ವರ್ತಮಾನ
ಪ್ರದೀಪ್ ಕುಮಾರ್ ಎಂ.
maapala@gmail.com
ಇದೇ ಮೊದಲ ಬಾರಿ ಪ್ರಧಾನಿ ಮೋದಿ ಬೊಮ್ಮಾಯಿ ನೇತೃತ್ವದ ಸರಕಾರಕ್ಕೆ ಶಹಬ್ಬಾಶ್‌ಗಿರಿ ನೀಡಿದ್ದಾರೆ. ಪ್ರಧಾನಿಯವರ ಪ್ರತಿಯೊಂದು ಮಾತು,
ನಡೆಯ ಹಿಂದೆಯೂ ಒಂದು ಉದ್ದೇಶ ಇದ್ದೇ ಇರುತ್ತದೆ. ಸರಕಾರವನ್ನು ಭೇಷ್ ಎಂದಿದ್ದರ ಹಿಂದೆಯೂ ದೊಡ್ಡ ಉದ್ದೇಶ ಮತ್ತು ಗುರಿ ಇದ್ದೇ ಇದೆ.
ಸಾಮಾನ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕೇಂದ್ರ ಸರಕಾರಗಳ ಸಾಧನೆಗಳ ಬಣ್ಣನೆ, ಭವಿಷ್ಯದ ಮುನ್ನೋಟ ಗಳನ್ನು ಹೇಳುತ್ತಾರೆ. ಅದು ಯಾವ ರಾಜ್ಯವೇ ಆಗಿರಲಿ, ಅಲ್ಲಿ ಕೇಂದ್ರದ ಯೋಜನೆಗಳೊಂದಿಗೆ ರಾಜ್ಯ ಸರಕಾರದ ಕೆಲವೊಂದು ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪಿಸುತ್ತಾರೆ. ಅಲ್ಲಿಗೆ ಪ್ರಧಾನಿಯವರ ಭಾಷಣ ಮುಗಿಯುತ್ತದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದರೆ ಆಗ ಡಬಲ್ ಎಂಜಿನ್ ಸರಕಾರದ ಸಾಧನೆ ಎಂದು ಹೇಳಿ ಅಲ್ಲಿಗೇ ಬಿಡುತ್ತಿದ್ದರು. ಆದರೆ, ಗುರುವಾರ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ನಡೆದ ಪ್ರಧಾನಿಯವರ ಕಾರ್ಯಕ್ರಮ ಅದೆಲ್ಲಕ್ಕಿಂತ ಭಿನ್ನವಾಗಿತ್ತು. ರಾಜ್ಯದಲ್ಲಿ ಅಧಿಕಾರ ದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರಕ್ಕೆ ಶಹಬ್ಬಾಸ್‌ಗಿರಿ ನೀಡಿದರು. ಅದು ಸರಕಾರಿ ಕಾರ್ಯಕ್ರಮವಾದರೂ ಹಿಂದಿನ ಸರಕಾರಗಳ ನಿರ್ಲಕ್ಷದಿಂದಲೇ ಉತ್ತರ ಕರ್ನಾಟಕ ಭಾಗ ಹಿಂದುಳಿಯುವಂತಾಗಿದೆ ಎಂದು ಹೇಳಿ ಪ್ರತಿಪಕ್ಷಗಳ ವಿರುದ್ಧ ಚುನಾವಣಾ ರಣಕಹಳೆ ಮೊಳಗಿಸಿದರು. ಅದರಲ್ಲೂ ಯಾದಗಿರಿ ಕಾರ್ಯಕ್ರಮದಲ್ಲಿ ಪ್ರಧಾನಿಯವರ ಮಾತು ಉತ್ತರ ಕರ್ನಾಟಕ ಹಿಂದುಳಿಯಲು ಹಿಂದಿನ ಸರಕಾರಗಳೇ
ಕಾರಣ ಎಂಬ ನೇರ ಆರೋಪವಿತ್ತು.
ಇದಕ್ಕೆ ಕಾರಣವೂ ಇಲ್ಲದಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಮ ಸಾಧನೆ ತೋರಲೇ ಬೇಕು. ಏಕೆಂದರೆ, ದಕ್ಷಿಣ ಕರ್ನಾಟಕದಲ್ಲಿ ಬೆಂಗಳೂರು ನಗರ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಬಿಜೆಪಿಗೆ ಸಂಘಟನೆಯ ಸಮಸ್ಯೆ ಇದೆ. ಮೇಲಾಗಿ
ಇಲ್ಲಿ ಒಕ್ಕಲಿಗರು ಪ್ರಾಬಲ್ಯ ಹೊಂದಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಶಕ್ತಿ ಹೆಚ್ಚಾಗಿದೆ. ಇನ್ನು ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಬಹುದಾದರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ಉತ್ತರ ಕರ್ನಾಟಕದತ್ತ ಬಿಜೆಪಿ ತನ್ನ ಚಿತ್ತ ಹರಿಸಿದೆ. ಆ ನಿಟ್ಟಿನಲ್ಲಿ
ಈಗಾಗಲೆ ಕೇವಲ 10 ದಿನಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದು ಬಾರಿ ಹುಬ್ಬಳ್ಳಿ ಮತ್ತು 2ನೇ ಬಾರಿ ಯಾದಗಿರಿ, ಕಲಬುರಗಿ ಜಿಲ್ಲೆಗಳಿಗೆ ಬಂದು ಹೋಗಿದ್ದಾರೆ.
ಇದೀಗ ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ಜೆ.ಪಿ.ನಡ್ಡಾ ಶನಿವಾರ ವಿಜಯಪುರ ಜಿಲ್ಲೆಯ ನಾಗಠಾಣಾ ಕ್ಷೇತ್ರದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಅಭಿ ಯಾನ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ಅರ್ಥ ಆ ಪಕ್ಷ ಉತ್ತರ ಕರ್ನಾಟಕವನ್ನು ಗಂಭೀರವಾಗಿ ಪರಿಗಣಿಸಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಯೋಜನೆ ರೂಪಿಸುತ್ತಿದೆ ಎಂಬುದು. ಯಾದಗಿರಿಯಲ್ಲಿ ಪ್ರಧಾನಿಯವರ ಭಾಷಣವನ್ನೇ ಗಮನಿಸುವುದಾದರೆ, ಉತ್ತರ ಕರ್ನಾಟಕದ ಜಿಲ್ಲೆ ಗಳನ್ನು ಹಿಂದುಳಿದ ಜಿಲ್ಲೆಗಳೆಂದು ಘೋಷಿಸಿದ ಹಿಂದಿನ ಸರಕಾರಗಳು ಆನಂತರದಲ್ಲಿ ಅಲ್ಲಿನ ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ. ಕನಿಷ್ಠ ಯೋಚನೆ ಯನ್ನೂ ಮಾಡಿರಲಿಲ್ಲ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆಯಷ್ಟೇ ಈ ಭಾಗದ ಅಭಿವೃದ್ಧಿ ಶುರುವಾಗಿದ್ದು ಎಂದರು. ಇದಕ್ಕೆ ಪೂರಕವಾಗಿ
ಸರಕಾರಗಳು ಕೈಗೊಂಡಿರುವ ಯೋಜನೆಗಳ ಬಗ್ಗೆಯೂ ವಿವರಿಸಿದರು. ಅದಷ್ಟೇ ಅಲ್ಲ, ಹಿಂದಿನ ಸರಕಾರಗಳು ಮತಬ್ಯಾಂಕ್‌ಗಾಗಿ ಕೆಲವೇ ಸಮುದಾಯಗಳನ್ನು ಓಲೈಸಿದವೇ ಹೊರತು ಬಹುಸಂಖ್ಯಾತ, ಶೋಷಿತ ಸಮುದಾಯಗಳತ್ತ ಗಮನಹರಿಸಲಿಲ್ಲ ಎಂಬ ನೇರ ಆರೋಪವನ್ನೂ ಮಾಡಿದರು. ಆ ಮೂಲಕ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವರ ಸಮುದಾಯದವರನ್ನು ಓಲೈಸುವ ಪ್ರಯತ್ನ ಮಾಡಿದರು. ಏಕೆಂದರೆ, ಕಲ್ಯಾಣ ಕರ್ನಾಟಕದಲ್ಲಿ ೪೦ ವಿಧಾನಸಭಾ ಸ್ಥಾನಗಳು ಇದ್ದು, ಈ ಪೈಕಿ ಕಾಂಗ್ರೆಸ್ 21 ಕ್ಷೇತ್ರಗಳನ್ನು ಗೆದ್ದಿದ್ದರೆ, ಬಿಜೆಪಿ 17 ಕ್ಷೇತ್ರಗಳಲ್ಲಷ್ಟೇ
ಜಯಗಳಿಸಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ಕನಿಷ್ಠ 30 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ತಂತ್ರಗಾರಿಕೆ ರೂಪಿಸಿದೆ.
ಪ್ರಧಾನಿಯವರ ಯಾದಗಿರಿ, ಕಲಬುರಗಿ ಭೇಟಿ ಈ ತಂತ್ರಗಾರಿಕೆಯ ಒಂದು ಭಾಗ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇನ್ನು ಪ್ರಧಾನಿ ಉತ್ತರ ಕರ್ನಾಟಕದ ನೆಲದಲ್ಲಿ ನಿಂತು ರಾಜ್ಯ ಸರಕಾರಕ್ಕೆ ಶಹಬ್ಬಾಸ್‌ಗಿರಿ ನೀಡುವುದರ ಹಿಂದೆಯೂ ಒಂದು ಕಾರಣವಿದೆ. ಕಳೆದ ಎರಡು ದಶಕ ಗಳಲ್ಲಿ ಆ ಭಾಗದ ಜನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗ ಮತ ಹಾಕಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ನಿಂತಿಲ್ಲ. ಅದರಲ್ಲೂ ದೇಶದಲ್ಲಿ ನರೇಂದ್ರ ಮೋದಿ ಅಲೆ ಸೃಷ್ಟಿಯಾದ ಬಳಿಕ ಲೋಕಸಭೆ ಚುನಾವಮೆಯಲ್ಲಿ ಬಿಜೆಪಿಯನ್ನು ಒಟ್ಟಾಗಿ ಬೆಂಬಲಿಸಿದರೂ 2013 ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಿಜೆಪಿಗೆ ಮತ ಬಿದ್ದಿಲ್ಲ.
ಹೀಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ನರೇಂದ್ರ ಮೋದಿ ಅಲೆ ಅಥವಾ ಕೇಂದ್ರ ಸರಕಾರದ ಸಾಧನೆಗಳು ನಿರೀಕ್ಷಿತ ಮಟ್ಟದಲ್ಲಿ ಪರಿಣಾಮ ಬೀರುವುದಿಲ್ಲ. ಇಲ್ಲಿ ರಾಜ್ಯ ಸರಕಾರದ ಆಡಳಿತವೇ ಮುಖ್ಯವಾಗುತ್ತದೆ ಎಂಬುದು ಸ್ಪಷ್ಟ. ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಯಾದಗಿರಿ ಮತ್ತು ಕಲಬುರಗಿ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರಕ್ಕೆ ಶಹಬ್ಬಾಸ್‌ಗಿರಿ ನೀಡಿರುವುದು. ರಾಜ್ಯ ಸರಕಾರ ಉತ್ತಮವಾಗಿ ಕೆಲಸ ಮಾಡುತ್ತಿರುವುದರಿಂದಲೇ ಉತ್ತರ ಕರ್ನಾಟಕ ಅಭಿವೃದ್ಧಿಯತ್ತ ಮುಂದೆ ಸಾಗುತ್ತಿದೆ ಎಂದು ಹೇಳಿರುವುದು.
ತಮ್ಮ ಕಾರ್ಯಕ್ರಮಗಳಲ್ಲಿ ರಾಜ್ಯ ಸರಕಾರಗಳ ಸಾಧನೆಗಳ ಬಗ್ಗೆ ಪ್ರಸ್ತಾಪಿಸದ ಮೋದಿಯವರೇ ಬಸವರಾಜ ಬೊಮ್ಮಾಯಿ ಸರಕಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ ಎಂದರೆ ಸಹಜವಾಗಿಯೇ ಜನರಲ್ಲಿ ಈ ಸರಕಾರದ ಬಗ್ಗೆ ಒಳ್ಳೆಯ ಭಾವನೆ ಬರುತ್ತದೆ. ಅದು ಮತಗಳಾಗಿ
ಪರಿವರ್ತನೆ ಯಾದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟವಾಗುವುದಿಲ್ಲ ಎಂಬುದು ಮೋದಿಯವರಿಗೂ ಗೊತ್ತಿದೆ. ಪ್ರಧಾನಿಯವರ ಶಹಬ್ಬಾಸ್‌ಗಿರಿಗೆ ರಾಜ್ಯ ಸರಕಾರ ಸಂಪೂರ್ಣ ಅರ್ಹತೆ ಹೊಂದಿಲ್ಲದೇ ಇರಬಹುದು. ಆದರೆ, ಆ ಭಾಗದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು
ಕೆಲಸಗಳಾಗಿರುವುದು ಸುಳ್ಳಲ್ಲ. ಮೊದಲಿನಿಂದಲೂ ಆ ಕೆಲಸ ಆಗುತ್ತಿದೆಯಾದರೂ ಪ್ರಮುಖವಾಗಿ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಯೋಜನೆಗಳು ಈ ಸರಕಾರದ ಅವಧಿಯಲ್ಲಿ ಲೋಕಾರ್ಪಣೆಗೊಂಡಿದೆ.
ಸಾಕಷ್ಟು ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಪೌಷ್ಠಿಕಾಂಶ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಕೇಂದ್ರ ಸರಕಾರದ ಸಹಯೋಗ ದೊಂದಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಉದಾಹರಣೆಗೆ ಕಲಬುರಗಿಯಲ್ಲಿ ತಾಂಡಾ, ಹಟ್ಟಿ, ಹಾಡಿಗಳಲ್ಲಿರುವ 52 ಸಾವಿರ ಕುಟುಂಬಗಳಿಗೆ ಏಕಕಾಲದಲ್ಲಿ ಹಕ್ಕುಪತ್ರ ನೀಡುವ ಕಾರ್ಯಕ್ರಮವನ್ನೇ ಪರಿಗಣಿಸುವುದಾದರೆ 1993ರಲ್ಲೇ ಇವುಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಶಿಫಾರಸು ಮಾಡಲಾಗಿತ್ತು.
ಸಿದ್ದರಾಮಯ್ಯ ಸರಕಾರದಲ್ಲಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಇವರಿಗೆ ಹಕ್ಕುಪತ್ರ ನೀಡಬೇಕು ಎಂದು ನಿರ್ಧರಿಸಿದ್ದರು.
ಆದರೆ, ಕಾಂಗ್ರೆಸ್ ಸರಕಾರ ಮತ್ತು ನಂತರ ಬಂದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಅದು ಸಾಧ್ಯವಾಗಿರಲ್ಲ. ಇದೀಗ ಬಿಜೆಪಿ ಸರಕಾರ ಆ ಕೆಲಸ ಮಾಡಿದೆ. ಇದನ್ನೇ ಮುಂದಿಟ್ಟುಕೊಂಡು ಪ್ರಧಾನಿ ಅದರ ಸಂಪೂರ್ಣ ಮನ್ನಣೆಯನ್ನು ರಾಜ್ಯದ ಬಿಜೆಪಿ ಸರಕಾರಕ್ಕೆ ನೀಡಿದ್ದಾರೆ. ಏಕೆಂದರೆ, ರಾಜ್ಯ ಸರಕಾರ ಕೆಲಸ ಮಾಡಿದೆ ಎಂಬುದು ಜನರಿಗೆ ಗೊತ್ತಾದರಷ್ಟೇ ಇಲ್ಲಿ ಆಡಳಿತ ಪಕ್ಷಕ್ಕೆ ಮತ ಸಿಗುವುದು ಎಂಬುದು ಪ್ರಧಾನಿಯವರಿಗೆ ಸ್ಪಷ್ಟವಾಗಿ ಗೊತ್ತಿದೆ.
ಒಮ್ಮೆ ಪ್ರಧಾನಿಯವರಿಂದ ಇಂತಹ ಮಾತುಗಳು ಬಂದರೆ ಅದನ್ನು ಇನ್ನಷ್ಟು ಪರಿಣಾಕಾರಿಯಾಗಿ ಜನರಿಗೆ ತಲುಪಿಸುವಂತ ಕಾರ್ಯಕರ್ತರನ್ನು ಪಕ್ಷ ಹೊಂದಿದೆ. ಅಂತಹ ಸಂಘಟನಾತ್ಮಕ ಕೌಶಲ್ಯ, ಬೇರು ಮಟ್ಟದ ಸಂಪರ್ಕವನ್ನು ಬಿಜೆಪಿಯ ಕಾರ್ಯಕರ್ತರು ಹೊಂದಿದ್ದಾರೆ. ಅಟಲ್‌ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದ ಸಂದರ್ಭದಿಂದ ಹಿಡಿದು ನಂತರದಲ್ಲಿ ಬಿಜೆಪಿ ರಾಜ್ಯದಲ್ಲಿ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗಳಿಸಲು ಕಾರ್ಯಕರ್ತರ ಈ ಕೌಶಲ್ಯವೇ ಕಾರಣ. 2004 ಮತ್ತು 2008ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸೋತರು ಅಟಲ್‌ಜಿ ಸರಕಾರದ ಸಾಧನೆಗಳನ್ನೇ ಮುಂದಿಟ್ಟುಕೊಂಡು ಕಾರ್ಯಕರ್ತರು ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ರಾಜ್ಯದಲ್ಲಿ ತಂದುಕೊಟ್ಟಿದ್ದರು.
ಆದರೆ, ವಿಧಾನಸಭೆ ಚುನಾವಣೆ ವೇಳೆ ಪಕ್ಷದೊಳಗಿನ ಗೊಂದಲಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಈಗ ಆ ಪರಿಸ್ಥಿತಿ ಇಲ್ಲ. ಪಕ್ಷದೊಳಗೆ ಯಾವುದೇ ಗೊಂದಲಗಳಿಲ್ಲ. ಆದರೆ, ಕಾರ್ಯ ಕರ್ತರನ್ನು ಹುರಿದುಂಬಿಸುವಂತಹ ಪ್ರಯತ್ನ ಮೇಲ್ಮಟ್ಟದಲ್ಲಿ ಆಗುತ್ತಿರಲಿಲ್ಲ. ಹೀಗಾಗಿಯೇ ಪ್ರಧಾನಿ
ನರೇಂದ್ರ ಮೋದಿ ಆ ಕೆಲಸಕ್ಕೆ ನಾಂದಿ ಹಾಡಿದ್ದಾರೆ. ಇದನ್ನು ಮುಂದುವರಿಸಿ ಕಾರ್ಯಕರ್ತರನ್ನು ಬಡಿದೆಬ್ಬಿಸಿ ಹುರಿದುಂಬಿಸಲು ಅಮಿತ್ ಶಾ, ಜೆ.ಪಿ.ನಡ್ಡಾ ಅವರು ಇದ್ದೇ ಇದ್ದಾರೆ.
ಪ್ರಧಾನಿಯವರ ಮಾತಿನಿಂದ ಖುಷಿಗೊಂಡು ರಾಜ್ಯದ ನಾಯಕರೂ ಕೈಜೋಡಿಸುತ್ತಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟವಾಗದು. ಪ್ರಧಾನಿ ರಾಜ್ಯ ಸರಕಾರಕ್ಕೆ ಶಹಬ್ಬಾಸ್‌ಗಿರಿ ನೀಡಿದ್ದರ ಹಿಂದಿನ ಉದ್ದೇಶ ಇಷ್ಟೆ.
ಲಾಸ್ಟ್ ಸಿಪ್: ಮಾಡಿದ ಕೆಲಸಕ್ಕಿಂತ ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಜನರ ಮನಮುಟ್ಟುವಂತೆ ಹೇಳಿಕೊಳ್ಳುವ ಕಲೆ ಕೆಲವರಿಗಷ್ಟೇ ಗೊತ್ತಿರುತ್ತದೆ.