Monday, 9th September 2024

ಸಾಮಾಜಿಕ ಸಮಾನತೆಯ ಹರಿಕಾರ ಬಸವಣ್ಣನವರು

ಬಸವಪಥ

ಡಾ.ಸತೀಶ ಕೆ.ಪಾಟೀಲ

ಜಗತ್ತಿನ ಪ್ರಥಮ ಸಂಸತ್ತು ಎನ್ನಲಾಗುವ ‘ಅನುಭವ ಮಂಟಪ’ಕ್ಕೆ ಕೆಳಜಾತಿಯ ವ್ಯಕ್ತಿಯೊಬ್ಬನನ್ನು ಮುಖ್ಯಸ್ಥನನ್ನಾಗಿ ಮಾಡುವ ಮೂಲಕ ಬಸವಣ್ಣನವರು ಸಾಮಾಜಿಕ ನ್ಯಾಯದ ತತ್ವವನ್ನು ಎತ್ತಿಹಿಡಿದರು. ಈ ಅನುಭವ ಮಂಟಪದಲ್ಲಿ ಸ್ತ್ರೀಯರು ಮತ್ತು ಕೆಳಜಾತಿಯವರು ಎಂಬ ಭೇದ ಮಾಡದೆ, ಎಲ್ಲರಿಗೂ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು.

ಜಗಜ್ಯೋತಿ ಬಸವೇಶ್ವರರು ೧೨ನೇ ಶತಮಾನದಲ್ಲಿ ಭಾರತ ಮತ್ತು ವಿಶ್ವ ಕಂಡ ಶ್ರೇಷ್ಠ ದಾರ್ಶನಿಕರು, ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರು
ಹಾಗೂ ಸಮಾಜ ಸುಧಾರಕರಲ್ಲಿ ಒಬ್ಬರು. ಇವರು ಪ್ರತಿಪಾದಿಸಿದ ಕ್ರಾಂತಿಕಾರಕ ವಿಚಾರಗಳು ಸಾಮಾಜಿಕ ಬದಲಾವಣೆಗೆ ಕಾರಣವಾದವು ಮತ್ತು ಸಾಂಪ್ರದಾಯಿಕ ಕಂದಾಚಾರಗಳಿಗೆ ಪ್ರತಿಯಾಗಿ ಹೊಸ ಚಿಂತನೆ ಮೊಳಕೆಯೊಡೆಯಲು ಕಾರಣವಾದವು.

ತಾವಿದ್ದ ಕಾಲಘಟ್ಟದಲ್ಲಿ ಬೇರುಬಿಟ್ಟಿದ್ದ ಜಾತಿಪದ್ಧತಿಯ ವಿರುದ್ಧ ತಮ್ಮ ಚಿಂತನೆಯನ್ನು ಹರಿಬಿಟ್ಟ ಬಸವೇಶ್ವರರು, ‘ಸಮಾಜದಲ್ಲಿ ಎಲ್ಲ ಜಾತಿಯ ಜನರು ಸಮಾನರು’ ಎಂದು ಸಾರುವ ಮೂಲಕ ಆಧುನಿಕ ಪ್ರಜಾಪ್ರಭುತ್ವದ ಮೂಲತತ್ವವಾದ ಸಮಾನತೆಯನ್ನು ಎತ್ತಿ ಹಿಡಿದರು. ಇದಕ್ಕೆ ಪೂರಕವಾಗಿ
ದಾಸೋಹದ ಪರಿಕಲ್ಪನೆಯನ್ನು ಜಾರಿಗೆ ತಂದರು. ‘ಅನುಭವ ಮಂಟಪ’ವನ್ನು ಸ್ಥಾಪಿಸುವ ಮೂಲಕ ಎಲ್ಲಾ ಜನಾಂಗದವರು, ವಿಶೇಷವಾಗಿ ಸಮಾಜದ ಕೆಳವರ್ಗದ ಜನರು ಮತ್ತು ಸ್ತ್ರೀಯರು ಮುಕ್ತವಾಗಿ ಭಾಗವಹಿಸುವಂತಾಗುವುದಕ್ಕೆ ವೇದಿಕೆಯನ್ನು ನಿರ್ಮಿಸಿದರು.

ಇದು ಜಗತ್ತಿನ ಮೊದಲ ಸಂಸತ್ತು ಎಂದು ಖ್ಯಾತಿ ಪಡೆದದ್ದು ಈಗ ಇತಿಹಾಸ. ಬಸವಣ್ಣನವರು, ಸ್ತ್ರೀಯರ ಸಮಾನ ಹಕ್ಕುಗಳ ಬಗ್ಗೆ ಮೊದಲ ಸಲ ಪ್ರತಿಪಾದಿಸಿದ ಶ್ರೇಷ್ಠ ಸ್ತ್ರೀವಾದಿ ಚಿಂತಕರು ಕೂಡ ಹೌದು. ಸಾಮಾಜಿಕ ನ್ಯಾಯದ ಬಗೆಗಿನ ತಮ್ಮ ಚಿಂತನೆಗಳಿಂದಾಗಿ ಬಸವಣ್ಣನವರು ಕೆಳವರ್ಗದ
ಜನರ ಉದ್ಧಾರಕ್ಕಾಗಿಯೇ ಜನಿಸಿದ ಶ್ರೇಷ್ಠ ಆತ್ಮ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಸಾಮಾಜಿಕ ಸಮಾನತೆಯ ಹರಿಕಾರ ಬಸವೇಶ್ವರರ ಜಯಂತಿಯನ್ನು ಇಂದು (ಮೇ ೧೦) ಆಚರಿಸ ಲಾಗುತ್ತಿದೆ.

ಹನ್ನೆರಡನೆಯ ಶತಮಾನದಲ್ಲಿ ಬೇರೂರಿದ್ದ ಜಾತಿಯ ಅಸಮಾನತೆಯನ್ನು ಹೋಗಲಾಡಿಸಲೆಂದು ಮತ್ತು ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಹರಿದೊಗೆಯಲೆಂದು ಬಾಲ್ಯ ದಲ್ಲಿಯೇ ತಮ್ಮ ಮುಂಜಿ ಆಚರಣೆಯನ್ನು ತಿರಸ್ಕರಿಸಲು ಮುಂದಾದರು ಬಸವಣ್ಣನವರು. ಜಾತಿ, ಜನಾಂಗ, ಲಿಂಗಗಳ
ಆಧಾರದ ಮೇಲೆ ಸಮಾಜವನ್ನು ವಿಭಜಿಸುವುದು ಸರಿಯಲ್ಲವೆಂದು ಹೇಳಿ, ಮಾನವ ಜೀವನದ ಎಲ್ಲ ರಂಗಗಳಲ್ಲಿ ಸಮಾನತೆ ತರಲು ಯತ್ನಿಸಿದ ಬಸವಣ್ಣನವರು, ಸಮಾಜದಲ್ಲಿ ಉಚ್ಚ-ನೀಚ ಎಂಬ ತಾರತಮ್ಯ ಇರಲೇಕೂಡದೆಂದು ಪ್ರತಿಪಾದಿಸಿದರು.

ಜಾತಿ-ಮತ-ಗೋತ್ರದಂಥ ಅನಿಷ್ಟಗಳು ಮಾನವರು ಕಟ್ಟಿ ಕೊಂಡಿದ್ದೇ ವಿನಾ ಅವು ದೇವನಿರ್ಮಿತವಲ್ಲ ಎಂದು ಸಾರಿದರು. ಅಂತೆಯೇ, ಬಸವಣ್ಣನವರು ನಿರ್ಮಿಸಿದ ಹೊಸ ಸಮಾಜ ದಲ್ಲಿ ಪುರೋಹಿತ ಹಾಗೂ ಮಾದಿಗ ಇಬ್ಬರಿಗೂ ಸಮಾನ ಸ್ಥಾನಮಾನ ಕಲ್ಪಿಸಲಾಗಿತ್ತು. ‘ಮೇಲು-ಕೀಳು ಹುಟ್ಟಿನಿಂದ
ಬಂದವುಗಳಲ್ಲ; ಅವು ಅವರವರ ಯೋಗ್ಯತೆಯ ಮೇಲೆ ದಕ್ಕು ವಂಥ ಸ್ಥಿತಿಗಳು. ಹೊಲೆಯ, ಮಾದಿಗ ಎಂಬ ಜಾತಿಗಳಿಲ್ಲ.

ಉಚ್ಚ ವರ್ಗದಲ್ಲಿ ಹುಟ್ಟಿರುವೆ ಎಂದು ಹೇಳಿಕೊಳ್ಳುವವನೊಬ್ಬ ಹಿಂಸಾಕಾರ್ಯದಲ್ಲಿ ತೊಡಗಿದರೆ, ಹೊಲಸು ತಿನ್ನುವ ಚಪಲಕ್ಕೆ ಒಳಗಾದರೆ ಅವನನ್ನು ಹೊಲೆಯನೆಂದು ಕರೆಯಬೇಕು. ಕೀಳು ಎನ್ನಲಾದ ಜಾತಿಯಲ್ಲಿ ಹುಟ್ಟಿದವನೊಬ್ಬ ಸಾತ್ವಿಕ ಜೀವನ ನಡೆಸಿದರೆ ಅವನನ್ನು ಉಚ್ಚ ಕುಲದವ ನೆಂದು ಕಾಣಬೇಕು’ ಎಂಬ ಉದಾತ್ತ ಆಶಯಗಳನ್ನು ಬಸವಣ್ಣನವರು ತಮ್ಮ ವಚನ ಗಳ ಮೂಲಕ ಪ್ರತಿಪಾದಿಸಿದರು.

‘ನೆಲವೊಂದೇ ಹೊಲೆಗೇರಿ ಶಿವಾಲಯಕ್ಕೆ, ಜಲವೊಂದೇ ಶೌಚಾಚಮನಕ್ಕೆ, ಕುಲವೊಂದೇ ತನ್ನ ತಾನರಿದವಂಗೆ, ಫಲವೊಂದೇ ಷಡುದರುಶನ ಮುಕ್ತಿಗೆ, ನಿಲವೊಂದೇ ಕೂಡಲ ಸಂಗಮದೇವಾ ನಿಮ್ಮನರಿದವಂಗೆ’ ಎಂಬುದಾಗಿ ಬಸವಣ್ಣನವರು ತಮ್ಮ ವಚನವೊಂದರಲ್ಲಿ ಹೇಳಿಕೊಂಡಿದ್ದಾರೆ. ಜನರ
ನಡುವೆ ಮೇಲುಜಾತಿ-ಕೀಳುಜಾತಿ ಎಂಬ ಭೇದವೇಕೆ ಎಂಬ ಆಶಯ ಇಲ್ಲಿ ಸ್ಪಷ್ಟವಾಗಿ ಧ್ವನಿಸುತ್ತದೆ. ವೃತ್ತಿಗಳಲ್ಲಿ ಮೇಲು-ಕೀಳು ಎಂದು ವಿಂಗಡಿಸು ವುದು ಮಹಾದ್ರೋಹ ಎಂದು ನಂಬಿದ್ದ ಬಸವಣ್ಣನವರು ‘ಕಾಯಕವೇ ಕೈಲಾಸ’ ಎಂಬ ಹೊಸ ಸಂದೇಶವನ್ನು ಜಗತ್ತಿಗೆ ನೀಡಿದರು.

‘ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗ ನಾದ, ವೇದವನೋದಿ ಹಾರವನಾದ, ಕರ್ಣದಲ್ಲಿ ಜನಿಸಿದ ವರುಂಟೇ ಜಗದೊಳಗೆ’ ಎಂಬ ತಮ್ಮ ಇನ್ನೊಂದು ವಚನದಲ್ಲಿ, ‘ಶ್ರೇಷ್ಠ, ಕನಿಷ್ಠ ಎನ್ನುವಂಥ ಯಾವ ಕಾಯಕವೂ ಇಲ್ಲ. ಎಲ್ಲ ಕಾಯಕಗಳಿಗೂ ಸಮಾನ ಗೌರವವಿದೆ’ ಎಂದು ಬಸವಣ್ಣನವರು ಸಾರಿದ್ದಾರೆ. ಕಮ್ಮಾರಿಕೆಯಾಗಲೀ, ಚರ್ಮದ ಹದಮಾಡುವಿಕೆ ಯಾಗಲೀ, ಹೂ-ಪತ್ರಿಗಳನ್ನು ಎತ್ತಿಕೊಂಡು ಬರುವುದಾಗಲೇ ಎಲ್ಲವೂ ಪವಿತ್ರ ಕೆಲಸಗಳೇ. ಆಯಾ ಕಾಯಕದವರನ್ನು ಒಂದು ಜಾತಿ ಎಂದು ಬಗೆಯುವುದು ಸಲ್ಲದ ಮಾರ್ಗ ಎಂದ ಬಸವಣ್ಣನವರು ಮಾನವತೆಗೆ ಮಹತ್ವ ನೀಡಿದರು.

ಸಾಮಾಜಿಕ ಸಮಾನತೆಯನ್ನು ಕೇವಲ ತಮ್ಮ ಚಿಂತನೆಯಲ್ಲಿ ವ್ಯಕ್ತಪಡಿಸದೆ, ಅದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಯತ್ನಿಸಿದ ಮೊದಲ ಸಮಾಜ ಸುಧಾರಕರು ಬಸವಣ್ಣನವರು. ಅಂತರ್ಜಾತೀಯ ವಿವಾಹವನ್ನು ಏರ್ಪಡಿಸುವ ಮೂಲಕ ಅಸಮಾನತೆಯನ್ನು ತೊಡೆದು ಹಾಕುವುದಕ್ಕೆ ಅವರು ಮುಂದಾಗಿದ್ದೇ ಇದಕ್ಕೆ ಸಾಕ್ಷಿ. ಇದರ ಭಾಗವಾಗಿ ಸ್ವತಃ ಬಸವಣ್ಣನವರು ಕ್ಷೇತ್ರೀಯ ವಂಶದ ಸಿದ್ಧರಸನ ಮಗಳು ನೀಲಾಂಬಿಕೆಯನ್ನು ಮದುವೆ ಯಾದರು; ನಂತರ ಬ್ರಾಹ್ಮಣ ಮಧುವರಸನ ಮಗಳನ್ನು ಸಮಗಾರ ಹರಳಯ್ಯನ ಮಗನಿಗೆ ಕೊಡಿಸಿ ತಾವೇ ಮುಂದೆ ನಿಂತು ವಿವಾಹ ಮಾಡಿಸಿದರು.

ಇದು ಕಲ್ಯಾಣದಲ್ಲಿ ಕ್ರಾಂತಿಗೆ ಕಾರಣವಾಯಿತು. ‘ಮೇಲುವರ್ಗದವರೆನಿಸಿಕೊಂಡವರು ಕೆಳವರ್ಗದ ಸೀಯರನ್ನು ದೇಹಸುಖಕ್ಕಾಗಿ ಬಳಸಿಕೊಳ್ಳು
ತ್ತಾರೆ, ಆದರೆ ಅವರನ್ನು ಮದುವೆಯಾಗಲಿಕ್ಕೆ ಇಚ್ಛಿಸುವುದಿಲ್ಲ. ಇದ್ಯಾವ ನ್ಯಾಯ?’ ಎನ್ನುವುದು ಬಸವಣ್ಣನವರ ಪ್ರಶ್ನೆಯಾಗಿತ್ತು. ಹೀಗೆ ಅವರು ಪ್ರತಿಪಾದಿಸಿದ ಅಂತರ್ಜಾತೀಯ ವಿವಾಹದ ಚಿಂತನೆಯು ಸಮಾಜದಲ್ಲಿದ್ದ ಅಸ್ಪೃಶ್ಯತೆಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಒಂದು ಶ್ರೇಷ್ಠ ಅಸ ಎನಿಸಿ
ಕೊಂಡಿತು. ಅವರ ಈ ಚಿಂತನೆ ಇಂದಿನ ಸಮಾಜಕ್ಕೂ ಅನ್ವಯಿಸುತ್ತದೆ ಎಂಬುದು ಗಮನಾರ್ಹ.

ದಾಸೋಹ ತತ್ವದ ಮೂಲಕ ಸಹಪಂಕ್ತಿ ಭೋಜನವನ್ನು ಏರ್ಪಡಿಸಿ ಸಮಾಜದಲ್ಲಿನ ಭೇದಭಾವವನ್ನು ತೊಡೆದು ಹಾಕಲು ಯತ್ನಿಸಿದ ಬಸವಣ್ಣ ನವರು, ತನ್ಮೂಲಕ ಮಡಿ- ಮೈಲಿಗೆ ಎಂಬ ಕಂದಾಚಾರವನ್ನು ಮೆಟ್ಟಿ ನಿಲ್ಲಲು ಹೋರಾಡಿದರು. ‘ಸಮಾಜದಲ್ಲಿನ ಎಲ್ಲ ವರ್ಗದ ಜನರು ಗೌರವಯುತ
ಜೀವನವನ್ನು ನಡೆಸಬೇಕು’ ಎಂಬ ಇಂದಿನ ವಿಶ್ವ ಮಾನವ ಹಕ್ಕುಗಳ ಘೋಷಣೆಗೆ ಪೂರಕವಾದ ಚಿಂತನೆಯನ್ನು ಬಸವಣ್ಣನವರು ಅಂದೇ ಹೊಮ್ಮಿಸಿ ದ್ದರು. ಮಾತ್ರವಲ್ಲದೆ, ‘ದುಡಿದು ದಕ್ಕಿದ ದವಸ-ಧಾನ್ಯವನ್ನು ತಮಗೆ ಎಷ್ಟು ಅವಶ್ಯಕವೋ ಅಷ್ಟನ್ನು ಬಳಸಿ, ಉಳಿದಿದ್ದನ್ನು ದಾಸೋಹಕ್ಕೆ ವಿನಿಯೋಗಿ ಸಬೇಕು’ ಎನ್ನುವ ಮೂಲಕ ಸಮಾಜದಲ್ಲಿನ ಬಡತನವನ್ನು ಹೋಗಲಾಡಿಸಲು ಯತ್ನಿಸಿದರು.

ಸಮಾಜದಲ್ಲಿ ಬಡವ ಮತ್ತು ಶ್ರೀಮಂತ ಎಂಬ ಭೇದ ಇರಬಾರದು ಎಂಬ ಭಾವವನ್ನು ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎಂಬ
ಬಸವಣ್ಣನವರ ಮಾತಿನಲ್ಲಿಯೇ ಕಾಣಬಹುದು. ಶರಣ ಹರಳಯ್ಯ ಮತ್ತು ಆತನ ಹೆಂಡತಿ ತಮ್ಮ ತೊಡೆಯ ಚರ್ಮದಿಂದ ಬಸವಣ್ಣನಿಗೆ ಪಾದರಕ್ಷೆ ಗಳನ್ನು ಮಾಡಿಕೊಂಡು ಬಂದು ಕೈಯಲ್ಲಿ ಕೊಟ್ಟಾಗ, ಬಸವಣ್ಣನವರು ಆ ಪಾದರಕ್ಷೆ ಗಳನ್ನು ಕಾಲಲ್ಲಿ ಹಾಕಿಕೊಳ್ಳದೆ ತಲೆಯ ಮೇಲೆ ಹೊತ್ತುಕೊಂಡು ಕುಣಿದಾಡಿದರಂತೆ. ಈ ಪ್ರಸಂಗವು ಜಾಗತಿಕ ಮಾನವ ಚರಿತ್ರೆ ಯಲ್ಲಿ ಸುವರ್ಣಾಕ್ಷರಗಳಿಂದ ದಾಖಲಿಸುವಂಥದ್ದು.

ಅಸ್ಪೃಶ್ಯರ ಕುಲದಲ್ಲಿ ಹುಟ್ಟಿದ, ಮದ್ದಳೆ ಬಾರಿಸುವ ಕಾಯಕದ ಅಲ್ಲಮಪ್ರಭು ಅವರನ್ನು ‘ಅನುಭವ ಮಂಟಪ’ದ ಅಧ್ಯಕ್ಷನನ್ನಾಗಿಸಿದ್ದು, ಅಲ್ಲಮಪ್ರಭು ಗಳು ಎಲ್ಲರಿಗೂ ಗುರು ಸ್ಥಾನದಲ್ಲಿ ನಿಂತಿದ್ದು ಒಂದು ಐತಿಹಾಸಿಕ ದಾಖಲೆ. ಜಗತ್ತಿನ ಪ್ರಥಮ ಸಂಸತ್ತು ಎನ್ನಲಾಗುವ ಅನುಭವ ಮಂಟಪಕ್ಕೆ ಹೀಗೆ ಕೆಳಜಾತಿಯ ವ್ಯಕ್ತಿಯೊಬ್ಬನನ್ನು ಮುಖ್ಯಸ್ಥನನ್ನಾಗಿ ಮಾಡುವ ಮೂಲಕ ಬಸವಣ್ಣನವರು ಸಾಮಾಜಿಕ ನ್ಯಾಯದ ತತ್ವವನ್ನು ಎತ್ತಿಹಿಡಿದರು. ಈ ಅನುಭವ ಮಂಟಪದಲ್ಲಿ ಸ್ತ್ರೀಯರು ಮತ್ತು ಕೆಳಜಾತಿಯವರು ಎಂಬ ಭೇದಭಾವ ಮಾಡದೆ, ಎಲ್ಲರಿಗೂ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು.

ವೇದಕಾಲದಲ್ಲಿ ಹಾಕಲಾಗಿದ್ದ ನಿರ್ಬಂಧಗಳಿಂದಾಗಿ ಸ್ತ್ರೀಯರ ಬದುಕು ಶೋಚನೀಯವಾಗಿತ್ತು. ಇದನ್ನು ಮನ ಗಂಡ ಬಸವಣ್ಣನವರು, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೀಯರಿಗೆ ಭಾಗವಹಿಸುವ ಅವಕಾಶ ನೀಡುವ ಮೂಲಕ ಅವರ ಸ್ವಾತಂತ್ರ್ಯವನ್ನು ಎತ್ತಿಹಿಡಿದರು.
ವಿಧವೆಯರ ಮರುವಿವಾಹಕ್ಕೆ ಪ್ರೋತ್ಸಾಹಿಸಿದರು. ಅನುಭವ ಮಂಟಪದಲ್ಲಿ ಅಲ್ಲಮಪ್ರಭುವಿಗೆ ನೀಡಿದ ಪ್ರಾಮುಖ್ಯವನ್ನು ಅಕ್ಕಮಹಾದೇವಿಗೂ ನೀಡಿದರು. ಹೀಗೆ ತಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕೆ ಇಳಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಉಂಟುಮಾಡಿದ ಹೆಗ್ಗಳಿಕೆ ಬಸವಣ್ಣನವರದ್ದು.

೧೨ನೇ ಶತಮಾನದಲ್ಲಿನ ಅವರ ವಿಚಾರಗಳು, ಚಿಂತನೆಗಳು ಆಧುನಿಕ ಜಗತ್ತಿಗೂ ಪ್ರಸ್ತುತವಾಗಿವೆ ಎಂಬುದನ್ನು ಗಮನಿಸಬೇಕು. ಇಂಥ ಅನುಪಮ ಚಿಂತಕ ಮತ್ತು ಮಹಾನ್ ಸಾಧಕ ಬಸವಣ್ಣನವರನ್ನು ಕೇವಲ ಒಂದು ಜಾತಿಯ ವ್ಯಕ್ತಿ ಎಂಬಂತೆ ಬಿಂಬಿಸುತ್ತಿರುವುದು ವಿಷಾದನೀಯ ಸಂಗತಿ. ಅವರ ಚಿಂತನೆಗಳು ಕೇವಲ ಒಂದು ವರ್ಗಕ್ಕೆ, ಪ್ರದೇಶಕ್ಕೆ ಸೀಮಿತವಾಗದೆ ವಿಶ್ವದ ಎಲ್ಲ ಭಾಗಗಳಿಗೂ ಪಸರಿಸುವಂತಾಗಬೇಕು. ಅವರು ಪ್ರತಿಪಾದಿಸಿರುವ ಚಿಂತನೆಗಳ ಮೂಲಕ ಹೊಸ ಸಮಾಜವನ್ನು ನಿರ್ಮಿಸುವ ಪ್ರಯತ್ನ ನಡೆಯಬೇಕು. ಆಗ ಮಾತ್ರವೇ ಬಸವ ಜಯಂತಿಯ ಆಚರಣೆಗೆ ಸಾರ್ಥಕ್ಯ ಒದಗುತ್ತದೆ.

(ಲೇಖಕರು ರಾಜಕೀಯ ವಿಶ್ಲೇಷಕರು)

Leave a Reply

Your email address will not be published. Required fields are marked *