ವೈಜ್ಞಾನಿಕ
ಎಲ್.ಪಿ.ಕುಲಕರ್ಣಿ
ಆದಿ ಅಂತ್ಯವಿಲ್ಲದ ಈ ನಮ್ಮ ತಾರಾಗಣದ ನಡುವಿನ ನಮ್ಮ ವಿಶ್ವದ ಕೆಲವು ನಿರ್ದಿಷ್ಟ ಪ್ರದೇಶಗಳು ಮಳೆಗಾಲದಲ್ಲಿ ರಸ್ತೆಯ
ಮೇಲೆ ಬಾಯ್ತೆರೆದ ತಗ್ಗುಗಳು, ಮ್ಯಾನ್‌ಹೋಲ್ ಗಳಂತಿವೆ. ತೀವ್ರ ಗುರುತ್ವಾಕರ್ಷಣ ಶಕ್ತಿ ಈ ಗುಂಡಿಗಳಿಗಿರುವುದರಿಂದ ಇಲ್ಲಿ ಯಾವುದೇ ಆಕಾಶ ಕಾಯ ಬಿದ್ದರೂ ಅದು ಮರಳಿ ಬರುವುದು ಅಸಾಧ್ಯ.
ಇವುಗಳ ತೀವ್ರತೆ ಹೇಗಿದೆ ಎಂದರೆ, ಒಂದು ವೇಳೆ ಬೆಳಕಿನ ಒಂದು ಕಿರಣ ಈ ಪ್ರದೇಶದಲ್ಲಿ ಹೋದರೆ ಅದು ಮರಳಿ ಬರಲಾರದು. ಸಾಮಾನ್ಯವಾಗಿ ಹೇಳುವುದಾದರೆ ಬೆಳಕನ್ನೂ ಸಹ ನುಂಗಿ ಬಿಡುವ ಸಾಮರ್ಥ್ಯ! ಹೀಗಾಗಿ ಕಗ್ಗತ್ತಲ ಗುಂಡಿಗಳಂತೆ ಗೋಚರ ವಾಗುವ ಇವು ತಮ್ಮತ್ತ ಬಂದ ಬೃಹತ್ ಗಾತ್ರದ ನಕ್ಷತ್ರ, ಗ್ರಹಗಳಿರಲಿ ಇಲ್ಲವೇ ಅತೀ ಚಿಕ್ಕ ಕಣಗಳಾದ ಪ್ರೊಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್ ಗಳಿರಲಿ ಇವುಗಳನ್ನು ಕ್ಷಣ ಮಾತ್ರದಲ್ಲಿ ನುಂಗಿ, ಅರಗಿಸಿಕೊಂಡುಬಿಡುತ್ತವೆ.
ಮರಳಿ ಯಾವ ಕಣವೂ ಇವುಗಳಿಂದ ಹೊರಬರುವುದಿಲ್ಲ. ಇಂತಹ ಪ್ರದೇಶಗಳು ಕೋಟ್ಯಂತರ ಸಂಖ್ಯೆಯಲ್ಲಿ ಈ ನಮ್ಮ ವಿಶ್ವ
ದಲ್ಲಿವೆ. ಇಂಥವುಗಳನ್ನೇ ಬ್ಲ್ಯಾಕ್ ಹೋಲ, ಕಪ್ಪು ಕುಳಿ, ಕೃಷ್ಣ ರಂಧ್ರ ಎಂಬ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿದೆ.
ಬ್ಲ್ಯಾಕ್ ಹೋಲ್ ಎಂಬ ಪದವು ಇತ್ತೀಚಿನದಾಗಿದೆ. ಅದನ್ನು1969ರಲ್ಲಿ ಅಮೆರಿಕಾದ ವಿಜ್ಞಾನಿ ಜಾನ್ ವೀಲರ್ ಅವರು ನಕಾಶೆಗಳ ವಿವರಣೆಗೆ ಬಳಸಿದರು. ಇದಕ್ಕೆ ಕೊನೆಪಕ್ಷವೆಂದರೂ ಎರಡನೂರು ವರ್ಷಗಳ ಇತಿಹಾಸವಿದೆ.
ವಿಜ್ಞಾನಿ ರೊಯಿಮರ್‌ನ ಸಂಶೋಧನೆಯಿಂದ ಬೆಳಕು ಪರಿಮಿತ ವೇಗದಲ್ಲಿ ಸಾಗುವುದರಿಂದ ಗುರುತ್ವಾಕರ್ಷಣೆಯು ಅದರ
ಮೇಲೆ ನಿರ್ಣಾಯಕ ಪರಿಣಾಮವನ್ನುಂಟು ಮಾಡುತ್ತದೆ ಎಂದು ತಿಳಿದುಬಂತು. ಈ ತರ್ಕದ ಆಧಾರದ ಮೇಲೆ ಕೇಂಬ್ರಿಡ್ಜ್‌ನ ಜೋನ್ ಮಿಶೆಲ್ ಅವರು ಫಿಲಾಸೊಫಿ ಕಲ್ ಟ್ರಾನ್ಸ್ಯಾಕ್ಷನ್ಸ್ ಆಫ್ ದಿ ರಾಯಲ್ ಸೊಸೈಟಿ ಆಫ್ ಲಂಡನ್ ಪತ್ರಿಕೆಯಲ್ಲಿ
1783 ರಲ್ಲಿ ಲೇಖನವೊಂದನ್ನು ಬರೆದರು. ಅದರಲ್ಲಿ ನಕ್ಷತ್ರವೊಂದು ಸಾಕಷ್ಟು ಭಾರವೂ, ಅಡಕವೂ ಆದುದಾಗಿದ್ದು.
ಅದಕ್ಕೆ ಎಷ್ಟು ಗುರುತ್ವಾಕರ್ಷಣ ಬಲವಿರುತ್ತದೆ ಎಂದರೆ ಬೆಳಕು ಕೂಡ ಅದರಿಂದ ತಪ್ಪಿಸಿಕೊಳ್ಳಲಾರದು. ನಕ್ಷತ್ರದ ಮೇಲ್ಮೈ ಯಿಂದ ಹೊರಬಿದ್ದ ಬೆಳಕನ್ನು ಅದು ತುಂಬಾ ದೂರಕ್ಕೆ ಹೋಗುವ ಮೊದಲೇ ನಕ್ಷತ್ರದ ಗುರುತ್ವಾಕರ್ಷಣ ಬಲವು ಹಿಂದಕ್ಕೆ ಎಳೆಯುತ್ತದೆ. ಮಿಶೆಲ್ ಅವರು ಇಂತಹ ಅನೇಕ ನಕ್ಷತ್ರಗಳು ಆಕಾಶದಲ್ಲಿವೆ ಎಂದು ಪ್ರತಿಪಾದಿಸಿದರು. ಇವೆಲ್ಲವನ್ನೂ ನಾವು ನೋಡಲಾಗುವುದಿಲ್ಲ.
ಏಕೆಂದರೆ ಅವುಗಳಿಂದ ಹೊರಟಿರುವ ಬೆಳಕು ಇನ್ನೂ ನಮ್ಮನ್ನು ತಲುಪಿಯೇ ಇಲ್ಲ. ಆದರೆ ಅವುಗಳ ಗುರುತ್ವಾಕರ್ಷಣೆಯ ಬಲವು ನಮ್ಮ ಅನುಭವಕ್ಕೆ ಬರುತ್ತಿರುತ್ತದೆ. ಇಂತಹ ನಕ್ಷತ್ರಗಳನ್ನೇ ಈಗ ನಾವು ಬ್ಲ್ಯಾಕ್ ಹೋಲ್ಸ ಎಂದು ಕರೆಯುವುದು.
ಇದುವರೆಗೂ ಬ್ಲ್ಯಾಕ್ ಹೋಲ್ ಎಂದರೇನು, ಅದಕ್ಕೆ ಆ ಹೆಸರು ಹೇಗೆ ಬಂದಿತು ಎಂಬ ಬಗ್ಗೆ ತಿಳಿದುಕೊಂಡಂತಾಯಿತು. ಆದರೀಗ, ಇದುವರೆಗೂ ಕಂಡರಿಯದ ಬೃಹತ್ತಾದ ಸುರಳಿಯಾಕಾರದ ಬ್ಲ್ಯಾಕ್ ಹೋಲ್ ಒಂದನ್ನು ವಿಜ್ಞಾನಿಗಳು ಪತ್ತೆ
ಹಚ್ಚಿzರೆ. ಈ ಕುರಿತು ತಿಳಿದುಕೊಳ್ಳೋಣ ಬನ್ನಿ.
ಭೂಮಿಯಿಂದ ಸರಿಸುಮಾರು 1 ಮಿಲಿಯನ್ ಜ್ಯೋರ್ತಿವರ್ಷಕ್ಕಿಂತಲೂ ( 1 ಜೋ.ವ ಎಂದರೆ ಸುಮಾರು 9.461 ಸ 1012 ಕಿ.ಮೀ ಅಥವಾ 9.461 ಸ 10ರ ಘಾತ 12 ಕಿ.ಮೀ. ) ಹೆಚ್ಚಿನ ದೂರದಲ್ಲಿರುವ ‘ಅಬೆಲ್2261- ಬಿಸಿಜಿ ’ ಎಂಬ ಗೆಲಕ್ಸಿ ಗುಂಪಿನಲ್ಲಿ ಈ ಒಂದು ಸುರಳಿ ಕಪ್ಪು ರಂಧ್ರ ಕಂಡಿದೆ. ನಾವಿರುವ ಕ್ಷೀರ ಪಥ ( ಮಿಲ್ಕೀ ವೇ ) ಗ್ಯಾಲಕ್ಸಿಯ ವ್ಯಾಸಕ್ಕಿಂತಲೂ ಈಗ ಶೋಧಿಸಿದ ಅಬೆಲ್ 2261-ಬಿಸಿಜಿ ಗ್ಯಾಲಕ್ಸಿ 10 ಪಟ್ಟು ವ್ಯಾಸ ಹೊಂದಿದೆಯಂತೆ. ಅಂದರೆ ಮಿಲ್ಕೀ ವೇ ಗ್ಯಾಲಕ್ಸಿಯು ಸುಮಾರು 105,700 ಜೋರ್ತಿ ವರ್ಷ ವ್ಯಾಸ ಹೊಂದಿದೆ.
ಇದರ ಹತ್ತು ಪಟ್ಟು ಅಬೆಲ್ 2261-ಬಿಸಿಜಿ ಗ್ಯಾಲಕ್ಸಿ ವ್ಯಾಸ ಹೊಂದಿದೆಯಂತೆ. ಈ ಮೊದಲು ವಿಜ್ಞಾನಿಗಳಿಗೆ ಗೋಚರಿಸಿದ ಕಪ್ಪು ರಂಧ್ರಗಳಿಗಿಂತಲೂ ಈಗ ಹೊಸದಾಗಿ ಕಂಡ ಕಪ್ಪು ರಂಧ್ರವು ಹೆಚ್ಚಿನ ದ್ರವ್ಯರಾಶಿಯಿಂದ ಕೂಡಿದೆಯಂತೆ. ನಮ್ಮ ಸೂರ್ಯನಿ ಗಿಂತ ಮಿಲಿಯನ್ ಅಥವಾ ಬಿಲಿಯನ್‌ಗಿಂತಲೂ ಹೆಚ್ಚಿನ ತೂಕವನ್ನು ಈ ಹೊಸ ಬ್ಲ್ಯಾಕ್ ಹೋಲ್ ಹೊಂದಿದೆ. ’ ದಿ ನ್ಯಾಷನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಎಡ್ಮಿನಿಸ್ಟ್ರೇಷನ್ಸ್ ಹಬಲ್ ಸ್ಟೇಸ್ ಟೆಲಿಸ್ಕೋಪ್ ಹಾಗೂ ಸುಬಾರು ಸ್ಪೇಸ್ ಟೆಲಿಸ್ಕೋಪ್‌ಗಳ ವಿಜ್ಞಾನಿಗಳು ಕೈಗೊಂಡ ವೀಕ್ಷಣೆಯಿಂದ ಈ ಹೊಸದಾಗಿ ಕಂಡ ಬ್ಲ್ಯಾಕ್ ಹೋಲ್ ಅತಿ ಹೆಚ್ಚು ದ್ರವ್ಯರಾಶಿ ಹೊಂದಿದೆ ಎಂಬುದು ದೃಢಪಟ್ಟಿದೆ.
ಸ್ಪೇಸ್ ಟೆಲಿಸ್ಕೋಪ್ ಸೈನ್ಸ್ ಇನ್ಸ್ಟಿಟ್ಯೂಟ್‌ನಲ್ಲಿ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಮಾರ್ಕ್ ಪೋಸ್ಟಮನ್ ಅವರು ಈ ಗ್ಯಾಲಕ್ಸಿ ಹಾಗೂ ಬ್ಲ್ಯಾಕ್ ಹೋಲ್ ಕುರಿತು ಹೀಗೆ ಹೇಳುತ್ತಾರೆ – ‘ಪ್ರಾರಂಭದಲ್ಲಿ ನಾನು ಈ ಗ್ಯಾಲಕ್ಸಿಯನ್ನು ವೀಕ್ಷಿಸಿದಾಗ ಇದೊಂದು ಅಸ್ಪಷ್ಟತೆಯಿಂದ ಕೂಡಿದ ಗ್ಯಾಲಕ್ಸಿ ಎಂದು ತಿಳಿದಿದ್ದೆ. ಆ ನಂತರ ಇನ್ನಷ್ಟು ಸ್ಪಷ್ಟವಾಗಿ ವೀಕ್ಷಿಸಿ ಅಧ್ಯಯನ ಕ್ಕಿಳಿದಾಗ ಗ್ಯಾಲಕ್ಸಿಯ ಕೇಂದ್ರ ಭಾಗ ಬಹಳ ವಿಸ್ತಾರವಾಗಿರುವುದು ಕಂಡುಬಂದಿತು. ಈ ಮೊದಲು ಕೈಗೊಂಡ ಹಲವಾರು ಗ್ಯಾಲಕ್ಸಿಗಳ ಅಧ್ಯಯನದಿಂದ ಈಗ ಗೋಚರಿಸಿರುವ ಗ್ಯಾಲಕ್ಸಿ ಅಬೆಲ್ 2261-ಬಿಸಿಜಿ ಮತ್ತು ಅದರ ಕೇಂದ್ರ ದಲ್ಲಿರುವ ಬ್ಲ್ಯಾಕ್ ಹೋಲ್‌ಗಳು ಗಾತ್ರ, ಆಕಾರ ಹಾಗೂ ದ್ರವ್ಯರಾಶಿಗಳಲ್ಲಿ ಬೃಹತ್ತಾಗಿವೆ ಮತ್ತು ವೈಶಿಷ್ಟ್ಯಪೂರ್ಣವಾಗಿವೆ.
2000 ಜೋ.ವ ಗಳಷ್ಟು ದೂರದಲ್ಲಿ ಕಂಡುಬಂದ ಈ ಸುರಳಿಯಾಕಾರದ ಕಪ್ಪು ರಂಧ್ರವು, ಈಗ ಹೊಸದಾಗಿ ಹೆಸರಿಸಿದ
‘ಎ 2261– ಬಿಸಿಜಿ ’ ಗ್ಯಾಲಕ್ಸಿಯಲ್ಲಿ ಉದ್ಭವಿಸಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ಧಾರೆ. ಟಕ್ಸನ್‌ನಲ್ಲಿರುವ ‘ನ್ಯಾಷನಲ್ ಆಪ್ಟಿಕಲ್ ಅಸ್ಟ್ರೋನಾಮಿ ಅಬ್ಸರವೇಟರಿ ’ಯ ಭೌತಶಾಸ್ತ್ರಜ್ಞರಾದ ಟಾಡ್ ಲಾರ್ ಅವರು – ‘ಪ್ರತಿಯೊಂದು ಗ್ಯಾಲಕ್ಸಿಗಳಲ್ಲಿ ಕಪ್ಪು ರಂಧ್ರಗಳನ್ನು ಹುಡುಕುವುದೆಂದರೆ, ಪೀಚ್ ಹಣ್ಣಿನಲ್ಲಿರುವ ಕುಳಿ (ತಗ್ಗ)ನ್ನು ಹುಡುಕಿದಂತೆ.’ ಎನ್ನುತ್ತಾರೆ.
ವಿಜ್ಞಾನಿಗಳು ಇನ್ನೂ ಹತ್ತು ಹಲವು ಸಂಶೋಧನೆಗಳನ್ನು ಕೈಗೊಂಡು, ಮುಂದಿನ ದಿನಮಾನಗಳಲ್ಲಿ ಈ ಮಹಾನ್ ಸುರಳಿ
ಯಾಕಾರದ ಕಪ್ಪುರಂಧ್ರದ ಸ್ಪಷ್ಟ ಚಿತ್ರಣವನ್ನು ನಮ್ಮ ಮುಂದೆ ತೆರದಿಡಲಿದ್ದಾರೆ. ಬ್ಲ್ಯಾಕ್ ಹೋಲ್‌ನ ಸಂಶೋಧನೆ ಹಾಗೂ
ಇವುಗಳ ಕುರಿತಾದ ಅಧ್ಯಯನಕ್ಕೆಂದೇ ಕಳೆದ ಸಾಲಿನ ಭೌತಶಾಸ್ತ್ರ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಮೂರ್ವರು ವಿಜ್ಞಾನಿಗಳಿಗೆ ಪ್ರದಾನ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು – ಕಪ್ಪುರಂಧ್ರದ (ಬ್ಲ್ಯಾಕ್ ಹೋಲ) ಕುರಿತ ಸಂಶೋಧನೆಗಾಗಿ ಬ್ರಿಟನ್‌ನ
ಆಕ್ಸಫರ್ಡ್ ವಿವಿಯ ಸಾಂಖಿಕ ಭೌತಶಾಸ್ತ್ರ, ಗಣಿತ ಹಾಗೂ ತತ್ತ್ವ ವಿಜ್ಞಾನ ಪ್ರೊಫೆಸರ್ ಆದ ರೋಜರ್ ಪೆನ್ರೋಸ್(89), ಜರ್ಮನಿಯ ಗಾಚಿಂಗ್‌ನಲ್ಲಿರುವ ಮ್ಯಾಕ್ಸ್ ಪ್ಲಾಂಕ್ ಇನ್ ಸ್ಟಿಟ್ಯೂಟ್ ಫಾರ್ ಫಿಸಿಕ್ಸ್‌ನ ಪ್ರೊಫೆಸರ್ ಆಗಿರುವ ರೈನ್ಹಾರ್ಡ್ ಗೆಂಜೆಲ(68) ಹಾಗೂ ಅಮೆರಿಕದ ಲಾಸ್ ಎಂಜಲೀಸ್‌ನ ಕ್ಯಾಲಿಫೋರ್ನಿಯಾ ವಿವಿಯ ಭೌತಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿರುವ ಆಂಡ್ರಿಯಾ ಘೇಜ್ (55) ಅವರು 2020ನೇ ಸಾಲಿನ ಭೌತವಿಜ್ಞಾನ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬ್ರಹ್ಮಾಂಡದಲ್ಲಿನ ಆಕರ್ಷಕವಾದ ವಿದ್ಯಮಾನವಾದ ಕಪ್ಪು ರಂಧ್ರದ ಆವಿಷ್ಕಾರಕ್ಕಾಗಿ ಮೂವರು ಭೌತವಿಜ್ಞಾನಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ನೊಬೆಲ್ ಸಮಿತಿಯು ತಿಳಿಸಿತ್ತು. ಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರ ಜತೆ ಕಾರ್ಯ ನಿರ್ವಹಿಸಿದ್ದ ಆಕ್ಸರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೆನ್ರೋಸ್, ಕಪ್ಪುರಂಧ್ರ ರಚನೆ ಹೇಗಾಗುತ್ತದೆ ಎನ್ನುವುದನ್ನು
1965ರಲ್ಲಿ ಪತ್ತೆಹಚ್ಚಿದ್ದರು. ಸಾಪೇಕ್ಷತಾ ಸಿದ್ಧಾಂತವು (ಥಿಯರಿ ಆಫ್ ರಿಲೇಟಿವಿಟಿ) ಕಪ್ಪುರಂಧ್ರದ ರಚನೆಗೆ ಕಾರಣವಾಗುತ್ತದೆ’ ಎನ್ನುವುದನ್ನು ಅವರು ಆವಿಷ್ಕಾರ ಮಾಡಿದ್ದರು. ಸಾಗರ ಸಮುದ್ರ ಗಳಿಗಿರುವಂತೆ ಕಪ್ಪುಕುಳಿ(ಬ್ಲ್ಯಾಕ್ ಹೋಲ್)ಗೂ ಅಂಚು ಇರುತ್ತದೆ.
ಅದನ್ನು ಈವೆಂಟ್ ಹೊರೈಜಾನ್ ಅಂದರೆ ಘಟನಾ ಕ್ಷಿತಿಜ ಎಂದು ಕರೆಯುತ್ತಾರೆ. ಈ ಘಟನಾ ಕ್ಷಿತಿಜದ ಬಗ್ಗೆ ಗಣಿತೀಯ ಕೆಲವು ಸಾಧನೆಗಳನ್ನು ನಮ್ಮ ಭಾರತೀಯ ಭೌತ ವಿಜ್ಞಾನಿ ಹಾಗೂ ಬ್ಲ್ಯಾಕ್ ಹೋಲ್ ಮ್ಯಾನ್ ಆಫ್ ಇಂಡಿಯಾ ಎಂದು ಪ್ರಸಿದ್ಧಿ
ಪಡೆದಿದ್ದ ಸಿ.ವಿ. ವಿಶ್ವೇಶ್ವರ ಅವರು 1968ರ ಸಾಧಿಸಿ ತೋರಿಸಿದ್ದರು. ಅವರು ಇತ್ತೀಚೆಗೆ 16 ಜನವರಿ 2017ರಂದು ನಮ್ಮನ್ನಗಲಿ ದರು. ಒಂದು ವೇಳೆ ಅವರು ಈಗ ಜೀವಿಸಿದ್ದರೆ, ಅವರಿಗೂ ಸಹ ನೊಬೆಲ್ ಸಿಗುತ್ತಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಆಕಾಶಗಂಗೆಯ ಮಧ್ಯದಲ್ಲಿ ನಕ್ಷತ್ರಗಳ ಕಕ್ಷೆಯನ್ನು ನಿಯಂತ್ರಿಸುವ ಅಗೋಚರ ಹಾಗೂ ಭಾರಿ ಗಾತ್ರದ ವಸ್ತುವೊಂದಿದೆ’ ಎನ್ನುವುದನ್ನು ಪತ್ತೆಹಚ್ಚಿರುವುದಕ್ಕಾಗಿ ರೈನ್ಹಾರ್ಡ್ ಗೆಂಜೆಲ್ ಹಾಗೂ ಆಂಡ್ರಿಯಾ ಘೇಜ್ ಅವರಿಗೆ ಜಂಟಿಯಾಗಿ ಈ ಗೌರವಕ್ಕೆ
ಪಾತ್ರರಾದರು. ಪ್ರಸ್ತುತ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಭೌತವಿಜ್ಞಾನ ಹಾಗೂ ಖಗೋಳ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಘೇಜ್ ಅವರು, ಭೌತವಿಜ್ಞಾನ ನೊಬೆಲ್ ಪ್ರಶಸ್ತಿ ಪಡೆದ ನಾಲ್ಕನೇ ಮಹಿಳೆ.
ನಮ್ಮ ಆಕಾಶಗಂಗೆ (ಮಿಲ್ಕಿವೇ) ಮಧ್ಯದಲ್ಲಿ ಇರುವ ಸಗಿಟರಿಯಸ್ ಎ’ ಎಂಬ ಪ್ರದೇಶದ ಮೇಲೆ 1990ರಲ್ಲಿ ಗೆಂಜೆಲ್ ಹಾಗೂ
ಘೇಜ್ ಸಂಶೋಧನೆ ಆರಂಭಿಸಿದ್ದರು. ವಿಶ್ವದ ಬೃಹತ್ ಟೆಲಿಸ್ಕೋಪ್‌ಗಳನ್ನು ಬಳಸಿಕೊಂಡು, ಉಳಿದೆ ನಕ್ಷತ್ರಗಳನ್ನು ನಿಯಂತ್ರಿ ಸುವ, ಸೂರ್ಯನ ಗಾತ್ರಕ್ಕಿಂತ 40 ಲಕ್ಷ ಪಟ್ಟು ದೊಡ್ಡದಿರುವ ಅಗೋಚರ ವಸ್ತುವನ್ನು ಆವಿಷ್ಕಾರ ಮಾಡಿದ್ದರು. ಪ್ರಶಸ್ತಿ ಮೊತ್ತ ? 8.17 ಕೋಟಿ ಆಗಿದ್ದು, ಇದರಲ್ಲಿ ಅರ್ಧಭಾಗವನ್ನು ಪೆನ್ರೋಸ್ ಪಡೆದಿದ್ದಾರೆ.
ವಿಜ್ಞಾನಿಗಳಾಗಬೇಕು ಎಂದು ಕನಸು ಕಾಣುತ್ತಿರುವ ಯುವತಿಯರಿಗೆ ಕಣ್ಣೆದುರಿಗೇ ಆದರ್ಶ ವ್ಯಕ್ತಿಗಳು ಇದ್ದಾಗ ಆಗುವ
ಪರಿಣಾಮವೇ ಬೇರೆ’ ಎನ್ನುತ್ತಾರೆ ಭೌತ ವಿಜ್ಞಾನಿ ಆಂಡ್ರಿಯಾ ಘೇಜ್.