ಅಭಿಮತ
ಡಾ.ಆರ್.ಜಿ.ಹೆಗಡೆ
ಇದು ೨೦೨೧-೨೨ರ ಶೈಕ್ಷಣಿಕ ವರ್ಷದಲ್ಲಿ ಘಟಿಸಿದ ವಿಚಿತ್ರ ವಿದ್ಯಮಾನ. ಆ ವರ್ಷ ಪದವಿಗೆ ಇರುವ ೩ ವರ್ಷಗಳ ವಿದ್ಯಾರ್ಥಿಗಳಿಗೆ ೩ ವಿಭಿನ್ನ
ಅಧ್ಯಯನದ ನೀತಿಗಳು ಜಾರಿಯಲ್ಲಿ ದ್ದವು. ಅಂತಿಮ ವರ್ಷಕ್ಕೆ ‘ನಾನ್ -ಸಿಬಿಸಿಎಸ್’, ದ್ವಿತೀಯ ವರ್ಷಕ್ಕೆ ಸಿಬಿಸಿಎಸ್ ಮತ್ತು ಪ್ರಥಮ ವರ್ಷಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ. ಜಾರಿಗೊಂಡ ಎನ್‌ಇಪಿ ಈಗ ೩ನೇ ವರ್ಷದಲ್ಲಿ ಅಂದರೆ ೫ನೇ ಸೆಮಿಸ್ಟರ್‌ನಲ್ಲಿ ಇದೆ. ಈಗ ಎನ್‌ಇಪಿಯನ್ನು ರಿವ್ಯೂ ಮಾಡಿ ಎಸ್‌ಇಪಿ ತರಲು ಯೋಚಿಸುತ್ತಿರುವ ರಾಜ್ಯ ಸರಕಾರ ಈ ಕುರಿತು ಒಂದು ಸಮಿತಿ ರಚಿಸಿ ಶೀಘ್ರ ವರದಿ ಕೊಡಲು ಹೇಳಿದೆ. ಅದರ ರೂಪುರೇಷೆ ಗಳು ಹೇಗಿರುತ್ತವೆ ಎಂಬುದನ್ನು ಕಾದುನೋಡಬೇಕು.
ಸಮಕಾಲೀನವಾಗಿ ಜಾರಿಯಲ್ಲಿರುವ ವ್ಯವಸ್ಥೆಯ ಕುರಿತಾಗಿ ಕೋಪ ಅಥವಾ ಅಸಮಾಧಾನಗೊಳ್ಳುವ ಸಮಾಜ, ಸರಕಾರ, ವಿವಿ ಗಳಿಗೆ ಅದನ್ನು ಕಿತ್ತು
ಹೊಸದನ್ನು ಸ್ಥಾಪಿಸುವ ಹಂಬಲ ಬರುತ್ತದೆ. ಅಂದರೆ ಇಡೀ ವಿಶ್ವವಿದ್ಯಾಲಯ ಶಿಕ್ಷಣ ವ್ಯವಸ್ಥೆ ತಳಮಳದಲ್ಲಿದೆ. ಉನ್ನತ ಶಿಕ್ಷಣದ ಆಧಾರಸ್ತಂಭಗಳಾದ
ಸಮಾನತೆ, ಒಳಗೊಳ್ಳುವಿಕೆ ಮತ್ತು ಶ್ರೇಷ್ಠತೆ ಈ ೩ ಅಂಶಗಳನ್ನು ಅಲ್ಲಿ ಹೇಗೆ ಜೋಡಿಸಬೇಕು, ವ್ಯವಸ್ಥೆಯ ಉದ್ದೇಶಗಳು ಏನಿರಬೇಕು? ಸಮಾಜದ ಕೊನೆಯ ಸ್ತರದ ವಿದ್ಯಾರ್ಥಿಗೂ ವ್ಯವಸ್ಥೆಯ ಲಾಭ ಮುಟ್ಟಿಸುವುದು ಹೇಗೆ? ಮಾರುಕಟ್ಟೆಗೆ ಪದವಿ ಶಿಕ್ಷಣವನ್ನು ಹೇಗೆ ಜೋಡಿಸಬೇಕು? ಎಂಬುದು ಅದಕ್ಕೆ ಹೊಳೆಯುತ್ತಿಲ್ಲ.
ಆದರೆ ನಮ್ಮಲ್ಲಿ ಮೆಡಿಕಲ್, ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ಪ್ಯೂರ್ ಸೈನ್ಸ್ ಶಿಕ್ಷಣವು ಹೊರಜಗತ್ತಿಗೆ ಸ್ಪಂದಿಸುತ್ತ ನಾಗಾಲೋಟದಿಂದ ಓಡುತ್ತಿದೆ.
ಹೆಚ್ಚಿನ ಸಂಸ್ಥೆಗಳು ಭಾರಿ ಮೂಲಸೌಕರ್ಯಗಳನ್ನು ಹೊಂದಿ ಜಾಗತಿಕ ಗುಣಮಟ್ಟದತ್ತ ಹೆಜ್ಜೆಯಿಟ್ಟಿವೆ. ಗೋಜಲಿರುವುದು ಪದವಿ ಮತ್ತು ವಿವಿ ಶಿಕ್ಷಣ ದಲ್ಲಿ ಮಾತ್ರ.
ದೇಶದ ಆರ್ಥಿಕ, ಸಾಮಾಜಿಕ ಭವಿಷ್ಯ ಕಟ್ಟುವಲ್ಲಿ ಪದವಿ ಶಿಕ್ಷಣದ ಪಾತ್ರ ದೊಡ್ಡದು. ಏಕೆಂದರೆ ೨ನೇ ಸ್ತರದ ಲಕ್ಷಾಂತರ ಹುದ್ದೆಗಳಿಗೆ (ಬ್ಯಾಂಕಿಂಗ್, ಹಾಸ್ಟಿಪಾಟಲಿಟಿ, ಹಣಕಾಸು ಸೇವೆ, ಪೊಲೀಸ್, ಶಿಕ್ಷಕರು, ರೇಲ್ವೇಸ್, ಸೇಲ್ಸ್, ಸೈನ್ಯ ಇತ್ಯಾದಿ) ಮಾನವ ಸಂಪನ್ಮೂಲ ನೀಡುವ, ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಜವಾಬ್ದಾರಿ ಅದಕ್ಕಿದೆ. ನಗರಗಳಾಚೆಗಿನ ಹಳ್ಳಿಗಳ, ಸಮಾಜದ ಕೆಳಸ್ತರಗಳ ಜನರ ಆರ್ಥಿಕ ಅಭಿವೃದ್ಧಿ ಸಾಧಿಸಬೇಕಾದರೂ ನಾವು ಗುಣಮಟ್ಟದ ಪದವಿ ಶಿಕ್ಷಣವನ್ನು ಅಭಿವೃದ್ಧಿಪಡಿಸಲೇಬೇಕು.
ಪದವಿ ಮತ್ತು ವಿವಿ ಶಿಕ್ಷಣ ನೀತಿಗಳು ಯಶಸ್ವಿಯಾಗಿಲ್ಲದಿರುವುದಕ್ಕೆ ಒಂದಷ್ಟು ಕಾರಣಗಳಿವೆ. ನೀತಿ-ನಿರೂಪಣೆಗಳಲ್ಲಿ ದೋಷವಿರುವುದು ಇಂಥ ಒಂದು ಕಾರಣ. ಅಂದರೆ, ಸಮಕಾಲೀನ ಸಮಾಜ, ಆರ್ಥಿಕತೆ ಮತ್ತು ತನ್ನ ಉದ್ದೇಶಗಳ ಕುರಿತು ಸ್ಪಷ್ಟಪಡಿಸಿಕೊಳ್ಳದೆ ನೀತಿಯು ಅವಾಸ್ತವದ ಜಗತ್ತಿನಲ್ಲಿ ತೇಲಾಡುವುದು. ರಾಷ್ಟ್ರೀಯ ಬದ್ಧತೆಗಳು ಕೂಡ ಕೆಲವೊಮ್ಮೆ ನೀತಿಯನ್ನು ಹಿಂದಕ್ಕೆ ಕೊಂಡೊಯ್ದುಬಿಟ್ಟಿವೆ. ಮೆಡಿಕಲ್, ಎಂಬಿಎ, ಎಂಜಿನಿಯರಿಂಗ್ ಕ್ಷೇತ್ರಗಳ ಕುರಿತು ಅಷ್ಟೊಂದು ತಲೆಕೆಡಿಸಿಕೊಳ್ಳದ ಸೈದ್ಧಾಂತಿಕ ರಾಜಕೀಯವು ಪದವಿ ಶಿಕ್ಷಣವನ್ನು ಕಾಡಿಬಿಟ್ಟಿದೆ. ಪದವಿ ಮತ್ತು ವಿವಿ ಶಿಕ್ಷಣದಲ್ಲಿರುವ ಸಾವಿರಾರು ಸಂಸ್ಥೆಗಳು, ನೀತಿಗಳ ಲಾಭವನ್ನು ವಿದ್ಯಾರ್ಥಿಗಳಿಗೆ ಒಂದೇ ಗುಣಮಟ್ಟದಲ್ಲಿ ತಲುಪಿಸಲಾಗದಿರುವುದು ಮತ್ತೊಂದು ಕಾರಣ.
ಹೀಗಾಗುವುದೇಕೆಂದರೆ, ಮೂಲಸೌಕರ್ಯ ಮತ್ತು ಅಕಡೆಮಿಕ್ ದೃಷ್ಟಿಯಿಂದ ವಿವಿಗಳಿಗೆ, ಕಾಲೇಜುಗಳಿಗೆ ಅಂಥ ಸಂಪನ್ಮೂಲ ಶಕ್ತಿಯಿಲ್ಲ, ಕಾನೂನು ಬೆಂಬಲವೂ ಇಲ್ಲ. ಉದಾಹರಣೆಗೆ, ಅನುದಾನಿತ ಕಾಲೇಜುಗಳು ವಿದ್ಯಾರ್ಥಿಯೊಬ್ಬ ನಿಂದ ವರ್ಷಕ್ಕೆ ಕೇವಲ ೬೦೦ ರು. ಗಳನ್ನು ‘ಅಭಿವೃದ್ಧಿ ಶುಲ್ಕ’ವಾಗಿ ತೆಗೆದುಕೊಳ್ಳಬಹುದು (ಕೆಲವು ಸಂಸ್ಥೆಗಳು ಇದನ್ನು ಬೇರೆ ಹೆಸರಲ್ಲಿ ಪಡೆಯುತ್ತಿರಬಹುದು, ಅದೆಲ್ಲ ಖಾಸಗಿ ಶಿಕ್ಷಕರ ಸಂಬಳ-ಸಾರಿಗೆಗೆ ಹೋಗುತ್ತದೆ). ಎಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ದಲ್ಲಿರುವಂತೆ ಮೂಲಸೌಕರ್ಯ ಅಭಿವೃದ್ಧಿ ಆಧರಿತ ಶುಲ್ಕವನ್ನು ಕಾನೂನಾತ್ಮಕವಾಗಿ ಪಡೆಯಲು ಇಲ್ಲಿ ಅವಕಾಶವಿಲ್ಲ.
ಪ್ರವೇಶ, ಪಠ್ಯಕ್ರಮ, ಪರೀಕ್ಷೆ ಮತ್ತು ಇನ್ನುಳಿದ ವಿಷಯಗಳಿಗೆ ಸಂಬಂಧಿಸಿ ಕಾಲೇಜುಗಳಂತೂ ಸರಕಾರ ಮತ್ತು ವಿವಿ ಹಾಕುವ ಗೆರೆಯನ್ನು ದಾಟು ವಂತಿಲ್ಲ. ಅವು ಪರೀಕ್ಷೆ ನಡೆಸುವುದೇ ದೊಡ್ಡಕಥೆ. ಅಧ್ಯಾಪಕರಿಗೆ ಪರೀಕ್ಷಾ ಕರ್ತವ್ಯ ಕಡ್ಡಾಯ. ಪೇಪರ್ ಸೆಟಿಂಗ್, ಪ್ರಾಕ್ಟಿಕಲ್ ಪರೀಕ್ಷೆ, ಮೌಲ್ಯ ಮಾಪನ, ಮರುಮೌಲ್ಯಮಾಪನ ಹೆಚ್ಚು ಕಡಿಮೆ ವರ್ಷವಿಡೀ ನಡೆಯುತ್ತವೆ. ಅವಕ್ಕೆಲ್ಲ ಅಧ್ಯಾಪಕರು ಹೋಗಲೇಬೇಕು. ಹೀಗಾದಲ್ಲಿ ಸೆಮಿಸ್ಟರ್
ನಲ್ಲಿ ಕಲಿಸಲು ಸಮಯ ಸಿಗುವುದೇ? ವಿವಿಗಳದ್ದೂ ತಪ್ಪಿಲ್ಲ, ಅದು ಪರೀಕ್ಷೆಗಳನ್ನೂ ನಡೆಸ ಬೇಕು, ಸಿಲಬಸ್ ವಿಷಯವನ್ನೂ ಹೇಳಬೇಕು. ಕಳೆದ ೩೦ ವರ್ಷ ಗಳಲ್ಲಿನ ಜಾಗತಿಕ ಜ್ಞಾನದ ಬೆಳವಣಿಗೆಗೆ ಹೋಲಿಸಿದರೆ ಬಹುಶಃ ನಮ್ಮ ಸಿಲಬಸ್ ತೀರಾ ಹಿಂದುಳಿದಿದೆ.
ಉದಾಹರಣೆಗೆ, ದೇಶಗಳು ಮಾನವ ಸಂಪನ್ಮೂಲದ ಅಲಭ್ಯತೆಯಿಂದ ಬಳಲುತ್ತಿರುವ ವರ್ತ ಮಾನದಲ್ಲಿ ನಾವು ‘ಜನಸಂಖ್ಯೆ ಶಾಪ’ ಎನ್ನುವ ಪಾಠವನ್ನೇ ಬೋಧಿಸುತ್ತಿದ್ದೇವೆ. ‘ಮಳೆಯೊಂದಿಗೆ ಜೂಟಾಟವಾಡುತ್ತಿರುವ ಕೃಷಿ’ ಎಂಬ ಹಳಸಲು ಮಾತುಗಳನ್ನೇ ಹೇಳುತ್ತಿದ್ದೇವೆ. ಆದರೆ ಸಿಲಬಸ್ ತಯಾರಿಸು ವವರು ಹೇಳುವುದೇ ಬೇರೆ; ಯೋಚಿಸಿ ಸಿಲಬಸ್ ತಯಾರಿಸಲು ಅವರಿಗೆ ಸಮಯವೇ ಇರುವುದಿಲ್ಲ. ಕೆಲವೊಮ್ಮೆ ೨-೩ ದಿನಗಳಲ್ಲಿ ಸಿದ್ಧ ಪಡಿಸ ಬೇಕಾಗುತ್ತದೆ. ಸಮಕಾಲೀನ ಸಿಲಬಸ್ ರೂಪಿಸಿದರೆ, ಅದನ್ನು ಬದಲಿಸಲು ಶಿಕ್ಷಕರು ಆಗ್ರಹಿಸುವುದೂ ಉಂಟಂತೆ. ನೀತಿಗಳು ನಾಮ್-ಕೇ-ವಾಸ್ತೆ ಆಗಿ
ಕುಸಿಯುವುದೇ ಇಲ್ಲಿ. ಇನ್ನು ಅನುದಾನರಹಿತ ಶಿಕ್ಷಕರಿಗೆ ದೈನಂದಿನ ವೇತನ ನಿಯಮ ದಡಿ ಸಿಗಬೇಕಿರುವುದಕ್ಕಿಂತಲೂ ಕಡಿಮೆ ಸಂಬಳ ಸಿಗುತ್ತಿರುವ
ಉದಾಹರಣೆಗಳಿವೆ. ಅವರಿಗೆ ಇಎಸ್‌ಐ, ಪಿಎ-, ಪಿಂಚಣಿ ಸಿಗುವುದು ಅನುಮಾನ.
ಇನ್ನು, ಪದವಿ ಮತ್ತು ಸ್ನಾತಕೋತ್ತರ ಸಂಸ್ಥೆಗಳ ಸ್ವರೂಪ ಏಕರೂಪವಾಗಿಲ್ಲ. ಕೇಂದ್ರೀಯ ವಿವಿಗಳಿರಲಿ, ರಾಜ್ಯ ಸ್ಥಾಪಿಸಿರುವ ವಿವಿಗಳ ಶಕ್ತಿ-ಸಾಮರ್ಥ್ಯ ಕೂಡ ಒಂದೇ ತೆರನಾಗಿಲ್ಲ. ಉದ್ಯೋಗ ಕಂಡು ಕೊಳ್ಳಬಲ್ಲ/ಸೃಷ್ಟಿಸಬಲ್ಲ ಮಾನವ ಸಂಪನ್ಮೂಲದ ಅಭಿವೃದ್ಧಿಯು ಅವುಗಳ ಗುರಿಯಾಗಿದ್ದಂತಿಲ್ಲ. ‘ಉದ್ಯೋಗ ಸೃಷ್ಟಿ ಸರಕಾರದ ಕೆಲಸ, ಏನಾದರೂ ಮಾಡಿ ಅದನ್ನು ಪಡೆಯುವುದು ವಿದ್ಯಾರ್ಥಿಯ ಜವಾಬ್ದಾರಿ’ ಎಂಬ ಭಾವನೆ ಬಹುತೇಕ ವಿವಿಗಳದ್ದು. ಅಮೂರ್ತಜ್ಞಾನದ ಬೆನ್ನುಬೀಳುವುದರ ಬದಲು, ಜ್ಞಾನದ ಅನ್ವಯದ ಕಡೆಗೆ ಲಕ್ಷ್ಯ ವಹಿಸಬೇಕೆಂಬ ಜವಾಬ್ದಾರಿಯನ್ನು ಅವಕ್ಕೆ ಯುಜಿಸಿ, ಸರಕಾರ ನೀಡಿದಂತಿಲ್ಲ.
ಉನ್ನತ ಶಿಕ್ಷಣದ ವಿಸ್ತರಣೆಗೆಂದು, ಬಂದವರಿ ಗೆಲ್ಲರಿಗೂ ಕಾಲೇಜು ತೆರೆಯುವ ಅವಕಾಶ ನೀಡುವ ಅವಶ್ಯಕತೆ ಒಂದು ಹಂತದಲ್ಲಿತ್ತು ನಿಜ. ಏಕೆಂದರೆ ಕಾಲೇಜುಗಳು ಆಗ ಒಂಥರಾ ಯುವಸಾಕ್ಷರತಾ ಕೇಂದ್ರಗಳಾಗಿದ್ದವು. ಅವು ಹಾಗೆ ಹುಟ್ಟಿಕೊಳ್ಳದಿದ್ದಿದ್ದರೆ ಮಹಿಳೆಯರು ಮತ್ತು ಸಮಾಜದ ಕೆಲ ವರ್ಗಗಳು ಉನ್ನತ ಶಿಕ್ಷಣದಿಂದ ವಂಚಿತವಾಗುತ್ತಿದ್ದವು.
ಈ ಹಿನ್ನೆಲೆಯಲ್ಲಿ ಈ ಅಂಶಗಳೆಡೆಗೆ ಗಮನಹರಿಸಬೇಕಿದೆ:
? ಅರ್ಥಶಾಸ್ತ್ರ, ಸಸ್ಯಶಾಸ್ತ್ರ, ಆಡಿಟಿಂಗ್ ಹೀಗೆ ವಿವಿಧ ವಿಷಯಗಳನ್ನು ಕಲಿತವರು ಹೊರಬರುವಾಗ, ಆ ಸಂಬಂಧಿತ ನೌಕರಿ ಮಾಡಬಲ್ಲ /ನೀಡಬಲ್ಲ ವಿಶೇಷ ಸಾಮರ್ಥ್ಯ ಹೊಂದಿರಬೇಕು. ಅಂದರೆ ಜನರಲ್ ಎಜುಕೇಷನ್‌ನಿಂದ ಮುಂದೆ ಹೋಗಿ, ನಿರ್ದಿಷ್ಟ ಜ್ಞಾನದ ಶ್ರೇಷ್ಠತೆಯನ್ನು ಯುವಜನತೆಗೆ ದೊರಕಿಸಬೇಕು.
? ಸಂಸ್ಥೆಗಳು ತಮ್ಮ ಶ್ರೇಷ್ಠತೆಯ ಆಧಾರದ ಮೇಲೆ ಶುಲ್ಕ ಸಂಗ್ರಹಿಸಲು, ಮೂಲಸೌಕರ್ಯ ಬೆಳೆಸಿಕೊಳ್ಳಲು ಅಽಕೃತ ಅವಕಾಶ ನೀಡಬೇಕು.
? ಕಾಲೇಜನ್ನು ಶುರುಮಾಡುವುದಕ್ಕೆ, ಅಫಿಲಿಯೇಷನ್ ನವೀಕರಣಕ್ಕೆ ಕಠಿಣ ಮಾನದಂಡಗಳನ್ನು ನಿಗದಿಪಡಿಸಬೇಕು.
? ಖಾಸಗಿ ಕಾಲೇಜುಗಳನ್ನು ಎಂಟರ್‌ಪ್ರೈಸ್‌ಗಳು ಎಂದು ವರ್ಗೀ ಕರಿಸಿ ಉದ್ದಿಮೆಗಳಿಗೆ ನೀಡುವಂತೆ ಅವುಗಳ ಬೆಳವಣಿಗೆಗೆ ಪ್ರೋತ್ಸಾಹಿಸಬೇಕು.
? ಕಾಲೇಜು, ವಿವಿ ಮತ್ತು ಸರಕಾರ ಇವುಗಳ ನಡುವಿನ ‘ಅಽಕಾರ ಸ್ವರೂಪ’ವನ್ನು ಸ್ಪಷ್ಟಪಡಿಸಬೇಕು.
? ಕಾಲೇಜು ಮತ್ತು ವಿವಿಗಳು ನೀತಿಯನ್ನು ಏಕಪ್ರಕಾರವಾಗಿ, ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಅವುಗಳ ಶಕ್ತಿಯನ್ನು ವಧಿಸಬೇಕು. ಇದು
ಕೈಗೂಡಬೇಕೆಂದರೆ ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಣ ಅಭಿವೃದ್ಧಿಗೆ ಸಂಬಂಧಿಸಿದ ಸಮಗ್ರ ನೀತಿಯ ಅಗತ್ಯವಿದೆ.
(ಲೇಖಕರು ಶಿಕ್ಷಣ ಹಾಗೂ ಸಂವಹನಾ ತಜ್ಞರು)