Friday, 13th December 2024

ಬೊಮ್ಮಾಯಿ ಹೆಗಲಿಗೆ ಮತ್ತೊಂದು ಗಂಟು ?

ಮೂರ್ತಿ ಪೂಜೆ

ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಯ್ಕೆ ಬಹುತೇಕ ನಿಶ್ಚಿತವಾಗಿದೆ. ಕಳೆದ ವಾರ ದಿಲ್ಲಿಗೆ ಹೋಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದ ಬೊಮ್ಮಾಯಿ ನೇರವಾಗಿಯೇ ತಮ್ಮ ಅಹವಾಲನ್ನು ಮುಂದಿಟ್ಟರಂತೆ. ಕರ್ನಾಟಕ ವಿಧಾನಸಭೆಯ ಶಾಸಕಾಂಗ ನಾಯಕ ಸ್ಥಾನಕ್ಕೆ ತಮ್ಮನ್ನು ಪರಿಗಣಿಸಬೇಕು ಎಂದು ಬೊಮ್ಮಾಯಿ ಮನವಿ ಮಾಡಿಕೊಂಡಾಗ ಇಬ್ಬರೂ ನಾಯಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಆದರೆ ರಾಜ್ಯ ಬಿಜೆಪಿಯಲ್ಲಿ ಶಾಸಕಾಂಗ ನಾಯಕನ ಆಯ್ಕೆಯೊಂದೇ ಅಲ್ಲ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ನೀಡಬೇಕು? ನೂತನ ಪದಾಧಿಕಾರಿಗಳ ಹುದ್ದೆಗೆ ಯಾರನ್ನು ನೇಮಕ ಮಾಡಬೇಕು? ಎಂಬುದು ಸೇರಿದಂತೆ ಹಲ ವಿಷಯಗಳನ್ನು ಇತ್ಯರ್ಥಪಡಿಸಬೇಕಿದೆ. ಹೀಗಾಗಿ ಈ ಎಲ್ಲ ವಿಷಯಗಳ ಕುರಿತು ಚರ್ಚಿಸಲು ರಾಜ್ಯ ಬಿಜೆಪಿಯ ಹಲವು ನಾಯಕರನ್ನು ದಿಲ್ಲಿಗೆ ಕರೆಸಿ ಮಾತನಾಡಲು, ಒಮ್ಮತದ ತೀರ್ಮಾನ ತೆಗೆದುಕೊಳ್ಳಲು ಮೋದಿ-ಶಾ ನಿರ್ಧರಿಸಿದ್ದಾರೆ. ಮೊನ್ನೆ ಬೊಮ್ಮಾಯಿ ತಮ್ಮ ಬಳಿ ಬಂದು ಮನವಿ ಸಲ್ಲಿಸಿದಾಗಲೂ ಅಮಿತ್ ಶಾ, ನಡ್ಡಾ ಇದೇ ಕ್ಯಾಸೆಟ್ಟನ್ನು ರೀಪ್ಲೇ ಮಾಡಿದರಂತೆ.

ಅಂದ ಹಾಗೆ, ಕರ್ನಾಟಕದಲ್ಲಿ ಪಕ್ಷ ಅನುಭವಿಸಿದ ಸೋಲಿ ನಿಂದ ಸಿಟ್ಟಿಗೆದ್ದಿರುವ ಬಿಜೆಪಿ ವರಿಷ್ಠರು, ಬೊಮ್ಮಾಯಿ ವಿಷಯದಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಎಂಬ ಮಾತು ರಾಜ್ಯ ಬಿಜೆಪಿಯ ಒಳವಲಯಗಳಲ್ಲಿ ಹರಿದಾಡುತ್ತಿತ್ತು. ಆದರೆ ಕರ್ನಾಟಕದಲ್ಲಿ ಪಕ್ಷದ ಸೋಲಿನ ಹೊಣೆಯನ್ನು ಬೊಮ್ಮಾಯಿ ತಲೆಗೆ ಕಟ್ಟಲು ಮೋದಿ-ಅಮಿತ್ ಶಾ ತಯಾರಿಲ್ಲ. ಕಾರಣ? ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಬೊಮ್ಮಾಯಿ ಅವರಿಗೆ ಪಟ್ಟ ಕಟ್ಟುವಾಗ ಇವರೇನು ‘ಇಮ್ಮಡಿ ಪುಲಿಕೇಶಿ’ ಅಂತ ಮೋದಿ ಭಾವಿಸಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಜನನಾಯಕರೊಬ್ಬರನ್ನು ಕೆಳಗಿಳಿಸಿದಾಗ ಸ್ಟೇಜ್ ಮ್ಯಾನೇಜರ್ ಒಬ್ಬರನ್ನು ತಂದು ಕೂರಿಸುವುದು ಅನಿವಾರ್ಯ ಎಂಬುದು ಅವರಿಗೆ ಗೊತ್ತಿತ್ತು.

ಈ ಮಧ್ಯೆ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಹೋಲಿಕೆಯಾಗಬಲ್ಲ ಮಾಸ್ ಲೀಡರು ಇಲ್ಲವೇ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವಾಗ, ‘ಕೌಂಟರ್ ಲೀಡರ್ ಶಿಪ್’ಗಾಗಿಯೇ ಬೊಮ್ಮಾಯಿ ಅವರನ್ನು ತರಲಾಯಿತು ಎಂಬುದು ಇಮ್ಮೆಚ್ಯೂರ್ ಥಿಂಕಿಂಗು. ರಾಜ್ಯ ಬಿಜೆಪಿ ಘಟಕ ಹೇಳಿ ಕೇಳಿ ಯಡಿಯೂರಪ್ಪ ಮತ್ತು
ಸಂತೋಷ್ ಬಣಗಳ ಮಧ್ಯೆ ಹೊಯ್ದಾಡುತ್ತಿರುವಾಗ ಬೊಮ್ಮಾಯಿ ನಿಂತು ಯಾರನ್ನು ಕಂಟ್ರೋಲು ಮಾಡಲು ಸಾಧ್ಯ? ವಸ್ತುಸ್ಥಿತಿ ಎಂದರೆ ಬೊಮ್ಮಾಯಿ ಅವರಿಗೆ ಕೊಟ್ಟ ಟಾಸ್ಕ್ ಅದಲ್ಲವೇ ಅಲ್ಲ. ಪರಸ್ಪರ ಬಡಿದಾಡುತ್ತಿದ್ದ ಈ ಗುಂಪುಗಳನ್ನು ಹೊಂದಿಸಿಕೊಂಡು ಪರಿಸ್ಥಿತಿಯನ್ನು ಮ್ಯಾನೇಜ್ ಮಾಡುವುದು ಅವರಿಗೆ ಕೊಟ್ಟ ಟಾಸ್ಕು. ವರಿಷ್ಠರ ಪ್ರಕಾರ ಬೊಮ್ಮಾಯಿ ಈ ಟಾಸ್ಕಿನಲ್ಲಿ ಪಾಸಾಗಿದ್ದಾರೆ.

ಈಗ ಕೂಡಾ ಅಷ್ಟೇ. ಅವರೇನು ಪಾರ್ಲಿಮೆಂಟ್ ಚುನಾವಣೆ ಯಲ್ಲಿ ಬಿಜೆಪಿಗೆ ಅದ್ದೂರಿ ಗೆಲುವು ಕೊಡಿಸುವ ಟಾಸ್ಕು ಹೊರಲು ಬಯಸುತ್ತಿಲ್ಲ. ಅದು ತಮಗೆ ಸಾಧ್ಯವೂ ಇಲ್ಲ ಅಂತ ಬೊಮ್ಮಾಯಿ ಅವರಿಗೆ ಗೊತ್ತಿದೆ. ಹೀಗಾಗಿ ಅವರು ಪಾರ್ಲಿಮೆಂಟ್ ಚುನಾವಣೆಗೂ ಮುನ್ನ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ಸನ್ನು ಸಮರ್ಥವಾಗಿ ಎದುರಿಸುವ ಟಾಸ್ಕು ಬೇಕು ಅಂತ ಬಯಸುತ್ತಿದ್ದಾರೆ. ಇವತ್ತು ಸರಕಾರದ ೭೦ರಷ್ಟು ಇಲಾಖೆಗಳ ಆಗು-ಹೋಗುಗಳನ್ನು ಗಮನಿಸಿ, ಸಿದ್ದರಾಮಯ್ಯ ಮುಂದೆ ವಾದಿಸಲು ಬೊಮ್ಮಾಯಿ ಅವರಂಥ ಮಾಸ್ಟರ್ ಬಿಜೆಪಿ ಶಾಸಕಾಂಗ ಪಕ್ಷ ದಲ್ಲಿ ಯಾರಿದ್ದಾರೆ? ಹೆಚ್ಚೇನೂ ಬೇಡ, ಜಲಸಂಪನ್ಮೂಲ
ಖಾತೆ ವ್ಯಾಪ್ತಿಯಲ್ಲೇ ೧೫ಕ್ಕೂ ಹೆಚ್ಚು ಇಲಾಖೆಗಳಿವೆ.

ಇಡೀ ಕರ್ನಾಟಕದ ಆಡಳಿತವನ್ನು ಗಮನದಲ್ಲಿಟ್ಟುಕೊಂಡರೆ ಶೇ.೨೦ರಷ್ಟು ಆಡಳಿತ ಬೆಂಗಳೂರಿನಲ್ಲಿ ಕೇಂದ್ರೀಕೃತ ವಾಗಿದೆ. ಹೀಗೆ ಆಡಳಿತದ ಅಂಕಿ-ಅಂಶಗಳ ಆಟವನ್ನು ಬೊಮ್ಮಾಯಿ ಅವರಷ್ಟು ಬಲ್ಲವರು ಮತ್ತೊಬ್ಬರು ಇಲ್ಲದಿರುವಾಗ ಬೊಮ್ಮಾಯಿ ಬಿಟ್ಟರೆ ಇನ್ಯಾರ ಹೆಗಲಿಗೆ ಶಾಸಕಾಂಗ ನಾಯಕನ, ಆ ಮೂಲಕ ವಿಧಾನಸಭೆ ಪ್ರತಿಪಕ್ಷ ನಾಯಕನ ಜವಾಬ್ದಾರಿ ಹೊರಿಸಬೇಕು? ಎಂಬುದು ವರಿಷ್ಠರ ಯೋಚನೆ. ಯುದ್ಧದಲ್ಲಿ ಒಂದೋ ಭೀಮನಂತೆ ಮುನ್ನುಗ್ಗುವ ಛಲ ಇರಬೇಕು, ಇಲ್ಲವೇ ಅರ್ಜುನನ ಕೌಶಲ ಇರಬೇಕು. ಈ ಹಿಂದೆ ಭೀಮನಂತೆ ಹೋರಾಡಲು ಯಡಿಯೂರಪ್ಪ ಇದ್ದರು. ಆದರೆ ಈಗ ಅಂಥವರು ಇಲ್ಲ.

ಹೀಗಾಗಿ ಕೌಶಲದಿಂದ ಯುದ್ಧ ಮಾಡುವವರು ಬೇಕು. ಈ ಜಾಗಕ್ಕೆ ಬೊಮ್ಮಾಯಿ ಬಿಟ್ಟರೆ ಸದ್ಯಕ್ಕೆ ಬೇರೆಯವರು ಕಾಣುತ್ತಿಲ್ಲ. ಕಾಂಪಿಟೇಶನ್ನಿಗೆ ಅಂತ ಕೆಲವರಿದ್ದಾರಾದರೂ ಅವರಿಗೆ ಒಂದೋ ಕೌಶಲವಿಲ್ಲ, ಇಲ್ಲವೇ ಅಽಕಾರದಲ್ಲಿದ್ದಾಗ ಮಾಡಿದ ಕೆಲಸಗಳು ಅವರನ್ನು ಹಗರಣಗಳ ರೂಪದಲ್ಲಿ ಸುತ್ತುವರಿಯುತ್ತವೆ. ಹಾಗಂತ ಬೊಮ್ಮಾಯಿ ಸುತ್ತ ಆರೋಪಗಳ ಚಕ್ರಸುಳಿ ಇಲ್ಲ ಅಂತೇನಲ್ಲ. ಆದರೆ ಇಂಥ ಸುಳಿಯಲ್ಲಿ ಬೊಮ್ಮಾಯಿ ಅವರನ್ನು ಸಿಲುಕಿಸುವಷ್ಟು ಸಿಟ್ಟು ಸಿಎಂ ಸಿದ್ಧರಾಮಯ್ಯ ಅವರಿಗೂ ಇಲ್ಲ, ಡಿಸಿಎಂ ಡಿಕೆಶಿ ಅವರಿಗೂ ಇಲ್ಲ. ಮುಖ್ಯವಾಗಿ ಅವರು ಯಡಿಯೂರಪ್ಪ ಅವರ ಪರಮಾಪ್ತರಾಗಿರುವುದರಿಂದ ಸರಕಾರದ ಯಾವ
ಮೂಲೆಯಿಂದಲೂ ಅವರ ತಲೆಯ ಮೇಲೆ ಗದೆ ಬೀಳುವುದಿಲ್ಲ. ಈ ಎಲ್ಲ ಅಂಶಗಳು ವರಿಷ್ಠರಿಗೂ ಗೊತ್ತಿರುವುದರಿಂದ ಬೊಮ್ಮಾಯಿ ಪ್ರತಿಪಕ್ಷದ ನಾಯಕರಾಗುವ ಕ್ಷಣ ಹತ್ತಿರ ವಾದಂತೆ ಕಾಣುತ್ತಿದೆ.

ಬೊಮ್ಮಾಯಿ ವಿರುದ್ಧದ ಆರೋಪಗಳೇನು?
ಅಂದ ಹಾಗೆ, ಶಾಸಕಾಂಗ ನಾಯಕನ ಸ್ಥಾನಕ್ಕೆ ಬೊಮ್ಮಾಯಿ ಹತ್ತಿರವಾಗಿದ್ದಾರೆ ಎಂದಮಾತ್ರಕ್ಕೆ ಅವರಿಗೆ ಅಡ್ಡಿಗಳೇ ಇಲ್ಲ ಅಂತಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅಽಕಾರದಲ್ಲಿದ್ದಾಗ ಕಾಂಗ್ರೆಸ್ ವಿರುದ್ಧದ ಹಗರಣಗಳನ್ನು ಅವರೇಕೆ ತನಿಖೆಗೆ ಒಪ್ಪಿಸಲಿಲ್ಲ ಎಂಬ ಬಗ್ಗೆಯೇ ಯಡಿಯೂರಪ್ಪ ವಿರೋಧಿ ಬಣ ಅಮಿತ್ ಶಾ ಅವರಿಗೆ ದೂರು ನೀಡಿದೆಯಂತೆ. ೨೦೧೩ರಿಂದ ೧೮ರವರೆಗೆ ಅಸ್ತಿತ್ವದಲ್ಲಿದ್ದ ಸಿದ್ದರಾಮಯ್ಯ ಸರಕಾರದಲ್ಲಿ ಹಲವು ಹಗರಣಗಳು ನಡೆದವು. ಅದು ‘ರೀ ಡೂ’ ಹಗರಣ ಇರಬಹುದು, ಸೋಲಾರ್ ವಿದ್ಯುತ್ ಹಗರಣವಿರಬಹುದು. ಒಟ್ಟಿನಲ್ಲಿ ಆ ಕಾಲದ ೫ ಪ್ರಮುಖ ಹಗರಣಗಳ ತನಿಖೆಯನ್ನು ಸಿಐಡಿಗೋ, ಸಿಬಿಐಗೋ ವಹಿಸಿದ್ದರೆ ಸಾಕಿತ್ತು, ಚುನಾವಣೆಗೆ ಮುಂಚೆಯೇ ಕೈ ಕಟ್ಟಿ ಹಾಕಬಹುದಿತ್ತು.

ಆದರೆ ಹಾಗೇನಾದರೂ ಮಾಡಿದರೆ, ಸ್ಪಿರಿಟ್ ಹಗರಣ ಮತ್ತು ಬಿಟ್ ಕಾಯಿನ್ ಹಗರಣಗಳ ಅಸಗಳನ್ನು ಪ್ರಯೋಗಿಸಿ ಕಾಂಗ್ರೆಸ್ ತಮಗೆ ಮುಜುಗರ ಉಂಟು ಮಾಡುತ್ತಿತ್ತು ಎಂಬ ಶಂಕೆ ಬೊಮ್ಮಾಯಿ ಅವರಿಗಿತ್ತು. ಹೀಗಾಗಿ ಕಾಂಗ್ರೆಸ್ ಅನ್ನು ಬಡಿಯುವ ವಿಷಯದಲ್ಲಿ ಅವರು ಮೌನವಾದರು ಎಂಬುದು ವಿರೋಧಿಗಳ ಆರೋಪ. ಅಂದ ಹಾಗೆ, ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ಸ್ಪಿರಿಟ್/ಕಾಕಂಬಿ ಮದ್ಯ ತಯಾರಿಕೆಗೆ ಬೇಕೇ ಬೇಕು. ಇಂಥ ಸ್ಪಿರಿಟ್ಟನ್ನು ದೊಡ್ಡ
ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಕಾರವಾರ ಬಂದರಿನಿಂದ ಇದರ ರಫ್ತು ಸುಲಭ. ಆದರೆ ಈ ಬಂದರಿನ ಮೂಲಕ ರಫ್ತು ಮಾಡುವ ಪ್ರತಿ ಲೋಡ್ ಸ್ಪಿರಿಟ್ಟಿಗೆ ಸಿಗುವುದಕ್ಕಿಂತ ಹೆಚ್ಚಿನ ಹಣ ಗೋವಾದಿಂದ ರಫ್ತಾಗುವ ಸ್ಪಿರಿಟ್ಟಿಗೆ ಸಿಗುತ್ತದೆ.

ಹೀಗಾಗಿ ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕರು ತಮ್ಮ ಸ್ಪಿರಿಟ್ ಲೋಡುಗಳು ಗೋವಾದಿಂದ ರಫ್ತಾಗಲಿ ಅಂತ ಬಯಸುತ್ತಾರೆ. ಆದರೆ ಹೀಗೆ ಮಾಡಲು ಸ್ಪಿರಿಟ್ ಹೊತ್ತ ಟ್ರಕ್ಕುಗಳು ಬೆಳಗಾಂ ಚೆಕ್‌ಪೋಸ್ಟ್ ಮೂಲಕ ಹೋಗಲು ಅನುವು ಮಾಡಿ ಕೊಡಬೇಕು. ಪರ್ಮಿಟ್ ಪಡೆದು ಇದನ್ನು ಸಾಗಿಸಬಹುದಾದರೂ ಅದಕ್ಕಾಗಿ ದೊಡ್ಡ ಪ್ರಮಾಣದ ಹಣ ಕಟ್ಟ ಬೇಕು. ಹೀಗಾಗಿ ಬಹುತೇಕ ಟ್ರಕ್ಕುಗಳು ನಕಲಿ ಪರ್ಮಿಟ್ಟಿನ ಮೂಲಕ ಬೆಳಗಾಂ ಚೆಕ್‌ಪೋಸ್ಟ್ ದಾಟುತ್ತವೆ. ಹೀಗೆ ದಾಟಲು ಅವಕ್ಕೆ ಪ್ರಭಾವಿಯೊಬ್ಬರು ದಾರಿ ಮಾಡಿಕೊಟ್ಟಿದ್ದಾರೆ ಮತ್ತು ಈ ವಿಷಯ ಕಾಂಗ್ರೆಸ್ ನಾಯಕರಿಗೆ ಗೊತ್ತಿತ್ತು. ಒಂದು ವೇಳೆ ಕಾಂಗ್ರೆಸ್ ಅವಽಯ ಹಗರಣಗಳನ್ನು ಬೊಮ್ಮಾಯಿ ತನಿಖೆಗೆ ಒಪ್ಪಿಸಿದ್ದರೆ, ಕಾಂಗ್ರೆಸ್ ನಾಯಕರು ಈ ಹಗರಣವನ್ನು ಬಯಲಿಗೆಳೆಯುತ್ತಿದ್ದರು. ಇದು ಗೊತ್ತಿದ್ದ
ರಿಂದಲೇ ಬೊಮ್ಮಾಯಿ ಮೌನ ವಹಿಸಿದರು ಅಂತ ಯಡಿಯೂರಪ್ಪ ವಿರೋಧಿ ಬಣದ ನಾಯಕರು ಅಮಿತ್ ಶಾ ಅವರಿಗೆ ಹೇಳಿದ್ದಾರೆ ಎಂಬುದು ಲೇಟೆಸ್ಟು ಸುದ್ದಿ. ಇದೇ ರೀತಿ ಬೊಮ್ಮಾಯಿ ಅವರನ್ನು ಹೆದರಿಸಲು ಬಿಟ್ ಕಾಯಿನ್ ಹಗರಣಕ್ಕೆ ಸೀಮೆಎಣ್ಣೆ ಸುರಿದು ‘ಗರಂ ಹವಾ’ ಕೊಡ ಬಹುದು.

ಹೀಗಾಗಿ ಬೊಮ್ಮಾಯಿ ಪ್ರತಿಪಕ್ಷ ನಾಯಕರಾದರೆ ಆಪತ್ತು ತಪ್ಪಿದ್ದಲ್ಲ ಎಂಬುದು ಈ ವಿರೋಽಗಳ ದೂರು. ದಿಲ್ಲಿ ಮೂಲಗಳ ಪ್ರಕಾರ, ಈ ದೂರನ್ನು ಸ್ವೀಕರಿಸಿದ
ಅಮಿತ್ ಶಾ ಆ ಕುರಿತು ಮಾತನಾಡಲಿಲ್ಲವಂತೆ. ಕಳೆದ ವಾರ ಬೊಮ್ಮಾಯಿ ಬಂದು ತಮ್ಮನ್ನು ಭೇಟಿ ಮಾಡಿದಾಗಲೂ ಈ ಬಗ್ಗೆ ಅವರು ಚಕಾರ ಎತ್ತಿಲ್ಲ. ಇದೆಲ್ಲವನ್ನು ನೋಡಿದರೆ ಬೊಮ್ಮಾಯಿ ಬಿಜೆಪಿಯ ಶಾಸಕಾಂಗ ನಾಯಕರಾಗುವ ಗಳಿಗೆ ಹತ್ತಿರದಲ್ಲಿದ್ದಂತಿದೆ. ಮುಂದೇನು ಕತೆಯೋ ಕಾದು ನೋಡಬೇಕು.
೨೨ ಸೀಟು ಗೆಲ್ಲಿಸಿ ಕೊಡ್ತೀವಿ ಇಂಟರೆಸ್ಟಿಂಗ್ ವಿಷಯವೆಂದರೆ, ಮೊನ್ನೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಬಳಿ ಮಾತನಾಡುವಾಗ ಯಡಿಯೂರಪ್ಪ, ‘ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ರಾಜ್ಯ ದಿಂದ ಬಿಜೆಪಿಯ ೨೨ ಮಂದಿಯನ್ನು ಗೆಲ್ಲಿಸಿ ಕಳಿಸುತ್ತೇವೆ’ ಎಂದು ಪ್ರಾಮಿಸ್ ಮಾಡಿದ್ದಾರಂತೆ.

ಆದರೆ ಇದರ ಜತೆಗೆ ಒಂದು ಷರತ್ತನ್ನೂ ಹಾಕಿದ್ದಾರಂತೆ. ಅದೆಂದರೆ ತಾವು ಹೇಳಿದವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ, ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ತರಬೇಕು, ತಾವು ಸೂಚಿಸಿದ ವರನ್ನು ಪಕ್ಷದ ಪದಾಽಕಾರಿಗಳನ್ನಾಗಿ ಮಾಡಬೇಕು ಎಂಬುದು. ತಾವು ಹೇಳಿದವರಿಗೆ ಆಯಕಟ್ಟಿನ ಜಾಗ ಸಿಕ್ಕರೆ ಮಾತ್ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ೨೨ ಸೀಟು ಬರುತ್ತದೆ ಎಂಬುದು ಅವರ ಮಾತಿನರ್ಥ. ಈ ಮಾತಿಗೆ ವರಿಷ್ಠರು ಒಪ್ಪುವುದು ಎಂದರೆ ಶೋಭಾ ಕರಂದ್ಲಾಜೆ ಇಲ್ಲವೇ ಆರ್.ಅಶೋಕ್ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಗೆ,ಬೊಮ್ಮಾಯಿ ಅವರನ್ನು ಶಾಸಕಾಂಗ ನಾಯಕನ ಸ್ಥಾನಕ್ಕೆ ತರುವುದು ಎಂದರ್ಥ.

ಒಂದು ವೇಳೆ ಇವೆರಡರಲ್ಲಿ ಒಂದು ತಪ್ಪಿದರೂ ೨೨ ಮಂದಿಯನ್ನು ಪಾರ್ಲಿಮೆಂಟ್ ಚುನಾವಣೆಯಲ್ಲಿ ಗೆಲ್ಲಿಸುವ ಜವಾಬ್ದಾರಿಯನ್ನು ಯಡಿಯೂರಪ್ಪ ಹೊರುವು ದಿಲ್ಲ. ವರಿಷ್ಠರೂ ತಪ್ಪು ಹೊರಿಸುವಂತಿಲ್ಲ. ಯಡಿಯೂರಪ್ಪ ಎಷ್ಟು ಮಾಗಿದ್ದಾರೆ? ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.