ವೈದ್ಯ ವೈವಿಧ್ಯ
ಡಾ ಎಚ್ ಎಸ್ ಮೋಹನ್
18 ಜುಲೈ 1921 ರಂದು ಪ್ಯಾರಿಸ್‌ನಲ್ಲಿ ಆಗ ತಾನೇ ಹುಟ್ಟಿದ ಮಗುವಿಗೆ ಬಿ ಸಿ ಜಿ ಯ ಪ್ರಾಯೋಗಿಕವಾದ ಮೊಟ್ಟಮೊದಲ ವ್ಯಾಕ್ಸೀನ್ ಕೊಡಲಾಯಿತು.
ಮನುಷ್ಯನ ಆರೋಗ್ಯದ ಮೇಲೆ ಬಹಳಷ್ಟು ಪ್ರಭಾವ ಬೀರಿದ ಬಿ ಸಿ ಜಿ ವ್ಯಾಕ್ಸೀನ್ ಬಳಕೆಗೆ ಬಂದು ಈಗ 100 ವರ್ಷ ತುಂಬಿತು. BCG ಎಂದರೆ ಕ್ಷಯರೋಗ
ಬರದಿರಲು ಕೊಡುವ ವ್ಯಾಕ್ಸೀನ್. BCG ಎಂದರೆ Bacillus Calmette-Guerin ವ್ಯಾಕ್ಸೀನ್.
ಎರಡು ಫ್ರೆಂಚ್ ವಿಜ್ಞಾನಿಗಳಾದ Albert Calmette ಮತ್ತು Camille Guerin ಇವರುಗಳು ಇದನ್ನು ಅಭಿವೃದ್ಧಿ ಪಡಿಸಲಾಯಿತು. ಅದು ಬಳಕೆಗೆ ಬಂದದ್ದು 1921 ರಿಂದ. ಹಾಗಾಗಿ ಈ ವ್ಯಾಕ್ಸೀನ್ ಗೆ ಈ ವರ್ಷ ೨೦೨೧ ರಲ್ಲಿ ಶತಮಾನದ ವರ್ಷ ಎಂದು ಹೇಳಬಹುದು. TB ಅಥವಾ ಕ್ಷಯರೋಗವು ಮೈಕೋ ಬ್ಯಾಕ್ಟೀರಿಯಂ ಟ್ಯುಬರ್ಕುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಬರುವ ಸೋಂಕು ರೋಗ.
ಈ ಬ್ಯಾಕ್ಟೀರಿಯಾವು 200 ರೀತಿಯ ಬ್ಯಾಕ್ಟೀರಿಯಾ ಇರುವ ಮೈಕೋಬ್ಯಾಕ್ಟೀರಿಯೆಸೆ ಎಂಬ ಬ್ಯಾಕ್ಟೀರಿಯಾ ಗಳ ಸಂತತಿಗೆ ಸೇರಿದೆ. ಅದರ ಕೆಲವು ಬ್ಯಾಕ್ಟೀರಿಯಾಗಳು ಮಾನವನಲ್ಲಿ ಕ್ಷಯ, ಕುಷ್ಠರೋಗ (Leprosy) ಗಳನ್ನು ಉಂಟು ಮಾಡುತ್ತವೆ. ಈ ಬ್ಯಾಕ್ಟೀರಿಯಾದ ಸಂತತಿಯ ಕೆಲವು ಬ್ಯಾಕ್ಟೀರಿಯಾಗಳು ಹಲವಾರು ಪ್ರಾಣಿಗಳಲ್ಲಿ ವಿವಿಧ ರೋಗಗಳನ್ನು ಉಂಟು ಮಾಡುತ್ತವೆ. ಈ ಮೈಕೋಬ್ಯಾಕ್ಟೀರಿಯಾವು ಹೊರಗಿನ ವಾತಾ ವರಣದಲ್ಲಿ ಗಮನಾರ್ಹವಾಗಿ ಹರಡಿಕೊಂಡಿವೆ.
ಈ ಕ್ಷಯರೋಗ ಹೆಚ್ಚಿನ ಸಂದರ್ಭದಲ್ಲಿ ಮಾನವನ ಶ್ವಾಸಕೋಶಕ್ಕೆ (Pulmonary TB) ಸೋಂಕು ತರುತ್ತದೆ. ಕೆಲವೊಮ್ಮೆ ದೇಹದ ವಿವಿಧ ಅಂಗಗಳಿಗೂ ಉದಾ: ಮೂಳೆ, ಮೆದುಳಿನ ಹೊರ ಪದರ – ಇವು ಗಳಿಗೂ ಸೋಂಕು ತರುತ್ತವೆ. ಈ ಕ್ಷಯ ರೋಗವು ಬಹಳ ಹಳೆಯ ಕಾಯಿಲೆ. ಈಜಿಪ್ಟ್ ದೇಶದಲ್ಲಿ 3000 ಬಿ.ಸಿ ( ಅಂದರೆ 5000 ವರ್ಷಗಳು ) ಯಷ್ಟು ಹಿಂದಿನ ಕಾಲದಲ್ಲಿಯೂ ಕಾಯಿಲೆ ಇದ್ದಿದ್ದ ಬಗ್ಗೆ ದಾಖಲಿಸಲಾಗಿದೆ. ಹಳೆಯ ಕಾಲದ ಕಾಯಿಲೆಗಳಾದ ಸಿಡುಬು, ಕುಷ್ಠರೋಗ, ಪ್ಲೇಗ್, ಕಾಲರಾಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನಗಳ ನೆರವಿನಿಂದ ಸಂಪೂರ್ಣ ಇಲ್ಲವಾಗಿಸಲಾಗಿದೆ ಅಥವಾ ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗಿದೆ.
ಆದರೆ ಕ್ಷಯ ರೋಗವು ಈಗಲೂ ಜಗತ್ತಿನಾದ್ಯಂತ ಸಮುದಾಯ ಆರೋಗ್ಯದ ದೊಡ್ಡ ಸಮಸ್ಯೆಯಾಗಿ ಉಳಿದಿದೆ. ವಿಶ್ವ ಆರೋಗ್ಯ ಸ್ಥೆಯ ಜಾಗತಿಕ ಕ್ಷಯದ ವರದಿ ಪ್ರಕಾರ 2019 ರಲ್ಲಿ 10 ಮಿಲಿಯನ್ (1 ಕೋಟಿ) ಜನರಲ್ಲಿ ಕ್ಷಯ ರೋಗ ಹೊಸದಾಗಿ ಕಾಣಿಸಿಕೊಂಡಿತು. ಅದರಲ್ಲಿ 1.4 ಮಿಲಿಯನ್ ಜನರು ಸಾವನ್ನಪ್ಪಿದರು. ಜಗತ್ತಿನ 27% ರಷ್ಟು ರೋಗಿಗಳು ಭಾರತದಲ್ಲಿ ಇನ್ನೂ ಇದ್ದಾರೆ ಎಂದರೆ ಅದರ ಅಗಾಧತೆಯನ್ನು ಗಮನಿಸಿ.
ಕ್ಷಯಕ್ಕೆ ಒಂದೇ ವ್ಯಾಕ್ಸೀನ್ : ಕ್ಷಯರೋಗವು ಬರದಿರುವಂತೆ ಮಾಡಲು ಈಗ ಲಭ್ಯವಿರುವುದು ಬಿ ಸಿ ಜಿ ವ್ಯಾಕ್ಸೀನ್ ಮಾತ್ರ. ಪ್ರಪಂಚದಾದ್ಯಂತ ತುಂಬಾ
ಜಾಸ್ತಿ ಪ್ರಮಾಣದಲ್ಲಿ ಈ ವ್ಯಾಕ್ಸೀನ್ ಉಪಯೋಗವಾಗುತ್ತಿದೆ, ಹಾಗೆಯೇ ಇದು ತುಂಬಾ ಸುರಕ್ಷಿತವಾದ ಲಸಿಕೆ. ಭಾರತದಲ್ಲಿ ಮೊದಲ ಬಾರಿಗೆ 1948ರಲ್ಲಿ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಲಾಯಿತು. ಆದರೆ ನಂತರ 1962 ರಲ್ಲಿ ರಾಷ್ಟ್ರೀಯ ಕ್ಷಯ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ನಿಯಮಿತವಾಗಿ ಬಳಕೆಗೆ ಬಂದಿತು.
ಬಿ ಸಿ ಜಿ ವ್ಯಾಕ್ಸೀನ್ ನ ಋಣಾತ್ಮಕ ಗುಣ ಎಂದರೆ ಇದು ಕೆಲವು ಭೌಗೋಳಿಕ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮತ್ತೆ ಕೆಲವು ಪ್ರದೇಶ ಗಳಲ್ಲಿ ಪರಿಣಾಮಕಾರಿಯಲ್ಲ. ಭೂ ಮಧ್ಯ ರೇಖೆಯಿಂದ ( Equator ) ದೂರವಿದ್ದಷ್ಟೂ ಇದು ಹೆಚ್ಚು ಪರಿಣಾಮಕಾರಿ. ಉದಾ: ಗೆ ಯುರೋಪಿನ ದೇಶಗಳಾದ ಯುನೈಟೆಡ್ ಕಿಂಗ್ಡಮ್, ನಾರ್ವೆ, ಸ್ವೀಡನ್, ಡೆನ್ಮಾರ್ಕ್ ಗಳಲ್ಲಿ ತುಂಬಾ ಪರಿಣಾಮಕಾರಿ. ಹಾಗೆಯೇ ಭೂಮಧ್ಯ ರೇಖೆಯ (ಸಮಭಾಜಕ ವೃತ್ತ) ಹತ್ತಿರದ ದೇಶಗಳಾದ ಭಾರತ, ಕೀನ್ಯಾ , ಮಲವಾಯಿ ದೇಶಗಳಲ್ಲಿ ಸ್ವಲ್ಪ ಕಡಿಮೆ ಪರಿಣಾಮಕಾರಿ. ದುರದೃಷ್ಟವಶಾತ್ ಈ ದೇಶಗಳಲ್ಲಿ ಕ್ಷಯ ರೋಗವು ಬಹಳ ಹೆಚ್ಚಿನ ಪ್ರಮಾಣದಲ್ಲಿದೆ.
ಅಲ್ಲದೆ ಇಂತಹಾ ದೇಶಗಳಲ್ಲಿ ವಾತಾವರಣದಲ್ಲಿನ ಮೈಕೋಬ್ಯಾಕ್ಟೀರಿಯಾಗಳ ಸಂಖ್ಯೆಯೂ ಬಹಳ ಜಾಸ್ತಿ ಪ್ರಮಾಣದಲ್ಲಿದೆ. ಈ ಕಾರಣದಿಂದ ಬಿ ಸಿ ಜಿ ವ್ಯಾಕ್ಸೀನ್ ನಿಂದ ಬರಬಹುದಾದ ಸುರಕ್ಷತೆಯ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಒಳ್ಳೆಯ ಧನಾತ್ಮಕ ವಿಚಾರ ಎಂದರೆ ಮಕ್ಕಳಿಗೆ ತೀವ್ರ ಪ್ರಮಾಣದ ಕ್ಷಯರೋಗ ಬಂದರೂ ಈ ವ್ಯಾಕ್ಸೀನ್ ಅದಕ್ಕೆ ರಕ್ಷಣೆ ಕೊಡುತ್ತದೆ. ಕ್ಷಯರೋಗದಿಂದ ಮಕ್ಕಳಲ್ಲಿ ರಕ್ಷಣೆ ಕೊಡುವ ಈ ಕವಚ ಮಗು ದೊಡ್ಡದಾಗುತ್ತಾ ಹೋದ ಹಾಗೆ ಕಡಿಮೆಯಾಗುತ್ತಾ ಬರುತ್ತದೆ.
ತಮಿಳುನಾಡಿನ ಚಂಗಲ್ ಪಟ್ಟು ಜಿಲ್ಲೆಯಲ್ಲಿರುವ ನಮ್ಮ ದೇಶದ ICMR ನ ರಾಷ್ಟ್ರೀಯ ಕ್ಷಯ ರೋಗದ ಸಂಶೋಧನಾ ಸಂಸ್ಥೆ 1963-83 ರ ಮಧ್ಯೆ ಒಂದು ದೊಡ್ಡ ಪ್ರಮಾಣದ ಕ್ಲಿನಿಕಲ್ ಟ್ರಯಲ್ ಕೈಗೊಂಡಿತು. ಅದರ ಪ್ರಕಾರ ವಯಸ್ಕರಲ್ಲಿ ಈ ಬಿ ಸಿ ಜಿ ವ್ಯಾಕ್ಸೀನ್ ಕ್ಷಯದಿಂದ ರಕ್ಷಣೆ ಕೊಡುವುದಿಲ್ಲ. ಮಕ್ಕಳಲ್ಲಿ ಸುಮಾರು 27% ನಷ್ಟು ರಕ್ಷಣೆ ಕೊಡುತ್ತದೆ ಎನ್ನಲಾಗಿದೆ.
ಭಾರತದಲ್ಲಿ ಕಳೆದ 10 ವರ್ಷದ ಅವಽಯಲ್ಲಿ 14 ಹೊಸ ವ್ಯಾಕ್ಸೀನ್ ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅವೆಲ್ಲವೂ ಕ್ಲಿನಿಕಲ್ ಟ್ರಯಲ್ ನ ವಿವಿಧ ಹಂತಗಳಲ್ಲಿವೆ. ಇವುಗಳಲ್ಲಿ 2 ಮುಖ್ಯವಾದ ಲಸಿಕೆಗಳು ICMR ನ 3 ನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿದೆ. ಮೊದಲನೆಯದು ಬಿ ಸಿ ಜಿ ವ್ಯಾಕ್ಸೀನ್ ರೀತಿಯದ್ದೇ – ಅದನ್ನು VPM 1002 ಎಂದು ಹೆಸರಿಸಲಾಗಿದೆ. ಇನ್ನೊಂದು Mycobacterium Indicus Pranii ( M I P ). ಈ MIP ವ್ಯಾಕ್ಸೀನ್ ಅನ್ನು ನಮ್ಮ ದೇಶದಲ್ಲಿಯೇ ಅಭಿವೃದ್ಧಿ ಪಡಿಸಿದ ಸ್ವದೇಶೀ ವ್ಯಾಕ್ಸೀನ್. ಇವೆರಡರ ಕ್ಲಿನಿಕಲ್ ಟ್ರಯಲ್ ನ ಪರಿಣಾಮಗಳಿಗೆ ಕಾಯಲಾಗುತ್ತಿದೆ.
ಬಿ ಸಿ ಜಿ ವ್ಯಾಕ್ಸೀನ್ ಕ್ಷಯ ರೋಗಕ್ಕೆ ವ್ಯಾಕ್ಸೀನ್ ರೀತಿಯಲ್ಲಿ ಕೆಲಸ ಮಾಡಿದರೆ, ಆಗತಾನೆ ಜನಿಸಿದ ಮಗುವಿನ ಉಸಿರಾಟದ ಅಂಗಗಳಲ್ಲಿ ಉಂಟಾಗುವ
ಬ್ಯಾಕ್ಟೀರಿಯಾಗಳ ಸೋಂಕಿನ ವಿರುದ್ಧವೂ ಇದನ್ನು ಉಪಯೋಗಿಸಬಹುದು. ಹಾಗೆಯೇ ಮೈಕೋಬ್ಯಾ ಕ್ಟೀರಿಯಾಗಳಿಂದ ಬರುವ ಇನ್ನಿತರ ಕಾಯಿಲೆಗಳಾದ
ಕುಷ್ಠರೋಗ ( Leprosy ) ಮತ್ತು ಬುರುಲಿಯ ಅಲ್ಸರ್ ಕಾಯಿಲೆಗಳಲ್ಲೂ ಇದನ್ನು ಉಪಯೋಗಿಸಬಹುದು. ಹಾಗೆಯೇ ಮೂತ್ರ ಚೀಲದ ಕ್ಯಾನ್ಸರ್ ಮತ್ತು Malignant melanoma ಕಾಯಿಲೆಗಳಲ್ಲಿ ಪ್ರತಿರೋಧ ಚಿಕಿತ್ಸೆಯ ವಾಹಕವಾಗಿ ಈ ಬಿ ಸಿ ಜಿ ಕೆಲಸ ಮಾಡುತ್ತದೆ.
ಕಳೆದ 18 ತಿಂಗಳುಗಳಲ್ಲಿ ಕೋವಿಡ್ ಕಾಯಿಲೆಗೆ 17 ವ್ಯಾಕ್ಸೀನ್‌ಗಳು ಹಲವು ದೇಶಗಳಲ್ಲಿ ಅನುಮತಿ ಪಡೆದುಕೊಂಡಿವೆ. ಹಾಗೆಯೇ 97 ವ್ಯಾಕ್ಸೀನ್ ಗಳು
ಕ್ಲಿನಿಕಲ್ ಟ್ರಯಲ್ ನ ವಿವಿಧ ಹಂತಗಳಲ್ಲಿವೆ. ಹಾಗೆಯೇ ಟಿ ಬಿ ಕಾಯಿಲೆಗೆ ಒಂದೇ ಒಂದು ವ್ಯಾಕ್ಸೀನ್ ಉಪಯೋಗದಲ್ಲಿದೆ. ಹಾಗೆಯೇ 14 ವಿವಿಧ ವ್ಯಾಕ್ಸೀನ್ ಗಳು ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿ 10 ಕ್ಕೂ ಹೆಚ್ಚು ವ್ಯಾಕ್ಸೀನ್ ಗಳು ಕ್ಲಿನಿಕಲ್ ಟ್ರಯಲ್‌ನ ವಿವಿಧ ಹಂತಗಳಲ್ಲಿವೆ. ಕೋವಿಡ್ ಕಾಯಿಲೆ ವಿರುದ್ಧ ವ್ಯಾಕ್ಸೀನ್ ಅಭಿವೃದ್ಧಿ ಪಡಿಸಲು 8.5 ಬಿಲಿಯನ್ ಡಾಲರುಗಳ ಮೊತ್ತವನ್ನು ತೆಗೆದಿರಿಸಲಾಗಿದೆ. ಆದರೆ ಟಿ ಬಿ ವಿರುದ್ಧ ವ್ಯಾಕ್ಸೀನ್ ಅಭಿವೃದ್ಧಿ ಪಡಿಸಲು 0.117 ಬಿಲಿಯನ್ ಡಾಲರುಗಳನ್ನು ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ನಮಗೆ ವ್ಯಾಕ್ಸೀನ್ ಅಭಿವೃದ್ಧಿ ಪಡಿಸಲು ಹಣದ ವಿನಿಯೋಗದ ತಾರತಮ್ಯ ಸ್ಪಷ್ಟವಾಗಿ ಗೊತ್ತಾಗುತ್ತದೆ.
ಸಂಕೀರ್ಣ ಸಮಸ್ಯೆ : ವ್ಯಕ್ತಿಯ ದೇಹದಲ್ಲಿರುವ ಟಿ ಬಿ ಯ ಬ್ಯಾಕ್ಟೀರಿಯಾವನ್ನು ಹೊರಹಾಕುವ ಪ್ರಕ್ರಿಯೆ ತುಂಬಾ ಸಂಕೀರ್ಣವಾದುದು. ಒಬ್ಬ ವ್ಯಕ್ತಿಯಲ್ಲಿ
ಮೈಕೋಬ್ಯಾಕ್ಟೀರಿಯಂ ಟ್ಯುಬರ್ ಕ್ಯುಲೋಸಿಸ್ ನ ಸೋಂಕು ಆದಾಗ ಆತನಿಗೆ ಕಾಯಿಲೆ ಆರಂಭದಲ್ಲಿ ಬರಬಹುದು ಅಥವಾ ಬರದಿರಲೂ ಇರಬಹುದು. ಆ
ವ್ಯಕ್ತಿಯ ಪ್ರತಿರೋಧ ವ್ಯವಸ್ಥೆ ಆ ಬ್ಯಾಕ್ಟೀರಿಯಾಗಳನ್ನು ದೇಹದಿಂದ ಹೊರ ಹಾಕಲು ಸಾಧ್ಯವಾಗದಿರುವಾಗ, ಆ ವ್ಯಕ್ತಿ ತನ್ನ ದೇಹದಲ್ಲಿ ಈ ಬ್ಯಾಕ್ಟೀರಿಯಾವನ್ನು ಜೀವಮಾನ ಪರ್ಯಂತ ಹೊಂದಿರಬಹುದು.
ಯಾವಾಗಲೋ ಒಮ್ಮೆ ಅದು ಸಕ್ರಿಯಗೊಂಡು ಆತನಲ್ಲಿ ಟಿ ಬಿ ಕಾಯಿಲೆ ಕಾಣಿಸಿಕೊಳ್ಳಬಹುದು, ಹಾಗೆಯೇ ಬೇರೆಯವರಿಗೂ ಕಾಯಿಲೆ ಹರಡಬಹುದು.
ಕ್ಷಯರೋಗ, ಎಚ್‌ಐವಿ ವೈರಸ್ ನಂತೆಯೇ ವ್ಯಕ್ತಿಗೆ ಸೋಂಕು ತಗಲಿ ಎಷ್ಟೋ ವರ್ಷಗಳ ನಂತರ ಕಾಯಿಲೆ ಬರಬಹುದು. ಬಿಸಿಜಿ ವ್ಯಾಕ್ಸೀನ್ ಚಿಕ್ಕ ಮಕ್ಕಳಲ್ಲಿ ತೀವ್ರ ತರವಾದ ಟಿಬಿ ಕಾಯಿಲೆ ಬರದಿರುವಂತೆ ರಕ್ಷಣೆ ಕೊಡುತ್ತದೆ. ಆದರೆ ವಯಸ್ಕರಲ್ಲಿ ಶ್ವಾಸಕೋಶದ ಟಿಬಿ ಬರದಿರುವಂತೆ ತಡೆಯುವುದಿಲ್ಲ. ಈ ಶ್ವಾಸ ಕೋಶದ ಟಿಬಿ ಕಾಯಿಲೆಯೇ ವಯಸ್ಕರಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಕಾಯಿಲೆ ಹರಡುತ್ತದೆ.
ಜಗತ್ತಿನ ಹೆಚ್ಚಿನ ವ್ಯಕ್ತಿಗಳು ಬಿಸಿಜಿ ಹಾಕಿಸಿಕೊಂಡಿದ್ದರೂ ಈ ಕಾಯಿಲೆಯು ದೊಡ್ಡ ಪ್ರಮಾಣದಲ್ಲಿ ನಮ್ಮ ಜನಾಂಗದಲ್ಲಿ ಇದ್ದೇ ಇದೆ. ಕ್ಷಯ ರೋಗದ ಚಿಕಿತ್ಸೆಗೆ ಹಲವು ರೀತಿಯ ಔಷಧಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಆದರೆ ಚಿಕಿತ್ಸೆಯನ್ನು ದೀರ್ಘಕಾಲ ನಡೆಸಬೇಕು. ಕ್ರಮೇಣ ಈ ಔಷಧಗಳು ಟಿಬಿ ವಿರುದ್ಧ Resistance ಬೆಳೆಸಿಕೊಳ್ಳುತ್ತವೆ. ಅಂದರೆ ಆ ಔಷಧಗಳು ಕಾಯಿಲೆ ಗುಣಪಡಿಸುವ ಶಕ್ತಿಯನ್ನು ಕಳೆದು ಕೊಳ್ಳುತ್ತವೆ. ಹಲವು ಔಷಧಗಳಿಗೆ ದೇಹವು ಸರಿಯಾಗಿ ಸ್ಪಂದಿಸಿದೆ ಇರುವಾಗ ಕ್ಷಯರೋಗದ ಚಿಕಿತ್ಸೆ ತುಂಬಾ ದುಬಾರಿ ಹಾಗೂ ಕೆಲವೊಮ್ಮೆ ದೇಹ ಈ ಔಷಧಗಳನ್ನು ತಡೆದುಕೊಳ್ಳುವುದಿಲ್ಲ.
ಹಾಗಾಗಿ ವ್ಯಾಕ್ಸೀನ್ ಗಳ ಅವಶ್ಯಕತೆ ತುಂಬಾ ಇದೆ. ಜಗತ್ತಿನಾದ್ಯಂತ ಹಲವು ವ್ಯಾಕ್ಸೀನ್‌ಗಳ ಟ್ರಯಲ್ ಗಳು ನಡೆಯುತ್ತಿವೆ ಹಾಗೂ ಕೆಲವು ಅಂತಿಮ ಹಂತ ದಲ್ಲಿವೆ. ದಕ್ಷಿಣ ಆಫ್ರಿಕಾದಲ್ಲಿ ಒಂದು ಟ್ರಯಲ್ ನಲ್ಲಿ ಹದಿಹರೆಯವರಲ್ಲಿ ಬಿಸಿಜಿ ಯ ಬೂಸ್ಟರ್ ವ್ಯಾಕ್ಸೀನ್ ಕೊಟ್ಟಾಗ ಹಲವರಲ್ಲಿ ಟಿಬಿ ಸೋಂಕಿನ ಪ್ರಮಾಣ ವನ್ನು ಕಡಿಮೆ ಮಾಡಿದೆ. ಇನ್ನೊಂದು ಅಧ್ಯಯನದಲ್ಲಿ ಟಿಬಿ ಸೋಂಕು ಅಂತರ್ಗತವಾಗಿರುವ (latent infection) ವಯಸ್ಕರಲ್ಲಿ M72 / ASOIE ವ್ಯಾಕ್ಸೀನ್ ನ ಎರಡು ಡೋಸ್ ಗಳು ಟಿ ಬಿ ಸೋಂಕು ಬರುವುದನ್ನು ಅರ್ಧದಷ್ಟು ವಯಸ್ಕರಲ್ಲಿ (50% ಸ-ಲತೆ) ಕಡಿಮೆ ಮಾಡಿತು. ಈಗಾಗಲೇ ಟಿಬಿ ಸೋಂಕಿಗೆ ಒಡ್ಡಿಕೊಂಡಿ ರುವ ಜನರಲ್ಲಿ ಟಿಬಿ ಸೋಂಕು ಬರದಂತೆ ತಡೆಯುವಲ್ಲಿ ಈ ವ್ಯಾಕ್ಸೀನ್ ಸ-ಲತೆ ಕಂಡಿದೆ. ( ಬಿಸಿ ಜಿ ಯ ನಂತರ ಇದೇ ವ್ಯಾಕ್ಸೀನ್ ಸಫಲತೆ ಕಂಡದ್ದು.) ಇದೀಗ ಅದು ೩ ನೇ ಟ್ರಯಲ್ ನಲ್ಲಿದೆ. ಅಲ್ಲದೆ ಈ ಟ್ರಯಲ್ ನಲ್ಲಿ ಮೊದಲು ಟಿ ಬಿ ಸೋಂಕು ಬರದಿರುವ ಜನರಲ್ಲಿಯೂ ಈ ವ್ಯಾಕ್ಸೀನ್ ಉಪಯೋಗ ವಾಗುವುದೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಮೈಕೋಬ್ಯಾಕ್ಟೀರಿಯಮ್ ಟ್ಯುಬರ್ಕುಲೋಸಿಸ್ ಬ್ಯಾಕ್ಟೀರಿಯಾ ಗಾಳಿಯಲ್ಲಿ ಹರಡುವುದನ್ನು ಒಖಿಃ ಗಿಂಅ ವ್ಯಾಕ್ಸೀನ್ ಬಿ ಸಿ ಜಿ ಗಿಂತ ಚೆನ್ನಾಗಿ ತಪ್ಪಿಸುತ್ತದೆ
ಎನ್ನಲಾಗಿದೆ. ರೀಸಸ್ ಮಂಗಗಳಲ್ಲಿ ಈ ಪ್ರಯೋಗ ಡಲಾಗಿದೆ. ಆಫ್ರಿಕಾದ ಹಲವು ದೇಶಗಳಲ್ಲಿ ನವಜಾತ ಶಿಶುಗಳಲ್ಲಿ 3 ನೇ ಹಂತದ ಟ್ರಯಲ್ ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ ಟಿ ಬಿ ಚಿಕಿತ್ಸೆಗೆ ಒಳಗಾಗಿರುವವರಲ್ಲಿ ಪುನಃ ಬರುವ ಟಿ ಬಿ ಸೋಂಕನ್ನು ತಡೆಯುತ್ತದೆಯೇ ಎಂದು H56: IC31 ವ್ಯಾಕ್ಸೀನ್ ಬಗ್ಗೆ ಪರಿಶೀಲಿಸಲಾಗುತ್ತಿದೆ. ನವಜಾತ ಶಿಶುಗಳಲ್ಲಿ ಟಿ ಬಿ ಸೋಂಕು ಬರುವುದನ್ನು ತಡೆಯುವುದರ ಬಗ್ಗೆ ಮತ್ತು ವಯಸ್ಕರಲ್ಲಿ ಪುನಃ ಬರುವ ಸೋಂಕನ್ನು ತಡೆಯುವಲ್ಲಿ VPM 1002 ವ್ಯಾಕ್ಸೀನ್ ಬಗ್ಗೆ ಪರಿಶೀಲಿಸಲಾಗುತ್ತಿದೆ.
ಇವೆಲ್ಲವುದರ ಫಲಿತಾಂಶ ಬರಲು ಮುಂದಿನ 2-3 ವರ್ಷಗಳಾಗಬಹುದು. ಕೆಲವುದರ ಓಲಿತಾಂಶ ಇನ್ನೂ ದೀರ್ಘ ಸಮಯ ತೆಗೆದುಕೊಳ್ಳಬಹುದು. ಹಾಗೆಯೇ
ಇವೆಲ್ಲವುಗಳನ್ನು ಟಿ ಬಿ ಸೋಂಕಿನ ಜತೆಗೆ HIV ಸೋಂಕು (ಏಡ್ಸ್) ಇದ್ದವರಲ್ಲಿಯೂ ಇವುಗಳ ಪರಿಣಾಮ ಪರಿಶೀಲಿಸಲಾಗುತ್ತಿದೆ. ಏಕೆಂದರೆ HIV ಸೋಂಕು ಇರುವವರಲ್ಲಿ ಟಿ ಬಿ ಸೊಂಕು ಇರುತ್ತದೆ. HIV ಸೋಂಕು ಇರುವವರಲ್ಲಿ ಮರಣಕ್ಕೆ ಹೆಚ್ಚಿನ ಸಂದರ್ಭಗಳಲ್ಲಿ ಟಿಬಿ ಯ ಸೋಂಕೆ ಕಾರಣ. ಟಿಬಿ ವ್ಯಾಕ್ಸೀನ್‌ನ ಸಂಶೋಧನೆ, ಕೋವಿಡ್ ವ್ಯಾಕ್ಸೀನ್ ಸಂಶೋಧನೆಗಿಂತ ನಿಧಾನವಾಗುತ್ತಿದೆ.
ಏಕೆಂದರೆ ಟಿಬಿ ಯ ಸೋಂಕು ನಿಧಾನದಲ್ಲಿ ತಡವಾಗಿ ಗೊತ್ತಾಗುತ್ತದೆ. ಹಾಗಾಗಿ ಟಿಬಿ ಯ ವ್ಯಾಕ್ಸೀನ್ ಗಳ ಕ್ಲಿನಿಕಲ್ ಟ್ರಯಲ್ ಹೆಚ್ಚು ಸಮಯ ತೆಗೆದು ಕೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚು ಉಪಯೋಗವಾಗುವ ಟಿಬಿ ವ್ಯಾಕ್ಸೀನ್ ಲಭ್ಯವಾಗುವುದೇ ಎಂದು ನಿರೀಕ್ಷಿಸಬೇಕಷ್ಟೇ.