Thursday, 14th November 2024

ಈಗ ನಾವಿರುವುದು ಬ್ಯಾಟರಿ ಯುಗದ ಹೊಸ್ತಿಲಲ್ಲಿ

ಶಿಶಿರ ಕಾಲ

ಶಿಶಿರ್‌ ಹೆಗಡೆ ನ್ಯೂಜೆರ್ಸಿ

ಕರೆಂಟ್ – ಊರಿನಲ್ಲಿದ್ದಷ್ಟೂ ವರ್ಷ ಇದರ ಅನಿಶ್ಚಿತತೆಯಷ್ಟು ಕಾಡಿದ ವಿಷಯ ಇನ್ನೊಂದಿಲ್ಲ. ತೋಟದಿಂದ ಅಡುಗೆ ಮನೆಯವರೆಗಿನ ಬಹುತೇಕ ವ್ಯವಹಾರಗಳನ್ನು ನಿರ್ಧರಿಸುತ್ತಿದ್ದುದೇ ವಿದ್ಯುತ್.

ರಣಜಿ, ಇಂಟರ್ ನ್ಯಾಷನಲ್ ಕ್ರಿಕೆಟ್ ಮ್ಯಾಚ್, ವಾರಕ್ಕೊಮ್ಮೆ – ಆದಿತ್ಯವಾರ ಬರುವ ಸಿನೆಮಾ, ಶಕ್ತಿಮಾನ್, ಡಿಸ್ನಿ ಕಾರ್ಟೂನ್ ಇವೆಲ್ಲವೂ ಕರೆಂಟ್ ದೇವರ ಕೃಪೆ ಇದ್ದರೆ ಮಾತ್ರ. ಊರಿನಲ್ಲಿ ಕೆಲವೊಂದು ವ್ಯವಹಾರಗಳ ವಿದ್ಯುತ್ ಅವಲಂಬನೆಗೆ ಪರ್ಯಾಯವಿದ್ದರೂ ದಿನಗಳೆದಂತೆ ಎಲೆಕ್ಟ್ರಿಸಿಟಿ ಇಲ್ಲವೆಂದರೆ ಬದುಕೇ ಅಸಾಧ್ಯ, ಒಂದು ದಿನ ಬದುಕಲೂ ಸಾಧ್ಯವಿಲ್ಲ ಎನ್ನುವ ರೀತಿ ಜೀವನ ಬದಲಾಗಿ ಹೋಗಿದೆ.

ಪರೀಕ್ಷೆಯ ಹಿಂದಿನ ದಿನವೇ ಕರೆಂಟ್ ಹೋಗುವುದು, ಓದುತ್ತ ತಲೆ ಮುಂದೆ ಬಾಗಿದಾಗ ಚಿಮ್ಮಣಿ ಬೆಂಕಿಗೆ ಕೂದಲು ತಾಗಿ ಸುಟ್ಟು ಕೆಟ್ಟ ವಾಸನೆ ಬರುವುದು, ಚಿಮ್ಮಣಿಯಲ್ಲಿ ಎಣ್ಣೆ ಖಾಲಿಯಾಗುವುದು, ಅದನ್ನು ತುಂಬಿಸಲು ಹೋದಾಗ ಮೈ ಕೈ ಎಲ್ಲ ಸೀಮೆ ಎಣ್ಣೆ ವಾಸನೆ (ಕೆಲವರಿಗೆ ಅದು ಪರಿಮಳ) ಹತ್ತುವುದು ಇವೆಲ್ಲ ನಮ್ಮಲ್ಲಿ ಹಲವರಿಗೆ ಇಂದು ನೊಸ್ಟಾಲ್ಜಿಕ್ ಅನ್ನಿಸಿದರೂ ಹಲವು ಕಡೆ ಇಂದಿಗೂ ಪ್ರಸ್ತುತ. ಇಂದಿಗೂ ಬಹುಪಾಲು ಜೀವನ ಕರೆಂಟ್ ಇದೆಯೋ ಇಲ್ಲವೋ ಎನ್ನುವುದರ ಸುತ್ತ ಸದಾ ಗಿರ್ಕಿ ಹೊಡೆಯುತ್ತಿರುತ್ತಿತ್ತು.

ಮಳೆಗಾಲದಲ್ಲಿ ಮಳೆ ಗಾಳಿಗೆ ಲೈಟ್ ಕಂಬಗಳು ಉರುಳಿ, ಟ್ರಾನ್ಸ್ ಫಾರ್ಮರ್ ಸುಟ್ಟು ಹೀಗೆ ಕರೆಂಟ್ ಹೋಗುತ್ತಿದ್ದವು. ನಮ್ಮ ಕಡೆಯಂತೂ
(ಕರಾವಳಿ, ಅರೆಮಲೆನಾಡು) ಈ ರೀತಿ ಪ್ರಕೃತಿ (ವಿ)ಕೋಪಕ್ಕೆ ಕರೆಂಟ್ ಹೋಯಿತೆಂದರೆ ಮತ್ತು ಬರುವುದು ಕೆಲವೊಮ್ಮೆ ವಾರವೇ ಆಗುತ್ತಿತ್ತು.
ಮಳೆಗಾಲದಲ್ಲಿ ಈ ರೀತಿಯಾದರೆ ಬೇಸಿಗೆಯಲ್ಲಿ ಇನ್ನೊಂದು ಕಥೆ. ಬೇಸಿಗೆ ಬಂದರೆ ಡ್ಯಾಮ್‌ನಲ್ಲಿ ನೀರಿಲ್ಲವಂತೆ ಎನ್ನುವ ಇನ್ನೊಂದು ಸಬೂಬು. ಒಟ್ಟಾರೆ ಜೀವನ ಲೋಡ್ ಶೆಡ್ಡಿಂಗ್‌ನ ಆಚೀಚೆಯೇ ನಾಜೂಕಿನಿಂದ ಸಂಭಾಳಿಸಿಕೊಂಡು ಹೋಗಬೇಕಿತ್ತು.

ಒಟ್ಟಾರೆ ಕರೆಂಟ್ ಹೋಗುತ್ತಿತ್ತು – ಏನಾದರೂ ಒಂದು ಕಾರಣ ನಮ್ಮ ಸಮಾಧಾನಕ್ಕೆ ತಯಾರಾಗಿ ಅಲ್ಲಿ ನಿಂತಿರುತ್ತಿತ್ತು. ಈಗ ಕರೆಂಟ್ ಹೋಗುವ ಪ್ರಮಾಣ ಕಡಿಮೆಯಾದರೂ ಅವೇ ಎಲ್ಲ ಕಾರಣಗಳು ಇಂದಿಗೂ ಪ್ರಸ್ತುತ. ಕರೆಂಟ್ ಹೋಗುವುದಕ್ಕೆ ಹಲವು ಕಾರಣಗಳಿದ್ದರೂ ಲೋಡ್ ಶೆಡ್ಡಿಂಗ್‌ಗೆ
ಪೂರೈಕೆಯ ಕೊರತೆಯೇ ಕಾರಣ – ಅದಕ್ಕೇ ಅದರ ಹೆಸರು ಲೋಡ್ ಶೆಡ್ಡಿಂಗ್ – ವಿದ್ಯುತ್ ಒತ್ತಡವನ್ನು ತಗ್ಗಿಸುವುದು.

ಅದೆಲ್ಲ ತಿಳಿದೂ, ಪ್ರತೀ ವರ್ಷ ಲೋಡ್ ಶೆಡ್ಡಿಂಗ್ ಏಕಾಗುತ್ತದೆ? ಏಕೆ ನಾವು ಬೇಕಾದಷ್ಟು ವಿದ್ಯುತ್ ಅನ್ನು ತಯಾರಿಸುವುದಿಲ್ಲ ಎನ್ನುವ ಪ್ರಶ್ನೆಯನ್ನು ಬೆನ್ನು ಹತ್ತಿ ಹೋದಾಗ ಹತ್ತಾರು ವಿಚಾರಗಳು ನಮ್ಮ ಎದುರಿಗೆ ಬಂದು ನಿಲ್ಲುತ್ತವೆ. ಅದರಲ್ಲಿ ಮೊದಲನೆಯದೆಂದರೆ ಬೇಡಿಕೆಯಗುವ ಏರಿಳಿತ. ವಿದ್ಯುತ್ ಮಟ್ಟಿಗೆ ಬೇಡಿಕೆ ಮತ್ತು ಪೂರೈಕೆಯನ್ನು ಸಮದೂಗಿಸಿಕೊಂಡು ಹೋಗುವುದು ಅಷ್ಟು ಸುಲಭದ ಮಾತೇ ಅಲ್ಲ. ಅದೊಂದು
ಅಂದಾಜಿಸಲಾಗದಷ್ಟು ಕಿಷ್ಟ ವಿಚಾರ.

ನಾವು ಖರೀದಿಸುವ ಎಲ್ಲ ವಸ್ತುಗಳ ಬೆಲೆ ನಿರ್ಧರಿತವಾಗುವುದು ಡಿಮ್ಯಾಂಡ್ ಮತ್ತು ಸಪ್ಲೈ ಮೇಲೆ. ಯಾವ ವಸ್ತು ಅವಶ್ಯಕತೆಗಿಂತ ಹೆಚ್ಚಿಗೆ
ತಯಾರಾಗುತ್ತಿದೆಯೋ ಅದರ ಬೆಲೆ ಸಹಜವಾಗಿ ತಗ್ಗಬೇಕು. ಯಾವುದರ ಅವಶ್ಯಕತೆ ಹೆಚ್ಚಿಗೆಯಿದೆಯೋ ಅದರ ಬೆಲೆ ಏರಬೇಕು. ಉದಾಹರಣೆಗೆ
ಪೆಟ್ರೋಲ, ಇದರ ಅವಶ್ಯಕತೆ ಹತ್ತಾರು ಪ್ರಮುಖ ಕಾರಣಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಹೆಚ್ಚು ಕಡಿಮೆಯಾಗುತ್ತಿರುತ್ತದೆ. ಅದಕ್ಕನುಗುಣವಾಗಿ
ಬೆಲೆ ಏರಿಳಿತವಾಗುತ್ತದೆ. ಸೌದಿ ಅರೇಬಿಯಾ, ಇರಾನ್ ಮೊದಲಾದ ತೈಲೋತ್ಪಾದನಾ ದೇಶಗಳು ತಯಾರಿಕೆ ಹೆಚ್ಚಿಸಿ ಮಾರ್ಕೆಟ್‌ಗೆ ಪಂಪ್
ಮಾಡಿದರೆ ಬೆಲೆ ಇಳಿಯುತ್ತದೆ.

ಒಂದು ದೇಶ ಭಾರೀ ಪ್ರಮಾಣದಲ್ಲಿ ಶೇಖರಿಸಿಡಲು ಪೆಟ್ರೋಲ್ ಖರೀದಿಸಿದರೆ ದಾಸ್ತಾನು ಕಮ್ಮಿಯಾಗಿ ಬೆಲೆ ಏರುತ್ತದೆ. ಅಲ್ಲದೇ ಪೆಟ್ರೋಲ್ ದೇಶ ದೇಶಗಳ ನಡುವೆ ನಡೆಯುವ ವ್ಯವಹಾರವಾದದ್ದರಿಂದ ಪ್ರಕೃತಿ ವಿಕೋಪದಿಂದ, ರಾಜಕೀಯ ಬಿಕ್ಕಟ್ಟು ಹೀಗೆ ನೂರಾರು ಕಾರಣಗಳಿಂದ ಬೆಲೆ ಏರುಪೇರಾಗುತ್ತಲೇ ಇರುತ್ತದೆ. ಹಾಗೆ ನೋಡಿದರೆ ಪೆಟ್ರೋಲ್‌ಗೆ ಸ್ಥಿರವಾದ ಬೆಲೆ ಎನ್ನುವುದೇ ಇಲ್ಲ – ಅಕ್ಷರಶಃ ಪ್ರತೀ ಕ್ಷಣ ಅದು ಬದಲಾಗುತ್ತಲೇ ಇರುತ್ತದೆ. ಬೆಲೆ ಸ್ಥಿರತೆ ಆಯಾ ಸರಕಾರಿ ನಿರ್ಮಿತ ಅಷ್ಟೇ.

ಬಹಳಷ್ಟು ದೇಶಗಳಲ್ಲಿ ಈ ಬೆಲೆ ಏರಿಕೆ ಮತ್ತು ಇಳಿಕೆಯನ್ನು ನಿಯಂತ್ರಿಸುವುದು ಬಿಟ್ಟು ಅದೆಷ್ಟೋ ಕಾಲವಾಗಿದೆ. ಅಮೆರಿಕಾ ಸೇರಿದಂತೆ ಅದೆಷ್ಟೋ ದೇಶಗಳಲ್ಲಿ ಪೆಟ್ರೋ ಬೆಲೆ ಪ್ರತೀ ದಿನ – ಇನ್ನು ಕೆಲವು ದೇಶಗಳಲ್ಲಿ ಗಂಟೆಗೊಮ್ಮೆ ಬದಲಾಗುತ್ತದೆ. ನಮ್ಮಲ್ಲಿ ಪೆಟ್ರೋಲ್ ಬೆಲೆ ಏರಿಕೆ ಅದಾಗಲೆಲ್ಲ ಅದು ರಾಜಕೀಯ ಬಣ್ಣ ಪಡೆದುಕೊಳ್ಳುತ್ತದೆ. ಆದರೆ ಈ ಎಲ್ಲ ದೇಶಗಳಲ್ಲಿ ಬದಲಾದದ್ದು ಜನರಿಗೆ ಗೊತ್ತೇ ಆಗುವುದಿಲ್ಲ.

ಆದರೆ ಪೆಟ್ರೋಲ್ ಬೆಲೆ ತೀರಾ ಹೆಚ್ಚು ಕಡಿಮೆಯಾಗದಂತೆ ಸಾಮಾನ್ಯವಾಗಿ ಆಯಾ ಸರಕಾರಗಳು ಪೆಟ್ರೋಲ್ ಅಗ್ಗವಿರುವಾಗ ಖರೀದಿಸಿ ದಾಸ್ತಾನು ಮಾಡುವ ಪದ್ಧತಿ ಇದೆ. ಹಾಗಾಗಿ ಸರಕಾರವೊಂದು ಕೈಗೊಳ್ಳುವ ನಿರ್ಧಾರ ಒಂದಿಷ್ಟು ಕಾಲದವರೆಗೆ ಪೆಟ್ರೋಲ್ ಬೆಲೆಯನ್ನು ಏರದಂತೆ ನೋಡಿ ಕೊಳ್ಳಬಹುದಾದರೂ ಬೆಲೆ ಏರಿಕೆಯೇ ಆಗದಂತೆ ನೋಡಿಕೊಳ್ಳುವುದು ಅಸಾಧ್ಯ. ಆದರೆ ವಿದ್ಯುತ್‌ನ ಕಥೆ ಬೇರೆ. ವಿದ್ಯುತ್ ಡಿಮ್ಯಾಂಡ್ ಋತುಮಾನ
ಮತ್ತು ದಿನದ ನಿಗದಿತ ಸಮಯಗಳಲ್ಲಿ ವ್ಯತ್ಯಾಸವಾಗುತ್ತಿರುತ್ತದೆ.

ಉದಾಹರಣೆಗೆ ನಾವು ಹಗಲು ಹೆಚ್ಚಿನ ವಿದ್ಯುತ್ ಅನ್ನು ಬಳಸುತ್ತೇವೆ. ಹಗಲಲ್ಲಿ ಕಾರ್ಖಾನೆಗಳಿಂದ ಹಿಡಿದು ಎಲ್ಲ ಕಚೇರಿಗಳು ಕೆಲಸ ನಿರ್ವಹಿಸು ತ್ತವೆ. ಮನೆಯಲ್ಲಿ ಕೂಡ ಹಗಲ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಕೆಯಾಗುತ್ತದೆ. ಇನ್ನು ಉತ್ತರ ಭಾರತದಲ್ಲಿ ಚಳಿಗಾಲದಲ್ಲಿ ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತದೆ – ದಕ್ಷಿಣ ಭಾರತದಲ್ಲಿ ಬೇಸಿಗೆ ಯಲ್ಲಿ. ಉತ್ತರದಲ್ಲಿ ಬೇಸಿಗೆಯ ವಿದ್ಯುತ್ ಬಳಕೆಯ ಪ್ರಮಾಣ ಕಡಿಮೆ.

ಈ ಎಲ್ಲ ಗರಿಷ್ಠ ಮತ್ತು ಕನಿಷ್ಠ ಬೇಡಿಕೆಯ ಮಧ್ಯದ ಪ್ರಮಾಣದಲ್ಲಿ ಸಾಮಾನ್ಯವಾಗಿ ವಿದ್ಯುತ್ ತಯಾರಿಸಲಾಗುತ್ತಿರುತ್ತದೆ. ಈ ಅವಶ್ಯಕತೆಯ
ಪ್ರಮಾಣವನ್ನು ಗುರುತಿಸುವುದರ ಮೂಲಕ ವಿದ್ಯುತ್ ತಯಾರಿಕಾ ಘಟಕಗಳನ್ನು ನಿರ್ಮಿಸಲಾಗುತ್ತದೆ. ಹಾಗಾದರೆ ಒಂದು ಸಹಜ ಪ್ರಶ್ನೆ ಏಳ ಬಹುದು, ನಾವೇಕೆ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಅನ್ನು ತಯಾರಿಸುವಷ್ಟು ಘಟಕಗಳನ್ನು ತೆರೆಯಬಾರದು? ಗಟ್ಟಿ ದೇಶವೊಂದಕ್ಕೆ ಅದು ಸಾಧ್ಯವಾದರೂ ಹೆಚ್ಚಿನ ದೇಶಗಳು ಆ ಕೆಲಸಕ್ಕೆ ಬೇಕೆಂತಲೇ ಮುಂದುವರಿಯುವುದಿಲ್ಲ.

ಉದಾಹರಣೆಗೆ ಒಂದು ದೇಶಕ್ಕೆ ಎಲ್ಲ ಕಾಲದಲ್ಲಿ – ಗರಿಷ್ಠ ಪ್ರಮಾಣದ ವಿದ್ಯುತ್ ಅನ್ನು ಪೂರೈಸಲು ನೂರು ವಿದ್ಯುತ್ ತಯಾರಿಕಾ ಘಟಕದ ಅವಶ್ಯಕತೆಯಿದೆ ಎಂದಿಟ್ಟುಕೊಳ್ಳಿ. ಯಾವತ್ತೂ ಆ ಸರಕಾರ ನೂರು ಘಟಕವನ್ನು ನಿರ್ಮಿಸುವುದಿಲ್ಲ. ಹಾಗೊಮ್ಮೆ ಗರಿಷ್ಠ ಅವಶ್ಯಕತೆಯಷ್ಟು ತಯಾರಿಸುವ ಮೂಲ ಸೌಕರ್ಯ ನಿರ್ಮಿಸಿಕೊಂಡರೆ ಬೇಡಿಕೆಯಲ್ಲಿ ಇಳಿಕೆಯಾದಾಗ – ರಾತ್ರಿ ಅಥವಾ ಕಡಿಮೆ ಬೇಡಿಕೆಯಿರುವ ತಿಂಗಳು ಗಳಲ್ಲಿ ಅವಶ್ಯಕತೆಯ ಇಳಿಕೆಗೆ ಅನುಗುಣವಾಗಿ ವಿದ್ಯುತ್ ತಯಾರಿಸು ವುದನ್ನು ಕೂಡ ಇಳಿಸಬೇಕಾಗುತ್ತದೆ.

ಅದರರ್ಥ ಹಲವು ಘಟಕಗಳು ಸುಮ್ಮನೆ ಬಂದ್ ಮಾಡಿ ಇಡಬೇಕಾಗುತ್ತದೆ. ಹಾಗೆ ಮಾಡಿದಲ್ಲಿ ಆ ನಿರ್ವಹಣಾ ವೆಚ್ಚ ಹೆಚ್ಚುತ್ತದೆ. ಅದರ ಹೊರೆ ದೇಶ ಮತ್ತು ಅಲ್ಲಿನ ನಾಗರೀಕರು ಹೊರಬೇಕಾಗುತ್ತದೆ. ದೇಶವೊಂದು ಸದೃಢವಾಗಿಲ್ಲದಿದ್ದಲ್ಲಿ ಈ ವೆಚ್ಚಗಳನ್ನು ಭರಿಸುವುದು ಕಷ್ಟ – ಆಗ ಬೆಲೆ ಏರಿಸ ಬೇಕಾಗುತ್ತದೆ. ಹಾಗಾದರೆ ಹೆಚ್ಚಿಗೆ ತಯಾರಿಸಿ – ವಿದ್ಯುತ್ ಅನ್ನು ಶೇಖರಿಸಿಡಬಹುದಲ್ಲವೇ? ಆ ಪ್ರಮಾಣದಲ್ಲಿ ವಿದ್ಯುತ್ ಅನ್ನು ಶೇಖರಿಸಿಡುವು
ದೆಂದರೆ ಅಷ್ಟು ಸುಲಭದ ಕೆಲಸವಲ್ಲ. ಆಧುನಿಕ ಜಗತ್ತಿನ ಅತಿ ದೊಡ್ಡ ಚಾಲೆಂಜ್ ಎಂದರೆ ವಿದ್ಯುತ್ ಉತ್ಪಾದನೆಯಲ್ಲ – ಅದರ ಬೇಡಿಕೆ ಕಡಿಮೆ ಯಾದಾಗ ಶೇಖರಿಸಿಡುವುದು ಮತ್ತು ಅವಶ್ಯಕತೆ ಹೆಚ್ಚಿದಾಗ ಅದಕ್ಕನುಗುಣವಾಗಿ ಪೂರೈಸುವುದು.

ಈಗೀಗ ಎಲ್ಲರೂ ಶುದ್ಧ ಇಂಧನದ ಬಗ್ಗೆ ಮಾತನಾಡುತ್ತಾರೆ. ಸೋಲಾರ್ – ವಿಂಡ್ ಎಲೆಕ್ಟ್ರಿಸಿಟಿ ಮುಂದಿನ ಭವಿಷ್ಯ – ಮನುಷ್ಯ ಕಲ್ಲಿದ್ದಲು ಪೆಟ್ರೋಲ್ ಸುಡುವುದರ ಮೂಲಕ ವಿದ್ಯುತ್ ತಯಾರಿಸುವುದನ್ನು ನಿಲ್ಲಿಸಬೇಕು ಎನ್ನುವ ಕೂಗು ದಿನಗಳೆದಂತೆ ಎಡೆ ಕೇಳಿ ಬರುತ್ತಿದೆ. ಜಗತ್ತಿನ ಬಹುತೇಕ ದೇಶಗಳು ಈ ಬದಲಾವಣೆ ಅಳವಡಿಸಿಕೊಳ್ಳಲು ಹಲವಾರು ಮಾರ್ಪಾಡುಗಳನ್ನು ಎಲ್ಲಿಲ್ಲದ ವೇಗದಲ್ಲಿ ಮಾಡಿಕೊಳ್ಳುತ್ತಿವೆ.

ಇಂದು ಜಗತ್ತಿನಲ್ಲಿ ತಯಾರಾಗುತ್ತಿರುವ ವಿದ್ಯುತ್‌ನಲ್ಲಿ ಶೇ.36ರಷ್ಟು ವಿದ್ಯುತ್ ತಯಾರಾಗುವುದು ಕಲ್ಲಿದ್ದಲು ಸುಡುವುದರ ಮೂಲಕವಾದರೆ ಸುಮಾರು ಶೇ.24 ವಿದ್ಯುತ್ ತಯಾರಾಗುವುದು ಪೆಟ್ರೋಲಿಯಂ ಉತ್ಪನ್ನಗಳನ್ನು ಸುಡುವುದರ ಮೂಲಕ. ಅಂದರೆ ಜಗತ್ತು ಇಂದು ಬಳಸುವ ಶೇ.60 ವಿದ್ಯುತ್ ಅಸಲಿಗೆ ಕ್ಲೀನ್ ಎನರ್ಜಿ ಅಲ್ಲ. ಅಂತಹ ವಿದ್ಯುತ್ ಅನ್ನು ಕಾರ್ – ವಾಹನಗಳಿಗೆ ಬಳಸಿದಲ್ಲಿ ಅದು ಪೆಟ್ರೋಲ್ ಬಳಸಿದ್ದಕ್ಕಿಂತ ಹೆಚ್ಚಿನ ಮಾಲಿನ್ಯಕಾರಕ.

ಇನ್ನು ಜಲವಿದ್ಯುತ್ ಶೇ.16, ನ್ಯೂಕ್ಲಿಯರ್ ಶೇ.11, ವಿಂಡ್ (ವಾಯು ಶಕ್ತಿ) ಶೇ.5 ವಾದರೆ ಯಥೇಚ್ಛವಾಗಿ ಲಭ್ಯವಿರುವ ಸೋಲಾರ್‌ನಿಂದ ತಯಾರಾಗುವ ವಿದ್ಯುತ್ ಶೇ.3ಕ್ಕಿಂತ ಕಡಿಮೆ. ಆದಷ್ಟು ಬೇಗ ಪ್ರಕೃತಿ ಸಹಜವಾಗಿ ದೊರೆಯುವ ಶಕ್ತಿ ಮೂಲಗಳಾದ ಜಲ, ವಾಯು ಮತ್ತು ಸೌರ ಶಕ್ತಿ ಬಳಸಿ ವಿದ್ಯುತ್ ತಯಾರಿಸುವ ವಿಧಾನವನ್ನು ಸಂಪೂರ್ಣವಾಗಿ ಅವಲಂಬಿಸುವುದು ಮತ್ತು ಇಂಗಾಲ ಹೊರಸೂಸುವ ವಿಧಾನಗಳನ್ನು ಸಂಪೂರ್ಣ ನಿಲ್ಲಿಸುವುದು ಈ ಸಮಯದ ಅವಶ್ಯಕತೆ. ಈ ನಿಟ್ಟಿನಲ್ಲಿ ಜಗತ್ತಿನ ಅತಿ ಹೆಚ್ಚು (ಪರ್ ಕ್ಯಾಪಿಟಾ) ಪ್ರಮಾಣದಲ್ಲಿ ಇಂಧನವನ್ನು ಬಳಸುವ ಅಮೆರಿಕಾ ಎಲ್ಲಿಲ್ಲದ ವೇಗದಲ್ಲಿ ಮಾರ್ಪಾಡು ಮಾಡಿಕೊಳ್ಳುತ್ತಿದೆ.

ಅಮೆರಿಕಾದಲ್ಲಿ ಅದರಲ್ಲಿಯೂ ಕ್ಯಾಲಿಫೋರ್ನಿಯಾ ರಾಜ್ಯ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ. ಕ್ಯಾಲಿಫೋರ್ನಿಯಾದ ಮೊಹಾವಿ ಮರಳುಗಾಡಿ ನಲ್ಲಿ ಭಾರೀ ಪ್ರಮಾಣದಲ್ಲಿ ಸೋಲಾರ್ ಪ್ಯಾನಲ್‌ಗಳು ಕಾಣಸಿಗುತ್ತವೆ. ಅಲ್ಲದೇ ಸೋಲಾರ್ ಶಕ್ತಿಯಿಂದ ವಿದ್ಯುತ್ ಯಾರಿಸುವ ಇನ್ನೊಂದು ವಿಧಾನ ನಮ್ಮಲ್ಲಿಲ್ಲದ್ದು ಅಲ್ಲಿದೆ. ಲಾಸ್ ಏಂಜಲೀಸ್‌ನಿಂದ ಲಾಸ್ ವೇಗಾಸ್‌ಗೆ ಹೋಗುವ ದಾರಿಯಲ್ಲಿ ಅದನ್ನು ನೋಡಬಹುದು. ಅದರ ವಿವರಣೆ ಹೀಗಿದೆ – ಸುಮಾರು ಮೂರುವರೆ ಸಾವಿರ ಎಕರೆ ಜಾಗದಲ್ಲಿ ವರ್ತುಲಾಕಾರದಲ್ಲಿ ಮೂರು ಲಕ್ಷ ಕನ್ನಡಿಗಳನ್ನು ಅಳವಡಿಸಲಾಗಿದೆ. ಈ ಕನ್ನಡಿ ಸೂರ್ಯೋದಯ ವಾದಾಗಿನಿಂದ ತಮ್ಮ ಕೋನವನ್ನು ಬದಲಿಸುತ್ತ ಎಲ್ಲ ಸೂರ್ಯನ ಬೆಳಕನ್ನು ಕೇಂದ್ರದಲ್ಲಿಟ್ಟಿರುವ ಬೃಹತ್ ನೀರಿನ ಟ್ಯಾಂಕ್‌ನ ಮೇಲೆ ಕೇಂದ್ರೀಕರಿಸುತ್ತವೆ. ಈ ಕನ್ನಡಿಗಳ ಕೋನವನ್ನು ಸಾಫ್ಟ್‌ವೇರ್‌ ನಿಯಂತ್ರಿಸುತ್ತದೆ.

ಹೀಗೆ ಅಷ್ಟು ದೊಡ್ಡ ಜಾಗದಲ್ಲಿ ಬೀಳುವ ಸೂರ್ಯನ ಬೆಳಕು ಒಂದೇ ಜಗದಲ್ಲಿ ಕೇಂದ್ರೀಕರಿಸಿದಾಗ ಸುಮಾರು 550 ಸೆಲ್ಸಿಯಸ್ ಉಷ್ಣಾಂಶ – ಅಲ್ಲಿ
ಅಳವಡಿಸಿದ ನೀರಿನ ಟ್ಯಾಂಕ್‌ನಲ್ಲಿ ನಿರ್ಮಾಣವಾಗುತ್ತದೆ. ಹೀಗೆ ಕಾಯಿಸಲ್ಪಟ್ಟ ನೀರಿನ ಆವಿಯನ್ನು ಟರ್ಬೈನ್‌ನಲ್ಲಿ ಹಾಯಿಸಿ ವಿದ್ಯುತ್
ತಯಾರಿಸಲಾಗುತ್ತದೆ. ಇದಲ್ಲದೆ ಮರಳುಗಾಡಿನಲ್ಲಿ ಹಲವೆಡೆ ಭಾರೀ ಪ್ರಮಾಣದಲ್ಲಿ ಸೋಲಾರ್ ಪ್ಯಾನಲ್‌ಗಳನ್ನು ಕೂಡ ಅಳವಡಿಸಲಾಗಿದೆ.
ಇದರಿಂದಾಗಿ ಇಂದು ಕ್ಯಾಲಿಫೋರ್ನಿಯಾ ತನ್ನ ಅವಶ್ಯಕತೆಯ ಶೇ.20 ಪ್ರಮಾಣದ ವಿದ್ಯುತ್ ಅನ್ನು ಸೌರಶಕ್ತಿಯಿಂದ ಉತ್ಪಾದಿಸುತ್ತಿದೆ.

ಇದೊಂದು ಗಮನಾರ್ಹ ಸಾಧನೆಯೇ ಸರಿ. ಆದರೆ ಇಲ್ಲಿ ಕೂಡ ಡಿಮ್ಯಾಂಡ್ ಆಂಡ್ ಸಪ್ಲೆ ನದೇ ಸಮಸ್ಯೆ. ಒಂದೊಮ್ಮೆ ಕ್ಯಾಲಿಫೋರ್ನಿಯಾ ಸಂಪೂರ್ಣವಾಗಿ ಸೌರ ಮತ್ತು ವಾಯು ಶಕ್ತಿಯ ಮೂಲಕವೇ ವಿದ್ಯುತ್ ಅನ್ನು ತಯಾರಿಸಲು ಮುಂದಾಯಿ ತೆಂದುಕೊಳ್ಳಿ, ಹಗಲಲ್ಲಿ ಉತ್ಪಾದನೆ ಹೆಚ್ಚಿ ಬೆಲೆ ಇಳಿಕೆಯಾಗುತ್ತದೆ. ಆದರೆ ಕತ್ತಲೆಯಾದಂತೆ ಉತ್ಪಾದನೆ ಸೊನ್ನೆಯಾಗಿಬಿಡುತ್ತದೆ. ಅಥವಾ ಗಾಳಿ ನಿಂತಿತೆಂದರೆ ವಾಯು ವಿದ್ಯುತ್ ಪೂರೈಕೆ ಶೂನ್ಯವಾಗಿಬಿಡುತ್ತದೆ. ಅಲ್ಲದೇ ವೀಕೆಂಡ್‌ನಲ್ಲಿ ವಿದ್ಯುತ್ ಕಡಿಮೆ ಬಳಕೆಯಾಗುತ್ತದೆ. ಆದರೆ ಸೂರ್ಯನಿಗೆ, ಗಾಳಿಗೆ ವೀಕೆಂಡ್ ವೀಕ್ ಡೇ ಎನ್ನುವುದಿಲ್ಲವಲ್ಲ – ಇದರಿಂದಾಗಿ ಸಪ್ಲೈ ಪ್ರಮಾಣ ಅವಶ್ಯಕತೆಯನ್ನು ಮೀರಿಬಿಡುತ್ತದೆ.

ಕೆಲವೊಮ್ಮೆ ಪೂರೈಕೆ ಮಿತಿಮೀರಿದಾಗ ಸರಕಾರ ಖರೀದಿಸುವ ವಿದ್ಯುತ್ ಬೆಲೆ ಸೊನ್ನೆಗಿಂತ ಕೆಳಕ್ಕಿಳಿಯುತ್ತದೆ. ಅದರರ್ಥ ಈ ಕಂಪನಿಗಳು ವಿದ್ಯುತ್
ಬಳಸಿದರೆ ಜನರಿಗೆ ಹಣ ಕೊಡುವ ವಿಚಿತ್ರ ಸ್ಥಿತಿ. ಇನ್ನು ಡಿಮ್ಯಾಂಡ್ ಹೆಚ್ಚಿದಲ್ಲಿ ವಿದ್ಯುತ್ ಪೂರೈಸಲು ಸಾಧ್ಯವಾಗದಿದ್ದಲ್ಲಿ ವಿದ್ಯುತ್ ಬೆಲೆ
ಸಾವಿರಾರು ಪಟ್ಟು ಹೆಚ್ಚಿಬಿಡುತ್ತದೆ. ಇದು ಟಿಪಿಕಲ್ ಡಿಮ್ಯಾಂಡ್ ಸಪ್ಲೈ ಸಮಸ್ಯೆ. ಇಲ್ಲಿ ಕ್ಯಾಲಿಫೋರ್ನಿಯಾ ಒಂದು ಉದಾಹರಣೆಯಷ್ಟೇ.
ಒಂದು ವೇಳೆ ಮನುಷ್ಯ ಸಂಪೂರ್ಣವಾಗಿ ವಿದ್ಯುತ್‌ಗೆ ಪ್ರಕೃತಿ ಸಹಜ ಮೂಲವನ್ನೇ ಅವಲಂಬಿಸಿದರೆ ಈ ಸಮಸ್ಯೆ ಎಲ್ಲ ಕಡೆ ಕಾಣಿಸುತ್ತದೆ.

ಏಕೆಂದರೆ ಪ್ರಕೃತಿಯಲ್ಲಿ ಎಲ್ಲ ಕ್ರಿಯೆ ನಿರಂತರವಲ್ಲ. ಹಾಗಾದರೆ ನಮ್ಮ ಮನೆಯಲ್ಲಿರುವ ಸೋಲಾರ್ ವ್ಯವಸ್ಥೆಯಂತೆ ಹಗಲಲ್ಲಿ ತಯಾರಾದ ವಿದ್ಯುತ್ ಅನ್ನು ಬ್ಯಾಟರಿಗಳಲ್ಲಿ ಶೇಖರಿಸಿಡಬಹುದಲ್ಲ ಎಂದು ನೀವು ಕೇಳಬಹುದು. ಅದು ಅಷ್ಟು ಸುಲಭದ ಕಥೆಯಲ್ಲ. ಒಂದಿಡೀ ಊರಿಗೆ – ಒಂದಿಡೀ ಮೆಟ್ರೋ ಸಿಟಿ ಗೆ, ಇಡೀ ರಾಜ್ಯಕ್ಕೆ ಬೇಕಾಗುವಷ್ಟು ವಿದ್ಯುತ್ ಅನ್ನು ಶೇಖರಿಸಿಡಲು ನಮ್ಮ ಮನೆಯಲ್ಲಿರುವ ಮಾದರಿಯ ಲಿಥಿಯಂ ಐಯೋನ್ ಬ್ಯಾಟರಿ ಬಳಸಲು ಆಗುವುದಿಲ್ಲ – ಅದಕ್ಕೊಂದು ಲಿಮಿಟೇಷನ್ ಇದೆ.

ಅಲ್ಲದೆ ಈ ಲಿಥಿಯಂ ಅಯೋನ್ ಬ್ಯಾಟರಿಗಳಿಗೆ ಒಂದು ನಿರ್ದಿಷ್ಟ ಆಯಸ್ಸಿದೆ. ಅದಾದ ನಂತರ ಅವುಗಳ ವಿದ್ಯುತ್ ಅನ್ನು ಹಿಡಿದಿಟ್ಟುಕೊಳ್ಳುವ ಕ್ಷಮತೆ ಕಡಿಮೆಯಾಗುತ್ತದೆ – ನಮ್ಮ ಮೊಬೈಲ್ ಹಳತಾದಂತೆ ಬ್ಯಾಟರಿ ನಿಲ್ಲುವುದಿಲ್ಲ ಎನ್ನುತ್ತೇವೆಯಲ್ಲ ಹಾಗೆ. ಇವೇ ಮೊದಲಾದ ಹಲವು ಕಾರಣಗಳಿಂದ ಗ್ರಿಡ್ ಪ್ರಮಾಣದಲ್ಲಿ ವಿದ್ಯುತ್ ಅನ್ನು ಶೇಖರಿಸಿಡಲು ಲಿಥಿಯಂ ಅಯೋನ್ ಬ್ಯಾಟರಿ ದೀರ್ಘ ಕಾಲದ ಪರಿಹಾರಕ್ಕೆ ಯೋಗ್ಯವಾಗುವುದಿಲ್ಲ. ಅಲ್ಲದೆ ಕಡಿಮೆ ಆಯಸ್ಸುಳ್ಳ ಲಿಥಿಯಂ ಅಯೋನ್ ಬ್ಯಾಟರಿಯನ್ನೇ ನೆಚ್ಚಿಕೊಂಡರೆ ಮಾಲಿನ್ಯ ನಿಯಂತ್ರಣಕ್ಕೆ ಅಷ್ಟೆಲ್ಲ ಪರದಾಡಿ ಈ ಬ್ಯಾಟರಿ ಉತ್ಪಾದನೆಯಿಂದಾಗಿ ಅಷ್ಟೇ ಪ್ರಮಾಣದ ಮಾಲಿನ್ಯ ಉಂಟಾಗುತ್ತದೆ – ಏನೋ ಮಾಡಲು ಹೋಗಿ ಇನ್ನೇನೋ ಆಯಿತು ಎನ್ನುವಂತಾಗುತ್ತದೆ.

ಚೀನಾ ಕೈಗಾರಿಕಾ ಕ್ರಾಂತಿಯಿಂದಾಗಿ ಇಂದು ಸೋಲಾರ್ ಪ್ಯಾನಲ್ ಗಳು, ವಿಂಡ್ ಟರ್ಬೈನ್‌ಗಳು ತೀರಾ ಅಗ್ಗವಾಗಿವೆ. ಹಾಗಾಗಿ ಪೃಕ್ರತಿ ಸಹಜ, ಬೇಕಾದಷ್ಟು ವಿದ್ಯುತ್ ತಯಾರಿಕೆ ಏನೋ ಮಾಡಿ ಬಿಡಬಹುದು. ಆದರೆ ಈ ಡಿಮ್ಯಾಂಡ್ ಸಪ್ಲೈ ಸಮಸ್ಯೆ, ವಿದ್ಯುತ್ ಅನ್ನು  ಶೇಖರಿಸಿಡುವುದು ಮತ್ತು ಅವಶ್ಯಕತೆಗೆ ತಕ್ಕಂತೆ ಪೂರೈಸುವುದು ಇಂದಿನ ಆಧುನಿಕ ಯುಗದ ಅತಿ ಜಟಿಲ ಸಮಸ್ಯೆ. ಇಂದು ಈ ಸಮಸ್ಯೆಯ ಪರಿಹಾರವೇ ಗ್ಲೋಬಲ್ ವಾರ್ಮಿಂಗ್ ಮತ್ತು ಎಲ್ಲ ಮಾಲಿನ್ಯಕ್ಕೆ ಪರಿಹಾರ. ಆ ಕಾರಣಕ್ಕೆ ಇದು ಬಹಳ ಮುಖ್ಯವಾಗುತ್ತದೆ.

ಹಾಗೆ ನೋಡಿದರೆ ಯೋಗ್ಯವಾದ ಕೈಗಾರಿಕಾ ಮಟ್ಟದ, ದೀರ್ಘ ಕಾಲ ಬಾಳಿಕೆ ಬರುವ ಬ್ಯಾಟರಿಗಳನ್ನು ಇನ್ನೂ ನಾವು ಕಂಡು ಹಿಡಿದೇ ಇಲ್ಲ. ಅದರ
ಆವಿಷ್ಕಾರದ ನಿಟ್ಟಿನಲ್ಲಿ ಜಗತ್ತಿನಾದ್ಯಂತ ನೂರಾರು ಕಂಪನಿಗಳು, ಸರಕಾರಗಳು ಇಂದು ಕಾರ್ಯನಿರತವಾಗಿವೆ. ಹೀಗೆ ವಿದ್ಯುತ್ ಅನ್ನು ಶೇಖರಿಸಿ ಡುವ ನಿಟ್ಟಿನಲ್ಲಿ ನಡೆದ ಬೃಹತ್ ಪ್ರಮಾಣದ ಪರೀಕ್ಷೆಗಳು ಬಹಳ ಮಜವಾಗಿವೆ. ಕ್ಯಾಲಿಫೋರ್ನಿಯಾದ ಒಂದು ಕಂಪನಿ ಮೈಲಿಗಟ್ಟಲೆ ಉದ್ದದ – ಹಲವು ಮೀಟರ್ ಅಗಲದ ಭೂಮಿಯೊಳಗಿನ ಗುಹೆಯಲ್ಲಿ ಗಾಳಿಯನ್ನು ತೀವ್ರ ಒತ್ತಡದಲ್ಲಿ ಹಗಲಲ್ಲಿ ಉತ್ಪಾದನೆಯಾದ ಹೆಚ್ಚಿನ ಸೋಲಾರ್ ವಿದ್ಯುತ್‌ನಿಂದ ಪಂಪ್ ಮಾಡಿ ಶೇಖರಿಸುವುದು ಮತ್ತು ರಾತ್ರಿ ಆ ತೀವ್ರ ಒತ್ತಡದ ಗಾಳಿಯನ್ನು ಹೊರಕ್ಕೆ ಬರುವಂತೆ ಮಾಡಿ ಅದರಿಂದ ಟರ್ಬೈನ್ ತಿರುಗಿಸಿ ವಿದ್ಯುತ್ ಪುನರುತ್ಪಾದಿಸುವುದು.

ಈ ರೀತಿಯ ಒಂದೆರಡು ಪರೀಕ್ಷೆಗಳು ಯಶಸ್ವಿ ಆದವು. ಆದರೆ ಒಂದಿಡೀ ರಾಜ್ಯಕ್ಕೆ ರಾತ್ರಿ ಬೇಕಾಗುವಷ್ಟು ವಿದ್ಯುತ್ ತಯಾರಿಸುವ ಪ್ರಮಾಣದಲ್ಲಿ ಇದನ್ನು ನಿರ್ಮಿಸುವುದು ಅಸಾಧ್ಯ ಎಂದು ಈ ಕೆಲಸ ಕೈ ಬಿಡಲಾಯಿತು. ಇನ್ನೊಂದು ಕಂಪನಿ ಹೀಗೆ ಸೌರ ಶಕ್ತಿಯಿಂದ ತಯಾರಿಸಿದ ವಿದ್ಯುತ್
ಮೂಲಕ ಡ್ಯಾಮ್‌ಗಳಿಂದ ಹೊರಕ್ಕೆ ಬಿಟ್ಟ ನೀರನ್ನು ಮತ್ತೆ ಮೇಲಕ್ಕೆ ಪಂಪ್ ಮಾಡುವ ಮತ್ತು ರಾತ್ರಿ ಆ ರೀತಿ ಪಂಪ್ ಮಾಡಿದ ನೀರನ್ನು ಕೆಳಕ್ಕೆ ಬಿಟ್ಟು ಟರ್ಬೈನ್ ಮೂಲಕ ಹಾಯಿಸುವುದರ ಮೂಲಕ ವಿದ್ಯುತ್ ಪುನರುತ್ಪಾದನೆಗೆ ಮುಂದಾಯಿತು.

ಇದು ಯಶಸ್ವಿ ಪ್ರಯೋಗವಾದರೂ ಈ ರೀತಿ ವಿದ್ಯುತ್ ಅನ್ನು ಗುರುತ್ವಾಕರ್ಷಣಾ ಶಕ್ತಿಗೆ ಪರಿವರ್ತಿಸಿ ಮತ್ತೆ ವಿದ್ಯುತ್ ಆಗಿ ಪುನರ್ ಪರಿವರ್ತಿಸಲು ಹತ್ತಾರು ಡ್ಯಾಮ್ ಅವಶ್ಯಕತೆ ಯಿದ್ದು ಅದಕ್ಕೆ ಯಥೇಚ್ಛ ಪ್ರಮಾಣದ ಭೂಮಿ, ನೀರು ಇವೆಲ್ಲ ಬೇಕು. ಅದೆಲ್ಲದಕ್ಕೆ ಮತ್ತೆ ಪರಿಸರ – ಗಿಡ ಮರಗಳ ಸಂಹಾರವಾಗಬೇಕು. ಇದು  ಕೂಡ ಸಾರ್ವಕಾಲಿಕ – ಎಲ್ಲ ಕಡೆ ಸಾಧ್ಯವಾಗುವ ಕೆಲಸವಲ್ಲ. ಇನ್ನೊಂದು ಕಂಪನಿ ಹಗಲಲ್ಲಿ ಉತ್ಪಾದನೆಯಾದ ವಿದ್ಯುತ್‌ನಿಂದ ಇಟ್ಟಿಗೆಗಳನ್ನು ಕ್ರೇನ್ನ ಮೂಲಕ ದೊಡ್ಡ ಬಿಲ್ಡಿಂಗ್ ಅಷ್ಟು ಎತ್ತರಕ್ಕೆ ಪೇರಿಸುವುದು ಮತ್ತು ಅದನ್ನು ರಾತ್ರಿ ಕೆಳಕ್ಕೆ ಇಳಿಸುವ ಮೂಲಕ ಆ ಸಂದರ್ಭದಲ್ಲಿ ಉಂಟಾಗುವ ಕೈನೆಟಿಕ್ ಶಕ್ತಿಯಿಂದ ವಿದ್ಯುತ್ ಉತ್ಪಾದನೆಗೆ ಪ್ರಯತ್ನಿಸಿತು.

ಈ ರೀತಿ ವಿದ್ಯುತ್ ಅನ್ನು ಗುರುತ್ವಾಕರ್ಷಣ ಶಕ್ತಿಯ ಮೂಲಕ ಶೇಖರಿಸಿಡುವ ಹತ್ತಾರು ಪ್ರಯೋಗಗಳು ನಡೆಯುತ್ತಿವೆ. ಅಲ್ಲದೆ ನೀರು ಮತ್ತು ಇತರ ವಸ್ತುಗಳನ್ನು ಬಿಸಿ ಮಾಡಿ ಬೃಹತ್ ಥರ್ಮೋಸ್ ಟ್ಯಾಂಕ್‌ಗಳಲ್ಲಿ ಶೇಖರಿಸಿಡುವುದು, ಗಾಳಿಯನ್ನು ತೀವ್ರ  ಉತ್ತಡದಲ್ಲಿ ದೃವೀಕರಿಸಿ ಶೇಖರಿಸಿ ಅದನ್ನು ಆಮೇಲೆ ವಿದ್ಯುತ್ ಶಕ್ತಿಯಾಗಿ ಮಾರ್ಪಡಿಸುವುದು ಹೀಗೆ ನೂರಾರು ಪ್ರಯೋಗಗಳು.

ಇದೆಲ್ಲದರ ಜತೆ ಪ್ರೋ ಬ್ಯಾಟರಿ ತಂತ್ರಜ್ಞಾನ, ಸಮುದ್ರದ ಉಪ್ಪು ನೀರು ಬಳಸಿ ವಿದ್ಯುತ್ ಶೇಖರಿಸಿಡುವ ತಂತ್ರಜ್ಞಾನ ಕೂಡ ಅಭಿವೃದ್ಧಿ ಪಡಿಸುವ
ನಿಟ್ಟಿನಲ್ಲಿ ಪ್ರಯೋಗಗಳು ನಡೆಯುತ್ತಲೇ ಇವೆ. ಅವು ಯಾವವೂ ಎಲ್ಲ ಕಡೆ ಬಳಸುವ ಸಾಧ್ಯತೆ ಕಡಿಮೆ. ಅವೆಲ್ಲವಕ್ಕೆ ಅದರದೇ ಆದ ಲಾಜಿಸ್ಟಿಕ್
ಸಮಸ್ಯೆಗಳಿವೆ. ಹೀಗೆ ಇಂಡಸ್ಟ್ರಿಯಲ್ ಪ್ರಮಾಣದ ಬೃಹತ್ ಬ್ಯಾಟರಿಗಳ – ವಿದ್ಯುತ್ ಶೇಖರಿಸಿಡುವುದರ ಮಹತ್ವವನ್ನು ಕೆಲ ವರ್ಷಗಳ ಮೊದಲೇ ಅಂದಾಜಿಸಿದ ಜಗತ್ತಿನ ಶ್ರೀಮಂತ, ಟೆಸ್ಲಾದ ಎಲಾನ್ ಮಸ್ಕ್ ಕೂಡ ತನ್ನ ಕಂಪನಿಯಲ್ಲಿ ಆಧುನಿಕ ಬೃಹತ್ ಬ್ಯಾಟರಿಗಳನ್ನು ಹೇಗೆ ತಯಾರಿಸ
ಬಹುದು ಎನ್ನುವ ನಿಟ್ಟಿನಲ್ಲಿ ವಿಜ್ಞಾನಿಗಳನ್ನು ಕೆಲಸಕ್ಕೆ ಹಚ್ಚಿದ್ದಾನೆ.

ಅವರೆಲ್ಲರೂ ಹಗಲಿರುಳು ಈ ಆವಿಷ್ಕಾರಕ್ಕೆ ಶ್ರಮಿಸುತ್ತಿದ್ದಾರೆ. ಅಮೆಜಾನ್  ನ ಬೆಝೋಸ್, ಬಿಲ್ ಗೇಟ್ಸ್ ಎಲ್ಲರೂ ಈ ಆವಿಷ್ಕಾರದ ಮಹತ್ವವನ್ನು
ಅರಿತು ತಮ್ಮ ಕಂಪನಿಗಳು ಕಾರ್ಯೋನ್ಮುಖವಾಗುವಂತೆ ನೋಡಿಕೊಂಡಿದ್ದಾರೆ. ಅಲ್ಲದೆ ಅಮೆರಿಕಾ ಮತ್ತು ಹತ್ತಾರು ಗಟ್ಟಿ ಸರಕಾರಗಳು ಕೂಡ ಈ
ಪ್ರಯೋಗಕ್ಕೆ ಸಾಥ್ ನೀಡುತ್ತಿದ್ದು ಅದಕ್ಕಾಗಿಯೇ ಒಂದಿಷ್ಟು ಬಜೆಟ್ ಅನ್ನು ಪಕ್ಕಕಿರಿಸುತ್ತಿವೆ. ಒಂದು ಸಮಂಜಸ ವಿದ್ಯುತ್ ಶೇಖರಿಸಿಡುವ ವಿಧಾನ
ಆದಷ್ಟು ಬೇಗ ಕಂಡು ಹಿಡಿದಲ್ಲಿ, ಚಾಲ್ತಿಗೆ ಬಂದಲ್ಲಿ – ಜಗತ್ತಿನ ಅವಶ್ಯಕತೆಯ ಶೇ.20 ವಿದ್ಯುತ್ ಅನ್ನು ನಾವು ಶೇಖರಿಸಿಡುವಂತಾದಲ್ಲಿ, ವಿದ್ಯುತ್ – ಅಷ್ಟೇ ಏಕೆ – ನಮ್ಮ ಸಂಪೂರ್ಣ ಇಂಧನದ ಅವಶ್ಯಕತೆಗೆ ನವೀಕರಿಸಬಹುದಾದ ಮೂಲವನ್ನು ಬಳಸುವ ವ್ಯವಸ್ಥೆ ನಿರ್ಮಾಣವಾಗುತ್ತದೆ.

ಗ್ಲೋಬಲ್ ವಾರ್ಮಿಂಗ್ ಸಮಸ್ಯೆಗೊಂದು ಸರಿಯಾದ ಪರಿಹಾರ ದೊರಕುತ್ತದೆ. ಆ ಕಾರಣಕ್ಕೇ ಹೇಳಿದ್ದು, ನಾವಿಂದು ಬ್ಯಾಟರಿ ಯುಗದ ಹೊಸ್ತಿಲಲ್ಲಿ ದ್ದೇವೆ ಎಂದು.