Saturday, 14th December 2024

ಬ್ರೈನ್‌ ಟ್ಯೂಮರ್‌ ಬಗ್ಗೆ ಇರಲಿ ಎಚ್ಚರ

ತನ್ನಿಮಿತ್ತ

ಡಾ.ಗಣೇಶ್‌ ವೀರಭದ್ರಯ್ಯ, ಮಿದುಳು ಮತ್ತು ಮೂಳೆತಜ್ಞ

ಬ್ರೈನ್ ಟ್ಯೂಮರ್ ಎಂದಾಕ್ಷಣ ಪ್ರತಿಯೊಬ್ಬರಲ್ಲೂ ಭಯದ ಛಾಯೆ ಆವರಿಸಿಕೊಳ್ಳುತ್ತದೆ. ಬ್ರೈನ್ ಟ್ಯೂಮರ್ ಬಂತೆದರೆ
ಜೀವನವೇ ಮುಗಿದು ಹೋಯಿತು ಎಂಬ ಭಾವನೆ ಕೆಲವರಲ್ಲಿ ಮೂಡುತ್ತದೆ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿ ಹೋಗುತ್ತಾರೆ.

ಈ ಬಗ್ಗೆ ಭಯ ಹೊಂದದೇ ಆತ್ಮ ವಿಶ್ವಾಸವಿಟ್ಟುಕೊಂಡರೆ ಇದನ್ನು ಗೆದ್ದು ಬರಬಹುದು. ಅಲ್ಲದೆ, ಇಂದು ವೈದ್ಯಕೀಯ ವಿಜ್ಞಾನ, ನರಶಸ್ತ್ರ ಚಿಕಿತ್ಸೆ ಹಾಗೂ ನ್ಯೂರೋ ಆಂಕೊಲಾಜಿ ಕ್ಷೇತ್ರವು ಸಾಕಷ್ಟು ಬೆಳೆದಿದೆ. ಆದ್ದರಿಂದ ಬ್ರೈನ್ ಟ್ಯೂಮರ್
ರೋಗಕ್ಕೆ ಭಯ ಪಡುವ ಅಗತ್ಯವಿಲ್ಲ. ಬ್ರೈನ್ ಟ್ಯೂಮರ್ ಕುರಿತಾದ ಮಾಹಿತಿ ಇಲ್ಲಿದೆ.

ಮೆದುಳಿನ ಕೋಶಗಳು ಇದ್ದಕ್ಕಿದ್ದಂತೆ ಅಸಹಜ ಬೆಳವಣಿಗೆ ಹೊಂದಿ, ಒಂದೇ ಕಡೆ ಶೇಖರಣೆಯಾಗಿ ಮೆದುಳಿನ ಕಾರ್ಯಕ್ಷಮತೆ ಯನ್ನು ಮತ್ತು ನರಮಂಡಲ ವ್ಯವಸ್ಥೆಯ ಪ್ರತಿ ದಿನದ ಕಾರ್ಯಾಚರಣೆಯನ್ನು ಕುಂಠಿತಗೊಳಿಸುತ್ತದೆ. ಇದೊಂದು ಗೆಡ್ಡೆಯ ರೂಪದಲ್ಲಿ ಉಂಟಾಗಿ ಮೆನಿಂಗ್ಸ್, ಕ್ರೇನಿಯಲ್ ನರ ಮಂಡಲ, ಪಿಟ್ಯುಯಿಟರಿ ಗ್ರಂಥಿ ಅಥವಾ ಪೀನಿಯಲ್ ಗ್ರಂಥಿಗಳನ್ನು ಒಳಗೊಂಡು ಮನುಷ್ಯನ ಆರೋಗ್ಯದ ಮೇಲೆ ತೀರಾ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ.

ಸಂಶೋಧಕರು ಇದನ್ನು ಯಾವ ರೀತಿ ಉಂಟಾಗುತ್ತದೆ ಎಂಬ ಅಧ್ಯಯನ ಕೈಗೊಂಡ ನಂತರ ಅವರು ಬಹಿರಂಗಪಡಿಸಿದ ಒಂದು ಅಚ್ಚರಿಯ ವಿಷಯ ಎಂದರೆ ಮೆದುಳಿನ ಸಾಮಾನ್ಯ ಕೋಶಗಳಲ್ಲಿ DNA ರೂಪಾಂತರವಾಗಿ ಈ ಪ್ರಕ್ರಿಯೆ ಉಂಟಾಗುತ್ತದೆ.
ಮೆದುಳಿನ ಟ್ಯೂಮರ್ ಅನ್ನು ಎರಡು ಬಗೆಗಳಲ್ಲಿ ವಿಂಗಡಿಸಲಾಗಿದೆ. ಮ್ಯಾಲಿಗ್ನ ಟ್ಯುಮರ್ ಮತ್ತು ಬ್ರೈನ್‌ ಟ್ಯೂಮರ್. ಮ್ಯಾಲಿಗ್ನ ಟ್ಯುಮರ್ ಕ್ಯಾನ್ಸರ್ ಕಾರಕವಾಗಿದ್ದು ಜೀವಕ್ಕೆ ಹಾನಿ ಉಂಟು ಮಾಡುತ್ತದೆ. ಬ್ರೈನ್ ಟ್ಯೂಮರ್ ಕೂಡ ಜೀವಕ್ಕೆ ಮಾರಕ ಎಂದು ಪರಿಗಣಿಸಲಾಗಿದೆ. ಎರಡು ಪ್ರಕರಣಗಳಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ತೆಗೆದುಕೊಳ್ಳದೆ ಹೋದರೆ ರೋಗ ಲಕ್ಷಣಗಳು ವಿಪರೀತಗೊಳ್ಳುತ್ತವೆ.

ವಿಪರೀತ ತಲೆ ನೋವು: ತಲೆ ನೋವು ಸಾಮಾನ್ಯವಾಗಿ ಎಲ್ಲರಿಗೂ ಒಂದಿಂದು ಸಮಯದಲ್ಲಿ ಸಣ್ಣದಾಗಿ ಬಂದೇ ಬರುತ್ತದೆ. ಆದರೆ ಬ್ರೈನ್ ಟ್ಯೂಮರ್ ಹೊಂದಿದ ವ್ಯಕ್ತಿಗಳಿಗೆ ಇದು ಮೈಗ್ರೇನ್‌ಗಿಂತಲೂ ಅತಿ ಹೆಚ್ಚಾಗಿ ಕಾಡುತ್ತದೆ ಎಂದು ಹೇಳುತ್ತಾರೆ. ಕೆಲವೊಮ್ಮೆ ವೈದ್ಯರಿಗೆ ಸಂಶಯ ಉಂಟಾಗುತ್ತದೆ. ವಿಪರೀತವಾಗಿ ಕಾಡುವ ತಲೆ ನೋವು ಹೊಂದಿದ ವ್ಯಕ್ತಿಗಳಿಗೆ ಬ್ರೈನ್ ಟ್ಯೂಮರ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಕೆಲವು ಬಗೆಯ ಲ್ಯಾಬ್ ಟೆಸ್ಟ್ಗಳಿಗೆ ಒಳಪಡಿಸುತ್ತಾರೆ. ಪ್ರತಿ ದಿನ ತಲೆನೋವು ಯಾವ ಸಮಯಕ್ಕೆ ಬರುತ್ತದೆ ಮತ್ತು ಬಂದ ಮೇಲೆ ಎಷ್ಟು ಹೊತ್ತು ಕಾಡುತ್ತದೆ ಎಂಬ ಬಗ್ಗೆ ವೈದ್ಯರು ಮಾಹಿತಿ ಕಲೆ ಹಾಕುತ್ತಾರೆ.

ಬ್ರೈನ್ ಟ್ಯೂಮರ್ ಹೊಂದಿದ ವ್ಯಕ್ತಿಗಳಿಗೆ ತಲೆ ನೋವು ಸಾಮಾನ್ಯವಾಗಿ ಪ್ರತಿ ದಿನವೂ ಬರುತ್ತದೆ ಮತ್ತು ಬಂದ ಮೇಲೆ ತುಂಬಾ ಹೊತ್ತು ಔಷಧಿಗಳನ್ನು ತೆಗೆದುಕೊಂಡರೂ ಕೂಡ ಹೋಗುವುದಿಲ್ಲ ಎಂದು ಹೇಳುತ್ತಾರೆ. ಅದರಲ್ಲೂ ವಿಶೇಷವಾಗಿ ಬೆಳಗಿನ ಸಮಯದಲ್ಲಿ ಹಾಸಿಗೆಯಿಂದ ಮೇಲೇಳುವ ಸಂದರ್ಭಕ್ಕೆ ಸರಿಯಾಗಿ ವಿಪರೀತ ತಲೆ ನೋವು ಕಂಡು ಬಂದರೆ ಅದು ಬ್ರೈನ್ ಟ್ಯೂಮರ್ ಲಕ್ಷಣ ಆಗಿರಬಹುದು ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೆಲವೊಮ್ಮೆ ನಿಮ್ಮ ತಲೆ ಬುರುಡೆಯ ಭಾರ ಕೂಡ ಬೆಳಗಿನ ಸಮಯದಲ್ಲಿ ಹೆಚ್ಚಾಗಿರುತ್ತದೆ.

ಮೂರ್ಛೆ ಬೀಳುವ ಸಾಧ್ಯತೆಯಿದೆ: ಬ್ರೈನ್ ಟ್ಯೂಮರ್ ಹೊಂದಿದ ವ್ಯಕ್ತಿಗಳಲ್ಲಿ ಇದೊಂದು ಸಾಮಾನ್ಯ ಮತ್ತು ಅತಿ ಮುಖ್ಯ ಆರೋಗ್ಯ ಸಮಸ್ಯೆ. ಮೆದುಳಿನಲ್ಲಿ ಉಂಟಾದ ಬ್ರೈನ್ ಟ್ಯೂಮರ್ ಗೆಡ್ಡೆ ಮೆದುಳಿನ ಇತರ ಕೋಶಗಳನ್ನು ಒತ್ತಿ ಹೆಚ್ಚು ಒತ್ತಡ ಉಂಟು ಮಾಡುತ್ತದೆ. ಇದರಿಂದ ಮೆದುಳಿನಿಂದ ದೇಹದ ಇತರ ಭಾಗಗಳಿಗೆ ತಲುಪುವ ಸಂಕೇತಗಳು ನಿಷ್ಕ್ರಿಯಗೊಳ್ಳುತ್ತವೆ. ಇದರಿಂದ ಮನುಷ್ಯನ ದೇಹದ ಯಾವುದೇ ಭಾಗ, ಅಂದರೆ ಕೈ, ಕಾಲು, ಮುಖ, ಬಾಯಿ ಇತ್ಯಾದಿ ಭಾಗಗಳು ತಮ್ಮ ಚಲನೆ ಮತ್ತು
ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತವೆ.

ಸಾಮಾನ್ಯವಾಗಿ ಬ್ರೈನ್ ಟ್ಯೂಮರ್ ಹೊಂದಿರುವ ಬಹಳಷ್ಟು ಮಂದಿ ಈ ಸಮಸ್ಯೆಯನ್ನು ಕಡ್ಡಾಯವಾಗಿ ಎದುರಿಸುತ್ತಾರೆ ಎಂದು ಹೇಳುತ್ತಾರೆ. ಆದ್ದರಿಂದ ಮೂರ್ಛೆ ಹೋಗುವ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.
ನಮ್ಮ ಮೆದುಳಿನಲ್ಲಿ ಕಂಡುಬರುವ ಟೆಂಪೊರಲ್ ಲೋಬ್ ಎಂಬ ಭಾಗ ನಮ್ಮ ಮಾತು, ಧ್ವನಿ, ನಮ್ಮ ಭಾಷೆ ಎಲ್ಲವನ್ನೂ ನಿಯಂತ್ರಿಸುತ್ತದೆ. ಮೆದುಳಿನ ಟ್ಯೂಮರ್ ಗಡ್ಡೆಯಿಂದ ಒಂದು ವೇಳೆ ಈ ಭಾಗಕ್ಕೆ ಹಾನಿಯಾದರೆ ಚಿಕ್ಕ ವಯಸ್ಸಿಗೆ ಕಿವಿ ಕಿವುಡು ತನದ ಸಮಸ್ಯೆ ಎದುರಾಗುತ್ತದೆ. ಜತೆಗೆ ಎರಡೂ ಕಿವಿಗಳಲ್ಲಿ ಸದಾ ಗಂಟೆ ಹೊಡೆಯುತ್ತಿರುವ ಹಾಗೆ ಕೇಳಿಸುತ್ತದೆ. ಒಂದು ವೇಳೆ ನಿಮಗೆ ಈ ಅನುಭವ ಉಂಟಾಗಿದ್ದರೆ ಮೊದಲು ನರ ರೋಗ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.

ದೇಹದ ಸಮತೋಲನ ತಪ್ಪುತ್ತದೆ: ನಮ್ಮ ದೇಹದ ಚಲನೆಯಲ್ಲಿ ನಿಂತುಕೊಳ್ಳುವಾಗ, ಕುಳಿತುಕೊಳ್ಳುವಾಗ, ಓಡುವಾಗ, ಮಲಗಿಕೊಳ್ಳುವಾಗ ನಮ್ಮನ್ನು ನಿಯಂತ್ರಿಸುವುದು ನಮ್ಮ ಮೆದುಳಿನ ಸೆರೆಬೆಲ್ಲಮ್ ಎಂಬ ಪ್ರದೇಶ. ಆದರೆ ಈ ಭಾಗದಲ್ಲಿ ಉಂಟಾದ ಟ್ಯೂಮರ್ ಗೆಡ್ಡೆ ಸೆರೆಬೆಲ್ಲಮ್ ಪ್ರದೇಶದ ಮೇಲೆ ವಿಪರೀತ ಒತ್ತಡವನ್ನು ಉಂಟು ಮಾಡಿ ಕಡಿಮೆ ಬೆಳಕಿರುವ ಜಾಗ ಗಳಲ್ಲಿ ನಮ್ಮನ್ನು ನಡೆಯದಂತೆ ಮಾಡಿಬಿಡುತ್ತದೆ. ಇದರಿಂದ ಸಾಕಷ್ಟು ಕಡೆ ಯಾವುದೇ ಜಾಗವಾದರೂ ಅಲ್ಲಿಯೇ ನಮ್ಮನ್ನು ಬೀಳಿಸುತ್ತದೆ. ಎದ್ದು ಸ್ವಲ್ಪ ದೂರ ಮುಂದಕ್ಕೆ ಚಲಿಸಿದ ನಂತರ ಮತ್ತೊಮ್ಮೆ ಇದೇ ರೀತಿ ಆಗುತ್ತದೆ.

ಬ್ರೈನ್ ಟ್ಯೂಮರ್ ಸಮಸ್ಯೆ ನಿಮ್ಮ ಕಣ್ಣಿನ ದೃಷ್ಟಿಯನ್ನು ಹಾನಿ ಮಾಡುತ್ತದೆ. ಅಂದರೆ ಬ್ರೈನ್ ಟ್ಯೂಮರ್‌ಗೆ ಒಳಗಾದ ವ್ಯಕ್ತಿಗಳು ಯಾವುದಾದರೂ ವಸ್ತುವನ್ನು ನೋಡಿ ಗುರುತು ಹಿಡಿಯಬೇಕಾದರೆ ಅದನ್ನು ಮತ್ತೆ ಮತ್ತೆ ನೋಡಬೇಕಾಗಿ ಬರುತ್ತದೆ. ಕೆಲವೊಮ್ಮೆ ಹಾಗೆ ನೋಡಿದರೂ ಗುರುತು ಹಿಡಿಯಲು ಕಷ್ಟವಾಗುತ್ತದೆ. ಇದಕ್ಕೆ ಕಾರಣ ಮೆದುಳಿನ ಪಿಟ್ಯುಟರಿ ಗ್ರಂಥಿಯಲ್ಲಿ
ಅಸಹಜ ಕೋಶಗಳು ಬೆಳವಣಿಗೆಯಾಗಿ ದೃಷ್ಟಿಯನ್ನು ಕುಂಠಿತಗೊಳಿಸುತ್ತವೆ.

ಮೆದುಳಿನ ತಳ ಭಾಗದಲ್ಲಿರುವ ಪಿಟ್ಯುಟರಿ ಗ್ರಂಥಿ ಟ್ಯೂಮರ್ ಪ್ರಭಾವದಿಂದ ಕೆಲವೊಂದು ಕಣ್ಣಿನ ನರಗಳ ಮೇಲೆ ಒತ್ತಡ
ಉಂಟು ಮಾಡುತ್ತದೆ. ಇದರಿಂದ ದೃಷ್ಟಿ ದೋಷ ಉಂಟಾಗುತ್ತದೆ.