ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramanand Sharma Column: ಹುಷಾರಾಗಿರಿ ! ಕನ್ನಡಿಗರ ಅಸ್ಮಿತೆ ಜಾಗೃತವಾಗಿದೆ

ಉತ್ತರದ ರಾಜ್ಯಗಳಲ್ಲಿ ಕೆಲಸ ಮಾಡುವ ಸಂದರ್ಭ ಬಂದಾಗ, ದಕ್ಷಿಣದವರು ಕೊಂಚವಾದರೂ ಬಾಗುತ್ತಾರೆ, ತಮ್ಮದಲ್ಲದ ಸ್ಥಳೀಯ ಭಾಷೆಯನ್ನು (ಹಿಂದಿ ಇತ್ಯಾದಿ) ಸ್ವಲ್ಪ ಮಟ್ಟಿಗಾದರೂ ಕಲಿಯು ತ್ತಾರೆ. ಅದೇ, ಉತ್ತರದ ಹಿಂದಿ ರಾಜ್ಯಗಳಿಂದ ಬಂದವರು ಈ ನಿಟ್ಟಿನಲ್ಲಿ ಹಿಂದೇಟು ಹಾಕುವುದರ ಜತೆಗೆ, “ಹಿಂದಿ ರಾಷ್ಟ್ರಭಾಷೆಯಾಗಿರುವುದರಿಂದ ಸ್ಥಳೀಯರೇ ಅದನ್ನು ಕಲಿಯಬೇಕು" ಎಂದು ವರಾತ ಮಾಡುತ್ತಾರೆ.

ಹುಷಾರಾಗಿರಿ ! ಕನ್ನಡಿಗರ ಅಸ್ಮಿತೆ ಜಾಗೃತವಾಗಿದೆ

Profile Ashok Nayak May 24, 2025 8:38 AM

ವಿಶ್ಲೇಷಣೆ

ರಮಾನಂದ ಶರ್ಮಾ

ಕನ್ನಡದ ಮತ್ತು ಕನ್ನಡಿಗರ ಅಸ್ಮಿತೆಯನ್ನು ಕೆಣಕಿದ, ಅವಮಾನ ಮಾಡಿದ, ನಿಕೃಷ್ಟವಾಗಿ ನೋಡಿದ, ನಿರ್ಲಕ್ಷಿಸಿದ, ‘ಡೋಂಟ್ ಕೇರ್’ ಎಂದಿದ್ದ ಬ್ಯಾಂಕ್ ಅಧಿಕಾರಿಣಿಯೊಬ್ಬರ ಕಥೆಯಿದು; “ನಾನು ಕೇವಲ ಹಿಂದಿ ಭಾಷೆಯಲ್ಲಿ ಮಾತನಾಡುತ್ತೇನೆಯೇ ವಿನಾ ಕನ್ನಡದಲ್ಲಲ್ಲ. ಬ್ಯಾಂಕ್ ಶಾಖೆ ಗಳಲ್ಲಿ ಸ್ಥಳೀಯ ಭಾಷೆಗಳಲ್ಲೇ ಮಾತನಾಡಬೇಕೆನ್ನುವ ನಿಯಮವಿಲ್ಲ. ಯಾವ ಕಾರಣಕ್ಕೂ ಕನ್ನಡ ದಲ್ಲಿ ಮಾತನಾಡುವುದಿಲ್ಲ, ಕನ್ನಡಿಗರ ಕ್ಷಮೆ ಕೇಳುವುದಿಲ್ಲ. ಬೇಕಿದ್ದರೆ ಬ್ಯಾಂಕ್ ಚೇರ್ಮನ್‌ಗೆ ದೂರು ನೀಡಿ" ಎಂದೆಲ್ಲಾ ದುರಹಂಕಾರದಿಂದ ಹೂಂಕರಿಸಿದ್ದ ಬ್ಯಾಂಕ್ ಒಂದರ ಮಹಿಳಾ ಮ್ಯಾನೇಜರ್ ಕೊನೆಗೂ ಪಾಠ ಕಲಿತಿದ್ದಾರೆ.

ತಮ್ಮ ವಿರುದ್ಧ ಕನ್ನಡಪರ ಸಂಘಟನೆಗಳು ಮತ್ತು ಕನ್ನಡಿಗರು ಬೀದಿಗಿಳಿಯುತ್ತಿದ್ದಂತೆ ತಮ್ಮ ಉದ್ಧಟತನದ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಬ್ಯಾಂಕ್‌ನ ಆಡಳಿತ ಮಂಡಳಿಯೂ ಆಕೆಯನ್ನು ಮತ್ತೊಂದೆಡೆಗೆ ವರ್ಗಾಯಿಸುವ ಮೂಲಕ, ದೊಡ್ಡ ವಿವಾದವಾಗಬಹುದಾಗಿದ್ದ ಘಟನೆಯನ್ನು ಮೊಳಕೆಯಲ್ಲೇ ಚಿವುಟಿ, ಪ್ರಬುದ್ಧತೆಯನ್ನು ಮೆರೆದಿದೆ. ದಶಕಗಳ ಹಿಂದೆ ಬ್ಯಾಂಕುಗಳಲ್ಲಿ ಬಹುತೇಕ ವಾಗಿ ಇರುತ್ತಿದ್ದುದು ಸ್ಥಳೀಯರು ಮತ್ತು ಸ್ಥಳೀಯ ಭಾಷೆಗಳನ್ನು ಮಾತಾಡಬಲ್ಲ ಸಿಬ್ಬಂದಿಗಳು.

ಆಗ ಗ್ರಾಹಕರಿಗೆ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಅನುಕೂಲವಾಗುತ್ತಿತ್ತು. ಬ್ಯಾಂಕುಗಳಲ್ಲಿ ಸಿಬ್ಬಂದಿ ನೇಮಕಾತಿ ನಿಟ್ಟಿನಲ್ಲಿ, ‘ಶಾಸ್ತ್ರೀ ಟ್ರಿಬ್ಯೂನಲ್ ಅವಾರ್ಡ್’ ಅಡಿಯಲ್ಲಿ ಕ್ಲರಿಕಲ್ ಸಿಬ್ಬಂದಿ ಗಳನ್ನು ಅವರ ಭಾಷಾ ಪ್ರದೇಶದಲ್ಲಿ, ಅಧಿಕಾರಿ ಮತ್ತು ಮೇಲಿನ ವರ್ಗದ ಸಿಬ್ಬಂದಿಗಳನ್ನು ದೇಶಾ ದ್ಯಂತ ನೇಮಕ ಮಾಡಲಾಗುತ್ತಿತ್ತು.

ಆದರೂ ಬ್ಯಾಂಕುಗಳಲ್ಲಿ ಸ್ಥಳೀಯರೇ ಹೆಚ್ಚಿನ ಪ್ರಮಾಣದಲ್ಲಿ ಇರುತ್ತಿದ್ದರು. ಕಾಲ ಕ್ರಮೇಣ ಬ್ಯಾಂಕುಗಳು ಕ್ಲರಿಕಲ್ ಸೇರಿದಂತೆ ಎಲ್ಲಾ ವರ್ಗದ ಸಿಬ್ಬಂದಿಗಳನ್ನೂ ದೇಶದ ಮೂಲೆ ಮೂಲೆಗೆ ವರ್ಗಾವಣೆ ಮಾಡಲು/ನಿಯೋಜಿಸಲು ಶುರು ಮಾಡಿದವು. ಬ್ಯಾಂಕುಗಳಲ್ಲಿ ಆಗಾಗ ಕಾಣಬರುವ ಭಾಷಾ ಸಂಘರ್ಷಕ್ಕೆ ಇದುವೇ ಕಾರಣವಾಗಿದೆ ಎನ್ನಬೇಕು.

ಇದನ್ನೂ ಓದಿ:Ramanand Sharma Column: ವಿಪರ್ಯಾಸಗಳ ಬೀಡು!

ಹೀಗೆ ಸೇವೆಗೆ ನಿಯುಕ್ತರಾದ ಅಥವಾ ವರ್ಗಾವಣೆಯಾದ ಸಿಬ್ಬಂದಿಗಳು ಒಂದು ವರ್ಷದೊಳಗೆ ಸ್ಥಳೀಯ ಭಾಷೆಯನ್ನು ಕಲಿಯಬೇಕು ಎನ್ನುವ ಕಟ್ಟುನಿಟ್ಟಾದ ನಿಯಮವಿದ್ದರೂ, ಇದನ್ನು ಬ್ಯಾಂಕುಗಳು ಪಾಲಿಸುತ್ತಿಲ್ಲ. ಈ ನಿಬಂಧನೆಯ ಪಾಲನೆಯಾಗಿದೆಯೇ ಎಂಬುದನ್ನು ಪರೀಕ್ಷಿಸುವ ವ್ಯವಸ್ಥೆಯೂ ಇಲ್ಲ.

ಈ ನಿಯಮಾವಳಿ ಮತ್ತು ನಿಬಂಧನೆ ಸುತ್ತೋಲೆಗೆ ಸೀಮಿತವಾಗಿವೆ; ಒಂದೊಮ್ಮೆ ಕಟ್ಟುನಿಟ್ಟಾಗಿ ಅವುಗಳ ಪಾಲನೆಯಾಗಿದ್ದರೆ ಇಂಥ ಘಟನೆಗಳಿಗೆ ಅವಕಾಶ ಇರುತ್ತಿರಲಿಲ್ಲ. ಹಾಗೆಂದ ಮಾತ್ರಕ್ಕೆ, ಹೊರರಾಜ್ಯದ ಸಿಬ್ಬಂದಿಗಳು ಸ್ಥಳೀಯ ಭಾಷೆಯನ್ನು ಕಲಿಯುವುದೇ ಇಲ್ಲ, ಅದನ್ನು ಬಳಸಿ ಕೊಂಡು ಗ್ರಾಹಕರಿಗೆ ಸೇವೆ ಸಲ್ಲಿಸುವುದೇ ಇಲ್ಲ ಎಂದೇನಲ್ಲ; ಆದರೆ ಇಂಥವರ ಸಂಖ್ಯೆ ಗಣನೀಯ ವಾಗಿಲ್ಲ ಎಂಬುದೇ ವಿಷಾದನೀಯ ಸಂಗತಿ.

ಹೀಗೆ ಹೊರರಾಜ್ಯದಿಂದ ಬಂದವರಲ್ಲಿ ಬಹಳಷ್ಟು ಸಿಬ್ಬಂದಿ ಸ್ಥಳೀಯ ಭಾಷೆಯನ್ನು ಕಲಿಯುವ ಯತ್ನವನ್ನೇ ಮಾಡುವುದಿಲ್ಲ. “ಇರುವ 2-3 ವರ್ಷಗಳಿಗಾಗಿ ನಾವೇಕೆ ಹೊಸಭಾಷೆಯನ್ನು ಕಲಿಯ ಬೇಕು?" ಎನ್ನುವ ಧಾರ್ಷ್ಟ್ಯ ಇಂಥವರದ್ದು. ಜತೆಗೆ, “ನಮ್ಮನ್ನು ಹೊರ ರಾಜ್ಯಗಳಿಗೆ ಕಳಿಸಿದ್ದೇಕೆ, ನಮ್ಮ ರಾಜ್ಯದಲ್ಲಿಯೇ ಉಳಿಸಿಕೊಳ್ಳಬಹುದಿತ್ತಲ್ಲಾ?" ಎಂಬ ಉಡಾಫೆಯ ಮಾತು ಬೇರೆ!

ಅನ್ಯ ರಾಜ್ಯಗಳಲ್ಲಿ ಕೆಲಸ ಮಾಡುವ ಸಂದರ್ಭ ಬಂದಾಗ, ದಕ್ಷಿಣ ರಾಜ್ಯದವರು ಸ್ವಲ್ಪಮಟ್ಟಿ ಗಾದರೂ ಬಾಗುತ್ತಾರೆ. ಅಂದರೆ ಉತ್ತರದ ರಾಜ್ಯಗಳಲ್ಲಿ ಕೆಲಸ ಮಾಡಬೇಕಾಗಿ ಬಂದಾಗ, ತಮ್ಮದಲ್ಲದ ಸ್ಥಳೀಯ ಭಾಷೆಯನ್ನು (ಹಿಂದಿ ಇತ್ಯಾದಿ) ಸ್ವಲ್ಪ ಮಟ್ಟಿಗಾದರೂ ಕಲಿಯುತ್ತಾರೆ. ಆದರೆ, ಅದೇ ಉತ್ತರದ ಹಿಂದಿ ರಾಜ್ಯಗಳಿಂದ ಬಂದವರು ಈ ನಿಟ್ಟಿನಲ್ಲಿ ಹಿಂದೇಟು ಹಾಕುವುದರ ಜತೆಗೆ, “ಹಿಂದಿ ರಾಷ್ಟ್ರಭಾಷೆಯಾಗಿರುವುದರಿಂದ ಸ್ಥಳೀಯರೇ ಅದನ್ನು ಕಲಿಯಬೇಕು" ಎಂದು ವರಾತ ಮಾಡುತ್ತಾರೆ.

kannada dindima R

ಹಿಂದಿಯು ರಾಷ್ಟ್ರಭಾಷೆಯಲ್ಲದಿದ್ದರೂ, ಹಾಗಂತ ಕೆಲವರು ಅಂಟಿಸಿರುವ ಹಣೆಪಟ್ಟಿಯನ್ನು ಹಿಂದಿಯೇತರರನ್ನು ದಬಾಯಿಸಲು ಹಿಂದಿ ಭಾಷಿಕರು ದುರುಪಯೋಗ ಮಾಡಿಕೊಳ್ಳುತ್ತಾರೆ. ಉದ್ಯೋಗಕ್ಕಾಗಿ ಅನ್ಯರಾಜ್ಯಗಳಿಗೆ ಹೋದ ಕನ್ನಡಿಗರು ಹಿಂದಿರುಗಿ ಬರುವಾಗ, ಆಯಾ ರಾಜ್ಯದ ಭಾಷೆಗಳಲ್ಲಿ ಪಳಗಿಯೇ ಬರುತ್ತಾರೆ. ಆದರೆ, ದಕ್ಷಿಣಕ್ಕೆ ಬಂದ ಉತ್ತರ ಭಾರತೀಯರು ಇಲ್ಲಿನ ಭಾಷೆಗಳಲ್ಲಿ ಪಂಡಿತರಾಗು ವುದಿರಲಿ, ದಿನನಿತ್ಯದ ಬದುಕಿಗೆ ಅನಿವಾರ್ಯವಾಗುವ ಶಬ್ದಗಳನ್ನೂ ಕಲಿಯುವುದಿಲ್ಲ!

ದಕ್ಷಿಣ ರಾಜ್ಯಗಳಿಗೆ ಬಂದು 3-4 ವರ್ಷ ಕಳೆದರೂ ಉತ್ತರ ಭಾರತದ ಉದ್ಯೋಗಿಗಳು ಸ್ಥಳೀಯ ಭಾಷೆ ಯನ್ನು ಕಲಿಯುವುದಿಲ್ಲ ಎಂಬ ಆರೋಪದಲ್ಲಿ ಸತ್ಯವಿಲ್ಲದಿಲ್ಲ. ಆದರೆ, ಈ ಸ್ಥಿತಿಗೆ ಅವರಷ್ಟೇ ನಮ್ಮಂಥ ಸ್ಥಳೀಯರೂ ಕಾರಣ ಎನ್ನುವ ಸತ್ಯ ಎಷ್ಟು ಜನರಿಗೆ ಗೊತ್ತು? ನಮ್ಮ ಪ್ರದೇಶಗಳ ಬ್ಯಾಂಕು/ಕಚೇರಿಗಳಿಗೆ ನಿಯೋಜಿಸಲ್ಪಟ್ಟ ಅಥವಾ ವರ್ಗಾಯಿಸಲ್ಪಟ್ಟ ಪರಭಾಷಿ ಕರಿಗೆ ನಮ್ಮ ಭಾಷೆಯನ್ನು ಕಲಿಸಲು ನಾವು ಎಂದಾದರೂ ಪ್ರಯತ್ನಿಸಿದ್ದೇವೆಯೇ? ಸರಿಯಾಗಿ ಬರದಿ ದ್ದರೂ ಅವರ ಭಾಷೆಯಲ್ಲೇ ಸಂವಹನ ಮಾಡಿ ಅವರನ್ನು ಸುಪ್ರೀತ ಗೊಳಿಸಿ, ಅವರಿಂದ ಮೆಚ್ಚುಗೆ ಪಡೆಯುವುದಿಲ್ಲವೇ? ಮೊನ್ನೆ ಬ್ಯಾಂಕ್ ಅಧಿಕಾರಿಣಿಯೊಬ್ಬರು ಕನ್ನಡದ ಮತ್ತು ಕನ್ನಡಿಗರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವಾಗ ಸ್ಥಳೀಯ ಸಿಬ್ಬಂದಿಯೊಬ್ಬರು ಅವರ ಪರವಾಗಿ ವಾದಿಸಿದ್ದರಂತೆ.

ನಮ್ಮ ಶತ್ರುಗಳು ಹೊರಗಲ್ಲದೇ, ನಮ್ಮ ನಡುವೆಯೇ ಇದ್ದಾರೆ ಎಂಬ ಗ್ರಹಿಕೆಗೆ ಇದು ಪುಷ್ಟಿ ನೀಡುವುದಿಲ್ಲವೇ? ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಅವರ ಪರವಾಗಿ ಪೋಸ್ಟ್ ಹಾಕಿದ್ದರು, ಅವರಲ್ಲಿ ಹಲವರು ಕನ್ನಡಿಗರು ಎನ್ನುವುದು ಅಚ್ಚರಿಯ ವಿಷಯ.

ನನ್ನ ಅನುಭವವನ್ನೇ ಹೇಳಿಕೊಳ್ಳುವುದಾದರೆ, ಉದ್ಯೋಗ ನಿಮಿತ್ತ ವರ್ಗಾವಣೆಯಾಗಿ ನಾನು ಕೋಲ್ಕತ್ತಾಗೆ ಹೋದಾಗ, ಬಂಗಾಳಿ ಭಾಷೆ ಕಲಿಯುವಂತೆ ಎಲ್ಲರೂ ಮೊದಲ ದಿನವೇ ಕಚೇರಿಯಲ್ಲಿ ತಾಕೀತು ಮಾಡಿದ್ದರು. ಎಲ್ಲರೂ ನನ್ನೊಡನೆ ಬಂಗಾಳಿಯಲ್ಲಿಯೇ ಸಂವಹನ ನಡೆಸುತ್ತಿದ್ದರು. ದಿನಸಿ ಅಂಗಡಿಯವನು ಈ ನಿಟ್ಟಿನಲ್ಲಿ ನನಗೆ ಎಚ್ಚರಿಕೆಯನ್ನೂ ಕೊಟ್ಟಿದ್ದ.

ಕೋಲ್ಕತ್ತಾದಿಂದ ಮರಳುವಾಗ ನಾನು ಇನ್ನೊಂದು ಭಾಷೆಯನ್ನು ಕಲಿತ ಹೆಮ್ಮೆಯಲ್ಲಿದ್ದೆ. ಸಭೆ-ಸಮಾರಂಭಗಳಲ್ಲಿ ಬಂಗಾಳಿ ಯೇತರರು ಸಾಕಷ್ಟು ಇದ್ದರೂ, ಕಾರ್ಯಕಲಾಪಗಳು ಬಂಗಾಳಿ ಭಾಷೆಯಲ್ಲೇ ನಡೆಯುತ್ತಿದ್ದವು. “ಸರ್ವಾನ್ವಯಿ ಭಾಷೆ ಇರಲಿ" ಎನ್ನುವ ನಮ್ಮ ಬೇಡಿಕೆಗೆ, “ಇದು ಕೋಲ್ಕತ್ತಾ. ಇಲ್ಲಿ ಬಂಗಾಳಿಯನ್ನು ಕಲಿಯಲೇ ಬೇಕು.

ತಿಳಿಯದಿದ್ದರೆ ಸಭೆಯಿಂದ ಹೊರಟುಹೋಗಿ" ಎನ್ನುವ ಸಂದೇಶ ದೊರಕಿತ್ತು. ಕರ್ನಾಟಕದಲ್ಲಿ ಇದು ಸಾಧ್ಯವೇ? ಈ ಸಮಸ್ಯೆ ಬಿಗಡಾಯಿಸಲು ನಮ್ಮ ಜನಪ್ರತಿನಿಧಿಗಳೂ ಕಾರಣ ಎನ್ನುವ ಮಾತು ಕೇಳಿಬರುತ್ತಿದೆ. ನಮ್ಮ ಭಾಷೆ ಮತ್ತು ಸಂಸ್ಕೃತಿಗಳ ರಕ್ಷಣೆಯ ವಿಷಯದಲ್ಲಿ ನಮ್ಮ ರಾಜಕಾರಣಿ ಗಳಿಗೆ ಅಷ್ಟೊಂದು ಆಸಕ್ತಿಯಿಲ್ಲ ಎಂಬುದು ಹಳೆಯ ಸಂಗತಿ.

ಆಗೊಮ್ಮೆ ಈಗೊಮ್ಮೆ ಒಂದೆರಡು ಹೇಳಿಕೆಗಳನ್ನು ನೀಡುವುದನ್ನು ಬಿಟ್ಟರೆ ಅವರು ಈ ಸಮಸ್ಯೆ ಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈ ಸಮಸ್ಯೆಯನ್ನು ಆಳುಗ ವ್ಯವಸ್ಥೆಯ ಉನ್ನತ ಸ್ತರದಲ್ಲಿ ನಿವೇದಿಸಿ ಪರಿಹಾರ ಪಡೆಯಲು ಅವರು ಮನಸ್ಸು ಮಾಡಲಿಲ್ಲ. ಹೀಗಾಗಿ ಈ ಸಮಸ್ಯೆ ಈಗ ಹೆಮ್ಮರ ವಾಗಿ ಬೆಳೆದಿದ್ದು ನಿರಂತರವಾಗಿ ‘ಹೆಡ್‌ಲೈನ್ಸ್’ನಲ್ಲಿ ಕಾಣುವಂತಾಗಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಖಾಡಕ್ಕೆ ಇಳಿದಿದ್ದಾರೆ.

ಇಂಥ ವಿಷಯಕ್ಕೆ ಮುಖ್ಯ ಮಂತ್ರಿಗಳೇ ನೇರವಾಗಿ ಇಳಿದಿರುವುದು ಕರ್ನಾಟಕದ ಇತಿಹಾಸದಲ್ಲಿ ಬಹುಶಃ ಇದೇ ಮೊದಲ ಬಾರಿಯೋ ಏನೋ? ಬಿಜೆಪಿಯ ಶಾಸಕ ವಿಜಯೇಂದ್ರ ಮತ್ತು ಸಂಸದ ತೇಜಸ್ವಿ ಸೂರ್ಯ ಕೂಡ ಕನ್ನಡಿಗರ ಬೆಂಬಲಕ್ಕೆ ನಿಂತಿರುವುದು ಇನ್ನೊಂದು ವಿಶೇಷ. ಹಿಂದಿನ ಎಲ್ಲಾ ಇಂಥ ಘಟನೆಗಳಿಗಿಂತ ಇದು ಗಂಭೀರವಾಗಿರುವುದಕ್ಕೋ ಏನೋ ಈ ಬೆಳವಣಿಗೆ ಎನ್ನ ಲಾಗುತ್ತದೆ.

ಕೇಂದ್ರ ಸರಕಾರ ಕೂಡ ಭಾಷಾ ವಿಷಯದಲ್ಲಿ ದೃಢವಾದ ನಿಲುವು ತಳೆಯದೆಯೆ, ಯಾವುದೋ ‘ಇಸಂ’ ಹೆಸರಿನಲ್ಲಿ ಕೆಲವರಿಗೆ ಬೆಣ್ಣೆ ನೀಡಿ, ಮತ್ತೆ ಕೆಲವರಿಗೆ ಸುಣ್ಣ ಹಚ್ಚುತ್ತಿರುವಂತೆ ತೋರುತ್ತದೆ. ಭಾಷೆ ತಿಳಿಯದವರನ್ನು ಹೊರರಾಜ್ಯದಿಂದ ತಂದು ಇಲ್ಲಿ ನಿಯೋಜಿಸುತ್ತಿರುವುದರ ಹಿಂದಿನ ಉದ್ದೇಶ ಅರ್ಥ ವಾಗುತ್ತಿಲ್ಲ. ಇಂಥವರ ನಿಯೋಜನೆಯಿಂದ ಗ್ರಾಹಕರಿಗೆ ಅನನುಕೂಲವಾಗುವು ದಾದರೆ, ಅಂಥ ಕ್ರಮಕ್ಕೆ ಮುಂದಾ ಗುವುದಾದರೂ ಏಕೆ? ಗ್ರಾಹಕರ ಸೇವೆಯೇ ಇಂಥ ಕ್ರಮದ ಉದ್ದೇಶವಾಗಿರಬೇಕೇ ಹೊರತು ಬೇರೆ ಯಾವ ಕಾರಣವೂ ಅದರ ನೇಪಥ್ಯದಲ್ಲಿ ಇರಬಾರದಲ್ಲವೇ? ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಇಂಥ ಭಾಷಾ ತೊಂದರೆಯಿಂದಾಗಿ, ಸ್ಥಳೀಯ ಭಾಷೆಯಲ್ಲಿ ವ್ಯವಹಾರ ನಡೆಯುವ ಮತ್ತು ಸ್ಥಳೀಯ ಸಿಬ್ಬಂದಿಗಳು ಇರುವ ಸಹಕಾರಿ ಬ್ಯಾಂಕು ಗಳಿಗೆ ಹಲವು ಗ್ರಾಹಕರು ಶಿಫ್ಟ್ ಆಗುತ್ತಿದ್ದಾರೆ ಎಂದು ರಾಷ್ಟ್ರೀಕೃತ ಬ್ಯಾಂಕುಗಳ ಮ್ಯಾನೇಜರ್‌ಗಳು ಅಲವತ್ತು ಕೊಳ್ಳುತ್ತಿದ್ದಾರೆ. ‌

ಮೊನ್ನೆ ಗಲಾಟೆ ಮಾಡಿಕೊಂಡ ಬ್ಯಾಂಕಿನ ಅಧಿಕಾರಿಣಿಯ ವಿಷಯಕ್ಕೆ ಮತ್ತೆ ಬರೋಣ. ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಯಾಗಿ ಮ್ಯಾನೇಜರ್ ಆಗಿ ನೇಮಕಗೊಂಡಿದ್ದ ಆಕೆ, ಈ ಸಮಸ್ಯೆಯನ್ನು ಇನ್ನೂ ನಾಜೂಕಾಗಿ, ಯಾರಿಗೂ ಮನನೋಯದಂತೆ ಬಗೆಹರಿಸ ಬಹುದಿತ್ತು.

ಆದರೆ ದರ್ಪ ಮತ್ತು ಅಹಂಕಾರ ಅವರಿಗೆ ಕೈಕೊಟ್ಟಂತೆ ಕಾಣುತ್ತದೆ. ಈ ದೇಶದಲ್ಲಿ ಜಾತಿ ಮತ್ತು ಧರ್ಮದಂತೆ ಭಾಷೆಯೂ ಬಹುಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯವಾಗಿದ್ದು, ಇದನ್ನು ಅತಿ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂಬ ವಾಸ್ತವವನ್ನು ತಿಳಿಯದೇ ಅವರು ಎಡವಟ್ಟು ಮಾಡಿ ಕೊಂಡರು.

ಮನಸ್ಸಿನಲ್ಲಿ ಏನೇ ಇರಲಿ, “ನಾನು ಈ ಊರಿಗೆ ಮತ್ತು ಇಲ್ಲಿನ ಭಾಷೆಗೆ ಹೊಸಬಳು, ಇನ್ನು ಕೆಲವು ದಿನಗಳಲ್ಲಿ ಕನ್ನಡವನ್ನು ಸರಾಗವಾಗಿ ಮಾತನಾಡುವೆ" ಎಂಬ ನಾಜೂಕಿನ ಶೈಲಿಯಲ್ಲಿ ಹೇಳಿದ್ದರೆ, ಈಗ ಆದ ಅವಮಾನ ಮತ್ತು ಮುಜುಗರದಿಂದ ಅವರು ಪಾರಾಗಬಹುದಿತ್ತು. ಆದರೆ ಅವರ ದರ್ಪ, ದುರಹಂ ಕಾರವೇ ಅವರಿಗೆ ಮುಳುವಾಗಿ ಪರಿಣಮಿಸಿತು.

ಅವರೇನೋ ಈಗ ಕ್ಷಮಾಪಣೆ ಕೇಳಿದ್ದಾರೆ. ಆದರೆ, ಕನ್ನಡಪರ ಹೋರಾಟಗಾರರು ಅದನ್ನು ಒಪ್ಪುತ್ತಿಲ್ಲ. “ಇದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಆಡಿದ ನಾಟಕವೇ ವಿನಾ, ಹೃದಯ ಪೂರ್ವಕವಾಗಿ ಬಂದ ದ್ದಲ್ಲ" ಎಂದು ಅವರು ತಕರಾರು ತೆಗೆದಿದ್ದಾರೆ, ಲಿಖಿತ ಕ್ಷಮಾಪಣೆಯನ್ನು ಕೇಳುತ್ತಿದ್ದಾರೆ. “ಕ್ಷಮಾಪಣೆ ಕೇಳುವಾಗ ಅವರಲ್ಲಿ ಪಶ್ಚಾತ್ತಾಪದ ಮುಖಭಾವ ಇರಲಿಲ್ಲ, ಇದು ಮ್ಯಾನೇಜ್‌ಮೆಂಟ್‌ನ ಒತ್ತಡದಿಂದ ಕೇಳಿದ ಕಾಟಾಚಾರದ ಕ್ಷಮಾಪಣೆ" ಎನ್ನಲಾಗುತ್ತಿದೆ.

ಇದು ಇನ್ನು ಯಾವ ತಿರುವನ್ನು ತೆಗೆದುಕೊಳ್ಳುತ್ತದೋ ತಿಳಿಯದು. ಏಕೆಂದರೆ, ಮಹಾರಾಷ್ಟ್ರದಲ್ಲಿ ಸಿಬ್ಬಂದಿ ಮೇಲೆ ದೈಹಿಕ ಹಲ್ಲೆ ಮಾಡುವವರೆಗೆ ಭಾಷಾ ಸಂಘರ್ಷ ತಾರಕಕ್ಕೇರಿದೆ. ಕೆಲವು ದಿನಗಳ ಹಿಂದೆ, ವಿಂಗ್ ಕಮಾಂಡರ್ ಶೈಲಾದಿತ್ಯ ಬೋಸ್ ಅವರು ಕನ್ನಡಿಗನೊಬ್ಬನ ಮೇಲೆ ಮಾಡಿದ ಹಲ್ಲೆ, ಕೋರಮಂಗಲದಲ್ಲಿ ಹೋಟೆಲ್ ಒಂದು ತನ್ನ ಡಿಜಿಟಲ್ ಬೋರ್ಡ್‌ನಲ್ಲಿ ಕನ್ನಡಿಗರನ್ನು ಅವ ಮಾನಿಸಿದ ಘಟನೆ, ಈಗ ಬ್ಯಾಂಕ್ ಒಂದರ ಅಧಿಕಾರಿಣಿ ಕನ್ನಡವನ್ನು ಮತ್ತು ಕನ್ನಡಿಗರನ್ನು ಹಗುರವಾಗಿ ನಡೆಸಿಕೊಂಡ ರೀತಿ- ಇವೆಲ್ಲಕ್ಕೂ ಈ ನೆಲದಲ್ಲಿ ಹೊಮ್ಮಿರುವ ಆಕ್ರೋಶ ಮತ್ತು ಪ್ರತಿಭಟನೆಗಳು, ಕನ್ನಡಿಗರು ತಮ್ಮ ನಾಡು-ನುಡಿಗಳಿಗಾಗಿ ಜಾಗೃತರಾಗಿದ್ದಾರೆ ಎಂಬ ದೃಢವಾದ ಸಂದೇಶವನ್ನು ನೀಡಿವೆ.

ಮಾತ್ರವಲ್ಲದೆ, ಪರರಾಜ್ಯಗಳಿಂದ ಬಂದ ಉದ್ಯೋಗಿಗಳು, ಕನ್ನಡದ ಮತ್ತು ಕನ್ನಡಿಗರ ಬಗೆಗಿನ ತಮ್ಮ ಧೋರಣೆಯನ್ನು ಬದಲಿಸಿಕೊಳ್ಳುತ್ತಾರೆ ಎಂಬ ಆಶಾಭಾವನೆಯನ್ನು ಇದು ಮೂಡಿಸಿದೆ.

(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)