Sunday, 8th September 2024

ಹಲವರಿಗೆ ಸ್ಪೂರ್ತಿಯಾಗಬಲ್ಲ ಬಾಟಾ ನಡಿಗೆ

ವಿದೇಶವಾಸಿ

dhyapaa@gmail.com

‘ಬಾಟಾ’ ಭಾರತೀಯ ಸಂಸ್ಥೆ ಎಂದು ಇಂದಿಗೂ ನಂಬಿರುವ ಜನರಿzರೆ. ಮೂಲತಃ ಭಾರತೀಯ ಸಂಸ್ಥೆ ಅಲ್ಲವಾದರೂ ಭಾರತದ್ದೇ ಎನ್ನುವಷ್ಟು ಹಾಸುಹೊಕ್ಕಾಗಿದೆ ಬಾಟಾ. ಇತರೆ ವಿದೇಶಿ ಕಂಪನಿಗಳಿಗಿಂತ ಮೊದಲೇ ಬಾಟಾ ಭಾರತಕ್ಕೆ ಕಾಲಿಟ್ಟದ್ದು ಮತ್ತು ಭಾರತೀಯರ ಪಾದವನ್ನು ಭಾವನಾತ್ಮಕವಾಗಿ ಸ್ಪರ್ಶಿಸಿದ್ದು ಇದಕ್ಕೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ.

ಬಾಟಾ ಪಾದರಕ್ಷೆಗಳು ಎಂದಾಕ್ಷಣ ಮೊದಲು ನೆನಪಾಗುವುದು ಅದರ ದರ. ಒಂದಷ್ಟು ರುಪಾಯಿ, ೯೫ ಪೈಸೆ ಅಥವಾ ಒಂದಷ್ಟು ಡಾಲರ್ ೯೯ ಸೆಂಟ್ಸ್ ಹೀಗೆ. ವಿಶ್ವದ ಯಾವುದೇ ಮೂಲೆಗೆ ಹೋದರೂ, ದರದಲ್ಲಿ ರೌಂಡ್ ಫಿಗರ್ ಅಥವಾ ಸಮಸಂಖ್ಯೆ ಎನ್ನುವುದೇ ಇಲ್ಲ. ಕೊನೆಯಲ್ಲಿ ಬೆಸ ಇರಲೇಬೇಕು. ಎಲ್ಲಿಯವರೆಗೆ ಎಂದರೆ, ಬೆಲೆ ಏನಾದರೂ ಸಂಪೂರ್ಣವಾಗಿದ್ದರೆ ಅದು ಬಾಟಾ ಕಂಪನಿಯ ಬೂಟೇ ಅಲ್ಲ ಎನ್ನುವಷ್ಟರ ಮಟ್ಟಿಗೆ.

ಅದೇ ಬಾಟಾ ಕಂಪನಿಯ ವಿಶಿಷ್ಟ ಪರಿಚಯವೂ ಹೌದು, ಪ್ರಚಾರವೂ ಹೌದು. ಇನ್ನೊಂದು ವಿಷಯವೆಂದರೆ, ಬಾಟಾ ಭಾರತೀಯ ಬ್ರ್ಯಾಂಡ್ ಎಂಬ ನಂಬಿಕೆ. ಬಾಟಾ ಭಾರತೀಯ ಸಂಸ್ಥೆ ಎಂದು ನಂಬಿದ ಅನೇಕ ಭಾರತೀಯ ರಲ್ಲಿ ನಾನೂ ಒಬ್ಬ. ಅದಲ್ಲ ಎಂದು ಅರಿವಿಗೆ ಬಂದದ್ದು ಈಗ ಹತ್ತು ವರ್ಷಗಳ ಕೆಳಗೆ. ಇಂದಿಗೂ ಬಾಟಾ ಭಾರತೀಯ ಸಂಸ್ಥೆ ಎಂದು ನಂಬಿದ ಬೇಕಾದಷ್ಟು ಜನರಿದ್ದಾರೆ.

ಬಾಟಾ ಮೂಲತಃ ಭಾರತೀಯ ಸಂಸ್ಥೆ ಅಲ್ಲವಾದರೂ ಭಾರತದ್ದೇ ಎನ್ನುವಷ್ಟು ಭಾರತದಲ್ಲಿ ಹಾಸುಹೊಕ್ಕಾಗಿದೆ. ಇತರೆ ವಿದೇಶಿ ಕಂಪನಿಗಳಿಗಿಂತ ಮೊದಲೇ ಬಾಟಾ ಭಾರತಕ್ಕೆ ಕಾಲಿಟ್ಟದ್ದು ಮತ್ತು ಇತರರಿಗಿಂತ ಮೊದಲೇ ಭಾರತೀಯರ ಪಾದವನ್ನು ಭಾವನಾತ್ಮಕವಾಗಿ ಸ್ಪರ್ಶಿಸಿದ್ದು ಇದಕ್ಕೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. ನೂರಾರು ವರ್ಷಗಳಿಂದಲೂ ಜನರ ಕಾಲಿಗೆ ರಕ್ಷಣೆ ಕೊಡುವ ಬಾಟಾದ ನಡಿಗೆಯೇ ಸುಲಭವಾಗಿರಲಿಲ್ಲ. ನಿಜ, ಬಾಟಾ
ಸಂಸ್ಥೆ ನಡೆದು ಬಂದ ದಾರಿಯನ್ನೊಮ್ಮೆ ಹಿಂದಿರುಗಿ ನೋಡಿದರೆ ಅದರ ಅರಿವಾಗುತ್ತದೆ.

ಬಾಟಾ ಸಂಸ್ಥೆಯ ಸ್ಥಾಪಕ ಟೋಮಸ್ ಬಾಟಾ ಝೆಕ್ ಪ್ರಜೆ. ಅವನ ೮ ತಲೆಮಾರಿನ ಪೂರ್ವಜರು ಸುಮಾರು ೩೦೦ ವರ್ಷಗಳಿಂದಲೂ ಝೆಕೊಸ್ಲೊ
ವಾಕಿಯಾದಲ್ಲಿ ಪಾದರಕ್ಷೆ ಮಾಡುವ ಕೆಲಸವನ್ನೇ ಮಾಡಿಕೊಂಡಿದ್ದರು. ಅದೇ ಕಸುಬು ಮಾಡಿಕೊಂಡಿದ್ದರೂ, ಯಾರಿಗೂ ಬೂಟು ತಯಾರಿಸುವ ಸಂಸ್ಥೆ ಕಟ್ಟಬಹುದು, ಕಾರ್ಖಾನೆ ಆರಂಭಿಸಬಹುದು ಎನ್ನುವ ವಿಚಾರವೇ ಹೊಳೆದಿರಲಿಲ್ಲ. ಏಕೆಂದರೆ ಅದುವರೆಗೆ ಆ ದೇಶದಲ್ಲಿ ಅಂಥ ಪ್ರಯತ್ನಕ್ಕೆ
ಯಾರೂ ಕೈಹಾಕಿರಲಿಲ್ಲ. ದೊಡ್ಡ ಮಟ್ಟದಲ್ಲಿ ಪಾದರಕ್ಷೆಗಳನ್ನು ತಯಾರಿಸಬಹುದು ಎನ್ನುವ ವಿಚಾರ ಮೊದಲು ಹೊಳೆದದ್ದು ಟೋಮಸ್ ಬಾಟಾಗೆ.

೧೮೯೪ರ ಅಗ ತಿಂಗಳಿನಲ್ಲಿ ಟೋಮಸ್ ತನ್ನ ಸಹೋದರ ಅಂಟೋನೆನ್ ಮತ್ತು ಸಹೋದರಿ ಅನಾ ಜತೆ ಸೇರಿ ದೊಡ್ಡ ಪ್ರಮಾಣದಲ್ಲಿ ಬೂಟು
ತಯಾರಿಸಬೇಕೆಂದು ನಿರ್ಧರಿಸಿದ. ಆತನ ಬಳಿ ಅದಕ್ಕೆ ಬೇಕಾದಷ್ಟು ಹಣ ಇರಲಿಲ್ಲ. ಆಗ ಅವನ ಸಹಾಯಕ್ಕೆ ನಿಂತದ್ದು ಅವನ ತಾಯಿ. ಆಕೆ ತಾನು
ಉಳಿಸಿದ ೩೨೦ ಡಾಲರನ್ನು ಟೋಮಸ್‌ಗೆ ನೀಡಿದ್ದಳು. ಆ ಮೊತ್ತದಿಂದ ಝ್ಲಿನ್ ಪಟ್ಟಣದಲ್ಲಿ ಕೆಲಸ ಆರಂಭಿಸಿದ. ತನ್ನ ಪರಿಚಯದ ೧೦ ಜನರನ್ನು
ಕೆಲಸಕ್ಕೆ ಸೇರಿಸಿಕೊಂಡ. ಎಲ್ಲರೂ ಸೇರಿ ಕೈಯ ಬೂಟು ತಯಾರಿಸುತ್ತಿದ್ದರು.

ಕಾರ್ಯ ಆರಂಭಿಸಿದ ಒಂದೇ ವರ್ಷದಲ್ಲಿ ಅವರ ಉದ್ಯಮಕ್ಕೆ ಕೊಡಲಿ ಏಟು ಬೀಳುವ ಪರಿಸ್ಥಿತಿ ಎದುರಾಗಿತ್ತು. ದೇಶದಲ್ಲಿ ಬೂಟು ತಯಾರಿಸಲು
ಬೇಕಾದ ಚರ್ಮವೇ ಸಿಗದಂತಾಗಿತ್ತು. ಮುಂದೇನು ಎಂದು ಎಲ್ಲರೂ ಆತಂಕದಲ್ಲಿರುವಾಗ ಟೋಮಸ್ ಹೊಸದೊಂದು ಪ್ರಯೋಗಕ್ಕೆ ಸಿದ್ಧನಾಗಿ, ಕ್ಯಾನ್ವಾಸ್ (ರಟ್ಟರಿವೆ) ಬೂಟು ತಯಾರಿಸಿದ. ಕ್ಯಾನ್ವಾಸ್ ಬೂಟುಗಳು ಚರ್ಮದ ಬೂಟಿಗಿಂತ ಹಗುರವೂ, ಆರಾಮದಾಯಕವೂ ಆಗಿದ್ದವು. ಅಲ್ಲದೆ ಬೇರೆ
ಬೇರೆ ವಿನ್ಯಾಸಗಳಲ್ಲಿ ಲಭಿಸುತ್ತಿದ್ದವು. ಎಲ್ಲದಕ್ಕಿಂತ ಹೆಚ್ಚಾಗಿ ಅದನ್ನು ತೊಳೆದು (can wash!) ಸುಲಭವಾಗಿ ಸ್ವಚ್ಛಗೊಳಿಸಬಹುದಾಗಿತ್ತು.

ಬೆಲೆಯೂ ಕೈಗೆಟುಕುವಂತೆ ಇದ್ದುದರಿಂದ ಜನರು ಇಷ್ಟಪಟ್ಟರು. ಟೋಮಸ್ ಯಶಸ್ವಿಯಾದ! ಒಂದೆರಡು ವರ್ಷ ಕಳೆಯುತ್ತಿದ್ದಂತೆ, ಅಮೆರಿಕ
ದಲ್ಲಿ ಬೂಟುಗಳನ್ನು ಯಂತ್ರದಲ್ಲಿ ತಯಾರಿಸುತ್ತಾರೆ ಎಂದು ತಿಳಿದ ಟೋಮಸ್, ತನ್ನ ಮೂವರು ನೌಕರರೊಂದಿಗೆ ಅಮೆರಿಕಕ್ಕೆ ಹೋದ. ಆ ಕಾಲದಲ್ಲಿ
ಬೂಟುಗಳ ತಯಾರಿಕೆಗೆ ಪ್ರಸಿದ್ಧವಾಗಿದ್ದ ಡಸ್ ನಗರದಲ್ಲಿ ೬ ತಿಂಗಳು ಉಳಿದ. ಆ ಅವಧಿಯಲ್ಲಿ ಯಂತ್ರದಿಂದ ಬೂಟು ತಯಾರಿಸುವ ವಿಧಾನವನ್ನು
ಕಲಿತ. ಅಲ್ಲಿಂದ ತನ್ನ ದೇಶಕ್ಕೆ ಯಂತ್ರಗಳನ್ನು ತರಿಸಿಕೊಂಡ.

ಇಂದಿಗೂ ಯುರೋಪ್ ದೇಶಗಳ ಬೂಟು ತಯಾರಿಸುವ ಮೊದಲನೆ ಯಂತ್ರ ತರಿಸಿ ಕೊಂಡವ ಟೋಮಸ್ ಬಾಟಾ ಎಂಬ ಮಾತಿದೆ. ೧೯೦೦ರ ಆರಂಭದ ದಶಕದಲ್ಲಿ ಸಂಸ್ಥೆಗೆ ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು. ಬೂಟು ತಯಾರಿಸುವ ಅನೇಕ ಸಣ್ಣ ಪುಟ್ಟ ಸಂಸ್ಥೆಗಳು ಆಗಲೇ ತಲೆಯೆತ್ತಿ ನಿಂತಿದ್ದವು. ಬಾಟಾ ಸಂಸ್ಥೆಯಲ್ಲಿ ಆಗ ೬೦೦ ಜನ ಕೆಲಸ ಮಾಡುತ್ತಿದ್ದರು. ನಿಭಾಯಿಸುವುದು ಕಷ್ಟ ಎನ್ನುತ್ತಿರುವಾಗಲೇ ಮೊದಲನೆಯ ಮಹಾಯುದ್ಧ ಆರಂಭವಾಯಿತು. ಸೈನಿಕರು ಉಪಯೋಗಿಸಬಲ್ಲ, ಉತ್ತಮ ಗುಣಮಟ್ಟದ ಬೂಟು ತಯಾರಿಸಿ ಕೊಡುವಂತೆ ಝೆಕೊಸ್ಲೊವಾಕಿಯಾ ಸರಕಾರ ಬಾಟಾ ಸಂಸ್ಥೆಯನ್ನು ಕೇಳಿಕೊಂಡಿತು. ಅದಕ್ಕೆ ಒಪ್ಪಿದ ಟೋಮಸ್ ಇನ್ನೂ ಹತ್ತು ಪಟ್ಟು ಹೆಚ್ಚು ನೌಕರರನ್ನು ನೇಮಿಸಿಕೊಂಡ.

೬೦೦ರಿಂದ ಕಮ್ಮಿ ಮಾಡಬೇಕು ಅಂದುಕೊಳ್ಳುತ್ತಿರುವಾಗಲೇ ಸಂಸ್ಥೆಯ ಉದ್ಯಮಿಗಳ ಸಂಖ್ಯೆ ೬೦೦೦ಕ್ಕೆ ಏರಿತ್ತು! ಮಹಾಯುದ್ಧ ನಡೆಯುತ್ತಿರುವಾಗಲೇ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಯುದ್ಧ ಮುಗಿಯುತ್ತಿದ್ದಂತೆ ದೇಶದ ಆರ್ಥಿಕ ನೀತಿಯಿಂದಾಗಿ ಉದ್ಯಮಗಳು ಸೊರಗಲಾರಂಭಿಸಿದವು. ಬಾಟಾ ಕೂಡ ಅದಕ್ಕೆ ಹೊರತಾಗಿರಲಿಲ್ಲ. ಬೂಟುಗಳು ಮಾರಾಟವಾಗಬೇಕಾದರೆ ಬೆಲೆಯಲ್ಲಿ ೫೦ ಪ್ರತಿಶತ ಇಳಿಸಿ, ಅರ್ಧಬೆಲೆಗೆ ಮಾರಬೇಕಿತ್ತು.
ನೌಕರರಿಗೆ ಕೊಡುತ್ತಿದ್ದ ಸಂಬಳ ಹೆಚ್ಚೇ ಆಗಿದ್ದರಿಂದ ಅದು ಕಷ್ಟದ ಕೆಲಸವಾಗಿತ್ತು.

ಸಂಬಳ ಕಮ್ಮಿ ಮಾಡಬೇಕು ಅಥವಾ ಸಂಸ್ಥೆಯನ್ನೇ ಮುಚ್ಚಬೇಕು. ಎರಡರ ಹೊರತು ಬೇರೆ ಮಾರ್ಗವಿಲ್ಲ ಎನ್ನುವುದನ್ನು ನೌಕರರಿಗೆ ತಿಳಿಸಿದ. ನೌಕರರು ಶೇ.೪೦ರಷ್ಟು ಕಮ್ಮಿ ಸಂಬಳ ಪಡೆದು ಕೆಲಸಮಾಡಲು ಒಪ್ಪಿದರು. ಟೋಮಸ್ ಕಮ್ಮಿ ಜನರನ್ನು ಬಳಸಿ ಹೆಚ್ಚು ಉತ್ಪಾದಿಸುವುದು ಹೇಗೆ ಎಂಬುದರ ಕುರಿತೂ ಯೋಚಿಸಲು ಆರಂಭಿಸಿದ್ದ. ಈ ನಡುವೆ ಆತನ ಜತೆಗಿದ್ದು ಸಹಕರಿಸುತ್ತಿದ್ದ ಸಹೋದರಿ ಅನಾಮದುವೆಯಾಗಿ ಗಂಡನ ಮನೆ ಸೇರಿಕೊಂಡಿದ್ದಳು. ಸಹೋದರ ಅಂಟೋನೆನ್ ದುರ್ಮರಣಕ್ಕೀಡಾಗಿದ್ದ.

ಸಹೋದರನ ಸಾವಿನಿಂದ ಖಿನ್ನನಾಗಿದ್ದರೂ, ಇನ್ನುಳಿದ ಇಬ್ಬರು ಸಹೋದರರಾದ ಜಾನ್ ಮತ್ತು ಬೋಹಾಶ್ರನ್ನು ತನ್ನೊಂದಿಗೆ ಸೇರಿಸಿಕೊಂಡ.
೧೯೨೬ರಿಂದ ೧೯೨೮ರವರೆಗೆ ಟೋಮಸ್ ಝೆಕೊಸ್ಲೊವಾಕಿಯಾದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನದಲ್ಲಿದ್ದ. ೧೯೩೦ರ ದಶಕದ ಆರಂಭ ದಲ್ಲಿ ಇಂಗ್ಲೆಂಡ್, -, ಪೋಲಂಡ್, ನೆದರ್ ಲ್ಯಾಂಡ್, ಯುಗೊಸ್ಲಾವಿಯ, ಅಮೆರಿಕ ಮತ್ತು ಭಾರತದಲ್ಲಿಯೂ ಶಾಖೆಗಳನ್ನು ತೆರೆದ. ಆ ಕಾಲದಲ್ಲಿ ಝೆಕೊಸ್ಲೊವಾಕಿಯಾ, ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಪಾದರಕ್ಷೆ ರಫ್ತು ಮಾಡುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಆದರೆ ಆ ವೈಭವವನ್ನು ಬಹಳ ದಿನ ಕಾಣುವ ಭಾಗ್ಯ ಟೋಮಸ್‌ಗೆ ಇರಲಿಲ್ಲ.

ಘಟಿಸಬಾರದ, ಯಾರೂ ಊಹಿಸಲೂ ಸಾಧ್ಯವಾಗದ ಘಟನೆಯೊಂದು ಅಂದು ನಡೆದಿತ್ತು. ೧೯೩೨ರ ಜುಲೈ ೧೨ರಂದು ಟೋಮಸ್ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತ ಕ್ಕೀಡಾಗಿತ್ತು. ಬೂಟಿನ ಪಿತಾಮಹ ಟೋಮಸ್  ಬಾಟಾ ಹಿಂದಿರುಗಿ ಬಾರದ ಲೋಕಕ್ಕೆ ಹೊರಟುಹೋಗಿದ್ದ. ವಿಮಾನ ಪ್ರಯಾಣ ದಲ್ಲಿ ಆತನಿಗೆ ಅತೀವ ಆಸಕ್ತಿಯಿತ್ತು. ಟೋಮಸ್ ಕಂಪನಿಯ ಕೆಲಸಗಳಿಗೆ ತನ್ನ ನೌಕರರನ್ನು ವಿಮಾನದಲ್ಲಿಯೇ ಕಳಿಸುತ್ತಿದ್ದ. ಅದರಿಂದ ಸಾಕಷ್ಟು ಸಮಯ ಉಳಿಯುತ್ತದೆ ಮತ್ತು ಕಂಪನಿಯ ಗೌರವ ಹೆಚ್ಚುತ್ತದೆ ಎಂದು ನಂಬಿದ್ದ.

ದೊಡ್ಡದೊಂದು ಏರ್‌ಲೈನ್ ಉದ್ದಿಮೆ ಆರಂಭಿಸಬೇಕೆಂಬ ಹಂಬಲವನ್ನೂ ಆತ ಇಟ್ಟುಕೊಂಡಿದ್ದ. ಆತನ ಮರಣಾನಂತರ ಸಹೋದರ ಜಾನ್ ಕೆಲವು ವರ್ಷ ಬಾಟಾ ಕಂಪನಿಯನ್ನು ಮುನ್ನಡೆಸಿದ. ಅಣ್ಣನ ಇಷ್ಟದಂತೆ ಬಾಟಾ ವಿಮಾನಯಾನ ಸಂಸ್ಥೆಯನ್ನೂ ಸ್ಥಾಪಿಸಿದ. ೨ ವರ್ಷದ ನಂತರ ಎರಡನೆಯ ಮಹಾಯುದ್ಧದ ಸಂದರ್ಭ ದಲ್ಲಿ ಚಿತ್ರಣಗಳು ಬದಲಾದವು. ಆ ಯುದ್ಧದ ನಂತರ ದೇಶದದ ರಾಜಕೀಯ ಬೆಳವಣಿಗೆಯಿಂದಾಗಿ ಟೋಮಸ್‌ನ ಮಗ ಥಾಮಸ್ ಕೆನಡಾದಲ್ಲಿ ಕಾರ್ಖಾನೆ ಆರಂಭಿಸಿದ. ೨೦೦೪ರಲ್ಲಿ ಪ್ರಧಾನ ಕಚೇರಿಯನ್ನು ಸ್ವಿಡ್ಜರ್‌ಲ್ಯಾಂಡ್‌ಗೆ ಸ್ಥಳಾಂತರಿಸಿದ.

ಇಂದು ವಿಶ್ವದ ೫ ಖಂಡಗಳ ೭೦ಕ್ಕೂ ಹೆಚ್ಚು ದೇಶಗಳಲ್ಲಿ ಬಾಟಾ ಕಂಪನಿಯ ಸುಮಾರು ೫೦೦೦ಕ್ಕೂ ಹೆಚ್ಚು ಮಳಿಗೆಗಳಿವೆ. ೩೦ ಸಾವಿರಕ್ಕೂ ಹೆಚ್ಚು ಜನರಿಗೆ ಬಾಟಾ ಉದ್ಯೋಗ ಒದಗಿಸಿಕೊಟ್ಟಿದೆ. ಪ್ರತಿನಿತ್ಯ ೧೦ ಲಕ್ಷ ಜನ ಬಾಟಾ ಮಳಿಗೆಗೆ ಭೇಟಿ ನೀಡುತ್ತಿದ್ದಾರೆ. ಅದೆಲ್ಲ ಸರಿ, ಬಾಟಾಕ್ಕೂ ಭಾರತಕ್ಕೂ ಹೇಗೆ ಸಂಬಂಧ? ಬೂಟು ತಯಾರಿಸಲು ಬೇಕಾದ ಚರ್ಮಕ್ಕೆ ಶೋಧ ನಡೆಯುತ್ತಲೇ ಇತ್ತು. ಭಾರತದಲ್ಲಿ ಒಳ್ಳೆಯ ಚರ್ಮ ಸಿಗುತ್ತದೆ ಎಂದು ತಿಳಿದ
ಟೋಮಸ್ ಕೊಲ್ಕತ್ತಾಕ್ಕೆ ಬಂದ. ಭಾರತದಲ್ಲಿ ಆತನ ಸಂಸ್ಥೆಗೆ ಬೇಕಾದ ಚರ್ಮ ದೊರಕಿತು. ಅದೆಲ್ಲಕ್ಕಿಂತ ಹೆಚ್ಚಾಗಿ ಆತ ಭಾರತದಲ್ಲಿ ಇನ್ನೊಂದು ವಿಷಯವನ್ನು ಗಮನಿಸಿದ. ಆ ಕಾಲದಲ್ಲಿ ಶ್ರೀಮಂತರನ್ನು ಹೊರತು ಪಡಿಸಿ ಭಾರತದಲ್ಲಿ ಯಾರೂ ಪಾದರಕ್ಷೆ ಬಳಸುತ್ತಿರಲಿಲ್ಲ.

ಆಗ ಬೂಟು ಎಂದರೆ ದುಬಾರಿಯ ಸರಕು. ಟೋಮಸ್ ಭಾರತದಲ್ಲಿ ಪಾದರಕ್ಷೆ ಉತ್ಪಾದಿಸುವ ಕಾರ್ಖಾನೆಯನ್ನು ಸ್ಥಾಪಿಸಲು ನಿರ್ಧರಿಸಿದ. ಮೊದಲು ಕೊಲ್ಕತ್ತಾ, ನಂತರ ಬಿಹಾರ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಾರ್ಖಾನೆ ಆರಂಭಿಸಿದ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಸುಮಾರು ೯೦ ಮಳಿಗೆಗಳನ್ನು ತೆರೆದ. ೨ ವರ್ಷದ ಒಳಗೆ ಸುಮಾರು ೪.೫ ಸಾವಿರ ಜನರಿಗೆ ಉದ್ಯೋಗ ಒದಗಿಸಿಕೊಟ್ಟ. ಕಡಿಮೆ ಬೆಲೆಯಲ್ಲಿ ಮಾರುತ್ತಿದ್ದುದರಿಂದ, ಆ ಕಾಲದ ಪ್ರತಿ ತಿಂಗಳು ಸುಮಾರು ೩.೫ ಸಾವಿರ ಜನ ಬಾಟಾ ಬೂಟು ಖರೀದಿಸುತ್ತಿದ್ದರು.

ಇಂದಿಗೂ ಏಷ್ಯಾದ ಅತಿಹೆಚ್ಚು ಪಾದರಕ್ಷೆಗಳು ಕೊಲ್ಕತ್ತಾದ ಬಾಟಾನಗರದಲ್ಲಿ ತಯಾರಾಗುತ್ತವೆ. ೧೯೭೨ರ ಹೊತ್ತಿಗೆ ಭಾರತದಲ್ಲಿ ಕಂಪನಿಯ
ವಾರ್ಷಿಕ ಆದಾಯ ಸುಮಾರು ೭ ಮಿಲಿಯನ್ ಡಾಲರ್ ತಲುಪಿತ್ತು. ಅದೇ ಸಂದರ್ಭದಲ್ಲಿ ಬಾಟಾ ಪಬ್ಲಿಕ್ ಲಿಮಿಟೆಡ್ ಕಂಪನಿಯಾಯಿತು. ೧೯೯ ರ
ನಂತರ ವಿದೇಶಿ ಕಂಪನಿಗಳು ಭಾರತಕ್ಕೆ ಬರಲು ಆರಂಭಿಸಿದವು. ಭಾರತದ ‘ಆಕ್ಷನ್’ ಕಂಪನಿಯ ಪಾದರಕ್ಷೆಗಳು ಮಾರುಕಟ್ಟೆಗೆ ಲಗ್ಗೆ ಇಡಲಾರಂಭಿಸಿ
ದವು. ಬಾಟಾಕ್ಕೆ ಆಗ ಮತ್ತೊಮ್ಮೆ ಸವಾಲು ಎದುರಾಗಿತ್ತು. ಆಗ ಬಾಟಾ ಕಂಪನಿ ಮಕ್ಕಳಿಗಾಗಿ ಬೂಟು ತಯಾರಿಸಿತು.

ಅದರಲ್ಲೂ, ಬಾಟಾದ ಸ್ಕೂಲ್ ಶೂಗಳು ಅತ್ಯಂತ ಜನಪ್ರಿಯವಾದವು. ಬಾಟಾ ಭಾರತದಲ್ಲಿ ಮತ್ತೆ ಗೆಲುವಿನ ನಗೆ ಬೀರಿತು. ಬಹುಶಃ ಈ ಎರಡು ಕಾರಣಗಳಿಂದಾಗಿ ಬಾಟಾ ಭಾರತೀಯರಿಗೆ ಆಪ್ತವಾಯಿತು. ಅದೇ ಕಾರಣಕ್ಕೇ ಇರಬೇಕು, ಷೇರು ಮಾರುಕಟ್ಟೆಯಲ್ಲಿ ಆರಂಭದ ದಿನದಿಂದ ಇಂದಿನವರೆಗೆ ಬಾಟಾದ ಶೇರು ೧,೫೦೦ ಪ್ರತಿಶತ ಹೆಚ್ಚಿದೆ. ಹೆಚ್ಚಬೇಕಾದದ್ದೇ, ಮೆಚ್ಚಬೇಕಾದದ್ದೇ.

ಪ್ರಪಂಚದಾದ್ಯಂತ ಕೋಟ್ಯಂತರ ಜನ ತಮ್ಮ ಕಾಲಿಗೆ ಬಾಟಾ ಕಂಪನಿಯ ಬೂಟು ತೊಟ್ಟು ಕೋಟಿ ಗಟ್ಟಲೆ ಕಿಲೋಮೀಟರ್ ನಡೆದಿzರೆ. ವಿಶ್ವದ
ಹಳೆಯ ಪಾದರಕ್ಷೆ ತಯಾರಿಸುವ ಸಂಸ್ಥೆಗಳಂದಾದ ಬಾಟಾದ ಸ್ವಂತ ನಡಿಗೆಯೇ ಸುಲಭವಾಗಿರಲಿಲ್ಲ. ಗುರಿ ಮುಟ್ಟಲು ಸಾಧ್ಯವಾಗದೆ ಹತಾಶರಾ
ದಾಗ, ಲಕ್ಷ್ಯ ತಲುಪುವ ಮೊದಲೇ ಹಿಂತಿರುಗುವ ಮನಸ್ಸಾದಾಗ ಬಾಟಾದ ನಡಿಗೆಯನ್ನೊಮ್ಮೆ ನೆನಪಿಸಿಕೊಳ್ಳುವುದು ಒಳ್ಳೆಯದು. ನಮ್ಮಲ್ಲಿ ಕಾಲ
ಕೆಳಗಿನ ಬೂಟು, ಚಪ್ಪಲಿ ಎಂದು ಸಾಮಾನ್ಯವಾಗಿ ಅಣಕವಾಡುವುದಿದೆ. ಅದೇ ಕಾಲ ಕೆಳಗಿರುವ ಬೂಟಿನ ಕಥೆ ನಮಗೆ ಸೂರ್ತಿಯೂ ಆಗಬಹುದು
ಎನ್ನುವುದಕ್ಕೆ ಬಾಟಾ ಸಾಕ್ಷಿ.

error: Content is protected !!