾಡುವ ಯಾವುದೇ ಕೆಲಸವೂ ಸ್ವಾರ್ಥದಿಂದ ಕೂಡಿರಬಾರದು. ಅದು ಪರರಿಗೋಸ್ಕರ ಮೀಸಲಿರಬೇಕು. ಮಾಡುವ ಕೆಲಸದಲ್ಲಿ ಢಂಬ-ಆಡಂಬರಗಳು, ಮೋಸ- ಕುಟಿಲಗಳು ಇರಬಾರದು’ ಅನ್ನವುದನ್ನು ಈ ವಚನ ಸಾರುತ್ತದೆ. ಅದನ್ನು ಸ್ಪಷ್ಟಪಡಿಸುವುದಕ್ಕೆ, ಸುಟಗೊಳಿಸುವುದಕ್ಕೆ ಅವರು ನೀಡಿದ ಉಪಮೆ ಹೆಚ್ಚು ಅರ್ಥಪೂರ್ಣವಾದುದು.
ಬಾಳೆಯ ದಿಂಡನ್ನು ಪೊರೆಯಾದ ಮೇಲೆ ಪೊರೆಯೆತ್ತಿ ಸುಲಿದರೆ ಉಳಿಯುವುದು ಬರೀ ಶೂನ್ಯ. ಕೆಚ್ಚಿಲ್ಲದಿರಬೇಕು ಎಂಬ ಪದಗುಚ್ಛ ಅಹಂಕಾರ ಬಿಡಬೇಕು ಅನ್ನವುದನ್ನು ಸೊಗಸಾಗಿ ನಿರೂಪಿಸುತ್ತದೆ. ಬೀಜಸಹಿತ ನುಂಗಿದರು ಅನ್ನವುದು ನಿಷ್ಕಾಮ ಕರ್ಮವನ್ನು ಬೋಧಿಸುತ್ತದೆ. ಇಂತಹ ಸರಳ ಭಾಷೆಯ ವಚನ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಬಸವಣ್ಣನವರು ಅಧ್ಯಾತ್ಮಪರವಾಗಿ ಹೇಳಿದ್ದಷ್ಟೇ ಅಲ್ಲ.
ಕ್ಷಾತ್ರತೇಜಸ್ಸಿನ, ಕ್ಷಾತ್ರವರ್ಚಸ್ಸಿನ ಹರಿಕಾರರಾಗಿಯೂ ಮಾತನಾಡಿದ್ದಾರೆ. ಅಹಿಂಸೆಯೇ ನಮ್ಮ ಜೀವನದ ಗುರಿ ಎಂದು ಯಾವುದೋ ದುರ್ಬಲ ಘಳಿಗೆಯಲ್ಲಿ ಬೋಧಿಸಲ್ಪಟ್ಟು, ಅದನ್ನಾಧರಿಸಿ ಒಂದು ಬಗೆಯ ನಿರ್ವಿಣ್ಣತೆಯನ್ನೂ, ನಿಸ್ತೇಜತೆಯನ್ನೂ ರೂಢಿಸಿಕೊಂಡ ಇಂದಿನ ಭಾರತೀಯರಿಗೆ ಬಸವಣ್ಣನವರು ಬೋಧಿಸಿದ ಅಂದಿನ ವೀರವಾಣಿ ನಿಜಕ್ಕೂ ಹೊಸ ಸಂಚಲನವನ್ನು ಹುಟ್ಟುಹಾಕುತ್ತದೆ. ಅವರು ಹೇಳುತ್ತಾರೆ-
ಕಲಿಯ ಕೈಯ ಕೈದುವಿನಂತಿರಬೇಕಯ್ಯ
ಎಲುದೋರೆ ಸರಸವಾಡಿದಡೆ ಸೈರಿಸಬೇಕಯ್ಯ||
ರಣದಲ್ಲಿ ತಲೆಹರಿದು ನೆಲಕ್ಕೆ ಬಿದ್ದು
ಬೊಬ್ಬಿಡಲದಕ್ಕೆ ಒಲಿದ ಕೂಡಲಸಂಗಮದೇವ||
‘ಪರಶಿವನು ಒಲಿಯಬೇಕಾದರೆ ಅಗತ್ಯ ಬಿದ್ದರೆ ಶೌರ್ಯಪ್ರದರ್ಶನವನ್ನೂ ಮಾಡಬೇಕಾಗುತ್ತದೆ. ಶಿವಶರಣರು ವೀರನ ಕೈಯ ಖಡ್ಗದಂತಿರಬೇಕು.
ಕಾದಾಟದಲ್ಲಿ ಚರ್ಮ ಹರಿದು ಮೂಳೆ ಕಾಣಿಸಿಕೊಂಡರೂ ಸೈರಿಸಿಕೊಳ್ಳಬೇಕು. ರಣರಂಗದಲ್ಲಿ ತಲೆಕತ್ತರಿಸಿಹೋಗಿ ಮುಂಡ ನೆಲಕ್ಕುರುಳುವಾಗಲೂ ಹರಹರ ಮಹಾದೇವ ಎಂದು ಹೇಳಬೇಕು. ಆಗ ಮಾತ್ರ ಶಿವ ಒಲಿಯುತ್ತಾನೆ’ ಎಂದು ಹೇಳುತ್ತಾರೆ. ಅವರ ಈ ಮಾತನ್ನು ಕೇಳಿದರೆ ನಮ್ಮ ರಾಮಾಯಣ, ಭಾರತ, ವೇದೋಪನಿಷತ್ತುಗಳ ಕಾಲದ ಕ್ಷಾತ್ರ ಪರಂಪರೆ ಎದ್ದು ಬಂದಂತೆ ತೋರುತ್ತದೆ. ಭಾರತದ ಕ್ಷಾತ್ರಹ್ರಾಸದ ಈ ಕಾಲದಲ್ಲಿ ಬಸವಣ್ಣನವರ ಇಂತಹ ಮಾತುಗಳು ನಿಜಕ್ಕೂ ಸಂಜೀವಿನಿಯಂತೆ ಕೆಲಸ ಮಾಡುತ್ತವೆ.
ಹನ್ನೆರಡನೆಯ ಶತಮಾನದ ಪೂರ್ವಾರ್ಧದಲ್ಲಿ ವೈಶಾಖ ಶುದ್ಧ ತದಿಗೆ ರೋಹೀಣೀ ನಕ್ಷತ್ರ ವೃಷಭ ಲಗ್ನದಲ್ಲಿ ಬಿಜಾಪುರ ಜಿಲ್ಲೆ ಬಾಗೇವಾಡಿ ಅಗ್ರಹಾರದ ಬ್ರಾಹ್ಮಣ ಕುಟುಂಬವೊಂದರರಲ್ಲಿ ಬಸವಣ್ಣನವರ ಜನನವಾಯಿತು.
ತಂದೆ ಮಾದಿರಾಜ; ತಾಯಿ ಮಾದಾಂಬೆ. ಬಸವಣ್ಣನವರು ವೃಷಭಲಗ್ನದಲ್ಲಿ ಹುಟ್ಟಿದ್ದರಿಂದ ಅವರಿಗೆ ವೃಷಭ ಎಂದೇ ನಾಮಕರಣ ಮಾಡಲಾಯಿತು. ವೃಷಭದ ತದ್ಭವ ಬಸವ ಆದ್ದರಿಂದ ಮುಂದೆ ಅವರ ಹೆಸರು ಬಸವ ಅಂತಲೇ ಚಾಲ್ತಿಗೆ ಬಂತು. ಮಾತ್ರವಲ್ಲ ಅದೇ ಹೆಸರಲ್ಲಿ ಅವರು ಯುಗಪುರುಷ ಅಂತಲೇ ಖ್ಯಾತಿಯನ್ನು ಪಡೆದರು. ಬಾಲ್ಯದಿಂದಲೂ ಬಸವಣ್ಣನವರು ಮೂಢಾಚಾರ, ಕಂದಾಚಾರಗಳನ್ನು ಸಹಿಸುತ್ತಿರಲಿಲ್ಲ.
ಕರ್ಮಠ ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿದ ಬಸವಣ್ಣನವರಿಗೆ ಅಲ್ಲಿಯ ಮೂರು ಹೊತ್ತು ಸ್ನಾನ, ಮಡಿ, ಪೂಜೆ ಇಷ್ಟವಾಗುತ್ತಿರಲಿಲ್ಲ. ಅದಕ್ಕಾಗಿ ಅವರು ‘ನಿತ್ಯಸ್ನಾನದಿಂದ ಬಾಹ್ಯಶುದ್ಧಿಯಾಗುವುದು ದಿಟ; ಕೇವಲ ಬಾಹ್ಯಶುದ್ಧಿಯಿಂದ ಹೆಚ್ಚಿನ ಪ್ರಯೋಜನವಾಗದು; ಬಾಹ್ಯಶುದ್ಧಿಯೊಂದಿಗೆ ಆಂತರಿಕ ಶುದ್ಧಿಯೂ ಆಗಬೇಕು’ ಎಂಬ ಸೊಲ್ಲನ್ನು ಎತ್ತತೊಡಗಿದರು. ಸಕಲ ವೇದವನ್ನೂ ಅಧ್ಯಯನ ಮಾಡಿದ ಅವರು ಪುರಾಣ ಪುಣ್ಯಕಥೆಗಳನ್ನು ಗಂಭೀರವಾಗಿ ಆಲಿಸುತ್ತಿದ್ದರು. ಸಂತತವಾದ ಚಿಂತನ-ಮಂಥನಗಳಿಂದ ಅವರು ಕರ್ಮಮಾರ್ಗಕ್ಕಿಂತ ಭಕ್ತಿಮಾರ್ಗವೇ ಶ್ರೇಷ್ಠವೆಂದು ಮನಗಂಡರು.
ಅದರ ಹಿನ್ನೆಲೆಯಲ್ಲೇ ಅವರು ಅರ್ಥಹೀನ ಪದ್ಧತಿಗಳನ್ನು ಟೀಕಿಸತೊಡಗಿದರು. ಅವರ ಆ ಟೀಕೆ ಮೌಢ್ಯವೇ ತುಂಬಿಕೊಂಡಿದ್ದ, ಕಂದಾಚಾರವೇ ಮೇಲುಗೈಯ್ಯಾಗಿದ್ದ ಬ್ರಾಹ್ಮಣ ಸಮುದಾಯಕ್ಕೆ ಇಷ್ಟವಾಗಲಿಲ್ಲ. ಅದೇ ಸಂದರ್ಭದಲ್ಲಿ ಅವರಿಗೆ ಆ ಊರನ್ನು ಬಿಟ್ಟು ಬೇರೆ ಕಡೆ ಹೋಗಬೇಕೆಂಬ ಮನಸ್ಸಾಯಿತು. ಅದರ ಫಲವೇ ಅವರು ಬಾಗೇವಾಡಿಯಿಂದ ಕೂಡಲಸಂಗಮಕ್ಕೆ ಬಂದು ನೆಲೆಸಿದರು.
ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮವೇ ಕಪ್ಪಡಿ ಕ್ಷೇತ್ರವೆಂದು ಕರೆಯಲ್ಪಡುತ್ತದೆ. ಇದೊಂದು ಯಾತ್ರಾಸ್ಥಳ. ಇದಕ್ಕೆ ಕಪ್ಪಡಿ ಎಂದು ಹೆಸರು ಬರಲೂ ಕಾರಣವಿದೆ. ತುಂಡು ಬಟ್ಟೆಗಳನ್ನು ಹೊಂದಿಸಿ ಹೊಲಿದು ಸಿದ್ಧಪಡಿಸಲಾಗುತ್ತಿದ್ದ ಹಚ್ಚಡದ ಮಾದರಿಯ ಕೌದಿಯನ್ನು ಕರ್ಪಟ ಎಂದು ಕರೆಯುತ್ತಾರೆ. ಅಂತಹ ಕರ್ಪಟವನ್ನು ಹೊದ್ದು ಓಡಾಡುವ ಸಂನ್ಯಾಸಿಗಳಿಂದ ಆ ಕ್ಷೇತ್ರ ಗಿಜಿಗುಡುತ್ತಿದ್ದುದರಿಂದ ಅದು ಕಪ್ಪಡಿ ಕ್ಷೇತ್ರವೆಂದು ಹೆಸರಾಯಿತು.
ಬಸವಣ್ಣನವರ ಜೀವನಕ್ಕೆ ಹೊಸ ತಿರುವು ಬಂದದ್ದೇ ಆ ಕಪ್ಪಡಿಯಲ್ಲಿ. ಅಲ್ಲಿ ಅವರಿಗೆ ಈಶಾನ ಗುರುಗಳು ಎಂಬವರ ಪರಿಚಯವಾಗುತ್ತದೆ. ಬಸವಣ್ಣ ನವರಿಗೆ ವಿಭೂತಿಧಾರಣೆಯ ದೀಕ್ಷೆ ನೀಡಿದವರೇ ಈಶಾನ ಗುರುಗಳು. ವಿಭೂತಿ ಧಾರಣೆಯೆಂದರೆ ಕಾಮದಹನದ ಸಂಕೇತ. ಪರಶಿವನನ್ನು ಕೆಣಕಹೋದ ಮನ್ಮಥ ಅವನ ಉರಿಗಣ್ಣಿಗೆ ಸುಟ್ಟು ಬೂದಿ ಯಾಗಿಹೋದ. ಆ ಬೂದಿಯೇ ವಿಭೂತಿ. ಕಾಮವಿಕಾರ ನಮ್ಮಲ್ಲಿ ಉಂಟಾಗದಿರಲಿ ಅನ್ನವುದರ ಸಂಕೇತವೇ ವಿಭೂತಿ ಧಾರಣೆ. ‘ಲಲಾಟದಲಿ ವಿಭೂತಿಯ ಧರಿಸಲ್ಕೆ ಪಾಪಂಗಳು ಬೆಂದು ಹೋಗುವವು’ ಆದ್ದರಿಂದ ‘ಕೂಡಲ ಸಂಗಮ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ’ ಅನ್ನುತ್ತಿದ್ದರು ಬಸವಣ್ಣನವರು.
ಆ ಗುರು-ಶಿಷ್ಯರ ಸಂಬಂಧಂದಿಂದಾಗಿ ಕಪ್ಪಡಿ ಕ್ಷೇತ್ರವು ಒಂದು ಅಧ್ಯಾತ್ಮ ಕೇಂದ್ರವಾಗಿ ಮಾರ್ಪಟ್ಟಿತು. ಅಲ್ಲಿ ಬಸವಣ್ಣನವರು ದೇವರ ದಾಸಿಮಯ್ಯನ ವಚನಗಳನ್ನು ಓದತೊಡಗಿದರು. ಅವುಗಳಿಂದ ಪ್ರೇರಿತರಾದ ಬಸವಣ್ಣನವರು ತಮ್ಮದೇ ಆದ ಶೈಲಿಯಲ್ಲಿ ವಚನಗಳನ್ನು ನುಡಿಯ ತೊಡಗಿದರು ಮತ್ತು ಅವನ್ನು ಬರೆದಿಡತೊಡಗಿದರು. ಅವೇ ಮುಂದೆ ಬಸವಣ್ಣನವರ ವಚನಗಳು ಎಂಬ ಖ್ಯಾತಿಯನ್ನು ಪಡೆದವು. ಅದೇ ಸಂದರ್ಭದಲ್ಲೇ ಬಸವಣ್ಣನವರಿಗೆ ಸಮಾಜದಲ್ಲಿ ತಾಂಡವವಾಡುತ್ತಿದ್ದ ಸ್ಪರ್ಶ-ಅಸ್ಪರ್ಶ ಮನೋಭಾವವನ್ನು ತೊಡೆದು ಹಾಕುವುದಕ್ಕೆ ಮನಸ್ಸು ತುಡಿಯುತ್ತಿತ್ತು.
ದೀನ ದಲಿತರ ಉದ್ಧಾರಕ್ಕೆ ಮನಸ್ಸು ಹಾತೊರೆಯುತ್ತಿತ್ತು. ಸಮಾಜದಲ್ಲಿ ಬೇರೂರಿದ ಮೇಲು-ಕೀಳು ಎಂಬ ಭಾವವನ್ನು ನಿವಾರಿಸುವುದಕ್ಕೆ ಅವರ ಮನಸ್ಸು ಹಪಹಪಿಸುತ್ತಿತ್ತು. ಅವನ್ನು ಬೇರು ಸಹಿತ ಕಿತ್ತು ಹಾಕುವುದಕ್ಕೆ ಅವರು ಮನದೊಳಗೇ ದಂಗೆಯೇಳುತ್ತಿದ್ದರು. ಆ ಸಂದರ್ಭದಲ್ಲೇ ಅವರು
ಮಂಗಳವೇಡೆಗೆ ಬಂದರು. ಮಂಗಳವೇಡೆ ಅಂದು ಬೀದರ್ ಜಿಲ್ಲೆಯ ಕಲ್ಯಾಣನಗರಿಯ ವ್ಯಾಪ್ತಿಗೆ ಸೇರಿತ್ತು. ಕಲ್ಯಾಣನಗರಿ ಚಾಲುಕ್ಯವಂಶದ ಅರಸರ ರಾಜಧಾನಿಯಾಗಿತ್ತು. ಕಲಚುರಿ ವಶಂಕ್ಕೆ ಸೇರಿದ ಬಿಜ್ಜಳನು ಮಂಗಳವೇಡೆಯಲ್ಲಿ ಒಬ್ಬ ಸಾಮಂತನಾಗಿ ರಾಜ್ಯ ನಿರ್ವಾಹ ಮಾಡುತ್ತಿದ್ದ.
ಆತ ಬಸವಣ್ಣನಿಗೆ ಉದ್ಯೋಗ ನೀಡಿದ್ದಲ್ಲದೆ ರಾಜ್ಯದ ಸಮಸ್ತ ಕೋಶಾಗಾರದ ಹೊಣೆಗಾರಿಕೆಯನ್ನೂ ನೀಡಿದ. ಭೌತಿಕವಾಗಿ ಬಸವಣ್ಣನವರು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅವರ ಅಂತರಂಗದಲ್ಲಿ ಸಮಾಜೋದ್ಧಾರದ ಕಾಳಜಿ, ಕಳಕಳಿ ಹಾಗೆಯೇ ಉಳಿದಿದ್ದವು. ಬಿಜ್ಜಳನ ಔದಾರ್ಯ, ಸಜ್ಜನಿಕೆ ಯಿಂದಾಗಿ ಬಸವಣ್ಣನವರ ಅಧಿಕಾರವ್ಯಾಪ್ತಿ ಇನ್ನೂ ವಿಸ್ತಾರಗೊಂಡಿತ್ತು. ಸೈನ್ಯ, ವಿದೇಶನೀತಿ, ಹಣಕಾಸಿನ ಆಡಳಿತ ಎಲ್ಲವೂ ಅವರ ಅಧೀನದಲ್ಲೇ ಇದ್ದವು. ಬಿಜ್ಜಳನ ಎಣೆಯಿಲ್ಲದ ಔದಾರ್ಯ ಮತ್ತು ಬಸವಣ್ಣನವರ ಮೇಲಿನ ಅಪಾರ ಗೌರವದಿಂದಾಗಿ ಬಸವಣ್ಣನವರೂ ಕೂಡಾ ಬಡವರ ಕಲ್ಯಾಣ ಕ್ಕಾಗಿ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ಕಾಗಿ ರಾಜ್ಯದ ಬೊಕ್ಕಸದಿಂದ ಧಾರಾಳವಾಗಿ ಹಣವನ್ನು ವ್ಯಯಿಸುತ್ತಿದ್ದರು. ಇಂತಹ ಸಂದರ್ಭದಲ್ಲೇ ಅವರು ಏಕೇಶ್ವರವಾದವನ್ನು ಎತ್ತಿಹಿಡಿದರು.
ಯಾವುದೇ ಆತ್ಮೀಯ ಬಾಂಧವ್ಯವೂ ಒಂದು ದಿನ ಕೊನೆಗೊಳ್ಳಲೇ ಬೇಕಲ್ಲವೆ? ಪಿಸುಣರ ಚಾಡಿಮಾತಿನಿಂದಾಗಿ ಬಸವಣ್ಣನವರಿಗೂ ಬಿಜ್ಜಳನಿಗೂ
ವೈಮನಸ್ಯವೇರ್ಪಟ್ಟಿತು. ಅದರ ಪರಿಣಾಮ ಎಲ್ಲಿಯವರೆಗೆ ಹೋಯಿತು ಆಂದರೆ ಬಸವಣ್ಣನವರಿಗೆ ಬಿಜ್ಜಳನ ಆಶ್ರಯ ತಪ್ಪಿದರೆ ಸಾಕು ಅನ್ನವಂತಾಗಿ
ಹೋಯಿತು. ‘ಮನೆಯೊಳಗಣ ಕಿಚ್ಚು ಮನೆಯ ಸುಟ್ಟ ಲ್ಲದೆ ನೆರೆಮನೆಯ ಸುಡದು’ ಎಂದು ಪರಿತಪಿಸುವಂತಾಯಿತು. ಬಸವಣ್ಣನವರ ಸಮಾಜೋ ದ್ಧಾರ ಕ್ರಾಂತಿಯನ್ನು, ದೀನ ದಲಿತರ ಉದ್ಧಾರ ಯೋಜನೆಯನ್ನು, ಅಸ್ಪೃಶ್ಯತೆ ನಿವಾರಣೆಗಾಗಿ ಕೈಗೊಂಡ ಹತ್ತು ಹಲವು ಕ್ರಾಂತಿಕಾರಕ ಹೆಜ್ಜೆಗಳನ್ನು ಬಿಜ್ಜಳನ ಮಂತ್ರಿ ಪರಿಷತ್ತು ಸಂದೇಹದಿಂದ ನೋಡತೊಡಗಿತು.
ಬಸವಣ್ಣ ನವರು ಧರ್ಮದ್ರೋಹ ಮಾಡುತ್ತಿದ್ದಾರೆ; ವರ್ಣಸಂಕರವನ್ನುಂಟು ಮಾಡುತ್ತಿದ್ದಾರೆ; ಶಿವಶರಣರ ನೆಪದಲ್ಲಿ ಸ್ವತಂತ್ರ ಸೇನೆಯನ್ನು ಕಟ್ಟುತ್ತಿದ್ದಾರೆ ಎಂದೆಲ್ಲಾ ಆಪಾದನೆ ಹೊರಿಸಲಾಯಿತು. ಆ ಆಪಾದನೆಯನ್ನು ಸಹಿಸದ ಬಸವಣ್ಣನವರು ತಮ್ಮ ಸ್ಥಾನಕ್ಕೆ ರಾಜೀನಾಮೆಯಿತ್ತು
ಪುನಃ ಕೂಡಲಸಂಗಮಕ್ಕೇ ಬಂದು ನೆಲೆಸಿದರು. ಕೆಲಕಾಲದ ನಂತರ ಕ್ರಿಸ್ತ ಶಕ ಸುಮಾರು ೧೧೬೭-೬೮ರಲ್ಲಿ ಮಲಪ್ರಭಾ ಮತ್ತು ಕೃಷ್ಣಾ ನದಿಯ ಸಂಗಮದಲ್ಲಿ ಬಸವಣ್ಣನವರು ಲಿಂಗೈಕ್ಯರಾದರು ಎಂದು ನಂಬಲಾಗಿದೆ. ಅದು ಏನೇ ಇರಲಿ. ಬಸವಣ್ಣನವರು ಹೊತ್ತಿಸಿದ ಜ್ಞಾನದೀವಿಗೆ ಇಂದಿಗೂ ಮಸುಕಾಗದೆ ಜನಮ ನವನ್ನು ಬೆಳಗುತ್ತಾ ಇದೆ. ಅವರು ಕೈಗೊಂಡ ಕ್ರಾಂತಿಕಾರಕ ಯೋಜನೆ ಪೂರ್ಣಪ್ರಮಾಣದಲ್ಲಿ ನೆರವೇರದಿದ್ದರೂ ಅವರ ವಚನವನ್ನು ಉಲ್ಲೇಖಿಸುತ್ತಾ, ಅವನ್ನು ಅನುಸಂಧಾನ ಮಾಡುತ್ತಾ, ಆತ್ಮಪರಿಶೋಧನೆಯ ಹಾದಿಯಲ್ಲಿ ಚಿಂತಿಸುತ್ತಾ, ಪರಿವರ್ತನೆಯ ಮಾರ್ಗದಲ್ಲಿ
ಬೆಳಕನ್ನು ಕಾಣುತ್ತಾ ಸಾಗುತ್ತಿರುವವರು ಇಂದಿಗೂ ಅನೇಕ ಮಂದಿ ಇದ್ದಾರೆ ಅನ್ನವುದೇ ವಚನಸಾಹಿತ್ಯದ ಜೀವಂತಿಕೆಗೆ ಮತ್ತು ಅದರ ಕಟು ವಾಸ್ತವದ
ಅನುಭವಾಮೃತಕ್ಕೆ ಸಾಕ್ಷಿಯಾಗಿದೆ.