ಅಭಿಮತ
ಜಿ.ನಾಗೇಂದ್ರ ಕಾವೂರು
೧೯೭೬ರಲ್ಲಿ ಶುರುವಾದ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ), ಇದುವರೆಗೆ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ೨೬ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ಸುಮಾರು ೭೦,೦೦೦ ನಿವೇಶನಗಳನ್ನು ಅರ್ಜಿದಾರರಿಗೆ ಹಸ್ತಾಂತರಿಸಿದೆ. ಇದೀಗ ವೈಟ್ಫೀಲ್ಡ್ ಮತ್ತು ಯಲಹಂಕದ ಬಳಿ ೨,೦೦೦ ಎಕರೆ ಪ್ರದೇಶದಲ್ಲಿ ಹೊಸ ವಸತಿ ಬಡಾವಣೆ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆಂದು ೨೨ ಹಳ್ಳಿಗಳ ಖಾಲಿ ಭೂಮಿಯನ್ನು ಉಪಯೋಗಿಸಿಕೊಳ್ಳ ಲಾಗುತ್ತಿದೆ. ಭೂಮಿಯ ವಶಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸರ್ವೆ ಕಾರ್ಯ ನಡೆಯುತ್ತಿದೆ.
ಕರ್ನಾಟಕ ಗೃಹ ಮಂಡಳಿಯ ವತಿಯಿಂದಲೂ ನಗರದ ಹಲವು ಪ್ರದೇಶಗಳಲ್ಲಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ಮನೆ/ನಿವೇಶನಗಳನ್ನು ಹಂಚಲಾಗಿದೆ. ಸೂರ್ಯನಗರ ಹಂತ ೧,೨ ಮತ್ತು ೩ರಲ್ಲಿ ಈಗಾಗಲೇ ಸಾವಿರಾರು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ೧ನೇ ಹಂತವನ್ನು ಹೊರತು ಪಡಿಸಿದರೆ ಇತರೆ ಬಡಾವಣೆಗಳಲ್ಲಿ ಹಂಚಿಕೆಯಾದ ನಿವೇಶನಗಳಲ್ಲಿ ಶೇ.೯೫ರಷ್ಟು ಖಾಲಿಬಿದ್ದಿವೆ. ೪ನೇ ಹಂತದ ಸುಮಾರು ೧೯೩೮ ಎಕರೆ ಪ್ರದೇಶದಲ್ಲಿ ೨೦ ಸಾವಿರ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡುವ ಕಾಮಗಾರಿ ನಡೆಯುತ್ತಿದೆ.
ಬಿಡಿಎ ಮತ್ತು ಗೃಹಮಂಡಳಿ ಮಾತ್ರವಲ್ಲದೆ, ನೂರಾರು ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಗಳು ಸಾವಿರಾರು ಎಕರೆ ಪ್ರದೇಶದಲ್ಲಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ನಿವೇಶನಗಳನ್ನು ಮಾರುತ್ತಿವೆ. ಹೀಗೆ ಮಾರಾಟವಾಗಿ ೧೦-೧೫ ವರ್ಷ ಕಳೆದರೂ ಅನೇಕ ಬಡಾವಣೆಗಳಲ್ಲಿ ಮೂಲಸೌಕರ್ಯದ ಕೊರತೆಯಿಂದಾಗಿ ಬೆರಳೆಣಿಕೆಯಷ್ಟು ಮನೆಗಳು ಮಾತ್ರ ನಿರ್ಮಾಣಗೊಂಡಿವೆ. ಸಾಲದೆಂಬಂತೆ, ದಿನಬೆಳಗಾದರೆ ಹೊಸ ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಗಳು ತಲೆಯೆತ್ತುತ್ತಿವೆ. ಕಳೆದ ೧-೨ ದಶಕಗಳಲ್ಲಿ ಬೆಂಗಳೂರಿನಲ್ಲಿ ಮನೆ/ನಿವೇಶನಗಳ ಬೆಲೆ ಹಲವು ಪಟ್ಟು ಹೆಚ್ಚಾಗಿರುವುದರಿಂದ, ಬಹುತೇಕರು ಹೂಡಿಕೆಯ ದೃಷ್ಟಿಯಿಂದ ಮಾತ್ರವೇ ನಿವೇಶನಗಳನ್ನು ಖರೀದಿಸುತ್ತಿದ್ದಾರೆಂಬುದು ವೇದ್ಯವಾಗುತ್ತದೆ.
ಹೀಗೆ ಅಭಿವೃದ್ಧಿಯ ಹೆಸರಲ್ಲಿ ಬೇಕಾಬಿಟ್ಟಿಯಾಗಿ ಬಡಾವಣೆಗಳನ್ನು ನಿರ್ಮಿಸಲು ಕೃಷಿಭೂಮಿಯನ್ನು ಮಾರಿಕೊಳ್ಳುವ ರೈತರ ಬಾಳು ಹಸನಾಗುತ್ತಿರ ಬಹುದು; ಅನೇಕ ರಿಯಲ್ ಎಸ್ಟೇಟ್ ಕುಳಗಳೂ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಆದರೆ, ಮನೆಯಿಲ್ಲದವರಿಗೆ ಮನೆಗಳನ್ನು ನಿರ್ಮಿಸಲೆಂದು ಬಡಾವಣೆಗಳನ್ನು ಅಭಿವೃದ್ಧಿಪಡಿಸುವ ಮೂಲೋದ್ದೇಶ ಮಾತ್ರ ಭಾಗಶಃ ನೆರವೇರುತ್ತಿದೆ. ಬೆಂಗಳೂರಿನ ಹೊರವಲಯದಲ್ಲಿ ಹೀಗೆ ನಿರ್ಮಾಣ ಗೊಂಡಿರುವ ಬಡಾವಣೆಗಳಲ್ಲಿ ಮೂಲಸೌಕರ್ಯದ ಕೊರತೆಯಿಂದಾಗಿ ಬೆರಳೆಣಿಕೆಯಷ್ಟು ಮನೆಗಳು ಮಾತ್ರ ತಲೆಯೆತ್ತಿವೆ.
ಒಂದೊಮ್ಮೆ, ಹೀಗೆ ಅಭಿವೃದ್ಧಿಪಡಿಸಿರುವ ಎಲ್ಲ ಬಡಾವಣೆಗಳಲ್ಲಿ ಮುಂದಿನ ದಿನಗಳಲ್ಲಿ ಮನೆಗಳ ನಿರ್ಮಾಣವಾದಲ್ಲಿ, ಜನಸಂಖ್ಯೆ ಹೆಚ್ಚಾಗಿ ಮೂಲ
ಸೌಕರ್ಯ ಒದಗಿಸಲು ಸಂಬಂಽತ ಇಲಾಖೆಗಳಿಗೆ ಕಷ್ಟವಾಗಬಹುದು ಮತ್ತು ಬೇಕಾಬಿಟ್ಟಿಯಾಗಿ ಮನೆಗಳನ್ನು ಅಭಿವೃದ್ಧಿಪಡಿಸುತ್ತಿರುವುದರಿಂದ ಕೃಷಿ
ಭೂಮಿಯ ಪ್ರಮಾಣವೂ ಗಮನಾರ್ಹವಾಗಿ ತಗ್ಗುತ್ತದೆ. ಬೆಂಗಳೂರಿನ ಹಲವು ಕೆರೆಗಳು, ಹಳ್ಳಿಗಳು ಈಗಾಗಲೇ ಮಾಯವಾಗಿವೆ; ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ವಾಹನಗಳ ದಟ್ಟಣೆಯೂ ಹೆಚ್ಚು ತ್ತಿದ್ದು ಗಮ್ಯಸ್ಥಳವನ್ನು ಸೇರಲು ತಡವಾಗುತ್ತಿದೆ.
‘ಮೆಟ್ರೋ’ ಬಂದಿದ್ದರೂ ಸಾರ್ವಜನಿಕ ಸಾರಿಗೆ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಕ್ಕಿಲ್ಲ. ರಾಜಕಾಲುವೆ ಹಾಗೂ ಇತರೆ ಪ್ರದೇಶಗಳಲ್ಲಿ ಆದ ಒತ್ತುವರಿ ಯಿಂದಾಗಿ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗದೆ ಕೃತಕ ನೆರೆ ಉಂಟಾಗಿ ಜನರು ತೊಂದರೆಗೀಡಾಗುತ್ತಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ, ಬೆಂಗಳೂರಿನ ಶೇ.೭೯ರಷ್ಟು ನೀರು ಸಂಗ್ರಹಣಾ ಪ್ರದೇಶ, ಶೇ.೮೮ರಷ್ಟು ಸಸ್ಯವರ್ಗ ಕಡಿಮೆಯಾಗಿದ್ದರೆ, ಶೇ.೯೮ರಷ್ಟು ಕೆರೆಗಳ ಒತ್ತುವರಿಯಾಗಿದೆ. ಶೇ.೯೦ರಷ್ಟು ಕೆರೆಗಳ ನೀರು ಒಳಚರಂಡಿ ಮತ್ತು ಕಾರ್ಖಾನೆಯ ತ್ಯಾಜ್ಯಗಳಿಂದ ಕಲುಷಿತಗೊಂಡಿದೆ. ಕಳೆದ ೫ ದಶಕಗಳಲ್ಲಿ ಕಾಂಕ್ರೀಟ್ ರಚನೆಗಳು ೧೦ ಪಟ್ಟು ಅಧಿಕವಾಗಿವೆ.
ಅತ್ಯಲ್ಪ ಸಮಯ ದಲ್ಲಾದ ಯೋಜಿತವಲ್ಲದ ನಗರೀಕರಣದಿಂದಾಗಿ ವಾಯುಮಾಲಿನ್ಯ, ನೈಸರ್ಗಿಕ ಸಂಪನ್ಮೂಲಗಳ ಅಸಮಾನ ಹಂಚಿಕೆ, ಸಂಚಾರಿ ದಟ್ಟಣೆ, ಕೊಳೆಗೇರಿಗಳ ಹೆಚ್ಚಳದಂಥ ಸಮಸ್ಯೆಗಳು ಹುಟ್ಟಿಕೊಂಡಿವೆ. ಒಂದು ಕಾಲದಲ್ಲಿ, ‘ಅಂದದೂರು ಬೆಂಗಳೂರು, ಆನಂದದ ತವರೂರು’ ಎಂಬ ಹೊಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ನರಕಸದೃಶವಾಗುತ್ತಿದೆ. ಆದ್ದರಿಂದ, ಮಹಾನಗರಿಯಲ್ಲಿ ಪ್ರಸ್ತುತ ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ ಮಾರಾಟವಾಗಿರುವ ನಿವೇಶನಗಳಲ್ಲಿ ಕನಿಷ್ಠ ಶೇ.೯೦ರಷ್ಟು ಮನೆಗಳು ನಿರ್ಮಾಣವಾಗುವವರೆಗೆ, ಮೂಲಸೌಕರ್ಯವನ್ನು ಒದಗಿಸಲು ತೊಂದರೆಯಾಗದಿರುವಂತೆ, ಕೃಷಿಭೂಮಿಯನ್ನು ರಕ್ಷಿಸುವ ಉದ್ದೇಶದಿಂದ ಹಾಗೂ ಉದ್ಭವಿಸಬಹುದಾದ ತೊಂದರೆಗಳನ್ನು ಗಮನದಲ್ಲಿರಿಸಿಕೊಂಡು, ಹೊಸ ಬಡಾವಣೆಗಳು ತಲೆಯೆತ್ತದಂತೆ ಸರಕಾರ ನೋಡಿಕೊಳ್ಳಬೇಕಿದೆ.
(ಲೇಖಕರು ನಿವೃತ್ತ ಬ್ಯಾಂಕ್ ಮ್ಯಾನೇಜರ್)